ಕರ್ನಾಟಕ ಜನಪದ ಕಲೆಗಳು – ಭಾಗ ೭

ಸಂ: ಗೊ. ರು. ಚನ್ನಬಸಪ್ಪ

ಕರಗ:


ಕರಗದ ಕಲೆಯ ಹುಟ್ಟನ್ನು ಕುರಿತು ನಿರ್ದಿಷ್ಟವಾದ ಮಾಹಿತಿ ದೊರೆಯುವುದಿಲ್ಲವಾದರೂ ಕರಗದ ಕಲಾವಿದರು ಕೊಡುವ ಆಧಾರದಿಂದ ಇದರ ಹಿನ್ನಲೆಯ ಬಗ್ಗೆ ಒಂದು ಸ್ಥೂಲ ಕಲ್ಪನೆ ಬರುತ್ತದೆ. ಒಂದು ನಂಬಿಕೆಯ ಪ್ರಕಾರ, ಕುರುಕ್ಷೇತ್ರ ಯುದ್ಧಾನಂತರ ಪಾಂಡವರ ಸ್ವರ್ಗಾರೋಹಣ ಸಂದರ್ಭದಲ್ಲಿ ಪತಿಗಳನ್ನು ಹಿಂಬಾಲಿಸುತ್ತಿದ್ದ ದ್ರೌಪದಿ ಮೂರ್ಛೆ ಹೋದಳು. ಎಚ್ಚರಗೊಂಡು ನೋಡಿದಾಗ ಪತಿಗಳಿಲ್ಲದುದನ್ನು ಕಂಡು ಭಯದಿಂದ ರೋದಿಸುತ್ತಿದ್ದಳು. ಅದೇ ಸಂದರ್ಭಕ್ಕೆ ತಿಮಿರಾಸುರನೆಂಬ ರಕ್ಕಸ ಆಕೆಯನ್ನು ಪೀಡಿಸಲು ಅವನ ನಿಗ್ರಹದ ಸಲುವಾಗಿ ಆಕೆಯಲ್ಲಿ ವಿಶೇಷ ಶಕ್ತಿ ಮೈದಾಳಿತು. ವಿರಾಟರೂಪವನ್ನು ತಾಳಿದ ಆಕೆಯ ತಲೆಯ ಮೇಲೆ ಕುಂಭವನ್ನು ಧರಿಸಿದ್ದಳು. ಅಂದಿನ ಕುಂಭವೇ ಇಂದು ಆರಾಧಿಸಲ್ಪಡುತ್ತಿರುವ `ಕರಗ’! ಎರಡನೆಯ ನಂಬಿಕೆಯಂತೆ, ಮತ್ಸ್ಯಯಂತ್ರವನ್ನು ಭೇದಿಸಿದ ಅರ್ಜುನನನ್ನು ವರಿಸಿದ ದ್ರೌಪದಿ, ನಂತರ ಕುಂತಿಯ ಅಭಿಲಾಷೆಯಂತೆ ಉಳಿದ ನಾಲ್ವರು ಪಾಂಡವರನ್ನು ವಿವಾಹವಾದಳು. ಆ ಸಂದರ್ಭದಲ್ಲಿ ಆನಂದಾತಿಶಯದಿಂದ ಕೈಯಲ್ಲಿದ್ದ ಕಳಸವನ್ನು ತಲೆಯ ಮೇಲೆ ಧರಿಸಿದಳು. ಆ ಕಳಸವೇ ಇಂದಿನ ಆರಾಧನೆಯ `ಕರಗ’!

ಇನ್ನು ಮೂರನೆಯ ಕಲ್ಪನೆಯಂತೆ, ಇಂದು ಕರಗವನ್ನು ಆಚರಿಸಿಕೊಂಡು ಬರುತ್ತಿರುವ ವಹ್ನಿಕುಲ ಕ್ಷತ್ರಿಯರು ಪೂರ್ವದಿಂದಲೂ ಪಾಂಡವ ಆರಾಧಕರು. ಇವರ ಮೂಲ ಪುರುಷ ಅಗ್ನಿಸಂಭವನೆಂಬುದು ನಂಬಿಕೆ. ಪಾಂಡವರ ಪತ್ನಿಯೂ, ಅಗ್ನಿಸಂಭವೆಯೂ, ಅಪರಿಮಿತ ತೇಜಸ್ಸುಳ್ಳವಳೂ `ದೇವಾಸುರ ಯುದ್ಧಕ್ಕೆ ಕರಗಂಬೊತ್ತು’ ಪ್ರೇರಕಳಾದವಳೂ ಆದ ದ್ರೌಪದಿಯ ಆರಾಧನೆಯ ಸಂಕೇತವಾಗಿದೆ ಇಂದಿನ ಕರಗದ ಆಚರಣೆ. ನಾಲ್ಕನೆಯ ಐತಿಹ್ಯದಂತೆ “ಬಾಣಾಸುರನ ವಿರುದ್ಧ ಹೋರಾಡಿ ಗೆದ್ದ ಶ್ರೀಕೃಷ್ಣನ ವಿಜಯದ ಸಂಕೇತವಾಗಿ ದ್ರೌಪದಿಯ ನರ್ತನ”ವೇ ಕರಗ!

ಈ ಎಲ್ಲ ಐತಿಹ್ಯಗಳೂ ಮಹಾಭಾರತಕ್ಕೆ, ಅದರಲ್ಲೂ ದ್ರೌಪದಿಗೆ ಸಂಬಂಧಿಸಿದವುಗಳು. ಶಕ್ತಿಯ ಆರಾಧನೆ ನಮ್ಮಲ್ಲಿ ಒಂದು ಪ್ರಾಚೀನ ಸಂಪ್ರದಾಯವಾಗಿ ಬೆಳೆದು ಬಂದಿದೆ. ಹೆಣ್ಣು ದೇವತೆಯನ್ನು ಪೂಜಿಸುವ ಸಂದರ್ಭಗಳಲ್ಲೆಲ್ಲಾ ಕುಂಭ, ಕಳಸಗಳು ಪ್ರಮುಖ ಪಾತ್ರ ವಹಿಸುತ್ತವೆ. ಜೊತೆಗೆ ಇಲ್ಲಿ ಆವೇೞ, ಮೈದುಂಬುವಿಕೆಗಳೂ ಅವಿಭಾಜ್ಯ ಅಂಗಗಳಾಗಿವೆ. ಇನ್ನು ದ್ರೌಪದಿಗೆ ಸಂಬಂಧಿಸಿದಂತೆ ಆಚರಿಸಿಕೊಂಡು ಬರುತ್ತಿರುವ `ಕರಗದ ಪೂಜೆಯ’ ಹಿನ್ನಲೆಯಲ್ಲಿ ಆಕೆಯನ್ನು ಶಕ್ತಿಯ ಪ್ರತೀಕವೆಂದು ನಂಬಿರುವುದರಲ್ಲಿ ಅರ್ಥವಿದೆ. ಈ ಸಂಪ್ರದಾಯವನ್ನು ಹಿಂದಿನಿಂದ ವಹ್ನಿಕುಲ ಕ್ಷತ್ರಿಯರು ಆಚರಿಸಿಕೊಂಡು ಬಂದಿದ್ದಾರೆ.

ಬಹುಜನರಿಗೆ ಪರಿಚಯವಿರುವ ಕರಗವೆಂದರೆ `ಬೆಂಗಳೂರು ಕರಗ’. ಇದು ಒಂಭತ್ತು ದಿನಗಳು ನಡೆಯುವ ಒಂದು ಧಾರ್ಮಿಕ ಕಾರ್ಯಕ್ರಮ. ಯುಗಾದಿಯ ನಂತರದ ಸಪ್ತಮಿ ಇಲ್ಲವೆ ಅಷ್ಟಮಿಯಂದು ಧ್ವಜಾರೋಹಣದವರೆಗೆ ಹಲವಾರು ಧಾರ್ಮಿಕ ಆಚರಣೆಗಳು ಇದರಲ್ಲಿ ಹೆಣೆದುಕೊಂಡಿವೆ. ಇವುಗಳಲ್ಲಿ ದ್ವಾದಶಿಯಂದು ನಡೆಯುವ ಆರತಿ ಸೇವೆ, ತ್ರಯೋದಶಿಯಂದು ನಡೆಯುವ `ಹಸೀ ಕರಗದ’ ರಚನೆ ಮತ್ತು ಪೂರ್ಣ ನವಮಿಯಂದು ನಡೆಯುವ ಮಹೋತ್ಸವ ಮುಖ್ಯವಾದುವು. ಈ ಎಲ್ಲ ಚಟುವಟಿಕೆಗಳ ಕೇಂದ್ರ ಧರ್ಮರಾಯನ ದೇವಸ್ಥಾನ.
`ಹಸಿಕರಗ’ದ ರಚನೆ ಬಹು ಕಟ್ಟುನಿಟ್ಟಾದ ಹಾಗೂ ಸಂಪ್ರದಾಯಬದ್ಧವಾದ ಕಾರ್‍ಯ. ಶಾಸ್ತ್ರಬದ್ಧವಾಗಿ ಹಸಿಮಣ್ಣಿನಿಂದ ಕರಗವನ್ನು ರೂಪಿಸುವ ಹಕ್ಕು ನಿರ್ದಿಷ್ಟವಾದ ಮನೆತನದವರಿಗೆ ಮಾತ್ರ ಮೀಸಲು. ಗರ್ಭಗುಡಿಯಲ್ಲಿ ನಡೆಯುವ ಈ ಕಾರ್‍ಯದ ರಹಸ್ಯವನ್ನು ಯಾರೂ ಹೊರಗೆಡಹಲು ಇಚ್ಛಿಸುವುದಿಲ್ಲ. ಹಾಗೆ ಬಹಿರಂಗ ಪಡಿಸುವುದು ಅವರ ಶ್ರೇಯಸ್ಸಿಗೆ ಕುಂದು-ಕೇಡು ಎಂಬ ಭಾವನೆ ಬಲವಾಗಿದೆ. ಚೈತ್ರ ಶುದ್ಧ ಹುಣ್ಣಿಮೆಯಂದು ನಡೆಯುವ ಕರಗ ಮಹೋತ್ಸವದ ಸಿದ್ಧತೆಗಳು ಅಂದು ಸಂಜೆಯಿಂದಲೇ ಆರಂಭವಾಗುತ್ತವೆ. ಸಂಜೆಯ ಸುಮಾರಿಗೆ ಕರಗ ಹೊತ್ತು ನಡೆಯುವ ವ್ಯಕ್ತಿಗೆ ವಷನ ಸಂಸ್ಕಾರ ಮಾಡಿ, ಕಂಕಣ ಕಟ್ಟಿ, ಕೈತುಂಬ ಕರಿ ಬಳೆ ತೊಡಿಸಿ, ಅಚ್ಚ ಮಲ್ಲಿಗೆಯ ಜಡೆಕುಚ್ಚುಗಳಿಂದ ಸಿಂಗರಿಸಿ, ಅರಿಶಿನದ ಸೀರೆ, ಕುಪ್ಪುಸ ಉಡಿಸಿ ಹವಳದ ಹಾರ, ರತ್ನಾಭರಣಗಳಿಂದ ಅಲಂಕರಿಸುತ್ತಾರೆ. ಕರಗ ಹೊರುವ ವ್ಯಕ್ತಿ ನವವಧುವಿನಂತೆ ಶೋಭಿಸುತ್ತಾನೆ. ಅನಂತರ ಶಕ್ತಿಸ್ವರೂಪನಾದ ಆ ವ್ಯಕ್ತಿಗೆ ಧೂಪದೀಪಗಳಿಂದ ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾದ ಪೊಜೆ ನಡೆಯುತ್ತದೆ. ಇದು ಕೆರೆಯಂಗಳದ ಬಯಲಿನಲ್ಲಿ ನಡೆಯುವ ಪೂರ್ವಭಾವಿ ಸಿದ್ಧತೆ. ಅನಂತರ ಹಣೆಗೆ ನಾಮ, ನಡುಪಟ್ಟಿ, ತಲೆಗೆ ಪೇಟ ಧರಿಸಿ ಕೈಯಲ್ಲಿ ಅಲಗು ಹಿಡಿದ ಅಂಗರಕ್ಷಕರ ತಂಡದ ವೀರಕುಮಾರರ ಕಾಪಿನಲ್ಲಿ ಕರಗ ಹೊರುವ ವ್ಯಕ್ತಿಯನ್ನು ನಡೆಮಡಿಯೊಂದಿಗೆ ದೇವಸ್ಥಾನಕ್ಕೆ ಕರೆತರುತ್ತಾರೆ. ಆ ವೇಳೆಗೆ ತುಂಬಿ ಬಂದ ಜನಸ್ತೋಮವನ್ನು ಭೇದಿಸಿಕೊಂಡು ಆತ ಗರ್ಭಗುಡಿಯನ್ನು ಪ್ರವೇಶಿಸುತ್ತಾನೆ. ಅಷ್ಟರಲ್ಲಿ ಅರಿಶಿನ, ಕುಂಕುಮ, ಅಚ್ಚಮಲ್ಲಿಗೆ ಹೂವಿನಿಂದ ಅಲಂಕೃತವಾದ ಹಸಿಕರಗ (ಅದರೊಳಗೆ ಜಲ) ಸಿದ್ಧವಾಗಿರುತ್ತದೆ. ಕರಗದ ಮೇಲೆ ಗೋಪುರದಂತೆ ಮಲ್ಲಿಗೆ ಹೂವಿನ ಅಲಂಕಾರವಿದ್ದು ತುದಿಯಿಂದ ಇಳಿಬಿಟ್ಟ ಹೂ ಸರಗಳನ್ನು ಹೊರುವವನ ಭುಜದಿಂದ ಕೆಳಕ್ಕೆ ಮಾಲೆಯಂತೆ ಹರಿಡಿಕೊಳ್ಳುವ ರೀತಿಯಲ್ಲಿ ಕಟ್ಟಿರುತ್ತಾರೆ.

ಕರಗವನ್ನು ಹೊತ್ತ ಮೇಲೆ ಮತ್ತೊಮ್ಮೆ ವಿಶೇಷ ಮಂಗಳಾರತಿಯಾದ ನಂತರ ಸ್ತುತಿಪದ್ಯಗಳನ್ನು ಹೇಳುವ ಗಂಟೆ ಪೂಜಾರಿ ಹಾಗೂ ವೀರಕುಮಾರರ ರಕ್ಷಣೆಯಲ್ಲಿ ಧರ್ಮರಾಯನ ಗುಡಿಯ ಅಂಗಳವನ್ನು ಬಿಟ್ಟ ಕರಗ ಮೊದಲೇ ನಿರ್ಧರಿಸಿದ್ದ ಬೀದಿಗಳಲ್ಲಿ ಇಡೀ ರಾತ್ರಿ ಸಂಚರಿಸಿ ಬೆಳಗಿನ ಜಾವ ಮತ್ತೆ ಗರ್ಭಗುಡಿ ಪ್ರವೇಶಿಸುತ್ತದೆ. ಪ್ರತಿಷ್ಠಾಪಿತವಾದ ಕರಗಕ್ಕೆ ಭಕ್ತಾದಿಗಳಿಂದ ಪೂಜೆ-ಸೇವೆ ನಡೆಯುತ್ತದೆ. ಬೆಂಗಳೂರಿನ ಕರಗದ ಆಕರ್ಷಣೆಯೆಂದರೆ ಆ ದಿನ ಬೆಳಗಿನ ಜಾವದವರೆಗೆ ಕಣ್ಣು ಕೋರೈಸುವಂತೆ ಅಲಂಕೃತವಾದ ರಥ, ಮಂಟಪ, ಪಲ್ಲಕ್ಕಿಗಳಲ್ಲಿ ವಿವಿಧ ದೇವತಾವಿಗ್ರಹಗಳ ಆಕರ್ಷಕ ಮೆರವಣಿಗೆ. ಸಂಪೂರ್ಣವಾಗಿ ಧಾರ್ಮಿಕ ಸಂಪ್ರದಾಯದೊಂದಿಗೆ ನಡೆಯುವ ಈ ಕರಗಕ್ಕೆ `ಧರ್ಮರಾಯನ ಕರಗ’ ವೆಂಬ ಹೆಸರು ಕೂಡಿ ಬಂದಿದೆ. `ದ್ರೌಪದಮ್ಮನ ಕರಗ’ ಎಂದು ಹೇಳುವುದೂ ಉಂಟು.

ಕಾಲಕ್ರಮೇಣ ಕರಗ ತನ್ನ ಮೂಲ ಉದ್ದೇಶವಾದ ಧಾರ್ಮಿಕ ದೃಷ್ಟಿಯಿಂದ ಕವಲೊಡೆದು ಕೆಲವು ಕಲಾ ಪ್ರಕಾರಗಳಾಗಿ ಬೆಳೆಯಿತು. ಧಾರ್ಮಿಕ ಶ್ರದ್ಧೆಯ ಹಿನ್ನಲೆಯಲ್ಲಿ ನಡೆಯುತ್ತಿದ್ದ ಈ ಆಚರಣೆ ಮನರಂಜನೆಯ ಅಂಶವನ್ನೂ ಒಳಗೊಂಡುದೇ ಇದಕ್ಕೆ ಕಾರಣವೆನ್ನಬಹುದು. ಹೀಗೆ ಹುಟ್ಟಿಕೊಂಡ ಕರಗದ ಪ್ರಾಕಾರಗಳಾದ ಒನಕೆ ಕರಗ, ಚಿತ್ರಗೋಪುರ ಕರಗ ಮತ್ತು ಚೊಂಬಿನ ಕರಗಗಳು ಪ್ರದರ್ಶನ ರೀತಿಯಲ್ಲಿ ಒಂದರಿಂದೊಂದು ಭಿನ್ನವಾಗಿದ್ದು ಒಳ್ಳೆಯ ಚಮತ್ಕಾರಯುತ ಮನರಂಜನಾ ಮಾಧ್ಯಮಗಳಾಗಿ ಪ್ರಚಲಿತವಾಗಿವೆ. ಈ ಮಾದರಿಗಳ ಕುಣಿತಕ್ಕೆ ಹಿನ್ನೆಲೆಯಾಗಿ ಓಲಗ, ತಮಟೆ, ಹಿಮ್ಮೇಳವಿರುತ್ತದೆ. ಗಂಡಸು-ಹೆಂಗಸು ಜೋಡಿಯಾಗಿ ಮತ್ತು ಪ್ರತ್ಯೇಕವಾಗಿ ಪ್ರದರ್ಶನ ನೀಡುತ್ತಾರೆ.

ಒನಕೆ ಕರಗ: ಇದೊಂದು ಚಮತ್ಕಾರಯುತ ಕಲೆ. ಸುಮಾರು ೫-೬ ಅಡಿ ಉದ್ದದ ಒನಕೆಯ ಒಂದು ತುದಿಗೆ, ಸೈಕಲ್ಲು ಚಕ್ರವನ್ನು ಅಡ್ಡಲಾಗಿ ಕಟ್ಟಿ ಅದರ ಸುತ್ತ ಹೂವಿನ ಹಾರಗಳಿಂದ ಅಲಂಕಾರ ಮಾಡಿರುತ್ತಾರೆ. ಒನಕೆಯ ಮತ್ತೊಂದು ತುದಿಯನ್ನು ಶಿರದ ಮಧ್ಯದಲ್ಲಿ ನಿಲ್ಲಿಸಿಕೊಂಡು ವಾದ್ಯದ ಗತ್ತಿಗನುಗುಣವಾಗಿ ಗೆಜ್ಜೆಯ ಕಾಲಿನ ತಾಳದೊಂದಿಗೆ ಲಯಬದ್ಧವಾಗಿ ಕುಣಿಯುವ ಈ ಕಲೆಯಲ್ಲಿ ಬಹು ಮುಖ್ಯವಾದ ಅಂಶವೆಂದರೆ ಒನಕೆಯ ವಾಸರವನ್ನು ತಿದ್ದಿಕೊಳ್ಳುವುದು. ಕುಣಿಯುವ ವ್ಯಕ್ತಿ ಕೆಂಪುಬಟ್ಟೆಯ ವೀರಗಾಸೆ, ಸೊಂಟಕ್ಕೆ ನಡುಪಟ್ಟಿ, ಕೊರಳಿಗೆ ಹಾರ, ಹಣೆಗೆ ಗಂಧ, ಕುಂಕುಮ, ಕಾಲಿಗೆ ಗೆಜ್ಜೆ ಧರಿಸಿರುತ್ತಾನೆ. ಕುಣಿತ ಪರಾಕಾಷ್ಠೆಗೆ ಮುಟ್ಟಿದಾಗ ಎರಡೂ ಕೈಗಳನ್ನು ಬಿಟ್ಟು ಮೈ ಮರೆತವರಂತೆ ಕುಣಿಯುವಾಗಲೂ ಒನಕೆಯ ವಾಸರದ ಕಡೆ ಗಮನವಿಟ್ಟಿರುವ ಕಲಾವಿದನ ಚಮತ್ಕಾರವನ್ನು ಯಾರಾದರೂ ಮೆಚ್ಚಬೇಕು.

ಚೊಂಬಿನ ಕರಗ: ಹೂವು, ಕುಂಕುಮಗಳಿಂದ ಸಂಪೂರ್ಣವಾಗಿ ಅಲಂಕೃತವಾದ ದುಂಡನೆಯ ಚೊಂಬನ್ನು ಸಿಂಬೆಯಿಲ್ಲದೆ ತಲೆಯ ಮೇಲಿಟ್ಟುಕೊಂಡು ವಿವಿಧ ಗತಿ-ಗತ್ತುಗಳಲ್ಲಿ ವಾದ್ಯದ ಲಯಕ್ಕೆ ತಕ್ಕಂತೆ ಬಾಗಿ-ತೂಗಿ, ಬಳುಕಿ ಮಂಡಿಯೂರಿ ಕುಣಿಯುವ ನೈಪುಣ್ಯ ನೋಡುವವರನ್ನು ಬೆರಗುಗೊಳಿಸದಿರದು. ಕುಣಿಯವವರು ಹಾಕುವ ಮುಖದ ಬ;ಣ್ಣ, ಬಣ್ಣ ಬಣ್ಣದ ಬಟ್ಟೆಯುಡಿಗೆ ಕುಣಿತಕ್ಕೆ ಮತ್ತಷ್ಟು ಆಕರ್ಷಣೆಯಾಗುತ್ತದೆ. ಚೊಂಬಿನ ಕರಗಕ್ಕೆ ಸಾಮಾನ್ಯವಾಗಿ ಸ್ತ್ರೀ ಕಲಾವಿದರೇ ಇರುತ್ತಾರೆ.

ಚಿತ್ತಗೋಪುರ ಕರಗ: ಗೋಪುರಾಕಾರವಾಗಿ ಹೆಣೆದ ಬುಟ್ಟಿಗೆ ಹೂವಿನಿಂದ ಅಲ;ಂಕಾರವನ್ನು ಮಾಡಿ ತಲೆಯ ಮೇಲಿಟ್ಟುಕೊಂಡು ವಿವಿಧ ಭಾವ-ಭಂಗಿಗಳಲ್ಲಿ ಕುಣಿಯುವುದು. ಕರಗದ ಯಾವುದೇ ಪ್ರಕಾರವಿರಲಿ ಅಲ್ಲಿ ಅಲಂಕಾರ ಮತ್ತು ಕುಣಿಯುವಾಗ ತೋರುವ ವೈವಿಧ್ಯಪೂರ್ಣ ಚಲನವಲನಗಳು ಕಲಾವಿದರ ನೈಪುಣ್ಯತೆಗೆ ನಿದರ್ಶನವಾಗಿರುತ್ತವೆ.
ಕರ್ನಾಟಕದಲ್ಲಿ ಈ ಕಲೆ ಬೆಂಗಳೂರು, ಕೋಲಾರ ಮತ್ತು ತುಮಕೂರು ಜಿಲ್ಲೆಗಳ ಕೆಲವು ಕಡೆ ಪ್ರಚಲಿತವಿದೆ. ಆದರೆ ಮೂಲ ಸೊಗಸನ್ನು ಕಾಪಾಡಿಕೊಂಡು ಧಾರ್ಮಿಕ ಸಂಬಂಧವನ್ನುಳಿಸಿಕೊಂಡು ಬಂದಿರುವ ಕರಗವೆಂದರೆ ಬೆಂಗಳೂರು ಕರಗ.

ಪಟದ ಕುಣಿತ:

ವೈಷ್ಣವ ಸಂಪ್ರದಾಯದ ಕುಣಿತಗಳಲ್ಲಿ ಒಂದೆಂದು ಹೇಳಲಾಗುವ `ಪಟದ ಕುಣಿತ’ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಕಂಡುಬರುತ್ತದೆ. ಕುಣಿತದ ರೀತಿ ಸುಗ್ಗಿಯ ಕುಣಿತದಂತಿದ್ದರೂ ಕಲಾವಿದರು ಕೈಯಲ್ಲಿ ಹಿಡಿಯುವ `ಪಟ’ಗಳಿಂದಾಗಿ ಈ ಕಲೆ ವಿಶಿಷ್ಟವೆನಿಸಿದೆ. ಸುಮಾರು ಹತ್ತು ಹದಿನೈದು ಅಡಿ ಉದ್ದದ ಬಿದಿರಿನ ಜವಳೆ (ಕೋಲು)ಗಳಿಗೆ ಬಣ್ಣ ಬಣ್ಣದ ರೇಷ್ಮೆ ಜಾಲರಿ ಬಟ್ಟೆಯ ಪಟ್ಟಿಗಳನ್ನು ಸುತ್ತಿ ಅಲಂಕಾರ ಮಾಡುವುದೇ `ಪಟ’. ಇದರ ತುದಿಯಲ್ಲಿ ಹಿತ್ತಾಳೆ ಅಥವಾ ಬೆಳ್ಳಿಯ ಛತ್ರಿ ಅಳವಡಿಸಿರುವುದು ಪಟಕ್ಕೆ ಒಂದು ಕಳೆ ಕೊಡುತ್ತದೆ.
ಸಾಮಾನ್ಯವಾಗಿ ಒಕ್ಕಲಿಗರಲ್ಲಿ ಪ್ರಚಲಿತವಿರುವ ಪಟದ ಕುಣಿತ ನಡೆಯುವುದು ಹಬ್ಬ ಹರಿದಿನಗಳಲ್ಲಿ, ಜಾತ್ರೆ ಉತ್ಸವಗಳಲ್ಲಿ. ತಮಟೆ, ನಗಾರಿಗಳ ಬಡಿತ ಪಟದ ಕುಣಿತಕ್ಕೆ ಹಿನ್ನಲೆ ವಾದ್ಯ. ಬಿಳಿಯ ಕಾಸೆಪಂಚೆ, ಬಿಳಿಯ ನಿಲುವಂಗಿ, ಬಿಳಿಯ ರುಮಾಲು, ಸೊಂಟಕ್ಕೆ ಬಿಗಿದ ಬಣ್ಣದ ವಸ್ತ್ರ, ಕೊರಳಿಗೆ ಮಣಿಸರ, ಒಂದು ಕೈಯಲ್ಲಿ ಬಿಳಿಯ ಚೌಕ, ಕಾಲಿಗೆ ಗೆಜ್ಜೆ – ಇವು ಕಲಾವಿದರ ವೇಷಭೂಷಣ.

ಹೆಗಲಿಗೆ ಅಡ್ಡಲಾಗಿ ಇಳಿಬಿಟ್ಟುಕೊಂಡ ಗಟ್ಟಿ ಬಟ್ಟೆಯ `ನವಾರ’ದಲ್ಲಿ ಸಿಕ್ಕಿಸಿದ ಪಟದ ಕೋಲನ್ನು ಬಲಗೈಯಲ್ಲಿ ಹಿಡಿದುಕೊಂಡ ಕಲಾವಿದರು ವಾದ್ಯದ ಗತ್ತಿಗೆ ಅನುಗುಣವಾಗಿ ವಿವಿಧ ಭಂಗಿಗಳಲ್ಲಿ ಕುಣಿಯುತ್ತಾರೆ. ಕುಣಿತಕ್ಕೆ ಇಷ್ಟೇ ಜನರಿರಬೇಕೆಂಬ ನಿಯಮವಿಲ್ಲದಿದ್ದರೂ ಹತ್ತು ಹನ್ನೆರಡಕ್ಕಿಂತ ಹೆಚ್ಚು ಜನರಿದ್ದರೇ ನೋಡಲು ಚೆಂದ. ಕುಣಿಯುವಾಗ ಪಟದ ಜವಳಿಗಳು ಅತ್ತಿತ್ತ ಬಾಗುವಾಗ ಅವಕ್ಕೆ ಸುತ್ತಿದ್ದ ಬಟ್ಟೆಯ ಜಾಲರಿಗಳ ಚಲ್ಲಾಟದ ದೃಶ್ಯ ಮನಮೋಹಕ. ಪಟದ ಸೊಬಗನ್ನು ಹೆಚ್ಚಿಸಲು ತುದಿಯಲ್ಲಿ ರೇಷ್ಮೆ ಗೊಂಡೇವುಗಳನ್ನು ಕಟ್ಟಿರುವುದುಂಟು.


ಕುಣಿತದಲ್ಲಿ ಗೆಜ್ಜೆ ಕುಣಿತ, ಎರಡ್ಹೆಜ್ಜೆ, ಮೂರ್‍ಹೆಜ್ಜೆ ಮೊದಲಾದ ವಿಧಗಳಿವೆ. ಸಾಮಾನ್ಯವಾಗಿ ಒಂಟಿ ಸಾಲಿನಲ್ಲಿ ಕುಣಿತ ನಡೆಯುತ್ತದೆ. ಒಮ್ಮೊಮ್ಮೆ ಕಲಾವಿದರು ಎರಡು ಸಾಲಾಗಿ ಪರಸ್ಪರ ಎದುರು ನಿಂತು, ಒಮ್ಮೊಮ್ಮೆ ವೃತ್ತಾಕಾರದಲ್ಲಿ ಚಲಿಸುತ್ತಾ ಪಟದ ಜವಳಿಗಳನ್ನು ಹಿಂದಕ್ಕೆ ಮುಂದಕ್ಕೆ ಬಾಗಿಸಿ ಕುಣಿಯುವ ವಿಧಾನವಂತೂ ಕಣ್ಣಿಗೆ ಹಬ್ಬ. ಕುಣಿತದ ಗತ್ತು, ವಿನ್ಯಾಸಗಳನ್ನು ನೋಡಿದರೆ ವಿಜಯದ ಸಂಭ್ರಮ ಸಡಗರಗಳ ಸಂಕೇತವೆಂಬುದು ಸ್ಪಷ್ಟವಾಗುತ್ತದೆ, ಕೆಲವು ಕಡೆ ಭಾಗವಂತಿಕೆಯ ಜೊತೆಯಲ್ಲಿ ಪಟದ ಕುಣಿತ ನಡೆಯುವುದುಂಟ. ಮಂಡ್ಯ ಜಿಲ್ಲೆಯ ಕೆಲವು ಕಡೆ ದೀವಳಿಗೆ ತಿಂಗಳಲ್ಲಿ ಮಾತ್ರ ಪಟ ಮುಟ್ಟುವ ಸಂಪ್ರದಾಯವಿದೆ ಎಂದು ಹೇಳುತ್ತಾರೆ.

Leave a Reply