Press "Enter" to skip to content

ಕನ್ನಡದಲ್ಲಿ ವಿಜ್ಞಾನ ಸಾಹಿತ್ಯಕ್ಕೆ ಓದುಗರು ಏಕಿಲ್ಲ ?

ಸಮಸ್ಯೆಯ ಪರಿಚಯ

ಕನ್ನಡದಲ್ಲಿ ವಿಜ್ಞಾನ ಸಂವಹನದ ಬಗ್ಗೆ ಲೇಖಕರ ನಡುವೆ ಚರ್ಚೆ ನಡೆದಿದೆ; ವಿದ್ಯಾರ್ಥಿಗಳೊಡನೆ ಮಾತುಕತೆ ಆಗಿದೆ; ಪ್ರಕಾಶಕರ ಜೊತೆ ವಾಗ್ವಾದಗಳಾಗಿವೆ. ಆದರೆ ನೇರವಾಗಿ ಓದುಗರ ಜೊತೆ ಸಂವಾದ ಆದಂತಿಲ್ಲ. ಕನ್ನಡದಲ್ಲಿ ವಿಜ್ಞಾನ ಸಾಹಿತ್ಯಕ್ಕೆ ಓದುಗರು ಎಲ್ಲಿದ್ದಾರೆ ಎಂದು ಕೂಡ ಸುಲಭವಾಗಿ ತಿಳಿಯುವುದಿಲ್ಲ. ಸಾಹಿತ್ಯ ಸಂತೆಗಳಲ್ಲಿ ವಿಜ್ಞಾನದ ಪುಸ್ತಕಗಳು ದೊರೆಯುವುದು ಕಡಿಮೆ. ಅಂತಹ ಮಳಿಗೆಗಳಲ್ಲಿ ಜನರೂ ಕಡಿಮೆ.

ಕನ್ನಡ ಪುಸ್ತಕೋದ್ಯಮ ಇನ್ನೂ ಒಳ್ಳೆಯ ಸ್ಥಿತಿಯಲ್ಲೇ ಇದೆ. ಪುಸ್ತಕ ಕೊಂಡು ಓದುವ ಕನ್ನಡಿಗರಿದ್ದಾರೆ. ವಾರಕ್ಕೆ ಏನಿಲ್ಲವೆಂದರೂ 25 ಹೊಸ ಪುಸ್ತಕಗಳು ಲೋಕಾರ್ಪಣವಾಗುತ್ತವೆ. ಕನ್ನಡ ಪುಸ್ತಕಗಳನ್ನು ಮಾರುವ ಮಳಿಗೆಗಳು ಚೆನ್ನಾಗಿ ನಡೆಯುತ್ತಿವೆ. ಕನ್ನಡ ಪುಸ್ತಕಗಳನ್ನು ಮಾತ್ರ ಪ್ರಕಾಶನ ಮಾಡುವ ಹಲವಾರು ಪ್ರಕಾಶಕರು ಒಳ್ಳೆಯ ವ್ಯವಹಾರ ಮಾಡುತ್ತಿದ್ದಾರೆ. ಎರಡು-ಮೂರು ದಿನಗಳ ಪುಸ್ತಕ ಸಂತೆಗಳಲ್ಲಿ, ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ಕೋಟಿ ರೂಪಾಯಿ ಮೀರಿದ ಕನ್ನಡ ಪುಸ್ತಕಗಳ ವ್ಯಾಪಾರ ಆಗುತ್ತಿದೆ.

ಆದರೆ ಕನ್ನಡದ ವಿಜ್ಞಾನ ಸಾಹಿತ್ಯ ಈ ನಿಟ್ಟಿನಲ್ಲಿ ಸಮಾನಾಂತರ ಪ್ರಗತಿ ಸಾಧಿಸಿಲ್ಲ. ಕನ್ನಡದಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳು ಪ್ರಕಟವಾಗುವುದೂ ಕಡಿಮೆ; ಮಾರಾಟ ಆಗುವುದು ಮತ್ತೂ ಕಡಿಮೆ. ಜಗತ್ತಿನ ಬೇರೆಲ್ಲ ವಿಷಯಗಳನ್ನೂ ಓದುವ ಕನ್ನಡ ಓದುಗರು ವಿಜ್ಞಾನ ಸಾಹಿತ್ಯದ ಕಡೆಗೆ ಮಾತ್ರ ಅಷ್ಟಾಗಿ ಒಲವು ತೋರದಿರಲು ಕಾರಣವೇನು?

ಈ ವಿಷಯವನ್ನು ಓದುಗರ ದೃಷ್ಟಿಯಿಂದ ವಿವೇಚಿಸಲು ಈ ಸರಣಿ. ಇಲ್ಲಿ ಮುಖ್ಯವಾಗಿ ಅಭಿಪ್ರಾಯ ವ್ಯಕ್ತಪಡಿಸಬೇಕಾದ್ದು ಓದುಗರು. ವಿಜ್ಞಾನ ಲೇಖಕರ ಅಭಿಪ್ರಾಯಗಳು ಇಲ್ಲದಿಲ್ಲ. ಆದರೆ ಕಾರಣಗಳನ್ನು ಓದುಗರ ದೃಷ್ಟಿಯಿಂದ ವಿವೇಚಿಸಬೇಕಾದ್ದು ವಿಜ್ಞಾನ ಲೇಖಕರ ಕರ್ತವ್ಯ. ಹೀಗಾಗಿ, ಎಲ್ಲ ವಿಜ್ಞಾನ ಲೇಖಕರು ತಮ್ಮ ನಿಲುವುಗಳ ಬದಲಿಗೆ ಓದುಗರ ಪ್ರಶ್ನೆಗಳಿಗೆ, ಅವರ ಅಭಿಪ್ರಾಯಗಳಿಗೆ, ಅವರ ಸಲಹೆಗಳಿಗೆ, ಅವರ ಆಗ್ರಹಗಳಿಗೆ, ಅವರು ಬಯಸುವ ಬರವಣಿಗೆಯ ವಿಧಾನಗಳ ಕಡೆಗೆ ಗಮನ ಕೊಡಬೇಕೆಂದು ವಿನಂತಿ.

ವಿಜ್ಞಾನ ಲೇಖನದಲ್ಲಿ ನಿರೂಪಣೆಯ ಶೈಲಿ

ಕನ್ನಡದ ವಿಜ್ಞಾನ ಲೇಖಕರು ನಿರೂಪಣೆಯ ಬಹುತೇಕ ಶೈಲಿಗಳನ್ನು ಬಳಸಿದ್ದಾರೆ. ಪಠ್ಯಪುಸ್ತಕದ ಗ್ರಾಂಥಿಕ, ಯಾಂತ್ರಿಕ ಶೈಲಿಯೇ ಬಹಳ ಪ್ರಚಲಿತ. ಕತೆಯ ಮೂಲಕ ವಿಜ್ಞಾನದ ಬೆಳವಣಿಗೆಯನ್ನು ವಿವರಿಸುವ ವಿಧಾನ; ದಶಕಗಳ ಹಿಂದೆ ದೂರದರ್ಶನದಲ್ಲಿ ಕನ್ನಡ ವಾರ್ತೆಗಳನ್ನು ಓದುತ್ತಿದ್ದಂತಹ ಪರಮ ನೀರಸ ಬರವಣಿಗೆ; ಸಂಭಾಷಣೆಯ ಮಾಧ್ಯಮದಿಂದ ವಿಷಯ ತಿಳಿಸುವ ಪದ್ಧತಿ; ಒಂದೆರಡು ಹಳೆಯ ಘಟನೆಗಳನ್ನು ತಿಳಿಸಿ, ಅದರಿಂದ ವರ್ತಮಾನದ ಬೆಳವಣಿಗೆಗೆ ಕೊಂಡಿ ಬೆಸೆಯುವ ಸಂವಿಧಾನ; ನೇರವಾಗಿ ಸಂಬಂಧವಿಲ್ಲದ ವಿಷಯವೊಂದರ ಅನ್ಯಾರ್ಥದ ಮೂಲಕ ಇಂದಿನ ವಿದ್ಯಮಾನಗಳ ಪರಿಚಯ; ನೇರಾನೇರ ಬುಲೆಟ್ ಪಾಯಿಂಟುಗಳಂತೆ ಒಂದರ ಕೆಳಗೊಂದು ಸಾಲು ಹಚ್ಚಿ ಮಾಹಿತಿ ನೀಡುವಿಕೆ; ಜಗತ್ತಿನ ಯಾವುದೋ ಭಾಗದಲ್ಲಿ ನಡೆದ ಘಟನೆಯೊಂದನ್ನು ಹಂತಹಂತವಾಗಿ ವಿವರಿಸುತ್ತಾ, ಅದರ ಹಿಂದಿನ ವಿಜ್ಞಾನವನ್ನು ಬಿಡಿಸಿ ಇಡುವ ಪತ್ತೇದಾರಿ ನಿರೂಪಣೆ – ಹೀಗೆ ಅನೇಕಾನೇಕ ವಿಧಾನಗಳ ಬಳಕೆ ವಿಜ್ಞಾನ ಸಂವಹನದಲ್ಲಿ ಆಗಿದೆ. ಆದರೆ ಯಾವುದೇ ಒಂದು ವಿಧಾನವೂ ಓದುಗರನ್ನು ಬಹಳ ಕಾಲ ಪಕ್ಕಾ ಹಿಡಿದಿಡುವಲ್ಲಿ ಯಶಸ್ಸು ಕಂಡಿಲ್ಲ.

ಹೀಗೇಕೆ ಆಗುತ್ತಿದೆ? ಓದುಗರು ಯಾವ ಹಂತದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ? ಯಾವ ಮಟ್ಟದ ಮಾಹಿತಿ ಓದುಗರನ್ನು ಕನೆಕ್ಟ್ ಆಗುವಲ್ಲಿ ವಿಫಲವಾಗಿದೆ? “ಲೇಖನದಲ್ಲಿ ಈ ಸಾಲಿನವರೆಗೆ ಅರ್ಥವಾಗುತ್ತಿತ್ತು; ಆನಂತರ ಎಲ್ಲಾ ತಲೆಯ ಮೇಲಿಂದ ಹಾದುಹೋಯಿತು” ಎನ್ನುವ ಅಡ್ಡಗೆರೆ ಇದೆಯೇ? ಅನೇಕ ಮಾದರಿಗಳ ನಿರೂಪಣೆಯಲ್ಲಿ ಓದುಗರಿಗೆ ಇಷ್ಟವಾದದ್ದು ಯಾವುದು; ಆಗದೇ ಹೋದದ್ದು ಯಾವುದು? “ಇಂತಹ ವಿಷಯಕ್ಕೆ ಇಂತಹ ನಿರೂಪಣೆಯ ವಿಧಾನ ಸೂಕ್ತ” ಎನ್ನುವ ಮಾಹಿತಿ ಏನಾದರೂ ಉಂಟೇ? ಓದುಗರ ಆಸಕ್ತಿಯನ್ನು ಅಂತಿಮ ಸಾಲಿನವರೆಗೆ ಹಿಡಿದಿಟ್ಟುಕೊಂಡು ಸಂಪೂರ್ಣವಾಗಿ ಓದಿಸಿಕೊಂಡ ವಿಜ್ಞಾನ ಲೇಖನಗಳು ಯಾವುವು? ಯಾವ ರೀತಿಯಿಂದ ಅವು ಓದುಗರಿಗೆ ಕನೆಕ್ಟ್ ಆದವು? – ಇಂತಹ ಮಾಹಿತಿ ಪ್ರಾಯಶಃ ಯಾರ ಬಳಿಯೂ ಇಲ್ಲ. ವಿಜ್ಞಾನ ಲೇಖನಕ್ಕೆ ಇಷ್ಟೆಲ್ಲಾ ಪ್ರಾಧಾನ್ಯ ಕೊಡುವ ಮಾಧ್ಯಮಗಳೂ ಇಲ್ಲ. ಹೀಗಾಗಿ, ವಿಜ್ಞಾನ ಲೇಖನಕ್ಕೆ ಓದುಗರಿಂದ ನೇರವಾಗಿ ಫೀಡ್-ಬ್ಯಾಕ್ ಪಡೆಯುವ ವಿಧಾನವೇ ಸೂಕ್ತ.

ಓದುಗರು ನೆನಪಿನ ಅಂಗಳಕ್ಕೆ ಕೈ ಹಾಕಿದರೆ, ಈ ಹಿಂದೆ ಓದಿರಬಹುದಾದ ಯಾವ ವಿಜ್ಞಾನ ಲೇಖನ ಇಂದಿಗೂ “ಬಹಳ ಚೆನ್ನಾಗಿತ್ತು” ಎನಿಸಿಕೊಂಡಿತು? ಅನೇಕ ನಿರೂಪಣೆಯ ವಿಧಾನಗಳಲ್ಲಿ ಯಾವುದು ಹೆಚ್ಚು ಆಪ್ತ ಎನಿಸಿದೆ? ಇಂತಹ ಮಾಹಿತಿಯನ್ನು ಹೀಗೆ ಹೇಳಿದರೆ ಚೆನ್ನಾಗಿರುತ್ತದೆ ಎನ್ನುವ ಅಭಿಪ್ರಾಯ ಇದೆಯೇ? ದಯವಿಟ್ಟು ತಿಳಿಸಲು ವಿನಂತಿ.

ವಿಜ್ಞಾನ ಲೇಖನದಲ್ಲಿ ಪಾರಿಭಾಷಿಕ ಪದಗಳು

ವಿಜ್ಞಾನದ ಬರವಣಿಗೆಯ ಬಗ್ಗೆ ಇರುವ ಮೊದಲ ಮತ್ತು ಮುಖ್ಯ ಸಮಸ್ಯೆ ಪಾರಿಭಾಷಿಕ ಪದಗಳದ್ದು.

ವಿಜ್ಞಾನ ಇರುವುದು ಹಾಗೆಯೇ. ಅದು ನಿಂತಿರುವುದು ಕೆಲವು ತತ್ತ್ವಗಳ, ನಿಯಮಗಳ, ಲೆಕ್ಕಾಚಾರಗಳ, ಈಗಾಗಲೇ ವ್ಯವಸ್ಥಿತವಾಗಿ ಸಿದ್ಧವಾದ ಮಾಹಿತಿಗಳ ಮೇಲೆ. ಇಂತಹ ಸಂವಹನದಲ್ಲಿ ಪಾರಿಭಾಷಿಕ ಪದಗಳ ಬಳಕೆ ಕೆಲವೊಮ್ಮೆ ಅನಿವಾರ್ಯ. ಅವನ್ನು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅರ್ಥ ಮುಕ್ಕಾಗದಂತೆ ಸರಳ ಪದಗಳನ್ನು ಬಳಸಿ ಹೇಳುವುದು ಸವಾಲು ಎನಿಸಿಕೊಳ್ಳುತ್ತದೆ.

ವಿಜ್ಞಾನ ಅಂತಲೇ ಅಲ್ಲ; ಪಾರಿಭಾಷಿಕ ಪದಗಳ ಬಳಕೆ ಎಲ್ಲೆಡೆಯೂ ಇದೆ. ಉದಾಹರಣೆಗೆ, ಸಂಗೀತದಲ್ಲಿ ಸ್ವರ, ರಾಗ, ಸ್ಥಾಯಿ, ತಾಳ, ಗತಿ, ಆರೋಹಣ-ಅವರೋಹಣ, ಗಮಕ, ಲಯ ಎಲ್ಲವೂ ಇರುತ್ತವೆ. ಆದರೆ, ಸಂಗೀತವನ್ನು ಕೇಳಿ ಆನಂದಿಸಲು ಇವುಗಳ ಜ್ಞಾನ ಇರಲೇಬೇಕೆಂದಿಲ್ಲ. ಇಂತಹ ಮಾಹಿತಿ ಇದ್ದವರು ಸಂಗೀತವನ್ನು ಮತ್ತಷ್ಟು ಆಸ್ವಾದಿಸಬಲ್ಲರು. ಹಾಗೆಂದ ಮಾತ್ರಕ್ಕೆ ಇದು ತಿಳಿಯದವರು ಸಂಗೀತದಿಂದ ದೂರಾಗಬೇಕೆಂದೇನೂ ಇಲ್ಲ.

ಮೂಲ ಪಾರಿಭಾಷಿಕ ಪದಗಳನ್ನು ಮತ್ತೊಂದು ಭಾಷೆಯಲ್ಲಿ ಟಂಕಿಸುವ ಅಗತ್ಯ ಇಲ್ಲದೆ ವಿಜ್ಞಾನ ಸಂವಹನ ಸಾಧ್ಯವೇ? ಬೇರೆ ಭಾಷೆಯ (ಗ್ರೀಕ್, ಲ್ಯಾಟೀನ್, ಸ್ಪಾನಿಷ್) ಪಾರಿಭಾಷಿಕ ಪದಗಳ ಬಳಕೆಯ ಅಗತ್ಯ ಬಂದಾಗ ಇಂಗ್ಲೀಷಿನ ಹಲವಾರು ಲೇಖಕರು ಹೊಸ ಇಂಗ್ಲೀಷ್ ಪದವನ್ನು ಟಂಕಿಸದೆಯೇ ಲೇಖನವನ್ನು ಸಾಧಿಸಿದ್ದಾರೆ. ಅವರು ಒಂದು ತತ್ತ್ವಕ್ಕೆ ಸರಳ ವಿವರಣೆ ನೀಡುತ್ತಾ ಸಾಗುತ್ತಾರೆ. ಎಲ್ಲೋ ಒಂದೆಡೆ “ಇದಕ್ಕೆ ಹೀಗೆನ್ನುತ್ತಾರೆ” ಎಂದು ಸೇರಿಸಿಬಿಡುತ್ತಾರೆ.

ಕನ್ನಡದಲ್ಲಿ ಪಾರಿಭಾಷಿಕ ಪದಗಳ ಸಮಸ್ಯೆ ಎರಡು ಬಗೆಯದ್ದು. ಹಳೆಯ ಕಾಲದ ಪಠ್ಯಪುಸ್ತಕ ನಿರ್ಮಾತೃಗಳು ತಮ್ಮ ಪ್ರಕಾಂಡ ಸಂಸ್ಕೃತ ಜ್ಞಾನವನ್ನು ಪ್ರದರ್ಶಿಸುತ್ತಾ ಎಲ್ಲ ವೈಜ್ಞಾನಿಕ ಪದಗಳಿಗೂ ಸಂಸ್ಕೃತ ಸಮಾಸಗಳನ್ನು ಬಳಸಿದ್ದಾರೆ. ಇದೊಂದೇ ಕಾರಣದಿಂದ ನೀರಿಳಿಯದ ಗಂಟಲಲ್ಲಿ ವಿಜ್ಞಾನ ತುರುಕಲಾಗದೇ ಕನ್ನಡ ಮಾಧ್ಯಮದ ಅದೆಷ್ಟೋ ಪ್ರತಿಭಾವಂತ ಮಕ್ಕಳು ವಿಜ್ಞಾನ ಬಿಟ್ಟು ಓಡಿಹೋಗಿದ್ದಾರೆ. ಅವರಲ್ಲಿ ಹಲವರು ಈಗಲೂ ವಿಜ್ಞಾನ ಸಾಹಿತ್ಯ ಓದದೇ ಸೇಡು ತೀರಿಸಿಕೊಳ್ಳುತ್ತಿದ್ದಾರೆ.

ಕಠಿಣ ಸಂಸ್ಕೃತ ಪದಗಳ ಬಳಕೆಗೆ ವಿರೋಧ ತೋರುವುದನ್ನು ಒಪ್ಪಬೇಕಾದ್ದೇ. ಸರಿಯಾಗಿ ಉಚ್ಛರಿಸಲೂ ಬಾರದ ಪದಗಳಿಗೆ ಶಿಕ್ಷಕರೇನು ಅರ್ಥ ಹೇಳಿಯಾರು? ಆದರೆ ಇದಕ್ಕೆ ಕೆಲವರು ಕಂಡುಕೊಂಡ ಪರ್ಯಾಯ ಇನ್ನೂ ದಿಗಿಲು ಹುಟ್ಟಿಸುವಂತಹದ್ದು – ಹೆಚ್ಚು ಜನರಿಗೆ ಪರಿಚಯವಿಲ್ಲದ ಪಕ್ಕಾ ಕನ್ನಡ ಪದಗಳನ್ನು ಬಳಸುವುದು. ಅದು ಮತ್ತೊಂದು ದಿಕ್ಕಿನಿಂದ ವಿಜ್ಞಾನ ಸಂವಹನವನ್ನು ಕಠಿಣಗೊಳಿಸುತ್ತಿದೆ.

ಇದಕ್ಕೆ ಪರಿಹಾರವೇನು? ಇಂಗ್ಲೀಷ್ ಪಾರಿಭಾಷಿಕ ಪದಗಳನ್ನು ಭಾಷಾಂತರ ಮಾಡದೆ ಹಾಗೆಯೇ ಉಳಿಸಿಕೊಳ್ಳೋಣ ಎನ್ನುತ್ತಾರೆ ಕೆಲವು ತಜ್ಞರು. ಜಲಜನಕವೂ ಬೇಡ; ನೀರಪ್ಪನೂ ಬೇಡ – ಹೈಡ್ರೋಜನ್ ಎನ್ನುವ ಪದವೇ ಇರಲಿ. ಹೇಗೂ ಭವಿಷ್ಯದಲ್ಲಿ ಮಕ್ಕಳ ಕಲಿಕೆಯ ಮಾಧ್ಯಮ ಬದಲಾದಾಗ ಇದೇ ಪದಗಳನ್ನು ಬಳಸಬೇಕಾಗುತ್ತದೆ. ಮೊದಲಿನಿಂದಲೂ ಆ ಪದಗಳ ಪರಿಚಯ ಇರುವುದು ಅನುಕೂಲ ಎನ್ನುವ ಮಾತು ಕೂಡ ಇದೆ.

ಪಾರಿಭಾಷಿಕ ಪದಗಳ ವಿಷಯದಲ್ಲಿ ವಿಜ್ಞಾನ ಲೇಖಕರ ಅಭಿಮತಕ್ಕಿಂತಲೂ ಓದುಗರ ಅಭಿಪ್ರಾಯ ಮುಖ್ಯವಾಗುತ್ತದೆ. ಓದುಗರು ವಿಜ್ಞಾನ ಲೇಖನ ಓದುವಾಗ ಪಾರಿಭಾಷಿಕ ಪದಗಳನ್ನು ಯಾವ ರೀತಿ ಬಳಸಬೇಕು ಎನ್ನುತ್ತೀರಿ? ಭಾಷಾಂತರ ಮಾಡದೆ ಮೂಲ ಪದಗಳನ್ನು ಉಳಿಸಿಕೊಳ್ಳುವುದು ಸೂಕ್ತವೇ? ಹೆಚ್ಚು ಪಾರಿಭಾಷಿಕ ಪದಗಳನ್ನು ಬಳಸದ, ಹೆಸರುಗಳಿಲ್ಲದೆ ಮೂಲಭೂತ ತತ್ತ್ವಗಳನ್ನು ಮಾತ್ರ ವಿವರಿಸುವ ಲೇಖನ ಓದುವುದು ಸುಲಭವೇ? ಈ ಸಮಸ್ಯೆಗೆ ಬೇರೆ ಯಾವುದಾದರೂ ಪರ್ಯಾಯ ಇದೆಯೇ? ನಿಮ್ಮ ಅಭಿಪ್ರಾಯ ತಿಳಿಸಿ.

ವಿಜ್ಞಾನ ಲೇಖನಗಳನ್ನು ಯಾರು ಬರೆಯಬೇಕು

ವಿಜ್ಞಾನ ಲೇಖನವನ್ನು ಆಯಾ ವಿಷಯ ತಜ್ಞರು ಮಾತ್ರ ಬರೆಯಬೇಕೇ ಅಥವಾ ವಿಜ್ಞಾನ ಸಂವಹನ ಸಾಮರ್ಥ್ಯ ಉಳ್ಳ ಯಾರು ಬೇಕಾದರೂ ಬರೆಯಬಹುದೇ? ಈ ಚರ್ಚೆ ವಿಜ್ಞಾನ ಲೇಖಕರ ನಡುವೆಯೇ ಹಲವಾರು ಬಾರಿ ಅನೇಕ ವೈಮನಸ್ಯಗಳಿಗೆ ದಾರಿಯಾಗಿದೆ. ವ್ಯಾಪಕ ಮಾರುಕಟ್ಟೆ ಇರುವ ಇಂಗ್ಲೀಷಿನಂತಹ ಭಾಷೆಗಳಲ್ಲಿ ಆಯಾ ವಿಷಯವನ್ನು ಮಾತ್ರ ಬರೆಯಬಲ್ಲ ವಿಜ್ಞಾನ ಲೇಖಕರು ಇದ್ದಾರೆ. ಆದರೆ ಇದೇ ಮಾತನ್ನು ದೇಶೀಯ ಭಾಷೆಗಳ ವಿಷಯದಲ್ಲಿ ಹೇಳಲಾಗದು. ಇಲ್ಲಿ ವಿಷಯ ತಜ್ಞರೇನೋ ಇದ್ದಾರೆ; ಆದರೆ ಅವರು ಸರಳ ಕನ್ನಡದಲ್ಲಿ ತಮ್ಮ ವೈಶಿಷ್ಟ್ಯದ ವಿಷಯವನ್ನು ಬರೆಯಲಾರರು.

ಒಳ್ಳೆಯ ವಿಜ್ಞಾನ ಸಂವಹನಕಾರರೂ ಇದ್ದಾರೆ. ಆದರೆ ಅವರಿಗೆ ಪ್ರತಿಯೊಂದೂ ವಿಷಯದಲ್ಲಿ ತಳಸ್ಪರ್ಷಿ ಜ್ಞಾನ ಇರಬೇಕೆಂದು ಬಯಸುವುದು ಅಸಂಗತ. ಇದರ ಜೊತೆಗೆ ಓದುಗ ವಲಯ ಎಂತಹದ್ದು? ಅವರ ಆಸಕ್ತಿಯ ಮಟ್ಟ ಏನು? ಯಾವ ಹಂತದವರೆಗೆ ಅವರಿಗೆ ವಿಷಯ ಗ್ರಹಿಸುವ ಸಾಮರ್ಥ್ಯ ಇದ್ದೀತು? – ಮೊದಲಾದ ಪ್ರಶ್ನೆಗಳ ಉತ್ತರವೂ ಸುಲಭವಲ್ಲ.

ಯಾವುದೇ ವಿಷಯದ ಮೂಲ ಸೂತ್ರಗಳನ್ನು, ಪರಿಚಯಾತ್ಮಕ ಪ್ರವೇಶವನ್ನು, ಒಂದು ಮಟ್ಟದವರೆಗಿನ ಮಾಹಿತಿ ಸಂವಹನವನ್ನು ಆಯಾ ವಿಷಯವನ್ನು ಬರೆಯಲು ಬಲ್ಲ ಯಾರು ಬೇಕಾದರೂ ಬರೆಯಬಹುದು. ಆದರೆ ಉನ್ನತ ಮಟ್ಟದ ಸಂವಹನ ವಿಷಯ ತಜ್ಞರೇ ಮಾಡುವುದು ಒಳಿತು. ಉದಾಹರಣೆಗೆ, ಹೃದಯ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಜೀವವಿಜ್ಞಾನ ಬಲ್ಲ ಯಾರು ಬೇಕಾದರೂ ಬರೆಯಬಹುದು. ಆದರೆ ಹೃದಯಾಘಾತದ ಚಿಕಿತ್ಸೆಯ ಆಧುನಿಕ ವಿಧಾನಗಳನ್ನು ಆ ಕ್ಷೇತ್ರದಲ್ಲಿ ಕೆಲಸ ಮಾಡುವ ತಜ್ಞ ವೈದ್ಯರು ಬರೆದರೆ ಮಾತ್ರ ಅದಕ್ಕೆ ಮೌಲ್ಯ ಹೆಚ್ಚು. ಇದಾಗದಿದ್ದಲ್ಲಿ ಲೇಖನದಲ್ಲಿ ಅಂತಹ ತಜ್ಞರ ಸಹಭಾಗಿತ್ವ ಇರುವುದು ಅಪೇಕ್ಷಣೀಯ. ದೇಶೀಯ ಭಾಷೆಗಳಲ್ಲಿ ಅರ್ಥವಾಗುವಂತೆ ಬರೆಯಬಲ್ಲ ವಿಷಯ ತಜ್ಞರು ದೊರೆಯುವುದು ಕಷ್ಟದ ಕೆಲಸ.

ಈ ಚರ್ಚೆಗೆ ಅರ್ಥ ಬರುವುದು ಓದುಗರು ಯಾವ ಮಟ್ಟದವರೆಗೆ ಮಾಹಿತಿ ಬಯಸುತ್ತಾರೆ ಎನ್ನುವುದರ ಆಧಾರದ ಮೇಲೆ. ಓದುಗರ ಒಲವು ಕೇವಲ ಮೂಲಭೂತ ವಿಷಯಗಳನ್ನು ಚೆನ್ನಾಗಿ ಅರಿಯುವತ್ತ ಇದ್ದರೆ, ಅದನ್ನು ಸರಳವಾಗಿ ನಿರೂಪಿಸಬಲ್ಲ ಸಂವಹನಕಾರರು ಗೆಲ್ಲುತ್ತಾರೆ. ಆದರೆ ಕೆಲವೊಮ್ಮೆ ಓದುಗರಿಗೆ ಅತ್ಯಂತ ನಿಖರವಾದ, ಅತ್ಯಾಧುನಿಕ ಮಾಹಿತಿಯನ್ನೂ ಒದಗಿಸಬೇಕಾಗುತ್ತದೆ. ಅಂತಹ ವೇಳೆ ತಜ್ಞರ ಒಡಗೂಡಿ ಪಕ್ಕಾ ಮಾಹಿತಿಯನ್ನು ಮನರಂಜನೀಯವಾಗಿ ವಿವರಿಸಬಲ್ಲ ಲೇಖಕರು ದೊರಕಿದರೆ ಪ್ರಾಯಶಃ ಸಂವಹನ ಹೆಚ್ಚು ಜನರನ್ನು ಮುಟ್ಟುತ್ತದೆ. ಆದರೆ ಮಿತವಾದ ಸಂಖ್ಯೆಯ ವಿಜ್ಞಾನ ಲೇಖಕರಿರುವ ನಮ್ಮಂತಹ ಭಾಷೆಯಲ್ಲಿ ಈ ರೀತಿಯ ಸಹಭಾಗಿತ್ವ ಅಷ್ಟೇನೂ ಸುಲಭವಲ್ಲ!

ಕನ್ನಡದಲ್ಲಿ ಚಾಲ್ತಿಯಲ್ಲಿರುವ ವಿಜ್ಞಾನ ಪತ್ರಿಕೆಗಳು

ಕನ್ನಡದ ವಿಜ್ಞಾನ ಪತ್ರಿಕೆಗಳಿಗೆ ಒಂದು ಶತಮಾನಕ್ಕೂ ಮೀರಿದ ಇತಿಹಾಸವಿದೆ. 1918 ರಲ್ಲಿ “ವಿಜ್ಞಾನ” ಎನ್ನುವ ಮಾಸಪತ್ರಿಕೆ ಎರಡು ವರ್ಷಗಳ ಕಾಲ ನಡೆದಿತ್ತು. ಇಂದಿಗೂ

ಕನ್ನಡದಲ್ಲಿ ವಿಜ್ಞಾನಕ್ಕೆ ಮೀಸಲಾದ ಹಲವಾರು ಪತ್ರಿಕೆಗಳಿವೆ.

1. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪ್ರಕಟಿಸುವ “ಬಾಲ ವಿಜ್ಞಾನ” ಮಾಸಪತ್ರಿಕೆ 1978ರಿಂದ ಸತತವಾಗಿ ಪ್ರಕಟಗೊಳ್ಳುತ್ತಿದೆ.

2. ಹಂಪಿ ಕನ್ನಡ ವಿಶ್ವವಿದ್ಯಾಲಯದ “ವಿಜ್ಞಾನ ಸಂಗಾತಿ”. 1993 ರಲ್ಲಿ ಆರಂಭವಾದ ಈ ಪತ್ರಿಕೆ ಈಗ ತ್ರೈಮಾಸಿಕವಾಗಿದೆ.

3. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಕಟಿಸುವ “ವಿಜ್ಞಾನ ಲೋಕ” ಎನ್ನುವ ದ್ವೈಮಾಸಿಕ.

4. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಕಟಿಸುವ “ವಿಜ್ಞಾನ ವಾಹಿನಿ” ಎನ್ನುವ ತ್ರೈಮಾಸಿಕ.

5. ಕೇಂದ್ರ ಸರ್ಕಾರದ ವಿಜ್ಞಾನ್ ಪ್ರಸಾರ್ ಸಂಸ್ಥೆ ಮುಚ್ಚಿ ಹೋದ ನಂತರವೂ, ಅದು ಪ್ರಕಟಿಸುತ್ತಿದ್ದ “ಕುತೂಹಲಿ” ಎಂಬ ವಿಜ್ಞಾನ ಮಾಸಿಕವನ್ನು ಕೊಳ್ಳೇಗಾಲ ಶರ್ಮಾ ಅವರು ಮುಂದುವರೆಸಿದ್ದಾರೆ.

6. ರಾಷ್ಟ್ರೀಯ ವೈಮಾಂತರಿಕ್ಷ ಸಂಸ್ಥೆಯ ಕನ್ನಡ ಸಾಂಸ್ಕೃತಿಕ ಸಂಘ ಪ್ರಕಟಿಸುವ “ಕಣಾದ” ಎನ್ನುವ ಹೆಸರಿನ ವಾರ್ಷಿಕ ವಿಜ್ಞಾನ ಪತ್ರಿಕೆ.

ಇದರ ಜೊತೆಗೆ ಬಹುತೇಕ ದಿನಪತ್ರಿಕೆಗಳು, ನಿಯತಕಾಲಿಕಗಳು ವಿಜ್ಞಾನ ಲೇಖನಗಳಿಗೆ ಅವಕಾಶ ನೀಡುತ್ತವೆ.

ಕನ್ನಡದಲ್ಲಿ ವಿಜ್ಞಾನ ಸಾಹಿತ್ಯದ ಬಗ್ಗೆ ತಿಳಿಯಬಯಸುವವರಿಗೆ ಈ ಪತ್ರಿಕೆಗಳು ಬಹಳ ಅನುಕೂಲ. ಇವುಗಳು ಡಿಜಿಟಲ್ ರೂಪದಲ್ಲಿ ಉಚಿತವಾಗಿ ಲಭ್ಯವಿವೆ. ಇವುಗಳ ಯಾವುದೇ ಸಂಚಿಕೆಯನ್ನಾದರೂ ಗಣಕದಲ್ಲಿ ನೋಡಬಹುದು. ವರ್ಷಕ್ಕೊಂದರಂತೆ ಯಾವುದಾದರೂ ಸಂಚಿಕೆಗಳನ್ನು ನೋಡುತ್ತಾ ಹೋದಂತೆ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಸಾಗಿರುವ ಜಾಡಿನ ಅರಿವಾಗುತ್ತದೆ.

ಈ ಪತ್ರಿಕೆಗಳನ್ನು ಒಮ್ಮೆ ನೋಡಲು ಎಲ್ಲ ಓದುಗರಲ್ಲಿ ಮನವಿ. ಆ ಪತ್ರಿಕೆಗಳಲ್ಲಿ ಆಸಕ್ತಿ ಎನಿಸುವ ಕೆಲವು ಲೇಖನಗಳನ್ನು ಓದಿ, ಅವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಇವೆಯೇ; ಅವುಗಳಲ್ಲಿ ಯಾವ ಬದಲಾವಣೆಗಳನ್ನು ಬಯಸುತ್ತೀರಿ; ಯಾವ ಪ್ರಕಾರದ ಲೇಖನಗಳನ್ನು ಓದಲು ಬಯಸುವಿರಿ; ಅವುಗಳ ಶೈಲಿ ಹೇಗಿದೆ; ಅವುಗಳಿಗೆ ಚಂದಾದಾರರಾಗಲು ಬಯಸುವಿರಾ ಎನ್ನುವುದನ್ನು ತಿಳಿಸಬೇಕಾಗಿ ವಿನಂತಿ.

ವಿಜ್ಞಾನದಲ್ಲಿ ಓದುಗ-ಲೇಖಕರ ನಡುವಿನ ಅಂತರ

ಮಾರ್ಕೆಜ್ ನ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ ಗ್ರೆಗರಿ ರಬಸ್ಸ Every act of communication is an act of translation ಎನ್ನುತ್ತಾನೆ. ಯಾವುದೇ ಸಂವಹನದಲ್ಲೂ ಭಾಷೆಯಷ್ಟೇ ಅದು ಹೇಳಬಯಸುವ ಧ್ವನಿಯೂ ಮುಖ್ಯವಾಗುತ್ತದೆ. ವಿಜ್ಞಾನ ಸಂವಹನದಲ್ಲೂ ಪ್ರಾಯಶಃ ಭಾಷೆಯ ಲಕ್ಷಣಕಾರರ ಈ ಮಾತು ಮುಖ್ಯವಾಗುತ್ತದೆ. ಇಂದಿನ ಕಾಲದಲ್ಲಿ ಗೂಗಲ್ ಭಾಷಾಂತರ ಲಭ್ಯವಿದೆ. ಅದನ್ನು ಬಳಸಿಕೊಂಡು ದೇಶೀಯ ಭಾಷೆಗಳಲ್ಲಿ ಹುಲುಸಾಗಿ ವಿಜ್ಞಾನ ಸಾಹಿತ್ಯ ನಿರ್ಮಿಸಿದ ಭೂಪರೂ ಇದ್ದಾರೆ. ಆದರೆ ಅದು ಸಂವಹನದಲ್ಲಿ ಯಶಸ್ಸು ಸಾಧಿಸಿದೆಯೇ ಎನ್ನುವುದು ಪ್ರಶ್ನೆ.

ಸಮಸ್ಯೆ ಆಗುವುದು ಇಲ್ಲಿಯೇ. ವಿಜ್ಞಾನ ಲೇಖಕರಿಗೆ ತಾವು ಬರೆಯುತ್ತಿರುವ ವಿಷಯದ ಪರಿಜ್ಞಾನವಿದೆ; ಅದನ್ನು ಬರೆಯಲೂ ಬಲ್ಲರು. ಆದರೆ ಅವರು ಹೇಳಬಯಸುವ ಮಾಹಿತಿ ಓದುಗರಿಗೆ ತಲುಪುತ್ತದೆಯೇ? ಇದಕ್ಕೆ ಕಾರಣ ಪಾರಿಭಾಷಿಕ ಪದಗಳೋ ಅಥವಾ ಭಾಷೆಯ ಶೈಲಿಯೋ ಮಾತ್ರವಲ್ಲ. ಬಹಳಷ್ಟು ಬಾರಿ ವಿಜ್ಞಾನ ಲೇಖಕ ತನ್ನ ಲೇಖನವನ್ನು ಆರಂಭಿಸುವ ಹಂತವೇ ಓದುಗರಿಗೆ ಡೋಲಾಯಮಾನವಾಗಿರಬಹುದು. ಉಪಗ್ರಹ ಉಡಾವಣೆಯ ಬಗ್ಗೆ ಬರೆಯುವ ವಿಜ್ಞಾನ ಲೇಖಕ ಆಗಸದ ಯಾವ ಸ್ತರದಲ್ಲಿ ಉಪಗ್ರಹದ ಕಕ್ಷೆ ಇರುತ್ತದೆ; ಅದು ಭೂಮಿಯ ಚಲನೆಗೆ ಯಾವ ರೀತಿ ಹೊಂದಿಕೊಳ್ಳುತ್ತದೆ; ಅದು ಹೇಗೆ ಕೆಲಸಗಳನ್ನು ಮಾಡುತ್ತದೆ ಮೊದಲಾದ ವಿಷಯಗಳನ್ನು ಸರಾಗವಾಗಿ ಬರೆದಿರಬಹುದು. ಆದರೆ ಉಪಗ್ರಹ ಅಂತರಿಕ್ಷವನ್ನು ಹೇಗೆ ಸೇರುತ್ತದೆ ಎನ್ನುವ ಸ್ಪಷ್ಟ ಕಲ್ಪನೆ ಇಲ್ಲದ ಓದುಗರಿಗೆ ಲೇಖನದಲ್ಲಿನ ವಿವರಗಳು ಗೊಂದಲ ಮೂಡಿಸುತ್ತವೆ. ನೋಡುಗರ ಕಣ್ಣಿಗೆ ಕಾಣುವುದು ಉಪಗ್ರಹವನ್ನು ಉಡ್ಡಯನ ಮಾಡಿದ ರಾಕೆಟ್ ಮಾತ್ರ. ಅದನ್ನೇ ಉಪಗ್ರಹ ಎಂದು ಭಾವಿಸಿದವರೂ ಇದ್ದಾರು. ಹೀಗಾಗಿ, ಅಂತಹವರು ಲೇಖನದ ಜೊತೆಗೆ ಕನೆಕ್ಟ್ ಆಗಲಾರರು.

ವಿಜ್ಞಾನ ಲೇಖನದ ಓದುಗ ವರ್ಗದ ಬಗ್ಗೆ ಸ್ಪಷ್ಟ ಕಲ್ಪನೆ ಬರುವುದು ಕಷ್ಟ. ತೀರಾ ಮೂಲಭೂತ ವಿಷಯಗಳಿಂದ ಆರಂಭಿಸಿದರೆ “ಇದ್ಯಾವುದೋ ಮಕ್ಕಳ ಲೇಖನ” ಎಂದು ಬಿಡುವವರು ಹಲವರು. ಸ್ವಲ್ಪ ಮೇಲಿನ ಮಟ್ಟದಿಂದ ಮೊದಲಿಟ್ಟರೆ “ಇದು ತಲೆಯ ಮೇಲಿಂದ ಹಾದುಹೋಗುತ್ತಿದೆ” ಎಂದು ತಿರಸ್ಕರಿಸುವವರು ಕೆಲವರು. ಇದರ ನಡುವಿನ ಸುವರ್ಣ ಮಧ್ಯಮ ಮಾರ್ಗ ಪತ್ತೆಯಾಗುವುದು ವಿಜ್ಞಾನದಲ್ಲಿ ಕಷ್ಟವಿದೆ. ಓದುಗರ ಆಸಕ್ತಿಯನ್ನು ಹಿಡಿದಿಟ್ಟುಕೊಂಡು, ಅವರಿಗೆ ಅಧಿಕೃತ ಮಾಹಿತಿಯನ್ನೂ ನೀಡುತ್ತಾ, ಹೊಸ ವೈಜ್ಞಾನಿಕ ಅಂಶಗಳನ್ನು ದಾಟಿಸುವ ಸವಾಲುಗಳನ್ನು ವಿಜ್ಞಾನ ಲೇಖನ ಸಾಧಿಸಬೇಕಾಗುತ್ತದೆ. ಅದರ ಜೊತೆಗೆ ಏನನ್ನು ಹೇಳಬಯಸಿದ್ದೇವೆ ಎನ್ನುವ ಅಂಶವೂ ಮುಖ್ಯವಾಗುತ್ತದೆ.

ಪತ್ರಿಕಾ ಲೇಖನಗಳನ್ನು ಬದಿಗಿಟ್ಟರೆ, ವಿಜ್ಞಾನದ ವಿಷಯಗಳನ್ನು ವಿವರವಾಗಿ ನಿರೂಪಿಸುವ ಪುಸ್ತಕದ ಲೇಖನಗಳನ್ನು ಬರೆಯುವಲ್ಲಿ ಲೇಖಕರ ಸ್ವಾತಂತ್ರ್ಯ ಹೆಚ್ಚು. ಇಂತಹ ಪುಸ್ತಕಗಳಲ್ಲಿ ವಿಜ್ಞಾನವನ್ನು ಯಾವ ಹಂತದಿಂದ ಪರಿಚಯಿಸಲು ಓದುಗರು ಬಯಸುತ್ತಾರೆ? ಆಯಾ ವಿಷಯಗಳ ಬಗ್ಗೆ ಓದುಗರಿಂದ ಒಂದು ಮಟ್ಟದ ಪೂರ್ವ ಜ್ಞಾನವನ್ನು ಅಪೇಕ್ಷಿಸುವುದು ಸೂಕ್ತವೇ ಅಥವಾ ಮೂಲಭೂತ ಅಂಶಗಳಿಂದ ವಿಷಯವನ್ನು ಪ್ರಸ್ತಾಪಿಸುವುದು ಒಳಿತು ಅನಿಸುತ್ತದೆಯೇ? ಈ ಬಗ್ಗೆ ಓದುಗರ ಅಭಿಪ್ರಾಯವೇನು? ದಯವಿಟ್ಟು ತಿಳಿಸಿ.

ವಿಜ್ಞಾನ ಪುಸ್ತಕಗಳು ಮಾರಾಟದ ಸರಕಲ್ಲ!

ಸರ್ಕಾರದ ಪ್ರಕಟಣೆಗಳನ್ನು ಹೊರತುಪಡಿಸಿದರೆ ಖಾಸಗಿ ಪ್ರಕಾಶನದವರು ಪ್ರಕಟಿಸಿರುವ ವಿಜ್ಞಾನ ಪುಸ್ತಕಗಳ ಪೈಕಿ ಈವರೆಗೆ ಅತಿ ಹೆಚ್ಚು ಮಾರಾಟ ಆಗಿರುವ ಪುಸ್ತಕ ಯಾವುದು? ಪ್ರಾಯಶಃ ನವಕರ್ನಾಟಕ ಪ್ರಕಾಶನದ, ಕೊಳ್ಳೇಗಾಲ ಶರ್ಮಾ ಅವರು ಸಂಪಾದಿಸಿದ “ಇದೇಕೆ ಹೀಗೆ?” ಪುಸ್ತಕ ಅನಿಸುತ್ತದೆ. ಕನ್ನಡದ ವಿಜ್ಞಾನ ಪುಸ್ತಕಗಳನ್ನು ಪ್ರಕಟಿಸುವಲ್ಲಿ ಮುಂಚೂಣಿಯಲ್ಲಿರುವುದು ಕೂಡ ನವಕರ್ನಾಟಕ ಪ್ರಕಾಶನವೇ. ಅಂತಹ ಬೃಹತ್ ಸಂಸ್ಥೆಗೆ ಇದೇನೂ ದೊಡ್ಡ ವಿಷಯವಲ್ಲ.

ಕನ್ನಡದಲ್ಲಿ ವಿಜ್ಞಾನ ಪುಸ್ತಕಗಳ ಮಾರಾಟ ಸುಲಭವಲ್ಲ. ಕಳೆದ ದಶಕದಲ್ಲಿ ಒಬ್ಬ ಲೇಖಕರಿಂದ ಬರೆಯಲ್ಪಟ್ಟ ವಿಜ್ಞಾನ ಪುಸ್ತಕವೊಂದು ಒಂದು ಸಾವಿರ ಪ್ರತಿಗಳಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗಿರುವ ನಿದರ್ಶನಗಳು ಬೆರಳೆಣಿಕೆಯಷ್ಟು. ಅಗಾಧ ವೇಗದಿಂದ ಮುನ್ನಡೆಯುವ ವಿಜ್ಞಾನದಂತಹ ಕ್ಷೇತ್ರದಲ್ಲಿ “ಸಮಕಾಲೀನ” ಎನ್ನುವ ಮಾಹಿತಿಗೆ ಅರ್ಥವಿಲ್ಲ. ವಿಷಯ ಬರೆದು, ಪುಸ್ತಕ ಪ್ರಕಟಿಸುವಷ್ಟರಲ್ಲಿ ಮಾಹಿತಿ ಹಳೆಯದಾಗಿರುತ್ತದೆ.

ವಿಜ್ಞಾನದ ಪುಸ್ತಕಗಳ ಬರವಣಿಗೆ ಕೂಡ ಸುಲಭವಲ್ಲ. ಜನಪ್ರಿಯ ಕತೆಗಳಲ್ಲಿ ಅಸಂಗತಗಳು ಹಾಸುಹೊಕ್ಕಾಗಿದ್ದರೂ ಯಾರೂ ಆಕ್ಷೇಪಿಸುವುದಿಲ್ಲ. ಆದರೆ ವಿಜ್ಞಾನ ವಿಷಯದಲ್ಲಿ ಮಾಹಿತಿ ಅಧಿಕೃತವಾಗಿಯೇ ಇರಬೇಕು. ಸಾಧ್ಯವಾದರೆ ಆಧಾರಗಳನ್ನು ಕೊಡಬೇಕು. ಬರೆಯುವುದನ್ನು ಆಸಕ್ತಿ ಮೂಡಿಸುವಂತೆ, ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ಇರಬೇಕು. ಪುಸ್ತಕ ವಿಫುಲವಾದ ಚಿತ್ರಗಳಿಂದ ಕೂಡಿರಬೇಕು. ಪುಸ್ತಕದ ಬೆಲೆ ಹೆಚ್ಚಾಗಿರಬಾರದು. ಪುಸ್ತಕದ ಲೇಖಕರು ಈಗಾಗಲೇ ಸ್ವಲ್ಪ ಹೆಸರು ಮಾಡಿ ಪರಿಚಿತರಾಗಿದ್ದರೆ ಒಳಿತು.

ಇಷ್ಟಾದರೂ ಪುಸ್ತಕಕ್ಕೆ ಪ್ರಕಾಶಕರು ಸಿಗುವುದು ಕಷ್ಟ. ಪ್ರಕಟವಾದ ಪುಸ್ತಕ ಮಾರಾಟವಾಗುವುದು ಮತ್ತೂ ಕಷ್ಟ. ಈಗಂತೂ ಅಂಚೆಯ ಬೆಲೆಯಲ್ಲಿ ತೀವ್ರ ವ್ಯತ್ಯಾಸವಾದ ಕಾರಣ ಪುಸ್ತಕವನ್ನು ಲೇಖಕರೇ ನೇರವಾಗಿ ಗ್ರಾಹಕನಿಗೆ ಅಂಚೆಯಲ್ಲಿ ಕಳಿಸುವುದೂ ದುಬಾರಿಯ ವಿಷಯ. ಹೀಗೆ ಬರೆಯುವ ಹಂತದಿಂದ ಹಿಡಿದು ಓದುಗರಿಗೆ ತಲುಪಿಸುವ ಮಟ್ಟದವರೆಗೆ ಸುಮ್ಮನೆ ಕಷ್ಟಗಳನ್ನೇ ಎದುರಿಸಬೇಕಾದ ಸಂದರ್ಭದಲ್ಲಿ ಯಾವ ವಿಜ್ಞಾನ ಲೇಖಕರು ತಾನೇ ಇದರಲ್ಲಿ ಬಹುಕಾಲ ಆಸಕ್ತಿ ತೋರಿಯಾರು? ವಿಜ್ಞಾನ ಪುಸ್ತಕದಿಂದ ಹಣ ಸಂಪಾದನೆ ಗಗನಕುಸುಮ; ಆದರೆ, ಪುಸ್ತಕ ಬರವಣಿಗೆಗೆ ಕಷ್ಟವನ್ನೂ ಪಟ್ಟು, ಅದರ ಪ್ರಕಟಣೆಯಲ್ಲಿ ನಷ್ಟವನ್ನೂ ಅನುಭವಿಸಿ, ಅದನ್ನು ಮಾರಲು ಗೋಗರೆಯುವ ಗೋಳು ಯಾರಿಗೆ ಬೇಕು? ಇಂತಹ ವಾಸ್ತವಗಳನ್ನು ಗಮನಿಸಿದರೆ “ವಿಜ್ಞಾನ ಪುಸ್ತಕ ಬರೆಯಿರಿ” ಎಂದು ಯಾರಿಗೂ ಹೇಳುವ ಮನಸ್ಸೂ ಆಗುವುದಿಲ್ಲ.

ವಿಜ್ಞಾನ ಸಾಹಿತ್ಯ ಹೆಚ್ಚು ಪ್ರಚಾರ ಪಡೆದು, ವ್ಯಾಪಕವಾಗಿ ಜನರನ್ನು ಸೇರಲು ಯಾವ ಮಾರ್ಗಗಳಿವೆ? ಲಾಭ ಬೇಡ; ಕನಿಷ್ಠ ವಿಜ್ಞಾನ ಲೇಖಕರ ಶ್ರಮಕ್ಕೆ ಅದನ್ನು ಅರ್ಹ ಜನರಿಗೆ ತಲುಪಿಸಿದ ಸಂತಸ ನೀಡುವ ಹಾದಿಗಳು ಯಾವುದಿದೆ? ವಿಜ್ಞಾನ ಲೇಖಕರು ಸೇರಿ ಸಂಘಟಿತರಾಗಿ ಏನನ್ನಾದರೂ ಮಾಡಲಾದೀತೆ? ಅದಕ್ಕೆ ಓದುಗರ ಸಹಕಾರ ಯಾವ ರೀತಿ ಇದ್ದೀತು? ಈ ಬಗ್ಗೆ ಓದುಗರ ಅಭಿಪ್ರಾಯವೇನು? ದಯವಿಟ್ಟು ತಿಳಿಸಿ.

ಉಪಸಂಹಾರ

ಕನ್ನಡದಲ್ಲಿ ವಿಜ್ಞಾನ ಸಾಹಿತ್ಯದ ಬಗ್ಗೆ ಆಸಕ್ತ ಓದುಗರಿದ್ದಾರೆ. ಆದರೆ, ಅವರ ಅಪೇಕ್ಷೆಗೆ ತಕ್ಕಂತಹ ವಿಜ್ಞಾನ ಸಾಹಿತ್ಯ ನಿರ್ಮಾಣ ಆಗುತ್ತಿಲ್ಲ.

ಸರಳ ಶೈಲಿಯಲ್ಲಿ, ಹೆಚ್ಚು ಗೊಂದಲವಾಗದ ಭಾಷೆಯಲ್ಲಿ, ಹೆಚ್ಚು ವೈಜ್ಞಾನಿಕ ಪದಗಳನ್ನು ಬಳಸದೆ, ಮಾಹಿತಿಯನ್ನು ಆಕರ್ಷಕವಾಗಿ ಪ್ರಸ್ತುತ ಪಡಿಸುವ ಲೇಖಕನಗಳಿಗೆ ಓದುಗರ ಹೆಚ್ಚು ಮನ್ನಣೆ ಇದೆ.

ಪಾರಿಭಾಷಿಕ ಪದಗಳ ಗೊಂದಲ ಬಗೆಹರಿದಿಲ್ಲ. ಈ ಬಗ್ಗೆ ವಿಜ್ಞಾನ ಲೇಖಕರು ಒಮ್ಮತದಿಂದ ಒಂದು ಪದ್ಧತಿ ಅನುಸರಿಸುವುದು ಸೂಕ್ತ. ಎಲ್ಲಿ ಭಾಷಾಂತರ ಸರಳ ಮತ್ತು ಅರ್ಥಪೂರ್ಣ ಅನಿಸುತ್ತದೆಯೋ, ಅಲ್ಲಿ ಮಾಡಬಹುದು. ತೀರಾ ಗೊಂದಲಮಯ ಭಾಷಾಂತರಕ್ಕಿಂತಲೂ ಮೂಲ ಪದವನ್ನೇ ಉಳಿಸಿಕೊಳ್ಳುವುದು ಉಪಯುಕ್ತ.

ವಿಜ್ಞಾನ ಸಾಹಿತ್ಯವನ್ನು ಅದರ ಸ್ಪಷ್ಟ ಅರಿವು ಇರುವ ಯಾರು ಬೇಕಾದರೂ ಬರೆಯಬಹುದು. ಆದರೆ ತೀರಾ ಉನ್ನತ ಮಟ್ಟದ ವಿಷಯಗಳನ್ನು ಆಯಾ ವಿಷಯ ತಜ್ಞರು ಬರೆಯುವುದು ಮಾಹಿತಿಯ ನಿಷ್ಕೃಷ್ಟತೆಯ ದೃಷ್ಟಿಯಿಂದ ಒಳಿತು. ಆ ರೀತಿ ಬರೆಯಬಲ್ಲ ವಿಷಯ ತಜ್ಞರು ದೊರೆಯದಿದ್ದರೆ ಕನಿಷ್ಠ ಅಂತಹವರನ್ನು ಲೇಖನದಲ್ಲಿ ಸಹಭಾಗಿಯನ್ನಾಗಿ ಮಾಡುವುದು ಸೂಕ್ತ.

ಕನ್ನಡದಲ್ಲಿ ವಿಜ್ಞಾನ ಪತ್ರಿಕೆಗಳಿವೆ. ಅಂತಹ ಒಂದು ಪತ್ರಿಕೆಗಾದರೂ ಎಲ್ಲ ವಿಜ್ಞಾನಾಸಕ್ತರೂ ಚಂದಾದಾರರಾಗಬೇಕು. ಇಲ್ಲವಾದರೆ ಕನಿಷ್ಠ ಅವುಗಳ ಡಿಜಿಟಲ್ ಪ್ರತಿಯನ್ನಾದರೂ ಅವಲೋಕಿಸಬೇಕು. ಆಗ ವಿಜ್ಞಾನಾಸಕ್ತಿ ಮುಂದುವರೆಯುತ್ತದೆ. ಇಂದಿನ ಕಾಲದಲ್ಲಿ ಯಾವುದೇ ಆಸಕ್ತಿಯನ್ನು ಜೀವಂತವಾಗಿ ಇರಿಸಿಕೊಳ್ಳುವುದೂ ಸವಾಲಿನ ಸಂಗತಿಯೇ.

ವಿಜ್ಞಾನ ಲೇಖಕ ಮತ್ತು ಓದುಗರ ಸಮನ್ವಯ ಒಳಿತು. ತಾನೇನು ಹೇಳುತ್ತಿದ್ದೇನೆ ಎಂಬುದರ ಅರಿವು ಇರುವಷ್ಟೇ ಚೆನ್ನಾಗಿ ಅದು ಓದುಗನಿಗೆ ಮುಟ್ಟುತ್ತಿದೆಯೇ ಎಂಬುದರ ಪರಿವೆಯೂ ಲೇಖಕರಿಗೆ ಮುಖ್ಯವಾಗುತ್ತದೆ. ಈ ಅಂತರ ಕಡಿಮೆಯಾದಷ್ಟೂ ವಿಜ್ಞಾನ ಸಾಹಿತ್ಯಕ್ಕೆ ಲಾಭವಿದೆ.

ಕನ್ನಡದಲ್ಲಿ ವಿಜ್ಞಾನ ಪುಸ್ತಕಗಳಿಗೆ ಮಾರುಕಟ್ಟೆ ಬಹಳ ಸೀಮಿತವಾದದ್ದು. ವಿಜ್ಞಾನ ಲೇಖಕರಿಗೆ ತಮ್ಮ ಪುಸ್ತಕದಿಂದ ಹಣ ಮಾಡುವ ಉದ್ದೇಶವಿಲ್ಲದಿದ್ದರೂ, ತಮ್ಮ ಪ್ರಯತ್ನಕ್ಕೆ ಓದುಗರ ಮೆಚ್ಚುಗೆ ಸಲ್ಲಬೇಕು ಎನ್ನುವ ಆಶಯವಂತೂ ಇರುತ್ತದೆ. ಇದು ಸಾಧಿಸಲಾಗದ ಹೆಜ್ಜೆಯೇನೂ ಅಲ್ಲ. ಆದರೆ ಈ ಬಗ್ಗೆ ವಿಜ್ಞಾನ ಲೇಖಕರು ಸ್ವಲ್ಪ ಗಮನ ಕೊಡಬೇಕು; ಹೊಸ ದಾರಿಗಳನ್ನು ಹುಡುಕಬೇಕು. ಸಂಘಟಿತ ಪ್ರಯತ್ನವಿಲ್ಲದೆ ಕನ್ನಡ ವಿಜ್ಞಾನ ಸಾಹಿತ್ಯ ಬೆಳೆಯುವುದು ಕಷ್ಟವಿದೆ.

ಕನ್ನಡ ವಿಜ್ಞಾನ ಸಾಹಿತ್ಯದ ಭವಿಷ್ಯಕ್ಕೆ ಶುಭವಾಗಲಿ.

-ಡಾ. ಕಿರಣ ಸೂರ್ಯ

Be First to Comment

Leave a Reply

Your email address will not be published. Required fields are marked *