ತುಳು ವಿಕಿಪೀಡಿಯ ಈಗ ಸಿದ್ಧ
– ಡಾ. ಯು. ಬಿ. ಪವನಜ
ತುಳು ಭಾಷೆಗೆ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆ ಬಹುಮಟ್ಟಿಗೆ ಬಾಯಿಮಾತಿನ ಭಾಷೆಯಾಗಿಯೇ ಉಳಿದು ಬೆಳೆದು ಬಂದಿದೆ. ತುಳು ಭಾಷೆಯಲ್ಲಿ ಶ್ರೀಮಂತ ಸಾಹಿತ್ಯ ಮತ್ತು ಸಂಸ್ಕೃತಿ ಅಡಕವಾಗಿದೆ. ತುಳು ಭಾಷೆಯಲ್ಲಿ ಹಳೆಯ ಪಾಡ್ದನ ಮತ್ತು ಇತರೆ ಸಾಹಿತ್ಯಗಳಲ್ಲದೆ ಆಧುನಿಕ ಕಥೆ, ಕವನ, ಕಾದಂಬರಿ, ನಾಟಕ ಇತ್ಯಾದಿ ಕಥನ ಸಾಹಿತ್ಯವೂ ಬೇಕಾದಷ್ಟು ಸೃಷ್ಠಿಯಾಗಿದೆ. ತುಳು ಭಾಷೆಯಲ್ಲಿ ನಾಟಕ ಪ್ರದರ್ಶನ ಮತ್ತು ಚಲನಚಿತ್ರಗಳೂ ಆಗುತ್ತಿವೆ. ತುಳುನಾಡು ಮತ್ತು ತುಳು ಭಾಷೆಯ ಬಗ್ಗೆ ಹಲವಾರು ಸಂಶೋಧನೆಗಳು ಆಗಿವೆ ಮಾತ್ರವಲ್ಲ ಅವುಗಳು ಪುಸ್ತಕರೂಪದಲ್ಲೂ ಲಭ್ಯವಿವೆ. ಆದರೆ ಒಂದು ದೊಡ್ಡ ಕೊರತೆ ಎಂದರೆ ತುಳು ಭಾಷೆಯಲ್ಲಿ ಯಾವುದೇ ವಿಶ್ವಕೋಶ ತಯಾರಾಗಿಲ್ಲ. ಅಷ್ಟು ಮಾತ್ರವಲ್ಲ ವಿಶ್ವಕೋಶ ಶೈಲಿಯ ಮಾಹಿತಿ ಸಾಹಿತ್ಯ ವರ್ಗದ ಪುಸ್ತಕಗಳ ಸಂಖ್ಯೆ ತುಳು ಭಾಷೆಯಲ್ಲಿ ಅತಿ ಕಡಿಮೆ.
ಒಂದು ಭಾಷೆ ಉಳಿದು ಬೆಳೆಯಬೇಕಾದರೆ ಅದನ್ನು ಜನರು ಬಳಸುವುದು ಅತೀ ಮುಖ್ಯ. ಜನರು ಭಾಷೆಯನ್ನು ಬಳಸಬೇಕಾದರೆ ಅವರಿಗೆ ಆ ಭಾಷೆಯಲ್ಲಿ ದಿನನಿತ್ಯದ ವ್ಯವಹಾರಕ್ಕೆ ಅತೀ ಅಗತ್ಯವಾದ ಮಾಹಿತಿ ದೊರೆಯುವುದೂ ಅಷ್ಟೇ ಮುಖ್ಯವಾಗುತ್ತದೆ. ಈ ಮಾಹಿತಿ ವಿಜ್ಞಾನ, ತಂತ್ರಜ್ಞಾನ, ಕಾನೂನು, ವೈದ್ಯಕೀಯ, ಕೃಷಿ, ಸಂಗೀತ, ಧಾರ್ಮಿಕ, ಇತ್ಯಾದಿ ಯಾವುದೇ ಆಗಿರಬಹುದು. ಸರಳವಾಗಿ ಹೇಳಬೇಕಾದರೆ ಮಾಹಿತಿ ಸಾಹಿತ್ಯದ ಅಗತ್ಯ ಇದೆ. ತುಳು ಭಾಷೆಯಲ್ಲಿ ಇಂತಹ ಸಾಹಿತ್ಯ ಇಲ್ಲವೇ ಇಲ್ಲ.
ಇನ್ನೂ ಒಂದು ವಿಷಯದ ಕಡೆ ಗಮನ ಹರಿಸೋಣ. ತುಳುನಾಡಿನ ಶಾಲೆಗಳಲ್ಲಿ ತುಳುವನ್ನು ಒಂದು ಭಾಷೆಯಾಗಿ ಸೇರಿಸಿದ್ದಾರೆ. ಈ ಭಾಷೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಓದಲು ಪಠ್ಯಪುಸ್ತಕದ ಹೊರತಾಗಿ ಏನಿದೆ? ಕೆಲವು ಕಥೆ, ಕಾದಂಬರಿ, ಕವನ ಸಂಕಲನಗಳಿವೆ ಎಂದು ಕೆಲವರು ಹೇಳಬಹುದು. ಆದರೆ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ತಯಾರಾದ ಸಾಹಿತ್ಯ ಎಷ್ಟಿದೆ? ಎಲ್ಲಕ್ಕಿಂತ ಮುಖ್ಯವಾಗಿ ಅವರ ಪಠ್ಯದಲ್ಲಿ ಇರುವ ವಿಷಯಗಳಿಗೆ ಪೂರಕವಾಗಿ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಅವರು ಏನನ್ನು ಓದಬೇಕು? ಅಂತಹ ವಿಷಯಗಳು ತುಳು ಭಾಷೆಯಲ್ಲಿ ಓದಲು ಲಭ್ಯವಿದೆಯೇ? ಉತ್ತರ ನಿರಾಶಾದಾಯಕವಾಗಿದೆ.
ಇಷ್ಟು ಪೀಠಿಕೆಯಿಂದ ಒಂದು ಅಂಶವನ್ನು ನಾವು ಸಾಬೀತುಪಡಿಸಿದಂತಾಯಿತು. ಅದೆಂದರೆ ತುಳು ಭಾಷೆಯಲ್ಲಿ ವಿಶ್ವಕೋಶ ಅಥವಾ ವಿಶ್ವಕೋಶ ಶೈಲಿಯ ಪುಸ್ತಕ ಅತೀ ಅಗತ್ಯವಿದೆ ಎಂದು. ಪುಸ್ತಕ ತಯಾರಿಸಿ ಮುದ್ರಿಸಿ ಹಂಚಿದರೂ ಅವು ಎಲ್ಲರಿಗೂ ಎಲ್ಲ ಕಾಲಕ್ಕೂ ಲಭ್ಯವಾಗುವುದಿಲ್ಲ. ಮಾತ್ರವಲ್ಲ ಈಗಿನ ಮಾಹಿತಿಯುಗದಲ್ಲಿ ಎಲ್ಲವೂ ಅತೀ ವೇಗದಲ್ಲಿ ಬೆಳೆಯುತ್ತಿರುವಾಗ ಈ ಪುಸ್ತಗಳು ಅಷ್ಟೇ ವೇಗದಲ್ಲಿ ಹೊಸಹೊಸ ವಿಷಯಗಳನ್ನು ತುಂಬಿಕೊಂಡು ನಿಜಸಮಯದಲ್ಲಿ ನವೀಕರಣಗೊಳ್ಳುವುದು ಸಾಧ್ಯವಿಲ್ಲ. ಇದಕ್ಕೆ ಪರಿಹಾರವೆಂದರೆ ಈ ವಿಶ್ವಕೋಶ ಅಥವಾ ವಿಶ್ವಕೋಶ ಶೈಲಿಯ ಮಾಹಿತಿಕೋಶ ಅಂತರಜಾಲದಲ್ಲಿರಬೇಕು ಎಂಬುದು. ಈಗ ಹಳ್ಳಿಹಳ್ಳಿಗಳಲ್ಲೂ ಅಂತರಜಾಲ ಎಲ್ಲರಿಗೂ ಲಭ್ಯವಿದೆ. ಕಡಿಮೆ ಬೆಲೆಗೆ ದೊರೆಯುತ್ತಿರುವ ಸ್ಮಾರ್ಟ್‌ಫೋನ್‌ಗಳ ಮೂಲಕವೂ ಅಂತರಜಾಲ ವೀಕ್ಷಣೆ ಮಾಡಬಹುದು ಮತ್ತು ಕ್ಷಣಾರ್ಧದಲ್ಲಿ ಮಾಹಿತಿ ಪಡೆಯಬಹುದು. ಹಾಗಿರುವಾಗ ಅಂತರಜಾಲದಲ್ಲಿ ತುಳು ವಿಶ್ವಕೋಶವೊಂದನ್ನು ತಯಾರಿಸುವುದು ಅತೀ ಅಗತ್ಯವಾಗಿದೆ.
ಅಂತರಜಾಲದಲ್ಲಿ ಎಲ್ಲ ಕಾಲಕ್ಕೂ ಎಲ್ಲರಿಗೂ ಲಭ್ಯವಿರುವ ಮಾತ್ರವಲ್ಲ ಎಲ್ಲರೂ ಯಾವುದೇ ನಿರ್ಬಂಧವಿಲ್ಲದೆ ಸಂಪಾದಿಸಬಹುದಾದ ಸ್ವತಂತ್ರ ವಿಶ್ವಕೋಶ ವಿಕಿಪೀಡಿಯ. ಜಗತ್ತಿನ ೨೯೪ ಭಾಷೆಗಳಲ್ಲಿರುವ ವಿಕಿಪೀಡಿಯ ೨೦೦೧ರಲ್ಲಿ ಪ್ರಾರಂಭವಾಯಿತು.
ವಿಕಿಪೀಡಿಯವು ಜನರಿಂದ ಜನರಿಗಾಗಿ ಜನರೇ ನಡೆಸುವ ಒಂದು ಮುಕ್ತ ಮತ್ತು ಸ್ವತಂತ್ರ ವಿಶ್ವಕೋಶ. ಇದಕ್ಕೆ ಯಾರು ಬೇಕಾದರೂ ಸಂಪಾದಕರಾಗಿ ಲೇಖನ ಸೇರಿಸಬಹುದು, ಇರುವ ಲೇಖನ ತಿದ್ದಬಹುದು. ಇನ್ನೊಬ್ಬರು ಬರೆದ ಲೇಖನದಲ್ಲಿ ಏನಾದರೂ ತಪ್ಪುಗಳು ಕಂಡುಬಂದರೆ ಅಥವಾ ಮಾಹಿತಿಯ ಕೊರತೆ ಇದ್ದಲ್ಲಿ ಆ ಮಾಹಿತಿ ನಿಮ್ಮಲ್ಲಿ ಇದ್ದಲ್ಲಿ ಅದನ್ನು ನೀವೇ ತಿದ್ದಬಹುದು ಮತ್ತು ಹೆಚ್ಚಿನ ಮಾಹಿತಿ ಸೇರಿಸಬಹುದು. ನಿಮಗೆ ಒಂದು ವಿಷಯದ ಬಗ್ಗೆ ಚೆನ್ನಾಗಿ ತಿಳಿದಿದೆ ಮತ್ತು ಆ ವಿಷಯದ ಬಗ್ಗೆ ವಿಕಿಪೀಡಿಯದಲ್ಲಿ ಲೇಖನ ಇಲ್ಲ ಎಂದಾದಲ್ಲಿ ಆ ಬಗ್ಗೆ ಒಂದು ಹೊಸ ಲೇಖನವನ್ನು ನೀವೇ ಸೇರಿಸಬಹುದು. ನಿಮ್ಮ ಲೇಖನ ಯಾರೋ ಒಬ್ಬರು ಒಪ್ಪಿದ ನಂತರ ಅದು ಪ್ರಕಟವಾಗುವ ಪರಿಪಾಠ ಇಲ್ಲಿಲ್ಲ.
ವಿಕಿಪೀಡಿಯ ಲಾಭೋದ್ದೇಶರಹಿತ ಸಂಸ್ಥೆಯಾದ ವಿಕಿಮೀಡಿಯ ಫೌಂಡೇಶನ್‌ನ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಸರಕಾರಿ ಸಂಸ್ಥೆಯಲ್ಲ, ಸರಕಾರದಿಂದ ಯಾವುದೇ ರೀತಿಯ ಅನುದಾನವನ್ನು ಪಡೆಯುತ್ತಿಲ್ಲ. ಈ ಯೋಜನೆಗೆ ಆವಶ್ಯಕವಾದ ಬಂಡವಾಳವನ್ನು ವಿಕಿಪೀಡಿಯದ ಸಾಮಾನ್ಯ ಬಳಕೆದಾರರಿಂದ ದೇಣಿಗೆಯ ರೂಪದಲ್ಲಿ ಸಂಗ್ರಹಿಸಲಾಗಿದೆ. ವಿಕಿಪೀಡಿಯ ನಡೆಸಲು ನೀವೂ ಧನಸಹಾಯ ನೀಡಬಹುದು. ಇಂದು ವಿಕಿಪೀಡಿಯ ಇಷ್ಟು ಜನಪ್ರಿಯವಾಗಿರುವ ಕಾರಣ ಕೆಲವು ಸರಕಾರಿ ಹಾಗೂ ಕಾರ್ಪೋರೇಟ್ ಸಂಸ್ಥೆಗಳು ಕೂಡ ಧನ ಸಹಾಯ ನೀಡಲು ಮುಂದಾಗಿವೆ.
ವಿಕಿಪೀಡಿಯದಲ್ಲಿ ಮಾಹಿತಿಯನ್ನು ಸೇರಿಸುವುದಕ್ಕೆ ನಾವು ತಜ್ಞರು ಆಗಿರಬೇಕು ಎನ್ನುವ ಒಂದು ತಪ್ಪು ಕಲ್ಪನೆ ತುಂಬ ಜನರಲ್ಲಿದೆ. ಇದು ಸರಿಯಲ್ಲ. ವಿಕಿಪೀಡಿಯದಲ್ಲಿ ಬರೆಯುವುದಕ್ಕೆ ನೀವು ತಜ್ಞರು ಆಗಿರಬೇಕು ಎಂಬ ಕಟ್ಟಳೆಯಿಲ್ಲ. ವಾಸ್ತವವಾಗಿ ವಿಕಿಪೀಡಿಯದ ಯಾವುದೇ ಬರಹ ಒಬ್ಬನೇ ಲೇಖಕ ಬರೆದುದಲ್ಲ. ಬೇರೆ ಬೇರೆ ದೇಶ, ಹಿನ್ನೆಲೆಗಳ ಅನೇಕ ಮಂದಿಯ ಸಹಕಾರದಲ್ಲಿ ಪ್ರತಿಯೊಂದು ಪುಟವೂ ರೂಪುಗೊಳ್ಳುತ್ತದೆ. ವಿಕಿಪೀಡಿಯ ಒಂದು ಸಹಯೋಗಿ ವಿಶ್ವಕೋಶ. ನಿಮಗೆ ತಿಳಿದಷ್ಟು ನೀವು ಸೇರಿಸಿ. ನೀವು ಬಿಟ್ಟಿರುವುದನ್ನು ವಿಷಯ ತಿಳಿದ ಬೇರೆ ಯಾರಾದರು ಸೇರಿಸುತ್ತಾರೆ.
ವಿಕಿಪೀಡಿಯದಲ್ಲಿ ಬರೆಯುವುದರಿಂದ ಯಾವುದೇ ಆರ್ಥಿಕ ಲಾಭವಿಲ್ಲ. ಲೇಖಕರ ಹೆಸರನ್ನೂ ಲೇಖನದ ಕೆಳಗೆ ಬರೆಯುವ ಪರಿಪಾಠವಿಲ್ಲ. ವಿಕಿಪೀಡಿಯದಲ್ಲಿ ಬರೆಯುವುದೆಂದರೆ ನಿಜವಾದ ಸ್ವಾರ್ಥರಹಿತ ಸಮಾಜಸೇವೆ. ನಮ್ಮ ಭಾಷೆಯ ಉಳಿವಿಗೆ ಇದು ಅತೀ ಅಗತ್ಯ.
ತುಳು ವಿಕಿಪೀಡಿಯ ಆಗಸ್ಟ್ ೫, ೨೦೧೬ರ ತನಕ ಶೈಶವಾವಸ್ಥೆಯಲ್ಲಿತ್ತು (incubator). ೨೦೦೭ರಲ್ಲಿ ಕೆಲವು ಆಸಕ್ತರ ಉತ್ಸಾಹದಿಂದ ತುಳು ವಿಕಿಪೀಡಿಯ ಪ್ರಾರಂಭವಾಯಿತು. ೨೦೦೭-೦೮ರ ಅವಧಿಯಲ್ಲಿ ತುಳು ವಿಕಿಪೀಡಿಯ ಸ್ವಲ್ಪ ಚಟುವಟಿಕೆಯಿಂದ ಕೂಡಿತ್ತು. ನಂತರ ಜನರ ಉತ್ಸಾಹ ಕಡಿಮೆಯಾಗಿ ಚಟುವಟಿಕೆ ಬಹುಮಟ್ಟಿಗೆ ನಿಂತೇ ಹೋಯಿತು. ೨೦೧೩ರ ಆಳ್ವಾಸ್ ವಿಶ್ವನುಡಿಸಿರಿಯ ಅಧ್ಯಕ್ಷೀಯ ಭಾಷಣದಲ್ಲಿ ಡಾ. ವಿವೇಕ ರೈಯವರು ತುಳು ವಿಕಿಪೀಡಿಯವನ್ನು ಜೀವಂತವಾಗಿಸುವ ಅಗತ್ಯವನ್ನು ಒತ್ತಿ ಹೇಳಿದರು. ಜನವರಿ ೨೦೧೪ರಲ್ಲಿ ಮಂಗಳೂರಿನಲ್ಲಿ ಡಾ. ವಿವೇಕ ರೈ, ಡಾ. ಎ.ವಿ. ನಾವಡ ಮತ್ತು ಇತರೆ ಉತ್ಸಾಹಿಗಳು ಸಭೆ ಸೇರಿ ತುಳು ವಿಕಿಪೀಡಿಯವನ್ನು ಜೀವಂತಗೊಳಿಸುವ ಬಗ್ಗೆ ಎಲ್ಲರೂ ಕ್ರಿಯಾಶೀಲರಾಗಬೇಕು ಎಂದು ತೀರ್ಮಾನಿಸಲಾಯಿತು. ಜನವರಿ ೨೦೧೪ರಲ್ಲಿ ತುಳು ವಿಕಿಪೀಡಿಯದಲ್ಲಿ ೧೩೫ ಲೇಖನಗಳಿದ್ದವು. ನಂತರ ಮಂಗಳೂರು ಮತ್ತು ಉಡುಪಿಗಳಲ್ಲಿ ತುಳು ವಿಕಿಪೀಡಿಯಕ್ಕೆ ಲೇಖನ ಸೇರಿಸುವ ಸಂಪಾದನೋತ್ಸವಗಳು ಜರುಗಿದವು.
ಡಿಸೆಂಬರ್ ೨೦೧೪ರಲ್ಲಿ ಮಂಗಳೂರಿನಲ್ಲಿ ಜರುಗಿದ ವಿಶ್ವ ತುಳುವೆರೆ ಪರ್ಬೊದಲ್ಲಿ ತುಳು ವಿಕಿಪೀಡಿಯದ ಪ್ರಾತ್ಯಕ್ಷಿಕೆ ಮತ್ತು ಆಸಕ್ತರನ್ನು ಅಲ್ಲಿಯೇ ಸಂಪಾದಕರನ್ನಾಗಿಸುವ ಕೆಲಸಗಳು ನಡೆದವು. ಅದೇ ಸಮ್ಮೇಳನದಲ್ಲಿ ಡಾ. ಯು.ಬಿ. ಪವನಜ ಅವರು ತುಳು ಯುನಿಕೋಡ್ ಮತ್ತು ತುಳು ವಿಕಿಪೀಡಿಯ ಎಂಬ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಭಾಷಣ ನೀಡಿದರು. ಮಂಗಳೂರು ಮತ್ತು ಉಡುಪಿಯಲ್ಲಿ ಹಲವು ಕಾರ್ಯಾಗಾರ ಮತ್ತು ಸಂಪಾದನೋತ್ಸವಗಳು ಜರುಗಿದವು. ಈ ಕೆಲಸದಲ್ಲಿ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು, ರಾಮಕೃಷ್ಣ ಪಿ.ಯು. ಕಾಲೇಜು, ಕರ್ನಾಟಕ ಥಿಯೋಲೋಜಿಕಲ್ ಕಾಲೇಜು ಉಡುಪಿಯ ಎಂ.ಜಿ.ಎಂ. ಕಾಲೇಜು, ಇತ್ಯಾದಿ ಸಂಘ ಸಂಸ್ಥೆಗಳು ಸಹಯೋಗ ನೀಡಿದವು. ಇವೆಲ್ಲವುಗಳ ಫಲಿತಾಂಶವಾಗಿ ತುಳು ವಿಕಿಪೀಡಿಯ ಸಮುದಾಯ ಸೃಷ್ಟಿಯಾಯಿತು. ಈ ಸಮುದಾಯದವರ ನಿರಂತರ ಕೆಲಸದಿಂದಾಗಿ ತುಳು ವಿಕಿಪೀಡಿಯದಲ್ಲಿ ಸುಮಾರು ೧೧೦೦ ಲೇಖನಗಳು ಸೇರಿದವು. ಕೆಲವು ಹೆಸರುಗಳನ್ನು ಉಲ್ಲೇಖಿಸುವುದಾದರೆ ತುಳು ವಿಕಿಪೀಡಿಯಕ್ಕೆ ಅತ್ಯಂತ ಹೆಚ್ಚು ಲೇಖನ ಸೇರಿಸಿದವರು ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಡಾ. ವಿಶ್ವನಾಥ ಬದಿಕಾನ ಮತ್ತು ಎರಡನೆ ಅತಿ ಹೆಚ್ಚಿನ ಸಂಪಾದನೆ ಮಾಡಿದ ಭರತೇಶ ಅಳಸಂಡೆಮಜಲು. ಇವರ ಜೊತೆ ಇನ್ನೂ ಕೆಲವು ಪ್ರಮುಖ ಸಂಪಾದಕರು –ಡಾ. ಬೆನೆಟ್ ಅಮಣ್ಣ, ಡಾ. ಕಿಶೋರ್ ಕುಮಾರ್ ರೈ, ವಸಂತ ಎಸ್. ಎನ್., ಲೋಕೇಶ್ ಕುಂಚಡ್ಕ.
ಈ ಎಲ್ಲ ಪ್ರಯತ್ನಗಳ ಫಲವಾಗಿ ಆಗಸ್ಟ್ ೬, ೨೦೧೬ ರಂದು ತುಳು ವಿಕಿಪೀಡಿಯ incubatorನಿಂದ ಹೊರಬಂದು ಜೀವಂತವಾಯಿತು. ತುಳು ವಿಕಿಪೀಡಿಯವನ್ನು http://tcy.wikipedia.org ಜಾಲತಾಣದ ಮೂಲಕ ನೋಡಬಹುದು.
ಚಂಡಿಘಡದಲ್ಲಿ ನಡೆದ (ಆಗಸ್ಟ್ 5-8, 2016) ವಿಕಿಕಾನ್ಫೆರೆನ್ಸ್ ಇಂಡಿಯಾದಲ್ಲಿ ವಿಕಿಮೀಡಿಯ ಫೌಂಡೇಶನ್‌ನ ಎಕ್ಸೆಕ್ಯೂಟಿವ್ ಡೈರೆಕ್ಟರ್ ಕ್ಯಾಥೆರಿನ್ ಮಹೆರ್ ಅವರು ತಮ್ಮ ಆಶಯ ಭಾಷಣದಲ್ಲಿ ತುಳು ವಿಕಿಪೀಡಿಯ ಜೀವಂತವಾಗಿರುವುದನ್ನು ಘೋಷಿಸಿದರು. ಜೊತೆಗೆ ಅದೇ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ, ತುಳು ವಿಕಿಪೀಡಿಯಕ್ಕೆ ಅತ್ಯಂತ ಹೆಚ್ಚು ಕಾಣಿಕೆ ನೀಡಿದ ಡಾ. ವಿಶ್ವನಾಥ ಬದಿಕಾನ ಮತ್ತು ಭರತೇಶ ಅವರನ್ನು ಅಭಿನಂದಿಸಿದರು.
ತುಳು ವಿಕಿಪೀಡಿಯವನ್ನು ಜೀವಂತ ಮಾಡುವ ಮೂಲಕ ನಾವು ಇನ್ನೂ ಒಂದೆರಡು ಕೆಲಸ ಮಾಡಬಹುದಾಗಿದೆ. ತುಳು ಭಾಷೆಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿಸೇರಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಬಹುದು. ತುಳು ವಿಕಿಪೀಡಿಯ ಕೂಡ ಇದೆ, ಹಾಗಿರುವಾಗ ಸಂವಿಧಾನದ ಎಂಟನೆ ಪರಿಚ್ಛೇದದಲ್ಲಿ ಯಾಕಿಲ್ಲ ಎಂದು ಒತ್ತಾಯಪೂರ್ವಕ ಕೇಳಬಹುದು. ಗಣಕಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಲು ಬಳಸುವ ಜಾಗತಿಕ ಸಂಕೇತೀಕರಣ ವ್ಯವಸ್ಥೆ ಯುನಿಕೋಡ್. ಯುನಿಕೋಡ್‌ನಲ್ಲಿ ತುಳು ಭಾಷೆಯನ್ನು ಇನ್ನೂ ಸೇರಿಸಿಲ್ಲ. ಯುನಿಕೋಡ್‌ನಲ್ಲಿ ತುಳು ಭಾಷೆಯನ್ನು ಸೇರಿಸುವುದರಿಂದ ಗಣಕಗಳಿಗೆ ಅದು ಅರ್ಥವಾಗುತ್ತದೆ. ಇದರಿಂದ ಮಾಹಿತಿಯ ಹುಡುಕುವಿಕೆ ಸಾಧ್ಯವಾಗುತ್ತದೆ. ಅಂತರಜಾಲದಲ್ಲಿ ತುಳುವಿನಲ್ಲೇ ಮಾಹಿತಿ ಹುಡುಕಬಹುದು. ದೃಷ್ಟಿಶಕ್ತಿವಂಚಿತರು ಪಠ್ಯದಿಂದ ಧ್ವನಿಗೆ (text-to-speech) ಬದಲಿಸುವ ತಂತ್ರಾಂಶವನ್ನು ಬಳಸಿ ತುಳು ಪಠ್ಯವನ್ನು ಓದಬಹುದು. ತುಳು ವಿಕಿಪೀಡಿಯವನ್ನು ಜೀವಂತ ಮಾಡುವ ಮೂಲಕ ಯುನಿಕೋಡ್‌ನಲ್ಲಿ ತುಳು ಭಾಷೆಯನ್ನು ಸೇರಿಸಲು ಕೋರಿಕೆ ಸಲ್ಲಿಸಬಹುದು.
ತುಳು ವಿಕಿಪೀಡಿಯವನ್ನು ಬೆಳೆಸಿ. ಅದರಿಂದಾಗಿ ತುಳು ಭಾಷೆ ಉಳಿಸಿ ಬೆಳೆಸಿ.
(ಅಗಸ್ಟ್ ೬, ೨೦೧೬)
December 18th, 2016 at 9:46 am
ತುಳು ವಿಕಿಪೀಡಿಯ ಲೈವ್ ಆಯಿನೆಡ್ದ್ ಬುಕ್ಕೊ ತುಳುತ್ತ ಗುರ್ತೊ ಬೇತೆ ಬಾಸೆದಕ್ಲೆಗ್ ಆಂಡ್. ತುಳು ವಿಕಿಪೀಡಿಯೊ ಲೈವ್ ಆಯೆರೆ ಮಸ್ತ್ ಜನೊ ಮಹನೀಯೆರ್ ಮಾನಸಿಕ ಸಕಾಯೊ ಕೊರ್ತೆರ್. ಲೇಕನೊ ಬರೆತೆರ್. ಚಿತ್ರೊ ಸೇರಾದೆರ್. ಸದ್ಯೊ ಉಂದೊಂಜಿ ಪ್ರಯತ್ನೊ. ದುಂಬುಗು ತುಳು ವಿಕಿಪೀಡಿಯೊ ಮಲ್ಲ ಕಡಲ್ದಂಚ ಪರಡೊಡು. ಅಂಚಾವೊಡಾಂಡ ತುಳುವೆರಾಯಿನ ಮಾತೆರ್ಲಾ ಬೆನೊಡು. ಬಾಸೆಗ್ ದೇಸೊ, ದರ್ಮೊ, ಜಾತಿ ಬೇದೊ ಇದ್ದಿ. ಅಂಚಾದ್ ತುಳು ಪಾತೆರುನ ಮಾತೆರ್ಲಾ http://tcy.wikipedia.org ಜಾಲತಾನೊದ ಮೂಲಕೊ ತುಳು ವಿಕಿಪೀಡಿಯೊಗು ಸೇರ್ಲೆ. ತುಳುಟು ಪ್ರಪಂಚೊದ ಜ್ಞಾನೊ ಕೊನೊರುಗ.
ಈ ನಿಲೆಟ್ ತುಳುವಿಕಿಪೀಡಿಯೊ ಲೈವ್ ಆಯೆರೆ ಬೆಂದಿನಾರ್ ಡಾ. ಯು.ಬಿ.ಪವನಜೆರ್. ಬಾಸೆ, ವ್ಯಾಕರನೊ, ಛಂದಸ್ಸು, ತಂತ್ರಜ್ಞಾನೊದ ಬಗೆಟ್ ಮಸ್ತ್ ತೆರಿನಾರಾದ್ ಪವನಜೆರ್ ತುಳು ಬಾಸೆದ ಒರಿಪುಗು ಪುನೆತೆರ್.
April 29th, 2020 at 11:42 pm
Super about this website