ಸಾಹಿತಿಗಳೇ, ಕನ್ನಡವ ಸಾಯುತಿ ಮಾಡಬೇಡಿ

ಡಾ| ಯು. ಬಿ. ಪವನಜ

[೨೦೧೧ರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಕನ್ನಡಪ್ರಭ ಪತ್ರಿಕೆ ಹೊರತಂದ ವಿಶೇಷ ಪುರವಣಿಯಲ್ಲಿ ಪ್ರಕಟಿತ ಲೇಖನ]

ಮತ್ತೊಮ್ಮೆ ಸಾಹಿತ್ಯ ಸಮ್ಮೇಳನ ಬಂದಿದೆ. ಪತ್ರಿಕೆಗಳಲ್ಲಿ ಪುರವಣಿಗಳು ಬರುತಿವೆ. ಕನ್ನಡ ಉಳಿಯಲು ಏನು ಮಾಡಬೇಕು ಎಂದು ಮತ್ತೆ ಮತ್ತೆ ಗೀಚುವಿಕೆ ಹಾಗೂ ಕಿರುಚುವಿಕೆ ಮರುಕಳಿಸುತ್ತಿದೆ. ಈ ಸಂದರ್ಭದಲ್ಲಿ ಇಲ್ಲೊಂದು ದೃಷ್ಟಿಕೋನ ಇದೆ. ಇದನ್ನೂ ಸ್ವಲ್ಪ ಗಮನಿಸಿ.

ಜನಪ್ರಿಯ ವಿಜ್ಞಾನ ಸಾಹಿತ್ಯದ ಅಗತ್ಯ

‘ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕೆ’ ಎಂದು ಡಿವಿಜಿಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ್ದಾರೆ. ಸಹಸ್ರಾರು ವರ್ಷಗಳಿಂದ ಭಾರತೀಯರು ತಮ್ಮ ‘ಜ್ಞಾನ’ಕ್ಕೆ ವಿಶ್ವವಿಖ್ಯಾತರಾಗಿದ್ದಾರೆ. ವಿಜ್ಞಾನದ ವಿಷಯ ಬಂದಾಗ ಇತ್ತೀಚಿನ ಎರಡು ಶತಮಾನಗಳಲ್ಲಿ ವಿದೇಶೀಯರು ನಮ್ಮನ್ನು ಹಿಂದೆಹಾಕಿ ಬಹುಮುಂದೆ ಹೋಗಿರುವುದು ಸತ್ಯ. ಇದಕ್ಕೆ ಮುಖ್ಯ ಕಾರಣ ನಾವು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ವಿಜ್ಞಾನವನ್ನು ವಿವರಿಸಲು ವಿಶೇಷ ಪ್ರಯತ್ನ ಮಾಡದಿರುವುದು. ಅಲ್ಲೊಂದು ಇಲ್ಲೊಂದು ಪ್ರಯತ್ನಗಳು ನಡೆದಿದ್ದರೂ ನಮ್ಮ ಅಗಾಧ ಜನಸಂಖ್ಯೆಗೆ ಹೋಲಿಸಿದರೆ ಇದು ಏನೇನೂ ಸಾಲದು.

ಜನಸಾಮಾನ್ಯರಿಗೆ ವಿಜ್ಞಾನದ ಅರಿವು ಮೂಡಿಸುವುದು ಎಷ್ಟು ಮುಖ್ಯ ಎಂಬುದಕ್ಕೆ ಹಲವಾರು ಉದಾಹರಣೆಗಳನ್ನು ಕೊಡಬಹುದು. ಒಂದನ್ನು ಗಮನಿಸೋಣ: ೨೦೦೧ರಲ್ಲಿ ಗುಜರಾತಿನಲ್ಲಿ ಸಂಭವಿಸಿದ ಭೀಕರ ಭೂಕಂಪದ ಬೆನ್ನಿನಲ್ಲೇ ಒಂದು ದಿನ ಬೆಳ್ಳಿಗ್ಗೆ ೮ ಗಂಟೆಯ ಹೊತ್ತಿಗೆ ಬೆಂಗಳೂರಿನಲ್ಲಿ ಲಘು ಕಂಪನ ಸಂಭವಿಸಿತು. ಯಾವುದೇ ಜೀವ ಆಸ್ತಿ ಹಾನಿ ಆಗಲಿಲ್ಲ. ಸುಮಾರು ೧೧ ಗಂಟೆಯ ಹೊತ್ತಿಗೆ ನಗರಾದ್ಯಂತ ಒಂದು ಗಾಳಿಸುದ್ದಿ ಹಬ್ಬಿತು. ೧೧:೩೦ ರಿಂದ ೧೨:೩೦ರ ಒಳಗೆ ಬೆಂಗಳೂರಿನಲ್ಲಿ ಭೂಕಂಪ ಸಂಭವಿಸಲಿದೆ ಎಂದು. ಜನಸಾಮಾನ್ಯರು ಅತೀವ ಭಯಗೊಂಡರು. ಶಾಲಾ ಕಾಲೇಜುಗಳಿಗೆ ಅನಧಿಕೃತ ರಜೆ ಸಾರಲಾಯಿತು. ಬಹು ಮಹಡಿ ಕಟ್ಟಡಗಳಲ್ಲಿನ ಜನರು ಬೀದಿಗೆ ಬಂದರು. ಕೆಲವು ಕಂಪೆನಿಗಳು ಉದ್ಯೋಗಿಗಳನ್ನು ಮನೆಗೆ ಕಳುಹಿಸಿಬಿಟ್ಟರು. ಕೊನೆಗೆ ಭೂಕಂಪವಂತೂ ಸಂಭವಿಸಲಿಲ್ಲ. ಇಂತಹ ವೇಳೆಗೆ ಇಂತಹ ಸ್ಥಳದಲ್ಲಿ ಭೂಕಂಪ ಸಂಭವಿಸಲಿದೆಯೆಂದು ನಿಕರವಾಗಿ ಹೇಳುವಷ್ಟು ವಿಜ್ಞಾನ – ತಂತ್ರಜ್ಞಾನ ಮುಂದುವರಿದಿಲ್ಲ. ಇದನ್ನು ಜನಸಾಮಾನ್ಯರಿಗೆ ವೈಜ್ಞಾನಿಕವಾಗಿ ತಿಳಿಸುವ ಕಾರ್ಯವನ್ನು ಯಾವ ಪತ್ರಿಕೆಗಳೂ ಮಾಡಿಲ್ಲ. ಜನಸಾಮಾನ್ಯರಿಗೆ ವಿಜ್ಞಾನದ ವಿಷಯಗಳನ್ನು ಸರಳವಾಗಿ ತಿಳಿಹೇಳುವುದು ಎಷ್ಟು ಅವಶ್ಯ ಎಂಬುದನ್ನು ಸ್ಪಷ್ಟೀಕರಿಸಲು ಇದೊಂದು ಉದಾಹರಣೆ ಸಾಕು.

ನಮ್ಮ ದೇಶದ ವಿಜ್ಞಾನಿಗಳು ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ಇವರೆಲ್ಲ ತಮ್ಮ ಪ್ರಯೋಗಾಲಯದಲ್ಲಿ ಕುಳಿತು ಸಂಶೋಧನೆ ನಡೆಸುವವರು. ತಮ್ಮ ಸಂಶೋಧನಾ ಪ್ರಬಂಧಗಳನ್ನು ಅವುಗಳಿಗೇ ಮೀಸಲಾದ ವಿಶೇಷ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆ. ಪ್ರಕಟಣೆಯ ಭಾಷೆ ಇಂಗ್ಲಿಷ್. ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇದು ಸಮರ್ಥನೀಯ. ಇವರ‍್ಯಾರೂ ತಮ್ಮ ಸಂಶೋಧನೆಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಕನ್ನಡದಲ್ಲಿ ತಿಳಿಹೇಳಲು ಪ್ರಯತ್ನಿಸಿಲ್ಲ. “ನಮ್ಮ ಸಂಶೋಧನೆಗಳು ವಿಜ್ಞಾನದಲ್ಲಿ ವಿಶೇಷ ಪರಿಣತಿ ಹೊಂದಿದವರಿಗೆ ಮಾತ್ರ ಅರ್ಥವಾಗುವಂತವುಗಳು. ಜನಸಾಮಾನ್ಯರಿಗೆ ಅವುಗಳನ್ನು ವಿವರಿಸುವುದರಲ್ಲಿ ಅರ್ಥವಿಲ್ಲ. ಅವರಿಗೆ ಅದು ಅರ್ಥವೂ ಆಗಲಾರದು” ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದು ಬಹುಮಟ್ಟಿಗೆ ಸತ್ಯ ಕೂಡ. ಆದರೆ ಇದೇ ವಿಜ್ಞಾನಿಗಳು ಜನರಿಗೆ ನಿತ್ಯಜೀವನದಲ್ಲಿ ಉಪಯೋಗಿಯಾಗುವ ವಿಜ್ಞಾನದ ಬಗ್ಗೆ ತಿಳಿಹೇಳಬಹುದಲ್ಲ? ಅದನ್ನು ಮಾಡುತ್ತಿರುವವರು ವಿಜ್ಞಾನಿಗಳಲ್ಲ. ವಿಜ್ಞಾನವನ್ನು ಅಭ್ಯಸಿಸಿದ ಕೆಲವೇ ಮಂದಿ ಈ ಕಾರ್ಯ ಮಾಡುತ್ತಿದ್ದಾರೆ. ಹಾಗೆಂದು ನಾವು ಆಧುನಿಕ ಸಂಶೋಧನೆಗಳು ಜನಸಾಮಾನ್ಯರಿಗೆ ತಲುಪಲೇ ಬಾರದು ಎಂದು ಕುಳಿತುಕೊಳ್ಳುವ ಹಾಗಿಲ್ಲ. ವಿಜ್ಞಾನದ ಕ್ಲಿಷ್ಟ ವಿಷಯಗಳ ಬಗ್ಗೆ ಕನ್ನಡದಲ್ಲಿ ಸರಳವಾಗಿ ತಿಳಿಸಿ ಹೇಳಲು ಸಾಧ್ಯವಿದೆ. ವಿಜ್ಞಾನ ಕಲಿಯದ, ಕೇವಲ ಸಾಹಿತಿ ಎನಿಸಿಕೊಂಡ ಡಾ| ಶಿವರಾಮ ಕಾರಂತ ಹಾಗೂ ಪೂರ್ಣಚಂದ್ರ ತೇಜಸ್ವಿಯಂತವರು ಇದನ್ನು ಮಾಡಿ ತೋರಿಸಿದ್ದಾರೆ. ಇಚ್ಛಾಶಕ್ತಿ ಇಲ್ಲಿ ಬಹು ಮುಖ್ಯ.

ಕನ್ನಡದ ಸಾಹಿತಿಗಳು ವಿಜ್ಞಾನವನ್ನು ದೂರವೇ ಇಟ್ಟಿದ್ದಾರೆ. ನಮಗೆ ಅದು ಅರ್ಥವಾಗುವುದಿಲ್ಲ ಎಂಬುದು ಅವರ ಸಬೂಬು. ಕನ್ನಡ ಸಾಹಿತ್ಯ ಪರಿಷತ್ತು ವರ್ಷಕ್ಕೊಮ್ಮೆ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸುತ್ತದೆ. ಅದರಲ್ಲಿ ಹಲವಾರು ಗೋಷ್ಠಿಗಳಿರುತ್ತವೆ. ಮಹಿಳಾ ಸಾಹಿತ್ಯ, ದಲಿತ ಸಾಹಿತ್ಯ, ಬಂಡಾಯ, ನವ್ಯ ಇತ್ಯಾದಿ ಹಲವು ವಿಭಾಗಗಳ ಬಗ್ಗೆ ವಿಚಾರ ಸಂಕಿರಣಗಳು ನಡೆಯುತ್ತವೆ. ಆದರೆ ವಿಜ್ಞಾನ ಸಾಹಿತ್ಯ ಇಲ್ಲಿ ಸಾಹಿತ್ಯವೆಂದು ಪರಿಗಣಿಸಲ್ಪಡುವುದಿಲ್ಲ. ಈ ಬಗ್ಗೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳನ್ನು ಹಾಗೂ ಸಾಹಿತಿಗಳನ್ನು ಪ್ರಶ್ನಿಸಿಯೂ ಇದ್ದೇನೆ. ಏನೇನೋ ಸಬೂಬು ಹೇಳಿದರೇ ವಿನಾ ಒಪ್ಪಿಕೊಳ್ಳಬಲ್ಲ ಉತ್ತರ ಬರಲಿಲ್ಲ. ಸಾಹಿತ್ಯದ ಹಲವು ವಿಭಾಗಗಳಿಗೆ ಪ್ರಶಸ್ತಿ ನೀಡುವ ಪದ್ಧತಿ ಇದೆ. ಇಲ್ಲೂ ವಿಜ್ಞಾನ ಸಾಹಿತ್ಯವನ್ನು ಪರಿಗಣಿಸಿಲ್ಲ; ವಿಜ್ಞಾನ ಸಾಹಿತಿಗಳನ್ನು ಸಾಹಿತಿಯೆಂದು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಜನಪ್ರಿಯ ವಿಜ್ಞಾನ ಸಾಹಿತ್ಯ ಸೃಜನಶೀಲ ಸಾಹಿತ್ಯವಲ್ಲ ಎಂದು ಸಾಹಿತಿಗಳ ತೀರ್ಮಾನ. ವಿಜ್ಞಾನದ ಕ್ಲಿಷ್ಟ ವಿಷಯಗಳನ್ನು ಸರಿಯಾಗಿ ಅರ್ಥೈಸಿಕೊಂಡು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ತಿಳಿಹೇಳುವುದು ಎಷ್ಟು ಕಷ್ಟ ಎಂಬುದನ್ನು ಸಾಹಿತಿಗಳು ತಾವೇ ಸ್ವತಹ ಪ್ರಯತ್ನಪಟ್ಟು ತಿಳಿದುಕೊಳ್ಳುವುದು ಒಳ್ಳೆಯದು. ಆಗ ಅವರ ಮೌಢ್ಯ ನೀಗುವುದು. ಸರಿಯಾಗಿ ವಿಮರ್ಶಿಸಿ ನೋಡಿದರೆ ಈ ಸೃಜನಶೀಲ ಮತ್ತು ಸೃಜನೇತರ ಸಾಹಿತ್ಯ ಎಂಬ ವಿಭಜನೆಯೇ ತಪ್ಪು. ಕಥನಸಾಹಿತ್ಯ ಮತ್ತು ವಿಷಯಸಾಹಿತ್ಯ (ಅಥವಾ ಮಾಹಿತಿಸಾಹಿತ್ಯ) ಎಂಬ ವಿಭಜನೆಯೇ ಸೂಕ್ತ.

ಹದಿನೆಂಟನೆಯ ಶತಮಾನದಲ್ಲಿ ಯುರೋಪಿನಲ್ಲಿ ಔದ್ಯೋಗಿಕ ಕ್ರಾಂತಿ ನಡೆಯಿತು. ಈಗ ನಾವು ಉಪಯೋಗಿಸುತ್ತಿರುವ ವಿಜ್ಞಾನ – ತಂತ್ರಜ್ಞಾನದ ಕೊಡುಗೆಗಳು ಆ ಕಾಲದಲ್ಲಿ ಸಂಶೋಧಿಸಲ್ಪಟ್ಟವು. ಈ ಕ್ರಾಂತಿಯಲ್ಲಿ ಭಾರತವು ಭಾಗಿಯಾಗಿರಲಿಲ್ಲ. ಈಗ ನಡೆಯುತ್ತಿರುವುದು ಮಾಹಿತಿ ತಂತ್ರಜ್ಞಾನದ ಕ್ರಾಂತಿ. ಈ ಕ್ರಾಂತಿಯಲ್ಲಿ ಭಾರತವೂ ಸಕ್ರಿಯವಾಗಿ ಭಾಗಿಯಾಗುತ್ತಿದೆ. ಆದರೆ ಭಾರತೀಯ ಭಾಷೆಗಳು, ಕನ್ನಡವೂ ಸೇರಿದಂತೆ, ಭಾಗಿಯಾಗುತ್ತಿಲ್ಲ. ವಿಜ್ಞಾನ ತಂತ್ರಜ್ಞಾನದ ಕೊಡುಗೆಗಳು ಹಳ್ಳಿಗಳನ್ನೂ ತಲುಪುತ್ತಿರುವಂತೆ ಅವುಗಳ ಹಿಂದಿನ ವೈಜ್ಞಾನಿಕ ಜ್ಞಾನವೂ ಹಳ್ಳಿಗಳನ್ನು ತಲುಪಬೇಕು. ಜನರು ವಿಜ್ಞಾನದ ಹಾಗೂ ಮಾಹಿತಿ ತಂತ್ರಜ್ಞಾನದ ವಿಷಯಗಳನ್ನು ಕನ್ನಡದಲ್ಲೆ ಚಿಕ್ಕ ಪ್ರಾಯದಿಂದಲೇ ತಿಳಿದುಕೊಳ್ಳುವ ಸೌಲಭ್ಯ ಒದಗಿಬರಬೇಕು.

ಮಾಹಿತಿ ತಂತ್ರಜ್ಞಾನ ಮತ್ತು ಇಂಗ್ಲೀಷ್‌ನ ‘ಪಿತ್ತ’
ಇನ್ಫೋಸಿಸ್ ನಾರಾಯಣಮೂರ್ತಿಯವರಿಗೆ ೧೯೯೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಬೆಂಗಳೂರು ಆಕಾಶವಾಣಿ ಅವರೊಂದಿಗೆ ಸಾರ್ವಜನಿಕರಿಂದ ಫೋನ್-ಇನ್ ಕಾರ್ಯಕ್ರಮವನ್ನು ನೇರ ಪ್ರಸಾರಗೊಳಿಸಿತ್ತು. ಆ ಸಂದರ್ಭದಲ್ಲಿನಾನು ಸಂದರ್ಶಕನಾಗಿ ಭಾಗವಹಿಸಿದ್ದೆ. ಆ ದಿನ ನಾನು ಕೇಳಿದ ಒಂದು ಪ್ರಶ್ನೆ ಹೀಗಿತ್ತು: “ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಲೆ ಬರಬೇಕಾದರೆ ಒಂದನೆ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಬೇಕು ಎಂದು ಬಹುಪಾಲು ಜನರು ತಿಳಿದುಕೊಂಡಿದ್ದಾರೆ ಇದು ನಿಜವೇ?”. ಅದಕ್ಕೆ ನಾರಾಯಣ ಮೂರ್ತಿಯವರು ನೀಡಿದ ಉತ್ತರ ಎಲ್ಲರೂ ಗಮನಿಸಬೇಕಾದುದಾಗಿದೆ: “ಈ ನಂಬಿಕೆ ಸರಿಯಲ್ಲ. ಒಳ್ಳೆಯ ಆಲೋಚನಾ ಶಕ್ತಿ, ಮುಖ್ಯವಾಗಿ ತರ್ಕಬದ್ಧವಾಗಿ ಯೋಚಿಸುವ ಶಕ್ತಿ ಇದ್ದರೆ ಸಾಕು. ಹತ್ತನೆ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ಕಲಿತರೆ ಏನೂ ಅಡ್ಡಿಯಿಲ್ಲ. ಒಳ್ಳೆಯ ಮೆದುಳಿಗೂ ವಿದ್ಯಾಭ್ಯಾಸದ ಮಾಧ್ಯಮಕ್ಕೂ ಯಾವುದೇ ಸಂಬಂಧವಿಲ್ಲ.”

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೇರಿಕಾದ ಸಿಲಿಕಾನ್ ವ್ಯಾಲಿಯಲ್ಲಿದ್ದುಕೊಂಡು ಅದ್ಭುತ ಸಾಧನೆ ಗೈದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇನ್ನೊಬ್ಬ ಕನ್ನಡಿಗ ಬಿ. ವಿ. ಜಗದೀಶರನ್ನು ನಾನು ಸಂದರ್ಶಿಸಿದಾಗ ಕೇಳಿದ ಪ್ರಶ್ನೆ: “ನೀವು ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಕಲಿತದ್ದು ನೀವು ಮುಂದೆ ಮಾಹಿತಿ ತಂತ್ರಜ್ಞಾನ ಪರಿಣತನಾಗಿ ಮೂಡಿ ಬರಲು ಏನೂ ತೊಂದರೆ ಆಗಲಿಲ್ಲವೇ?”. ಅದಕ್ಕೆ ಅವರ ಉತ್ತರ: “ಖಂಡಿತಾ ಇಲ್ಲ. ಸಾಧನೆಗೆ ಬೇಕಾದುದು ಶ್ರದ್ಧೆ ಮತ್ತು ಇಚ್ಛಾಶಕ್ತಿ ಮಾತ್ರ. ಹಾಗೆ ನೋಡಿದರೆ ನಾನು ಇಂಜಿನಿಯರಿಂಗ್‌ನಲ್ಲಿ ಓದಿದ್ದು ಕಂಪ್ಯೂಟರ್ ಸಯನ್ಸ್ ಕೂಡಾ ಅಲ್ಲ.”

ಈ ಎರಡು ಉದಾಹರಣೆಗಳನ್ನು ಇಲ್ಲಿ ಉಲ್ಲೇಖಿಸಲು ಪ್ರಮುಖ ಕಾರಣವಿದೆ. ಕರ್ನಾಟಕ ಮತ್ತು ಬೆಂಗಳೂರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಖ್ಯಾತಿ ಮಾಡಿವೆ. “ತಮ್ಮ ಮಕ್ಕಳು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೇ ಉದ್ಯೋಗವನ್ನು ಪಡೆಯಬೇಕು. ಗಣಕಗಳ ಭಾಷೆ ಇಂಗ್ಲೀಷ್. ಆದುದರಿಂದ ನಾವು ಒಂದನೇ ತರಗತಿಯಿಂದಲೇ ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿಸಬೇಕು” -ಎಂಬ ಹುಚ್ಚು ಭ್ರಮೆಗಳನ್ನು ಪ್ರತಿ ಪೋಷಕರೂ ತಮ್ಮ ತಲೆಯಲ್ಲಿ ತುಂಬಿಕೊಂಡಿದ್ದಾರೆ. ಈ ಕಲ್ಪನೆಗಳು ಸಂಪೂರ್ಣ ತಪ್ಪು ಎಂಬುದನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅತಿ ದೊಡ್ಡ ಸಾಧನೆ ಗೈದ ಗಣ್ಯರೇ ಹೇಳುತ್ತಿದ್ದಾರೆ ಎಂಬುದು ಇಲ್ಲಿ ಉಲ್ಲೇಖಿಸಿದ ಸಂರ್ಶನಗಳಲ್ಲಿವೆ.

ಹಾಗಿದ್ದರೆ ಈ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇಂಗ್ಲೀಷ್ ಪ್ರಾವೀಣ್ಯ ಬೇಡವೇ? ಬೇಕು. ಯಾರಿಗೆ ಗೊತ್ತೆ? ಕಾಲ್‌ಸೆಂಟರ್‌ಗಳಲ್ಲಿ ದುಡಿಯುವವರಿಗೆ. ಕಂಪ್ಯೂಟರ್ ಪ್ರೋಗ್ರಾಮ್ಮಿಂಗ್ ಮಾಡುವವರಿಗೂ ಇಂಗ್ಲೀಷ್ ಪ್ರಾವೀಣ್ಯ ಬೇಕು. ಆದರೆ ಇಂಗ್ಲೀಷಿನಲ್ಲಿ ಸರಳವಾಗಿ ಸಂವಹನ ಮಾಡುವಷ್ಟರ ಮಟ್ಟಿನ ಭಾಷಾ ಪಾಂಡಿತ್ಯ ಸಾಕು. ಇದನ್ನು ಕೆಲಸಕ್ಕೆ ಸೇರಿ ಒಂದೆರಡು ವರ್ಷಗಳಲ್ಲಿ ಆರಾಮವಾಗಿ ಸಾಧಿಸಬಹುದು.

ಕನ್ನಡ ಮಾಧ್ಯಮ ಏಕೆ ಬೇಡ?

ಪ್ರಾಥಮಿಕ ಹಂತದಿಂದಲೇ ಕನ್ನಡ ಮಾಧ್ಯಮ ಬೇಡ, ಇಂಗ್ಲೀಷ್ ಮಾಧ್ಯಮವೇ ಬೇಕು ಎಂದು ವಾದ ಮಾಡುವವರು ಅದಕ್ಕೆ ನೀಡುವ ಒಂದು ಪ್ರಮುಖ ಕಾರಣವೆಂದರೆ ಕನ್ನಡ ಮಾಧ್ಯಮದಲ್ಲಿ ಕಲಿತರೆ ಪ್ರಪಂಚ ಜ್ಞಾನ ಬರುವುದಿಲ್ಲ, ಇದರಿಂದ ಮುಂದಕ್ಕೆ ಜೀವಕ್ಕೆ ಕಷ್ಟವಾಗುತ್ತದೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲುವು ಸಾಧಿಸುವುದು ಕಷ್ಟವಾಗುತ್ತದೆ -ಇತ್ಯಾದಿ. ಇದು ಬಹುಮಟ್ಟಿಗೆ ಸತ್ಯ ಕೂಡ. ಆದರೆ ಈ ಸಮಸ್ಯೆಗೆ ಪರಿಹಾರವೆಂದರೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮವನ್ನು ಹೇರುವುದಲ್ಲ. ಕನ್ನಡ ಭಾಷೆಯಲ್ಲಿ ಪ್ರಪಂಚ ಜ್ಞಾನವನ್ನು ತರುವುದು. ಈ ಕೆಲಸವನ್ನು ಯಾವ ಸಾಹಿತಿಯೂ ಮಾಡುತ್ತಿಲ್ಲ. ಶಿವರಾಮ ಕಾರಂತ ಮತ್ತು ಪೂಚಂತೇ -ಈ ಎರಡೇ ಉದಾಹರಣೆಗಳು ಸಿಗುತ್ತವಷ್ಟೆ.

ಸಾಹಿತಿಗಳೆ ದಯವಿಟ್ಟು ಗಮನಿಸಿ. ಕನ್ನಡ ಸಾಹಿತ್ಯವೆಂದರೆ ಕೇವಲ ಪಂಪ, ರನ್ನ, ಜನ್ನ, ಕುವೆಂಪು ಮಾತ್ರವಲ್ಲ (ಇವರು ಬೇಡವೆಂದು ನಾನು ಹೇಳುತ್ತಿಲ್ಲ). ಕನ್ನಡ ಸಾಹಿತ್ಯದಲ್ಲಿ ಪ್ರಪಂಚ ಜ್ಞಾನ ಬರಬೇಕಾಗಿದೆ. ನೀವು ಈ ಕೆಲಸ ಮಾಡಿಲ್ಲವಾದಲ್ಲಿ ಇನ್ನು ಇಪ್ಪತ್ತು ವರ್ಷಗಳಲ್ಲಿ ಕನ್ನಡ ಆಡುಭಾಷೆಯಾಗಿ ಉಳಿದುಬಿಡುತ್ತದೆ. ಇದನ್ನು ತಪ್ಪಿಸಲು ಕನ್ನಡ ಸಾಹಿತ್ಯ ಪರಿಷತ್ತು ಕೂಡ ಕೆಲಸ ಮಾಡಬೇಕಾಗಿದೆ. ಹಲವು ವಿಭಾಗಗಳನ್ನು ಸಾಹಿತ್ಯ ಸಮ್ಮೇಳನದಲ್ಲಿ ಸೇರಿಸಿಕೊಂಡಂತೆ ವಿಷಯಸಾಹಿತ್ಯ (ಅಥವಾ ಮಾಹಿತಿಸಾಹಿತ್ಯ) ಬಗ್ಗೆ ಕೂಡ ಗೋಷ್ಠಿಗಳು ಏರ್ಪಾಡಾಗಲಿ. ಈ ರೀತಿಯ ಬರೆವಣಿಗೆಗೆ ಕೂಡ ಪ್ರೋತ್ಸಾಹ ನೀಡಲಿ. ಕೇವಲ ಕಥನ ಸಾಹಿತ್ಯಕ್ಕೆ ಮಾತ್ರ ಪುರಸ್ಕಾರ ಸನ್ಮಾನ ಸಾಲದು. ಎಲ್ಲರೊಳಗೊಂದಾಗಿ ಬೆಳೆಯಲಿ ಕನ್ನಡ.

(ಕೃಪೆ: ಕನ್ನಡಪ್ರಭ)

3 Responses to ಸಾಹಿತಿಗಳೇ, ಕನ್ನಡವ ಸಾಯುತಿ ಮಾಡಬೇಡಿ

  1. CanTHeeRava

    ಪವನಜರೇ, ನಿಮ್ಮ ವಾದ ಒಪ್ಪತಕ್ಕದ್ದೇ. ನೀವು ಕೇವಲ ಮಾಹಿತಿ ತಂತ್ರಜ್ಞಾನದ ಉದಾಹರಣೆಯನ್ನು ಇಟ್ಟುಕೊಂಡು ಬರೆದಿದ್ದೀರಿ. ಶಿವರಾಮ ಕಾರಂತರಂತೆ ವಿಶ್ವಕೋಶವನ್ನು ಕನ್ನಡಕ್ಕೆ ತರುವ ಕೆಲಸ ಈಗ ವೈಯಕ್ತಿಕ ಮಟ್ಟದಲ್ಲಿ ಆಗಬೇಕೇ ಎಂಬುದು ನನಗೆ ಗೊತ್ತಿಲ್ಲ. ಅದು ಸರ್ಕಾರ ಮಾಡಬೇಕಾದ ಕೆಲಸ. ಕಾರಂತರಂಥವರು ಈಗ ನಮ್ಮಲ್ಲಿಲ್ಲ. ಆದರೆ, ಕನ್ನಡದಲ್ಲಿ ವೈಜ್ಞಾನಿಕ ಸಂಶೋಧನಾತ್ಮಕ ಬರಹಗಳಂತೂ ಬರಲೇಬೇಕು. ನನ್ನ ಪ್ರಕಾರ ಅದು ಕನ್ನಡ-ವಿಜ್ಞಾನ-ಉದ್ಧಾರಕ್ಕೆ ನಮಗಿರುವ ಸುಗಮವಾದ ’ಅಡ್ಡ ದಾರಿ’. ಅಡ್ಡದಾರಿಗಳು ಎಲ್ಲಿ ಬೇಕಾದರೂ ಕೊನೆಗೊಳ್ಳಬಹುದು ಎಂಬುದನ್ನು ನಾನು ಬಲ್ಲೆ. ಆದರೆ, ಹೆದ್ದಾರಿ ನಿರ್ಮಾಣವಾಗುವವರೆಗೆ ಕಲ್ಲೋ-ಮುಳ್ಳೋ-ಕಂದರವೋ-ನದಿಯೋ ಏನನ್ನೂ ನೋಡುವಂತಿಲ್ಲ ಅಲ್ಲವೇ?

  2. Narayan Shastri

    ಡಾ|| ಪವನಜರವರು ಈ ಲೇಖನದಲ್ಲಿ ಸೂಚಿಸಿರುವ ವಾದಕ್ಕೆ 100% ಸಹಮತ ಸೂಚಿಸುವೆ. ಕನ್ನಡವೆಂದರೆ ಕೇವಲ ಸಾಹಿತಿಗಳ ಗೊಡ್ಡು ಮಾತ್ರವಲ್ಲ, ವಿಜ್ಞಾನ-ಸಂಬಂಧಿತ ಲೇಖನಗಳು ಅಂಕಣಗಳೂ ಸಾಧ್ಯ. ಜೊತೆಗೆ, ಮಾಹಿತಿ ತಂತ್ರಜ್ಞಾನ ಸಂಬಂಧಿತ ಲೇಖನಗಳನ್ನು ಡಾ|| ಪವನಜರವರು ಕನ್ನಡದಲ್ಲಿ ಬರೆದು ಹೊಸ ಆಯಾಮವನ್ನು ಸೃಷ್ಟಿಸಿದ್ದಾರೆ.

    ಸಾಹಿತಿಗಳು ಬಾವಿಯಲ್ಲಿರುವ ಕಪ್ಪೆಗಳಂತೆ ಆಡುವುದನ್ನು ನಿಲ್ಲಿಸಿ, ಕನ್ನಡ ಭಾಷೆಯ ಮೇಲಿನ ಕಪಿಮುಷ್ಟಿಯನ್ನು ಸಡಿಲಿಸಿ, ಕನ್ನಡದಲ್ಲಿನ ವೈಜ್ಞಾನಿಕ, ತಾಂತ್ರಿಕ ಲೇಖನಗಳನ್ನು ಪ್ರೋತ್ಸಾಹಿಸುವುದು ಅತ್ಯಗತ್ಯ.

  3. ಶ್ರವಣ

    ಸಾಹಿತಿಗಳೆ ಲೇಖಕರೆಲ್ಲರ ಜೀವನ ಹೆಗೆ ನಡೆಯುತ್ತದೆ . ನನಗೆ ಕಥೆ ಕಾದಂಬರಿ ಬರೆಯುವ ಹವ್ಯಾಸ ಉಂಟು ಇದರಿಂದ ಹಣಗಳಿಸ ಬಹುದೆ ಜೀವನವನ್ನೂ ನಡೆಸಬಹುದೇ
    ಆ ದರಿಯನ್ನನು ದಯವಿಟು್್ಟ ತಿಳಿಸಿ miss call kodi .9980306085

Leave a Reply