ಕರ್ನಾಟಕ ಜನಪದ ಕಲೆಗಳು-ಭಾಗ ೧
ಕರ್ನಾಟಕ ಜನಪದ ಕಲೆಗಳು
ಭಾಗ ೧
ಸಂ: ಗೊ. ರು. ಚನ್ನಬಸಪ್ಪ
[ಪೀಠಿಕೆ:- ಗ್ರಾಮೀಣ ಬದುಕಿನ ಅನಕ್ಷರಸ್ತರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ ‘ಜನಪದ’ ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ.
ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಇದಕ್ಕಾಗಿ ಸರಕಾರ ಪ್ರೋತ್ಸಾಹಕವಾಗಿ ಜಾನಪದ ಅಕಾಡೆಮಿ ಸ್ಥಾಪಿಸಿ ಲಕ್ಷಾಂತರ ರುಪಾಯಿ ಖರ್ಚಿಸುತ್ತಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸುತ್ತಿದೆ. ಕೆಲವು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಜನಪದ ಕಲೆಗಳನ್ನು ಪರಿಚಯಿಸುವ ಕೃತಿಯೊಂದನ್ನು ಹೊರತಂದಿದೆ. ಇದರ ಸಂಪಾದಕರು ಜಾನಪದ ಚಿಂತಕ ಗೊ. ರು. ಚನ್ನಬಸಪ್ಪ ಅವರು.
ಈ ಕೃತಿಯಲ್ಲಿ ಹತ್ತಾರು ವಿದ್ವಾಂಸರು ನಶಿಸುತ್ತಿರುವ ಜಾನಪದ ಕಲೆಗಳನ್ನು ಗುರ್ತಿಸಿ, ಮಾಹಿತಿ ಸಂಗ್ರಹಿಸಿದ್ದಾರೆ. ಹೀಗಾಗಿ ಕರ್ನಾಟಕದ ನೂರಾರು ಜನಪದ ಕಲೆಗಳ ಪರಿಚಯ ರೇಖಾಚಿತ್ರ ಹಾಗೂ ಛಾಯಾಚಿತ್ರಗಳಿಂದ ಸುಂದರವಾಗಿ ಮೂಡಿಬಂದಿದೆ. ಅಪರೂಪದ ದಾಖಲೆಗಳ ಈ ಕೃತಿಯನ್ನು ಹೊರತರಲು ಹಿರಿಯರಾದ ಗೊ. ರು. ಚನ್ನಬಸಪ್ಪ ಅವರು ಪಟ್ಟ ಶ್ರಮ ದಾಖಲಾರ್ಹ ಹಾಗೂ ಅಭಿನಂದನೀಯ. ಅಂಥ ಕಲೆಗಳಲ್ಲಿ ಕೆಲವು ಮಹತ್ವದ್ದನ್ನು ವಿಶ್ವಾದ್ಯಂತದ ಕನ್ನಡಿಗರಿಗೆ ಈ ಮೂಲಕ ಪ್ರತೀ ತಿಂಗಳು ಪರಿಚಯಿಸುತ್ತೇವೆ. ಆ ನಿಟ್ಟಿನಲ್ಲಿನ ಮೊದಲ ಭಾಗವಾಗಿ ಕಂಸಾಳೆ ಹಾಗೂ ಉಮ್ಮತ್ತಾಟ್ ಎಂಬ ಜಾನಪದ ಕಲೆಗಳು ಇಲ್ಲಿದೆ. ಈ ಮಾಲಿಕೆಯೂ ನಿಮಗೆ ಪ್ರಿಯವಾಗಬಹುದೆಂದು ನಂಬುತ್ತೇವೆ. -ಸಂಪಾದಕ ಮಂಡಳಿ]
ಕಂಸಾಳೆ :
ಶಿವ ಮತ್ತು ಶರಣರ ಮಹಿಮೆಗಳನ್ನು ಕಥಾರೂಪದಲ್ಲಿ ಹಾಡುತ್ತ ಒಂದು ವಿಶಿಷ್ಟ ಜಾನಪದ ಸಂಪ್ರದಾಯವನ್ನು ಬೆಳಸಿಕೊಂಡು ಬಂದಿದೆ ಕಂಸಾಳೆ ಪ್ರಾಕಾರ. ಕಂಸಾಳೆಯ ಕಲಾವಿದರು ಪ್ರಮುಖವಾಗಿ ಮೈಸೂರು ಜಿಲ್ಲೆಯ ಮಲೆ ಮಹದೇಶ್ವರನ ಭಕ್ತರು. ಮಂಡ್ಯ-ಬೆಂಗಳೂರು ಜಿಲ್ಲೆಗಳಲ್ಲೂ ವಿರಳವಾಗಿ ಕಾಣುತ್ತಾರೆ.
ಜಾನಪದ ಸತ್ವವುಳ್ಳ ಕಥನಗೀತೆ, ಕಂಚಿನ ತಾಳಗಳ ವಿಶಿಷ್ಟವಾದ ಶಬ್ದ ಹಾಗೂ ಕಲಾವಿದರ ಕೈಚಳಕಗಳ ಸುಂದರ ಸಮ್ಮಿಳನದಿಂದಾಗಿ ಈ ಕಲೆ ವಿಸ್ಮಯಕಾರಕವಾಗಿ ಜನಮನವನ್ನು ತಣಿಸಿ ಶ್ರವಣಾನಂತವುಂಟುಮಾಡುತ್ತದೆ. ‘ಕಂಸಾಳೆ’ ಎನ್ನುವುದು ಕಲಾವಿದರು ಕೈಯಲ್ಲಿ ಹಿಡಿಯುವ ಒಂದು ಬಗೆಯ ವಾದ್ಯ ವಿಶೇಷ. ಭಿಕ್ಷಾಪಾತ್ರೆಯಂತಿರುವ, ಮಧ್ಯೆ ದಾರದ ಕುಚ್ಚು ಕಟ್ಟಿದ, ಅಂಗೈ ಅಗಲದ ಮಿಶ್ರಲೋಹದ ಒಂದು ಬಟ್ಟಲು ಎಡಗೈಯಲ್ಲಿದ್ದರೆ, ಬಲಗೈಯಲ್ಲಿ ಮಟ್ಟಸವಾದ ತಾಳವಿರುತ್ತದೆ. ಮುಚ್ಚಳದ ನಡುವಿನ ಹೊರಭಾಗ ಉಬ್ಬಿರುತ್ತದೆ. ಆ ಉಬ್ಬಿನ ರಂಧ್ರದಿಂದ ಬಿಗಿದ ನೀಳವಾದ ದಾರ ಗೊಂಡೆಗಳಿಂದ ಅಲಂಕೃತವಾಗಿ ಬಲಗೈ ಮೇಲಿಂದ ಇಳಿಬಿದ್ದಿರುತ್ತದೆ.
ಸಾiiನ್ಯವಾಗಿ ಕಂಸಾಳೆಯ ಮೇಳದಲ್ಲಿ ಮೂರು ಜನರಿರುತ್ತಾರೆ. ವೃತ್ತಿ ಗಾಯಕರಾದ ಕಂಸಾಳೆಯವರಿಗೆ ವಿಶೇಷವಾದ ವೇಷಭೂಷಣಗಳೇನೂ ಇರುವುದಿಲ್ಲ. ಸಾಧಾರಣವಾಗಿ ಅಂಗಿ, ಪಂಚೆ, ಹೆಗಲಲ್ಲಿ ಜೋಳಿಗೆ, ಕೊರಳಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ, ಇವರಲ್ಲಿ ಇಬ್ಬರು ಏಕತಾರಿ ಕಂಜರ ಹಿಡಿದು ಹಿಮ್ಮೇಳದವರಾಗುತ್ತಾರೆ. ಇನ್ನೊಬ್ಬ ಮುಮ್ಮೇಳದವನಾಗಿ ನಡುವೆ ಕಂಸಾಳೆ ಹಿಡಿದು ಕುಳಿತಿರುತ್ತಾನೆ. ಎಡಗೈ ಬಟ್ಟಲನ್ನು ಮೇಲುಮುಖವಾಗಿ ಅಂಗೈ ಮೇಲೆ ಇರಿಸಿಕೊಂಡು. ಬಲಗೈಯ ಮೇಲು ತಾಳವನ್ನು ಕುಟ್ಟುವುದರಿಂದ ಕಂಚಿನ ಕಣಿ ಕಣಿ ನಾದ ಉಂಟಾಗುತ್ತದೆ. ವಿವಿಧ ಧಾಟಿಯ ವಿವಿಧ ತಾಳದ ಹಾಡುಗಳಿಗೆ ಈ ನಾದ ಮಧುರ ಹಿನ್ನಲೆಯಾಗುತ್ತದೆ. ಹಬ್ಬ ಹರಿದಿನಗಳಲ್ಲಿ, ಶಿವರಾತ್ರಿ-ನವರಾತ್ರಿ ಕಾಲದಲ್ಲಿ ಮಹದೇಶ್ವರನ ಜಾತ್ರೆ ಸಂದರ್ಭದಲ್ಲಿ ಕೈಯಲ್ಲಿ ಕಂಸಾಳೆ ಹಿಡಿದು, ಮಾದಯ್ಯನ ಕೋಲ (ನಾಗಬೆತ್ತ)ನ್ನು ಕಂಕುಳಲ್ಲಿಟ್ಟು ಕೊಂಡು, ಬುತ್ತಿಯ ಗಂಟನ್ನು ತಲೆಯ ಮೇಲಿಟ್ಟುಕೊಂಡು, ಯಾತ್ರೆ ಹೊರಡುವುದು ಮೈಸೂರು ಜಿಲ್ಲೆಯಲ್ಲಿ ಸಾಮಾನ್ಯ ದೃಶ್ಯ. ಮಲೆಯ ಮಹದೇಶನ ಜಾತ್ರೆಯಲ್ಲಿ ಕಂಸಾಳೆಯ ಪ್ರದರ್ಶನ ಕೇಂದ್ರವಾಗುತ್ತದೆ ಆ ಪ್ರದೇಶ. ಬೆಳದಿಂಗಳ ರಾತ್ರಿಯಲ್ಲಿ ಕಂಸಾಳೆಯ ಕಲಾವಿದರ ಹಲವಾರು ಗುಂಪುಗಳು ಅಲ್ಲಿ ಮೇಳ ನಡೆಸುತ್ತವೆ;
“ಕೂಗೋ ಕೂಗು ಮಾದೇವನ,
ಕೂಗಿದರೆ ದುಂಡು ಮಾದೇವನ,
ಕೂಗಿದರೆ ಕುಣಿಯುತ್ತ, ಬರುವನ ಮಾದೇವನ,
ಕೂಗಯ್ಯ ಮುದ್ದು ಮಾದೇವನ"
ಎಂಬತಹ ಸೊಲ್ಲುಗಳ ಹಿನ್ನಲೆಯಲ್ಲಿ ಕಂಚಿನ ತಾಳದ ಶಬ್ದ ಕರ್ಣಾನಂದವನ್ನುಂಟುಮಾಡುತ್ತದೆ.
ಕಂಸಾಳೆಯ ಕಲಾವಿದರಲ್ಲಿ ಮಹದೇಶ್ವರನ ಹುಟ್ಟು, ಬಾಲ್ಯ, ಬಾಲಲೀಲೆ, ಯೌವನ, ವಿನೋದ, ವಿರಸ, ಮುಪ್ಪು, ಮಹಿಮೆಗಳು ಕಂಠಸ್ಥವಾಗಿ ನಿಂತಿವೆ. ಈ ಕಾವ್ಯವನ್ನು ಇಡೀ ರಾತ್ರಿ ಹಾಡಿ ತಣಿಸುವ ಅವರ ಕಲೆಗಾರಿಕೆ ಮೆಚ್ಚುವಂತಹುದು, ಇದಲ್ಲದೆ ಕಲಾವಿದರು ಪಿರಿಯಾಪಟ್ಟಣದ ಲಾವಣಿ, ಸಾರಂಗಧರ, ಚೆನ್ನಿಗರಾಮ, ಘನಪತಿರಾಯ, ಬಾಲನಾಗಮ್ಮ, ಅರ್ಜುನ ಜೋಗಿ ಮುಂತಾದ ಜನಪದ ಕಥಾ ಪ್ರಸಂಗಗಳನ್ನೂ ಹಾಡುತ್ತಾರೆ. ಜನಪದ ಬೆಳಸಿಕೊಂಡು ಬರುತ್ತಿರುವ ಇವರ ಕಲೆ ಜಾನಪದ ಕ್ಷೇತ್ರದ ದೊಡ್ಡ ನಿಧಿಗಳಲ್ಲೊಂದಾಗಿದೆ.
ಕಂಸಾಳೆಯ ಕಲಾಪ್ರಕಾರಗಳಲ್ಲಿ ‘ಬೀಸುಕಂಸಾಳೆ’ಯು ವಿಶಿಷ್ಟ ಶೈಲಿಯದು. ಚಮತ್ಕಾರ, ಶ್ರಮ ಎರಡೂ ಒಟ್ಟಿಗೆ ಸೇರಿ ಅಭಿವ್ಯಕ್ತವಾಗುವ ಈ ಪ್ರದರ್ಶನಕ್ಕೆ ನಾಲ್ಕು ಜನ ಬೇಕು, ಒಬ್ಬಾತ ಮಧ್ಯೆ ಇದ್ದು ತಾಳಕ್ಕೆ ತಕ್ಕಂತೆ ತಲೆಯ ಮೇಲೆ, ಬೆನ್ನ ಹಿಂದೆ, ಕಾಲು ಕೆಳಗೆ, ಕುಳಿತು, ನಿಂತು, ಬಾಗಿ ಬಳುಕಿ, ಉರುಳಾಡಿ, ಸುತ್ತ ನಿಂತ ಮೂವರಿಗೆ ತಾಳಗಳನ್ನು ಕೊಡುತ್ತ, ನಿರ್ದಿಷ್ಟ ಲಯದಲ್ಲಿ ಬೀಸು ಕಂಸಾಳೆಯನ್ನು ಪ್ರದರ್ಶಿಸುತ್ತಾನೆ. ಹೀಗೆ ಆರಂಭವಾದ ಪ್ರದರ್ಶನ ಪರಾಕಾಷ್ಠೆಗೆ ಹೋದಾಗ ನಾಲ್ಕು ಜೊತೆ ಕಂಸಾಳೆಗಳ ತಾಳದ ಕಂಚಿನ ಸ್ವರ, ಮಿಂಚಿನ ವೇಗದ ಕೈ ಚಳಕ ನೋಟಕರನ್ನು ಮೂಕವಿಸ್ಮಯರನ್ನಾಗಿ ಮಾಡುತ್ತದೆ. ಎಷ್ಟೇ ಚುರುಕಿನಿಂದ ಕಲೆ ನಡೆದರೂ ಎಲ್ಲೂ ತಾಳ ತಪ್ಪದಂತೆ ಎಚ್ಚರ ವಹಿಸುವ ಕಲಾವಿದರ ಪರಿಪೂರ್ಣ ಕುಶಲತೆ ನಿಜಕ್ಕೂ ಸೋಜಿಗ ಪಡುವಂಥದು. ಗಾಯಕರು ‘ಲಿಂಗ ಬಾ, ಮುದ್ದು ಲಿಂಗ ಬಾ, ನಮ್ಮ ಮುದ್ದು ಮಾದಯ್ಯನ ಲಿಂಗ ಬಾ’-ಎಂಬ ಹಾಡನ್ನು ಲಯಬದ್ಧವಾಗಿ ತಾಳದೊಂದಿಗೆ ಹೊಂದಿಸಿಕೊಂಡೇ ಹಾಡುತ್ತಾರೆ.
ಕಲಾವಿದರು ಕಂಸಾಳೆಗೆ ಕಟ್ಟಿದ ದಾರದ ತುದಿಯನ್ನು ಹಿಡಿದುಕೊಂಡು ಬೀಸಿ ತಾಳ ಹಾಕುವುದರಿಂದ ಇದು ‘ಬೀಸು ಕಂಸಾಳೆ’ ಯಾಗಿದೆ. ಈ ದಾರ ಸುಮಾರು ಒಂದೊವರೆ ಅಥವಾ ಎರಡು ಅಡಿ ಉದ್ದವಿರುವುದರಿಂದ ಕಲಾವಿದ ದೇಹದ ಸುತ್ತಮುತ್ತ ಯಾವ ಭಾಗಕ್ಕಾದರೂ ತಿರುಗಿಸಿ ತಾಳ ಬಡಿಯಲು ಅವಕಾಶವಾಗುತ್ತದೆ. ಆದರೂ ಇದಕ್ಕೆ ಅತ್ಯಂತ ಕುಶಲತೆ ಹಾಗೂ ಅಭ್ಯಾಸ ಬೇಕಾಗುತ್ತದೆ. ವಿವಿಧ ಭಂಗಿಗಳಲ್ಲಿ ತಿರುಗುತ್ತ ಕಂಸಾಳೆಯನ್ನು ಬೀಸುತ್ತಿರುವಾಗ ಸ್ವಲ್ಪ ಲೆಕ್ಕಾಚಾರ ತಪ್ಪಿದರೂ ತಾಳ ತಪ್ಪಿ ಮೈಗೆ ಏಟು ಬೀಳುವ ಸಂಭವವುಂಟು. ಆದ್ದರಿಂದ ಕುಂತಾಡುವ ಅಥವಾ ನಿಂತಾಡುವ ಕಂಸಾಳೆಗಿಂತ ಬೀಸುಕಂಸಾಳೆ ಕ್ಲಿಷ್ಟವಾದ ಕಲೆ; ಅಷ್ಟೇ ರೋಮಾಂಚಕಾರಿ!
ಕಲಾವಿದರು ಬಿಗಿ ಕಸೆ ಅಂಗಿ, ಮೊಳಕಾಲಿನವರೆಗೆ ಬಿಗಿ ಕಾಸೆ ಕಟ್ಟಿದ ಪಂಚೆ ಧರಿಸಿರುತ್ತಾರ‍್ಹೆ;. ಕೆಲವು ಕಡೆ ಬರಿ ಮೈಯಲ್ಲಿದ್ದು ಚಡ್ಡಿ ಮಾತ್ರ ಧರಿಸಿರುವುದುಂಟು. ಉಳಿದಂತೆ ಮೈಕೈಗೆ ಅಲ್ಲಲ್ಲಿ ವಿಭೂತಿ ಧರಿಸಿರುತ್ತಾರೆ. ಕಿವಿಗೆ ರುದ್ರಾಕ್ಷಿಯಿರುತ್ತದೆ.
ಕಂಸಾಳೆಯವರನ್ನು ‘ದೇವರ ಗುಡ್ಡ’ ರೆಂದೂ ಕರೆಯುತ್ತಾರೆ. ‘ಗುಡ್ಡ’ ನೆಂಈಟPS;ದರೆ ಮಹದೇಶ್ವರನ ‘ಭಕ್ತ’, ಗುಡ್ಡನನ್ನು ಬಿಡುವುದು ಕಂಸಾಳೆ ಮನೆತನದ ವಿಶಿಷ್ಟ ಸಂಪ್ರದಾಯ. ವಂಶ ಪಾರಂಪರ‍್ಯವಾಗಿ ಬಂದ ಪದ್ಧತಿಯಂತೆ ಮನೆಗೊಬ್ಬ ಗುಡ್ಡನನ್ನು ಬಿಡುವುದು ಮಹದೇಶ್ವರನ ಒಕ್ಕಲಲ್ಲಿ ಕಡ್ಡಾಯ. ಅಲ್ಲದೆ ಕಂಟಕ ನಿವಾರಣೆ, ಕಷ್ಟ ಪರಿಹಾರದ ದೆಸೆಯಿಂದ ಮಾಡಿಕೊಂಡ ಹರಕೆಯಂತೆ ಗುಡ್ಡನನ್ನು ಬಿಡುವುದೂ ಉಂಟು. ಮಕ್ಕಳಾಗದವರು ಹೊತ್ತ ಹರಕೆಯ ಪರಿಣಾಮವಾಗಿ ಹುಟ್ಟಿದ ಹಿರಿಯ ಹೆಣ್ಣು-ಗಂಡು ಮಕ್ಕಳನ್ನು ‘ಗುಡ್ಡಿ’-‘ಗುಡ್ಡ’ ರಾಗಿ ಬಿಡುವುದೂ ಉಂಟು. ಗುಡ್ಡಿ ಬಿಡುವ ಸಂಪ್ರದಾಯ ಇತ್ತೀಚೆಗೆ ಕಡಿಮೆಯಾಗಿದೆ. ಆಕೆ ಗುಡ್ಡಿಯಾದ ಮೇಲೆ ವಿವಾಹವಾಗುವಂತಿಲ್ಲ. ಇಷ್ಟಪಟ್ಟಲ್ಲಿ ಗುಡ್ಡನೊಬ್ಬನನ್ನು ಆಕೆ ‘ಸ್ವೀಕರಿ’ಸಬಹುದು.
ಗಂಡಸರನ್ನು‘ಗುಡ್ಡ’ರಾಗಿ ಬಿಡುವ ಸಂಪ್ರದಾಯ ಈಗಲೂ ಇದೆ. ಗುಡ್ಡರಾದ ಮೇಲೆ ಕಂಸಾಳೆ ವಾದ್ಯ ಮತ್ತು ಪದಗಳನ್ನು ಕಲಿತು ಹಾಡುವ ಕಲೆಯನ್ನು ಬೆಳಸಿಕೊಂಡು ಕ್ರಮವಾಗಿ ಮಹದೇಶ್ವರನ ಸೇವೆ ಸಲ್ಲಿಸಬೇಕು.
ಉಮ್ಮತ್ತಾಟ್ :
ಕೊಡಗು ಜಿಲ್ಲೆಗೇ ಸೀಮಿತವಾದ ವಿಶಿಷ್ಟ ಕಲೆ ‘ಉಮ್ಮತ್ತಾಟ್’. ಪೌರಾಣಿಕ ಹಿನ್ನಲೆಯ ಈ ಕಲೆಯಲ್ಲಿ ಪಾಲುಗೊಳ್ಳುವವರೆಲ್ಲ ಮಹಿಳೆಯರೇ. ಸಮುದ್ರ ಮಥನ ಕಾಲದಲ್ಲಿ ವಿಷ್ಣು ಮೋಹಿನಿ ರೂಪ ತಾಳಿ ಉಮಾದೇವಿಯ ನಾನಾ ರೀತಿಯ ನೃತ್ಯಗಳಿಂದ ಸುರಾಸುರರ ಮನವೊಲಿಸಿ ಅವರನ್ನೆಲ್ಲ ಬೆರಗು ಮಾಡಿ ಅಮೃತವನ್ನು ಹಂಚಿದ ಸಂಕೇತವೇ ‘ಉಮ್ಮತ್ತಾಟ್’ ಎಂದು ಕೊಡವರ ನಂಬಿಕೆ.
‘ಉಮ್ಮತ್ತಾಟ್’ ಒಂದು ಸೌಮ್ಯ ಕಲೆ. ಕೊಡಗಿನ ಮಹಿಳೆಯರು ತಮ್ಮ ವಿಶಿಷ್ಟ ಉಡುಪು ಧರಿಸಿ ಷಷ್ಠಿ, ದೀಪಾವಳಿ, ಸಂಕ್ರಾಂತಿ, ಯುಗಾದಿ ಹಬ್ಬಗಳಲ್ಲಿ ಈ ಕಲೆಯನ್ನು ಪ್ರದರ್ಶಿಸುತ್ತಾರೆ. ತಲೆಗೆ ವಸ್ತ್ರ, ತುಂಬು ತೋಳಿನ ಜಾಕೆಟ್, ಹಿಂದಕ್ಕೆ ನೆರಿಗೆ ಬಿಟ್ಟು ಉಟ್ಟ ಸೀರೆ, ಮಂಗಳಕರವಾದ ಬಳೆ, ಮಣಿಮಾಲೆ, ಹಣೆಗೆ ಕುಂಕುಮದ ಬೊಟ್ಟು -ಇದು ಉಮ್ಮತ್ತಾಟ್ ಕಲಾವಿದೆಯರ ವೇಷ. ತಲೆಗೆ ಕಟ್ಟುವ ವಸ್ತ್ರಗಳು ಸಾಮಾನ್ಯವಾಗಿ ಕೆಂಪು ಬಣ್ಣದ್ದಿರುತ್ತವೆ.
ಕಲಾವಿದೆಯರು ಮಧ್ಯಭಾಗದಲ್ಲಿ ‘ಕುತ್ತ ದೀಪ ತಳಿಯ ತಕ್ಕೆ ಬೊಳಕು ಮಡಗಿ’ ಅದರ ಸುತ್ತ ವೃತ್ತಾಕಾರದಲ್ಲಿ ಹಾಡಿಕೊಂಡು ಸುತ್ತುತ್ತಾರೆ. ಪ್ರತಿಯೊಬ್ಬ ಕಲಾವಿದೆಯೂ ಕೈಯಲ್ಲಿ ಕಂಚಿನ ತಾಳ ಹಿಡಿದಿರುತ್ತಾಳೆ. (ಕಂಚಿನ ಬಗ್ಗೆ ಅವರಿಗೆ ಪವಿತ್ರ ಭಾವನೆ. ಕೊಡವರಲ್ಲಿ ಗಂಡು ಮಗು ಹುಟ್ಟಿದರೆ ಅವನು ಶೂರ ಮತ್ತು ಧೀರನೆಂಬ ಸಂಕೇತಕ್ಕೆ ಗುಂಡು ಹಾರಿಸಿ ಸದ್ದು ಮಾಡಿದರೆ, ಹೆಣ್ಣು ಹುಟ್ಟಿದಾಗ ಕಂಚಿನ ಬಟ್ಟಲು ಬಡಿದು ಸದ್ದು ಮಾಡುತ್ತಾರೆ. ಕಂಚಿನ ದನಿ ‘ಓಂಕಾರ’ದ ಸ್ವರೂಪವಾದ್ದರಿಂದ ಅದು ಕುಲದೇವಿಯ ಆರಾಧನೆಯ ಸಂಕೇತವೆಂದು ಅವರ ನಂಬಿಕೆ. ಉಮ್ಮತ್ತಾಟ್ ಕೊಡವರ ಕುಲದೇವತೆ ಕಾವೇರಮ್ಮನ ಆರಾಧನೆಯೂ ಹೌದೆಂದು ಅವರು ಹೇಳುತ್ತಾರೆ) ಉಮ್ಮತ್ತಾಟ್‌ದಲ್ಲಿ ಜೋಡಿಗೂಡುವಂತೆ ಎಷ್ಟು ಜನರಾದರೂ ಭಾಗವಹಿಸಬಹುದು. ಹಾಡು ಹೇಳಿಕೊಡುವವರು ಪ್ರತ್ಯೇಕವಾಗಿ ಒಂದು ಕಡೆ ನಿಂತು ಪೌರಾಣಿಕ ಪ್ರಸಂಗಗಳೇ ಅಲ್ಲದೆ ಕಾವೇರಿಯ ವರ್ಣನೆ ಕುರಿತು ನೂರಾರು ಹಾಡು ಹೇಳುತ್ತಾರೆ. ಆಗ ದೀಪದ ಸುತ್ತ ನಿಂತ ಕಲಾವಿದೆಯರು ಆ ಹಾಡನ್ನು ಪುನರುಚ್ಚರಿಸುತ್ತಾ ತಾಳ ಹಾಕಿಕೊಂಡು ಸುತ್ತುತ್ತಾರೆ.
ಪ್ರತಿ ಹಾಡಿಗೂ ಅವರು ಸುತ್ತುವ, ತಾಳ ಹಾಕುವ ಮತ್ತು ಕುಣಿಯುವ ಗತ್ತು ಭಂಗಿಗಳು ವ್ಯತ್ಯಾಸಗೊಳ್ಳುತ್ತವೆ. ಒಮ್ಮೆ ತಮ್ಮಷ್ಟಕ್ಕೆ ತಾವೇ ತಾಳ ಹಾಕಿದರೆ, ಇನ್ನೊಮ್ಮೆ ಇಬ್ಬಿಬ್ಬರು ಎದುರಾಗಿ ತಾಳ ಕೊಡುತ್ತಾರೆ. ಮತ್ತೊಮ್ಮೆ ಎಡಕ್ಕೊಮ್ಮೆ ಬಲಕ್ಕೊಮ್ಮೆ ತಿರುಗಿ ಎದುರು ಬದುರು ತಾಳ ಕೊಡುತ್ತಾರೆ. ತಾಳ ಹಾಕಿಕೊಂಡು ಹಾಡುತ್ತಾರೆ. ಯಾವ ಭಂಗಿಯಲ್ಲಿದ್ದರೂ ವೃತ್ತಚಲನೆ ನಿಧಾನವಾಗಿ ಸಾಗುತ್ತಲೇ ಇರುತ್ತದೆ. ತಾಳದ ಗತ್ತು ಮಾತ್ರ ಎಲ್ಲೂ ಕುಂಠಿತವಾಗುವುದಿಲ್ಲ. ತಾಳದ ಗತಿ ತ್ವರಿತವಾದಾಗ ಮಾತ್ರ ಕಲಾವಿದರ ಚಲನೆಯೂ ತ್ವರಿತಗೊಂಡು ಪ್ರದರ್ಶನ ಕಳೆಗೂಡುತ್ತದೆ.
ಉಮ್ಮತ್ತಾಟ್ ಹಾಡುಗಳಲ್ಲಿ ಕಾವೇರಿಯ ಸ್ತುತಿಗೀತೆಗಳೇ ಹೆಚ್ಚು. ಅಂತಹ ಒಂದು ಸ್ತುತಿಯ ನಾಲ್ಕು ಸಾಲುಗಳು ಹೀಗಿವೆ:
“ಕಾವೇರಮ್ಮ ದೇವಿ ತಾಯಿ ಕಾಪಾಡೆಂಗಳಾ,
ಭಾವ ಬಟ್ಟೆ ಕಾಟಿ ತಂದ್ ಚಾಕ್ ದೇವಿ ನೀ,
ದತ್ತ್ ಮೋವಳಾಯಿತ್ ನೀ ಬ್ರಹ ದೇವಂಗೇ,
ಗೊತ್ತಿಲ್ಲತೆ ಅಗಸ್ತ್ಯ ಋಷಿ ಬುಟ್ ಪೊರಟಯಾ."
ಹೀಗೆ ಹೇಳಿಕೊಂಡು ನಿಧಾನವಾಗಿ ಕಲಾವಿದೆಯರು ಚಲಿಸುತ್ತಿದ್ದರೆ, ಕಾವೇರಿ ನದಿಯ ಗಂಭೀರ ಗಮನದ ಸಂಕೇತವೋ ಎಂದೆನಿಸುತ್ತದೆ!
‘ಉಮ್ಮತ್ತಾಟ್’ ದೈವೀ ಆರಾಧನೆಯ ಕಲೆ. ಅಂತೇ ಅದೊಂದು ಹವ್ಯಾಸಿ ಕಲೆಯೂ ಹೌದು. ಮಹಿಳೆಯರು ತಮ್ಮ ಸ್ವಸಂತೋಷಕ್ಕಾಗಿ ಸುಗ್ಗಿ ಮತ್ತು ವಸಂತ ಕಾಲದಲ್ಲಿ, ದೇವರ ಉತ್ಸವ ಮೊದಲಾದ ಸಮಾರಂಭಗಳಲ್ಲಿ ಕುಣಿದು ನಲಿಯುತ್ತಾರೆ. ಇತ್ತೀಚೆಗೆ ಉಮ್ಮತ್ತಾಟ್ ಹಾಡುಗಳಲ್ಲಿ ಸಮಕಾಲೀನ ವಿಷಯಗಳೆಲ್ಲ ಇರುತ್ತವೆ. ಈ ಕಲೆಯಲ್ಲಿ ಪಾಲುಕೊಳ್ಳುವರಲ್ಲಿ ಅವಿವಾಹಿತ ಯುವತಿಯರೇ ಹೆಚ್ಚು. ಮದುವೆಯಾದವರು ಸಂಕೋಚದಿಂದಾಗಿ ಪ್ರದರ್ಶನದಲ್ಲಿ ಸೇರಿಕೊಳ್ಳುವುದು ಕಡಮೆ.
April 18th, 2012 at 3:34 pm
karnataka namma asthi
May 29th, 2012 at 12:06 pm
Olleya Lekhana Sir.
Karnatakadha Janapadha Uliyuvalli Thavu Maduttiruva Prayathna Shlaganiya
October 3rd, 2013 at 9:43 am
thumbha chennagide innu chenagiro namma bere bere janapada kalegalannu haki
March 2nd, 2014 at 12:15 pm
Good online kannada paper .Good luck
March 20th, 2014 at 9:42 pm
Channabasappa sir tamm e janpad kalegal kurit kruti namm kale, sahithy, samskrutiyannu bimbisuvantide. Sir tavu mukhya athitiyagidda sankeshwarad janapad kalegal sambram karyakramadalli nanu nirupaknagi karya nirvshisiddu nann punya yendu bhavisiddene. tamage Dhanyavadagulu sir.
December 15th, 2014 at 5:34 pm
keep it sir good
December 15th, 2014 at 5:35 pm
good super sir