Press "Enter" to skip to content

ಮಿಥ್ಯಾವಾಸ್ತವ ರೋಗಿ

“ಏನು ತೊಂದರೆ?”

“ನೋವಾಗುತ್ತಿದೆ”

“ಎಲ್ಲಿ? ಹೇಗೆ?”

“ಬೆನ್ನಿನಲ್ಲಿ. ಕೆಲೊವೊಮ್ಮೆ ಎದೆನೋವು ಕೂಡ”

“ಎರಡೂ ಒಟ್ಟಿಗೆ ಆಗುತ್ತದೆಯಾ?

“ಕೆಲವೊಮ್ಮೆ ಆಗುತ್ತದೆ”

“ಹೊಟ್ಟೆನೋವು ಇದೆಯಾ?”

“ಕೆಲವೊಮ್ಮೆ ಇದೆ”

“ಅತಿಯಾಗಿ ಬೆವರುತ್ತದೆಯಾ?”

“ಇಲ್ಲ”

“ಊಟವಾದ ತಕ್ಷಣ ಅತಿಯಾಗಿ ಹೊಟ್ಟೆ ನೋವಾಗುತ್ತದೆಯಾ”

“ಆಗುತ್ತದೆ”

-ಇವು ಒಬ್ಬ ವೈದ್ಯ ಮತ್ತು ರೋಗಿಯ ನಡುವಿನ ಸಂಭಾಷಣೆಯಾಗಿದೆ. ಇದು ನಾನು ಬರೆದ ಕಾಲ್ಪನಿಕ ಸಂಭಾಷಣೆ. ನಿಜವಾದ ಸಂಭಾಷಣೆಯೂ ಬಹುತೇಕ ಹೀಗೆಯೇ ಇರಬಹುದು. ಈ ಪ್ರಶ್ನೋತ್ತರದ ನಂತರ ರೋಗಿಗೆ ಗ್ಯಾಸ್ ತೊಂದರೆ ಇದೆ ಎಂದು ವೈದ್ಯರು ತೀರ್ಮಾನಿಸಬಹುದು. ಅಥವಾ ಅದನ್ನು ಖಾತ್ರಿಪಡಿಸಿಕೊಳ್ಳಲು ಅಗತ್ಯ ಪರೀಕ್ಷೆಗಳನ್ನು ಸೂಚಿಸಬಹುದು. ವೈದ್ಯವಿಜ್ಞಾನವನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಇದೇ ಸನ್ನಿವೇಶವನ್ನು ಕೃತಕವಾಗಿ ಸೃಷ್ಟಿಸಿದರೆ ಹೇಗಿರುತ್ತದೆ? ಅದುವೇ ಮಿಥ್ಯಾವಾಸ್ತವ ರೋಗಿ ಅಥವಾ ಸರಳವಾಗಿ ಮಿಥ್ಯಾರೋಗಿ. ಇದನ್ನು ಇಂಗ್ಲಿಷಿನಲ್ಲಿ virtual patient ಎಂದು ಕರೆಯುತ್ತಾರೆ. ಬನ್ನಿ, ಈ ಸಂಚಿಕೆಯಲ್ಲಿ ಅದರ ಬಗ್ಗೆ ತಿಳಿಯೋಣ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಿಥ್ಯಾವಾಸ್ತವ (virtual reality) ಎನ್ನುವುದು ದೊಡ್ಡ ಹೆಸರು. ಯಾವುದಾದರೊಂದು ವಸ್ತು, ದೃಶ್ಯ ಅಥವಾ ಕೆಲಸವನ್ನು ಮೂರು ಆಯಾಮಗಳಲ್ಲಿ ಕೃತಕವಾಗಿ ಸೃಷ್ಟಿಸಿದಂತೆ ಭ್ರಮೆ ಮೂಡಿಸುವುದಕ್ಕೆ ಮಿಥ್ಯಾವಾಸ್ತವ ಎನ್ನುತ್ತಾರೆ. ಉದಾಹರಣೆಗೆ ಕಟ್ಟಡಗಳ ಪ್ರತಿಕೃತಿ. ಮಿಥ್ಯಾವಾಸ್ತವ ವೀಕ್ಷಕವನ್ನು ಬಳಸಿ ನೋಡಿದರೆ ನೀವು ಕಟ್ಟಡದ ಒಳಗೆಲ್ಲ ಸುತ್ತಾಡಿದಂತೆ ನಿಮಗೆ ಭಾಸವಾಗುತ್ತದೆ. ನೀವು ಕೊಳ್ಳಲಿರುವ ಅಪಾರ್ಟ್‌ಮೆಂಟಿನ ಕೋಣೆಗಳು, ಅಡುಗೆ ಮನೆ, ಹಾಲ್ ಎಲ್ಲ ಹೇಗಿವೆ ಎಂದು ನೀವು ಮನೆಯಲ್ಲೇ ಕುಳಿತು ಮೂರು ಆಯಾಮದಲ್ಲಿ ವೀಕ್ಷಣೆ ಮಾಡಬಹುದು. ಇದೇ ತಂತ್ರಜ್ಞಾನದ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವುದನ್ನು, ವಿಮಾನ ಚಾಲಕರಿಗೆ ವಿಮಾನ ಹಾರಿಸುವುದನ್ನು, ಆಟಗಳನ್ನು ಆಡುವುದು, ಇನ್ನೂ ಹಲವು ವಿಷಯಗಳ ಕಲಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಈ ತಂತ್ರಜ್ಞಾನವನ್ನು ಮತ್ತು ಮಾಹಿತಿ ತಂತ್ರಜ್ಞಾನದ ಇತರೆ ಸವಲತ್ತುಗಳನ್ನು ಬಳಸಿ ಕೃತಕವಾಗಿ ರೋಗಿಯ ಸನ್ನಿವೇಶವನ್ನು ಸೃಷ್ಟಿಸಿದರೆ ಅದುವೇ ಮಿಥ್ಯಾವಾಸ್ತವ ರೋಗಿ ಅಥವಾ ಮಿಥ್ಯಾರೋಗಿ.

ಮಾಹಿತಿ ತಂತ್ರಜ್ಞಾನವನ್ನು ಬಳಸಿ ಪ್ರತಿಸ್ಪಂದನಾತ್ಮಕ ಪ್ರತ್ಯನುಕರಣೆಯ (interactive simulation) ಮೂಲಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ರೋಗ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ ನೀಡುವಿಕೆಯ ಬಗೆಗೆ ಶಿಕ್ಷಣವನ್ನು ನೀಡುವ ವಿಧಾನಕ್ಕೆ ಮಿಥ್ಯಾರೋಗಿ ಎನ್ನುತ್ತಾರೆ. ಮಿಥ್ಯಾರೋಗಿ ಆಧುನಿಕ ತಂತ್ರಜ್ಞಾನ ಮತ್ತು ಆಟದ ಮೂಲಕ ಕಲಿಯುವುದನ್ನು ಸಮ್ಮಿಲನಗೊಳಿಸಿ ಸಾಂಪ್ರದಾಯಿಕ ಶಿಕ್ಷಣಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. ಮಿಥ್ಯಾರೋಗಿಯಲ್ಲಿ ಹಲವು ವಿಧಾನಗಳಿವೆ. ಆದರೆ ಎಲ್ಲದರಲ್ಲೂ ಇರುವ ಸಮಾನ ಅಂಶವೆಂದರೆ ಪ್ರತಿಸ್ಪಂದನೆ.

ಒಂದು ವಿಧಾನದ ಮಿಥ್ಯಾರೋಗಿಯು ಈ ಲೇಖನದ ಪ್ರಾರಂಭದಲ್ಲಿ ನೀಡಿದ ಪ್ರಶ್ನೋತ್ತರದ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಗಣಕದಲ್ಲಿ ಬೇರೆ ಬೇರೆ ರೋಗಿಗಳ ಜೊತೆ ನಡೆಸಿದ ಪ್ರಶ್ನೋತ್ತರಗಳ ದೊಡ್ಡ ಭಂಡಾರವಿರುತ್ತದೆ. ವೈದ್ಯಕೀಯ ವಿದ್ಯಾರ್ಥಿ ಈ ಮಿಥ್ಯಾರೋಗಿಗೆ ಅಂದರೆ ಗಣಕಕ್ಕೆ ಪ್ರಶ್ನೆಗಳನ್ನು ಕೇಳುತ್ತಾನೆ/ಳೆ. ಮಿಥ್ಯಾರೋಗಿ ಉತ್ತರಗಳನ್ನು ನೀಡುತ್ತ ಹೋಗುತ್ತದೆ. ಇವು ಬಹುತೇಕ ನೈಜ ಸನ್ನಿವೇಶವನ್ನೇ ಪ್ರತ್ಯನುಕರಣೆಯ ಮೂಲಕ ಸೃಷ್ಟಿ ಮಾಡುತ್ತವೆ. ಮಿಥ್ಯಾರೋಗಿ ನೀಡುತ್ತ ಹೋದ ಉತ್ತರಗಳ ಆಧಾರದಲ್ಲಿ ವಿದ್ಯಾರ್ಥಿಯು ರೋಗ ಯಾವುದಿರಬಹುದೆಂಬ ತೀರ್ಮಾನಕ್ಕೆ ಬರಬೇಕು. ನಂತರ ನೀಡಬಹುದಾದ ಔಷಧಿ ಹಾಗೂ ಚಿಕಿತ್ಸೆಯ ವಿಧಾನವನ್ನೂ ಸೂಚಿಸಬೇಕು. ರೋಗಿಗೆ ಮಾಡಬೇಕಾದ ಪರೀಕ್ಷೆಗಳನ್ನೂ ಸೂಚಿಸಬೇಕು. ಇವುಗಳು ಎಷ್ಟರ ಮಟ್ಟಿಗೆ ಸರಿ ಎಂದು ಗಣಕ ನಿರ್ಧರಿಸಿ ವಿದ್ಯಾರ್ಥಿ ಎಷ್ಟು ಮಟ್ಟಿಗೆ ಸರಿ ಎಂದು ತಿಳಿಸುತ್ತದೆ.

ಕೆಲವು ಸಂದರ್ಭಗಳಲ್ಲಿ ಮಿಥ್ಯಾರೋಗಿ ಅಂದರೆ ಗಣಕವು ರೋಗಿಯ ಮೇಲೆ ಬೇರೆ ಬೇರೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದರೆ ಬರಬಹುದಾದ ಫಲಿತಾಂಶಗಳನ್ನು ತೋರಿಸುತ್ತದೆ. ಉದಾಹರಣೆಗೆ ಮಿಥ್ಯಾರೋಗಿ ತಾನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಸೂಚಿಸುತ್ತಿದೆ. ಆಗ ಅದು ಇಸಿಜಿ ಮಾಡಲು ಸೂಚಿಸುತ್ತದೆ. ನಂತರ ಹೃದಯದ ತೊಂದರೆ ಇರುವವರಿಗೆ ಇಸಿಜಿ ಮಾಡಿದರೆ ದೊರೆಯುವಂತಹ ಫಲಿತಾಂಶವನ್ನು ತೋರಿಸುತ್ತದೆ. ಆಗ ವೈದ್ಯಕೀಯ ವಿದ್ಯಾರ್ಥಿಯು ಈ (ಮಿಥ್ಯಾ)ರೋಗಿಗೆ ಹೃದಯದ ಕಾಯಿಲೆ ಇದೆ, ಇದಕ್ಕೆ ಇಂತಹ ಚಿಕಿತ್ಸೆ ಮಾಡಬೇಕು ಎಂದು ಉತ್ತರಿಸಬೇಕು. ಬೇರೆ ಉತ್ತರ ನೀಡಿದರೆ ವಿದ್ಯಾರ್ಥಿ ಫೇಲು. ಇದು ಒಂದು ಉದಾಹರಣೆ ಮಾತ್ರ. ಮಿಥ್ಯಾರೋಗಿ ತಂತ್ರಾಂಶದಲ್ಲಿ ಮನುಷ್ಯರಿಗೆ ಬರಬಹುದಾದ ಬಹುತೇಕ ಕಾಯಿಲೆಗಳ ಲಕ್ಷಣ, ಪರೀಕ್ಷೆ, ಚಿಕಿತ್ಸೆ, ಔಷಧಿ ಇವೆಲ್ಲವುಗಳ ಮಾಹಿತಿಯ ಅತಿ ದೊಡ್ಡ ಭಂಡಾರವೇ ಇರುತ್ತದೆ.

ಮಿಥ್ಯಾರೋಗಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗ್ರಾಫಿಕ್ಸ್ ಅನ್ನೂ ಬಳಸಬಹುದು. ಅದೂ ಪ್ರತಿಸ್ಪಂದನಾತ್ಮಕವಾಗಿರುತ್ತದೆ. ಈ ವಿಧಾನದಲ್ಲಿ ಗಣಕದ ಪರದೆಯ ಮೇಲೆ ಗಣಕ ರೂಪಿಸುವ ರೋಗಿಯ ಚಿತ್ರ ಮೂಡಿಬರುತ್ತದೆ. ಅದನ್ನು ನಿಜವಾದ ರೋಗಿಯನ್ನು ಮಾಡುವಂತೆ ಪರೀಕ್ಷೆ ಮಾಡಬಹುದು. ಅದಕ್ಕಾಗಿ ಮೌಸ್ ಮೂಲಕ ತಿರುಗಿಸುವ, ಕೃತಕವಾಗಿ ಮುಟ್ಟುವ, ಪರಿಶೀಲಿಸುವ ಸವಲತ್ತುಗಳಿರುತ್ತವೆ. ವಿದ್ಯಾರ್ಥಿಯು ನಿಜವಾದ ರೋಗಿಯನ್ನು ಪರೀಕ್ಷೆ ಮಾಡುವಂತೆ ಈ ಮಿಥ್ಯಾರೋಗಿಯನ್ನು ಪರೀಕ್ಷೆ ಮಾಡಬೇಕು. ರೋಗಿಯನ್ನು ಹಿಂದೆ ಮುಂದೆ ಮಾಡಿ, ತಿರುಗಿಸಿ, ಬೇಕಾದ ಕಡೆ “ಮುಟ್ಟಿ” ಪರಿಶೀಲಿಸಿದಾಗ ಗಣಕದ ಪರದೆಯ ಮೇಲೆ ಆ (ಮಿಥ್ಯಾ)ರೋಗಿ ಯಾವ ಕಾಯಿಲೆಯಿಂದ ನರಳುತ್ತಿದ್ದಾನೆಯೋ ಅದಕ್ಕೆ ಸಂಬಂಧಿಸಿದ ಫಲಿತಾಂಶಗಳನ್ನು ತೋರಿಸುತ್ತದೆ. ಉದಾಹರಣೆಗೆ ಹೊಟ್ಟೆಯ ಭಾಗವನ್ನು ಮೌಸ್ ಮೂಲಕ ತಲುಪಿ ಅದನ್ನು ಒತ್ತಿದರೆ, ಅಂದರೆ ಮೌಸ್ ಅನ್ನು ಕ್ಲಿಕ್ ಮಾಡಿದರೆ, ಪರದೆಯಲ್ಲಿ ನೋವು ಎಂದು ತೋರಿಸುತ್ತದೆ. ಆಗ ವಿದ್ಯಾರ್ಥಿಯು ಈ ರೋಗಿಗೆ ಹೊಟ್ಟೆನೋವು ಇದೆ ಎಂದು ತೀರ್ಮಾನಿಸಬೇಕು. ಇದು ಒಂದು ಚಿಕ್ಕ ಅತಿ ಸರಳ ಉದಾಹರಣೆ ಮಾತ್ರ. ನಿಜ ಸಂದರ್ಭದಲ್ಲಿ ಇದು ಇಷ್ಟು ಸರಳವಾಗಬೇಕಿಲ್ಲ.

ವೈದ್ಯಕೀಯ ಕ್ಷೇತ್ರದಲ್ಲಿ ಮಿಥ್ಯಾವಾಸ್ತವ ರೋಗಿಯ ಉಪಯೋಗ

ಮಿಥ್ಯಾರೋಗಿಗೆ ಶಸ್ತ್ರಚಿಕಿತ್ಸೆಯನ್ನೂ ಮಾಡಬಹುದು. ಹೊಲಿಗೆಗಗಳನ್ನು ಹಾಕಬಹುದು. ಬ್ಯಾಂಡೇಜ್ ಅಂಟಿಸಬಹುದು. ಕಾಯಿಲೆ ಕಡಿಮೆಯಾದಾಗ ಬ್ಯಾಂಡೇಜು ತೆಗೆಯಬಹುದು, ಹೊಲಿಗೆ ತೆಗೆಯಬಹುದು. ಹೀಗೆ ಹಲವು ರೀತಿಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪರಂಪರಾಗತ ಕಲಿಯುವಿಕೆಗೆ ಪೂರಕವಾಗಿ ಮಿಥ್ಯಾರೋಗಿ ತಂತ್ರಜ್ಞಾನವು ಸಹಾಯ ಮಾಡುತ್ತದೆ.         

ಡಾ| ಯು.ಬಿ. ಪವನಜ

gadgetloka @ gmail . com

Be First to Comment

Leave a Reply

Your email address will not be published. Required fields are marked *