ಕರ್ನಾಟಕ ಚಿತ್ರಕಲಾ ಪರಂಪರೆ : ಭಾಗ ೧
– ಕೆ. ವಿ. ಸುಬ್ರಹ್ಮಣ್ಯಂ
ಕನ್ನಡ ದೃಶ್ಯಕಲೆಯ ಪ್ರಾರಂಭದ ಚಹರೆಗಳು
ವ್ಯಕ್ತಿ ವಿಶಿಷ್ಟ ಸಾಧನೆಯ ಪರಮಾರಾಧಕರಂತೆ ಸೃಷ್ಟಿಸುತ್ತಿರುವ, ೨೧ನೇ ಶತಮಾನದ ಪ್ರಾರಂಭದ ಇಂದಿನ ದಿನಗಳ ಕನ್ನಡ ಸಂಸ್ಕೃತಿಯ ದೃಶ್ಯಕಲೆಯ ಕಲಾವಿದ/ ಕಲಾವಿದೆಯರ ಅಪೂರ್ಣ ವರ್ತಮಾನ, ಇತಿಹಾಸವಾಗಲಿರುವ ಭವಿಷ್ಯದಲ್ಲಿ ವಿಶಿಷ್ಟ ಆಯಾಮಗಳನ್ನು ಪಡೆದುಕೊಳ್ಳಬಹುದು. ಆದರೆ ಈ ಹಿಂದಿನ ನಮ್ಮ ದೃಶ್ಯಕಲೆಯ ಇತಿಹಾಸ ನಮಗೆ ತೆರೆದುಕೊಟ್ಟಿರುವ ಕೌತುಕದ ಕಿಟಕಿಗಳೇನೂ ಸಾಮಾನ್ಯವಲ್ಲ! ಆ ದೃಶ್ಯಕಲೆಯ ರೂಪ, ಅಂಶಗಳ ಸೃಷ್ಟಿ ಪ್ರಕ್ರಿಯೆಯ ಮೊದಲ ಹೆಜ್ಜೆಗಳು ನಿಗೂಢವೂ ಹೌದು. ಆ ಮೊದಲ ಹೆಜ್ಜೆಗಳ, ಆದಿಮಾನವನ ಕಲೆಯನ್ನು ಇತಿಹಾಸ ಪೂರ್ವಕಲೆ, ಪ್ರಾಗೈತಿಹಾಸಿಕ ಕಲೆ ಎಂದೂ ಕರೆಯಲಾಗಿದೆ.
ಮಾನವ ಬೇಟೆಯಾಡುತ್ತಿದ್ದಾಗ ಮತ್ತು ಆಹಾರೋತ್ಪಾದನೆ ಮಾಡಲು ಕಲಿತಾಗಿನ ಹಾಗೂ ಲೋಹಗಳ ಉಪಯೋಗ ಕಂಡು ಕೊಂಡ ಕಾಲಗಳಲ್ಲಿ ಸೃಷ್ಟಿಯಾದ ಕಲೆಯ ವಿವಿಧ ಘಟ್ಟಗಳು ಇತಿಹಾಸ ಪೂರ್ವ ಕಲೆಯ ಪುಟಗಳಾಗಿ ಅರಳಿವೆ. ಮಾನವನ ಮೂಲಭೂತ ಅವಶ್ಯಕತೆಗಳಾದ ಊಟ, ವಾಸ-ಬಟ್ಟೆಗಳೊಂದಿಗೆ ಬದುಕುವ ಅನ್ವೇಷಣೆಯೊಂದಿಗೆ, ವಿವಿಧ ಹಂತಗಳ ಹಲವು ಹಿಮಯುಗಗಳ ನಂತರದ, ಹಳೆಯ ಶಿಲಾಯುಗದ ಅಂತ್ಯದ ಕಾಲದಲ್ಲಿ ಹಾಸುಹೊಕ್ಕು ಈ ಕಲೆ ಬೆಳೆದುಬಂದಿದೆ. ಮೀನು ಹಿಡಿಯುವುದರಲ್ಲಿ ನಿರತರಾಗಿದ್ದು, ಪ್ರಾಣಿಗಳ ಬೇಟೆ ಮತ್ತು ಪ್ರಾಣಿಗಳೊಂದಿಗೆ ಹತ್ತಿರದ ಸಂಬಂಧ, ಅವಲಂಬನೆ ಹೊಂದಿದ ಶಿಲಾಯುಗದ ಜನರಿಂದ ನಮ್ಮ ಕಲೆಯ ವಿನಮ್ರ ಅರಂಭದ ಮಾದರಿಗಳನ್ನು ಕಾಣುತ್ತೇವೆ. ನಂತರದ ಸೂಕ್ಷ್ಮ ಶಿಲಾಯುಗ, ಹೊಸಶಿಲಾಯುಗ, ಶಿಲಾತಾಮ್ರಯುಗ, ಕಬ್ಬಿಣಯುಗದ ಬೃಹತ್ ಶಿಲಾಯುಗ ಮತ್ತು ಈ ಇತಿಹಾಸ ಪೂರ್ವ ಕಾಲವೇ ಅಲ್ಲದೆ, ಇತಿಹಾಸದ ಆರಂಭದ ಕಾಲಗಳಲ್ಲೂ ಕಲೆ ತನ್ನದೇ ಆದ ರೀತಿಯಲ್ಲಿ ಮುನ್ನಡೆಯಿತು. ಈ ಮೊದಲ ಹೆಜ್ಜೆಗಳಲ್ಲಿ ನಮಗೆ ಬಹುಷಃ ಇನ್ನೂ ಗೊತ್ತಿರದ ಹಲವು ಸಾವಿರ ವರ್ಷಗಳ ತಾಲೀಮು ಇದ್ದಿರಬಹುದು! ಹಿಮಯುಗಗಳಲ್ಲಿ ಗುಹೆಗಳನ್ನು ಆಶ್ರಯಿಸಲೇಬೇಕಿದ್ದ ಮಾನವ ಹಲವು ಗುಂಪುಗಳಲ್ಲಿ ಗುರುತಿಸಲ್ಪಟ್ಟಿದ್ದಾನೆ. ಅವನ ಬದುಕಿನಲ್ಲಿ ಕಲೆ ಪ್ರಮುಖ ಪಾತ್ರವನ್ನು ವಹಿಸಿರಲೇಬೇಕು. ಒಟ್ಟಾರೆ ಈ ಕೆಲೆಯ ಹೆಜ್ಜೆಗಳನ್ನು ಸ್ಥೂಲವಾಗಿ ಬೇಟೆಗಾರರ ಕಲೆ, ಆಹಾರೋತ್ಪಾದಕರ ಕಲೆ, ಲೋಹಗಾರರ ಕಲೆ ಎಂಬ ಮೂರು ವಿಭಾಗಗಳಲ್ಲಿ ಗಮನಿಸಬಹುದು.
ಸುಮಾರು ೧೦,೦೦೦ ವರ್ಷಗಳ ಹಿಂದೆ ಆಫ್ರಿಕಾದಿಂದ ಪ್ರಾರಂಭವಾದ ಮಾನವನ ಸಾಮಾಜಿಕ ಚಹರೆಗಳಲ್ಲಿ, ಆದಿಮಕಲೆಯ ಮೊದಲ ಹೆಜ್ಜೆಗಳು ಪಶ್ಚಿಮ ಯೂರೋಪನ್ನು ಆವರಿಸಿ, ನಮ್ಮ ನರ್ಮದಾ ನದಿಯ ಆವರಣಕ್ಕೂ ಧಾವಿಸಿ, ನಂತರ ಪೂರ್ವಏಷ್ಯಾವನ್ನು ಆವರಿಸಿತು. ನರ್ಮದಾ ನದಿಯ ಆಚೀಚೆಯಿಂದ ನಮ್ಮ ದೇಶದ ಉದ್ದಗಲಕ್ಕೂ ಹರಡಿದ್ದ ಈ ಕಲೆಯ ಶೋಧವು ಆಕಸ್ಮಿಕವಾಗಿ ಅಲ್ಲಲ್ಲಿ ೧೮೮೦ರಿಂದ ಪ್ರಾರಂಭವಾಯಿತು. ಬಳ್ಳಾರಿ ಸಮೀಪದ ಕುಪ್ಪಗಲ್ಲು ಗ್ರಾಮದ ಗುಡ್ಡದ ಗುಂಡುಗಳ ಮೇಲೆ ಕುಟ್ಟಿ, ಊರಿ ಬಿಡಿಸಿದ ಚಿತ್ರಗಳನ್ನು ಕಂಡುಕೊಂಡದ್ದು ಆಗಲೆ.
೧೯೩೫ರಲ್ಲಿ ರಾಯಚೂರು ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಿರೆಬೆನಕಲ್ ಗುಡ್ಡಗಳಲ್ಲಿ ಕಂಡುಬಂದ ವರ್ಣಚಿತ್ರ ಗುಹೆಗಳು ಮೂರು. ೧೯೫೭ರಲ್ಲಿ, ದಿವಂಗತ ಡಾ| ವಿಷ್ಣು ಎಸ್. ವಾಕನ್ಕರ್ ಮಧ್ಯಪ್ರದೇಶದಲ್ಲಿ ೭೫೪ ಕಲ್ಲಾಸರೆಗಳ ೫೦೦ರಲ್ಲಿ ಚಿತ್ರಗಳನ್ನು ಕಂಡರು ನಂತರ ದಕ್ಷಿಣ ಭಾರತವನ್ನೂ, ಕರ್ನಾಟಕವೂ ಒಳಗೊಂಡಂತೆ ನೂರಾರು ಸ್ಥಳಗಳಲ್ಲಿ ಶಿಲಾಶ್ರಯ ಚಿತ್ರಗಳು (Rock paintings) ಕಂಡು ಬಂದಿವೆ. ಬೆಂಗಳೂರಿಗೂ ಒಮ್ಮೆ ಬಂದಿದ್ದ ವಾಕನ್ಕರ್ ನಮ್ಮ ರಾಜ್ಯದ ಅಂಥ ಸ್ಥಳಗಳ ಬಗ್ಗೆ ಚರ್ಚಿಸಿ, ದೆಹಲಿಯಿಂದ ಬೆಂಗಳೂರು ತಲುಪುವ ರೈಲುಹಾದಿಯ, ಆಂಧ್ರ, ಕರ್ನಾಟಕ ಗಡಿಭಾಗಗಳ ಬೆಟ್ಟಗಳ ಶಿಲಾಶ್ರಯಗಳನ್ನು ಶೋಧಿಸಲು ನನಗೆ ಸೂಚಿಸಿದ್ದೂ ಉಂಟು. ಹಲವಾರು ಶೋಧಕರು ನಮ್ಮ ರಾಜ್ಯದ ಹಲವೆಡೆ ಇತಿಹಾಸ ಪೂರ್ವ ಕಲೆಯ ಚಹರೆಗಳನ್ನು ಗುರುತಿಸಿದ್ದಾರೆ. ಇನ್ನೂ ಪೂರ್ಣಗೊಂಡಿಲ್ಲದ ಈ ಅನ್ವೇಷಣೆಯಲ್ಲಿ, ಇಡೀಭಾರತದ ಶಿಲಾಯುಗದ ಚಿತ್ರಕಲೆಯನ್ನು ೨೦ ಶೈಲಿಗಳಲ್ಲಿ ವರ್ಗಿಕರಿಸಲಾಗಿದೆ. ಬಾದಾಮಿ, ತೆಕ್ಕಲಕೋಟೆ ಮೊದಲಾದೆಡೆಗಳಲ್ಲಿ ಕೆಂಪು ಅಥವಾ ಕಂದು, ಕೆಂಪು-ಬಿಳುಪು ಬಣ್ಣಗಳ ಚಿತ್ರಗಳು ಕಾಣಿಸಿಕೊಂಡಿವೆ.
ಕ್ರಿ. ಶ. ೧೩೦೦ರ ನಂತರ ನಮ್ಮ ಆದಿಮಜನರ ಚಿತ್ರಗಳಲ್ಲಿ ಮಬ್ಬಗೆಂಪು, ಕಪ್ಪುಬಣ್ಣದ ಬಳಪ, ಕೆಂಪು, ಕಂದು ಅಥವಾ ಕಪ್ಪುಬಣ್ಣದ ಕಬ್ಬಿಣದ ಅದಿರು (haematite) ಕ್ರಿ. ಶ. ೧೩೦೦ರ ನಂತರ ನಮ್ಮ ಆದಿಮಜನರ ಚಿತ್ರಗಳಲ್ಲಿ ಮಬ್ಬಗೆಂಪು, ಕಪ್ಪುಬಣ್ಣದ ಬಳಪ, ಕೆಂಪು, ಕಂದು ಅಥವಾ ಕಪ್ಪುಬಣ್ಣದ ಕಬ್ಬಿಣದ ಅದಿರು ಬಣ್ಣಗಳ ಚಿತ್ರಗಳು ಕಂಡುಬರುತ್ತವೆ. ಹಂಪೆಯ ವಿರೂಪಾಕ್ಷ ದೇವಾಲಯದ ಬಳಿ ಹರಿಯುವ ತುಂಗಭದ್ರ ನದಿಯ ಆಚೆ, ಈಚೆ, ಆನೆಗೊಂದಿಯ ಹುಚ್ಚಪ್ಪಯ್ಯನಮಠದ ಸುತ್ತಮುತ್ತ, ಹಾಗೂ ಆನೆಗೊಂದಿಯಿಂದ ಮುಂದೆ ಪಶ್ಚಿಮಕ್ಕೆ ಸಿಗುವ ರಾಮಾಪುರದ ತಿರುವಿನ ಒನಕೆ ಕಿಂಡಿ ಎಂಬ ಇಕ್ಕಟ್ಟಾದ ಹಾದಿಯ ನಂತರ ಸಿಗುವ ಶಿಲಾಶ್ರಯ ಚಿತ್ರಗಳು ಮನುಷ್ಯ ಪ್ರಾಣಿ, ಬೇಟೆ ಹಾಗೂ ವಿಶಿಷ್ಟ ಆಚರಣೆಯ ಕಂದು-ಬಿಳಿಬಣ್ಣಗಳ ಚಿತ್ರಗಳಿವೆ. ಗುಲ್ಬರ್ಗಾದ ಯಾದ್‌ಗೀರ್ ಬಳಿಯ ಬಳಿಚಕ್ರ, ಬಾದಾಮಿಯ ಸುತ್ತಮುತ್ತಲಿನ ಸಿಡಿಲಫಡಿ, ಸೀತೆದೊಣಿ, ಸೂಳಿಫಡಿ, ಕೋಳಿಫಡಿ ಅಲ್ಲದೆ ರಾಮಗಿರಿಯಿಂಥ ಹಲವು ಸ್ಥಳಗಳಲ್ಲಿ ಇತಿಹಾಸ ಪೂರ್ವ ಚಿತ್ರಗಳಿವೆ. ಇತ್ತೀಚೆಗೆ ಬಳ್ಳಾರಿ ಜಿಲ್ಲೆಯಲ್ಲಿ ಇತಿಹಾಸ ಪೂರ್ವ ಶಿಲ್ಪವನ್ನೂ ಶೋಧಿಸಲಾಗಿರುವುದು ಸಾಮಾನ್ಯ ಸಂಗತಿಯಲ್ಲ.
ಹೀಗೆ ನಮ್ಮ ರಾಜ್ಯದ ನೂರಾರು ಸ್ಥಳಗಳಲ್ಲಿ ಇಂಥ ಚಿತ್ರಗಳ ಸೆಳಕುಗಳಿವೆ. ಹಲವೆಡೆ ಅನ್ವೇಷಣೆಗಳು ಆಸಕ್ತರಿಂದ ಮುಂದುವರೆದಿವೆ. ಇಂಥ ಆದಿಮಜನರ ಕಲೆ ಮುಂದಿನ ಇತಿಹಾಸ ಕಾಲದ ಕಲೆಯ ಬೆಳವಣಿಗೆಗಳ ಕಾಲಕ್ಕೆ ತಮ್ಮ ಗಮನಾರ್ಹ ಪ್ರಭಾವಗಳನ್ನು ಬೀರಿದವಲ್ಲದೆ, ತಮ್ಮದೇ ಆದ ವಿಶಿಷ್ಟ ಛಾಪನ್ನು ಹೊಂದಿ ಅನನ್ಯವಾಗಿದೆ. ಈ ಇತಿಹಾಸಪೂರ್ವ ಮತ್ತು ಇತಿಹಾಸ ಕಾಲದ ಚಿತ್ರಕಲೆಯ ಕೊಂಡಿಯನ್ನು ಬಾದಾಮಿಯ ಗುಹೆಗಳಲ್ಲಿ ಹಾಗೂ ಆ ಪರಿಸರದ ಸುತ್ತಲಿನ ಗುಹೆಗಳಲ್ಲಿ ಇಂದಿಗೂ ಕಾಣಬಹುದಾಗಿದೆ. ಇದು ನಮ್ಮ ಕಲೆಯ ಒಂದು ವಿಶೇಷ.
ಬಹುಷಃ ಮಾಂತ್ರಿಕ ಕಾರಣಗಳಿಗಾಗಿ ಸೃಷ್ಟಿಯಾದ ಈ ಚಿತ್ರಗಳು ಬಹುತೇಕ ಬಾಹ್ಯರೇಖಾ ರೂಪ ಹಾಗೂ ಚಪ್ಪಟೆ ಬಣ್ಣಗಳ ರೂಪಗಳೇ ಆಗಿದ್ದರೂ, ಆದಿಮ ಜನರು ಆ ಪ್ರಾಣಿಗಳೊಂದಿಗೆ ಹೊಂದಿದ್ದ ನಿಕಟತೆ, ಸಹ ಸಂಬಂಧ ಇತ್ಯಾದಿಗಳಿಂದಾಗಿ ತೀವ್ರಭಾವ ಹಾಗೂ ಶಕ್ತಿಶಾಲೀ ರೂಪಕಲ್ಪನೆಗಳಿಂದ ಕೂಡಿವೆ. ಆ ರೂಪಗಳ ಸೌಂದರ್ಯ ಇಂದಿಗೂ ನಮ್ಮನ್ನು ಆಕರ್ಷಿಸುತ್ತದೆ. ಈ ಚಿತ್ರಗಳ `ವಿಕೃತಿ’ ಸೌಂದರ್ಯ, ಅವರ ಸಾಂಪ್ರದಾಯಿಕ, ಸಾಂಕೇತಿಕ ಶೈಲಿಗಳ ಪ್ರತೀಕಗಳಾಗಿದ್ದು ಅಭಿವ್ಯಕ್ತಿಗೆ ಪೂರಕವಾಗಿ ಸಮರ್ಥವಾಗಿ ದುಡಿಸಿಕೊಳ್ಳಲ್ಪಟ್ಟಿವೆ. ಪ್ರತಿ ಪಂಗಡದ ಅನುವಂಶಕ ನಂಬಿಕೆಗಳು, ಆಚಾರಗಳು ಮಡುಗೊಂಡಿವೆ. ಸಾಮಾನ್ಯವಾಗಿ ಮಾನವಾಕಾರಗಳ ಜತೆ ಜತೆಗೆ ಪ್ರಾಣಿಗಳೂ ಕಾಣಿಸಿಕೊಂಡಿವೆ. ಕೆಲವೊಮ್ಮೆ ಇವೆರಡರ ಸಂಕೀರ್ಣ ರೂಪಗಳ ಸೃಷ್ಟಿಗೆ ಮತೀಯ ನಂಬಿಕೆಗಳು ಸ್ಫೂರ್ತಿನೀಡಿರಬಹುದು. ಇವುಗಳ ನಾಟಕೀಯ ಕಲ್ಪನಾ ನಿರೂಪಣೆಯೋ, ಅಧಿಕಾರ ಅಥವಾ ಗೌರವದ ಸೂಚಕವೋ ಆ ಜನರ ಅಭಿವ್ಯಕ್ತಿ ಗುರಿಯಾಗಿದೆ. ಈ ದೃಶ್ಯಾಭಿವ್ಯಕ್ತಿಯಲ್ಲಿ ಆದಿಮ ಜನರ ಉಬ್ಬು ಶಿಲ್ಪ ಹಾಗೂ ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿಯೂ ಕಂಡುಕೊಳ್ಳಲಾದ ಪೂರ್ಣಶಿಲ್ಪ, ವರ್ಣಚಿತ್ರಗಳು ಮೂಡಿಬಂದಿವೆ. ಬಂಡೆಗಳನ್ನು ಕೊರೆದು ಮೂಡಿಸಿದ (etch ಮಾಡಿದ) ರೇಖಾಚಿತ್ರಗಳೂ ಗಮನಾರ್ಹ.
[ಈಚಿನ ವರ್ಷಗಳಲ್ಲಿ ಕರ್ನಾಟಕ ಚಿತ್ರಕಲೆ ವಿಮರ್ಶೆಯಲ್ಲಿ ಕೇಳಿಬರುವ ನಾಲ್ಕಾರು ಹೆಸರುಗಳಲ್ಲಿ ಕೆ. ವಿ. ಸುಬ್ರಹ್ಮಣ್ಯಂ ಪ್ರಮುಖರು. ಚಿತ್ರಕಲಾವಿದರಾಗಿ, ವಿಮರ್ಶಕರಾಗಿ ಹಲವು ಕಲಾಪ್ರಕಾರದ ಕೃತಿರಚನೆ ಮಾಡಿರುವ ಸುಬ್ರಹ್ಮಣ್ಯಂ, ಗಂಭೀರ ಕಲಾ ಚಿಂತಕರು. ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀಯುತರು ಲಲಿತಕಲಾ ಅಕಾಡೆಮಿ ಸದಸ್ಯರಾಗಿ, ವಾರ್ತಾಪತ್ರದ ಸಂಪಾದಕರಾಗಿ ಅರ್ಥಪೂರ್ಣ ಕೆಲಸ ಮಾಡಿದ್ದಾರೆ. `ಕನ್ನಡಪ್ರಭ’ ದೈನಿಕದ ಕಲಾವಿಮರ್ಶಕರು. ವೃತ್ತಿಯಲ್ಲಿ ಅಧ್ಯಾಪಕರಾಗಿರುವ ಸುಬ್ರಹ್ಮಣ್ಯಂ `ವಿಶ್ವಕನ್ನಡ’ಕ್ಕೆ ವಿಶೇಷ ಕಲಾ ಪರಂಪರೆ ಬಗ್ಗೆ ಬರೆಯುತ್ತಿದ್ದಾರೆ. ಇದರಲ್ಲಿ ಬಳಸಿರುವ ಛಾಯಾಚಿತ್ರಗಳೆಲ್ಲ ಕೆ. ವಿ. ಸುಬ್ರಹ್ಮಣ್ಯಂ ಅವರ ಕ್ಯಾಮೆರಾದಲ್ಲಿ ಮೂಡಿದವುಗಳು].
[೨೦೦೧]
ನೋಡಿ: ಕರ್ನಾಟಕದ ದೃಶ್ಯಕಲಾ ಪರಂಪರೆ: [http://vishvakannada.com/node/179|ಭಾಗ ೨]