ಕನ್ನಡದ ಜಾಲತಾಣಕ್ಕೆ ಕನ್ನಡದಲ್ಲೇ ವಿಳಾಸ
– ಡಾ. ಯು. ಬಿ. ಪವನಜ
ನೀವು ಯಾವುದೇ ಜಾಲತಾಣ ಅಂದರೆ ವೆಬ್‌ಸೈಟ್ ತೆರೆಯಬೇಕಾದರೆ ಏನು ಮಾಡುತ್ತೀರಿ? ಯಾವುದಾದರೊಂದು ಬ್ರೌಸರ್ (ಉದಾ -ಫಯರ್‌ಫಾಕ್ಸ್, ಕ್ರೋಮ್, ಎಡ್ಜ್) ತೆರೆದು ಅದರಲ್ಲಿ ಜಾಲತಾಣದ ವಿಳಾಸವನ್ನು ಟೈಪ್ ಮಾಡುತ್ತೀರಿ ತಾನೆ? ಒಂದೆರಡು ಜಾಲತಾಣಗಳ ವಿಳಾಸ ತಿಳಿಸಿ ನೋಡೋಣ. ನೀವು ಹೇಳಬಹುದಾದ ಉದಾಹರಣೆಗಳು -www.google.com, www.facebook.com, www.twitter.com… ಕನ್ನಡದ ಜಾಲತಾಣಗಳ ಉದಾಹರಣೆ ನೀಡಿ ಎಂದರೆ – www.udayavani.com, www.vishvakannada.com, www.ejnana.com, kanaja.in ಇತ್ಯಾದಿ ನೀಡಬಹುದು. ಇಲ್ಲೊಂದು ವಿಷಯ ಗಮನಿಸಿದಿರಾ? ಕನ್ನಡ ಜಾಲತಾಣಗಳಿಗೂ ಅವುಗಳ ವಿಳಾಸ ಇಂಗ್ಲಿಶಿನಲ್ಲೇ ಇವೆ ಎಂದು. ಇದು ಯಾಕೆ ಹೀಗೆ ಎಂದು ಪ್ರಶ್ನಿಸಿಕೊಂಡಿದ್ದೀರಾ? ಅಥವಾ ಅದು ಇರುವುದೇ ಹಾಗೆ, ಬೇರೆ ರೀತಿ ಸಾಧ್ಯವಿಲ್ಲ ಎಂದು ಅಂದುಕೊಂಡಿದ್ದೀರಾ? ಅದು ಈಗ ಇರುವುದು ಹಾಗೆ ಎಂದರೆ ಸರಿ. ಆದರೆ ಬೇರೆ ರೀತಿ ಸಾಧ್ಯವೇ ಇಲ್ಲ ಎಂದರೆ ಅದು ತಪ್ಪು. ಅಂದರೆ ಕನ್ನಡದ ಜಾಲತಾಣಗಳಿಗೆ ಕನ್ನಡದಲ್ಲೇ ವಿಳಾಸ ನಮೂದಿಸಬಹುದೇ ಎಂಬುದು ನಿಮ್ಮ ಪ್ರಶ್ನೆಯಾದರೆ ಅದರ ಉತ್ತರ ಅದು ಸದ್ಯದಲ್ಲೇ ಸಾಧ್ಯ ಎಂದು.
ಅದರ ಬಗ್ಗೆ ತಿಳಿಯುವ ಮೊದಲು ಸ್ವಲ್ಪ ಪೀಠಿಕೆ ಹಾಕೋಣ. ಅಂತರಜಾಲ ಅಂದರೆ ಇಂಟರ್‌ನೆಟ್‌ಎಂಬುದರ ಒಂದು ಪ್ರಮುಖ ಅಂಗ ವಿಶ್ವವ್ಯಾಪಿ ಜಾಲ ಅರ್ಥಾತ್ ವರ್ಲ್ಡ್ ವೈಡ್ ವೆಬ್. ಇದು ಕೋಟ್ಯನುಕೋಟಿ ಜಾಲತಾಣಗಳ ಮತ್ತು ಜಾಲಪುಟಗಳ (ವೆಬ್‌ಪೇಜ್) ಸಂಗ್ರಹ. ಪ್ರತಿ ಜಾಲತಾಣಕ್ಕೂ ಒಂದು ವಿಳಾಸ ಇರುತ್ತದೆ. ಅವುಗಳ ಉದಾಹರಣೆ ಮೊದಲ ಪ್ಯಾರಾದಲ್ಲಿದೆ. www.udayavani.com ಎಂಬ ಈ ಜಾಲತಾಣ ವಿಳಾಸಕ್ಕೆ ಡೊಮೈನ್ ನೇಮ್ (domain name) ಎನ್ನುತ್ತಾರೆ. ದಶಕಗಳ ಕಾಲ ಈ ಡೊಮೈನ್ ನೇಮ್ ಇಂಗ್ಲಿಶಿನಲ್ಲೇ ಇತ್ತು. ಅಷ್ಟು ಮಾತ್ರವಲ್ಲ, ಅದು ಅಮೆರಿಕ ಸರಕಾರದ ಅಧೀನ ಸಂಸ್ಥೆಯ ಉಸ್ತುವಾರಿಯಲ್ಲಿತ್ತು. ನಿಧಾನವಾಗಿ ಅದನ್ನು ಜಾಗತಿಕ ಸಂಸ್ಥೆಯೊಂದಕ್ಕೆ ಅದು ವರ್ಗಾಯಿಸಿತು. ಇದುವೇ ಐಕಾನ್. ಇದರ ಪೂರ್ತಿ ಹೆಸರು ಇಂಟರ್‌ನೆಟ್ ಕಾರ್ಪೊರೇಶನ್ ಫಾರ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್ (Internet Corporation for Assigned Names and Numbers, ICANN) ಎಂದು. ಇದೊಂದು ಸರಕಾರೇತರ, ಲಾಭ ನಷ್ಟಗಳಿಲ್ಲದ ಸಂಸ್ಥೆ. ಇದನ್ನು ಸಮುದಾಯದ ಜನರೇ ನಡೆಸುವುದು. ಇದಕ್ಕೆ ಯಾರು ಬೇಕಾದರೂ ಕೊಡುಗೆ ನೀಡಬಹುದು.
ಪ್ರಪಂಚದಲ್ಲಿರುವ ಸುಮಾರು 6000ಕ್ಕೂ ಅಧಿಕ ಭಾಷೆಗಳಲ್ಲಿ ಇಂಗ್ಲಿಶ್ ಕೂಡ ಒಂದು. ಅಂದ ಮೇಲೆ ಅಂತರಜಾಲ ಮತ್ತು ಅದರಲ್ಲಿ ಅಡಕವಾಗಿರುವ ವಿಶ್ವವ್ಯಾಪಿ ಜಾಲದ ಎಲ್ಲ ವ್ಯವಹಾರಗಳು ಇಂಗ್ಲಿಶಿನಲ್ಲೇ ಯಾಕಿರಬೇಕು? ಇರಬೇಕಾಗಿಲ್ಲ ಎಂಬುದೇ ಉತ್ತರ. ಜಾಲತಾಣಗಳು ಇಂಗ್ಲಿಶ್ ಹೊರತಾಗಿ ಹಲವು ಭಾಷೆಗಳಲ್ಲಿ ಲಭ್ಯವಾಗತೊಡಗಿ ಹಲವು ದಶಕಗಳೇ ಕಳೆದಿವೆ. ಆದರೂ ಅವುಗಳ ವಿಳಾಸ ಮಾತ್ರ ಇನ್ನೂ ಬಹುತೇಕ ಇಂಗ್ಲಿಶಿನಲ್ಲೇ ಇವೆ. ಅವುಗಳೂ ಇಂಗ್ಲಿಶಿನ ಹೊರತಾಗಿ ಇತರೆ ಭಾಷೆಗಳಲ್ಲೂ ಲಭ್ಯವಾಗಬೇಕು ತಾನೆ? ಹೌದು. ಐಕಾನ್ ಈ ಬಗ್ಗೆ ಕೆಲಸ ಮಾಡುತ್ತಿದೆ. ಅದು ಜಾಗತಿಕ ಭಾಷೆಗಳಲ್ಲಿ ಜಾಲತಾಣ ವಿಳಾಸ (ಡೊಮೈನ್ ನೇಮ್) ತಯಾರಿಸಲು ಮತ್ತು ಅಳವಡಿಸಲು ಬೇಕಾದ ಶಿಷ್ಟತೆಯನ್ನು ರೂಪಿಸುತ್ತಿದೆ. ಈಗಾಲೆ ಹಲವು ಜಾಗತಿಕ ಭಾಷೆಗಳಲ್ಲಿ ಜಾಲತಾಣ ವಿಳಾಸಗಳನ್ನು ಬಳಸಬಹುದು. ಈ ರೀತಿಯ ಜಾಲತಾಣ ವಿಳಾಸಗಳಿಗೆ ಅಂತಾರಾಷ್ಟ್ರೀಯ ಜಾಲತಾಣ ವಿಳಾಸ (Internationalized Domain Name, IDN) ಎನ್ನುತ್ತಾರೆ. ಹಾಗಿದ್ದರೆ ಅದರಲ್ಲಿ ಕನ್ನಡವೂ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳೂ ಇರಬೇಕು ತಾನೆ? ಉತ್ತರ ಹೌದು ಮತ್ತು ಇಲ್ಲ ಎಂದು. ಅದು ಹೇಗೆ ಎಂದು ಮುಂದೆ ನೋಡೋಣ.
ಈ ಜಾಲತಾಣ ವಿಳಾಸಗಳಲ್ಲಿ ಮೂರು ಭಾಗವಿರುವುದನ್ನು ಗಮನಿಸರಬಹುದು. www.udayavani.com ಎಂಬಲ್ಲಿ .com ಎಂಬುದು ಕಮರ್ಶಿಯಲ್ ಎಂಬುದರ ಹ್ರಸ್ವ ರೂಪ. ಈಗ www.kanaja.in ಎಂಬುದನ್ನು ಗಮನಿಸಿ. ಇಲ್ಲಿ .in ಎಂಬುದು India ಅರ್ಥಾತ್ ಭಾರತ ಎಂಬುದು ಹ್ರಸ್ವ ರೂಪ. ಡೊಮೈನ್ ನೇಮ್‌ಗಳ ಈ ಭಾಗಕ್ಕೆ ಟಾಪ್ ಲೆವೆಲ್ ಡೊಮೈನ್ (Top Level Domain, TLD) ಎನ್ನುತ್ತಾರೆ. ಈ ಭಾಗದ .in ಗೆ ಪರ್ಯಾಯವಾದ .ಭಾರತ ಎಂಬುದು ಸದ್ಯಕ್ಕೆ ಕೆಲವು ಭಾರತೀಯ ಲಿಪಿಗಳಲ್ಲಿ ಲಭ್ಯ. ಅವುಗಳು – ದೇವನಾಗರಿ, ಬಾಂಗ್ಲಾ, ಗುಜರಾತಿ, ತೆಲುಗು, ತಮಿಳು, ಗುರುಮುಖಿ (ಪಂಜಾಬಿ) ಮತ್ತು ಉರ್ದು. ಅಂದರೆ ಇಲ್ಲೂ ಕನ್ನಡ ಸದ್ಯಕ್ಕೆ ಇಲ್ಲ. 2019ರ ಮಾರ್ಚ್ ಹೊತ್ತಿಗೆ ಇಲ್ಲಿ ಕನ್ನಡ ಬರುತ್ತದೆ. ಅಂದರೆ ಆಗ ನಾವು ಕಣಜ.ಭಾರತ, ಉದಯವಾಣಿ.ಭಾರತ, ಪವನಜ.ಭಾರತ, ವಿಶ್ವಕನ್ನಡ.ಭಾರತ ಇತ್ಯಾದಿ ಜಾಲತಾಣ ವಿಳಾಸಗಳನ್ನು ಪಡೆಯಬಹುದು. ಈ ಡೊಮೈನ್‌ಗಳ ಬೆಲೆ ತುಂಬ ಇಲ್ಲ. ವರ್ಷಕ್ಕೆ ಸುಮಾರು ರೂ.500 ಆಗಬಹುದಷ್ಟೆ.
ಇಷ್ಟೇ ಆದರೆ ಕನ್ನಡದಲ್ಲಿ ಜಾಲತಾಣ ವಿಳಾಸ ಆದಂತೆಯೇ? ಇಲ್ಲ. udayavani.com ಇರುವಂತೆ ಉದಯವಾಣಿ.ಸಂಸ್ಥೆ ಅಥವಾ ಉದಯವಾಣಿ.ಪತ್ರಿಕೆ ಎಂದು ಪಡೆದಾಗ ಮಾತ್ರ ಅದು ಸಂಪೂರ್ಣ ಕನ್ನಡದಲ್ಲೇ ಜಾಲತಾಣ ವಿಳಾಸ ಎನ್ನಬಹುದು. ಅದು ಸಾಧ್ಯವೇ ಇಲ್ಲವೇ ಎಂದು ಕೇಳಿದರೆ ಸಾಧ್ಯವಿದೆ ಎಂಬುದೇ ಉತ್ತರ. ಯಾವಾಗ ಎಂದು ಕೇಳಿದರೆ ಬಹುಶಃ 2019ರ ಮಾರ್ಚ್ ನಂತರ ಎನ್ನಬಹುದು. ಅದು ಯಾಕೆ ನಿಧಾನ? ಯಾಕೆಂದರೆ ಈ ರೀತಿ ಜಾಲತಾಣ ವಿಳಾಸ ತಯಾರಿಸಬೇಕಾದಾಗ ಯಾವ ಅಕ್ಷರಗಳನ್ನು ಬಳಸಬಹುದು, ಯಾವ ಅಕ್ಷರಗಳನ್ನು ಬಳಸಬಾರದು, ಯಾವ ಅಕ್ಷರದ ನಂತರ ಯಾವ ಅಕ್ಷರ ಬಳಸಬಹುದು ಮತ್ತು ಬಳಸಬಾರದು, ಇತ್ಯಾದಿ ನಿಯಮಗಳನ್ನು ಮೊದಲು ರೂಪಿಸುವ ಕೆಲಸ ಆಗಬೇಕು. ಸಂತಸದ ಸಂಗತಿಯೆಂದರೆ ಈ ನಿಯಮ ತಯಾರಾಗಿದೆ. ಐಕಾನ್‌ನಲ್ಲಿ ನಿಯೊಬ್ರಾಹ್ಮಿ ಜನರೇಶನ್ ಪ್ಯಾನೆಲ್ ಎಂಬ ತಂಡ ಬ್ರಾಹ್ಮಿ ಲಿಪಿಯಿಂದ ಉಗಮಿಸಿದ ಎಲ್ಲ ಲಿಪಿಗಳಲ್ಲಿ ಡೊಮೈನ್ ನೇಮ್‌ತಯಾರಿಸಲು ಬೇಕಾದ ನಿಯಮಗಳನ್ನು ರೂಪಿಸುತ್ತಿದೆ. ಅದರಲ್ಲಿ ಕನ್ನಡವೂ ಸೇರಿದೆ. ಪ್ರಥಮ ಹಂತದ ಭಾಷೆ/ಲಿಪಿಗಳಲ್ಲಿ ಕನ್ನಡವೂ ಸೇರಿದೆ. ಈ ನಿಯಮ ಜಾರಿಗೆ ಬಂದಾಗ ಟಾಪ್ ಲೆವೆಲ್ ಡೊಮೈನ್ (ಟಿಎಲ್‌ಡಿ) ಕನ್ನಡ ಲಿಪಿಯಲ್ಲೇ ಪಡೆದುಕೊಳ್ಳಬಹುದು. ಆಗ .ಪತ್ರಿಕೆ, .ಸುದ್ದಿ, .ಸಂಸ್ಥೆ, .ದೂರದರ್ಶನ, .ಕನ್ನಡ, ಇತ್ಯಾದಿ ಟಿಎಲ್‌ಡಿಗಳನ್ನು ಪಡೆದುಕೊಳ್ಳಬಹುದು. ಅಂದರೆ ಉದಯವಾಣಿ.ಪತ್ರಿಕೆ, ಕಸಾಪ.ಸಂಸ್ಥೆ, ಚಂದನ.ದೂರದರ್ಶನ, ಇತ್ಯಾದಿ ಜಾಲತಾಣ ವಿಳಾಸಗಳನ್ನು (ಡೊಮೈನ್ ನೇಮ್) ಪಡೆಯಬಹುದು.
ಇಲ್ಲೊಂದು ಸಣ್ಣ ಸಮಸ್ಯೆಯಿದೆ. ಅದೆಂದರೆ ಈ ಟಾಪ್ ಲೆವೆಲ್ ಡೊಮೈನ್‌ನ ಬೆಲೆ. ಸದ್ಯಕ್ಕೆ ಅದು 1,85,000 ಅಮೆರಿಕನ್ ಡಾಲರ್ ಇದೆ. ಅಂದರೆ ಸುಮಾರು 1 ಕೋಟಿ 36 ಲಕ್ಷ ರೂ! ಯಾವ ಭಾರತೀಯ ಇಷ್ಟು ಹಣ ನೀಡಿ ಸ್ವಂತದ ಡೊಮೈನ್ ನೇಮ್ ತೆಗೆದುಕೊಳ್ಳುತ್ತಾನೆ? ಶ್ರೀಮಂತ ಸಂಸ್ಥೆಗಳೂ ಇಷ್ಟು ಹಣ ಖರ್ಚು ಮಾಡಲು ಹಿಂದೆ ಮುಂದೆ ಯೋಚನೆ ಮಾಡಬಹುದು. ಆದರೆ ಪರಿಸ್ಥಿತಿ ಅಷ್ಟು ಶೋಚನೀಯವಾಗಿಲ್ಲ. ಐಕಾನ್ ಒಂದು ಜನರೇ ನಡೆಸುವ ಸರಕಾರೇತರ ಸಂಸ್ಥೆ. ಇದರಲ್ಲಿ ಭಾರತೀಯರೂ ಸದಸ್ಯರಾಗಿದ್ದಾರೆ. ಅವರೆಲ್ಲ ಒತ್ತಡ ಹಾಕಿ ಈ ಹಣವನ್ನು ಕಡಿಮೆ ಮಾಡುವ ಸಾಧ್ಯತೆಗಳಿವೆ. ಸಾಧ್ಯತೆಯೇನು ಬಂತು? ಹಾಗೆ ಮಾಡದಿದ್ದಲ್ಲಿ ಐಕಾನ್‌ನವರ ಶ್ರಮವೆಲ್ಲ ವ್ಯರ್ಥ. ಯಾರೂ ಭಾರತೀಯ ಭಾಷೆಗಳಲ್ಲಿ ಟಿಎಲ್‌ಡಿ ಕೊಂಡುಕೊಳ್ಳದಿದ್ದರೆ ಶ್ರಮಕ್ಕೇನು ಫಲ? ಹಾಗೆ ಆಗಲಾರದು ಎಂದುಕೊಂಡಿದ್ದೇನೆ.
(ಉದಯವಾಣಿಯಲ್ಲಿ ನವಂಬರ್ ೧, ೨೦೧೮ರಂದು ಪ್ರಕಟವಾದ ಲೇಖನ)
May 30th, 2019 at 7:46 pm
Sir nanu edaralli article bareyabeku en madbeku plz replay
May 30th, 2019 at 7:47 pm
Sir nanu edaralli article bariyabeku en madbeku plz replay