ಜನಪ್ರಿಯ ವಿಜ್ಞಾನ ಸಾಹಿತ್ಯ

ಡಾ| ಯು. ಬಿ. ಪವನಜ

‘ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕೆ’ ಎಂದು ಡಿವಿಜಿಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ್ದಾರೆ. ಸಹಸ್ರಾರು ವರ್ಷಗಳಿಂದ ಭಾರತೀಯರು ತಮ್ಮ ‘ಜ್ಞಾನ’ಕ್ಕೆ ವಿಶ್ವವಿಖ್ಯಾತರಾಗಿದ್ದಾರೆ. ವಿಜ್ಞಾನದ ವಿಷಯ ಬಂದಾಗ ಇತ್ತೀಚಿನ ಎರಡು ಶತಮಾನಗಳಲ್ಲಿ ವಿದೇಶೀಯರು ನಮ್ಮನ್ನು ಹಿಂದೆಹಾಕಿ ಬಹುಮುಂದೆ ಹೋಗಿರುವುದು ಸತ್ಯ. ಇದಕ್ಕೆ ಮುಖ್ಯ ಕಾರಣ ನಾವು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ವಿಜ್ಞಾನವನ್ನು ವಿವರಿಸಲು ವಿಶೇಷ ಪ್ರಯತ್ನ ಮಾಡದಿರುವುದು. ಅಲ್ಲೊಂದು ಇಲ್ಲೊಂದು ಪ್ರಯತ್ನಗಳು ನಡೆದಿದ್ದರೂ ನಮ್ಮ ಅಗಾಧ ಜನಸಂಖ್ಯೆಗೆ ಹೋಲಿಸಿದರೆ ಇದು ಏನೇನೂ ಸಾಲದು.

ಜನಸಾಮಾನ್ಯರಿಗೆ ವಿಜ್ಞಾನದ ಅರಿವು ಮೂಡಿಸುವುದು ಎಷ್ಟು ಮುಖ್ಯ ಎಂಬುದಕ್ಕೆ ಹಲವಾರು ಉದಾಹರಣೆಗಳನ್ನು ಕೊಡಬಹುದು. ಒಂದನ್ನು ಗಮನಿಸೋಣ: ಇತ್ತೀಚೆಗೆ ಗುಜರಾತಿನಲ್ಲಿ ಸಂಭವಿಸಿದ ಭೀಕರ ಭೂಕಂಪದ ಬೆನ್ನಿನಲ್ಲೇ ಒಂದು ದಿನ ಬೆಳ್ಳಿಗ್ಗೆ ೮ ಗಂಟೆಯ ಹೊತ್ತಿಗೆ ಬೆಂಗಳೂರಿನಲ್ಲಿ ಲಘು ಕಂಪನ ಸಂಭವಿಸಿತು. ಯಾವುದೇ ಜೀವ ಆಸ್ತಿ ಹಾನಿ ಆಗಲಿಲ್ಲ. ಸುಮಾರು ೧೧ ಗಂಟೆಯ ಹೊತ್ತಿಗೆ ನಗರಾದ್ಯಂತ ಒಂದು ಗಾಳಿಸುದ್ದಿ ಹಬ್ಬಿತು. ೧೧:೩೦ ರಿಂದ ೧೨:೩೦ರ ಒಳಗೆ ಬೆಂಗಳೂರಿನಲ್ಲಿ ಭೂಕಂಪ ಸಂಭವಿಸಲಿದೆ ಎಂದು. ಜನಸಾಮಾನ್ಯರು ಅತೀವ ಭಯಗೊಂಡರು. ಶಾಲಾ ಕಾಲೇಜುಗಳಿಗೆ ಅನಧಿಕೃತ ರಜೆ ಸಾರಲಾಯಿತು. ಬಹು ಮಹಡಿ ಕಟ್ಟಡಗಳಲ್ಲಿನ ಜನರು ಬೀದಿಗೆ ಬಂದರು. ಕೆಲವು ಕೆಂಪೆನಿಗಳು ಉದ್ಯೋಗಿಗಳನ್ನು ಮನೆಗೆ ಕಳುಹಿಸಿಬಿಟ್ಟರು. ಕೊನೆಗೆ ಭೂಕಂಪವಂತೂ ಸಂಭವಿಸಲಿಲ್ಲ. ಇಂತಹ ವೇಳೆಗೆ ಇಂತಹ ಸ್ಥಳದಲ್ಲಿ ಭೂಕಂಪ ಸಂಭವಿಸಲಿದೆಯೆಂದು ನಿಕರವಾಗಿ ಹೇಳುವಷ್ಟು ವಿಜ್ಞಾನ – ತಂತ್ರಜ್ಞಾನ ಮುಂದುವರಿದಿಲ್ಲ. ಇದನ್ನು ಜನಸಾಮಾನ್ಯರಿಗೆ ವೈಜ್ಞಾನಿಕವಾಗಿ ತಿಳಿಸುವ ಕಾರ್ಯವನ್ನು ಯಾವ ಪತ್ರಿಕೆಗಳೂ ಮಾಡಿಲ್ಲ. ಜನಸಾಮಾನ್ಯರಿಗೆ ವಿಜ್ಞಾನದ ವಿಷಯಗಳನ್ನು ಸರಳವಾಗಿ ತಿಳಿಹೇಳುವುದು ಎಷ್ಟು ಅವಶ್ಯ ಎಂಬುದನ್ನು ಸ್ಪಷ್ಟೀಕರಿಸಲು ಇದೊಂದು ಉದಾಹರಣೆ ಸಾಕು. ಇನ್ನೂ ಬೇಕೆಂದರೆ -ಮದುವೆಯಾಗಿ ವರ್ಷಗಳೇ ಕಳೆದಿದ್ದರೂ ಮಕ್ಕಳಾಗಿಲ್ಲವೆಂದು ಅರಳಿಮರಕ್ಕೆ ಸುತ್ತುಬರುವ ಹೆಂಗಸರನ್ನೇ ತೆಗೆದುಕೊಳ್ಳಿ. ಅರಳಿಮರಕ್ಕೆ ಸುತ್ತು ಬರುವುದರಿಂದ ಮಕ್ಕಳಾಗಲು ಸಾಧ್ಯವಿಲ್ಲ ಎಂಬುದನ್ನು ಅವರಿಗೆ ಸರಳ ಭಾಷೆಯಲ್ಲಿ ವೈಜ್ಞಾನಿಕವಾಗಿ ತಿಳಿಸುವುದು ಅತೀ ಅಗತ್ಯ.

ನಮ್ಮ ದೇಶದ ವಿಜ್ಞಾನಿಗಳು ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ಇವರೆಲ್ಲ ತಮ್ಮ ಪ್ರಯೋಗಾಲಯದಲ್ಲಿ ಕುಳಿತು ಸಂಶೋಧನೆ ನಡೆಸುವವರು. ತಮ್ಮ ಸಂಶೋಧನಾ ಪ್ರಬಂಧಗಳನ್ನು ಅವುಗಳಿಗೇ ಮೀಸಲಾದ ವಿಶೇಷ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆ. ಪ್ರಕಟಣೆಯ ಭಾಷೆ ಇಂಗ್ಲಿಷ್. ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇದು ಸಮರ್ಥನೀಯ. ಇವರ್‍ಯಾರೂ ತಮ್ಮ ಸಂಶೋಧನೆಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಕನ್ನಡದಲ್ಲಿ ತಿಳಿಹೇಳಲು ಪ್ರಯತ್ನಿಸಿಲ್ಲ. “ನಮ್ಮ ಸಂಶೋಧನೆಗಳು ವಿಜ್ಞಾನದಲ್ಲಿ ವಿಶೇಷ ಪರಿಣತಿ ಹೊಂದಿದವರಿಗೆ ಮಾತ್ರ ಅರ್ಥವಾಗುವಂತವುಗಳು. ಜನಸಾಮಾನ್ಯರಿಗೆ ಅವುಗಳನ್ನು ವಿವರಿಸುವುದರಲ್ಲಿ ಅರ್ಥವಿಲ್ಲ. ಅವರಿಗೆ ಅದು ಅರ್ಥವೂ ಆಗಲಾರದು” ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದು ಬಹುಮಟ್ಟಿಗೆ ಸತ್ಯ ಕೂಡ. ಆದರೆ ಇದೇ ವಿಜ್ಞಾನಿಗಳು ಜನರಿಗೆ ನಿತ್ಯಜೀವನದಲ್ಲಿ ಉಪಯೋಗಿಯಾಗುವ ವಿಜ್ಞಾನದ ಬಗ್ಗೆ ತಿಳಿಹೇಳಬಹುದಲ್ಲ? ಅದನ್ನು ಮಾಡುತ್ತಿರುವವರು ವಿಜ್ಞಾನಿಗಳಲ್ಲ. ವಿಜ್ಞಾನವನ್ನು ಅಭ್ಯಸಿಸಿದ ಕೆಲವೇ ಮಂದಿ ಈ ಕಾರ್ಯ ಮಾಡುತ್ತಿದ್ದಾರೆ. ಹಾಗೆಂದು ನಾವು ಆಧುನಿಕ ಸಂಶೋಧನೆಗಳು ಜನಸಾಮಾನ್ಯರಿಗೆ ತಲುಪಲೇ ಬಾರದು ಎಂದು ಕುಳಿತುಕೊಳ್ಳುವ ಹಾಗಿಲ್ಲ. ವಿಜ್ಞಾನದ ಕ್ಲಿಷ್ಟ ವಿಷಯಗಳ ಬಗ್ಗೆ ಕನ್ನಡದಲ್ಲಿ ಸರಳವಾಗಿ ತಿಳಿಸಿ ಹೇಳಲು ಸಾಧ್ಯವಿದೆ. ಡಾ| ಶಿವರಾಮ ಕಾರಂತರಂತವರು ಇದನ್ನು ಮಾಡಿ ತೋರಿಸಿದ್ದಾರೆ. ಇಚ್ಛಾ ಶಕ್ತಿ ಇಲ್ಲಿ ಬಹು ಮುಖ್ಯ.

ಇಲ್ಲಿ ಕೆಲವು ವೈಯಕ್ತಿಕ ಅನುಭವಗಳನ್ನು ದಾಖಲಿಸಬಹುದು. ನಾನು ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗ ಡಾ| ಶಿವರಾಮ ಕಾರಂತರ ವಿಜ್ಞಾನ ಪ್ರಪಂಚದ ನಾಲ್ಕೂ ಸಂಪುಟಗಳನ್ನೂ ಓದಿದ್ದೆ. ನನಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿದ್ದೇ ಆ ಪುಸ್ತಕಗಳನ್ನು ಓದಿದ್ದರಿಂದ. ಅನಂತರ ಕಸ್ತೂರಿಯಲ್ಲಿ ಪಾವೆಂ ಅವರ ವಿಶೇಷ ಆಸಕ್ತಿಯಿಂದ ಬರುತ್ತಿದ್ದ ವಿಜ್ಞಾನದ ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನೂ ಓದುತ್ತಿದ್ದೆ. ರಾಜಶೇಖರ ಭೂಸನೂರಮಠ ಅವರು ಬರೆಯುತ್ತಿದ್ದ ವೈಜ್ಞಾನಿಕ ಕಥೆಗಳೂ ನನ್ನ ವಿಜ್ಞಾನದ ಆಸಕ್ತಿಗೆ ನೀರೆರೆದವು. ವಿಜ್ಞಾನವನ್ನು ಓದಿ ಅದರಲ್ಲಿ ಸ್ನಾತಕೋತ್ತರ ಪದವಿ ಪಡೆದು ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಕೇಂದ್ರವನ್ನು ವಿಜ್ಞಾನಿಯಾಗಿ ಸೇರಲು ಇವೆಲ್ಲ ಪೂರಕವಾದವು. ಅಲ್ಲಿ ಗಣಕವನ್ನು ಕಲಿತು ಅದರಲ್ಲಿ ಪರಿಣತಿ ಪಡೆದು ಕನ್ನಡವನ್ನು ಅಂತರಜಾಲದಲ್ಲಿ ಪ್ರಪ್ರಥಮವಾಗಿ ಸೇರಿಸಿದ್ದು ಮುಂದಿನ ಸಾಧನೆ. ನನ್ನ ಹಾಗೆ ವಿಜ್ಞಾನದಲ್ಲಿ ವಿಶೇಷ ಆಸಕ್ತಿಯನ್ನು ಇದೇ ರೀತಿ ಪಡೆದ ಹಲವರಿದ್ದಾರೆ. ವಿಶ್ವಕನ್ನಡದಲ್ಲಿ ಶಿವರಾಮ ಕಾರಂತರ ಬಗ್ಗೆ ಲೇಖನ ಪ್ರಕಟಿಸಿದಾಗ ಹಾಗೆಂದು ಬರೆದು ತಿಳಿಸಿಯೂ ಇದ್ದಾರೆ.

ಕನ್ನಡದ ಸಾಹಿತಿಗಳು ವಿಜ್ಞಾನವನ್ನು ದೂರವೇ ಇಟ್ಟಿದ್ದಾರೆ. ನಮಗೆ ಅದು ಅರ್ಥವಾಗುವುದಿಲ್ಲ ಎಂಬುದು ಅವರ ಸಬೂಬು. ಕನ್ನಡ ಸಾಹಿತ್ಯ ಪರಿಷತ್ತು ವರ್ಷಕ್ಕೊಮ್ಮೆ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸುತ್ತದೆ. ಅದರಲ್ಲಿ ಹಲವಾರು ಗೋಷ್ಠಿಗಳಿರುತ್ತವೆ. ಮಹಿಳಾ ಸಾಹಿತ್ಯ, ದಲಿತ ಸಾಹಿತ್ಯ, ಬಂಡಾಯ, ನವ್ಯ ಇತ್ಯಾದಿ ಹಲವು ವಿಭಾಗಗಳ ಬಗ್ಗೆ ವಿಚಾರ ಸಂಕಿರಣಗಳು ನಡೆಯುತ್ತವೆ. ಆದರೆ ವಿಜ್ಞಾನ ಸಾಹಿತ್ಯ ಇಲ್ಲಿ ಸಾಹಿತ್ಯವೆಂದು ಪರಿಗಣಿಸಲ್ಪಡುವುದಿಲ್ಲ. ಈ ಬಗ್ಗೆ ಸಾಹಿತ್ಯ ಪರಿಷತ್ತಿನ ಈಗಿನ ಅಧ್ಯಕ್ಷ ಡಾ| ಬಸವಾರಾಧ್ಯ ಅವರನ್ನು ಪ್ರಶ್ನಿಸಿಯೂ ಇದ್ದೇನೆ. ಏನೇನೋ ಸಬೂಬು ಹೇಳಿದರೇ ವಿನಾ ಒಪ್ಪಿಕೊಳ್ಳಬಲ್ಲ ಉತ್ತರ ಬರಲಿಲ್ಲ. ಸಾಹಿತ್ಯದ ಹಲವು ವಿಭಾಗಗಳಿಗೆ ಪ್ರಶಸ್ತಿ ನೀಡುವ ಪದ್ಧತಿ ಇದೆ. ಇಲ್ಲೂ ವಿಜ್ಞಾನ ಸಾಹಿತ್ಯವನ್ನು ಪರಿಗಣಿಸಿಲ್ಲ; ವಿಜ್ಞಾನ ಸಾಹಿತಿಗಳನ್ನು ಸಾಹಿತಿಯೆಂದು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಜನಪ್ರಿಯ ವಿಜ್ಞಾನ ಸಾಹಿತ್ಯ ಸೃಜನಶೀಲ ಸಾಹಿತ್ಯವಲ್ಲ ಎಂದು ಸಾಹಿತಿಗಳ ತೀರ್ಮಾನ. ವಿಜ್ಞಾನದ ಕ್ಲಿಷ್ಟ ವಿಷಯಗಳನ್ನು ಸರಿಯಾಗಿ ಅರ್ಥೈಸಿಕೊಂಡು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ತಿಳಿಹೇಳುವುದು ಎಷ್ಟು ಕಷ್ಟ ಎಂಬುದನ್ನು ಸಾಹಿತಿಗಳು ತಾವೇ ಸ್ವತಹ ಪ್ರಯತ್ನಪಟ್ಟು ತಿಳಿದುಕೊಳ್ಳುವುದು ಒಳ್ಳೆಯದು. ಆಗ ಅವರ ಮೌಢ್ಯ ನೀಗುವುದು.

ಜನಪ್ರಿಯ ವಿಜ್ಞಾನ ಲೇಖನ ಬರೆಯುವಾಗ ಪಾರಿಭಾಷಿಕ ಪದಗಳ ಸಮಸ್ಯೆ ದೊಡ್ಡ ತೊಡಕಾಗಿರುವುದು. ಜಗದೀಶ್‌ಚಂದ್ರ ಬೋಸ್ ಒಂದು ಮಾತು ಹೇಳುತ್ತಿದ್ದರು “ನಿಮಗೆ ಬೆಂಗಾಳಿ ಭಾಷೆಯಲ್ಲಿ ವಿಜ್ಞಾನವನ್ನು ಹೇಳಲು ಅಸಾಧ್ಯ ಎಂದಾದರೆ ನಿಮಗೆ ಬೆಂಗಾಳಿ ಗೊತ್ತಿಲ್ಲ ಎಂದು ಅರ್ಥವಲ್ಲ, ನಿಮಗೆ ವಿಜ್ಞಾನ ಗೊತ್ತಿಲ್ಲ ಎಂದು ಅರ್ಥ” ಎಂದು. ಈ ಮಾತು ಕನ್ನಡಕ್ಕೂ ಅನ್ವಯಿಸುವುದು. ಪಾರಿಭಾಷಿಕ ಪದಗಳ ಬಗ್ಗೆ ಈಗಾಗಲೇ ತುಂಬಾ ಚಿಂತನೆಗಳು ನಡೆದಿವೆ. ಈ ಬಗ್ಗೆ ಪೂರ್ತಿಯಾಗಿ ಒಂದು ಬೇರೆಯೇ ಲೇಖನ ಬರೆಯಬೇಕಾಗುತ್ತದೆ. ಸಾಧ್ಯವಿದ್ದಷ್ಟು ಕನ್ನಡ ಪದಗಳನ್ನು ಸೃಷ್ಠಿಸುವುದು ಸೂಕ್ತ. ಉದಾ: photocopying machine = ನೆರಳಚ್ಚು ಯಂತ್ರ. ಕಷ್ಟವಾದ ಕಡೆ ಇಂಗ್ಲಿಷ್ ಪದಗಳನ್ನೇ ಬಳಸಬಹುದು. ಉದಾ: ಬಸ್ಸು, ಕಾರು, ಪೆನ್ನು, ಯುರೇನಿಯಂ… ಇತ್ಯಾದಿ.

ಹದಿನೆಂಟನೆಯ ಶತಮಾನದಲ್ಲಿ ಯುರೋಪಿನಲ್ಲಿ ಔದ್ಯೋಗಿಕ ಕ್ರಾಂತಿ ನಡೆಯಿತು. ಈಗ ನಾವು ಉಪಯೋಗಿಸುತ್ತಿರುವ ವಿಜ್ಞಾನ – ತಂತ್ರಜ್ಞಾನದ ಕೊಡುಗೆಗಳು ಆ ಕಾಲದಲ್ಲಿ ಸಂಶೋಧಿಸಲ್ಪಟ್ಟವು. ಈ ಕ್ರಾಂತಿಯಲ್ಲಿ ಭಾರತವು ಭಾಗಿಯಾಗಿರಲಿಲ್ಲ. ಈಗ ನಡೆಯುತ್ತಿರುವುದು ಮಾಹಿತಿ ತಂತ್ರಜ್ಞಾನದ ಕ್ರಾಂತಿ. ಈ ಕ್ರಾಂತಿಯಲ್ಲಿ ಭಾರತವೂ ಸಕ್ರಿಯವಾಗಿ ಭಾಗಿಯಾಗುತ್ತಿದೆ. ಆದರೆ ಭಾರತೀಯ ಭಾಷೆಗಳು, ಕನ್ನಡವೂ ಸೇರಿದಂತೆ, ಭಾಗಿಯಾಗುತ್ತಿಲ್ಲ. ವಿಜ್ಞಾನ ತಂತ್ರಜ್ಞಾನದ ಕೊಡುಗೆಗಳು ಹಳ್ಳಿಗಳನ್ನೂ ತಲುಪುತ್ತಿರುವಂತೆ ಅವುಗಳ ಹಿಂದಿನ ವೈಜ್ಞಾನಿಕ ಜ್ಞಾನವೂ ಹಳ್ಳಿಗಳನ್ನು ತಲುಪಬೇಕು. ಜನರು ವಿಜ್ಞಾನದ ವಿಷಯಗಳನ್ನು ಕನ್ನಡದಲ್ಲೆ ಚಿಕ್ಕ ಪ್ರಾಯದಿಂದಲೇ ತಿಳಿದುಕೊಳ್ಳುವ ಸೌಲಭ್ಯ ಒದಗಿಬರಬೇಕು. ಹೀಗೆ ಬಂದ ಜ್ಞಾನವನ್ನು ಮೆಟ್ಟಿಲಾಗಿಸಿಕೊಂಡು ಮೇಲೇರಿ ಬರುವ ಜನರಲ್ಲಿ ಮತ್ತೊಬ್ಬ ಸಿ. ವಿ. ರಾಮನ್ ಮೂಡಿ ಬರಬೇಕಾಗಿದೆ. ಇಷ್ಟು ದೊಡ್ಡ ಜನಸಂಖ್ಯೆಯ ದೇಶಕ್ಕೆ ವಿಜ್ಞಾನದಲ್ಲಿ ಒಂದೇ ನೋಬೆಲ್ ಪುರಸ್ಕಾರ ಖಂಡಿತಾ ಸಾಲದು. ಇದಕ್ಕಾಗಿ ನಾವು ನೀವು ಎಲ್ಲರೂ ಪರಿಶ್ರಮ ಪಡೋಣ.

(೨೦೦೨)

Comments are closed.