ವೈದ್ಯರನ್ನೇ ಜಗಿಯಬಹುದು!
ಹಲವು ದಿನಗಳಿಂದ ಹಲ್ಲು ನೋವಾಗುತ್ತಿದೆ. ನೋವು ಸಹಿಸಲು ಇನ್ನು ಆಗುವುದಿಲ್ಲ ಎಂದು ದಂತವೈದ್ಯರನ್ನು ಕಾಣುತ್ತೀರಿ. ಅವರು ಹಲ್ಲಿನ ಎಕ್ಸ್‌ರೇ ತೆಗೆಯುತ್ತಾರೆ. ಹಲ್ಲಿನ ಬೇರಿನ ಕಾಲುವೆಯಲ್ಲಿ ಸೋಂಕು ಇರುವುದನ್ನು ಅದು ತೋರಿಸುತ್ತದೆ. ನಿಮ್ಮ ಹಲ್ಲಿಗೆ ಬೇರು ಕಾಲುವೆ ಚಿಕಿತ್ಸೆ (root canal treatment) ಆಗಬೇಕು ಎನ್ನುತ್ತಾರೆ. ಅಂದಾಜು ನಾಲ್ಕು ಸಲ ಅವರಲ್ಲಿಗೆ ಭೇಟಿ ಮಾಡುತ್ತೀರಿ. ಪ್ರತಿ ಭೇಟಿಯಲ್ಲೂ ಅವರು ಹಲ್ಲಿನ ಬೇರಿನ ಕಾಲುವೆಯೊಳಗೆ ಸ್ವಲ್ಪ ಔಷಧಿ ತುಂಬಿಸಿ ನಂತರ ಒಂದು ಅರದ ಮಾದರಿಯ ಸರಿಗೆಯಂತಹದ್ದನ್ನು ತುರುಕಿಸಿ ಅದನ್ನು ತಿರುಗಿಸಿ, ಹಿಂದೆ ಮುಂದೆ ಮಾಡಿ, ಸೋಂಕನ್ನು ಬಹುತೇಕ ತೆಗೆಯುತ್ತಾರೆ. ಕೊನೆಗೆ ಮತ್ತೊಮ್ಮೆ ಎಕ್ಸ್‌ರೇ ತೆಗೆದು ಹಲ್ಲಿನ ಒಳಗೆ ಸ್ವಚ್ಛ ಆಗಿರುವುದನ್ನು ಖಚಿತ ಪಡಿಸಿಕೊಳ್ಳುತ್ತಾರೆ. ಅಂತಿಮವಾಗಿ ಹಲ್ಲಿಗೆ ಸಿಮೆಂಟ್ ತುಂಬಿಸಿ ಅದಕ್ಕೊಂದು ಟೋಪಿ ಹಾಕಿ ಕಳುಹಿಸುತ್ತಾರೆ. ಇದೇನೋ ಸರಿ.
ಈ ಚಿಕಿತ್ಸೆಯಲ್ಲಿ ತುಂಬ ಅನುಭವ ಇರುವ ಪರಿಣತ ವೈದ್ಯರು ಮಾಡಿದರೆ ಇದು ಬಹುತೇಕ ಪರಿಪೂರ್ಣವಾಗಿ ಆಗುತ್ತದೆ. ಕೆಲವೊಮ್ಮೆ ಹಲ್ಲಿನ ಬೇರು ನೇರವಾಗಿಲ್ಲದಿದ್ದಲ್ಲಿ ಅದನ್ನು ಪೂರ್ತಿಯಾಗಿ ಅಂದರೆ 100% ಸೋಂಕು ನಿವಾರಣೆ ಮಾಡಲು ಒದ್ದಾಡಬೇಕಾಗುತ್ತದೆ. ಇಂತಹ ಸಂದರ್ಭಗಳಿಗೆಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹಲ್ಲಿನೊಳಗೆಯೇ ಕಳುಹಿಸಬಹುದಾದ ನ್ಯಾನೋರೋಬೋಟ್‌ಗಳನ್ನು ತಯಾರಿಸಿದ್ದಾರೆ. ಹಾಗೆಂದರೇನು ಎಂದು ತಿಳಿಯುವ ಮೊದಲು ನ್ಯಾನೋರೋಬೋಟ್‌ಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು.
ಮಾನವನ ದೇಹದೊಳಗೆ ಹೋಗಿ, ರಕ್ತನಾಳಗಳಲ್ಲಿ ಈಜಾಡಿ, ಕೆಲವು ಕೆಲಸಗಳನ್ನು ಮಾಡುವ ಅತಿಸೂಕ್ಷ್ಮ ಯಂತ್ರಗಳು ತಯಾರಾಗುತ್ತಿವೆ. ಅವುಗಳೇ ನ್ಯಾನೋರೋಬೋಟ್‌ಗಳು. ರೋಬೋಟ್‌ಗಳು ಅಂದರೆ ಒಂದು ಮಟ್ಟಿಗೆ ಸ್ವಯಂಚಾಲಿತವಾಗಿ ಹಾಗೂ ಗಣಕ ತಂತ್ರಾಂಶ ಮೂಲಕ ಕೃತಕಬುದ್ಧಿಮತ್ತೆಯನ್ನು ಬಳಸಿ ಕೆಲಸ ಮಾಡುವ ಯಂತ್ರಗಳು. ಯಂತ್ರಮಾನವ ಎಂದೂ ಹೇಳಬಹುದು. ಹಲವಾರು ರೋಬೋಟ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ನ್ಯಾನೋ ಎಂದರೆ 10-9 ಎಂದು ಅರ್ಥ. ಅಂದರೆ ದಶಮಾಂಶ ಚುಕ್ಕಿಯ ನಂತರ 8 ಸೊನ್ನೆ ಬರೆದು ನಂತರ ಒಂದು ಅಂಕಿ ಬರೆಯುವುದು. (0.000000001). ನ್ಯಾನೋ ಮೀಟರ್ ಅಂದರೆ ಒಂದು ಮೀಟರ್‌ನ ಶತಕೋಟಿಯಲ್ಲಿ ಒಂದರಷ್ಟು. ಈ ಲೆಕ್ಕಾಚಾರ ಕಷ್ಟವಲ್ಲವೇ? ಸರಳವಾಗಿ ಹೇಳೋಣ. ಒಂದು ಮಾನವ ಕೂದಲಿನ ಗಾತ್ರ (ದಪ್ಪ ಅಥವಾ ವ್ಯಾಸ) ಸುಮಾರು 80 ಸಾವಿರದಿಂದ 1 ಲಕ್ಷ ನ್ಯಾನೋಮೀಟರ್‌ಗಳಷ್ಟು. ಒಂದು ಬ್ಯಾಕ್ಟೀರಿಯ ಸುಮಾರು 1000 ನ್ಯಾನೋಮೀಟರ್ ಗಾತ್ರದ್ದು. ಕೊರೋನಾವೈರಸ್ ಸುಮಾರು 200 ನ್ಯಾನೋಮೀಟರ್‌ನಷ್ಟು ದೊಡ್ಡದಿದೆ. ನ್ಯಾನೋ ರೋಬೋಟ್ ಅಂದರೆ ನ್ಯಾನೋ ಮೀಟರ್‌ನಷ್ಟು ಚಿಕ್ಕ ರೋಬೋಟ್‌ಗಳು ಎಂದು ಅರ್ಥ ಬರುತ್ತಾದರೂ ನಿಜವಾಗಿ ಅಷ್ಟು ಚಿಕ್ಕ ರೋಬೋಟ್‌ಗಳು ಬಂದಿಲ್ಲ. ಸುಮಾರು 0.1 ರಿಂದ 10 ಮೈಕ್ರೋಮೀಟರ್ (100 ರಿಂದ 10000 ನ್ಯಾನೋಮೀಟರ್) ಗಾತ್ರದ ಯಂತ್ರಗಳು ತಯಾರಾಗುತ್ತಿವೆ. ಇವುಗಳ ಬಳಕೆ ವೈದ್ಯಕೀಯ ಕ್ಷೇತ್ರದಲ್ಲಿ ಜಾಸ್ತಿ.
ರಕ್ತನಾಳದೊಳಗೆಲ್ಲೋ ಒಂದು ಕಡೆ ರಕ್ತ ಹೆಪ್ಪುಗಟ್ಟಿದೆ. ಈ ನ್ಯಾನೋರೋಬೋಟ್ ಅಲ್ಲಿಗೆ ಚಲಿಸಿ ಅದನ್ನು ಸಿಡಿಸಿ ಚೂರುಚೂರಾಗಿಸುತ್ತದೆ. ರಕ್ತನಾಳದ ಗೋಡೆಯಲ್ಲಿ ಆಗುವ ಪದರಗಳನ್ನು ನಾಶಮಾಡಲೂ ನ್ಯಾನೋರೋಬೋಟ್ ಬಳಕೆ ಮಾಡಬಹುದು. ನ್ಯಾನೋರೋಬೋಟ್‌ಗಳು ಕ್ಯಾನ್ಸರ್ ಜೀವಕೋಶಗಳಿರುವಲ್ಲಿಗೆ ಪಯಣಿಸಿ ಅವುಗಳನ್ನು ನಾಶಮಾಡಬಹುದು. ಕಾಯಿಲೆಗಳಿಗೆ ಕಾರಣವಾಗುವ ಪರೋಪಜೀವಿ, ಬ್ಯಾಕ್ಟೀರೀಯಾಗಳನ್ನು ನಾಶಮಾಡಲೂ ನ್ಯಾನೋರೋಬೋಟ್‌ಗಳ ಬಳಕೆ ಮಾಡಬಹುದು. ಕಿಡ್ನಿಯೊಳಗೆ ಬೆಳೆಯುವ ಕಲ್ಲುಗಳನ್ನು ಪುಡಿಪುಡಿ ಮಾಡಲೂ ಇವುಗಳ ಬಳಕೆ ಸಾಧ್ಯ. ಹೀಗೆ ವೈದ್ಯಕೀಯ ಕ್ಷೇತ್ರದಲ್ಲಿ ನ್ಯಾನೋರೋಬೋಟ್‌ಗಳನ್ನು ಹಲವು ರೀತಿಯಲ್ಲಿ ಬಳಸಬಹುದು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯವರು ಈಗ ಹಲ್ಲಿನ ಚಿಕಿತ್ಸೆಗೆ ಉಪಯೋಗಿಯಾಗಬಲ್ಲ ನ್ಯಾನೋರೋಬೋಟ್‌ಗಳನ್ನು ತಯಾರಿಸಿದ್ದಾರೆ. ಇದರಲ್ಲಿ ಸಿಲಿಕಾನ್ ಡೈ ಆಕ್ಸೈಡಿನ ಟ್ಯೂಬ್ ಮಾದರಿಯ ಅಣುಗಳಿಗೆ ಕಬ್ಬಿಣದ ಪರಮಾಣುಗಳ ಲೇಪ ಮಾಡಿದ್ದಾರೆ. ಇವನ್ನು ಹಲ್ಲಿನ ಬೇರಿನ ಒಳಗಿನ ಮೃದುವಾದ ಪದಾರ್ಥದಲ್ಲಿ ಬಿಟ್ಟರು. ನಂತರ ಹೊರಗಡೆಯಿಂದ ಅಯಸ್ಕಾಂತದ ಮೂಲಕ ಪರದೆಯಲ್ಲಿ ನೋಡಿಕೊಂಡು ಇವುಗಳ ಚಲನೆಯನ್ನು ನಿಯಂತ್ರಿಸಿದರು. ಹೀಗೆ ತಮಗೆ ಬೇಕೆಂದಲ್ಲಿಗೆ ಈ ನ್ಯಾನೋರೋಬೋಟ್‌ಗಳನ್ನು ಚಲಾಯಿಸಲು ವಿಜ್ಞಾನಿಗಳು ಸಮರ್ಥರಾದರು. ಕಾಂತೀಯ ಶಕ್ತಿಯ ಕಂಪನಾಂಕವನ್ನು ಬದಲಿಸಿ ತಮಗೆ ಬೇಕೆಂದಲ್ಲಿಗೆ ಈ ನ್ಯಾನೋರೋಬೋಟ್‌ಗಳನ್ನು ಕಳುಹಿಸಲು ಹಾಗೂ ಅವನ್ನು ವಾಪಾಸು ಕರೆಸಿಕೊಳ್ಳಲು ಅವರು ಶಕ್ತರಾದರು. ನ್ಯಾನೋರೋಬೋಟ್‌ಗಳ ಚಲನೆಯನ್ನು, ಅದರ ಸುತ್ತಮುತ್ತಲಿನ ದೃಶ್ಯವನ್ನು ಸೂಕ್ಷ್ಮದರ್ಶಕ ಯಂತ್ರದ ಮೂಲಕ ಪರಿಶೀಲನೆ ಮಾಡಿ ನ್ಯಾನೋರೋಬೋಟ್ ಎಲ್ಲಿದೆ, ಅಲ್ಲೇನು ಕಾಣಿಸುತ್ತಿದೆ, ಸೋಂಕು ಇದೆಯೇ ಇಲ್ಲವೇ ಎಂದೆಲ್ಲ ವಿಜ್ಞಾನಿಗಳು ಅರ್ಥ ಮಾಡಿಕೊಳ್ಳಬಲ್ಲರು. ಸೋಂಕು ಇರುವ ಪ್ರದೇಶದಲ್ಲಿ ನ್ಯಾನೋರೋಬೊಟ್ ಇದ್ದಲ್ಲಿ ಸೋಂಕನ್ನು ಗುಣಪಡಿಸಲು ಬೇಕಾದ ಕೆಲಸವನ್ನು ಅವರು ಕೈಗೆತ್ತಿಕೊಳ್ಳುತ್ತಾರೆ. ನ್ಯಾನೋರೋಬೋಟ್ ಬ್ಯಾಕ್ಟಿರಿಯಾದ ಪಕ್ಕದಲ್ಲಿದ್ದರೆ ಕಾಂತೀಯ ಶಕ್ತಿಯನ್ನು ಹೆಚ್ಚು ಕಡಿಮೆ ಮಾಡಿ ನ್ಯಾನೋರೋಬೋಟ್‌ನ ಉಷ್ಣತೆಯನ್ನು ಹೆಚ್ಚಿಸುತ್ತಾರೆ. ಇದರಿಂದಾಗಿ ಪಕ್ಕದಲ್ಲಿರುವ ಬ್ಯಾಕ್ಟೀರಿಯ ನಾಶವಾಗುತ್ತದೆ. ತನ್ಮೂಲಕ ಸೋಂಕನ್ನು ಗುಣಪಡಿಸಬಹುದು.
1987ರಲ್ಲಿ ಇನ್ನರ್‌ಸ್ಪೇಸ್ ಎಂಬ ಹೆಸರಿನ ಇಂಗ್ಲಿಷ್ ಸಿನಿಮಾವೊಂದು ಬಂದಿತ್ತು. ಅದರಲ್ಲಿ ವ್ಯಕ್ತಿಯೊಬ್ಬನನ್ನು ಅತಿ ಚಿಕ್ಕ ಗಾತ್ರಕ್ಕಿಳಿಸಿ ಇನ್ನೊಬ್ಬ ವ್ಯಕ್ತಿಯ ದೇಹದ ರಕ್ತನಾಳದೊಳಕ್ಕೆ ಇಂಜೆಕ್ಷನ್ ಮೂಲಕ ಕಳುಹಿಸಲಾಗುತ್ತದೆ. ಆ ಸಿನಿಮಾದಲ್ಲಿ ಕಥೆ ಮುಂದೇನಾಗುತ್ತದೆ ಎಂದು ಇಲ್ಲಿ ವಿವರಣೆಗಳು ಬೇಡ. ಈ ನ್ಯಾನೋರೋಬೋಟ್‌ಗಳು ಬಹುತೇಕ ಅದೇ ಮಾದರಿಯಲ್ಲಿ ದೇಹದೊಳಗಡೆ ರಕ್ತನಾಳಗಳೊಳಗೆ ಎಲ್ಲ ಸಂಚರಿಸಿ, ತಮಗೆ ಕಂಡ ದೃಶ್ಯಗಳನ್ನು ಚಿತ್ರೀಕರಿಸಿ, ಬೇಕಾದ ಕಡೆ ಔಷಧ ಸಾಗಿಸಿ, ಬೇಡವಾದ ಅಂಗಾಂಶಗಳನ್ನು ನಾಶಪಡಿಸಿ -ಹೀಗೆ ಹಲವು ಉಪಯುಕ್ತ ಕೆಲಸಗಳನ್ನು ಮಾಡಬಲ್ಲವು. ಅಂತಹ ನ್ಯಾನೋರೋಬೋಟ್‌ಗಳಲ್ಲಿ ವಿಶೇಷವಾದ ಒಂದು ನಮೂನೆಯ ರೋಬೋಟ್‌ಗಳು ಹಲ್ಲಿನೊಳಗೆ ಚಲಿಸಿ ಹಲ್ಲನ್ನು ಸೋಂಕುಮುಕ್ತಗೊಳಿಸಬಲ್ಲವು. ಅಂದ ಹಾಗೆ ಇವೆಲ್ಲ ಇನ್ನೂ ಪ್ರಯೋಗಶಾಲೆಯಲ್ಲಿವೆ. ಆದಷ್ಟು ಬೇಗನೆ ಇವೆಲ್ಲ ಜನರ ಉಪಯೋಗಕ್ಕೆ ಬರಲಿ ಎಂದು ಆಶಿಸೋಣ.
–ಡಾ| ಯು.ಬಿ. ಪವನಜ
gadgetloka @ gmail . com
Be First to Comment