ವಿಂಡೋಸ್ ವಿಸ್ಟದ ಕಿರು ಪರಿಚಯ

-ಡಾ. ಯು. ಬಿ. ಪವನಜ

ವಿಂಡೋಸ್ ಎಕ್ಸ್‌ಪಿ ಬಿಡುಗಡೆಯಾಗಿ ಸುಮಾರು ಆರು ವರ್ಷಗಳ ನಂತರ ಮೈಕ್ರೋಸಾಫ್ಟ್‌ ಕಂಪೆನಿ ಹೊಸ ಕಾರ್ಯಾಚರಣೆಯ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್) ವಿಂಡೋಸ್ ವಿಸ್ಟ ಹೊರತಂದಿದೆ. ಪ್ರಾರಂಭದಲ್ಲಿ ಲಾಂಗ್‌ಹಾರ್ನ್ ಎಂಬ ಸಂಕೇತನಾಮದಿಂದ ಕರೆಯಲ್ಪಡುತ್ತಿದ್ದ ಇದು ಈಗಷ್ಟೆ ಗಣಕ (ಕಂಪ್ಯೂಟರ್) ತಯಾರಕರಿಗೆ ಲಭ್ಯವಿದೆ. ಜನವರಿ ತಿಂಗಳ ಕೊನೆಯಲ್ಲಿ ಮಾರುಕಟ್ಟೆಗೆ ಇದರ ಅಧಿಕೃತ ಬಿಡುಗಡೆ ಆಗಲಿದೆ.

ವಿಂಡೋಸ್ ವಿಸ್ಟವು ಗ್ರಾಹಕರಿಗೆ ಒಂದು ಸಂಪೂರ್ಣ ಹೊಸ ಅನುಭವವನ್ನು ನೀಡುವುದು. ಮಾಹಿತಿಯನ್ನು ಹುಡುಕುವುದು, ವ್ಯವಸ್ಥಿತಗೊಳಿಸುವುದು, ಹಾಗೂ ತೋರಿಸುವುದು ಇವಲ್ಲದೆ ಇನ್ನೂ ಹಲವು ರೀತಿಯಲ್ಲಿ ವಿಸ್ಟದ ಬಳಕೆದಾರರು ಹೊಸ ಅನುಭವವನ್ನು ಹೊಂದಬಹುದು. ಕಂಪ್ಯೂಟರ್ ಪರದೆಯ ಹೊಸ ವಿನ್ಯಾಸವು ಕೇವಲ ತೋರಿಕೆಗಾಗಿಲ್ಲ, ಅದು ಮಾಹಿತಿಯನ್ನು ವ್ಯವಸ್ಥಿತಗೊಳಿಸಿ ದೈನಂದಿನ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಸಹಾಯಕಾರಿಯಾಗುವುದು.

ಈಗಾಗಲೇ ವಿಂಡೋಸ್ ಬಳಸುತ್ತಿದ್ದವರಿಗೆ ಎಂದಿನಂತೆ ಸ್ಟಾರ್ಟ್ ಬಟನ್ ಗೋಚರಿಸಿದರೂ ಅದರ ಹೊಸ ವಿನ್ಯಾಸ ಮತ್ತು ಬಹಳ ಸುಲಭವಾಗಿ ಬೇಕಾದ ಮಾಹಿತಿ ಅಥವಾ ಪ್ರೊಗ್ರಾಮುಗಳನ್ನು ಹುಡುಕುವ ಸೌಲಭ್ಯಗಳು ಇಷ್ಟವಾಗುವುವು. ಸ್ಟಾರ್ಟ್ ಬಟನ್‌ನ ಸನಿಹದಲ್ಲಿ ಅಲ್ಲೇ ಮೇಲೆ ಇರುವ ಜಾಗದಲ್ಲಿ ನೀವು ಹುಡುಕಬೇಕಾಗಿರುವ ಮಾಹಿತಿ ಅಥವಾ ಪ್ರೋಗ್ರಾಮಿನ ಹೆಸರನ್ನು ಬೆರಳಚ್ಚು ಮಾಡಿದರೆ ಸಾಕು ಅದನ್ನು ಕೂಡಲೆ ಹುಡುಕಿ ನೀಡುತ್ತದೆ.

ಈ ಹುಡುಕುವ ಸೌಲಭ್ಯವು ಎಲ್ಲ ಎಕ್ಸ್‌ಪ್ಲೋರರ್ ವಿಂಡೋಸ್‌ಗಳಲ್ಲೂ ಲಭ್ಯವಿದೆ. ಯಾವುದೇ ಎಕ್ಸ್‌ಪ್ಲೋರರ್‌ನ ಮೇಲೆ ಬಲಭಾಗದಲ್ಲಿರುವ ಹುಡುಕುವ ಚೌಕದಲ್ಲಿ ಬಳಕೆದಾರರು ತಮಗೆ ಹುಡುಕಬೇಕಾಗಿರುವ ಫೈಲ್ ಅಥವಾ ಪಠ್ಯವನ್ನು ಬೆರಳಚ್ಚು ಮಾಡಿದರೆ ಸಾಕು, ಆ ಪಠ್ಯವು ಆ ಫೋಲ್ಡರಿನ ಯಾವ ಫೈಲಿನಲ್ಲಿದೆಯಂಬುದನ್ನು ಅದು ಹುಡುಕಿ ಕೊಡುತ್ತದೆ. ಈ ಹುಡುಕುವ ಪಠ್ಯವು ಕನ್ನಡ ಭಾಷೆಯಲ್ಲಿದ್ದರೂ ಆ ಪಠ್ಯವನ್ನು ಅದು ಹುಡುಕಿ ಕೊಡುತ್ತದೆ.

ವಿಸ್ಟದಲ್ಲಿ ಅಳವಡಿಸಿರುವ ಇನ್ನೊಂದು ಹೊಚ್ಚ ಹೊಸ ಸವಲತ್ತೆಂದರೆ ವಿಂಡೋಸ್ ಏರೋ (Windows Aero). ಎಲ್ಲ ವಿಂಡೋಗಳು ಗಾಜಿನಂತೆ ಗೋಚರಿಸುವುದು ಇದರ ವೈಶಿಷ್ಟ್ಯ.

ಇನ್ನೊಂದು ವಿಶೇಷ ಸೌಲಭ್ಯವೆಂದರೆ ಮೂರು ಆಯಾಮದ ಡೆಸ್ಕ್‌ಟಾಪ್ ಅಥವಾ ಕಿಟಿಕಿಗಳು. ಹಲವು ವಿಂಡೋಗಳಲ್ಲಿ ಕೆಲಸ ಮಾಡುತ್ತಿದ್ದಾಗ ಅವುಗಳನ್ನು ಮೂರು ಆಯಾಮದಲ್ಲಿ ಒಂದರ ಹಿಂದೆ ಒಂದನ್ನು ಪೇರಿಸಿದಂತೆ ನೋಡಬಹುದು.

ಈ ವಿಂಡೋಸ್ ಏರೋ ಮತ್ತು ಮೂರು ಆಯಾಮದ ಸೌಲಭ್ಯಗಳನ್ನು ಪಡೆಯಬೇಕಾದರೆ ಗಣಕದಲ್ಲಿ ಹೆಚ್ಚಿನ ಸಾಮರ್ಥ್ಯವಿರಬೇಕು. ಗ್ರಾಫಿಕ್ಸ್ ಪ್ರೋಸೆಸರ್ ಮತ್ತು ಗ್ರಾಫಿಕ್ಸ್‌ಗೆಂದೇ ಕನಿಷ್ಠ 128 ಎಂಬಿಗಳಷ್ಟು ಮೆಮೊರಿ ಇರಬೇಕು. ಇತ್ತೀಚೆಗಿನ ಪ್ರೋಸೆಸರ್‌ಗಳನ್ನು ಹೊಂದಿರುವ ಅಂದರೆ ಡ್ಯುಯಲ್ ಕೋರ್ ಪ್ರೋಸೆಸರ್ ಇರುವ ಕಂಪ್ಯೂಟರ್‌ಗಳಲ್ಲಿ ಮಾತ್ರ ಇವೆಲ್ಲ ಸಾಧ್ಯ. ಇದರ ಜೊತೆ ಕಂಫ್ಯೂಟರಿನಲ್ಲೂ ಕನಿಷ್ಠ 512 ಎಂಬಿಯಷ್ಟು ಮೆಮೊರಿ ಇರಬೇಕು.

Leave a Reply