ವೆಲ್‌ಕ್ರೋ: ಕೊಕ್ಕೆ-ಕುಣಿಕೆಗಳ ಭಲೇ ಜೋಡಿ!
– ಡಾ. ಯು. ಬಿ.ಪವನಜ
ಮುಚ್ಚಿದ ಚೀಲವನ್ನೋ ಕಟ್ಟಿದ ಚಪ್ಪಲಿಯನ್ನೋ ತೆರೆದಾಗ ಪರ್ ಪರ್ ಧ್ವನಿ ಕೇಳುವುದು ನಮಗೆ ಗೊತ್ತು. ಅವುಗಳಲ್ಲಿ ಬಳಕೆಯಾಗುವ ವೆಲ್‌ಕ್ರೋ ಈ ಧ್ವನಿ ಹೊರಡಿಸುತ್ತದೆ ಎನ್ನುವುದೂ ನಮಗೆ ಗೊತ್ತು. ಆದರೆ ಏನಿದು ವೆಲ್‌ಕ್ರೋ?
ಇದರಲ್ಲಿ ಎರಡು ಭಾಗಗಳಿರುತ್ತವೆ. ಒಂದು ಭಾಗದಲ್ಲಿ ಕುಣಿಕೆಗಳಿರುತ್ತವೆ ಮತ್ತು ಅದರ ಮೇಲೆ ಕುಳಿತುಕೊಳ್ಳುವ ಭಾಗದಲ್ಲಿ ಕೊಕ್ಕೆಗಳಿರುತ್ತವೆ. ಕುಣಿಕೆಗೆ ಕೊಕ್ಕೆ ಸಿಕ್ಕಿಹಾಕಿಕೊಂಡಾಗ ಆ ಎರಡು ಭಾಗಗಳು ಗಟ್ಟಿಯಾಗಿ ಅಂಟಿಕೊಳ್ಳುತ್ತವೆ. ಇವುಗಳನ್ನು ಬೇರೆ ಮಾಡಬೇಕಾದರೆ ಮೇಲಿನ ಭಾಗವನ್ನು ಒಂದು ಬದಿಯಿಂದ ಎತ್ತುತ್ತಾ ಹೋಗಬೇಕು. ಹಾಗೆ ಮಾಡುವಾಗ ಕೊಕ್ಕೆಗಳು ಕುಣಿಕೆಯಿಂದ ಬೇರ್ಪಡುತ್ತಾ ಹೋಗುತ್ತವೆ. ಹಾಗೆ ಬೇರ್ಪಡುವಾಗಲೇ ಈ ಪರ್ ಪರ್ ಧ್ವನಿ ಕೇಳಿಬರುವುದು. ಈ ಕೊಕ್ಕೆ ಕುಣಿಕೆಗಳು ತುಂಬ ದೊಡ್ಡದಾಗೇನೂ ಇರುವುದಿಲ್ಲ. ಬರಿಗಣ್ಣಿಗೆ ಅವು ಸರಿಯಾಗಿ ಕೊಕ್ಕೆ ಮತ್ತು ಕುಣಿಕೆಗಳು ಎಂದು ಗೊತ್ತೂ ಆಗುವುದಿಲ್ಲ. ಅವುಗಳ ರಚನೆ ಸರಿಯಾಗಿ ತಿಳಿಯಬೇಕಾದರೆ ಅವುಗಳನ್ನು ಸೂಕ್ಷ್ಮದರ್ಶಕದಲ್ಲಿ ನೋಡಬೇಕು.
ಈ ವೆಲ್‌ಕ್ರೋದ ಕಥೆ ಸ್ವಾರಸ್ಯಕರವಾಗಿದೆ. ಹಲವು ಸಂಶೋಧನೆಗಳಂತೆ ಈ ಸಂಶೋಧನೆಯೂ ಆಕಸ್ಮಿಕವಾಗಿ ಆದುದು. ಇದನ್ನು ಆವಿಷ್ಕರಿಸಿದವರು ಸ್ವಿಟ್ಸರ್ಲೆಂಡಿನ ಜಾರ್ಜ್ ಡಿ ಮೆಸ್ಟ್ರಾಲ್ ಎಂಬದವರು. ಅವರು 1941ರಲ್ಲಿ ತಮ್ಮ ನಾಯಿಯ ಜೊತೆ ಕಾಡಿಗೆ ಹೋಗಿ ವಾಪಾಸು ಬಂದು ನೋಡಿದಾಗ ತಮ್ಮ ಬಟ್ಟೆಯಲ್ಲೂ ನಾಯಿಯ ಮೈಯ ರೋಮಗಳಲ್ಲೂ ಚಿಕ್ಕ ಚಿಕ್ಕ ಸಸ್ಯಬೀಜಗಳು ಅಂಟಿಕೊಂಡದ್ದನ್ನು ಗಮನಿಸಿದರು. ಇದೇನೂ ವಿಶೇಷವಲ್ಲ, ನಮ್ಮಲ್ಲೂ ಹಾಗೆ ಅಂಟಿಕೊಳ್ಳುವ ಬೀಜಗಳಿವೆ ಎನ್ನುತ್ತಿದ್ದೀರಾ? ಆದರೆ ಡಿ ಮೆಸ್ಟ್ರಾಲ್ ಇದರ ಬಗ್ಗೆ ತಲೆ ಕೆಡಿಸಿಕೊಂಡರು: ಈ ಬೀಜಗಳು ಯಾಕೆ ಹಾಗೆ ಅಂಟಿಕೊಂಡವು? ಅವನ್ನು ತೆಗೆಯಲೂ ಸ್ವಲ್ಪ ಕಷ್ಟಪಡಬೇಕಿತ್ತು. ಅಂದರೆ ಇದರಲ್ಲಿ ಏನೋ ಮಸಲತ್ತು ಇದೆ ಎಂದು ಅವರು ಯೋಚಿಸಿದರು. ನೋಡಿಯೇ ಬಿಡೋಣ ಎಂದು ಅವರು ಅದನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿ ನೋಡಿದರು. ನೋಡಿದಾಗ ಬೀಜದಲ್ಲಿ ಕಂಡುಬಂದ ಚಿಕ್ಕ ಚಿಕ್ಕ ಕುಣಿಕೆಗಳಿಗೆ ಬಟ್ಟೆಯ ಕೊಕ್ಕೆಯಾಕಾರದ ದಾರದ ಕೊನೆಗಳು ಸಿಕ್ಕಿಹಾಕಿಕೊಂಡುದನ್ನು ಗಮನಿಸಿದರು. ಇದೇ ತತ್ತ್ವವನ್ನು ಬಳಸಿ ಎರಡು ಬಟ್ಟೆಗಳನ್ನು ಜೋಡಿಸುವ ವಿಧಾನವನ್ನು ಆವಿಷ್ಕರಿಸಲು ಪ್ರಯತ್ನಿಸಿದರು. ಹಲವು ಪ್ರಯತ್ನಗಳ ನಂತರ, ಕೊನೆಗೂ ಅವರು ಅದರಲ್ಲಿ ಯಶಸ್ವಿಯಾದರು. ಅವರು ಅದಕ್ಕೆ 1955ರಲ್ಲಿ ಪೇಟೆಂಟನ್ನೂ ಪಡೆದುಕೊಂಡರು.
(Trazyanderson, Velcro photomicrograph, CC BY-SA 4.0)
ವೆಲ್‌ಕ್ರೋ ಎಂಬುದು ಫ್ರೆಂಚ್ ಭಾಷೆಯ “velours” (ಮಖಮಲ್ ಬಟ್ಟೆ) ಮತ್ತು “crochet” (ಕೊಕ್ಕೆ) ಎಂಬುವುಗಳಿಂದ ಆಗಿದೆ. ಡಿ ಮೆಸ್ಟ್ರಾಲ್ ಅವರು ತಮ್ಮ ಆವಿಷ್ಕಾರವನ್ನು ವೆಲ್‌ಕ್ರೋ ಇಂಟರ್‌ನ್ಯಾಶನಲ್ ಎಂಬ ಕಂಪೆನಿಗೆ ಮಾರಿದರು. ಈಗಲೂ ವೆಲ್‌ಕ್ರೋ ಎಂಬುದು ಒಂದು ಕಂಪೆನಿಯ ಹಕ್ಕು ಸ್ವಾಮ್ಯ ಮತ್ತು ಟ್ರೇಡ್‌ಮಾರ್ಕ್ ಆಗಿದೆ. ವೆಲ್‌ಕ್ರೋ ಎಂದು ಬಳಸುವುದು ತಪ್ಪಾಗುತ್ತದೆ. ಬದಲಿಗೆ ಕೊಕ್ಕೆ ಮತ್ತು ಕುಣಿಕೆಗಳ ಜೋಡಣೆ (hook and loop fastener) ಎಂಬುದು ಸರಿಯಾದ ಬಳಕೆ. ಆದರೆ ಹೇಗೆ ನೆರಳಚ್ಚು (photocopy) ಎಂಬುದರ ಬದಲಿಗೆ ಎಲ್ಲರೂ ಜೆರಾಕ್ಸ್ ಎಂದು ಬಳಸುತ್ತಾರೋ ಹಾಗೆಯೇ ವೆಲ್‌ಕ್ರೋ ಎಂಬ ಬಳಕೆಯೂ ಬಂದುಬಿಟ್ಟಿದೆ.
ಈಗಿನ ದಿನಗಳಲ್ಲಿ ವೆಲ್‌ಕ್ರೋದ ಬಳಕೆ ಹಲವು ರೀತಿಯಲ್ಲಿ ಆಗುತ್ತಿದೆ. ಚಪ್ಪಲಿ, ಚೀಲ, ಕೊಡೆ, ಆರೋಗ್ಯ ಸಂಬಂಧಿ ಸಾಧನಗಳು ಮುಂತಾದ ಹಲವು ವಸ್ತುಗಳಲ್ಲಿ ಅವನ್ನು ಬಳಸಲಾಗುತ್ತಿದೆ. ನಾಸಾದವರೂ ತಮ್ಮ ಉಪಗ್ರಹಗಳಲ್ಲಿ ವೆಲ್‌ಕ್ರೋ ಬಳಸುತ್ತಿದ್ದಾರೆ. ಝಿಪ್‌ಗಳು ಆಗಾಗ ಕೈಕೊಡುವಂತೆ ವೆಲ್‌ಕ್ರೋಗಳು ಕೈಕೊಡುವುದಿಲ್ಲ. ಆದುದರಿಂದ ಝಿಪ್‌ಗಳ ಬದಲಿಗೆ ವೆಲ್‌ಕ್ರೋಗಳ ಬಳಕೆ ಜಾಸ್ತಿ.
ವೆಲ್‌ಕ್ರೋಗಳಲ್ಲಿ ಸಮಸ್ಯೆಗಳಿಲ್ಲದೆಯೂ ಇಲ್ಲ. ಕುಣಿಕೆಗಳ ನಡುವೆ ಕೂದಲು ಸಿಕ್ಕಿಹಾಕಿಕೊಂಡರೆ ಅವುಗಳನ್ನು ತೆಗೆಯುವುದು ಸುಲಭವಲ್ಲ. ಹಾಗೆ ತುಂಬ ಕೂದಲುಗಳು ಸಿಕ್ಕಿಹಾಕಿಕೊಂಡರೆ ನಂತರ ಅವುಗಳು ಸರಿಯಾಗಿ ಅಂಟಿಕೊಳ್ಳುವುದಿಲ್ಲ. ಅವುಗಳನ್ನು ಬೇರ್ಪಡಿಸುವಾಗ ಪರ್ ಪರ್ ಎಂದು ಸದ್ದು ಮಾಡುವುದು ಇನ್ನೊಂದು ಸಮಸ್ಯೆ. ತರಗತಿಯಲ್ಲಿ ಬ್ಯಾಗಿನ ಮುಚ್ಚಳ ತೆರೆದಾಗ ಪರ್ ಪರ್ ಎಂದು ಸದ್ದು ಮಾಡಿ ಅಧ್ಯಾಪಕರಿಂದ ಬೈಗುಳ ತಿಂದ ಎಲ್ಲರಿಗೂ ಇದರ ಅರಿವಿರಬಹುದು.
2004ರಲ್ಲಿ ತೆರೆಗೆ ಬಂದ ಗಾರ್ಡನ್ ಸ್ಟೇಟ್ ಎಂಬ ಸಿನಿಮಾದಲ್ಲಿ ಒಬ್ಬಾತ ನಿಶ್ಶಬ್ದ ವೆಲ್‌ಕ್ರೋವನ್ನು ಆವಿಷ್ಕರಿಸಿ ಅದರಿಂದ ತುಂಬ ಹಣ ಸಂಪಾದಿಸಿದ ಕಾಲ್ಪನಿಕ ಕಥೆಯಿದೆ. ಅಂತಹ ವೆಲ್‌ಕ್ರೋ ಮಾರುಕಟ್ಟೆಗೂ ಬಂದರೆ ಈ ಸಮಸ್ಯೆ ಪರಿಹಾರ ಆಗಬಹುದೇನೋ!