ಸ್ವಾಮಿ ವಿವೇಕಾನಂದ ಮತ್ತು ವಿಜ್ಞಾನ

19ನೆಯ ಶತಮಾನದ ಕೊನೆಯ ಭಾಗ ಮತ್ತು 20ನೆಯ ಶತಮಾನದಲ್ಲಿ ವಿಜ್ಞಾನವು ಅತಿ ವೇಗವಾಗಿ ಬೆಳೆಯಿತು. ಐನ್‌ಸ್ಟೈನ್ ಅವರು ವಸ್ತು ಮತ್ತು ಶಕ್ತಿ ಇವುಗಳ ನಡುವಿನ ಸಂಬಂಧವನ್ನು 1905ರಲ್ಲಿ ಸಮೀಕರಣದ ಮೂಲಕ ತೋರಿಸಿಕೊಟ್ಟರು. ಆದರೆ ಇದಕ್ಕಿಂತ ಸುಮಾರು 15 ವರ್ಷಗಳ ಹಿಂದೆಯೇ ಸ್ವಾಮಿ ವಿವೇಕಾನಂದರು ಈ ಬಗ್ಗೆ ಬರೆದಿದ್ದರು. ಅವರಿಗೆ ತಾವು ಹೇಳಬೇಕಾದುದನ್ನು ವಿಜ್ಞಾನ ಮತ್ತು ಗಣಿತದ ಸಮೀಕರಣಗಳ ಮೂಲಕ ಹೇಳಲು ತಿಳಿದಿರಲಿಲ್ಲ. 1893ರಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕಾದ ಶಿಕಾಗೋ ನಗರದಲ್ಲಿ ಪ್ರಪಂಚದ ಹಲವು ದೇಶಗಳ ಪ್ರತಿನಿಧಿಗಳು ಸೇರಿ ನಡೆಸಿದ ವಿಶ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿ ಜಗತ್ತನ್ನೇ ಚಕಿತಗೊಳಿಸಿದರು. ಅವರು ಅಲ್ಲಿ ಮಾತನಾಡಿದ್ದು ಕೆಲವೇ ನಿಮಿಷಗಳಾಗಿತ್ತು. ಆ ನಂತರ ಅವರು ಅಲ್ಲಿ ಹಲವು ಸಭೆಗಳಲ್ಲಿ ಮಾತನಾಡಿದರು. ಅವರ ಚುಂಬಕ ವ್ಯಕ್ತಿತ್ವ ಮತ್ತು ಅವರು ಮಾತನಾಡುವಾಗ, ಅವರಿಗೆ ವಿಷಯದ ಬಗ್ಗೆ ಇದ್ದ ಪ್ರಭುತ್ವ, ವಿಷಯ ಮಂಡನೆಯಲ್ಲಿದ್ದ ತಾರ್ಕಿಕತೆ, ಮತ್ತು ಅವುಗಳು ಎಲ್ಲರಿಗೂ ಅರ್ಥವಾಗುವಂತೆ ಮಾತನಾಡಿದ ರೀತಿಯಿಂದಾಗಿ ಅವರ ಸಭೆಗಳು ತುಂಬ ಜನಪ್ರಿಯವಾಗಿದ್ದವು. ಈ ಸಭೆಗಳಲ್ಲಿ ಆ ಕಾಲದ ಹಲವು ಪ್ರಖ್ಯಾತ ವಿಜ್ಞಾನಿಗಳೂ ಭಾಗವಹಿಸುತ್ತಿದ್ದರು.

ಸ್ವಾಮಿ ವಿವೇಕಾನಂದರು ಮಂಡಿಸುತ್ತಿದ್ದ ಸಾಂಖ್ಯಶಾಸ್ತ್ರದ ವಿವರಗಳು ಅವರನ್ನು ಆಕರ್ಶಿಸಿದ್ದವು (ಭಗವದ್ಗೀತೆಯ ಎರಡನೆ ಅಧ್ಯಾಯದ ಹೆಸರೇ ಸಾಂಖ್ಯಯೋಗ). ವಿವೇಕಾನಂದರು ವಿಶ್ವದ ವಿದ್ಯಮಾನಗಳನ್ನು ಭಾರತೀಯ ವೇದಾಂತದ ತಳಹದಿಯಲ್ಲಿ ವಿವರಿಸಿದ್ದರು. ಸೂಕ್ಷ್ಮ ಜಗತ್ತು ಮತ್ತು ಕಣ್ಣಿಗೆ ಕಾಣುವ ಜಗತ್ತು, ಇವುಗಳನ್ನು ಒಳಗೊಂಡ ಬ್ರಹ್ಮಾಂಡ ಎಲ್ಲವೂ ಒಂದೇ ನಮೂನೆಯ ಹಂದರವನ್ನು ಹೊಂದಿವೆ ಎಂಬದು ಅವರ ವಾದವಾಗಿತ್ತು. ಅಂದರೆ ಸೂಕ್ಷ್ಮಾತಿಸೂಕ್ಷ್ಮ ವಸ್ತುವೂ ಗ್ರಹ ತಾರೆಗಳೂ ಒಂದೇ ನಮೂನೆಯ ರಚನೆ ಮತ್ತು ವಿನ್ಯಾಸವನ್ನು ಹೊಂದಿವೆ. ವಸ್ತು ಮತ್ತು ಚೈತನ್ಯ ಎರಡೂ ಒಂದೇ. ಅವು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆ ಹೊಂದಬಲ್ಲವು. ಅವು ಬೇರೆ ಬೇರೆ ಅಲ್ಲ ಅಂದು ವಿವೇಕಾನಂದರು ಹೇಳಿದರು. ಇದನ್ನು ಸಮೀಕರಣದ ರೂಪದಲ್ಲಿ ವಿವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅವರ ಸಭೆಗೆ ಬಂದಿದ್ದ ಖ್ಯಾತ ವಿಜ್ಞಾನಿ ನಿಕೊಲಾ ಟೆಸ್ಲಾ ಅವರೊಡನೆ ವಿವೇಕಾನಂದರು ಈ ಬಗ್ಗೆ ವಿವರವಾಗಿ ಚರ್ಚಿಸಿದರು. ತಮ್ಮ ಆಲೋಚನೆಯನ್ನು ವಿಜ್ಞಾನದ ಚೌಕಟ್ಟಿನಲ್ಲಿ ಅಂದರೆ ಸಮೀಕರಣಗಳ ಮೂಲಕ ಸಾಧಿಸಲು ವಿವೇಕಾನಂದರು ಟೆಸ್ಲಾ ಅವರನ್ನು ಕೇಳಿಕೊಂಡರು. ಆದರೆ ಟೆಸ್ಲಾ ಅವರಿಗೆ ಅದನ್ನು ಮಾಡಿ ತೋರಿಸಲು ಆಗಿರಲಿಲ್ಲ. ವಿವೇಕಾನಂದರ ದೇಹತ್ಯಾಗದ ನಂತರ, 1905ರಲ್ಲಿ ಅದನ್ನು ಐನ್‌ಸ್ಟೈನ್ ಮಾಡಿ ತೋರಿಸಿದರು. ಅದುವೇ ವಿಶ್ವವಿಖ್ಯಾತ E=mc2 ಎಂಬ ಸಮೀಕರಣ.

ಸೂಕ್ಷ್ಮ ಜಗತ್ತು ಮತ್ತು ಕಣ್ಣಿಗೆ ಕಾಣುವ ಜಗತ್ತು ಎರಡೂ ಒಂದೇ ನಮೂನೆಯ ರಚನೆ ಮತ್ತು ವಿನ್ಯಾಸವನ್ನು ಹೊಂದಿವೆ ಎಂದು ವಿವೇಕಾನಂದರು ಹೇಳಿದ್ದರು. ಹಲವು ದಶಕಗಳ ನಂತರ ಇದನ್ನು ಪಾಶ್ಚಾತ್ಯ ವಿಜ್ಞಾನಿಗಳು ಸಾಧಿಸಿ ತೋರಿಸಿದರು. ಪ್ರತಿ ವಸ್ತುವೂ ಪರಮಾಣುವಿನಿಂದ ಮಾಡಲ್ಪಟ್ಟಿದೆ. ಅದರಲ್ಲಿ ಪ್ರೋಟೋನ್, ನ್ಯೂಟ್ರಾನ್, ಇಲೆಕ್ಟ್ರಾನ್‌ಗಳಿವೆ. ಪ್ರೋಟೋನ್ ಮತ್ತು ನ್ಯೂಟ್ರಾನ್‌ಗಳಿಂದ ಆದ ಕೇಂದ್ರವನ್ನು ಇಲೆಕ್ಟ್ರಾನ್‌ಗಳು ಸುತ್ತುತ್ತಿವೆ ಎಂದು ವೈಜ್ಞಾನಿಕವಾಗಿ ತೋರಿಸಲಾಯಿತು. ನಮ್ಮ ಸೌರವ್ಯೂಹದ ರಚನೆಯೂ ಹೀಗೆಯೇ ಇದೆ. ಅತಿ ಸೂಕ್ಷ್ಮ ಜಗತ್ತೂ, ಗ್ರಹ ತಾರೆಗಳಿಂದಾದ ಜಗತ್ತೂ ಒಂದೇ ವಿನ್ಯಾಸವನ್ನು ಹೊಂದಿವೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದು ಹಲವು ದಶಕಗಳ ನಂತರ ನಿಜ ಎಂದು ಸಾಧಿಸಲಾಯಿತು. ವಿವೇಕಾನಂದರು ವೃತ್ತಿನಿರತ ವಿಜ್ಞಾನಿಯಾಗಿರಲಿಲ್ಲ. ಆದರೆ ಓರ್ವ ವಿಜ್ಞಾನಿ ಆಲೋಚನೆ ಮಾಡುವ ರೀತಿಯಲ್ಲೇ ಅವರು ಆಲೋಚಿಸುತ್ತಿದ್ದರು. ಅವರು ಹಲವು ಭಾರತೀಯ ಋಷಿಮುನಿಗಳಂತೆಯೇ ಧ್ಯಾನದ ಮೂಲಕವೇ ಹಲವು ವಿಷಯಗಳನ್ನು, ಸತ್ಯವನ್ನು, ಮನಗಂಡಿದ್ದರು. ಅದನ್ನೇ ಅವರು ಹೇಳಿದ್ದರು. ಹಲವು ದಶಕಗಳ ನಂತರ ವಿಜ್ಞಾನವು ವಿವೇಕಾನಂದರ ಹೇಳಿಕೆಗಳನ್ನು ಪ್ರಯೋಗಗಳ ಮೂಲಕ ಸಾಧಿಸಿ ತೋರಿಸಿತು.

ಸ್ವಾಮಿ ವಿವೇಕಾನಂದರು ಏನನ್ನೂ ಹೊಸದಾಗಿ ಹೇಳಿರಲಿಲ್ಲ. ಭಾರತೀಯ ವೇದಾಂತವನ್ನೇ ಅವರು ಮತ್ತೊಮ್ಮೆ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಹೇಳಿದ್ದರು. ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತೀಯ ವೇದಾಂತ, ಉಪನಿಷತ್ತು, ಭಗವದ್ಗೀತೆ, ಇವುಗಳ ಸಾರವನ್ನು ಮತ್ತೊಮ್ಮೆ ಸರಳ ಭಾಷೆಯಲ್ಲಿ ಹಲವು ದೃಷ್ಟಾಂತಗಳ ಮೂಲಕ ವಿವೇಕಾನಂದರು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದರು. ಇವೆಲ್ಲ ಒಬ್ಬ ವಿಜ್ಞಾನಿ ಮಾಡುವ ಕೆಲಸಗಳು. ಯಾವುದನ್ನೂ ಪ್ರಾಯೋಗಿಕವಾಗಿ ಮಾಡಿ ಅನುಭವಿಸದ ಮೂಲಕ ನಂಬಬೇಡ ಎಂದು ವಿವೇಕಾನಂದರು ಹೇಳಿದ್ದರು. ವಿಜ್ಞಾನವೂ ಅದನ್ನೇ ಹೇಳುತ್ತದೆ.    

ಪಾಶ್ಚಾತ್ಯ ವಿಜ್ಞಾನವು ಈಥರ್ ಎಂಬ ವಸ್ತುವೊಂದರ ಬಗ್ಗೆ ಹೇಳುತ್ತದೆ. ಇದು ಗ್ರಹಗಳ ಮಧ್ಯೆ ಇದೆ. ಇದರ ಮೂಲಕ ಬೆಳಕು ಚಲಿಸುತ್ತದೆ ಎಂಬುದೊಂದು ನಂಬಿಕೆ ವಿಜ್ಞಾನಿಗಳಲ್ಲಿತ್ತು. ಇದನ್ನೇ ನಮ್ಮ ಪಂಚಭೂತಗಳಲ್ಲಿ ಒಂದಾದ ಆಕಾಶಕ್ಕೆ ಸರಿಸಮಾನ ಎಂದು ನಂಬಲಾಗಿತ್ತು. 1895ರಲ್ಲಿ ಸ್ವಾಮಿ ವಿವೇಕಾನಂದರು ಈಥರ್ ಬಗ್ಗೆ ಒಂದು ಲೇಖನವನ್ನು ಬರೆದರು. ಅದು ನ್ಯೂಯಾರ್ಕ್ ಮೆಡಿಕಲ್ ಟೈಂಸ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈಥರ್ ಎಂಬುದು ಹೇಗೆ ನಮ್ಮ ಆಕಾಶ ತತ್ತ್ವವನ್ನು ಹೋಲುವುದಿಲ್ಲ, ಈಥರ್ ಎಂಬದು ಅವರ ಆಗಿನ ವಿವರಗಳ ಪ್ರಕಾರ ಇರಲು ಸಾಧ್ಯವೇ ಇಲ್ಲ, ಎಂದು ವಿವೇಕಾನಂದರು ತಮ್ಮ ಲೇಖನದಲ್ಲಿ ಪ್ರತಿಪಾದಿಸಿದ್ದರು. 1920ರಲ್ಲಿ ಐನ್‌ಸ್ಟೈನ್ ಈ ಈಥರ್ ಎಂಬ ಸಿದ್ಧಾಂತವನ್ನು ಸುಳ್ಳು ಎಂದು ಹೇಳಿದರು. ಅಂದರೆ ವಿವೇಕಾನಂದರು ತಮ್ಮ ಕಾಲದ ಬಹುತೇಕ ಜನರು ಮಾತ್ರವಲ್ಲ ವಿಜ್ಞಾನಿಗಳಿಂದಲೂ ಸುಮಾರು ದಶಕಗಳಷ್ಟು ಮುಂದಿದ್ದರು.

ಡಾರ್ವಿನನ ವಿಕಾಸವಾದ ಎಲ್ಲರಿಗೂ ಗೊತ್ತು ತಾನೆ? ಎಲ್ಲ ಪ್ರಾಣಿಗಳೂ ನಿಧಾನವಾಗಿ ವಿಕಾಸವಾದವು. ಶಕ್ತಿವಂತವಾದುದು ಉಳಿಯಿತು, ಉಳಿದವು ಅಳಿದವು, ಎಂಬುದು ಡಾರ್ವಿನನ ವಿಕಾಸವಾದದ ಸಾರಾಂಶ. ಆದರೆ ವಿವೇಕಾನಂದರು ಇದನ್ನು ಅಲ್ಲಗಳೆಯುತ್ತಾರೆ. “ಮನುಷ್ಯ ಸಂಪೂರ್ಣವಾಗಿ ವಿಕಾಸವಾದದ ಮೂಲಕ ಆದವನಲ್ಲ. ಪ್ರತಿ ಕ್ರಿಯೆಗೂ ವಿರುದ್ಧ ಕ್ರಿಯೆ ಇದೆ. ವಿಕಾಸವೂ ಅದರ ವಿರುದ್ಧ ಪ್ರಕ್ರಿಯೆಗಳೂ ಪ್ರಕೃತಿಯಲ್ಲಿ ನಡೆಯುತ್ತಲೇ ಇವೆ. ಆದುದರಿಂದ ಮಾನವನ ಉಗಮ ಕೇವಲ ವಿಕಾಸವಾದದ ಮೂಲಕ ಆಗಿದ್ದಲ್ಲ” ಎಂದು ವಿವೇಕಾನಂದರು ಹೇಳಿದ್ದರು. ಈಗ ಇದನ್ನು ವಿಜ್ಞಾನಿಗಳೂ ಒಪ್ಪುತ್ತಾರೆ. ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳಾದ ಕ್ರಿಶ್ಚಿಯನ್ ಡೆ ದುವೆ ಮತ್ತು ಬ್ರಿಯನ್ ಗುಡ್‌ವಿನ್ ಅವರ ಸಂಶೋಧನೆಗಳ ಪ್ರಕಾರ ಡಾರ್ವಿನನ ವಿಕಾಸವಾದ ಚಿಕ್ಕಚಿಕ್ಕ ವಿಕಾಸಗಳಿಗೆ ಅನ್ವಯವಾಗುತ್ತದಷ್ಟೆ ವಿನಾ ಸಂಪೂರ್ಣವಾಗಿ ಜಗತ್ತಿನಲ್ಲಿರುವ ಎಲ್ಲ ಪ್ರಾಣಿಸಂಕುಲಗಳಿಗೆ ಅನ್ವಯವಾಗುವುದಿಲ್ಲ.

ಸ್ವಾಮಿ ವಿವೇಕಾನಂದರ ಚಿಂತನೆಗಳು, ಆಲೋಚನಾ ಧಾಟಿಗಳು ಇಂದಿಗೂ ಪ್ರಸ್ತುತವೇ. ಅದರಲ್ಲೂ ವಿಜ್ಞಾನ ಮತ್ತು ಶಿಕ್ಷಣದ ಬಗ್ಗೆ ಅವರು ಹೇಳಿದುದನ್ನು ಅಳವಡಿಸಿಕೊಂಡರೆ ದೇಶಕ್ಕೆ ಅತ್ಯುತ್ತಮ.

ಭಾರತೀಯ ವಿಜ್ಞಾನ ಸಂಸ್ಥೆ ರೂಪುಗೊಂಡ ಕಥೆ

1893ರ ಬೇಸಿಗೆ ಕಾಲ. ಇಬ್ಬರು ಭಾರತೀಯರು ಹಡಗೊಂದರಲ್ಲಿ ಕೆನಡಾಕ್ಕೆ ಸಹಪ್ರಯಾಣಿಕರಾಗಿದ್ದರು. ಅವರಲ್ಲೊಬ್ಬ 30ರ ಆಸುಪಾಸಿನ ಹರೆಯದ ಸಂನ್ಯಾಸಿ. ಇನ್ನೋರ್ವ ಶ್ರೀಮಂತ  ಉದ್ಯೋಗಪತಿ. ಪ್ರಯಾಣ ಹಲವು ದಿವಸಗಳ ಕಾಲ ಇದ್ದ ಕಾರಣ ಅವರಿಗೆ ಹಲವು ಸಲ ಭೇಟಿಯಾಗಿ ಮಾತುಕತೆ ನಡೆಸುವ ಸಂದರ್ಭಗಳು ಒದಗಿ ಬಂದಿದ್ದವು. ಹಾಗೆ ಮಾತನಾಡುವಾಗ ಕೇವಲ ಕಚ್ಚಾವಸ್ತುಗಳನ್ನು ನಿರ್ಯಾತ ಮಾಡುವ ಬದಲು ಭಾರತದಲ್ಲೇ ಅಂತಿಮ ಉತ್ಪನ್ನಗಳನ್ನು ತಯಾರಿಸಿದರೆ ಉತ್ತಮವಲ್ಲವೇ ಎಂದು ಸಂನ್ಯಾಸಿಯು ಉದ್ಯೋಗಪತಿಗೆ ಪ್ರಶ್ನಿಸಿದ್ದರು. ಈ ರೀತಿ ಮಾಡುವುದರಿಂದ ಜನರಿಗೆ ಉದ್ಯೋಗ ದೊರೆಯುತ್ತದೆ, ದೇಶವು ಸ್ವಾವಲಂಬಿಯಾಗುತ್ತದೆ ಮತ್ತು ಸುಧಾರಣೆಯತ್ತ ಸಾಗುತ್ತದಲ್ಲವೇ ಎಂದು ಪ್ರಶ್ನಿಸಿದ್ದರು. ಆ ಸಂನ್ಯಾಸಿಯು ಕೇವಲ ವಿಜ್ಞಾನ ಮಾತ್ರವಲ್ಲ ತಂತ್ರಜ್ಞಾನದ ಬಗ್ಗೆಯೂ ಮಾತನಾಡಿದ್ದರು. ಭಾರತೀಯರನ್ನು ಈ ಕ್ಷೇತ್ರಗಳಲ್ಲಿ ಪರಿಣತರನ್ನಾಗಿಸಬೇಕು ಎಂದು ಚರ್ಚಿಸಿದ್ದರು. ಆಗ ಭಾರತದಲ್ಲಿದ್ದುದು ಬ್ರಿಟಿಷ್ ಸರಕಾರವಾಗಿತ್ತು. ಆದುದರಿಂದ ಇದನ್ನು ಕಾರ್ಯಗತ ಮಾಡುವುದು ಸುಲಭವಲ್ಲ ಎಂಬ ಅರಿವು ಇಬ್ಬರಿಗೂ ಇತ್ತು. ಆ ಉದ್ಯೋಗಪತಿ ಜೆ. ಎನ್. ಟಾಟಾ ಹಾಗೂ ಆ ಸಂನ್ಯಾಸಿ ಸ್ವಾಮಿ ವಿವೇಕಾನಂದ ಆಗಿದ್ದರು.

ಐದು ವರ್ಷಗಳ ನಂತರ ಟಾಟಾ ಅವರು ಸ್ವಾಮಿ ವಿವೇಕಾನಂದರಿಗೆ ಒಂದು ಪತ್ರ ಬರೆದರು. ಅದರಲ್ಲಿ ಅವರು ಈ ಕನಸನ್ನು ನನಸಾಗಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಭಾರತದಲ್ಲಿ ಒಂದು ವಿಜ್ಞಾನ ಸಂಶೋಧನಾ ಸಂಸ್ಥೆಯನ್ನು ಹುಟ್ಟುಹಾಕುವ ಬಗ್ಗೆ ಪ್ರಸ್ತಾಪಿಸಿದ್ದರು. ಅದರಲ್ಲಿ ವಿಜ್ಞಾನ ಮಾತ್ರವಲ್ಲದೆ ಮಾನವಿಕ ಶಾಸ್ತ್ರಗಳ ಬಗೆಗೂ ಅಧ್ಯಯನ ಮತ್ತು ಸಂಶೋಧನೆಗಳು ನಡೆಯಬೇಕು ಎಂದು ಅವರು ಆಶಿಸಿದ್ದರು. ಇದು ಕೇವಲ ವಿಜ್ಞಾನ ಮಾತ್ರವಲ್ಲ, ಭಾರತೀಯ ಪರಂಪರೆ ಮತ್ತು ಮೌಲ್ಯಗಳನ್ನೂ ಜೊತೆಜೊತೆಯಾಗಿ ಸಾಗಿಸಬೇಕು. ಇಂತಹ ಒಂದು ಕೆಲಸಕ್ಕೆ ಮುಂದಾಳತ್ವ ವಹಿಸಲು ನೀವೇ ತಕ್ಕ ವ್ಯಕ್ತಿ ಎಂದು ಅವರು ಸ್ವಾಮಿ ವಿವೇಕಾನಂದರಿಗೆ ಆಹ್ವಾನಿಸಿದ್ದರು.

ಟಾಟಾ ಅವರು ಈ ಕೆಲಸಕ್ಕೆ ಆ ಕಾಲದ ಸುಮಾರು 30 ಲಕ್ಷ ರೂಪಾಯಿಯಷ್ಟು ಹಣವನ್ನು ತೆಗೆದಿಟ್ಟಿದ್ದರು. ಈ ಸಂಶೋಧನಾ ಸಂಸ್ಥೆಯು ಭಾರತದಲ್ಲಿ ಪ್ರಚಲಿತವಾಗಿದ್ದ ಹಲವು ಕಾಯಿಲೆಗಳಿಗೆ ಔಷಧ ಕಂಡುಹಿಡಿಯುವುದು, ಭಾರತೀಯ ಪರಿಸರಕ್ಕೆ ಅಗತ್ಯವಾದ ರಾಸಾಯನಿಕ ವಸ್ತುಗಳ ಬಗ್ಗೆ ಸಂಶೋಧನೆ ಮಾಡುವುದು, ಮರೆತು ಹೋದ ಭಾರತೀಯ ಇತಿಹಾಸದ ಬಗ್ಗೆ ಸರಿಯಾದ ಸಂಶೋಧನೆ ಮಾಡಿ ದಾಖಲೀಕರಣ ಮಾಡುವುದು –  ಇವು ಅವರ ಉದ್ದೇಶ ಆಗಿತ್ತು. ಸ್ವಾಮಿ ವಿವೇಕಾನಂದರಿಗೆ ತಮ್ಮದೇ ಆದ ಹಲವು ಕೆಲಸಗಳ ಒತ್ತಡವಿದ್ದುದರಿಂದ ಈ ಕೆಲಸದ ಮುಂದಾಳತ್ತವ ವಹಿಸಲು ಆಗಲಿಲ್ಲ.

ಜೆ. ಎನ್. ಟಾಟಾರವರು ಆಗಿನ ವೈಸ್‌ರಾಯ್ ಆಗಿದ್ದ ಕರ್ಜನ್ ಅವರಿಗೆ ಈ ಬಗ್ಗೆ ಪತ್ರ ಬರೆದರು. ವೈಸ್‌ರಾಯ್ ಅವರು ಈ ಆಲೋಚನೆ ಪ್ರಯೋಜನಕ್ಕಿಲ್ಲದ್ದು ಎಂದು ಬದಿಗೆ ಸರಿಸಿದರು. ಸಂಶೋಧನೆ ಮಾಡುವಂತಹ ಬೌದ್ಧಿಕ ಮಟ್ಟ ಭಾರತೀಯರಿಗೆ ಇಲ್ಲ ಎಂಬುದು ಅವರ ತೀರ್ಮಾನವಾಗಿತ್ತು. ಸ್ವಾಮಿ ವಿವೇಕಾನಂದರ ಶಿಷ್ಯೆ ಸೋದರಿ ನಿವೇದಿತ ಅವರು ಈ ವಿಷಯವನ್ನು ಮುಂದಕ್ಕೆ ತೆಗದುಕೊಂಡು ಹೋಗಲು ನಿರ್ಧರಿಸಿದರು. ಅವರು ಸರಕಾರಕ್ಕೆ ಈ ಬಗ್ಗೆ ಪತ್ರ ಬರೆದರು. ಸರಕಾರವು 1900ರಲ್ಲಿ ಸರ್ ರಾಮ್ಸೇ ಎಂಬ ಖ್ಯಾತ ವಿಜ್ಞಾನಿಗೆ ಇದರ ಬಗ್ಗೆ ವರದಿ ಸಲ್ಲಿಸಲು ಕೇಳಿಕೊಂಡಿತು. ರಾಮ್ಸೇ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಕೆಲವು ವರ್ಷಗಳ ನಂತರ ಅವರಿಗೆ ಜಡ ಅನಿಲಗಳ ಸಂಶೋಧನೆಗೆ  ನೋಬೆಲ್ ಪುರಸ್ಕಾರ ಬಂದಿತ್ತು. ಆದರೆ ಅವರೂ ತಮ್ಮ ವಸಾತುಶಾಹಿ ಧೋರಣೆಯಿಂದ ಹೊರಗೆ ಬಂದಿರಲಿಲ್ಲ. ಇಂತಹ ಒಂದು ಸಂಶೋಧನಾ ಸಂಸ್ಥೆಯನ್ನು ಭಾರತದಲ್ಲಿ ಹುಟ್ಟುಹಾಕುವುದರ ವಿರೋಧವಾಗಿ ಅವರ ವರದಿ ಇತ್ತು. ಬ್ರಿಟಿಷರು ಟಾಟಾ ಅವರಿಗೆ ನಿಮ್ಮ 30 ಲಕ್ಷ ಕೊಟ್ಟಿಡಿ. ಮುಂದಕ್ಕೆ ನೋಡೋಣ ಎಂದು ಹೇಳಿ ಕೈ ತೊಳೆದುಕೊಂಡರು. ಅಲ್ಲಿಗೆ ಸ್ವಾಮಿ ವಿವೇಕಾನಂದರ ಕನಸು ಭಗ್ನವಾದಂತಾಯಿತು.

ಆದರೆ ಸೋದರಿ ನಿವೇದಿತಾ ಅವರು ತಮ್ಮ ಪ್ರಯತ್ನ ನಿಲ್ಲಿಸಲಿಲ್ಲ. ಅವರು ಇಂಗ್ಲೆಂಡ್ ಮತ್ತು ಅಮೇರಿಕಾ ದೇಶಗಳಲ್ಲಿ ಹಲವರನ್ನು ಸಂಪರ್ಕಿಸಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಅವರ ಸಹಾಯಕ್ಕಾಗಿ ಯಾಚಿಸಿದರು. ಅವರಲ್ಲೊಬ್ಬ ಪ್ರಮುಖರು ಅಮೇರಿಕಾ ದೇಶದ ವಿಲಿಯಂ ಜೇಮ್ಸ್. ಅವರು ಸ್ವಾಮಿ ವಿವೇಕಾನಂದರನ್ನು ಭೇಟಿಯಾಗಿ ಅವರಿಂದ ಪ್ರಭಾವಿತರಾಗಿದ್ದರು. ಕೆಲವೇ ವರ್ಷಗಳಲ್ಲಿ ಸ್ವಾಮಿ ವಿವೇಕಾನಂದರೂ, ಟಾಟಾ ಅವರೂ ವಿಧಿವಶರಾದರು. ಆದರೆ ಸೋದರಿ ನಿವೇದಿತ ತಮ್ಮ ಪ್ರಯತ್ನ ನಿಲ್ಲಿಸಲಿಲ್ಲ. 1909ರಲ್ಲಿ ವೈಸ್‌ರಾಯ್ ಆಗಿ ಬಂದ ಲಾರ್ಡ್ ಮಿಂಟೋ ಅವರು ಈ ಯೋಜನೆಗೆ ಸಮ್ಮತಿಸಿದರು. ಆದರೆ ಅಂತಿಮವಾಗಿ ಅದು ಸ್ವಾಮಿ ವಿವೇಕಾನಂದ ಮತ್ತು ಟಾಟಾ ಅವರು ಯೋಚಿಸಿದಂತೆ ಅದು ವಿಜ್ಞಾನ ಮತ್ತು ಭಾರತೀಯ ಪರಂಪರೆಯ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ಮಾಡುವ ಬದಲು ಕೇವಲ ವಿಜ್ಞಾನಕ್ಕೆ ಸೀಮಿತವಾಗಿತ್ತು. ಟಾಟಾ ಅವರು ಈ ಸಂಶೋಧನಾ ಸಂಸ್ಥೆ ಮುಂಬಯಿಯಲ್ಲಿರಬೇಕು ಎಂದು ಆಶಿಸಿದ್ದರು. ಮೈಸೂರಿನ ಮಹಾರಾಜ ಕೃಷ್ಣರಾಜ ಒಡೆಯರು ಇದಕ್ಕೆ 370 ಎಕ್ರೆ ಸ್ಥಳವನ್ನು ಬೆಂಗಳೂರಿನಲ್ಲಿ ನೀಡಿದುದರಿಂದ ಇದು ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂತು. ಆರಂಭದಲ್ಲಿ ಇದರ ಹೆಸರು ಟಾಟಾ ವಿಜ್ಞಾನ ಸಂಸ್ಥೆ ಎಂದಿತ್ತು. ನಂತರ ಅದರ ಹೆಸರು ಭಾರತೀಯ ವಿಜ್ಞಾನ ಸಂಸ್ಥೆ ಎಂದಾಯಿತು. ಇಂದಿಗೂ ಬೆಂಗಳೂರಿನ ಮಲ್ಲೇಶ್ವರದ ಸುತ್ತಮುತ್ತಲಿನ ಹಳಬರು ಅದನ್ನು ಟಾಟಾ ಇನ್‌ಸ್ಟಿಟ್ಯೂಟ್ ಎಂದೇ ಕರೆಯುತ್ತಾರೆ. ಹೀಗೆ ಸ್ವಾಮಿ ವಿವೇಕಾನಂದರ ದೂರಗಾಮಿ ದೃಷ್ಟಿ ಮತ್ತು ವಿಜ್ಞಾನದ ಮೇಲೆ ಅವರಿಗೆ ಆಸಕ್ತಿಯಿಂದಾಗಿ ಭಾರತದ ಅತ್ಯುತ್ತಮ ವಿಜ್ಞಾನ ಸಂಸ್ಥೆ ಅಸ್ತಿತ್ವಕ್ಕೆ ಬಂತು.      

-ಡಾ| ಯು.ಬಿ. ಪವನಜ

2 Responses to ಸ್ವಾಮಿ ವಿವೇಕಾನಂದ ಮತ್ತು ವಿಜ್ಞಾನ

  1. ರಾಮಚಂದ್ರ ಭಟ್

    ತುಂಬಾ ಅರ್ಥಪೂರ್ಣ ಸಕಾಲಿಕ ಲೇಖನ. ಇಂತಹ ಮಹತ್ವದ ಐತಿಹಾಸಿಕ ವಿಚಾರಗಳು ನಮಗೆ ತಿಳಿದೇ ಇರಲಿಲ್ಲ.
    ವಿಜ್ಞಾನಿಗಳೂ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ತಮ್ಮದೇ ಛಾಪು ಮೂಡಿಸಿರುವ ಪವನಜ ಸರ್ ರವರಿಗೆ ಧನ್ಯವಾದಗಳು

  2. ಸತ್ಯನಾರಾಯಣ ಎ

    ರಾಷ್ಟ್ರೀಯ ಯುವ ದಿನವಾಗಿರುವ ಜನವರಿ ೧೨ರ ಇಂದು ಪ್ರಕಟವಾಗಿರುವ ಈ ಲೇಖನವು ಆಧ್ಯಾತ್ಮ ಮತ್ತು ವಿಜ್ಞಾನ ಇವುಗಳ ನಡುವಿನ ಸಂಬಂಧಗಳನ್ನು ಉತ್ತಮವಾಗಿ ನಿರೂಪಿಸಿದೆ. ಹೊಸ ಯುಗದ ಆಧ್ಯಾತ್ಮ ಮತ್ತು ವೈಜ್ಞಾನಿಕ ಸತ್ಯಗಳ ಕುರಿತಾಗಿ ಒಂದು ಉತ್ತಮ ಲೇಖನ ಇದಾಗಿದೆ. ಲೇಖನ ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು .

Leave a Reply