ಕರ್ನಾಟಕ ಜನಪದ ಕಲೆಗಳು – ಭಾಗ ೨

ಸಂ: ಗೊ. ರು. ಚನ್ನಬಸಪ್ಪ

ಡೊಳ್ಳು ಕುಣಿತ:

ಜನಪದ ಕಲೆಗಳಲ್ಲಿ `ಗಂಡು ಕಲೆ’ ಎನಿಸಿರುವ ಡೊಳ್ಳು ಕುಣಿತ ಪುರುಷರಿಗೆ ಮೀಸಲಾದ ಕಲೆ. ಒಳ್ಳೆಯ ಮೈ ಕಟ್ಟು ಮತ್ತು ಶಕ್ತಿ ಉಳ್ಳ ಕಲಾವಿದರು ಮಾತ್ರ ಈ ಕಲೆ ಪ್ರದರ್ಶಿಸಬಲ್ಲರು. ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳು ಹಾಗೂ ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಡೊಳ್ಳು ಕುಣಿತ ತನ್ನ ವಿಶಿಷ್ಟವಾದ ಸತ್ವ ಶೈಲಿಗಳಿಂದ ಉಳಿದುಕೊಂಡು ಬಂದಿದೆ.

ಡೊಳ್ಳಿನ ಉತ್ಪತ್ತಿಯ ಬಗ್ಗೆ ಪೌರಾಣಿಕ ಹಿನ್ನಲೆಯ ಒಂದು ವಿಚಿತ್ರ ಕತೆ ಹೀಗಿದೆ: `ಡೊಳ್ಳಾಸುರ’ನೆಂಬ ರಕ್ಕಸ ತಪಸ್ಸಿನಿಂದ ಪರಶಿವನನ್ನು ಮೆಚ್ಚಿಸಿ, ಪರಶಿವನು ತನ್ನ ಹೊಟ್ಟೆಯಲ್ಲಿ ನೆಲಸಬೇಕೆಂದು ವರ ಪಡೆದ. ಅದರಂತೆ ಶಿವನು ಗಂಗೆ-ಗೌರಿಯನ್ನು ತೊರೆದು ರಕ್ಕಸನ ಹೊಟ್ಟೆಯನ್ನು ಸೇರಿದ. ಶಿವನಿಲ್ಲದೆ ಕೈಲಾಸ ಕಳೆಗುಂದಿತು. ದುಃಖಿತರಾದ ಶಿವಗಣಗಳು ವಿಷ್ಣುವಿನ ಮೊರೆಹೊಕ್ಕರು. ವಿಷ್ಣುವಿನ ರಹಸ್ಯ ನಿರ್ದೇಶನದಂತೆ ಪಂಚರಾತ್ರಿಗಳು (ಕಾಮ, ಕ್ರೋಧ, ಮೋಹ, ಮದ, ಮಾತ್ಸರ್‍ಯಗಳು ಪಂಚರಾತ್ರಿಯ ಪ್ರತೀಕ) ಸೇರುವೆಂದು ಶಿವನು ರಕ್ಕಸನ ಹೊಟ್ಟೆಯಿಂದ ಹೊರಬಂದ. ಬಂಧನದಲ್ಲಿದ್ದ ಶಿವನು ಕೋಪದಿಂದ ಕಣ್ಣು ತೆರೆದರೆ ಪ್ರಳಯವೇ ಉಂಟಾಗುವುದೆಂದು ಅರಿತ ವಿಷ್ಣು ಡೊಳ್ಳಾಸುರನ ಹೊಟ್ಟೆಯನ್ನೇ ವಾದ್ಯವಿಶೇಷವಾಗಿ ಮಾಡಿಕೊಂಡು, ಅವನ ಮೂಳೆಗಳಿಂದ ಡೊಳ್ಳು ಬಾರಿಸಲು ಪ್ರಾರಂಭಿಸಿದ. ಶಿವನು ಆ ವಾದ್ಯದ ದನಿಗೆ ಮಾರುಹೋಗಿ ಲಾಸ್ಯದಲ್ಲಿ ತೊಡಗಿದ. ಈ ವೇಳೆಗೆ ತೊಡೆಯ ಗೌರಿ, ಜಡೆಯ ಗಂಗೆಯರು ಬಂದು ಶಿವನನ್ನು ಸೇರಿದರು. ಶಿವ ಸುಪ್ರೀತನಾದ! ಮುಂದೆ ಡೊಳ್ಳು ಶಿವಸ್ತುತಿಯ ವಿಶೇಷ ವಾದ್ಯವಾಯಿತು!


ತಲೆತಲಾಂತರಗಳಿಂದ ದೈವೀ ಆರಾಧನೆಯ ಸಾಧನವಾಗಿ ಬೆಳೆದುಬಂದ ಈ ಕಲೆ ಇತ್ತೀಚೆಗೆ ಮನರಂಜನೆಯ ಮಾಧ್ಯಮವಾಗಿ ಮನ್ನಣೆಯನ್ನು ಗಳಿಸಿದೆ. ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಸಮಾರಂಭಗಳಲ್ಲಿ ಡೊಳ್ಳು ಕುಣಿತ ಒಂದು ಮುಖ್ಯ ಪ್ರದರ್ಶನವಾಗಿದೆ.
ಡೊಳ್ಳು ಕುಣಿತವನ್ನು ಚೆನ್ನಾಗಿ ಮೈಗೂಡಿಸಿಕೊಂಡು ಪರಿಣತಿಯನ್ನು ಸಾಧಿಸಿರುವವರೆಂದರೆ ಕುರುಬ ಜನಾಂಗ. ಬಿಡುವು ದೊರೆತಾಗಲೆಲ್ಲ ಅದರ ಅಭ್ಯಾಸ-ಅಭಿವ್ಯಕ್ತಿಗಳಲ್ಲಿ ಆಸಕ್ತರಾಗಿರುವ ಕಲಾವಿದರಿಗೆ ವಯಸ್ಸಿನ ಕಟ್ಟುಕಟ್ಟಳೆಯಿಲ್ಲ. ಆದರೆ ಡೊಳ್ಳು ಹೊತ್ತು ಕುಣಿಯುವ ಕಲಾವಿದರಿಗೆ ದೈಹಿಕ ಶಕ್ತಿ ಇರಬೇಕಾಗುತ್ತದೆ. ಈಚೀಚೆಗೆ ಕಲಾವಿದರ ವೇಷಭೂಷಣಗಳು ಆಕರ್ಷಕ ರೀತಿಯಲ್ಲಿ ಮಾರ್ಪಾಟಾಗಿ ಕಲೆಗೆ ಮೆರಗುಕೊಟ್ಟಿದೆ.
ಡೊಳ್ಳು-ಮರ ಮತ್ತು ಚರ್ಮದಿಂದ ಮಾಡಿದ ಒಂದು ದೊಡ್ಡ ಆಕಾರದ ವಾದ್ಯ. ತಾಳೆಯ ಅಥವಾ ಹಗುರವಾದ ಮರದಿಂದ (ಸಾಮಾನ್ಯವಾಗಿ ಬೈನ್ ಮರ, ಸುರಹೊನ್ನೆ ಮರ) ಎರಡೂವರೆಯಿಂದ ಮೂರುವರೆ ಅಡಿ ಉದ್ದ ಹಾಗೂ ಎರಡು ಅಡಿ ವ್ಯಾಸವಿರುವ ಪಿಪಾಯಿ ಆಕಾರದ ಡೊಳ್ಳಿನ ಮೈಯನ್ನು ಸಿದ್ಧಪಡಿಸುತ್ತಾರೆ. ಇವರ ಎಡಭಾಗಕ್ಕೆ ಆಡಿನ ಚರ್ಮವನ್ನೂ ಬಲಭಾಗಕ್ಕೆ ಕುರಿಯ ಚರ್ಮವನ್ನೂ ಬಿಗಿಯುತ್ತಾರೆ. ಬಳಿಕ ಡೊಳ್ಳನ್ನು ಸೊಂಟಕ್ಕೆ ಬಿಗಿದುಕೊಳ್ಳಲು ಸರಿಯಾಗಿ ಹಗ್ಗವನ್ನು ಜೋಡಿಸುತ್ತಾರೆ. ಡೊಳ್ಳನ್ನು ಬಡಿಯಲು ಬಳಸುವುದು ಸುಮಾರು ಒಂದೂವರೆ ಅಡಿ ಉದ್ದದ ಬಿದಿರ ಕೋಲು. ಇದಕ್ಕೆ `ಗುಣಿ’ ಎಂದು ಕರೆಯುತ್ತಾರೆ. ಇವುಗಳಲ್ಲಿ ಬೀರೇದೇವರ ಡೊಳ್ಳು ವಿಶೇಷವಾಗಿ ಹಾಗೂ ದೊಡ್ಡದಾಗಿ ತಯಾರಿಸಲ್ಪಟ್ಟಿರುತ್ತದೆ. ದೇವರ ಆರಾಧನೆಯ ಸಮಯದಲ್ಲಿ (ಪೂಜಾ ಸಮಯ) ಮಾತ್ರ ಈ ಡೊಳ್ಳನ್ನು ಬಳಸುತ್ತಾರೆ.

ಡೊಳ್ಳು ಕುಣಿತದ ತಂಡದಲ್ಲಿ ಸಾಮಾನ್ಯವಾಗಿ ನಾಲ್ಕು ಜನರಿಂದ ಹಿಡಿದು ಹತ್ತು ಹನ್ನೆರಡು ಜನರಿರುತ್ತಾರೆ. ಹಿನ್ನೆಲೆಯಲ್ಲಿ ತಾಳ. ತಪ್ಪಡಿ, ನಿಪ್ಪರೆ (ಕಹಳೆ) ಜಾಗಟೆ, ಕೊಳಲುಗಳನ್ನು ಬಳಸುತ್ತಾರೆ. ಪದ ಹೇಳಿಕೊಂಡು ಡೊಳ್ಳನ್ನು ಬಾರಿಸುವುದೂ ರೂಢಿಯಲ್ಲಿದೆ. ಪದಕ್ಕಾಗಿಯೇ ಪ್ರತ್ಯೇಕವಾದ ಕೈಪಟ್ಟು (ಡುಮಕಿ) ಬಳಸುವ ಕ್ರಮವಿದೆ. ಇದಕ್ಕೆ “ಕೈಪಟ್ಟು ಹಾಡು” ಎಂದು ಕರೆಯುತ್ತಾರೆ. ಡೊಳ್ಳು ಬಾರಿಸುವಾಗ ಬಲಗೈಯಲ್ಲಿ ಮಾತ್ರ ಕೋಲಿರುತ್ತದೆ. ಒಮ್ಮೆ ಕೋಲಿನಿಂದ ಬಾರಿಸಿದರೆ ಎಡಗೈಯಲ್ಲಿ ಒಂದು `ಪೆಟ್ಟು’ ಕೊಡಬೇಕು. ಬಲಗೈ ಗುಮಿಯ ಬಡಿತ `ಬ್ರಹ್ಮದೊಡ್’ ಎಂದು ಸಪ್ಪಳ ಮಾಡಿದರೆ ಎಡಗೈ ಪೆಟ್ಟು `ಡೌಂವ’ ಎಂದು ನಾದ ಎಬ್ಬಿಸುತ್ತದೆ. ಹೀಗೆ ಅದು `ಬ್ರಹ್ಮದೊಡ್ಡಾಂವ’ ಎಂದು ಉಗ್ಗಡಿಸುತ್ತದಂತೆ!


ವೃತ್ತಾಕಾರವಾಗಿ ನಿಂತು ಸಜ್ಜುಗೊಂಡ ತಂಡದ ಸದಸ್ಯರು ನಿಧಾನವಾಗಿ ಡೊಳ್ಳು ಬಾರಿಸಲು ತೊಡಗುವುದರೊಂದಿಗೆ ಸುತ್ತಲು ಪ್ರಾರಂಭಿಸುತ್ತಾರೆ. ಹಿಮ್ಮೇಳವೂ ಜೊತೆಗೂಡಿರುತ್ತದೆ. ಕ್ರಮೇಣ ಗತ್ತು ಏರುತ್ತಾ ಹೋದಂತೆ ಡೊಳ್ಳನ್ನು ಶಕ್ತಿ ಮೀರಿ (ಒಮ್ಮೊಮ್ಮೆ ಕೋಲು ಮುರಿಯುವಂತೆ!) ಕೇಳುವವರ ಕಿವಿ ಗಡಚಿಕ್ಕುವಂತೆ ಬಾರಿಸುತ್ತಾರೆ. ಒಂದು ಗತ್ತು ಶಿಖರವನ್ನು ಮುಟ್ಟಿದ ಬಳಿಕ ನಿಲ್ಲಿಸಿದಂತಾಗಿ, ಮತ್ತೆ ನಿಧಾನವಾಗಿ ಬೇರೊಂದು ಪ್ರಕಾರದ ಬಡಿತ ಆರಂಭವಾಗುತ್ತದೆ. ಗತ್ತುಗಳೆಲ್ಲವೂ ಮುಗಿದ ಮೇಲೆ ಬಾರಿಸುವಿಕೆಯನ್ನು ನಿಲ್ಲಿಸಿ ಪದಕ್ಕೆ ಪ್ರಾರಂಭಿಸುತ್ತಾರೆ.

`ದಿಳ್ಳಿಗೆ ಹೋದರೂ ಡೊಳ್ಳಿಗೆ ಒಂದೇ ಪೆಟ್ಟು ಎಂಬ ಗಾದೆಯಿದೆ. ಬಾರಿಸುವ ವಿಧಾನ ಎಲ್ಲ ಗತ್ತುಗಳಲ್ಲಿಯೂ ಒಂದೇ ರೀತಿ ಇರುತ್ತದೆ. ಗುಣಿ ಲೆಕ್ಕದಲ್ಲಿ ಬಾರಿಸುವಿಕೆ ಹೊಡೆತಗಳ ಸಂಖ್ಯೆಯನ್ನು ಸೂಚಿಒeoಓ;ತ್ತದೆ. ಒಂದು ಗುಣಿಗೆ `ಮೊದಲ ಹೆಜ್ಜೆ’ ಎಂದು ಕರೆಯುತ್ತಾರೆ. ಅಂದರೆ ಒಂದು ಕೋಲು (ಬಲ) ಪಟ್ಟಿ, ಬಳಿಕ ಒಂದು ಕೈ (ಎಡ) ಪಟ್ಟಿ, ಇದೇ ಕ್ರಮೇಣ ಹೆಚ್ಟುತ್ತಾ ಹೋಗುತ್ತದೆ. ಮೂರು ಗುಣಿ ಎಂದರೆ ಮೂರು ಕೋಲು ಪಟ್ಟಿನ ಬಳಿಕ ಒಂದು ಕೈಪಟ್ಟಿ ಬಾರಿಸುವುದು. ಬಹುತೇಕವಾಗಿ ಗುಣಿಯಲ್ಲಿ ಬೆಸ ಸಂಖ್ಯೆಯಲ್ಲಿರುವುದು ಕಂಡುಬರುತ್ತದೆ. ಆದರೆ ಕಲಾವಿದರು ಏಳು ಗುಣಿಯ ಪೆಟ್ಟನ್ನು ಮಾತ್ರ ಬಾರಿಸುವುದಿಲ್ಲ. ಕಾರಣ, ಅವರ ದೃಷ್ಟಿಯಲ್ಲಿ ಏಳು ಅಶುಭ ಸಂಖ್ಯೆ!
ಹೆಚ್ಚು ಗುಣಿಯನ್ನು ಬಾರಿಸುವಾಗ ಜೋಡಿ ಕಲಾವಿದರು ಎದುರು ಬದುರು ನಿಂತು ಬಲಗಾಲು ಮುಂದಿಟ್ಟು ಬಾಗಿ ಪೈಪೋಟಿಯಿಂದ ಗತ್ತು ಬಾರಿಸುತ್ತಾರೆ. ಆಗ ಕಲಾವಿದರ ಭಂಗಿ, ಬಾರಿಸುವ ಗತ್ತುಗಾರಿಕೆ ನೋಡಲು ರಂಜನೀಯ. ಕೋಲಿನ ಪಟ್ಟಿ ಏರಿಕೆಯಲ್ಲಿಯೇ ಮುಂದುವರೆದು ಮುಕ್ತಾಯಕ್ಕೆ ಬರುತ್ತದೆ. ಗುಲ್ಬರ್ಗ ಜಿಲ್ಲೆಯಲ್ಲಿ ಹೆಜ್ಜೆಗೆ `ಪಾವುದಿ’ ಎಂದು ಕರೆಯುತ್ತಾರೆ. ಡೊಳ್ಳು ಕುಣಿತದಲ್ಲಿ ನಾನಾ ರೀತಿಗಳಿವೆ. ಪ್ರಮುಖವಾದುವು ಕೆಳಗಿನಂತಿವೆ:

ಕುಳಿತು ಬಾರಿಸುವುದು: (ಇದನ್ನು ಗುಲ್ಬರ್ಗಾ ಜಿಲ್ಲೆಯಲ್ಲಿ `ಕೂತು ಪೌಲಿ’ ಎಂದು ಕರೆಯುತ್ತಾರೆ). ಕುಕ್ಕರಗಾಲಿನಲ್ಲಿ ಕುಳಿತು ಡೊಳ್ಳು ಬಾರಿಸುತ್ತಾ ಕುಪ್ಪಳಿಸುವುದು. ಇದು ನಿಧಾನವಾಗಿ ನಡೆಯುತ್ತದೆ.
ಲಾಗ ಹಾಕುವುದು: ಇದನ್ನು ತಂಡದ ಒಂದೆರೆಡು ಮಂದಿ ಮಾತ್ರ ಅಭ್ಯಾಸ ಮಾಡಿರುತ್ತಾರೆ. ಡೊಳ್ಳು ಬಾರಿಸುತ್ತಿರುವಾಗಲೇ ಗತ್ತಿಗೆ ತಕ್ಕಂತೆ ಲಾಗ ಹಾಕುವುದು, ಮತ್ತೆ ನೇರ ಸ್ಥಿತಿಗೆ ಬಂದು ಗತ್ತು ತಪ್ಪದಂತೆ ಪಟ್ಟು ಹಾಕುವುದು.

ಹಾರಿ ಬಾರಿಸುವುದು: ಡೊಳ್ಳು ಬಾರಿಸುತ್ತಲೇ ಎರಡು ಮೂರು ಅಡಿ ಮೇಲೆ ನೆಗೆಯುವುದು.
ಮಂಡಿ ಬಡಿತ: ತ್ವರಿತ ಗತಿಯ ಬಡಿತದ ಸಂದರ್ಭದಲ್ಲಿ ಜೋಡಿ ಕಲಾವಿದರು ಎಡಗಾಲು ಮಂಡಿಯನ್ನು ನೆಲಕ್ಕೆ ಒತ್ತಿ ಬಲಗಾಲನ್ನು ಊರಿಕೊಂಡು ಡೊಳ್ಳು ಬಾರಿಸುವುದು.

ಮರಗಾಲು ಬಡಿತ: ಸುಮಾರು ಒಂದರಿಂದ ಎರಡು ಅಡಿ ಎತ್ತರದ ಮರಗಾಲನ್ನು ಕಟ್ಟಿಕೊಂಡು ಡೊಳ್ಳು ಬಾರಿಸುವುದು.
ಗಾಡಿ ಚಕ್ರದ ಬಡಿತ: ಕಬ್ಬಿಣದ ಅಚ್ಚಿನ ಮೇಲೆ ಎತ್ತಿನ ಗಾಡಿಯ ಮೇಲೆ ತುಂಬಿದ ಕೊಡವನ್ನಿಟ್ಟುಕೊಂಡು ಡೊಳ್ಳು ಬಾರಿಸುವುದು. ಇದೊಂದು ವಿಶೇಷ ಪ್ರಕಾರವೆನಿಸುತ್ತದೆ. ಈ ರೀತಿ ಬಾರಿಸುವವರು ವಿರಳ. ಬಾಯಲ್ಲಿ ತುಂಬಿದ ಕೊಡ ಕಚ್ಚಿಕೊಂಡು ನೀರು ಚೆಲ್ಲದಂತೆ ಡೊಳ್ಳು ಬಾರಿಸುತ್ತ ಕುಣಿಯುವುದು.
ಅಂಗಾತ ಮಲಗಿ ಡೊಳ್ಳನ್ನು ಬಾರಿಸುತ್ತಾ ಹಾಗೆಯೇ ತೆವಳುತ್ತ ಸುತ್ತುವುದು. ಒಂದು ದೊಡ್ಡ ಡೊಳ್ಳಿನ ಮೇಲೆ ಮತ್ತೊಂದು ಚಿಕ್ಕ ಡೊಳ್ಳನ್ನು ಕಟ್ಟಿ ಎರಡು ಡೊಳ್ಳುಗಳನ್ನು ಒಂದಾದ ಮೇಲೊಂದನ್ನು ಬಾರಿಸುವುದು.
ಕಲಾವಿದನ ಹಿಂಭಾಗ ಹಾಗೂ ಮುಂಭಾಗಗಳಿಗೆ ಒಂದೊಂದು ಡೊಳ್ಳನ್ನು ಕಟ್ಟಿ, ಆ ಡೊಳ್ಳಿನ ಮೇಲೆ ಚಿಕ್ಕ ಬಾಲಕರನ್ನು ಕೂರಿಸಿಕೊಂಡು ಎರಡು ಡೊಳ್ಳುಗಳನ್ನು ಬಾರಿಸುವುದು.
ಅಲ್ಲದೆ ಒಂದ್ಹೆಜ್ಜೆ ಕುಣಿತ, ಎರಡ್ಡೆಜ್ಜೆ ಕುಣಿತ, ಮಂಡಲ ಕುಣಿತ, ಜಗ್ಗಿನ ಕೈಯಿ (ಜೋರು ಬಡಿಯುವುದು), ಜೋಡು ಪೌಲಿ ಮುಂತಾದ ಗತ್ತುಗಳಿವೆ. ಜೋಡುಪೌಲಿ (ಗುಲ್ಬರ್ಗದಲ್ಲಿರುವ ಬಳಕೆ) ಎಂದರೆ, ಎದುರು ಬದುರು ಹಿಂಭಾಗದಲ್ಲಿ ನೆಲದ ಮೇಲಿಟ್ಟಿರುವ ಕೊಬ್ಬರಿಯನ್ನೋ ಅಥವಾ ರೂಪಾಯಿ ನೋಟನ್ನೋ ಬಾಯಲ್ಲಿ ತೆಗೆಯುವುದು.

ಡೊಳ್ಳು ಕುಣಿತದಲ್ಲಿ ಮತ್ತೊಂದು ವಿಶೇಷ ಪ್ರಕಾರವೆಂದರೆ `ಲವಳ’ ಹಾಕುವುದು. ಕೆಲವು ಕಡೆ ಇದನ್ನು `ಜಡೆ ಹೆಣೆಯುವುದು’ ಎಂದು ಕರೆಯುತ್ತಾರೆ. ವೃತ್ತಾಕಾರದ ಸಣ್ಣ ಹಲಗೆಯ ಮೇಲುಭಾಗದಲ್ಲಿ ಒಂದು ಕಬ್ಬಿಣದ ಕೊಂಡಿಯನ್ನು ಲಗತ್ತಿಸಿ ಅದರ ಸುತ್ತಲೂ ಎಂಟರಿಂದ ಹತ್ತು ರಂಧ್ರಗಳನ್ನು ಮಾಡಿ ಅದಕ್ಕೆ ನೂಲಿನ ಸಣ್ಣ ಹಗ್ಗಗಳನ್ನು ಸೇರಿಸಿ ಇಳಿಬಿಟ್ಟಿರುತ್ತಾರೆ. ಮಧ್ಯಭಾಗದಲ್ಲಿ ದಪ್ಪನಾದ ಒಂದು `ಮಿಣಿ’ ಯನ್ನು (ಹಗ್ಗ) ಇಳಿಬಿಟ್ಟಿರುತ್ತಾರೆ. ಎಂಟು ಹತ್ತು ಅಡಿ ಎತ್ತರದಲ್ಲಿ ಕಟ್ಟಿರುವ ಬಿದಿರು ಬೊಂಬಿಗೆ ಈ ಕೊಂಡಿಯನ್ನು ಹುರಿಯಿಂದ ಭದ್ರಪಡಿಸಿರುತ್ತಾರೆ. ಡೊಳ್ಳು ಬಡಿಯುವವರು ಒಬ್ಬೊಬ್ಬರೂ ತಮ್ಮ ಎಡಗೈಯಲ್ಲಿ ಹಗ್ಗವನ್ನು ಹಿಡಿದು, ಬಲಗೈಯಲ್ಲಿ ಡೊಳ್ಳನ್ನು ಬಾರಿಸುತ್ತಾ ಗತ್ತಿಗನುಸಾರವಾಗಿ ಕುಣಿಯುತ್ತಾರೆ. ಎದುರು ಬದುರು, ಅಕ್ಕಪಕ್ಕ, ವೃತ್ತಾಕಾರವಾಗಿ, ಹೀಗೆ ಒಂದು ಕ್ರಮದಲ್ಲಿ ಸುತ್ತುತ್ತಾರೆ. ಮಧ್ಯದಲ್ಲಿ ನಾಯಕ ನಿಂತು ಪದ ಹಾಡುತ್ತಾನೆ. ಕಲಾವಿದರು ಕ್ರಮವಾಗಿ ಸುತ್ತಿದಾಗ ಹಗ್ಗಗಳು ಜಡೆಯಂತೆ ಹೆಣೆದುಕೊಳ್ಳುತ್ತವೆ. ಹಾಗೆಯೇ ಕುಣಿತವನ್ನು ಹಿಮ್ಮುಖ ಮಾಡಿದರೆ ಆ ಜಡೆ ಬಿಚ್ಚಿಕೊಳ್ಳುತ್ತದೆ.

ಕುರುಬರಿಗೆ ಡೊಳ್ಳು ಕುಣಿತ, `ದೇವರ’ ಭಜನೆ ಇದ್ದಂತೆ ಎಂದು ಹೇಳುತ್ತಾರೆ. ಈ ಕಲೆಯಲ್ಲಿ ಕುಣಿತವಷ್ಟೇ ಅಲ್ಲ; ಒಳ್ಳೆಯ ಸಾಹಿತ್ಯವೂ ಇದೆ. ತಂಡದ ನಾಯಕ ತಾಳ ಬಡಿಯುತ್ತಾ ಪದ ಹೇಳಿಕೊಟ್ಟರೆ, ಉಳಿದವರು ಧ್ವನಿ ಗೂಡಿಸುತ್ತಾರೆ. ಡೊಳ್ಳಿನ ಹಾಡುಗಳು ಎಂದರೆ `ಕುರುಬರ ಹಾಡುಗಳು’ ಎಂದೇ ಕರೆಯಬಹುದು. ಬೀರೇ ದೇವರ ವರ್ಣನೆ ಮತ್ತು ಆತನ ಭಕ್ತರ ಮಹಿಮೆಯನ್ನು ಕುರಿತ ಹಾಡುಗಳೇ ಹೆಚ್ಚು. ಬಹುತರವಾಗಿ ಡೊಳ್ಳಿನ ಹಾಡುಗಳು ರಗಳೆಯೋಪಾದಿಯಲ್ಲಿ ರಚಿತವಾಗಿವೆ.

ಹಾಡುಗಳಲ್ಲಿ ಹಾಲುಮತ ಪುರಾಣ, ಅನಸೂಯಾ ಪದ, ಮಾರ್ಕಾಂಡೇಯ ಚರಿತ್ರೆ, ನಿಂಬೆಕ್ಕನ ಪದ, ಪಾಂಡವರ ಪದ, ಡೊಳ್ಳು ಮರದ, ಗಜಾಸೂರ, ಪದ್ಮಾದೇವಿ, ತಿರುನೀಲಕಂಠ, ಬಸವಣ್ಣನವರ ಚರಿತ್ರೆ, ಭೀಮಾರ್ಜುನರ ಗರ್ವಭಂಗ, ಬೀರಲಿಂಗೇಶ್ವರನ ಪದ, ಕರಿಯಪ್ಪನ ಪದ, ಜಂಗಮರ ಪದ, ಸತ್ಯವಾನ ಸಾವಿತ್ರಿ, ಭಕ್ತ ಕುಂಬಾರ, ಸೀತಾ ಸ್ವಯಂವರ, ಹರಳಯ್ಯನ ಪದ, ಮೈಲಾರಲಿಂಗೇಶ್ವರ, ಕುಂಬಾರ ಗುಂಡಯ್ಯ, ರೇವಣಸಿದ್ಧೇಶ್ವರ ಇತ್ಯಾದಿ -ಹಲವಾರು ಪ್ರಸಂಗಗಳು ಸೇರಿವೆ.

“ಸ್ವಾಮಿ ನಮಃ, ದೇವಾರು ಬಂದಾರು ಬನ್ನಿರೋ, ದೇವ ನಮಃ, ದೇವಾರು ಬಂದಾವು ಬನ್ನಿರೋ, ಶಿವ ಶಿವ ನಮಃ, ದೇವಾರು ಬಂದಾವು ಬನ್ನಿರೋ” ಹೀಗೆ ಸಾಮಾನ್ಯರಾಗಿ ಪ್ರತಿ ಪದ್ಯದ ಪ್ರಾರಂಭದಲ್ಲಿ ಬರುವ ಗಣಸ್ತುತಿಯ ನಂತರ ಕಥಾಭಾಗ ಪ್ರಾರಂಭವಾಗುತ್ತದೆ. ಡೊಳ್ಳಿನ ವಿವಿಧ ಪ್ರಕಾರಗಳನ್ನು ನೋಡಿದಾಗ ಇದು ಶಕ್ತಿ-ಯುಕ್ತಿ ಎರಡನ್ನೂ ಮೈಗೂಡಿಸಿಕೊಂಡು ಬೆಳೆದು ಬಂದಿರುವ ವಿಶೇಷ ಕಲೆ ಎಂಬುದು ಸ್ಪಷ್ಟವಾಗುತ್ತದೆ. ದೊಡ್ಡ ಗಾತ್ರದ ಡೊಳ್ಳುಗಳನ್ನು ಸೊಂಟಕ್ಕೆ ಬಿಗಿದುನಿಂತ ಗುಂಪಿನ ಪ್ರಥಮ ದರ್ಶನದಲ್ಲೇ ಪ್ರೇಕ್ಷಕರಿಗೆ ಕಲೆಯ ಭವ್ಯತೆಯ ಕಲ್ಪನೆಯುಂಟಾಗುತ್ತದೆ. ಕ್ರಮ ಕ್ರಮವಾದ ಪಟ್ಟುಗಳೊಂದಿಗೆ ಬಡಿತ ಪರಾಕಾಷ್ಠೆಯನ್ನು ಮುಟ್ಟಿದಾಗ ಡೊಳ್ಳಿನ ನಾದ ಮುಗಿಲೇರುತ್ತದೆ!

ಉರಿಮಾರಮ್ಮ:

ಗ್ರಾಮೀಣ ಶಕ್ತಿ ದೇವತೆಗಳಲ್ಲಿ ಮಾರಮ್ಮ ಅತ್ಯಂತ ಪ್ರಭಾವಶಾಲಿನಿ. ಉರಿ ಮಾರಮ್ಮ ಎಂದರಂತೂ ಮತ್ತಷ್ಟು ಉಗ್ರ. ಆದರೆ `ಹೊತ್ತಾಡುವ ಉರಿ ಮಾರಮ್ಮ’ ಊರಿಗೆ ಬಂದರೆ ಕಷ್ಟಗಳು ದೂರವಾಗುವುವೆಂದು ಹಳ್ಳಿಗರ ನಂಬಿಕೆ. ಈ ಮಾರಮ್ಮನಿಗೆ `ಊರು ಮಾರಮ್ಮ’, `ಗಾಳಿ ಮಾರಮ್ಮ’, `ಹೊತ್ತಾಡೋ ಮಾರಮ್ಮ’ ಎಂಬ ಹೆಸರುಗಳೂ ಇವೆ. ಉತ್ತರ ಕರ್ನಾಟಕದಲ್ಲಿ `ದುರಗಿ ಮುರಗಿ’, `ಮುರಗವ್ವ’ ಎಂದೇ ಪರಿಚಿತ.
ಉರಿ ಮಾರಮ್ಮನನ್ನು ಹೊತ್ತು ಊರಾಡುವ ಒಂದು ಅರೆ ಅಲೆಮಾರಿ ಪೂಜಾರಿ ವರ್ಗವೇ ಇದೆ. ಇದು ಅವರ ಹೊಟ್ಟೆಪಾಡಿನ ಉದ್ಯೋಗವೂ ಹೌದು. ಮಾರಿ ಹಬ್ಬದ ಸುಮಾರಿನಲ್ಲಿ ಉರಿ ಮಾರಮ್ಮನ ಸಂಚಾರ ಹೆಚ್ಚು. ಉರುಮೆ ಅಥವಾ ಡೋಲಿನ `ಡ್ರಂವ್, ಡ್ರಂವ್, ಡ್ರಂವ್, ಡ್ರಂವ್’ ಸದ್ದು ಕೇಳಿತೆಂದರೆ ಊರಿಗೆ ಮಾರಮ್ಮನ ಪ್ರವೇಶವಾಯಿತೆಂದು ಹಳ್ಳಿಗರಿಗೆ ಅರ್ಥವಾಗುತ್ತದೆ. ಹುಡುಗರಂತು ಮೊದಲು ಓಡಿ ಬಂದು ಸೇರಿಕೊಳ್ಳುತ್ತಾರೆ.
ಊರಿನ ಮಧ್ಯೆ ಆಯಕಟ್ಟಿನ ಸ್ಥಳವೋ, ನಾಲ್ಕು ದಾರಿ ಸೇರುವ ಬಯಲು ಚೌಕವೋ, ಊರ ದೇವತೆಯ ಗುಡಿಯ ಮುಂಭಾಗವೋ ಮಾರಿಯ ಕುಣಿತದ ಪ್ರದರ್ಶನಕ್ಕೆ ವೇದಿಕೆ. ಮಾರಮ್ಮನ ಪೂಜಾರಿ ಪ್ರಧಾನ ಕಲಾವಿದ. ಅವನಿಗೆ ಪೋಷಕವಾಗಿ ಮತ್ತೊಬ್ಬರಿರುತ್ತಾರೆ. ಸಾಮಾನ್ಯವಾಗಿ ಪೂಜಾರಿಯ ಹೆಂಡತಿಯೇ ಈ ಪೋಷಕ ಪಾತ್ರ ವಹಿಸುವುದು ಹೆಚ್ಚು.

ಬಿದಿರು ಅಥವಾ ಮರದಿಂದ ಮಾಡಿದ ಮೂರು-ನಾಲ್ಕು ಅಡಿ ಎತ್ತರದ ಪೆಟ್ಟಿಗೆಯಲ್ಲಿ ಮಾರಮ್ಮನ ಪ್ರತಿಷ್ಠಾಪನೆ ನಡೆದಿರುತ್ತದೆ. ಮೂರು ಕಡೆ ಮುಚ್ಚಿರುವ ಆ ಪೆಟ್ಟಿಗೆಗೆ ಮುಂಭಾಗದಲ್ಲಿ ಒಂದು ತೆರೆ ಇರುತ್ತದೆ. ಆ ತೆರೆ ಜರುಗಿಸಿದಾಗಲೇ ಜನರಿಗೆ ಮಾರಮ್ಮನ ದರ್ಶನ. ಮಾರಮ್ಮನ ಈ ಸಂಚಾರೀ ದೇವಾಲಯವನ್ನು ಪೂಜಾರಿ ಅಥವಾ ಅವನ ಹೆಂಡತಿಯ ತಲೆಯ ಮೇಲೆ ಹೊರುತ್ತಾರೆ. ತನ್ನ ಬದುಕು ಬೇಡಿ ತಿನ್ನುವುದಾದರೂ ಪೂಜಾರಿ ತಾಯಿ ಮಾರಮ್ಮನನ್ನು ಚೆನ್ನಾಗಿ ಅಲಂಕಾರ ಮಾಡಿರುತ್ತಾನೆ. ಆಕೆಯ ಕೈತುಂಬ ಬಳೆ, ಹಣೆ ತುಂಬ ಕುಂಕುಮ, ಸೀರೆ ಕುಪ್ಪಸ, ಕೊರಳಲ್ಲಿ ಮಣಿ ಮತ್ತು ಲೋಹದ ಸರಗಳು, ಕವಿಗೆ ಓಲೆ, ಮೂಗಿಗೆ ಮೂಗುತಿ ಎಲ್ಲ ಅದ್ದೂರಿ ಶೃಂಗಾರವೇ. (ಇದರಲ್ಲಿ ಯಾವುದೂ ಬಂಗಾರದ ಒಡವೆಯಲ್ಲ!) ಅಕ್ಕಪಕ್ಕವನ್ನು ಬಣ್ಣಬಣ್ಣದ ಬಟ್ಟೆಗಳಿಂದ ಅಲಂಕರಿಸಿರುತ್ತಾನೆ.

ಹೆಂಗಸು ತಲೆಯ ಮೇಲೆ ಮಾರಮ್ಮನ ಪೆಟ್ಟಿಗೆಯನ್ನು ಹೊತ್ತು ಹೆಗಲಿಗೆ ತಗುಲಿ ಹಾಕಿದ ಡೋಲು ಬಾರಿಸುತ್ತಿದ್ದಂತೆ ಪೂಜಾರಿ ಆ ಬಡಿತಕ್ಕೆ ತಕ್ಕಂತೆ ಆಕೆಯ ಸುತ್ತ ಸುತ್ತುತ್ತಾ ಕೇಕೆ ಹಾಕುತ್ತಾ “ಉರಿ ಮಾರಮ್ಮ ಊರಿಗೆ ಬಂದವಳೆ, ಕೇರಿಗೆ ಬಂದವಳೆ, ಎಂದು ಹಾಡಿಕೊಂಡು ಕುಣಿಯುತ್ತಾನೆ. ಹೀಗೆ ಕುಣಿಯುವಾಗ ಆತ ಕೈಯಲ್ಲಿ ಸುಮಾರು ಐದಾರು ಅಡಿ ಉದ್ದದ ಚಾವಟಿಯೊಂದನ್ನು ಹಿಡಿದು ಆವೇಶದಿಂದ ಬೀಸಿ ಮೈಗೆ ಬಾರಿಸಿಕೊಳ್ಳುತ್ತಿರುತ್ತಾನೆ. ಮೊಣಕಾಲಿನ ಏರುಗಟ್ಟಿದ ಪಂಚೆ, ಅದರ ಮೇಲೆ ಅಳೆಲಂಗದಂತಹ ಸುತ್ತುಡುಪು, ಹರಡಿ ಇಳಿಬಿದ್ದ ಉದ್ದ ಕೂದಲು, ಕಾಲಿಗೆ ಗೆಜ್ಜೆ ಅಥವಾ ಕಡಗ, ಹಣೆಯಲ್ಲಿ ದಟ್ಟವಾಗಿ ಲೇಪಿಸಿದ ಗಂಧ, ಮೈಮೇಲೆ ಅಲ್ಲಲ್ಲಿ ಬಳಿದುಕೊಂಡ ಅರಿಸಿನ ಕುಂಕುಮ, ಎಡಗೈ ಗಂಟೆ ಇವುಗಳಿಂದ ಮೊg೩;ದಲೇ ಭಯಂಕರವಾಗಿ ಕಾಣುವ ಪೂಜಾರಿ ಚಾವಟಿ ಬಾರಿಸಿಕೊಂಡಾಗ ಮೈಮೇಲೆ ಮೂಡುವ ಬಾರುಗಳಿಂದ ಮತ್ತಷ್ಟು ಭಯಂಕರವಾಗಿ ಕಾಣಿಸುತ್ತಾನೆ. ಅವನ ಮೇ ಚಾಟಿ ಏಟಿನಿಂದ ಉರಿದರೆ `ಉರಿ ಮಾರಮ್ಮನಿಗೆ ಶಾಂತಿ; ಊರಿಗೆ ಶಾಂತಿ!; ಚಾವಟಿಯನ್ನು ಬೀಸುವುದೂ ಒಂದು ಚಾಕಚಕ್ಯತೆ. ಕೈ ಚಾಚಿ ಚಾವಟಿ ಬೀಸಿ ಬರ ಸೆಳೆದನೆಂದರೆ `ಚಟಾರ್’ ಎಂದು ಸದ್ದು ಬರುತ್ತದೆ. ಆಗ ಪ್ರೇಕ್ಷಕರಲ್ಲಿ `ಭಯದ ಭಾವ’ ಮೂಡುತ್ತದೆ.
ಚಾವಟಿ ಆಟದ ಮಧ್ಯೆ ತಲೆಯ ಮೇಲಿನ ಮಾರಮ್ಮನ ಪೆಟ್ಟಿಗೆಯನ್ನು ಕೆಳಗಿಳಿಸಿ ಜನರಿಗೆದುರಾಗಿದ್ದ ಮುಂಭಾಗದ ತೆರೆ ಜರುಗಿಸಿ ಪೂಜಾರಿ ಗಂಟೆ ಬಾರಿಸುತ್ತಾ ಪೂಜೆ ಮಾಡುತ್ತಾನೆ. ಹೀಗೆ ಪೂಜಿಸಿವಾಗ ಮಾರಮ್ಮನನ್ನು ಸ್ತುತಿಸುವ ಹಾಡುಗಳನ್ನು ಹೇಳುತ್ತಾನೆ. ತನ್ನ ದೇವತೆಗೆ ಹಿಂದಿನ ಊರುಗಳಲ್ಲಿ ಎಷ್ಟೋ ಜನ ಭಕ್ತರು ಒಡವೆ ವಸ್ತುಗಳನ್ನೂ ಸೀರೆ ಕುಪ್ಪಸಗಳನ್ನು ಕಾಣಿಕೆಯಾಗಿ ಒಪ್ಪಿಸಿದ್ದಾರೆಂದು ಪೂಜಾರಿ ಒಂದೊಂದೇ ವಸ್ತುವನ್ನು ತೋರಿಸುತ್ತಾ ರಾಗವಾಗಿ ಹಾಡುತ್ತಾನೆ.

ಅವನಾಡುವ ಪ್ರತಿ ಮಾತಿಗೊಮ್ಮೆ ಹೆಂಗಸು ಡೋಲು ಬಾರಿಸುತ್ತಾ `ತಾನ ತಂದಾನಾ’ ಎಂದು ಹೇಳುವುದು ಬಹಳ ಸ್ವಾರಸ್ಯಕರವಾಗಿರುತ್ತದೆ. ಒಮ್ಮೊಮ್ಮೆ ಮಾರಮ್ಮನ ಮೂರ್ತಿಗೆ ತೊಡಿಸಿದ ಆಭರಣಗಳನ್ನು ಡೋಲಿನ ಜೋರು ಬಡಿತದಿಂದ ಅದುರಿಸಿ ಉದುರಿಸಿ, ಅಮ್ಮನ `ಮಹಿಮೆ’ಯನ್ನು ತೋರಿಸಿ, ಪೂಜಾರಿ ಭಕ್ತರ ಮನವನ್ನು ಸೂರೆಗೊಳ್ಳುತ್ತಾನೆ.

ಅಮ್ಮನಿಗೆ ಕಾಣಿಕೆ ಕೊಟ್ಟರೆ ಊರಿನ ಅನಿಷ್ಟಗಳು ಪರಿಹಾರವಾಗುತ್ತವೆಂದು `ಆಡೂ ಮಕ್ಕಳಲ್ಲಿ, ತೂಗು ತೊಟ್ಟಿಲಲ್ಲಿ…’ ಇತ್ಯಾದಿ ಹರಕೆ ಮಾತು ಹೇಳುತ್ತಾ ಪೂಜಾರಿಯು ಪ್ರೇಕ್ಷಕರ ಬಳಿ ಡೋಲು ಬಾರಿಸುತ್ತಾ ಸುತ್ತುವಾಗ ಮಾರಮ್ಮನ ಪೆಟ್ಟಿಗೆಯ ಮುಂದೆ ಹಾಸಿದ ಬಟ್ಟೆಯ ಮೇಲೆ ಭಕ್ತಾದಿಗಳು ಕಾಣಿಕೆಯಾಗಿ ಕಾಳು ಕಡಿ ತಂದು ಹಾಕುತ್ತಾರೆ. ಹೀಗೆ ಕಾಳು ಕಡಿ ತಂದು ಹಾಕಿದ ಮೊರಕ್ಕೆ ಪೂಜಾರಿ ಅರಿಶಿನ ಕುಂಕುಮ ಹಾಕಿ ಕಳುಹಿಸುತ್ತಾನೆ. ಜನರಲ್ಲಿ ದೈವೀ ಕಲ್ಪನೆ ಮೂಡಿಸುವುದಾದರೂ `ಉರಿ ಮಾರಮ್ಮನ ಕುಣಿತ’ ಒಳ್ಳೆಯ ಮನರಂಜನೆಯ ಕಲೆ.

Leave a Reply