ತಂತ್ರಜ್ಞಾನದ ಮೂಲಕ ವಾಸನೆಯನ್ನು ಪತ್ತೆ ಹಚ್ಚುವುದರ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಂಡೆವು. ಇದನ್ನೆ ತಿರುವುಮುರುವು ಮಾಡಿದರೆ ಹೇಗಿರುತ್ತದೆ? ಅಂದರೆ ತಂತ್ರಜ್ಞಾನದ ಮೂಲಕ ವಾಸನೆಯನ್ನು ಸೃಷ್ಟಿ ಮಾಡುವಂತಿದ್ದರೆ? ತಂತ್ರಜ್ಞಾನದ ಮೂಲಕ ದೃಶ್ಯ, ಧ್ವನಿಗಳನ್ನು ಸೃಷ್ಟಿ ಮಾಡಬಹುದು. ಹಾಗೆಯೇ ಮುಂದುವರೆದು ತಂತ್ರಜ್ಞಾನದ ಮೂಲಕ ವಾಸನೆಯನ್ನೂ ಸೃಷ್ಟಿಸುವಂತಿದ್ದರೆ? ಹೌದು ಅದೂ ಸಾಧ್ಯವಿದೆ. ಈ ಸಂಚಿಕೆಯಲ್ಲಿ ಅದರ ಬಗ್ಗೆ ತಿಳಿದುಕೊಳ್ಳೋಣ.
ಅಮೆರಿಕದ ಡಿಜಿಸೆಂಟ್ ಟೆಕ್ನಾಲೋಜಿ ಎಂಬ ಕಂಪೆನಿ ಈ ತಂತ್ರಜ್ಞಾನವನ್ನು ಬಳಸಿ ಐಸ್ಮೆಲ್ ಎಂಬ ಸಾಧನವನ್ನು ತಯಾರಿಸಿದೆ. ಇದು ಬಹುಮಟ್ಟಿಗೆ ಗಣಕದ ಪರದೆಯ ರೀತಿಯಲ್ಲೇ ಇದೆ. ಇದನ್ನು ಗಣಕದ ಪರದೆಯ ಮೇಲೆ ಅಳವಡಿಸಬೇಕು. ಇದರ ನಾಲ್ಕು ಮೂಲೆಗಳಲ್ಲಿ ವಾಸನೆಯನ್ನು ಸೃಷ್ಟಿಸುವ ಅಂಗಗಳಿವೆ. ಇವು ಗಣಕ ನೀಡಿದ ಆದೇಶವನ್ನು ಅವಲಂಬಿಸಿ ಸೂಕ್ತವಾದ ವಾಸನೆಯನ್ನು ಹೊರಹೊಮ್ಮಿಸುತ್ತವೆ. ತಂತ್ರಜ್ಞಾನದ ಮೂಲಕ ದೃಶ್ಯ ಅಥವಾ ಧ್ವನಿಯನ್ನು ಸೃಷ್ಟಿಸುವುದಕ್ಕೂ ವಾಸನೆಯನ್ನು ಸೃಷ್ಟಿಸುವುದಕ್ಕೂ ತುಂಬ ವ್ಯತ್ಯಾಸವಿದೆ. ದೃಶ್ಯವನ್ನು ವಿದ್ಯುತ್ಕಾಂತೀಯ ತರಂಗಗಳ ಮೂಲಕ ಹಾಗೂ ಧ್ವನಿಯನ್ನು ಧ್ವನಿ ತರಂಗಗಳ ಮೂಲಕ ಸೃಷ್ಟಿಸಲಾಗುತ್ತದೆ. ಆದರೆ ವಾಸನೆಯನ್ನು ಸೃಷ್ಟಿಸಲು ಆ ವಾಸನೆಯನ್ನು ಸೂಸುವ ಪದಾರ್ಥದ ಅಗತ್ಯವಿದೆ. ನಮ್ಮ ಮೂಗಿನೊಳಗೆ ಆ ಪದಾರ್ಥ ಅತಿ ಕಡಿಮೆ ಪ್ರಮಾಣದಲ್ಲಿ ಹೋದರೂ ನಮಗೆ ವಾಸನೆಯ ಗ್ರಹಿಕೆ ಆಗುತ್ತದೆ. ಪ್ರಮಾಣ ಅತಿ ಕಡಿಮೆ ಇರಬಹುದು. ಆದರೆ ಪದಾರ್ಥವನ್ನು ಮೂಗಿಗೆ ಕಳುಹಿಸುವುದು ಅಗತ್ಯ. ಬೆಳಕಿನಲ್ಲಿ ಮೂಲಭೂತವಾಗಿ ಇರುವುದು ಮೂರೇ ಬಣ್ಣಗಳು. ಅವುಗಳು – ಕೆಂಪು, ಹಸಿರು ಮತ್ತು ನೀಲಿ. ಈ ಬಣ್ಣಗಳನ್ನು ಬೇರೆ ಬೇರೆ ಪ್ರಮಾಣದಲ್ಲಿ ಮಿಶ್ರ ಮಾಡಿ ಲಕ್ಷಗಟ್ಟಲೆ ಬಣ್ಣಗಳನ್ನು ಗಣಕದ ಪರದೆಯ ಮೂಲೆ ಮೂಡಿಸಲಾಗುತ್ತದೆ. ವಾಸನೆಯಲ್ಲೂ ಕೆಲವು ಮೂಲಭೂತ ವಾಸನೆಗಳು ಮತ್ತು ಮಿಶ್ರಣದಿಂದ ಸೃಷ್ಟಿಸಲ್ಪಟ್ಟ ವಾಸನೆಗಳು ಇವೆ ಎಂಬುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದರು. ಈ ಸಿದ್ಧಾಂತವನ್ನು ಡಿಜಿಸೆಂಟ್‌ನವರು ತಮ್ಮ ಐಸ್ಮೆಲ್‌ನಲ್ಲಿ ಬಳಸಿದ್ದರು. ಮೂಲಭೂತವಾದ ವಾಸನೆಗಳನ್ನು ಹೊರಹೊಮ್ಮಿಸುವ ಸುಮಾರು 128 ವಸ್ತುಗಳನ್ನು ಅವರು ಈ ಸಾಧನದಲ್ಲಿ ಅಳವಡಿಸಿದ್ದರು. ಗಣಕದಿಂದ ಬಂದ ಆದೇಶಕ್ಕೆ ಅನುಗುಣವಾಗಿ ಈ ಸಾಧನವು ಆ ವಸ್ತುಗಳನ್ನು ಬೇಕಾದ ಪ್ರಮಾಣದಲ್ಲಿ ಹೊರಸೂಸುತ್ತದೆ. ಇದರಿಂದ ನಮಗೆ ವಾಸನೆಯ ಗ್ರಹಿಕೆ ಆಗುತ್ತದೆ.

ಮೊತ್ತಮೊದಲಿಗೆ ಈ ನಮೂನೆಯ ತಂತ್ರಜ್ಞಾನ ಬಂದುದು ಸಿನಿಮಾಗಳಿಗೆ. ಒಂದು ಸಿನಿಮಾದಲ್ಲಿ ಬೇರೆ ಬೇರೆ ದೃಶ್ಯಗಳು ಬಂದಾಗ ಆಯಾ ದೃಶ್ಯಕ್ಕೆ ಸಂಬಂಧಿಸಿದ ವಾಸನೆಯನ್ನು ಥಿಯೋಟರಿನೊಳಗೆ ಹರಿಬಿಡಲಾಯಿತು. ಸಿನಿಮಾದಲ್ಲಿ ಒಬ್ಬಾತ ಮೀನು ಸುಟ್ಟು ತಿನ್ನುತ್ತಿರುವ ದೃಶ್ಯ ಬಂದಾಗ ಸುಟ್ಟ ಮೀನಿನ ವಾಸನೆ ಥಿಯೇಟರನ್ನು ತುಂಬಿತ್ತು. ಇದು ಜನಪ್ರಿಯವಾಗಲಿಲ್ಲ. ಥಿಯೇಟರಿನ ಹಿಂದಿನ ಸಾಲುಗಳಲ್ಲಿ ಕುಳಿತವರಿಗೆ ವಾಸನೆ ತಲುಪುವಾಗ ತಡವಾಗುತ್ತಿತ್ತು. ಪರದೆಯಲ್ಲಿ ದೃಶ್ಯ ಬಂದು ಹೋಗಿ ಸ್ವಲ್ಪ ಹೊತ್ತಾದ ನಂತರ ಆ ವಾಸನೆ ಅವರನ್ನು ತಲುಪುತ್ತಿತ್ತು. ಅಂತೂ ವಾಸನಾಭರಿತ ಸಿನಿಮಾ ಜಯಶಾಲಿಯಾಗಲಿಲ್ಲ.
ವಿದ್ಯುನ್ಮಾನ ವ್ಯಾಪಾರ ಅಂದರೆ ಇ-ಕಾಮರ್ಸ್‌ನಲ್ಲಿ ಈ ಡಿಜಿಟಲ್ ವಾಸನೆಯ ತಂತ್ರಜ್ಞಾನ ಸರಿಯಾಗಿ ಬಂದರೆ ಅದು ಒಂದು ಕ್ರಾಂತಿಯನ್ನೇ ಮಾಡಬಲ್ಲುದು. ನಾವು ಕೊಳ್ಳುವ ವಸ್ತುಗಳ ವಾಸನೆಯನ್ನು ನಾವು ಪರದೆಯಲ್ಲೇ ಗ್ರಹಿಸಿ ಅದನ್ನು ಕೊಳ್ಳಬೇಕೇ ಬೇಡವೇ ಎಂದು ತೀರ್ಮಾನಿಸಬಹುದು. ಇದು ಆಹಾರ, ಸೌಂದರ್ಯವರ್ಧಕಗಳು, ಸುಗಂಧ ದ್ರವ್ಯಗಳು, ಮಸಾಲೆ ಪುಡಿ, ಔಷಧ, ಪಾನೀಯಗಳು, ಹೀಗೆ ಹಲವು ವಸ್ತುಗಳ ಮಾರಾಟದಲ್ಲಿ ಪ್ರಯೋಜನಕಾರಿ. ಒಂದು ರೆಸ್ಟಾರೆಂಟ್ ತನ್ನ ಆಹಾರಗಳ ಮೆನು ಜೊತೆ ಅವುಗಳ ವಾಸನೆಯನ್ನೂ ವೀಕ್ಷಕನಿಗೆ ಪರದೆಯ ಮೂಲಕ ತಲುಪಿಸಿದರೆ ಆತನ ವ್ಯಪಾರ ತುಂಬ ಜಾಸ್ತಿಯಾಗಬಲ್ಲುದು. ಗಣಕದಲ್ಲಿ ಆಟಗಳನ್ನು ಆಡುವಾಗಲೂ ಈ ತಂತ್ರಜ್ಞಾನವು ಹೆಚ್ಚಿನ ಒಂದು ಅನುಭವವನ್ನು ನೀಡಬಲ್ಲುದು. ಆಟದಲ್ಲಿ ಆಡುವಾತ ಕೊಚ್ಚೆ, ಗಲೀಜು ನೀರಿನ ಚರಂಡಿಯನ್ನು ದಾಟಬೇಕಾಗಿದೆ ಎಂದಿಟ್ಟುಕೊಳ್ಳಿ. ಆ ದೃಶ್ಯ ಬಂದಾಗ ಪರದೆಯಿಂದ ಚರಂಡಿಯ ವಾಸನೆ ಬಂದರೆ ಆಟ ಆಡುವ ಅನುಭವ ಪರಿಪೂರ್ಣವಾಗುತ್ತದೆ. ಈಗ ಬಳಕೆಯಲ್ಲಿರುವ ಮಿಥ್ಯಾವಾಸ್ತವ ತಂತ್ರಜ್ಞಾನಕ್ಕೆ (virtual reality) ಇದು ಪೂರಕವಾಗಬಲ್ಲುದು.
ಐಸ್ಮೆಲ್‌ನಲ್ಲಿ ಪರದೆಯ ನಾಲ್ಕು ಮೂಲೆಗಳಲ್ಲಿ ನಾಲ್ಕು ವಾಸನೆಯನ್ನು ಸೂಸುವ ಸಾಧನಗಳನ್ನು ಅಳವಡಿಸಲಾಗಿತ್ತು. ಈ ಸಾಧನವು ಗಣಕದ ಆದೇಶದಂತೆ ಬೇರೆ ಬೇರೆ ವಾಸನೆಗಳನ್ನು ಸೂಸುತ್ತಿತ್ತು. ಈ ವಾಸನೆಗಳನ್ನು ಹೊರ ಸೂಸಲು ಅನಿಲಗಳನ್ನು ಬಳಸಲಾಗುತ್ತಿತ್ತು. ಈ ಸಾಧನವು ಒಂದು ಸ್ಪೀಕರಿನಷ್ಟು ದೊಡ್ಡದಿದ್ದು ಗಣಕಕ್ಕೆ ಯುಎಸ್‌ಬಿ ಕಿಂಡಿ ಮೂಲಕ ಜೋಡಣೆಯಗುತ್ತಿತ್ತು. ಇಂಕ್ ಜೆಟ್ ಪ್ರಿಂಟರಿನಲ್ಲಿ ಚಿಕ್ಕ ನೋಝಲ್ ಮೂಲಕ ಶಾಯಿ ಹೊರ ಸೂಸಿ ಕಾಗದದ ಮೇಲೆ ಚಿಮ್ಮಿ ಅಕ್ಷರ, ಚಿತ್ರಗಳನ್ನು ಮೂಡಿಸುತ್ತದೆ. ಈ ಐಸ್ಮೆಲ್ ಸಾಧನದಲ್ಲೂ ಚಿಕ್ಕ ಚಿಕ್ಕ ನೋಝಲ್ ಮೂಲಕ ವಾಸನೆಯನ್ನು ಸೃಷ್ಟಿಸುವ ರಾಸಾಯನಿಕ ಅನಿಲಗಳು ಹೊರಸೂಸುತ್ತಿದ್ದವು. ಮೂಲಭೂತ ವಾಸನೆಗಳನ್ನು ಸೃಷ್ಟಿಸುವ 128 ಬೇರೆ ಬೇರೆ ರಾಸಾಯನಿಕಗಳು ಐಸ್ಮೆಲ್ ಒಳಗೆ ಸಂಗ್ರಹವಾಗಿದ್ದವು. ಇವುಗಳ ಬೇರೆ ಬೇರೆ ಪ್ರಮಾಣದ ಮಿಶ್ರಣವು ಬೇರೆ ಬೇರೆ ವಾಸೆಗಳನ್ನು ಸೃಷ್ಟಿ ಮಾಡುತ್ತಿದ್ದವು. ನಾವು ಸಹಸ್ರಾರು ನಮೂನೆಯ ವಾಸನೆಗಳನ್ನು ಗ್ರಹಿಸಬಲ್ಲೆವು ಹಾಗೂ ಅವುಗಳನ್ನು ಯಾವು ಯಾವುದು ಎಂದು ಗುರುತಿಸಬಲ್ಲೆವು. ಆದರೆ ಐಸ್ಮೆಲ್ ಸಾಧನದಲ್ಲಿ ಮೂಲಭೂತವಾಗಿ 128 ರಾಸಾಯನಿಕಗಳಿದ್ದವು. ಅವುಗಳ ಮಿಶ್ರಣದಿಂದ ಸುಮಾರು 2000 ದಷ್ಟು ಬೇರೆ ಬೇರೆ ವಾಸನೆಗಳನ್ನು ಸೃಷ್ಟಿಸಬಹುದಾಗಿತ್ತು. ಆದರೂ ಅದು ಮಾನವನು ಗ್ರಹಿಸಬಲ್ಲ ವಾಸನೆಗಳಿಗೆ ಹೋಲಿಸಿದರೆ ಅತಿ ಚಿಕ್ಕ ಸಂಖ್ಯೆಯಾಗಿತ್ತು. ಹಾಗಿದ್ದರೂ ಅದೇನೂ ಚಿಕ್ಕ ಸಾಧನೆಯಾಗಿರಲಿಲ್ಲ.
ಹಲವು ಕಾರಣಗಳಿಂದ ಡಿಜಿಸೆಂಟ್ ಟೆಕ್ನಾಲೋಜಿ ಕಂಪೆನಿ ಜಯ ಸಾಧಿಸಲಿಲ್ಲ ಹಾಗೂ ಐಸ್ಮೆಲ್ ಸಾಧನವು ಮಾರುಕಟ್ಟೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಬರಲಿಲ್ಲ. ಆದರೆ ಈ ಸಿದ್ಧಾಂತವನ್ನು ಬಳಸಿ ಬೇರೆ ಯಾರಾದರೂ ಇನ್ನೊಮ್ಮೆ ಪ್ರಯತ್ನಿಸಿ ಜಯಶಾಲಿಯಾಗುವ ಸಾಧ್ಯತೆಗಳಿವೆ.
–ಡಾ| ಯು.ಬಿ. ಪವನಜ
gadgetloka @ gmail . com
Be First to Comment