Press "Enter" to skip to content

ಗೂಢನಾಣ್ಯ ವಂಚನೆ

ಕ್ರಿಪ್ಟೊಕರೆನ್ಸಿ ಕ್ಷೇತ್ರದಲ್ಲಿ ನಡೆಯುವ ಮೋಸಗಳು

ಯಾವುದೇ ಹೊಸತು ಬಂದ ಕೂಡಲೇ ಕೆಲವರು ಅದಕ್ಕೆ ಹಾರುವುದು ಸಹಜ. ಪ್ರಪಂಚವೆಲ್ಲ ಮುಂದಕ್ಕೆ ಹೋಗುತ್ತದೆ, ನಾನು ಹಿಂದೆ ಉಳಿದುಬಿಡುತ್ತೇನೆ ಎಂಬ ಭಯವು ಜನರನ್ನು ಹಾಗೆ ಮಾಡಿಸುತ್ತದೆ. ಇದು ತಂತ್ರಜ್ಞಾನ ಇರಲಿ ಹೊಸ ಹಣಕಾಸಿನ ವ್ಯವಹಾರವಿರಲಿ ಎಲ್ಲೆಡೆ ನಡೆಯುತ್ತಿದೆ. ಹಣಕಾಸು ಮತ್ತು ತಂತ್ರಜ್ಞಾನ ಒಟ್ಟು ಸೇರಿದರೆ? ಅದಕ್ಕೆ ಉತ್ತಮ ಉದಾಹರಣೆ ಗೂಢನಾಣ್ಯ. ಇವುಗಳ ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿತ್ತು. ಎಲ್ಲಿ ಮನುಷ್ಯರಿರುತ್ತಾರೋ ಅಲ್ಲೆಲ್ಲ ಒಳ್ಳೆಯದು ಮತ್ತು ಕೆಟ್ಟದು ಇರುತ್ತವೆ. ಎಲ್ಲಿ ತನಕ ಮೋಸ ಹೋಗುವವರಿರುತ್ತಾರೋ ಅಲ್ಲಿ ತನಕ ಮೋಸ ಮಾಡುವವರಿರುತ್ತಾರೆ. ಈ ಲೇಖನದಲ್ಲಿ ಗೂಢನಾಣ್ಯದ ಕ್ಷೇತ್ರದಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆ ತಿಳಿದುಕೊಳ್ಳೋಣ.

ಗೂಢನಾಣ್ಯ ಅರ್ಥಾತ್ ಕ್ರಿಪ್ಟೋಕರೆನ್ಸಿ ಎಂದರೆ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿ ನಡೆಯುವ ಒಂದು ವಿಕೇಂದ್ರಿತ ವಿತ್ತ ವ್ಯವಸ್ಥೆ. ಇದು ಡಿಜಿಟಲ್ ಹಣ. ಇದಕ್ಕೆ ಮುದ್ರಿತ ನೋಟು, ಭೌತಿಕ ನಾಣ್ಯಗಳು ಇಲ್ಲ. ಈ ಹಣವನ್ನು ಇಟ್ಟುಕೊಳ್ಳಲು ಒಂದು ಡಿಜಿಟಲ್ ವ್ಯಾಲೆಟ್ (ಪರ್ಸ್ ಎನ್ನಬಹುದು) ಇರುತ್ತದೆ. ಡಿಜಿಟಲ್ ಹಣವನ್ನು ಒಂದು ವ್ಯಾಲೆಟ್‌ನಿಂದ ಇನ್ನೊಂದಕ್ಕೆ ಅಂತರಜಾಲದ ಮೂಲಕ ವರ್ಗಾಯಿಸಲಾಗುತ್ತದೆ. ಅದರ ಬೆಲೆಯನ್ನೂ ವರ್ಗಾಯಿಸಲಾಗುತ್ತದೆ. ಈ ಎಲ್ಲ ವ್ಯವಹಾರಗಳೂ ಅಂತರಜಾಲದ ಮೂಲಕವೇ ನಡೆಯುತ್ತದೆ. ತುಂಬ ಜನಪ್ರಿಯವಾದ ಗೂಢನಾಣ್ಯ ಎಂದರೆ ಬಿಟ್‌ಕಾಯಿನ್. ಒಮ್ಮೆ ಇದರ ಬೆಲೆ ಒಂದು ಬಿಟ್‌ಕಾಯಿನ್‌ಗೆ ಸುಮಾರು 52 ಲಕ್ಷ ರೂ. ತನಕ ಹೋಗಿತ್ತು. ಈಗಿನ ಬೆಲೆ ಸುಮಾರು 15 ಲಕ್ಷ ರೂ. ಅಂದರೆ ಬಿಟ್‌ಕಾಯಿನ್‌ಗೆ ಹಣ ಹಾಕಿದವರಿಗೆ ಭರ್ಜರಿ ನಷ್ಟ. ಇದನ್ನು ಮೋಸ, ವಂಚನೆ ಎನ್ನುವಂತಿಲ್ಲ. ಶೇರು ಮಾರುಕಟ್ಟೆ  ಕೂಡ ಇದೇ ರೀತಿ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಅದರಲ್ಲಿ ಹಣ ಹಾಕುವವರು ಈ ವಿಷಯ ಗೊತ್ತಿದ್ದೇ ಹಾಕಿರುತ್ತಾರೆ. ಆದರೆ ಗೂಢನಾಣ್ಯದ ಲೋಕದಲ್ಲಿ ಹಲವು ರೀತಿಯ ಮೋಸ ವಂಚನೆಗಳು ನಡೆಯುತ್ತಿವೆ . ಅವು ಯಾವುವು ಎಂದು ನೋಡೋಣ.

ಮೋಸದ ಕಿರುತಂತ್ರಾಂಶಗಳು (ಆಪ್‌)

ಗೂಢನಾಣ್ಯಗಳ ವ್ಯವಹಾರಕ್ಕೆ ಹಲವು ಜಾಲತಾಣಗಳು ಮತ್ತು ಆಪ್‌ಗಳಿವೆ. ಎಲ್ಲ ವಿಷಯಗಳಲ್ಲಿರುವಂತೆ ಇಲ್ಲೂ ಸಾಚಾ ಮತ್ತು ಮೋಸದ ಆಪ್‌ಗಳಿವೆ. ಈ ಮೋಸದ ನಕಲಿ ಆಪ್‌ಗಳೂ ಇತರೆ ಸಾಚಾ ಆಪ್‌ಗಳಂತೆಯೇ ಇರುತ್ತವೆ. ಅವುಗಳಲ್ಲೂ ಸಾಚಾ ಆಪ್‌ಗಳಂತೆ ಗೂಢನಾಣ್ಯಗಳನ್ನು ಇಟ್ಟುಕೊಳ್ಳಲು ವ್ಯಾಲೆಟ್ ಇರುತ್ತದೆ. ಈ ವ್ಯಾಲೆಟ್ ಅಂದರೆ ಡಿಜಿಟಲ್ ಪರ್ಸ್ ಎನ್ನಬಹುದು. ಗೂಢನಾಣ್ಯ ಎಂಬುದು ಒಂದು ಉದ್ದದ, ಬರಿಗಣ್ಣಿಗೆ ಅಸಂಬದ್ಧ ಎಂದು ಅನ್ನಿಸುವಂತಹ, ಪಠ್ಯಗಳ ಸರಪಣಿಯಾಗಿರುತ್ತದೆ. ಗೂಢನಾಣ್ಯದ ವ್ಯವಹಾರದಲ್ಲಿ ಬಳಸುವ ಪ್ರತಿ ವ್ಯಾಲೆಟ್‌ಗೂ ಒಂದು ಡಿಜಿಟಲ್ ವಿಳಾಸವಿರುತ್ತದೆ. ಆಪ್‌ಗಳಲ್ಲಿ ಬಳಕೆಯಾಗುವುದು ಆನ್‌ಲೈನ್ ವ್ಯಾಲೆಟ್. ಈ ವ್ಯಾಲೆಟ್‌ನಲ್ಲಿ ನೀವು ನಿಮ್ಮ ಗೂಢನಾಣ್ಯವನ್ನು ಸಂಗ್ರಹಿಸಿ ಇಡಬೇಕು. ಬೇಕಿದ್ದಾಗ ಮಾರಾಟ ಮಾಡಬಹುದು. ನಕಲಿ ಆಪ್‌ಗಳು ಈ ರೀತಿ ಹಣ ಇಟ್ಟುಕೊಂಡು ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತವೆ. ಅದರಲ್ಲಿ ಇಟ್ಟವರ ಹಣ ಮಂಗಮಾಯ.  

ಫಿಶಿಂಗ್ ವಂಚನೆ

ಅಂತರಜಾಲದ ಮೂಲಕ ಜನರನ್ನು ಸೆಳೆದು ಅವರಿಂದ ಗೌಪ್ಯ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕೆ ಫಿಶಿಂಗ್ ಎನ್ನುತ್ತಾರೆ. ಇದು ಸಾಮಾನ್ಯವಾಗಿ ಇಮೈಲ್ ಅಥವಾ ವಾಟ್ಸ್‌ಆಪ್ ಇತ್ಯಾದಿ ಸಂದೇಶದ ಮೂಲಕ ನಡೆಯುತ್ತದೆ. ಬಂದ ಸಂದೇಶದಲ್ಲಿ ಯಾವುದೋ ಕಾರಣ ನೀಡಿ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ ಎಂದಿರುತ್ತದೆ. ಉದಾಹರಣೆಗೆ ನಿಮ್ಮ ಗೂಢನಾಣ್ಯ ವ್ಯವಹಾರದ ವ್ಯಾಲೆಟ್‌ನ್ನು ಇನ್ನೊಮ್ಮೆ ಖಾತರಿಪಡಿಸಿಕೊಳ್ಲಲು ಇಲ್ಲಿ ಕ್ಲಿಕ್ ಮಾಡಿ ಎಂದಿರುತ್ತದೆ. ಅಲ್ಲಿ ಕ್ಲಿಕ್ ಮಾಡಿದಾಗ ಅದು ನಿಮ್ಮ ಲಾಗಿನ್, ಪಾಸ್‌ವರ್ಡ್ ಕೇಳುತ್ತದೆ. ಅಲ್ಲಿ ಅವನ್ನು ನೀಡಿದಿರೋ ಅಲ್ಲಿಗೆ ಮುಗಿಯಿತು. ನಿಮ್ಮ ಹಣವನ್ನು ಅವರು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಾರೆ. ಇದು ತುಂಬ ಸಾಮಾನ್ಯವಾದ ವಂಚನೆ. ಆದುದರಿಂದ ಅನುಮಾನಾಸ್ಪವಾದ ಆಪ್ ಅಥವಾ ಜಾಲತಾಣಗಳಲ್ಲಿ ನಿಮ್ಮ ಲಾಗಿನ್ ಪಾಸ್‌ವರ್ಡ್ ನೀಡಬೇಡಿ.

ಡಿಜಿಟಲ್ ಆಟ ಮತ್ತು ಸಂಗ್ರಹಗಳು

ಆನ್‌ಲೈನ್ ಆಟಗಳನ್ನು ಆಡುವವರಿಗೆ ಆಟದಲ್ಲಿಯ ಹಂತಗಳನ್ನು ದಾಟುವ ಅಂದರೆ ಹಂತಗಳನ್ನು ಗೆಲ್ಲುವ ಅತೀವ ಉತ್ಕಟತೆ ಇರುತ್ತದೆ. ಆಟದ ಪ್ರತಿ ಹಂತದಲ್ಲೂ ಏನೋ ಬಹುಮಾನ ದೊರೆಯುತ್ತದೆ. ಅವುಗಳನ್ನು ತಮ್ಮಂತೆಯೇ ಆಟದ ಹುಚ್ಚಿರುವವರಿಗೆ ತೋರಿಸಿ ಹೆಮ್ಮೆಪಟ್ಟುಕೊಳ್ಳುವ ಇರಾದೆ ಇರುತ್ತದೆ. ಅಂತಹವರನ್ನು ವಂಚಕರು ಆಮಿಶಗಳ ಮೂಲಕ ಸೆಳೆಯುತ್ತಾರೆ. ಯಾವುದೋ ಆಟದ ಯಾವುದೋ ಟ್ರೋಫಿಯನ್ನು ಆಮಿಶವಾಗಿ ತೋರಿಸುತ್ತಾರೆ. ಅದು ಬೇಕಿದ್ದರೆ ಇಂತಿಷ್ಟು ಬಿಟ್‌ಕಾಯಿನ್ ಕೊಡಬೇಕೆನ್ನುತ್ತಾರೆ. ಇದರ ಬಲೆಗೆ ಬಿದ್ದ ಕೆಲವರು ಗೂಢನಾಣ್ಯಗಳ ಮೂಲಕ ಹಣ ನೀಡಿ ಮೋಸಹೋಗುತ್ತಾರೆ.

ಹೊಸ ಹೊಸ ಗೂಢನಾಣ್ಯಗಳು

ಗೂಢನಾಣ್ಯಗಳು ಬ್ಲಾಕ್‌ಚೈನ್ ಎಂಬ ತಂತ್ರಜ್ಞಾನವನ್ನು ಬಳಸುತ್ತವೆ. ಇವೇ ಮಾದರಿಯಲ್ಲಿ ಇನ್ನೂ ಹಲವಾರಿವೆ. ಈ ತಂತ್ರಜ್ಞಾನ ಹೇಗಿದೆ ಎಂದರೆ ಯಾರು ಬೇಕಾದರೂ ತಮ್ಮದೇ ಆದ ಗೂಢನಾಣ್ಯ ಪ್ರಾರಂಭಿಸಬಹುದು. ಯಾವುದೇ ಕ್ಷೇತ್ರದಲ್ಲಿ ಮೊದಲು ನುಗ್ಗಿದವರಿಗೆ ಲಾಭ ಜಾಸ್ತಿ. ಇದೇ ತತ್ತ್ವವನ್ನು ಬಳಸಿ ಜನರನ್ನು ಸೆಳೆಯುತ್ತಾರೆ. ತಮ್ಮದೇ ಆದ ಹೊಚ್ಚ ಹೊಸ ಗೂಢನಾಣ್ಯ ಇದೆ. ಇದನ್ನು ಪ್ರಾರಂಭದಲ್ಲಿ ಅತಿ ಕಡಿಮೆ ಬೆಲೆಗೆ ನೀಡುತ್ತಿದ್ದೇವೆ, ನಂತರ ಬೆಲೆ ಜಾಸ್ತಿಯಾಗುತ್ತದೆ ಎಂದೆಲ್ಲ ನಂಬಿಸುತ್ತಾರೆ. ನಂಬಿ ಹಣ ಹಾಕಿದವರಲ್ಲಿ ಬಹುತೇಕ ಮಂದಿ ಹಣ ಕಳೆದುಕೊಂಡಿದ್ದಾರೆ. ಯಾಕೆಂದರೆ ಈ ಗೂಢನಾಣ್ಯಗಳಲ್ಲಿ ಬಹುತೇಕ ಮೋಸ. ಅವುಗಳು ಯಾವುದೇ ಬ್ಲಾಕ್‌ಚೈನ್ ಅಥವಾ ಅಂತಹುದೇ ತಂತ್ರಜ್ಞಾನವನ್ನು ಬಳಸುತ್ತಿಲ್ಲ. ಅವುಗಳಿಗೆ ಯಾವುದೇ ಅಧಿಕೃತ ಸ್ವೀಕೃತಿಯಿಲ್ಲ. ಅವುಗಳನ್ನು ಮಾರಲು ಆಗುವುದಿಲ್ಲ. ಅಂದರೆ ಹಾಕಿದ ಹಣ ಹೋಯಿತು. ಆದುದರಿಂದ ಹೆಸರೇ ಕೇಳದ ಗೂಢನಾಣ್ಯಗಳನ್ನು ಕೊಳ್ಳಲು ಹೋಗದಿರುವದೇ ಉತ್ತಮ.

ನೆಟ್‌ವರ್ಕ್ ಮಾರ್ಕೆಟಿಂಗ್

ನೆಟ್‌ವರ್ಕ್ ಮಾರ್ಕೆಟಿಂಗ್ ಕೇಳಿರಬಹುದು. ನೀವು ಮೊದಲು ಸ್ವಲ್ಪ ಹಣ ನೀಡಿ ಸದಸ್ಯರಾಗಬೇಕು. ನಂತರ ನಾಲ್ಕ, 8, 16 ಇತ್ಯಾದಿ ಸಂಖ್ಯೆಯಲ್ಲಿ ಸದಸ್ಯರನ್ನು ಮಾಡಬೇಕು. ಅವರು ನೀಡಿದ ಸದಸ್ಯತ್ವದಲ್ಲಿ ನಿಮಗೆ ಪಾಲು ಇರುತ್ತದೆ. ನಿಮಗೆ ಒಂದು ಕಿಟ್ ನಿಡಲಾಗುತ್ತದೆ. ಅದರಲ್ಲಿರುವ ವಸ್ತುಗಳನ್ನು ಮಾರಿದರೆ ಅದರ ಲಾಭ ನಿಮಗೆ. ಈಗ ಈ ಕಿಟ್‌ನಲ್ಲಿರುವ ವಸ್ತು ಭೌತಿಕ ವಸ್ತು ಆಗಿರದೆ ಬಿಟ್‌ಕಾಯಿನ್ ಮಾದರಿಯ ಯಾವುದೋ ಗೂಢನಾಣ್ಯ ಆಗಿದೆ ಎಂದಿಟ್ಟುಕೊಳ್ಳಿ. ಇದುವೇ ಗೂಢನಾಣ್ಯಗಳ ನೆಟ್‌ವರ್ಕ್ ಮಾರ್ಕೆಟಿಂಗ್. ಇಂದು ಒಂದು ರೀತಿಯ ಪಿರಮಿಡ್‌ನಂತೆ. ಅದರ ಕೆಳಭಾಗದಲ್ಲಿದ್ದವರು ಲಾಭ ಮಾಡುತ್ತಾರೆ. ಮೇಲುಭಾಗದಲ್ಲಿರುವವರು ಹಣ ಕಳೆದುಕೊಳ್ಳುತ್ತಾರೆ. ಇದರ ಕಡೆಗೆ ಗಮನ ಕೊಡದಿರುವುದೇ ಉತ್ತಮ.

ಇನ್ನೂ ರೀತಿಯ ಕೆಲವು ಮೋಸ ವಂಚೆನಗಳಿವೆ. ಒಂದು ಬಹುದೊಡ್ಡ ಹಗರಣ ಸುದ್ದಿಯಾಗಿತ್ತು. ಅವುಗಳ ಬಗೆಗೆ ವಿವರವಾಗಿ ಬರೆಯಲು ಪ್ರತ್ಯೇಕ ಲೇಖನವೇ ಬೇಕು.

ಡಾ| ಯು.ಬಿ. ಪವನಜ

gadgetloka @ gmail . com

Be First to Comment

Leave a Reply

Your email address will not be published. Required fields are marked *