ಮಹಾಭಾರತ ಮತ್ತು ತಂತ್ರಾಂಶ ತಯಾರಿ

– ಡಾ. ಯು. ಬಿ. ಪವನಜ

ಇದೇನು ಶೀರ್ಷಿಕೆ ಈ ರೀತಿ ಇದೆಯಲ್ಲಾ? ಇಮಾಂಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎಂದು ಕೇಳುತ್ತಿದ್ದೀರಾ? ಸಂಬಂಧವಿದೆ ಸ್ವಾಮೀ. ಸ್ವಲ್ಪ ಓದುವಂತವರಾಗಬೇಕು.

ಮಹಾಭಾರತದಲ್ಲಿ ಬರುವ ಒಂದು ಪ್ರಮುಖ ಘಟನೆ ಸುಧನ್ವನಿಗೂ ಅರ್ಜುನನಿಗೂ ನಡೆಯುವ ಯುದ್ಧ. ಮಹಾಭಾರತದ ಯುದ್ಧದ ನಂತರ ನಡೆಯುವ ಅಶ್ವಮೇಧಯಾಗದ ಪ್ರಸಂಗದಲ್ಲಿ ಈ ಕಥೆ ಬರುತ್ತದೆ. ಸುಧನ್ವ ಮತ್ತು ಅರ್ಜುನ ಇಬ್ಬರೂ ಕೃಷ್ಣಭಕ್ತರು. ಇಬ್ಬರೂ ಕೃಷ್ಣನ ಮೇಲೆ ಆಣೆ ಇಟ್ಟು ಒಂದೊಂದು ಪ್ರತಿಜ್ಞೆ ಮಾಡುತ್ತಾರೆ. ಅರ್ಜುನ ಹೇಳುತ್ತಾನೆ – “ಇನ್ನು ಮೂರು ಬಾಣಗಳಲ್ಲಿ ನಾನು ನಿನ್ನನ್ನು ಕೊಲ್ಲದಿದ್ದಲ್ಲಿ ನಾನು ಕೃಷ್ಣನಭಕ್ತನೇ ಅಲ್ಲ. ಕೃಷ್ಣನ ಮೇಲೆ ಆಣೆ”. ಸುಧನ್ವ ಕೂಡಲೇ ಉತ್ತರಿಸುತ್ತಾನೆ – “ನಿನ್ನ ಆ ಮೂರು ಬಾಣಗಳನ್ನೂ ಕತ್ತರಿಸದಿದ್ದಲ್ಲಿ ನಾನು ಕೃಷ್ಣಭಕ್ತನೇ ಅಲ್ಲ. ಕೃಷ್ಣ ಮೇಲೆ ಆಣೆ”. ಈಗ ಕೃಷ್ಣನಿಗೆ ಸಂದಿಗ್ಧ. ಇಬ್ಬರೂ ತನ್ನ ಮೇಲೆ ಆಣೆ ಇಟ್ಟಿದ್ದಾರೆ. ಅಂದ ಮೇಲೆ ಇಬ್ಬರ ಪ್ರತಿಜ್ಞೆಗಳೂ ಪೂರ್ಣವಾಗಬೇಕು. ಇಬ್ಬರ ಪ್ರತಿಜ್ಞೆಗಳನ್ನು ಗಮನವಿಟ್ಟು ಇನ್ನೊಮ್ಮೆ ಓದಿ. ಅರ್ಜುನನ ಪ್ರತಿಜ್ಞೆ ಪ್ರಕಾರ ಸುಧನ್ವ ಸಾಯಬೇಕು. ಸುಧನ್ವನ ಪ್ರತಿಜ್ಞೆ ಪ್ರಕಾರ ಅರ್ಜುನನ ಮೂರು ಬಾಣಗಳನ್ನು ತುಂಡರಿಸಬೇಕು. ಅರ್ಜುನ ಮೂರು ಬಾಣಗಳನ್ನು ಒಂದರ ನಂತರ ಇನ್ನೊಂದರಂತೆ ಪ್ರಯೋಗಿಸುತ್ತಾನೆ. ಸುಧನ್ವ ಅವುಗಳನ್ನೆಲ್ಲ ಕತ್ತರಿಸುತ್ತಾನೆ. ಮೂರನೆಯ ಬಾಣ ಎರಡು ತುಂಡಾಗುತ್ತದೆ. ಅದರ ಹಿಂದಿನ ಭಾಗ ಅಲ್ಲೇ ಬೀಳುತ್ತದೆ. ಮುಂದಿನ ಭಾಗ ಮತ್ತೂ ಮುಂದುವರೆದು ಸುಧನ್ವನನ್ನು ಕೊಲ್ಲುತ್ತದೆ. ಅಲ್ಲಿಗೆ ಇಬ್ಬರ ಪ್ರತಿಜ್ಞೆಗಳೂ ಪೂರ್ಣಗೊಂಡಂತಾಯಿತು.

 

ಈ ಕಥೆಗೂ ತಂತ್ರಾಂಶ ತಯಾರಿಗೂ ಏನು ಸಂಬಂಧ ಎಂದು ಪ್ರಶ್ನಿಸುತ್ತಿದ್ದೀರಾ? ಇಂತಹ ಕಥೆಗಳು, ಸಂದರ್ಭಗಳು, ಮಹಾಭಾರತದಲ್ಲಿ ಬೇಕಾದಷ್ಟಿವೆ. ಇವುಗಳಲ್ಲಿ ಅಡಕವಾಗಿರುವ ಒಂದು ಪ್ರಮುಖ ತತ್ತ್ವ (ಅಧ್ಯಾತ್ಮದ ಹೊರತಾಗಿ) ಎಂದರೆ ತರ್ಕ. ಸ್ವಲ್ಪ ಗಮನವಿಟ್ಟು ನೋಡಿದರೆ ಇದರಲ್ಲಿರುವ ತರ್ಕ ಸ್ಪಷ್ಟವಾಗಿ ಗೋಚರವಾಗುತ್ತದೆ. ತಂತ್ರಾಂಶ ತಯಾರಿಗೆ ಬೇಕಾಗಿರುವ ಒಂದು ಪ್ರಮುಖ ಅರ್ಹತೆಯೆಂದರೆ ತರ್ಕಬದ್ಧವಾಗಿ ಯೋಚಿಸುವುದು.

 

ಇನ್ಫೋಸಿಸ್ ನಾರಾಯಣಮೂರ್ತಿಯವರಿಗೆ ೧೯೯೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಬೆಂಗಳೂರು ಆಕಾಶವಾಣಿ ಅವರೊಂದಿಗೆ ಸಾರ್ವಜನಿಕರಿಂದ ಫೋನ್-ಇನ್ ಕಾರ್ಯಕ್ರಮವನ್ನು ನೇರ ಪ್ರಸಾರಗೊಳಿಸಿತ್ತು. ಆ ಸಂದರ್ಭದಲ್ಲಿನಾನು ಸಂದರ್ಶಕನಾಗಿ ಭಾಗವಹಿಸಿದ್ದೆ. ಆ ದಿನ ನಾನು ಕೇಳಿದ ಒಂದು ಪ್ರಶ್ನೆ ಹೀಗಿತ್ತು: “ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಲೆ ಬರಬೇಕಾದರೆ ಒಂದನೆ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಬೇಕು ಎಂದು ಬಹುಪಾಲು ಜನರು ತಿಳಿದುಕೊಂಡಿದ್ದಾರೆ ಇದು ನಿಜವೇ?”. ಅದಕ್ಕೆ ನಾರಾಯಣ ಮೂರ್ತಿಯವರು ನೀಡಿದ ಉತ್ತರ ಎಲ್ಲರೂ ಗಮನಿಸಬೇಕಾದುದಾಗಿದೆ: “ಈ ನಂಬಿಕೆ ಸರಿಯಲ್ಲ. ಒಳ್ಳೆಯ ಆಲೋಚನಾ ಶಕ್ತಿ, ಮುಖ್ಯವಾಗಿ ತರ್ಕಬದ್ಧವಾಗಿ ಯೋಚಿಸುವ ಶಕ್ತಿ ಇದ್ದರೆ ಸಾಕು. ಹತ್ತನೆ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ಕಲಿತರೆ ಏನೂ ಅಡ್ಡಿಯಿಲ್ಲ. ಒಳ್ಳೆಯ ಮೆದುಳಿಗೂ ವಿದ್ಯಾಭ್ಯಾಸದ ಮಾಧ್ಯಮಕ್ಕೂ ಯಾವುದೇ ಸಂಬಂಧವಿಲ್ಲ.” ಅಂದರೆ ತರ್ಕಬದ್ಧವಾಗಿ ಯೋಚಿಸುವ ಶಕ್ತಿ ಭಾಷಾಪಾಂಡಿತ್ಯ (ಇಂಗ್ಲಿಶ್ ಪಾಂಡಿತ್ಯ) ಕ್ಕಿಂತ ಮುಖ್ಯ ಎಂದಾಯಿತು. ಪೂರ್ತಿ ಸಂದರ್ಶನ ಇಲ್ಲಿದೆ.

 

ತಂತ್ರಾಂಶ ತಯಾರಿಗೆ ಮುಖ್ಯವಾಗಿ ಬೇಕಾಗಿರುವುದು ತರ್ಕಬದ್ಧವಾಗಿ ಯೋಚಿಸುವ ಶಕ್ತಿ. ಇನ್ಫೋಸಿಸ್, ವಿಪ್ರೊ, ಟಿಸಿಎಸ್, ಮೈಕ್ರೋಸಾಫ್ಟ್, ಇತ್ಯಾದಿ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವಾಗ ಅದರಲ್ಲೂ ಮುಖ್ಯವಾಗಿ ನವಪದವೀಧರರಿಗೆ ಅವರ ಕಂಪ್ಯೂಟರ್ ವಿಜ್ಞಾನದ ವಿಷಯದ ಪ್ರಶ್ನೆಗಳಿಗಿಂತಲೂ ತರ್ಕದ ಪ್ರಶ್ನೆಗಳ ಉತ್ತರಗಳಿಗೆ ಹೆಚ್ಚಿನ ಮಹತ್ತ್ವ ನೀಡುತ್ತಾರೆ. ಇದಕ್ಕೆ ಆಪ್ಟಿಟ್ಯೂಡ್ (aptitude) ಪರೀಕ್ಷೆ ಎನ್ನುತ್ತಾರೆ. ಪದವಿ ಪರೀಕ್ಷೆಯಲ್ಲಿ ೮೫% ಅಂಕ ತೆಗೆದುಕೊಂಡಿದ್ದರೂ ಈ ಪರೀಕ್ಷೆಯಲ್ಲಿ ನಪಾಸಾದರೆ ತಂತ್ರಾಂಶ ತಯಾರಿಯ ಕಂಪೆನಿಯಲ್ಲಿ ಕೆಲಸ ಇಲ್ಲ ಎಂದೇ ತಿಳಿದುಕೊಳ್ಳಬೇಕು. ಇದರಲ್ಲಿ ಸರಳ ಅಂಕಗಣಿತ, ತರ್ಕ, ವಿಶ್ಲೇಷಣೆ ಎಂದು ಮೂರು ವಿಭಾಗಗಳಿರುತ್ತವೆ. ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿರುವ ಎಲ್ಲ ಪದವೀಧರರಿಗೆ ಗೊತ್ತಿರುವ ವಿಷಯ ಇದು. ಆ ಪರೀಕ್ಷೆಯ ತಯಾರಿಗೆ ಸಹಾಯ ಮಾಡಲೆಂದೇ ಹಲವು ಗೈಡ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಕೊನೆ ಘಳಿಗೆಯಲ್ಲಿ ಗೈಡ್ ಓದಿ ತಯಾರಾಗಿ ಪರೀಕ್ಷೆ ಪಾಸಾಗಲು ಸಾಧ್ಯವಿಲ್ಲ. ಈ ತರ್ಕಬದ್ಧವಾಗಿ ಯೋಚಿಸುವ ಶಕ್ತಿ ಹಲವು ವರ್ಷಗಳ ಸತತ ಅಭ್ಯಾಸದಿಂದ ಮಾತ್ರ ಬರುತ್ತದೆ. ಆದುದರಿಂದ ತಂತ್ರಾಂಶ ತಯಾರಿಯ ಕೆಲಸ ಬೇಕು ಎನ್ನುವವರು ಪದವಿ ತರಗತಿಯ ಪ್ರಥಮ ವರ್ಷದಿಂದಲೇ ತರ್ಕಬದ್ಧವಾಗಿ ಯೋಚಿಸುವುದನ್ನು ರೂಢಿಗತಗೊಳಿಸಿಕೊಳ್ಳಬೇಕು.

 

ತಂತ್ರಾಂಶ ತಯಾರಿಯಲ್ಲಿ ಜಗತ್ತಿನ ಪ್ರಥಮ ಸ್ಥಾನದಲ್ಲಿರುವ ಮೈಕ್ರೋಸಾಫ್ಟ್ ಕಂಪೆನಿಯ ಸ್ಥಾಪಕ ಬಿಲ್ ಗೇಟ್ಸ್ ಹೆಸರು ಕೇಳರಿಯವದರಾರು? ಅವರು ತರ್ಕಬದ್ಧವಾಗಿ ಯೋಚಿಸುವ ಶಕ್ತಿಗೆ ಅತಿ ಮಹತ್ತ್ವ ನೀಡುತ್ತಿದ್ದರು. ಅವರು ಕಂಪೆನಿಗೆ ಉದ್ಯೋಗಿಗಳನ್ನು ಸೇರಿಸಿಕೊಳ್ಳಲು ಸಂದರ್ಶಿಸುವಾಗ ಸಮಸ್ಯೆಗಳನ್ನು ಕೇಳುತ್ತಿದ್ದರು. ಇಂತಹ ಸಂದರ್ಶನಗಳಲ್ಲಿ ಕೇಳಿದ ಸಮಸ್ಯೆಗಳನ್ನು ಹಲವು ಅಂತರಜಾಲತಾಣಗಳಲ್ಲಿ ಓದಬಹುದು. ಅಷ್ಟು ಮಾತ್ರವಲ್ಲ, ಅವುಗಳ ಬಗ್ಗೆ ಒಂದು ಪುಸ್ತಕವೇ ಇದೆ (How Would You Move Mount Fuji? Microsoft’s Cult of the Puzzle – How the World’s Smartest Company Selects the Most Creative Thinkers by William Poundstone). ಬಿಲ್ ಗೇಟ್ಸ್ ಪ್ರಕಾರ “ಒಬ್ಬನಲ್ಲಿ ಉತ್ತಮ ಐಕ್ಯೂ ಇದ್ದರೆ ಸಾಕು. ಅವನನ್ನು ನಾನು ಯಾವ ವಿಷಯದ ಬಗ್ಗೆ ಬೇಕಿದ್ದರೂ ಪರಿಣತನನ್ನಾಗಿ ತರಬೇತಿ ನೀಡಬಲ್ಲೆ”.

 

ಈ ತರ್ಕಬದ್ಧವಾಗಿ ಯೋಚಿಸುವ ಶಕ್ತಿ ಬರಲು ಏನು ಮಾಡಬೇಕು? ಮೆದುಳಿಗೆ ಕಸರತ್ತು ನೀಡುವ ಸಮಸ್ಯೆಗಳನ್ನು ಪರಿಹರಿಸಬೇಕು (puzzle solving). ಚಿಕ್ಕಂದಿನಲ್ಲಿ ಒಬ್ಬರಿಗೊಬ್ಬರು ಸಮಸ್ಯೆಗಳನ್ನು ಹೇಳುವುದು, ಉತ್ತರ ಕಂಡುಹಿಡಿಯುವುದು ನಮಗೆಲ್ಲ ಒಂದು ಸಾಮಾನ್ಯ ಹವ್ಯಾಸವಾಗಿತ್ತು. ಹುಲಿ, ದನ, ಹುಲ್ಲುಗಳನ್ನು ಹಿಡಿದುಕೊಂಡು ಹೋಗುವಾಗ ದಾರಿಯಲ್ಲಿ ಎದುರಾಗುವ ಹೊಳೆಯನ್ನು ದಾಟಿಸುವ ಸಮಸ್ಯೆ ನಿಮಗೆಲ್ಲ ತಿಳಿದೇ ಇರಬಹುದು. ಇತ್ತೀಚೆಗೆ ಇಂತಹ ಸಮಸ್ಯೆಗಳನ್ನು ಹೇಳುವ, ಉತ್ತರ ಕಂಡುಹಿಡಿಯುವ, ಹವ್ಯಾಸ ಇಲ್ಲವಾಗುತ್ತಿದೆ. ಸಮಸ್ಯೆಗಳನ್ನು ಪರಿಹರಿಸುವುದು ಮಾತ್ರವಲ್ಲ, ಪಂಚತಂತ್ರ ಮತ್ತು ಮಹಾಭಾರತ ಓದುವುದರಿಂದಲೂ ತರ್ಕಶಕ್ತಿ ಹೆಚ್ಚಿಸಿಕೊಳ್ಳಬಹುದು. ಕರಾವಳಿಯವರು ಮತ್ತು ಮಲೆನಾಡಿನವರು ಯಕ್ಷಗಾನ ತಾಳಮದ್ದಳೆ ವೀಕ್ಷಿಸಬಹುದು. ಲೇಖನದ ಪ್ರಾರಂಭದಲ್ಲಿ ಉದಾಹರಿಸಿದ “ಸುಧನ್ವಾರ್ಜುನ” ಒಂದು ಖ್ಯಾತ ತಾಳಮದ್ದಳೆ ಪ್ರಸಂಗವೇ ಆಗಿದೆ. ಚದುರಂಗದ ಆಟವನ್ನು ಆಡುವ ಮೂಲಕವೂ ಆಲೋಚನಾಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

 

ಒಟ್ಟಿನಲ್ಲಿ ಹೇಳುವುದಾದರೆ ಮಹಾಭಾರತ ಓದಿ, ತರ್ಕಶಕ್ತಿ ಹೆಚ್ಚಿಸಿಕೊಳ್ಳಿ, ಉತ್ತಮ ತಂತ್ರಾಂಶ ತಯಾರಕರಾಗಿ.

 

ಇದೇ ವಿಷಯದ ಬಗ್ಗೆ ಒಂದು ಸ್ಲೈಡ್‌ಶೋ ನೋಡಿ.

 

ಕೆಲವು ಸ್ಯಾಂಪಲ್ ಸಮಸ್ಯೆಗಳು

ನಿಮ್ಮಲ್ಲಿ ೮ ಗೋಲಿಗಳಿವೆ. ಅವೆಲ್ಲ ನೋಡಲು ಒಂದೇ ನಮೂನೆಯವಾಗಿವೆ. ಅವುಗಳ ಬಣ್ಣ ಗಾತ್ರ ಎಲ್ಲ ಒಂದೆ. ಅವುಗಳಲ್ಲಿ ಏಳು ಗೋಲಗಳ ತೂಕವೂ ಒಂದೇ. ಎಂಟನೆಯ ಗೋಲಿ ಮಾತ್ರ ಸ್ವಲ್ಪ ಜಾಸ್ತಿ ತೂಕದ್ದಾಗಿದೆ. ನಿಮಗೆ ಒಂದು ಉತ್ತಮ ತಕ್ಕಡಿ ನೀಡಲಾಗುತ್ತಿದೆ, ಆದರೆ ತೂಕದ ಬಟ್ಟುಗಳನ್ನು ನೀಡಲಾಗುವುದಿಲ್ಲ. ತಕ್ಕಡಿಯನ್ನು ಎರಡೇ ಸಲ ಬಳಸಿ ಜಾಸ್ತಿ ತೂಕದ ಗೋಲಿ ಯಾವುದು ಎಂದು ಕಂಡುಹಿಡಿಯಬೇಕು.

 

ಒಂದು ಉದ್ದನೆಯ ಕಾರಿಡಾರ್ ಇದೆ. ಅದರ ಒಂದು ತುದಿಯಲ್ಲಿ ಮೂರು ಕೋಣೆಗಳಿವೆ. ಯಾವ ಕೋಣೆಗೂ ಕಿಟಿಕಿಯಿಲ್ಲ. ಪ್ರತಿ ಕೋಣೆಯಲ್ಲೂ ಒಂದು ಬಲ್ಬ್ ಇದೆ. ಕಾರಿಡಾರ್‌ನ ಇನ್ನೊಂದು ತುದಿಯಲ್ಲಿ ಮೂರು ಸ್ವಿಚ್‌ಗಳಿವೆ. ಒಂದು ಸ್ವಿಚ್ ಒಂದು ಕೋಣೆಯಲ್ಲಿಯ ಬಲ್ಬಿಗೆ ಸಂಬಂಧಿಸಿರುತ್ತದೆ. ಕಾರಿಡಾರ್‌ನ ಒಂದು ತುದಿಯಿಂದ ಇನ್ನೊಂದು ತುದಿಗೆ ಒಂದೇ ಸಲ ಹೋಗಿ ಯಾವ ಸ್ವಿಚ್ ಯಾವ ಕೋಣೆಗೆ (ಕೋಣೆಯ ಬಲ್ಬಿಗೆ) ಸಂಬಂಧಿಸಿದ್ದು ಎಂದು ಪತ್ತೆ ಹಚ್ಚಬೇಕು.

 

(ಕೃಪೆ: ಹೊಸದಿಗಂತ, ಎಪ್ರಿಲ್ ೧೫, ೨೦೧೨)

3 Responses to ಮಹಾಭಾರತ ಮತ್ತು ತಂತ್ರಾಂಶ ತಯಾರಿ

  1. Vasanth kumar

    ೨ ನೇ ಪ್ರಶ್ನೆಗೆ ಉತ್ತರ:
    ಮೂರು ಸ್ವಿಚ್ ಗಳಲ್ಲಿ ಒಂದನ್ನು ಹಾಕಿ ಸ್ವಲ್ಪಹೊತ್ತು ಬಿಟ್ಟು ಆರಿಸುವುದು, ಒಂದನ್ನು ಹಾಕಿ ಹಾಗೆ ಇಡುವುದು. ಒಂದನ್ನು ಹಾಕದೆ ಇರುವದು. ಈಗ ಪ್ರತಿ ಕೋಣೆಗೆ ಬಂದು ಬಲ್ಫ್ ಪರೀಕ್ಷೆ ಮಾಡುವುದು.
    ಉರಿಯುತ್ತಿರುವ ಬಲ್ಫ್, ಹಾಕಿದ ಸ್ವಿಚ್ ಗೆ ಸಂಬಂಧಿಸಿದ್ದು. ಇನ್ನೊಂದು ಕೋಣೆಗೆ ಹೋಗಿ ಬಲ್ಫ್ ಮುಟ್ಟಿ ನೋಡಬೇಕು ಆಗ ಅದು ಬಿಸಿ ಇದ್ದರೆ ಅದು ಹಾಕಿಸಿ ಆರಿಸಿದ ಸ್ವಿಚ್ ಗೆ ಸಂಬಂಧಿಸಿದ್ದು, ಇಲ್ಲವಾದರೆ ಹಾಕದೆ ಇರೋ ಸ್ವಿಚ್ ಗೆ ಸಂಬಂಧಿಸಿದ್ದು. ಅದೇ ತರಹ ಮುಂದಿನ ಕೋಣೆಯಲ್ಲೂ ಪರೀಕ್ಷಿಸುವುದು.

  2. pavanaja

    @Vasanth kumar ನಿಮ್ಮ ಉತ್ತರ ಸರಿಯಿದೆ

  3. Sreevathsa

    make 3 groups of marbles, groupA=3 marbles, groupB=3 marbles groupC=2Marbles.
    Weighing step1. put GroupA in leftside and GroupB in Right side
    If both weigh equal, then the Odd morble is in groupC (Now on groupC we have only 2 marbles, weith both to find the Odd)

    If groupA weighs more than groupB or vice versa, take the marbles weighing more from the scale to next step.

    Weighing step2.
    Then keep one marble aside and weigh other two.
    if these marble weigh same, then the kept aside marble is Odd. or else it the odd marble will be there in weighting scale !!!

Leave a Reply