ಮುಂಬೈ ಅಣುಶಕ್ತಿ ಕೇಂದ್ರದಿಂದ ಕನ್ನಡದ "ಬೆಳಗು"
– ಆರ್. ಜಿ. ಹಳ್ಳಿ ನಾಗರಾಜ್
ಮಾಹಿತಿ ತಂತ್ರಜ್ಞಾನದ ಮೂಲಕ ವಿಶ್ವದ ವ್ಯವಹಾರವೆಲ್ಲ ನಡೆಯುತ್ತಿದೆಯೇನೋ ಅನ್ನುವ ಅನುಭವ, ತಿಳಿವಳಿಕೆ ಎಲ್ಲೆಲ್ಲೂ ಮನೆಮಾಡಿದೆ. ತಂತ್ರಜ್ಞಾನದ ಮೂಲಕ ಭಾರತದ ಒಂದೆರಡು ನಗರಗಳು ವಿಶ್ವಭೂಪಟದಲ್ಲಿ ಸ್ಥಾನ ಪಡೆದಿವೆ. ತಂತ್ರಜ್ಞಾನದ ಪ್ರಗತಿ ವಿಜ್ಞಾನದ ದಾಪುಗಾಲಿಗೆ ಮತ್ತೊಂದು ಹೆಸರು. ಮಾಹಿತಿ ತಂತ್ರಜ್ಞಾನದ ಇವೊತ್ತಿನ ಬಹುತೇಕ ಚರ್ಚೆಯನ್ನು ಬದಿಗಿರಿಸಿ, ವಿಜ್ಞಾನದಲ್ಲಿ ಹೊಸ ಪ್ರಯೋಗ, ಸಾಧನೆ ಮಾಡಿರುವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ ಬಾಹ್ಯಾಕಾಶ, ಅಣುಶಕ್ತಿ ಉತ್ಪಾದನೆ, ಅದರ ಸೂಕ್ತ ಬಳಕೆ ಭಾರತದ ಸಾಧನೆ ವಿಶ್ವಗಮನ ಸೆಳೆದದ್ದು ಇತಿಹಾಸ.
ಮುಂಬೈನಲ್ಲಿರುವ ಅಣುಶಕ್ತಿ ಕೇಂದ್ರದ ಸಂಶೋಧನಾಲಯದಲ್ಲಿರುವ ಹದಿನೈದು ಸಾವಿರಕ್ಕೂ ಮಿಕ್ಕಿ ನೌಕರರಲ್ಲಿ ಸಂಶೋಧನೆಗೆ ತೊಡಗಿದವರು ಬಹುಸಂಖ್ಯಾತರು. ಸಂಶೋಧನೆ ಜತೆಜತೆಗೇ ಭಾಷಾಭಿವೃದ್ಧಿ ಹಾಗೂ ಮಾತೃಭಾಷೆಗೆ ಸ್ಥಾನ ಕಲ್ಪಿಸಿಕೊಳ್ಳುವ ದೃಷ್ಟಿಯಿಂದ ಸಂಘಟಿತವಾದ ಭಾಭಾ ಪರಮಾಣು ಸಂಶೋಧನಾ ಕೇಂದ್ರದ ಕನ್ನಡ ಸಂಘ ವೈಜ್ಞಾನಿಕ ಅರಿವಿನ ವಿಚಾರಗಳ ಬೆಳೆ ಬಿತ್ತುವಲ್ಲಿ ಪ್ರಥಮ ಸ್ಥಾನ ಪಡೆದ ಹೆಮ್ಮೆಯ ಸಂಸ್ಥೆ. ಅಲ್ಲಿನ ಕನ್ನಡ ವಿಜ್ಞಾನಿಗಳ ಒಕ್ಕೂಟ ಕನ್ನಡ ಸಂಘ ರಚಿಸಿಕೊಂಡು ಸಾಂಸ್ಕೃತಿಕವಾಗಿ ಬೇರು ಬಿಟ್ಟಿದೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಜೀವಂತವಾಗಿರುವ ಈ ಸಂಘ ನಾಟಕಗಳು, ಭಾವಗೀತೆ, ಚರ್ಚಾಸ್ಪರ್ಧೆ, ಲೇಖನ-ಪ್ರಬಂಧಸ್ಪರ್ಧೆ ಇತ್ಯಾದಿ ನಡೆಸುತ್ತ “ಬೆಳಗು” ಎಂಬ ವಿಜ್ಞಾನ ಮಾಹಿತಿ ಒಳಗೊಂಡ ಕನ್ನಡ ಪತ್ರಿಕೆ ಪ್ರಕಟಿಸುತ್ತಾ ಬಂದಿರುವುದು ಪ್ರಶಂಸಾರ್ಹ. ಕನ್ನಡ ಭಾಷೆ ಬಗ್ಗೆ ಈ ಕೇಂದ್ರದ ವಿಜ್ಞಾನಿಗಳಿಗಿರುವ ಭಾಷಾಭಿಮಾನ, ಸ್ವಾಭಿಮಾನ, ಲೇಖನಗಳ ಉತ್ಕೃಷ್ಟತೆ, ವಿಷಯಗಳನ್ನು ನಿರೂಪಿಸುವ ವಿಧಾನ, ಸಾಮಾನ್ಯನಿಗೂ ವಿಜ್ಞಾನ ವಿಚಾರಗಳು ತಿಳಿಯಬೇಕೆಂಬ ಕಾಳಜಿ ಎಲ್ಲಾ ಸಂಚಿಕೆಗಳಲ್ಲೂ ಎದ್ದು ಕಾಣುತ್ತದೆ. ಸಂಪಾದಕ ಮಂಡಳಿಯಲ್ಲಿರುವ ವಿಜ್ಞಾನಿಗಳು ಕನ್ನಡದಲ್ಲಿ ಪ್ರಬುದ್ಧತೆ ಹೊಂದಿರುವರು ಎನ್ನುವುದು ಇಲ್ಲಿ ದಾಖಲಾರ್ಹ. ಡಾ| ವ್ಯಾಸರಾವ್ ನಿಂಜೂರ್, ಸುರೇಶರಾವ್ ಉಡುಪಿ, ಡಾ| ರಾಮಚಂದ್ರಭಟ್, ಡಾ| ಮಧುಕರ ಮುತಾಲಿಕ ದೇಸಾಯಿ, ಡಾ| ಯು. ಬಿ. ಪವನಜ, ಗಣರಾಜ ಬನಾರಿ ಅವರುಗಳು ಹಲವು ವರ್ಷದ ಸಂಪಾದಕ ಮಂಡಳಿಯಲ್ಲಿದ್ದು ವಿಜ್ಞಾನ ವಿಚಾರಗಳನ್ನು `ಬೆಳಗು’ ಮೂಲಕ ಪ್ರಸಾರ ಮಾಡಿದ್ದಾರೆ.
ಮುಂಬೈನಂಥ ಬಹುಭಾಷಾ ವ್ಯಾವಹಾರಿಕ ನಗರದಲ್ಲಿ ಕನ್ನಡದ ಸ್ಥಾನ ಯಾವೊತ್ತೂ ಮೇಲ್ಗೈ ಪಡೆದಿದೆ. ಅಲ್ಲಿ ನೆಲೆಸಿರುವ ಹಲವಾರು ಸಾಹಿತಿಗಳು, ಕಲಾವಿದರು ಕರ್ನಾಟಕದಲ್ಲಿದ್ದು ಸಾಧಿಸಿದ ಹಲವರಂತೆಯೇ ಪ್ರಶಸ್ತಿ ಗಿಟ್ಟಿಸಿದ್ದಾರೆ. ಅಣುಶಕ್ತಿ ಕೇಂದ್ರ ಕನ್ನಡ ಸಂಘದಂತೆಯೇ ಐದಾರು ಕನ್ನಡ ಸಂಘಗಳು ಸಾಕಷ್ಟು ಕ್ರಿಯಾಶೀಲವಾಗಿವೆ. ಕನ್ನಡ ಸಾಹಿತ್ಯ ಸಂಸ್ಕೃತಿಗೆ ಈ ಸಂಘಗಳು ಆದರ್ಶಪ್ರಾಯವಾಗಿವೆ.
ಕನ್ನಡ ಸಂಘದ `ಬೆಳಗು’ ಹಲವಾರು ವಾರ್ಷಿಕ ವಿಶೇಷಾಂಕಗಳನ್ನು ಹೊರತಂದಿದೆ. ೧೯೮೫ರ ಸಂದರ್ಭದಲ್ಲೇ `ಪರಮಾಣು ಶಕ್ತಿ ವಿಶೇಷಾಂಕ’ದಲ್ಲಿ, ವಿಕಿರಣದ ಬಗ್ಗೆ ಮಾಹಿತಿ, ಪರಮಾಣು ಶಕ್ತಿ ಕುರಿತ ವಿವರಗಳು, ಆಹಾರ ಸಂರಕ್ಷಣೆಗಾಗಿ ಪರಮಾಣು ವಿಕಿರಣದ ಬಳಕೆ ಕುರಿತು ಉತ್ತಮ ಮಾಹಿತಿ ನೀಡಿದೆ. ಮುಖ್ಯವಾಗಿ ಕರ್ನಾಟಕದ ಕೈಗಾ ಅಣುಸ್ಥಾವರದ ಸ್ಥಾಪನೆಯ ಪ್ರಸ್ತಾಪದ ಹಿನ್ನೆಲೆಯಲ್ಲಿ ಆಗ ಹುಟ್ಟಿದ ಸಂಶಯಗಳಿಗೆ ಇದರಲ್ಲಿ ಹಲವು ಪರಿಹಾರಗಳೂ ಇವೆ.
`ನೀರು’ ಕುರಿತು ನಡೆದ ವಿಚಾರ ಸಂಕಿರಣದ ವಿಶೇಷಾಂಕ, ಲೋಹಗಳು ಮತ್ತು ಸಮಾಜ, ನಿತ್ಯಜೀವನದಲ್ಲಿ ಕಂಪ್ಯೂಟರ್, ಅಸಾಂಕ್ರಾಮಿಕ ರೋಗಗಳು, ಜೀವನ ಶೈಲಿ ಮತ್ತು ಸ್ವಾಸ್ಥ್ಯ ಹಾಗೂ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಕುರಿತ ವಿವರಗಳು ವಿಜ್ಞಾನ ಆಸಕ್ತರಿಗೆ ಹಾಗೂ ವಿಜ್ಞಾನ ಓದಿದವರಿಗೆ ಮಾರ್ಗದರ್ಶಿ ಮಾಹಿತಿ ಒದಗಿಸಿವೆ. ಕನ್ನಡ ವಿಜ್ಞಾನ ಸಾಹಿತ್ಯದ ಬಗ್ಗೆ ಮೂಗು ಮುರಿಯುವವರು ಮುಂಬೈ ಅಣುಶಕ್ತಿ ಕೇಂದ್ರದ ಕನ್ನಡ ಸಂಘದ `ಬೆಳಗು’ ಗಮನಿಸಲೇಬೇಕು.
ಕನ್ನಡ ಸಂಘ ಆರಂಭವಾದಂದಿನಿಂದಲೂ ಅದಕ್ಕೆ ಒಂದು ಸಮರ್ಪಕವೂ, ಪ್ರಾತಿನಿಧಿಕವೂ ಆದರ ಲಾಂಛನವೊಂದನ್ನು ತಯಾರಿಸಬೇಕೆಂದು ಸದಸ್ಯರೆಲ್ಲರ ಬಯಕೆಯಾಗಿತ್ತು. ಸಂಘದ ಮುಖವಾಣಿಯಾದ `ಬೆಳಗು’ ಪತ್ರಿಕೆಯ ಈ ಲಾಂಛನವನ್ನು ಬಳಸಿದಾಗ, ಈ ಪ್ರತಿನಿಧಿಕ ಲಾಂಛನವು ಹತ್ತು ಹಲವು ಕಡೆ ತಲುಪುವ ಸಾಧ್ಯತೆಯನ್ನು ಸಂಘದ ಸದಸ್ಯರು ಮನಗಂಡರು. ಈ ದಿಸೆಯಲ್ಲಿ ಕಾರ್ಯ ಪ್ರವೃತ್ತವಾಗಿ ಹಲವಾರು ಬಗೆಯ ಕಲಾವಿನ್ಯಾಸಗಳಲ್ಲಿ ಒಂದನ್ನು ಗಣಕದ ಸಹಾಯದಿಂದ ೧೯೯೨ (ಸಂಪುಟ ೧೧, ಸಂ-೧)ರಲ್ಲಿ ರೂಪಿಸಿದವರು ಸಂಘದ ಕಾರ್ಯದರ್ಶಿ ಡಾ| ಯು. ಬಿ. ಪವನಜ ಅವರು. ಮುಂದೆ ಇವರು ಮುಂಬೈ ಬಿಟ್ಟು ಬೆಂಗಳೂರಿನಲ್ಲಿ ನೆಲಸಿ `ವಿಶ್ವಕನ್ನಡ’ ಪ್ರಥಮ ಅಂತರಜಾಲ ಪತ್ರಿಕೆ ನಿಯಮಿತವಾಗಿ ಹೊರತರುತ್ತಿರುವುದು ಇತಿಹಾಸ.
“ತಿಳಿವು ಬದುಕಿನ ತಿರುಳು” ಎಂದು ಅರಿವೇ ಗುರುವಿನಂತೆ, ನ ಹಿ ಜ್ಞಾನೇನ ಸದೃಶಂ ಎಂಬಂತೆ ವಿಜ್ಞಾನದ ತಿಳಿವು, ತಿರುಳು ಬೆಳಗುವಿನ ಧ್ಯೇಯವೆಂಬುದು ಲಾಂಛನದಲ್ಲಿದೆ. ಬೆಳಕು ಹತ್ತಿಸಿದ ಹಣತೆಯಲ್ಲಿ ಜ್ಞಾನಕ್ಕಾಗಿ ಪುಸ್ತಕದ ತಿಳಿವು, ಸಾಂಸ್ಕೃತಿಕ ಅರಿವಿಗೆ ವೀಣೆಗಳು ಸಾಂಕೇತಿಕವಾಗಿವೆ. `ಬೆಳಗು’ ಸಂಚಿಕೆಗಳು ಕರ್ನಾಟಕದ ಎಲ್ಲಾ ಸಾರ್ವಜನಿಕ ಗ್ರಂಥಾಲಯ ಹಾಗೂ ಕಾಲೇಜು ಗ್ರಂಥಾಲಯಗಳಲ್ಲಿರಬೇಕು. ವಿದ್ಯಾರ್ಥಿಗಳಿಗೆ ಅಧ್ಯಾಪಕರಿಗೆ ಇದರಿಂದ ಉತ್ತಮ ಮಾಹಿತಿಯ ಅರಿವು ಮೂಡಿದಂತಾಗುತ್ತದೆ.
ಜೊತೆಗೆ ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ ಇಂಥ ಪ್ರಯತ್ನವನ್ನು ಪ್ರೋತ್ಸಾಹಿಸಿ ಪತ್ರಿಕೆ ನಿಯತಕಾಲಿಕವಾಗಿ ಬರಲು ಮುಂಬೈನಲ್ಲಿರುವ ಬೆಳಗು ಬಳಗಕ್ಕೆ ಸಹಕಾರಿ ಆಗಬೇಕು. ಇಷ್ಟು ವರ್ಷ ಕನ್ನಡ ಪತ್ರಿಕೆಯೊಂದನ್ನು ಜೀವಂತವಾಗಿಟ್ಟುಕೊಂಡು ಬಂದ `ಬೆಳಗು’ ಬಳಗಕ್ಕೆ ಅಭಿನಂದನೆಗಳು.
ವಿಳಾಸ: ಸಂಪಾದಕರು, `ಬೆಳಗು’, ಕನ್ನಡ ಸಂಘ ಅಣುಶಕ್ತಿ ಕೇಂದ್ರ (ರಿ), ಭಾಭಾ ಪರಮಾಣು ಸಂಶೋಧನಾ ಕೇಂದ್ರ, ಮುಂಬಯಿ -೪೦೦೦೮೫.
(೨೦೦೧)
March 8th, 2013 at 12:09 pm
DEAR SIR,
IF POSSIBLE I WOULD LIKE TO HAVE “BELAGU” JSSUES REGULARLY IN MY MAIL BOX FREE OF COST. ALL THE BEST FOR YOUR INITIATIVE.
M P MOHAN,
BENGALURU.
08.03.2013
April 10th, 2014 at 8:50 am
ಮೈಸೂರ್ ಅಸೋಸಿಯೇಷನ್ ನಲ್ಲಿ ”ಜೈವಿಕ ತಂತ್ರಜ್ಞಾನದ’ ಬಗ್ಗೆ ಒಂದು ಕಮ್ಮಟ ಕನ್ನಡಭಾಷೆಯಲ್ಲಿ ಜರುಗಿತು. ಅದರಲ್ಲಿ ನನ್ನ ಗೆಳೆಯ, ಡಾ. ವಿತ್ಠಲ ಕಟ್ಟಿಯವರು ಭಾಗವಹಿಸಿದ್ದರು. ಮೈಸೂರು ಅಸೋಸಿಯೇಷನ್ ನಾ ಅಜೀವ ಸದಸ್ಯನಾಗಿರುವ ನಾನು ಭಾಗವಹಿಸಿದ್ದೆ. ಹತ್ತಿ ಸಂಶೋಧನೆಯಲ್ಲಿ ಜೈವಿಕ ತಂತ್ರಜ್ಗಾನ, ಬಹಳ ಬಳಕೆಗೆ ಬಂದಿತ್ತು. ಡಾ. ವ್ಯಾಸರಾವ್ ನಿಂಜೂರ್ ರವರ ಪರಿಚಯವಿಲ್ಲದಿದ್ದರೂ, ಅವರ ಕೆಲಸದ ಬಗ್ಗೆ ಓದಿದ್ದೆ.
ಕಮ್ಮಟದಲ್ಲಿ ಒಂದು ‘ಬೆಳಗು’ ಪತ್ರಿಕೆಯ ಪ್ರತಿ ದೊರೆಯಿತು…