Press "Enter" to skip to content

ಪರೀಕ್ಷೆಯಲ್ಲಿ ವಂಚನೆಗೂ ತಂತ್ರಜ್ಞಾನದ ಬಳಕೆ

ಕರ್ನಾಟಕದಲ್ಲಿ ಕೆ.ಪಿ.ಎಸ್.ಸಿ. ಪ್ರವೇಶ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ವಂಚನೆ ಮಾಡಿದ ಸುದ್ದಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಇದು ಬಹುಮಟ್ಟಿಗೆ ಮುನ್ನಾಬಾಯಿ ಎಂಬಿಬಿಎಸ್ ಸಿನಿಮಾದ ಸನ್ನಿವೇಶವನ್ನು ನೆನಪಿಗೆ ತರುತ್ತದೆ. ಆ ಸಿನಿಮಾದಲ್ಲಿ ನಾಯಕ ಹೊರಗಿನಿಂದ ಯಾರೋ ಉತ್ತರವನ್ನು ಹೇಳಿದುದನ್ನು ಮೊಬೈಲ್ ಫೋನ್ ಮತ್ತು ಇಯರ್‌ಫೋನ್ ಬಳಸಿ ಬರೆದು ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ. ಆ ಸಿನಿಮಾ ಬಂದ ಕಾಲದಲ್ಲಿ ಬ್ಲೂಟೂತ್ ತಂತ್ರಜ್ಞಾನ ಇಷ್ಟು ಬಳಕೆಗೆ ಬಂದಿರಲಿಲ್ಲ. ಬಂದಿದ್ದರೆ ಅಲ್ಲಿ ಬಳಸಿದ ಮಾಮೂಲಿ ಇಯರ್‌ಫೋನ್ ಬದಲು ಅತ್ಯಾಧುನಿಕ, ಸುಲಭದಲ್ಲಿ ಕಾಣಿಸದ, ಬ್ಲೂಟೂತ್ ಇಯರ್‌ಫೋನ್ ಇರುತ್ತಿತ್ತು. ಯಾವುದೇ ಹೊಸ ಸೌಲಭ್ಯ, ತಂತ್ರಜ್ಞಾನ ಬಂದಾಗ ಎರಡು ರೀತಿಯ ಸಂಗತಿಗಳು ಆಗುತ್ತವೆ. ಅವು ಉಪಯೋಗ ಮತ್ತು ದುರುಪಯೋಗ. ಈ ಲೇಖನದಲ್ಲಿ ತಂತ್ರಜ್ಞಾನವನ್ನು ಹೇಗೆ ದುರುಪಯೋಗ ಮಾಡಬಹುದು, ಅದರಲ್ಲೂ ಪರೀಕ್ಷೆಯಲ್ಲಿ ವಂಚನೆಗೆ ಹೇಗೆಲ್ಲ ಬಳಸಬಹುದು ಎಂಬುದನ್ನು ನೋಡೋಣ.

ಎಲ್ಲ ವಂಚನೆಗಳ ಮೂಲ ವಿಧಾನ ಬಹುತೇಕ ಒಂದೇ. ಬ್ಲೂಟೂತ್ ಇಯರ್‌ಫೋನ್ ಅನ್ನು ಬಳಸಿ ಆಲಿಸುವುದು. ಹೊರಗಿನಿಂದ ಒಬ್ಬ ಪ್ರಶ್ನೆಗಳಿಗೆ ಸರಿಯದ ಉತ್ತರವನ್ನು ಓದಿ ಹೇಳುತ್ತಾನೆ. ಅದನ್ನು ಕೇಳಿಸಿಕೊಂಡ ಈತ ಉತ್ತರ ಬರೆಯುತ್ತಾನೆ. ಹೀಗೆ ಮಾಡುವಾಗ ಇಯರ್‌ಫೋನ್ ಕಾಣಿಸುವುದಿಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಇಲ್ಲಿ ಬರುವುದು ಆಧುನಿಕ ತಂತ್ರಜ್ಞಾನ. ಇಂತಹ ಸಂದರ್ಭಗಳಿಗೆಂದೇ ಅತ್ಯಂತ ಚಿಕ್ಕ ಬ್ಲೂಟೂತ್ ಇಯರ್‌ಫೋನ್‌ಗಳು ಲಭ್ಯವಿವೆ. ಅವು ಎಷ್ಟು ಚಿಕ್ಕವಿವೆ ಎಂದರೆ ಕಿವಿಯ ಕಾಲುವೆಯೊಳಗೆ ಅವು ಹೋಗಿ ಕುಳಿತುಕೊಳ್ಳುತ್ತವೆ. ಯಾರಿಗೂ ಗೊತ್ತೇ ಆಗಲಾರದು. ಅದು ಬರಿಯ ಇಯರ್‌ಫೋನ್ ಆಯಿತು. ಅದು ತನ್ನಷ್ಟಕ್ಕೆ ಅತಿ ದೂರದಲ್ಲಿರುವ ವ್ಯಕ್ತಿಗೆ ಸಂಪರ್ಕ ಹೊಂದಲಾರದು. ಬ್ಲೂಟೂತ್ ಹೆಚ್ಚೆಂದರೆ 10 ಮೀ. ವ್ಯಾಪ್ತಿಯದ್ದು. ಈ ಬ್ಲೂಟೂತ್ ಇಯರ್‌ಫೋನ್ ಒಂದು ಚಿಕ್ಕ ಗ್ಯಾಜೆಟ್‌ಗೆ ಸಂಪರ್ಕ ಹೊಂದಿರುತ್ತದೆ. ಅದು ಒಂದು ಚಿಕ್ಕ ಮೊಬೈಲ್ ಫೋನ್ ಎನ್ನಬಹುದು. ಯಾಕೆಂದರೆ ಅದರಲ್ಲಿ ಸಿಮ್ ಕಾರ್ಡ್ ಇರುತ್ತದೆ. ಈ ಸಾಧನ ಒಂದು ಪೆನ್ಸಿಲ್ ರಬ್ಬರ್‌ನಷ್ಟು ಚಿಕ್ಕದೂ ಇರಬಹುದು. ನೋಡಲೂ ರಬ್ಬರ್‌ನಂತೆಯೇ ಕಾಣಿಸುತ್ತದೆ. ಆದರೆ ಅದರಲ್ಲಿ ಸಿಮ್‌ ಕಾರ್ಡ್, ಅದನ್ನು ನಡೆಸಲು ಬೇಕಾದ ಪುಟಾಣಿ ಬ್ಯಾಟರಿ ಎಲ್ಲ ಇರುತ್ತದೆ. ಇದು ಇನ್ನೂ ಹಲವು ರೂಪಗಳಲ್ಲಿ ಲಭ್ಯವಿದೆ. ಬ್ಯಾಂಕಿನ ಎಟಿಎಂ ಕಾರ್ಡ್ ರೂಪದಲ್ಲಿಯೂ ದೊರೆಯುತ್ತದೆ. ನೋಡಿದವರಿಗೆ ಸುಲಭದಲ್ಲಿ ಗೊತ್ತಾಗಲಾರದು.

ಕಾಲ್ಪನಿಕ ಚಿತ್ರ

ಉತ್ತರ ಪ್ರದೇಶದಲ್ಲಿ ಪೋಲೀಸ್ ನೇಮಕಾತಿ ಪರೀಕ್ಷೆ ಬರೆಯಲು ಬಂದವರನ್ನು ಕೋಣೆಯೊಳಗಡೆ ಕಳುಹಿಸುವ ಮೊದಲು ಪ್ರತಿಯೊಬ್ಬರನ್ನೂ ಲೋಹ ಪತ್ತೆ ಹಚ್ಚುವ ಸಾಧನ ಮೂಲಕ ಪರೀಕ್ಷೆ ಮಾಡಿ ಒಳಗೆ ಕಳುಹಿಸಲಾಗುತ್ತಿತ್ತು. ಒಬ್ಬಾತನ ತಲೆಯ ಮೇಲೆ ಅದನ್ನು ಹಿಡಿದಾಗ ಅದು ಸದ್ದು ಮಾಡಿತು. ಅವನ ತಲೆಯ ಕೂದಲನ್ನು ಪರೀಕ್ಷಿಸಿದಾಗ ಅಲ್ಲಿ ಯಾವ ಲೋಹದ ಸಾಧನವೂ ಕಂಡುಬರಲಿಲ್ಲ. ಪುನಃ ಪರೀಕ್ಷೆ ಮಾಡಿದರು. ಆಗಲೂ ಬೀಪ್ ಬೀಪ್ ಬರತೊಡಗಿತು. ಒಬ್ಬರಿಗೆ ಸ್ವಲ್ಪ ಅನುಮಾನ ಬಂದು ಆತನ ತಲೆಗೂದಲನ್ನು ಸ್ವಲ್ಪ ಎಳೆದು ನೊಡಿದರು. ಆಗ ಗೊತ್ತಾಯಿತು ನೋಡಿ ನಿಜ ಬಣ್ಣ. ಆತನ ತಲೆಗೂದಲು ಕೃತಕವಾಗಿತ್ತು. ಅಂದರೆ ಆತ ವಿಗ್ ಧರಿಸಿದ್ದ. ವಿಗ್‌ನ ಅಡಿಯಲ್ಲಿ ಬ್ಲೂಟೂತ್ ಸಾಧನವಿತ್ತು. ಕಿವಿಯೊಳಗೆ ಅತಿ ಚಿಕ್ಕ ಬ್ಲೂಟೂತ್ ಇಯರ್‌ಫೋನ್ ಇತ್ತು. ಕೆಲವರು ಅಂಗಿಯ ಹೊಲಿಗೆಯ ಒಳಗೆ ಬ್ಲೂಟೂತ್ ಸಾಧನವನ್ನು ಹೊಲಿಸಿಕೊಂಡದ್ದೂ ಪತ್ತೆಯಾಗಿದೆ. ಇನ್ನೊಬ್ಬರು ಬ್ಲೂಟೂತ್ ಚಪ್ಪಲಿ ಧರಿಸಿ ಪರೀಕ್ಷೆಗೆ ಬಂದಿದ್ದರು.

ಸ್ಮಾರ್ಟ್‌ವಾಚ್ ಎಲ್ಲರಿಗೂ ಗೊತ್ತಿದೆ. ಪರೀಕ್ಷೆಯಲ್ಲಿ ವಂಚಿಸುವವರಿಗೆಂದೇ ವಿಶೇಷ ಸ್ಮಾರ್ಟ್‌ವಾಚ್ ಲಭ್ಯವಿದೆ. ಇದು ವೃತ್ತಾಕಾರದ ಡಯಲ್ ಹೊಂದಿದ್ದು ಸಾಮಾನ್ಯ ವಾಚಿನಂತೆಯೇ ಕಾಣುತ್ತದೆ. ಅದನ್ನು ಕಟ್ಟಿಕೊಂಡ ಕೈಯನ್ನು ಒಮ್ಮೆ ಕುಲುಕಿಸಿದರೆ ಅದರ ಪರದೆಯ ಮೇಲೆ ಸಂದೇಶದ ಮಾದರಿಯಲ್ಲಿ ಪಠ್ಯವು ಮೂಡಿಬರುತ್ತದೆ. ಅದು ಕೆಳಗಿನಿಂದ ಮೇಲಕ್ಕೆ ಸರಿಯುತ್ತದೆ. ಯಾರಾದರೂ ಪಕ್ಕ ಬಂದರೆ ಕೈಯನ್ನು ಇನ್ನೊಮ್ಮೆ ಕುಲುಕಿದರೆ ಆಯಿತು. ಆಗ ವಾಚ್ ಮಾಮೂಲಿ ವಾಚಿನಂತಾಗಿ ಅದರಲ್ಲಿ ಮುಳ್ಳುಗಳು ಕಾಣಿಸುತ್ತವೆ.

ಈ ರೀತಿ ಮಾಡುವಾಗ ಒಂದು  ವಿಷಯ ಗಮನಿಸಿರಬಹುದು. ಅದೇನೆಂದರೆ ಹೊರಗಿನಿಂದ ಉತ್ತರ ಓದಿ ಹೇಳುವವರಿಗೆ ಕೋಣೆಯ ಒಳಗೆ ಕುಳಿತು ಬರೆಯುತ್ತಿರುವವನ ಜೊತೆ ಮಾತನಾಡಲು ಆಗುವುದಿಲ್ಲ. ಆತನಿಗೆ ಉತ್ತರ ಸರಿಯಾಗಿ ಕೇಳಿತೇ ಇಲ್ಲವೇ ಎಂದು ಗೊತ್ತಾಗುವುದು ಹೇಗೆ? ಇದಕ್ಕೂ ಖದೀಮರು ಉಪಾಯ ಮಾಡಿಕೊಂಡಿದ್ದಾರೆ. ಉತ್ತರ ಬರೆಯುವಾತ ಕೆಮ್ಮಿನ ಮೂಲಕ ಹೊರಗಿನವನಿಗೆ ಸಂಕೇತ ಕಳುಹಿಸುತ್ತಾನೆ. ಒಮ್ಮೆ ಕೆಮ್ಮಿದರೆ ಉತ್ತರ ಕೇಳಿಸಿಕೊಂಡಿದ್ದೇನೆ, ಮುಂದಿನ ಪ್ರಶ್ನೆಗೆ ಹೋಗಬಹುದು ಎಂದು ಅರ್ಥ. ಎರಡು ಸಲ ಕೆಮ್ಮಿದರೆ ಉತ್ತರ ಇನ್ನೊಮ್ಮೆ ಓದಿ ಹೇಳು ಎಂದು.

ಈ ಎಲ್ಲ ವಿಧಾನಗಳಲ್ಲಿ ಹೊರಗಿನಿಂದ ಉತ್ತರ ಓದಿ ಹೇಳುವವನ ಕೈಯಲ್ಲಿ ಪ್ರಶ್ನೆ ಪತ್ರಿಕೆ ಇರಬೇಕು. ಅದು ಲಭ್ಯವಿಲ್ಲದಿದ್ದಾಗ ಏನು ಉಪಾಯ? ಅದಕ್ಕೂ ಆದುನಿಕ ತಂತ್ರಜ್ಞಾನಾಧಾರಿತ ವಂಚಕರು ಪರಿಹಾರ ಕಂಡುಕೊಂಡಿದ್ದಾರೆ. ಕ್ಯಾಮೆರ ಅಳವಡಿಸಿರುವ ಕನ್ನಡಕಗಳು ಲಭ್ಯವಿವೆ. ಇವುಗಳಲ್ಲಿ ಸಿಮ್ ಕಾರ್ಡ್ ಹಾಕಬಹುದು. ಕಿವಿಗೆ ಇಯರ್‌ಫೋನ್ ಕೂಡ ಇವುಗಳಲ್ಲಿ ಅಡಕವಾಗಿರುತ್ತವೆ. ನೋಡಲು ಮಾಮೂಲಿ ಗಾಗಲ್ ತರಹ ಕಾಣಿಸುತ್ತದೆ. ಅದನ್ನು ಹಾಕಿಕೊಂಡು ಪ್ರಶ್ನೆಪತ್ರಿಕೆಯನ್ನು ನೋಡಿದರೆ ಅದು ಕ್ಯಾಮೆರಾ ಮೂಲಕ ಹೊರಗೆ ಸಂಪರ್ಕದಲ್ಲಿರುವವನಿಗೆ ತಲುಪುತ್ತದೆ. ಆತ ಅಲ್ಲಿಂದ ಪ್ರಶ್ನೆಗೆ ಉತ್ತರವನ್ನು ಓದಿ ಹೇಳಿದರೆ ಅದು ಈತನಿಗೆ ಇಯರ್‌ಫೋನ್ ಮೂಲಕ ತಲುಪುತ್ತದೆ.

ಇನ್ನೂ ಹಲವು ನಮೂನೆಯ ಸಾಧನಗಳು ಲಭ್ಯವಿವೆ. ಕೆಲವು ಉದಾಹರಣೆಗಳು: ಬ್ಲೂಟೂತ್ ಅಳವಡಿಸಿರುವ ಮುಖಗವಸು (ಮಾಸ್ಕ್), ಕೈಗೆ ಬ್ರೇಸ್‌ಲೆಟ್ ಮಾದರಿಯ ಸಾಧನ, ಕುತ್ತಿಗೆಗೆ ಸರದ ಮಾದರಿಯ ಸಾಧನ, ಫೇಸ್ ಮಾಸ್ಕ್, ಬ್ರಾ, ಚಡ್ಡಿ, ಇತ್ಯಾದಿ. ಇಂತಹ ಸಾಧನಗಳನ್ನು ಮಾರಲೆಂದೇ ಜಾಲತಾಣಗಳಿವೆ. ಅವುಗಳ ವಿಳಾಸವನ್ನು ಇಲ್ಲಿ ನೀಡುತ್ತಿಲ್ಲ.    

ಯಾವ ಯಾವ ರೀತಿಯಲ್ಲಿ ವಂಚಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಇಲ್ಲಿ ಕೇವಲ ಮಾಹಿತಿಗೋಸ್ಕರ ನೀಡಿದ್ದೇನೆ. ನಾನೂ ಆ ರೀತಿಯಲ್ಲಿ ವಂಚಿಸಿ ಪರೀಕ್ಷೆಯಲ್ಲಿ ಪಾಸಾಗುತ್ತೇನೆ ಎಂದು ಹೊರಡಬೇಡಿ ಮತ್ತೆ! ಎಲ್ಲಾ ನಮೂನೆಯ ವಂಚನೆಗಳನ್ನೂ ಪತ್ತೆಹಚ್ಚಬಹುದು. ಅದು ಹೇಗೆ ಎಂದು ಮಾತ್ರ ನಾನು ಹೇಳುತ್ತಿಲ್ಲ!

ಡಾ| ಯು.ಬಿ. ಪವನಜ

gadgetloka @ gmail . com

Be First to Comment

Leave a Reply

Your email address will not be published. Required fields are marked *