ಕ್ರಿಯೇಟಿವ್ ಮುವೋ ಎಂಪಿ-೩ ಪ್ಲೇಯರ್
– ಡಾ. ಯು. ಬಿ. ಪವನಜ
ಸಂಗೀತದಲ್ಲಿ ಆಸಕ್ತಿ ಇಲ್ಲದವರು ಇಲ್ಲವೇ ಇಲ್ಲ ಎನ್ನಬಹುದು. ಸಿನಿಮಾ, ಭಾವಗೀತೆ. ಶಾಸ್ತ್ರೀಯ, ವಿದೇಶೀಯ, ಹೀಗೆ ಯಾವುದಾದರೊಂದು ಬಗೆಯ ಸಂಗೀತವನ್ನು ಆಲಿಸದ ಮಂದಿಯ ಸಂಖ್ಯೆ ಅತಿ ಕಡಿಮೆ. ಹೀಗೆ ಸಂಗೀತ ಪ್ರಿಯರಿಗೆ ಸಂಗೀತ ಆಲಿಸಲು ಹಲವು ಸಲಕರಣೆಗಳು ಲಭ್ಯವಿವೆ. ಡಿಜಿಟಲ್ ಉಪಕರಣಗಳ ಆವಿಷ್ಕಾರವಾದ ಮೇಲಂತೂ ಚಿತ್ರವಿಚಿತ್ರ ಉಪಕರಣಗಳು ಮಾರುಕಟ್ಟೆಗೆ ಲಗ್ಗೆಯಿಡತೊಡಗಿವೆ. ಅವುಗಳಲ್ಲೊಂದು ಪ್ರಮುಖ ವಿಭಾಗ ಎಂಪಿ-೩ ಪ್ಲೇಯರುಗಳದು. ಗಣಕಗಳಲ್ಲಿ ಹಾಡುಗಳ ಕಡತಗಳ ಗಾತ್ರವನ್ನು ಕುಗ್ಗಿಸಿ ಶೇಖರಿಸಿಡುವ ಒಂದು ವಿಧಾನಕ್ಕೆ ಎಂಪಿ-೩ ಎಂದು ಕರೆಯುತ್ತಾರೆ. ಒಂದು ಭಾವಗೀತೆಯ ಎಂಪಿ-೩ ಹಾಡಿನ ಕಡತದ ಗಾತ್ರ ಸುಮಾರು ೫ ಮೆಗಾಬೈಟ್‌ಗಳಷ್ಟಿರುತ್ತದೆ. ೨೫೬ ಮೆಗಾಬೈಟಿನ ಒಂದು ಎಂಪಿ-೩ ಪ್ಲೇಯರಿನಲ್ಲಿ ಸುಮಾರು ೫೦ ಹಾಡುಗಳನ್ನು ಸಂಗ್ರಹಿಸಿಬಹುದು. ಅಂದರೆ ಸುಮಾರು ೬ ಗಂಟೆ ಕಾಲ ತಡೆಯಿಲ್ಲದೆ ಹಾಡು ಕೇಳಬಹುದು. ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳ ಹಲವಾರು ನಮೂನೆಯ ಎಂಪಿ-೩ ಪ್ಲೇಯರುಗಳು ಲಭ್ಯವಿವೆ. ಅವುಗಳಲ್ಲಿ ನಾವೀಗ ಕ್ರಿಯೇಟಿವ್ ಕಂಪೆನಿಯ ಮುವೋ ಟಿಎಕ್ಸ್ ಎಫ್‌ಎಂ ಮಾದರಿಯನ್ನು ಸ್ವಲ್ಪ ಪರಿಶೀಲಿಸೋಣ.
Creative MuVo TX FM ಫ್ಲಾಶ್ ಸ್ಮರಣ ಶಕ್ತಿಯನ್ನು ಬಳಸುವ ಎಂಪಿ-೩ ಪ್ಲೇಯರ್. ಇದನ್ನು ಗಣಕಗಳಲ್ಲಿ ಬಳಸುವ ಕಡತಗಳನ್ನು ಶೇಖರಿಸುವ ಸಂಗ್ರಾಹಕವಾಗಿಯೂ ಬಳಸಬಹುದು. ಈ ಸಾಧನವು ೧೨೮/೨೫೬/೫೧೨ ಮೆಗಾಬೈಟ್ ಮತ್ತು ೧ ಗಿಗಾಬೈಟ್ ಸ್ಮರಣಶಕ್ತಿಗಳಲ್ಲಿ ಲಭ್ಯವಿದೆ. ಇದು ಯುಎಸ್‌ಬಿ-೨ ಶಿಷ್ಟತೆಯ ಸಂಪರ್ಕವನ್ನು ಬಳಸಿ ಗಣಕದೊಂದಿಗೆ ಕಡತ ವಿಲೇವಾರಿ ಮಾಡುತ್ತದೆ. ಅಂದರೆ ವೇಗವಾಗಿ ದೊಡ್ಡ ದೊಡ್ಡ ಕಡತಗಳನ್ನು ಪ್ರತಿ ಮಾಡಿಕೊಳ್ಳಬಹುದು. ಇದರಲ್ಲಿ ಬಹುಜನ ಬಯಸುವ ಎಫ್‌ಎಂ ರೇಡಿಯೋವೂ ಇದೆ. ಎಲ್‌ಸಿಡಿ ಪರದೆ ಇರುವುದರಿಂದ ಯಾವ ಹಾಡು ಬರುತ್ತಿದೆ ಎಂಬುದನ್ನು ಓದಬಹುದು ಮತ್ತು ಬೇಕಾದ ಹಾಡನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಧ್ವನಿಮುದ್ರಣದ ಸವಲತ್ತಿದೆ. ಪತ್ರಿಕಾಕರ್ತರಿಗೆ ಸಂದರ್ಶನ ಮಾಡಲು ಬಹು ಉಪಕಾರಿ. ಈ ಸವಲತ್ತು ಬಹುತೇಕ ಎಂಪಿ-೩ ಪ್ಲೇಯರುಗಳಲ್ಲಿವೆ. ಆದರೆ ಇದರಲ್ಲಿ ಈ ಸವಲತ್ತು ಇನ್ನೂ ಸ್ವಲ್ಪಹೆಚ್ಚಿನ ಸೌಕರ್ಯವನ್ನು ನೀಡುತ್ತಿದೆ. ಅದುವೇ ಬಾಹ್ಯ ಧ್ವನಿ ಆಕರದಿಂದ ಧ್ವನಿಮುದ್ರಣ ಮಾಡುವ ಸವಲತ್ತು. ಇತರೆ ಸ್ಟೀರಿಯೋ, ಪಿಟೀಲು, ಕೊಳಲು ಅಥವಾ ಇನ್ಯಾವುದಾದರೂ ಸಂಗೀತವನ್ನು ಸೂಕ್ತ ಮೈಕ್ರೋಫೋನು ಅಥವಾ ಆಂಪ್ಲಿಫೈರ್ (ಕೇಬಲ್) ಮೂಲಕ ಇದಕ್ಕೆ ಊಡಿಸಿದರೆ ಇದು ಅದನ್ನು ಸಮರ್ಥವಾಗಿ ಧ್ವನಿಮುದ್ರಣ ಮಾಡಿಕೊಳ್ಳಬಲ್ಲುದು. ನಾನು ಗಮನಿಸಿದಂತೆ ಈ ಹೆಚ್ಚಿನ ಸವಲತ್ತಿರುವ ಎಂಪಿ-೩ ಪ್ಲೇಯರುಗಳು ಕಾಣಸಿಗುವುದು ಸ್ವಲ್ಪ ಕಷ್ಟವೇ.
ಇದರಲ್ಲಿ ಗ್ರಾಫಿಕ್ ಇಕ್ವಲೈಸರ್ ಕೂಡ ಇದೆ. ತಬಲ, ವೀಣೆ, ಮತ್ತಿನ್ಯಾವುದಾದರೂ ಉಪಕರಣ ಅಥವಾ ಹಾಡುಗಾರನ ಧ್ವನಿಯನ್ನು ಏರಿಸಬಹುದು ಅಥವಾ ಇಳಿಸಬಹುದು. ಎಎಎ ಗಾತ್ರದ ಒಂದು ಬ್ಯಾಟರಿ ಸೆಲ್ಲನ್ನು ಬಳಸಿ ಇದು ಕೆಲಸ ಮಾಡುತ್ತದೆ. ಒಂದು ಸೆಲ್ ಬಳಸಿ ಸುಮಾರು ಹದಿನೈದು ಘಂಟೆ ಸಂಗೀತ ಆಲಿಸಬಹುದು. ಧ್ವನಿಯ ಗುಣಮಟ್ಟ ಉತ್ತಮವಾಗಿದೆ. ಹೋಲಿಕೆಗಾಗಿ ನೋಡುವುದಾದರೆ ಇದರಿಂದ ಸ್ವಲ್ಪ ದುಬಾರಿಯಾದ ಮತ್ತು ಇಷ್ಟೇ ಸಂಗ್ರಹ ಶಕ್ತಿಯ (೧ ಗಿಗಾಬೈಟ್) ಆಪಲ್ ಶಫಲ್‌ನಲ್ಲಿ ಈ ಸವಲತ್ತುಗಳಿಲ್ಲ -ಎಫ್‌ಎಂ ರೇಡಿಯೋ, ಎಲ್‌ಸಿಡಿ ಪರದೆ, ಬಾಹ್ಯ ಧ್ವನಿ ಆಕರದಿಂದ ಧ್ವನಿಮುದ್ರಣ. Creative MuVo TX FMನ ಸೂಚಿತ ಬೆಲೆ ಸುಮಾರು ೬೦೦೦ ರೂ. ಆದರೂ ಬೆಂಗಳೂರಿನಲ್ಲಿ ಇದರ ಬೆಲೆ ಸುಮಾರು ೩೦೦೦ ರೂ.