ಡಿಜಿಟಲ್ ಕನ್ನಡ -ಏನೇನಾಗಬೇಕಾಗಿದೆ?
– ಡಾ. ಯು. ಬಿ. ಪವನಜ
ನವಂಬರ್ ಬಂದೊಡನೆ ಎಲ್ಲರಿಗೂ ನೆನಪಾಗುವುದು ಕನ್ನಡ. ದುರಾದೃಷ್ಟಕ್ಕೆ ಅದು ಅಷ್ಟಕ್ಕೇ ಸೀಮಿತವಾಗಿದೆ. ಮತ್ತೊಮ್ಮೆ ನವಂಬರ್ ಬಂದಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಲ್ಲಿದೆ ಎಂದು ಮತ್ತೆ ಬರೆಯುವ ಅಗತ್ಯವಿಲ್ಲ. ಏನೇನು ಆಗಬೇಕಾಗಿದೆ? ಏನೆಲ್ಲ ಮಾಡುತ್ತೇವೆ ಎಂದವರೆಲ್ಲ ಏನು ಮಾಡಿದ್ದಾರೆ ಎಂದು ನೋಡೋಣ.
ಕನ್ನಡದ ಬಹುತೇಕ ಕೆಲಸಗಳು ಸರಕಾದ ಮೂಲಕವೇ ಆಗಬೇಕಾಗಿವೆ. ಸರಕಾರವು ಮಾಹಿತಿ ತಂತ್ರಜ್ಞಾನ ಸಲಹಾ ಸಮಿತಿಯನ್ನು ನೇಮಿಸಿ ಅದರ ಸಲಹೆಯಂತೆ ಕೆಲವು ಕೆಲಸಗಳನ್ನು ಮಾಡಿದೆ. ಅದರ ಸಲಹೆಗಳಲ್ಲಿ ಇನ್ನೂ ಹಲವು ಬಾಕಿ ಉಳಿದಿವೆ. ಅವುಗಳಲ್ಲಿ ಕೆಲವನ್ನು ಗಮನಿಸೋಣ.
ಕನ್ನಡಕ್ಕೆ ಒಂದು ವಾಸ್ತವೋಪಮ ವಿಶ್ವವಿದ್ಯಾಲಯದ (Kannada virtual university) ತಯಾರಿ. ಇದು ಸಂಪೂರ್ಣವಾಗಿ ಅಂತರಜಾಲದ ಮೂಲಕವೇ ಕೆಲಸ ಮಾಡುವ ವಿಶ್ವವಿದ್ಯಾಲಯ. ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಪಠ್ಯ, ಮಾದರಿ ಪ್ರಶ್ನೆ, ಯೋಜನೆ, ಪರೀಕ್ಷೆ, ಎಲ್ಲವುಗಳೂ ಅಂತರಜಾಲದ ಮೂಲಕವೇ ಆಗುತ್ತವೆ. ನೇರ ತರಗತಿಗಳೂ ಇರುತ್ತವೆ. ಕನ್ನಡವನ್ನು ಕಲಿಯಲು ಆಸಕ್ತರಾದವರು ಜಗತ್ತಿನ ಯಾವ ಮೂಲೆಯಲ್ಲೇ ಇದ್ದರೂ ಅವರು ತಮ್ಮ ಮನೆಯಲ್ಲೇ, ತಮಗೆ ಸೂಕ್ತವಾದ ಸಮಯದಲ್ಲಿ ಕಲಿಯಬಹುದು. ಅವರಲ್ಲಿ ಗಣಕ ಮತ್ತು ಅಂತರಜಾಲ ಸಂಪರ್ಕ ಇರತಕ್ಕದ್ದು. ತಮಿಳು ವಾಸ್ತವೋಪಮ ವಿವಿ ಮಾದರಿಯಲ್ಲಿ ಕನ್ನಡದಲ್ಲೂ ಅಂತಹ ವಿವಿ ತಯಾರಿಸುತ್ತೇವೆ ಎಂದು ಸರಕಾರವು ಹೇಳಿಕೊಂಡಿದೆ. ಮಾಹಿತಿ ತಂತ್ರಜ್ಞಾನ ಸಲಹಾ ಸಮಿತಿ ನೀಡಿದ ವರದಿಯಲ್ಲೂ ಅದು ಅಡಕವಾಗಿದೆ. ಆದರೆ ಈ ಬಗ್ಗೆ ಸರಕಾರ ಯಾವ ಕೆಲಸವನ್ನೂ ಮಾಡಿಲ್ಲ.
ಕನ್ನಡ ಪಠ್ಯ ಕಣಜ (corpus). ಕನ್ನಡ ಭಾಷೆಯಲ್ಲಿ ಸಹಜ ಭಾಷಾ ಸಂಸ್ಕರಣೆ (natural language processing) ಮಾಡಲು ಇದು ಮೂಲಭೂತ ಅವಶ್ಯಕತೆ. ಪಠ್ಯದಿಂದ ಧ್ವನಿಗೆ, ಧ್ವನಿಯಿಂದ ಪಠ್ಯಕ್ಕೆ, ಯಾಂತ್ರೀಕೃತ ಅನುವಾದ, ಇಂತಹ ಕೆಲಸಗಳಿಗೆ ಇದು ಅಗತ್ಯ. ಹಂಪಿಯಲ್ಲಿರುವ ಕನ್ನಡ ವಿವಿ ಇದರ ತಯಾರಿಯ ಹೊಣೆ ಹೊತ್ತುಕೊಂಡಿತ್ತು. ಸ್ವಲ್ಪ ಕೆಲಸವನ್ನೂ ಮಾಡಿತ್ತು. ಆದರೆ ನಂತರ ಅದೇಕೋ ಅದರ ಉತ್ಸಾಹ ಇಂಗಿ ಹೋಗಿ ಕೆಲಸ ನಿಲ್ಲಿಸಿದೆ. ಇದು ತನಕ ತಯಾರಾದ ಪಠ್ಯ ಕಣಜ ಏನಾಯಿತು ಗೊತ್ತಿಲ್ಲ.
ಕರ್ನಾಟಕ ಸರಕಾರದ ಜ್ಞಾನ ಆಯೋಗ ತಯಾರಿಸಿದ ಜ್ಞಾನಕೋಶ ಕಣಜ (knaja.in). ಇದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಆದರೆ ಅದು ಮಾತಿನಲ್ಲಿ ಮಾತ್ರ. ಇದು ತನಕ ಆ ಬಗ್ಗೆ ಏನೂ ಕೆಲಸ ಮಾಡಿಲ್ಲ. ಕಣಜದಲ್ಲಿರುವ ಮಾಹಿತಿಗಳು ವರ್ಷಕ್ಕಿಂತ ಹಳೆಯದಾಗಿವೆ. ಕಣಜವನ್ನು ಯಾವ ರೀತಿ ಮುಂದುವರೆಸಿಕೊಂಡು ಹೋಗಬೇಕು, ಅದಕ್ಕೆ ಏನೇನು ಸುಧಾರಣೆಗಳು ಆಗಬೇಕು ಎಂದು ಸಲಹೆ ಕೇಳಲು ಪರಿಣತರ ಸಭೆ ಕರೆದಿತ್ತು. ಸಭೆಯಲ್ಲಿ ಭಾಗವಹಿಸಿದವರು ಹಲವು ಸಲಹೆ ನೀಡಿದ್ದರು. ಆದರೆ ಅವುಗಳನ್ನು ಕಾರ್ಯಗತಗೊಳಿಸುವವರು ಯಾರು? ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ತಾಂತ್ರಿಕ ಪ್ರಾವೀಣ್ಯವುಳ್ಳವರು ಯಾರಾದರೂ ಇದ್ದಾರೆಯೇ? ಉತ್ತರ ಶೂನ್ಯ. ಅಂದ ಹಾಗೆ ನವಂಬರ್ ೧೮ಕ್ಕೆ kanaja.in ಎಂಬ ಹೆಸರಿನ ನೋಂದಾವಣೆ ಅಂತ್ಯಗೊಳ್ಳುತ್ತದೆ. ಕನಿಷ್ಠ ಆ ಹೆಸರನ್ನಾದರೂ ಸರಕಾರವು ಉಳಿಸಿಕೊಳ್ಳುತ್ತದೆ ಎಂದು ಆಶಿಸೋಣ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಈಗಿನ ನಿರ್ದೇಶಕರೇನೋ ಉತ್ಸಾಹವುಳ್ಳವರೇ. ಆದರೆ ಅವರಿಗೆ ಸಂಪೂರ್ಣ ಅಧಿಕಾರ ಇದ್ದಂತಿಲ್ಲ. ಅಂತೂ ಇಂತೂ ಕನ್ನಡ ಭಾಷೆ ಇನ್ನೂ ಕುಂಟುತ್ತಲೇ ಸಾಗುತ್ತಿದೆ.
ಇದನ್ನೂ ಓದಿ – ನಮ್ಮ ಭಾಷೆಗೆ e-ಭಾಷ್ಯ.
(ಲೇಖಕರು ಕರ್ನಾಟಕ ಸರಕಾರದ ತಂತ್ರಾಂಶ ಸಮಿತಿ ಸದಸ್ಯರು. ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವರ ವೈಯಕ್ತಿಕ ಅಭಿಪ್ರಾಯಗಳೇ ವಿನಾ ಸಮಿತಿಯ ಅಧಿಕೃತ ಅಭಿಪ್ರಾಯಗಳಲ್ಲ)
(ಕೃಪೆ: ವಿಜಯ ಕರ್ನಾಟಕ, ನವಂಬರ್ ೧, ೨೦೧೫)
November 14th, 2016 at 5:48 pm
kannada maatado anivryate anta heltil.. onde bhaasheyalli saavira reetigalu.. kelavomme nagechaataki aadre kelavomme himse anasutte.. naanu dharwadadavalu bangalorege bandu kannada bhaasheyalli ottakhsar illada hechchu padagallannu kande..
thank you sir… super lines
December 19th, 2016 at 12:58 pm
Dear Sir ,
Vaijnanika vishayagalu arthavaguva haage Kannada bhasheyalli bandare kalike sugamavagi basic things chennagi tilidukollalu sahayavagutte. AA nittinalli tamma lekhana swagatharhvadudu.
With regards.
Annapurna patil davanagere
October 25th, 2018 at 9:41 pm
This is most important risk all our Karnataka people because Kannada
Rajyosthava my mother land so we all are respect this language