ಯೂನಿಕೋಡ್: ಸರ್ಕಾರದ ಮೀನ-ಮೇಷ
ಮಾಹಿತಿ ತಂತ್ರಜ್ಞಾನದಲ್ಲಿ `ಯೂನಿಕೋಡ್` ಅನ್ನು ಕನ್ನಡದ ಶಿಷ್ಟತೆಯೆಂದು ಅಧಿಸೂಚನೆ ಹೊರಡಿಸಬೇಕು ಎನ್ನುವ ಶಿಫಾರಸನ್ನು ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಒಂದು ವರ್ಷ ಸಂದಿದೆ. ಆದರೆ ಶಿಫಾರಸನ್ನು ಅನುಷ್ಠಾನಕ್ಕೆ ತರಲು ರಾಜ್ಯ ಇ-ಆಡಳಿತ ಇಲಾಖೆ ಇನ್ನೂ ಮೀನ-ಮೇಷ ಎಣಿಸುತ್ತಿದೆ.
ಕನ್ನಡ ಗಣಕ ಪರಿಷತ್ತು ಅಭಿವೃದ್ಧಿಪಡಿಸಿರುವ `ನುಡಿ`, ಪ್ರಸ್ತುತ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಶಿಷ್ಟತೆಯಾಗಿ ಬಳಕೆಯಾಗುತ್ತಿದೆ. `ನುಡಿ`ಯನ್ನೇ ಕನ್ನಡದ ಶಿಷ್ಟತೆಯನ್ನಾಗಿ ಬಳಸಬೇಕು ಎಂದು ಸರ್ಕಾರ 2000-01ರಲ್ಲೇ ಅಧಿಸೂಚನೆ ಹೊರಡಿಸಿದೆ. ಇದರ ಅನ್ವಯ ಸರ್ಕಾರದ ಕಂಪ್ಯೂಟರ್ ಕಡತಗಳೆಲ್ಲ `ನುಡಿ` ತಂತ್ರಾಂಶ ಆಧರಿಸಿಯೇ ಸಿದ್ಧಗೊಳ್ಳುತ್ತಿವೆ.
ಆದರೆ `ನುಡಿ` ತಂತ್ರಾಂಶ, ಕಾಲದ ಅಗತ್ಯಗಳಿಗೆ ತಕ್ಕಂತೆ ಇಲ್ಲ ಎಂಬ ಅಭಿಪ್ರಾಯಕ್ಕೆ ಬಂದ ಡಾ. ಚಿದಾನಂದ ಗೌಡ ಅಧ್ಯಕ್ಷತೆಯ ತಂತ್ರಾಂಶ ಅಭಿವೃದ್ಧಿ ಸಮಿತಿ, `ಕನ್ನಡದ ಕೆಲಸಗಳಿಗೆ ಯೂನಿಕೋಡ್ ಅನ್ನು ಶಿಷ್ಟತೆ ಎಂದು ಅಧಿಸೂಚನೆ ಹೊರಡಿಸಬೇಕು. ಕನ್ನಡದ ಎಲ್ಲ ವೆಬ್‌ಸೈಟ್‌ಗಳೂ ಯೂನಿಕೋಡ್‌ನಲ್ಲೇ ಇರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು` ಎಂದೂ ಶಿಫಾರಸು ಮಾಡಿತು. ಸಮಿತಿಯ ಇನ್ನೂ ಅನೇಕ ಶಿಫಾರಸುಗಳ ಅನುಷ್ಠಾನಕ್ಕೆ ಯೂನಿಕೋಡ್‌ಅನ್ನು ಕನ್ನಡದ ಶಿಷ್ಟತೆ ಎಂದು ಸರ್ಕಾರ ಪರಿಗಣಿಸುವುದು ಅಗತ್ಯವೂ ಆಗಿತ್ತು. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿರುವ ಕೇಂದ್ರ ಸರ್ಕಾರ, ಕಂಪ್ಯೂಟರ್‌ನಲ್ಲಿ ತನ್ನ ಕೆಲಸಗಳು ಯೂನಿಕೋಡ್ ಶಿಷ್ಟತೆಯಲ್ಲೇ ಆಗಬೇಕು ಎಂದು 2009ರಲ್ಲೇ ಅಧಿಸೂಚನೆ ಹೊರಡಿಸಿದೆ.
`ಪ್ರಸ್ತುತ ಮಾರುಕಟ್ಟೆಯಲ್ಲಿ ಕನ್ನಡದ ಕೆಲವು ಯೂನಿಕೋಡ್ ಫಾಂಟ್‌ಗಳು ಮಾತ್ರ ಲಭ್ಯವಿವೆ. ಈ ಫಾಂಟ್‌ಗಳನ್ನು ಅಭಿವೃದ್ಧಿಪಡಿಸಿರುವ ಕಂಪೆನಿಗಳು, ಅವುಗಳ ಮೇಲೆ ಹಕ್ಕುಸ್ವಾಮ್ಯವನ್ನೂ ಹೊಂದಿವೆ. ಬೇರೆ ಬೇರೆ ಕಂಪೆನಿಗಳು ಅಭಿವೃದ್ಧಿಪಡಿಸಿರುವ ಯೂನಿಕೋಡ್ ಫಾಂಟ್‌ಗಳಿಗೆ ವಿಭಿನ್ನ ಕೀಲಿ ಮಣೆ ವಿನ್ಯಾಸ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಯೂನಿಕೋಡ್‌ಅನ್ನೇ ಕನ್ನಡದ ಶಿಷ್ಟತೆ ಎಂದು ತಕ್ಷಣಕ್ಕೆ ಅಧಿಸೂಚನೆ ಹೊರಡಿಸಿದರೆ, ಈಗ ಇರುವ ಕನ್ನಡದ ಕಡತಗಳನ್ನು ಹೊಸ ಮಾದರಿಗೆ ಬದಲಾಯಿಸಿಕೊಳ್ಳಲು ಕಷ್ಟವಾಗುತ್ತದೆ` ಎಂದು ಕಾರಣ ನೀಡುವ ಇ-ಆಡಳಿತ ಇಲಾಖೆಯ ಅಧಿಕಾರಿಗಳು, `ಯೂನಿಕೋಡ್‌ಅನ್ನು ಕನ್ನಡದ ಶಿಷ್ಟತೆ ಎಂದು ಅಧಿಸೂಚನೆ ಹೊರಡಿಸಲು ತಕ್ಷಣಕ್ಕೆ ಸಾಧ್ಯವಿಲ್ಲ` ಎನ್ನುತ್ತಿದ್ದಾರೆ.
ಸರ್ಕಾರವೇ ಕನಿಷ್ಠ 2-3 ಉತ್ತಮ ಫಾಂಟ್‌ಗಳನ್ನು ಅಭಿವೃದ್ಧಿಪಡಿಸಿದ ನಂತರ, ಯೂನಿಕೋಡ್‌ಅನ್ನು ಕನ್ನಡದ ಶಿಷ್ಟತೆ ಎಂಬ ಅಧಿಸೂಚನೆ ಹೊರಡಿಸಬಹುದು. ಅಗತ್ಯ ಫಾಂಟ್‌ಗಳನ್ನು ಸಿದ್ಧಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ತಿಳಿಸಲಾಗಿದೆ ಎಂದು ಇ-ಆಡಳಿತ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಈ ಸಂಬಂಧ ಫೆಬ್ರುವರಿ 8ರಂದು ಆದೇಶ ಹೊರಡಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೂನಿಕೋಡ್ ಫಾಂಟ್‌ಗಳನ್ನು ಅಭಿವೃದ್ಧಿಪಡಿಸಲು ಹಾಸನದ ಮಾರುತಿ ತಂತ್ರಾಂಶ ಅಭಿವೃದ್ಧಿ ಕಂಪೆನಿಗೆ 18 ಲಕ್ಷ ರೂ. ಮೊತ್ತದ ಗುತ್ತಿಗೆ ನೀಡಿದೆ.
`ಫಾಂಟ್ ಸಮಸ್ಯೆಯೇ ಅಲ್ಲ`: ಸಮಿತಿಯ ಶಿಫಾರಸಿನ ಅನ್ವಯ ಅಧಿಸೂಚನೆ ಹೊರಡಿಸಲು ಫಾಂಟ್ ಸಮಸ್ಯೆ ಇದೆ ಎಂದು ಇ-ಆಡಳಿತ ಇಲಾಖೆ ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಸಮಿತಿಯ ಸದಸ್ಯರಾದ, ಕಂಪ್ಯೂಟರ್ ತಂತ್ರಜ್ಞ ಯು.ಬಿ. ಪವನಜ ಹೇಳುತ್ತಾರೆ. ಈ ಕುರಿತು `ಪ್ರಜಾವಾಣಿ`ಯ ಜೊತೆ ಮಾತನಾಡಿದ ಅವರು, `ಫಾಂಟ್ ಸಮಸ್ಯೆ ಇದೆ ಎಂಬ ಕಾರಣಕ್ಕೆ ಯೂನಿಕೋಡ್‌ಅನ್ನು ಕನ್ನಡದ ಶಿಷ್ಟತೆ ಎಂದು ಅಧಿಸೂಚನೆ ಹೊರಡಿಸದೆ ಇರುವುದು ಮೂರ್ಖತನದ ನಿರ್ಧಾರ` ಎಂದು ಬೇಸರದಿಂದ ಹೇಳಿದರು.
ಕನ್ನಡದಲ್ಲಿ ಸೂಕ್ತ ಯೂನಿಕೋಡ್ ಫಾಂಟ್‌ಗಳು ಇಲ್ಲ ಎಂದು ಇ-ಆಡಳಿತ ಇಲಾಖೆಯ ಕೆಲವು ಅಧಿಕಾರಿಗಳು ಹೇಳುವುದು ಮಾಹಿತಿ ಕೊರತೆಯಿಂದ ಆಡುವ ಮಾತು. `ಸಂಪಿಗೆ`, `ಮಲ್ಲಿಗೆ`, `ಕೇದಗೆ`, `ಪೂರ್ಣಚಂದ್ರ ತೇಜಸ್ವಿ`, `ಸಕಲ ಭಾರತಿ`, `ಗುಬ್ಬಿ`, `ನವಿಲು`- ಕನ್ನಡದ ಈ ಯೂನಿಕೋಡ್ ಫಾಂಟ್‌ಗಳು ಇಂಟರ್ನೆಟ್‌ನಲ್ಲಿ ಈಗಾಗಲೇ ಉಚಿತವಾಗಿ ಲಭ್ಯವಿವೆ ಎಂದು ಪವನಜ ತಿಳಿಸಿದರು.
ಅಷ್ಟೇ ಅಲ್ಲ, ಕೀಲಿಮಣೆ ವಿನ್ಯಾಸಕ್ಕೂ ಯೂನಿಕೋಡ್‌ಗೂ ಯಾವುದೇ ಸಂಬಂಧ ಇಲ್ಲ. ಯೂನಿಕೋಡ್ ಮತ್ತು ಫಾಂಟ್‌ಗೂ ಸಂಬಂಧವಿಲ್ಲ. ಫಾಂಟ್ ಅಭಿವೃದ್ಧಿಪಡಿಸಿದ ನಂತರವೇ ಯೂನಿಕೋಡ್‌ಅನ್ನು ಕನ್ನಡದ ಶಿಷ್ಟತೆ ಎಂದು ಅಧಿಸೂಚನೆ ಹೊರಡಿಸಬಹುದು ಎಂಬ ಇ-ಆಡಳಿತ ಇಲಾಖೆಯ ಅಧಿಕಾರಿಗಳ ವಾದ ಅರ್ಥವಿಲ್ಲದ್ದು ಎಂದು ಸ್ಪಷ್ಟಪಡಿಸಿದರು. ಯೂನಿಕೋಡ್‌ಅನ್ನು ಶಿಷ್ಟತೆ ಎಂದು ಅಧಿಸೂಚನೆ ಹೊರಡಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ಫಾಂಟ್ ಅಥವಾ ಕೀಲಿಮಣೆ ವಿನ್ಯಾಸ ಕುರಿತು ಅನಗತ್ಯ ಚಿಂತೆ ಮಾಡಿರಲಿಲ್ಲ ಎಂದು ಅವರು ತಿಳಿಸಿದರು.
ಯೂನಿಕೋಡ್ ಅನ್ನು ಶಿಷ್ಟತೆಯಾಗಿಸುವ ಸಂಬಂಧ ಡಾ. ಚಂದ್ರಶೇಖರ ಕಂಬಾರರೂ ಸಹಮತ ವ್ಯಕ್ತಪಡಿಸುತ್ತಾರೆ. `ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರಿದ್ದಾಗಿನಿಂದಲೇ ಯೂನಿಕೋಡ್ ಶಿಷ್ಟತೆ ಕುರಿತು ನಾವು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಆದರೆ ಸರ್ಕಾರ ಅಗತ್ಯ ಅಧಿಸೂಚನೆ ಹೊರಡಿಸುತ್ತಿಲ್ಲ` ಎಂದು ತಂತ್ರಾಂಶ ಅಭಿವೃದ್ಧಿ ಸಮಿತಿಯ ಸದಸ್ಯರೂ ಆಗಿರುವ ಡಾ. ಕಂಬಾರರು ಬೇಸರ ವ್ಯಕ್ತಪಡಿಸಿದರು.
ಅಧಿಸೂಚನೆ ಹೊರಡಿಸದಿದ್ದರೆ ಸರ್ಕಾರದ ವಿವಿಧ ಇಲಾಖೆಯವರು ಯೂನಿಕೋಡ್ ಬಳಸುವುದಿಲ್ಲ. ಅದನ್ನು ಬಳಸದೆ ರಾಜ್ಯದಲ್ಲಿ ಇ-ಆಡಳಿತ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಎಲ್ಲರೂ ಯೂನಿಕೋಡ್ ಬಳಸಿದರೆ ಮಾತ್ರ ಕನ್ನಡದ ಸುಧಾರಣೆ ಸಾಧ್ಯ ಎಂದು ಅವರು ಖಚಿತ ಧ್ವನಿಯಲ್ಲಿ ಹೇಳಿದರು.
ಸ್ಪಷ್ಟ ಉತ್ತರ ನೀಡದ ವಿದ್ಯಾಶಂಕರ್
ಬೆಂಗಳೂರು: ಯೂನಿಕೋಡ್‌ಅನ್ನು ಶಿಷ್ಟತೆ ಎಂದು ಅಧಿಸೂಚನೆ ಹೊರಡಿಸುವಲ್ಲಿ ವಿಳಂಬ ಏಕೆ ಎಂದು `ಪ್ರಜಾವಾಣಿ` ಪ್ರಶ್ನಿಸಿದಾಗ ಸ್ಪಷ್ಟ ಉತ್ತರ ನೀಡದ ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್ ಅವರು, `ಡಾ. ಚಿದಾನಂದ ಗೌಡ ಅಧ್ಯಕ್ಷತೆಯ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ ಸಲ್ಲಿಸಿರುವ ವರದಿ ಆಧರಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಲ್ಲಿಸಿದ್ದ ಕಾರ್ಯ ಯೋಜನೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ. ಯೂನಿಕೋಡ್ ಫಾಂಟ್ ಅಭಿವೃದ್ಧಿ ಮತ್ತು ಇತರ ಕೆಲವು ಯೋಜನೆಗಳ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈಗಾಗಲೇ ಟೆಂಡರ್ ಕರೆದು, ಗುತ್ತಿಗೆ ನೀಡಿದೆ` ಎಂದು ಹೇಳಿದರು.
ಫಾಂಟ್ ಅಭಿವೃದ್ಧಿ ಸಂಬಂಧ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ. ಆದರೆ ಯೂನಿಕೋಡ್ ಶಿಷ್ಟತೆ ಕುರಿತು ಅಧಿಸೂಚನೆ ಹೊರಡಿಸುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿಲ್ಲ ಎಂದು ಕಾರ್ಯದರ್ಶಿ ಬಸವರಾಜು ಅವರು ತಿಳಿಸಿದರು.
-ವಿಜಯ್ ಜೋಷಿ
(ಕೃಪೆ: ಪ್ರಜಾವಾಣಿ, ೨೭-೦೨-೨-೧೨)
February 29th, 2012 at 12:27 pm
ಸರ್ಕಾರ ಯುನಿಕೋಡ್ ಶಿಷ್ಟತೆ ಬೇಗ ಜಾರಿಗೊಳಿಸಲಿ
– ಕೇಶವ ಕುಡ್ಲ, ಮಂಗಳೂರು
`ಯುನಿಕೋಡ್ : ಸರ್ಕಾರದ ಮೀನಾಮೇಷ` (ಪ್ರವಾ. ಫೆ.27) ಓದಿ ನಿರಾಸೆಯಾಯಿತು. ಕನ್ನಡದ ಸಾಹಿತಿಗಳಲ್ಲದೆ ಕನ್ನಡದ ನಿಷ್ಠ ಅಭಿಮಾನಿಗಳು ಯಾವಾಗಿನಿಂದಲೋ ಕನ್ನಡಕ್ಕೆ ಸೂಕ್ತವಾದ ಶಿಷ್ಟತೆಯೊಂದನ್ನು ಅನುಮೋದಿಸಿ ಆದೇಶ ಹೊರಡಿಸುವಂತೆ ಸರ್ಕಾರವನ್ನು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರಾದರೂ ಸರ್ಕಾರದ ಈ ನಿರಾಸಕ್ತಿಯನ್ನು ಹೊಡೆದೋಡಿಸಲಾಗುತ್ತಿಲ್ಲ.
ಕನ್ನಡ ಗಣಕ ಪರಿಷತ್ತು ಏನು ಮಾಡಿದೆಯೋ ಅದರಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಕನ್ನಡದ ಕೆಲಸವನ್ನು ನಮ್ಮ ಭಾಷಾ ಭಕ್ತರಾದ ಕನ್ನಡ ಸಾಫ್ಟ್‌ವೇರಿಗರು ಮಾಡಿದ್ದಾರೆ, ಮಾಡಿಕೊಂಡು ಬರುತ್ತಿದ್ದಾರೆ. ಅದೂ ಪ್ರತಿಫಲಾಪೇಕ್ಷೆ ಇಲ್ಲದೆ!
ಏನೋ ದೊಡ್ಡಮನಸ್ಸು ಮಾಡಿದಂತೆ, ಕೆಲವು ವರ್ಷಗಳ ಹಿಂದೆ ಸರ್ಕಾರ `ನುಡಿ`ಯನ್ನು ಆಡಳಿತ ಶಿಷ್ಟತೆಯಾಗಿ ಮಾಡಿತ್ತು. ತಂತ್ರಜ್ಞಾನ ಮತ್ತು ಅವಶ್ಯಕತೆಗಳು ನಿಮಿಷ ನಿಮಿಷಕ್ಕೂ ಬದಲಾಗುತ್ತಿರುವಾಗ, ಎಂದೋ ಮಾಡಿದ ಆದೇಶವನ್ನು ಮುಂದೆ ಹಿಡಿದು `ಕನ್ನಡ ಜಾರಿ ಮಾಡಿದ್ದೇವೆ` ಎಂದರೆ ಆಗುವುದಿಲ್ಲ.
ಕನ್ನಡದ ಶಿಷ್ಟತೆ ಎಂದರೆ ಅದು ಎಲ್ಲರಿಗೂ ಎಟಕುವಂತಿರಬೇಕು. ಅಲ್ಲದೆ, ಮುಖ್ಯವಾಗಿ ಅಂತರ್ಜಾಲದ ಹುಡುಕಾಟಕ್ಕೆ ಸಿಕ್ಕುವಂತಿರಬೇಕು. ಕನ್ನಡದ ಎಂಜಿನಿಯರ್‌ಗಳು ಕನ್ನಡಕ್ಕಾಗಿ ಅಭಿಮಾನಪೂರ್ವಕ ಏನೆಲ್ಲಾ ಮಾಡುತ್ತಿದ್ದಾರೆ ಎಂಬ ಅರಿವು ಸರ್ಕಾರಕ್ಕಿಲ್ಲ ಎಂದು ಭಾಸವಾಗುತ್ತದೆ.
ಇಲ್ಲವಾದರೆ ಕೀಲಿಮಣೆ ಸರಿಯಿಲ್ಲ, ಸೂಕ್ತ ಫಾಂಟ್‌ಗಳಿಲ್ಲ, ಹಕ್ಕುಸ್ವಾಮ್ಯ ಇತ್ಯಾದಿ ರಾಗ ಎಳೆಯುತ್ತಿರಲಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಕೊರತೆ ಇದೆ ಎಂದು ಪವನಜ ಅವರು ತುಂಬ ಸೌಮ್ಯವಾಗಿ ಹೇಳಿದ್ದಾರಾದರೂ ಅದು ಮಾಹಿತಿ ಕೊರತೆ ಅಲ್ಲ, ನಿರಾಸಕ್ತಿ ಎಂದು ಬೇಸರದಿಂದ ಹೇಳಬೇಕಾಗುತ್ತದೆ.
ಇಲಾಖೆಯನ್ನೇ ಅಂಗೈಯಲ್ಲಿಟ್ಟುಕೊಂಡಿರುವ ಅಧಿಕಾರಿಗಳಿಗೆ ಕನ್ನಡದಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ಸಂಗ್ರಹಿಸಿಕೊಳ್ಳುವುದು ಕಷ್ಟವೆ? `ಗೂಗಲ್ ಟ್ರಾನ್ಸ್‌ಲಿಟರೇಟ್` ಸಹಾಯದಿಂದ ನಾವೆಲ್ಲ ಯಾವಾಗಿನಿಂದಲೋ ಯುನಿಕೋಡ್ ಕನ್ನಡ ಟೈಪ್ ಮಾಡಿಕೊಳ್ಳುತ್ತಿದ್ದೇವೆ.
ಹಾಗಾಗಿ ನಮ್ಮ ಬ್ಲಾಗ್‌ಗಳು ಎಲ್ಲರಿಗೂ ಕಾಣುವ ಸೌಲಭ್ಯ ಪಡೆದಿವೆ. ಟ್ರಾನ್ಸ್‌ಲಿಟರೇಟ್ ಡೌನ್‌ಲೋಡ್ ಮಾಡಿಕೊಂಡರೆ ನೇರವಾಗಿ ಅಂತರ್ಜಾಲ ಸಹಾಯವಿಲ್ಲದೆ ಎಲ್ಲಿ ಬೇಕಾದರೂ ಯುನಿಕೋಡ್‌ನಲ್ಲಿ ಕನ್ನಡವನ್ನು ಟೈಪ್ ಮಾಡಬಹುದು. ಜೊತೆಗೆ ಮೈಕ್ರೋಸಾ್‌ಟನವರ `ತುಂಗಾ`, ಟಿ.ಡಿ.ಐ.ಎಲ್ ನವರ `ಸಂಪಿಗೆ` ಮತ್ತು `ಕೇದಗೆ`, ವಿ.ಕೆ.ಅರವಿಂದರ `ಗುಬ್ಬಿ` ಮತ್ತು `ನವಿಲು` ಮೊದಲಾಗಿ ಸುಂದರ ಹೆಸರುಗಳ ಯುನಿಕೋಡ್ ಫಾಂಟ್‌ಗಳಿವೆ. ಇನ್ನೂ ನಮ್ಮ ಗಮನಕ್ಕೆ ಬಾರದ ಎಷ್ಟೋ ಫಾಂಟ್‌ಗಳೂ ಇರಬಹುದಲ್ಲವೆ?
ಸರ್ಕಾರದ ಮತ್ತೊಂದು ಸಬೂಬು `ಸೂಕ್ತ ಕೀಲೀಮಣೆ ಇಲ್ಲ` ಎನ್ನುವುದು. ಈ ಸಬೂಬು ಎಷ್ಟೊಂದು ಅರ್ಥಹೀನ ಮತ್ತು ಹಾಸ್ಯಾಸ್ಪದ ಎಂಬುದು ಈಗಾಗಲೇ ಕನ್ನಡ ಟೈಪ್ ಮಾಡುತ್ತಿರುವವರೆಲ್ಲರ ಅನುಭವವಾಗಿದೆ. ಕನ್ನಡಕ್ಕೆ ಬೇರೆ ಕೀಲಿಮಣೆ ಮಾಡಿದರೆ ಆಗುವ ಸೌಲಭ್ಯಕ್ಕಿಂತ ಹೆಚ್ಚು ಸುಲಭವಾಗಿ ಈಗಿರುವ ಕೀಲಿಮಣೆಯಲ್ಲೇ ಯುನಿಕೋಡ್ ಅಥವಾ ಯಾವುದೇ ಕನ್ನಡ ಫಾಂಟ್ ಟೈಪ್ ಮಾಡಬಹುದಾಗಿದೆ.
ಇನ್ನು, ಈಗಾಗಲೇ ಇರುವ ಸರ್ಕಾರೀ ಕಡತಗಳನ್ನು ಏನು ಮಾಡುವುದು? ಎಂಬುದು ಸರ್ಕಾರದ ಕಷ್ಟವಾಗಿರುವಂತಿದೆ. `ಬರಹ` ಶೇಷಾದ್ರಿಯವರು ಮತ್ತು ವಿ.ಕೆ.ಅರವಿಂದ ಅವರು `ನುಡಿ` ಹಾಗೂ `ಬರಹ` ಪಾಂಟ್‌ಗಳನ್ನು ಸುಲಭವಾಗಿ ಯುನಿಕೋಡ್‌ಗೆ ಬದಲಾಯಿಸಬಲ್ಲ ಕನ್ವರ್ಟರ್ ತಂತ್ರಾಂಶಗಳನ್ನು ರೂಪಿಸಿದ್ದಾರೆ.
ಇಂತಹ ಕನ್ನಡಪ್ರಿಯ ಸಾಫ್ಟ್‌ವೇರಿಗರು ಮತ್ತು ಅವರ ಕೆಲಸಗಳು ಸರ್ಕಾರದ ಅರಿವಿಗೆ ಬರುವುದೇ ಇಲ್ಲ ಎಂದರೆ ಏನರ್ಥ? ಸರ್ಕಾರಕ್ಕೆ ಮನಸ್ಸಿಲ್ಲ ಎಂದು ಹೇಳಿದರೆ ಕಟುವಾಗಲಾರದೇನೋ?
ನಿಜಕ್ಕೂ `ಕಂಪ್ಯೂಟರ್‌ನಲ್ಲಿ ಕನ್ನಡ` ಎಂದರೆ ಅದು ಯುನಿಕೋಡ್ ಆಗಿರಲೇಬೇಕು. ಹಾಗಾದರೆ ಮಾತ್ರ ಕನ್ನಡ ಸಾಫ್ಟ್‌ವೇರ್ ಇಲ್ಲದ ಕಂಪ್ಯೂಟರ್‌ನಲ್ಲೂ ಕನ್ನಡ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಯಾವುದೇ ವಿಷಯದ ಕನ್ನಡದ ಕಡತವನ್ನು ಅಂತರ್ಜಾಲದಲ್ಲಿ ಹುಡುಕುವವರಿಗೆ ಸುಲಭದಲ್ಲಿ ಯುನಿಕೋಡ್ ಫೈಲುಗಳು ಸಿಕ್ಕುತ್ತವೆ.
ಸರ್ಕಾರದ ವೆಬ್‌ನಿಂದ ಹಿಡಿದು ಎಲ್ಲವೂ ಯುನಿಕೋಡ್‌ನಲ್ಲಿದ್ದರೆ ಆಸಕ್ತರಿಗೆ ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಆಡಳಿತದಲ್ಲಿ ಕನ್ನಡ ಎಂಬುದು ಶುದ್ಧ ಬೊಗಳೆಯಾಗುತ್ತದೆ.
ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ ಎಂಬುದು ಖಚಿತವಾಗಿರುವಾಗ ಕನ್ನಡ ಪ್ರಾಧಿಕಾರದಿಂದ ಹಿಡಿದು ಸಾಹಿತ್ಯ ಪರಿಷತ್ತಿನವರೆಗೆ ಹಾಗೂ ಕನ್ನಡದ ಉದ್ಧಾರಕ್ಕೆ ಪಣತೊಟ್ಟಿರುವ ಎಷ್ಟೋ ಕನ್ನಡ ಸಂಘಗಳು ಹಾಗೂ ಹೋರಾಟಗಾರರು ಈ ಬಗ್ಗೆ ಹಕ್ಕೊತ್ತಾಯ ಮಾಡುವುದು ಅನಿವಾರ್ಯವಾಗಿದೆ. ಯಾವುಯಾವುದಕ್ಕೋ ಲಾಬಿ ನಡೆಸುವವರು ಈ ಸದುದ್ದೆೀಶಕ್ಕಾಗಿ ಲಾಬಿ ನಡೆಸಲಿ. ಸರ್ಕಾರದ ಕಣ್ತೆರೆಸಲಿ.
ಈಗ ಚಾಲ್ತಿಯಲ್ಲಿರುವ `ಬರಹ`, `ನುಡಿ`, `ಪ್ರಕಾಶಕ್`, `ಶ್ರೀ` ಹೀಗೆ ಯಾವುದೇ ಕನ್ನಡ ಸಾಫ್ಟ್‌ವೇರ್ ಆದರೂ ಪ್ರತಿಯೊಂದಕ್ಕೂ ಅದರದೇ ಎನ್‌ಕೋಡಿಂಗ್ ಇರುತ್ತದೆ. ಟೈಪಿಂಗ್ ಕ್ರಮವೂ ಬೇರೆಯೇ ಇರುತ್ತದೆ. ಯಾವುದೇ ತಂತ್ರಾಂಶದಲ್ಲಿ ಟೈಪ್ ಮಾಡಿದರೂ ಬೇರೊಂದು ಕಂಪ್ಯೂಟರಿನಲ್ಲಿ ಓದಲು ಅದೇ ತಂತ್ರಾಂಶ ಬೇಕಾಗುತ್ತದೆ.
ಹಾಗಿರುವಾಗ ಯಾವುದೇ ತಂತ್ರಾಂಶವನ್ನು ಬೇಡದ ಯಾವುದೇ ಕಂಪ್ಯೂಟರಿನಲ್ಲೂ ಪ್ರತ್ಯಕ್ಷವಾಗಿ ಬಿಡುವ ವಿಶ್ವ ಸಂಕೇತವಾಗಿರುವ ಯುನಿಕೋಡ್ ಕನ್ನಡದ ಬೆಳವಣಿಗೆಗೆ ಇಂದಿನ ಅವಶ್ಯಕತೆಯಾಗಿದೆ. ಸರ್ಕಾರವಾದರೂ ಕನ್ನಡದ ಬೆಳವಣಿಗೆಗೆ ಪಂಪ, ರನ್ನ, ಕುಮಾರವ್ಯಾಸರ ಕಾಲದಿಂದ ಹೊರಬಂದು ಆಲೋಚಿಸಬೇಕಾಗಿದೆ.
(೨೯-೦೨-೨೦೧೨ರ ಪ್ರಜಾವಾಣಿ ವಾಚಕರವಾಣಿಯಲ್ಲಿ ಪ್ರಕಟವಾದ ಪತ್ರ)
August 3rd, 2014 at 9:25 pm
ಸರಕಾರದ ಕೆಲಸ ದೆವರ ಕೆಲೆಸ ……