ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ- ಭಾಗ-೪

– ಡಾ| ಎಂ. ಚಿದಾನಂದ ಮೂರ್ತಿ

ಧರ್ಮ ಸಮನ್ವಯ

ಕರ್ನಾಟಕ ಸಂಸ್ಕೃತಿಯು ತನ್ನ ಬದುಕು, ಸಾಹಿತ್ಯ, ಕಲೆ ಇವುಗಳಲ್ಲಿ ಸಮನ್ವಯವನ್ನು ಸಾಧಿಸಿರುವುದನ್ನು ಹಿಂದಿನ ಪುಟಗಳಲ್ಲಿ ನೋಡಿದ್ದೇವೆ. ಈ ಸಮನ್ವಯವು ಸಂಸ್ಕೃತಿಯ ಇತರ ಶಾಖೆಗಳಲ್ಲಿ ಹೇಗೋ ಅಂತೆಯೇ ಇನ್ನೊಂದು ಪ್ರಮುಖ ಶಾಖೆಯಾದ ಧರ್ಮದಲ್ಲಿಯೂ ಕಾಣಿಸಿಕೊಂಡ ಪರಿಯೂ ಗಮನಾರ್ಹವಾಗಿದೆ. ಕರ್ನಾಟಕ ಹಲವು ವಿಭಿನ್ನ ಧರ್ಮಗಳ, ವಿಭಿನ್ನ ಆಲೋಚನೆಗಳ ನಾಡು; ಸಂತರ ನಾಡು. ಒಂದು ಶಾಸನವು ಕರ್ನಾಟಕವನ್ನು “ಸರ್ವಧರ್ಮಧೇನುನಿವಹಕ್ಕಾಡುಂಬೊಲಂ” ಎಂದು ವರ್ಣಿಸಿದೆ. ಅದು ಎಲ್ಲ ಧರ್ಮಗಳೆಂಬ ಹಸುಗಳು ಆಡುವ ಬಯಲು ಪ್ರದೇಶ ಎಂದು ಕರ್ನಾಟಕವನ್ನು ವರ್ಣಿಸಿರುವುದು ಉಚಿತವಾಗಿದೆ. ಕ್ರಿ. ಪೂ. ಮೂರನೇ ಶತಮಾನದಲ್ಲಿ ಬಂದ ಬೌದ್ಧ ಧರ್ಮದಿಂದ ಏನಿಲ್ಲವೆಂದರೂ ಪರೋಕ್ಷವಾಗಿಯಾದರೂ ಹನ್ನೆರಡನೆಯ ಶತಮಾನದ ಬೆಡಗಿನ ವಚನಗಳು ರೂಪುಗೊಂಡವು. ಕ್ರಿ. ಪೂ. ಎರಡನೇ ಶತಮಾನದಲ್ಲಿ ಕರ್ನಾಟಕಕ್ಕೆ ಬಂದ ಜೈನಧರ್ಮವಂತೂ ಕರ್ನಾಟಕ ಸಂಸ್ಕೃತಿಗೆ ತನ್ನ ಸಾಹಿತ್ಯ, ಬೌದ್ಧಿಕಶಾಸ್ತ್ರಸಾಹಿತ್ಯ, ಶಿಲ್ಪ ವಾಸ್ತುಗಳ ಮೂಲಕ ಅಪೂರ್ವ ಕೊಡುಗೆಗಳನ್ನು ಕೊಟ್ಟಿತು. ವೀರಶೈವ ಧರ್ಮವು ವಚನ ಸಾಹಿತ್ಯದ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕರ್ನಾಟಕಕ್ಕೆ ಬಂದ ಶ್ರೀವೈಷ್ಣವ ಧರ್ಮವು ಹಲವು ಸುಂದರ ದೇವಾಲಯಗಳಿಗೆ ಸ್ಫೂರ್ತಿಯನ್ನು ನೀಡಿತು. ಬೌದ್ಧ, ಜೈನ, ಶೈವ, ವೈಷ್ಣವ ಮತಗಳಲ್ಲದೆ ಇನ್ನೂ ಹಲವಾರು ಪಂಥಗಳು ಜಾತಿಗಳು ಕರ್ನಾಟಕದಲ್ಲಿ ಶಾಂತಿ ಸೌಹಾರ್ದಗಳಿಂದ ಬಾಳಿದವು.

ರಾಜ ಮನೆತನಗಳು : ಎಲ್ಲ ಧರ್ಮಗಳಿಗೆ ಪ್ರೋತ್ಸಾಹ

ಕರ್ನಾಟಕದ ದೊರೆಗಳು ಉದಾರ ಹೃದಯಿಗಳಾಗಿದ್ದು ಎಲ್ಲ ಧರ್ಮಗಳಿಗೂ ಸಮಾನ ಪ್ರೋತ್ಸಾಹವನ್ನು ನೀಡಿದರು. ಬಾದಾಮಿ ದೊರೆಗಳು ವೈಷ್ಣವರಾಗಿದ್ದರೂ, ಐಹೊಳೆ ಮಹಾಕೂಟ ಶಾಸನಗಳನ್ನು ನೋಡಿದರೆ ಜೈನ, ಶೈವ ದೇವಾಲಯಗಳಿಗೂ ದತ್ತಿಗಳನ್ನು ನೀಡಿರುವುದು ಕಂಡುಬರುತ್ತದೆ. ಕನ್ನಡಿಗರಾದ ರಾಷ್ಟ್ರಕೂಟ ದೊರೆಗಳು ಎಲ್ಲೋರ ದೇವಾಲಯಗಳನ್ನೂ, ಬೊಂಬಾಯಿ ಸಮೀಪದ ಎಲಿಫೆಂಟಾ ಗುಹಾಂತರ್ದೇವಾಲಯಗಳನ್ನೂ ಕೊರೆಯಿಸಿದರು. ರಾಷ್ಟ್ರಕೂಟ ಚಕ್ರವರ್ತಿ ಕೃಷ್ಣನು ಕೊರೆಸಿದ ಎಲ್ಲೋರದ ಕೈಲಾಸ ದೇವಾಲಯವು ವಿಶ್ವದ ಅದ್ಭುತಗಳಲ್ಲಿ ಒಂದು. ಆದರೂ ಆ ದೊರೆಗಳು ಇತರ ಧರ್ಮೀಯರಿಗೆ ಸಾಕಷ್ಟು ಪ್ರೋತ್ಸಾಹವನ್ನು ಕೊಟ್ಟರು. ತನ್ನ ರಾಜ್ಯಕ್ಕೆ ಸಂಕಷ್ಟ ಬಂದಾಗ ಕೊಲ್ಲಾಪುರದ ಲಕ್ಷಿ ಗೆ ತನ್ನ ಕೈ ಬೆರಳನ್ನೇ ಕೊಡಲು ಮುಂದಾದ ನೃಪತುಂಗ ಚಕ್ರವರ್ತಿಯು ಸಂಸ್ಕೃತದಲ್ಲಿ `ಪ್ರಶ್ನೋತ್ತರ ರತ್ನಮಾಲಿಕಾ’ ಎಂಬ ಜೈನಪರ ಕೃತಿಯನ್ನು ರಚಿಸಿದ್ದಾನೆ. ಗಂಗರ ವೈಯಕ್ತಿಕ ಮತ ಜೈನ ಆಗಿದ್ದರೂ ಹಲವಾರು ಸುಂದರ ಹಿಂದೂ ದೇವಾಲಯಗಳನ್ನು ನಿರ್ಮಿಸಿದರು. ಹೊಯ್ಸಳರಿಗೆ ಶಿವನಿಗೂ ವಿಷ್ಣುವಿಗೂ ಬೇದವೇ ಕಾಣಿಸಲಿಲ್ಲ. ಅವರ ಹಲವಾರು ಶಾಸನಗಳಲ್ಲಿ `ನರ್ಮ ಕೇಶವಾಯ ಶಿವಾಯ ಚ’ ಎಂದಿದೆ. (ಕೇಶವನಿಗೂ ಶಿವನಿಗೂ ಇಬ್ಬರಿಗೂ ನಮಸ್ಕಾರ). ವಿಷ್ಣುವರ್ಧನನು ವೈಷ್ಣವನಾದರೂ ಅವನ ಪತ್ನಿ ಶಾಂತಲೆ ಜೈನಳಾಗಿದ್ದಳು. ಶಾಂತಲೆಯ ತಂದೆ ಶೈವನಾಗಿದ್ದ. ಅವಳು ಹುಟ್ಟಿದ್ದೇ ಧರ್ಮೇಶ್ವರ ದೇವರ ವರಪ್ರಸಾದದಿಂದ. ಹೊಯ್ಸಳರ ಕಾಲದ ಒಂದು ಶಾಸನ ಹೀಗೆ ಹೇಳುತ್ತದೆ: “ಯಂ ಶೈವಾಃ ಸಮುಪಾಸತೇ ಶಿವ ಇತಿ, ಬ್ರಹ್ಮ ಇತಿ ವೇದಾಂತಿನಃ, ಬೌದ್ಧಾಃ ಬುದ್ಧ ಇತಿ, ಪ್ರಮಾಣಪಟವಃ ಕರ್ತ ಇತಿ ನೈಯಾಯಿಕಾಃ, ಅರ್ಹನ್ ಇತ್ಯಥ ಜೈನಶಾಸನರತಾಃ, ಕರ್ಮ ಇತಿ ಮೀಮಾಂಸಕಾಃ, ಸೋಯಂ ವೋ ವಿದಧಾತು ವಾಂಛಿತಫಲಂ ತೆಲೋಕನಾಥೋ ಹರಿಃ”. ಶೈವರು ಶಿವನೆಂದೂ ವೇದಾಂತಿಗಳು ಬ್ರಹ್ಮ ಎಂದೂ ಬೌದ್ಧರು ಬುದ್ಧ ಎಂದೂ ನೈಯಾಯಿಕರು ಕರ್ತ ಎಂದೂ ಜೈನರು ಅರ್ಹತ್ ಎಂದೂ ಕರೆಯುವುದು ಆ ಒಂದು ದೈವವಾದ ಹರಿಯನ್ನೇ ಎಂದು ಶಾಸನದ ಅರ್ಥ. ವಿಜಯನಗರದ ದೊರೆಗಳು ಮೇಲಿನ ಧರ್ಮಗಳನ್ನಲ್ಲದೆ, ಇಸ್ಲಾಮಿನ ಕೂರಾನನ್ನೂ ಗೌರವಿಸಿ ಆ ಧರ್ಮಕ್ಕೂ ಗೌರವವನ್ನು ಸಲ್ಲಿಸಿದರು.

ಕವಿಗಳು – ಸಂತರು

ಕನ್ನಡ ಕವಿಗಳೂ, ಸಂತರೂ ಮನುಷ್ಯ ವರ್ಗದ ಸಮಾನತೆಯನ್ನೂ, ಮನುಷ್ಯ ಮನುಷ್ಯರ ಮಧ್ಯೆ ಇರಬೇಕಾದ ಪರಸ್ಪರ ಸೌಹಾರ್ದ ಸ್ನೇಹ ಬಾಂಧವ್ಯ ಗುಣಗಳನ್ನೂ, ತಮ್ಮ ಕೃತಿಗಳಲ್ಲಿ ಹಾಡಿ ಹೊಗಳಿದ್ದಾರೆ; ತಮ್ಮ ಬದುಕಿನಲ್ಲಿ ಬಾಳಿ ತೋರಿಸಿಕೊಟ್ಟಿದ್ದಾರೆ. ಕವಿರಾಜಮಾರ್ಗದಲ್ಲಿ ಒಂದು ಬಹು ದೊಡ್ಡ ಮಾತು ಇದೆ: “ಕಸವರಮ್ ಎಂಬುದು ನೆರೆ ಸೈರಿಸಲ್ ಆರ್ಪೊಡೆ ಪರವಿಚಾರಮುಮಂ ಪರಧರ್ಮಮುಮಂ”. ಅನ್ಯರ ವಿಚಾರಗಳನ್ನೂ ಅನ್ಯರ ಧರ್ಮವನ್ನೂ ಸಹನೆಯಿಂದ ನೋಡುವುದೇ ನಿಜವಾದ ಐಶ್ವರ್‍ಯ. ಕನ್ನಡದ ಈಗಿನ ಮೊದಲ ಉಪಲಬ್ಧ ಕೃತಿಯಲ್ಲಿ ಕಂಡುಬರುವ ಈ ಮಾತುಗಳು ಕರ್ನಾಟಕ ಸಂಸ್ಕೃತಿಯು ಇಟ್ಟುಕೊಂಡಿದ್ದ ಮೇಲ್ಪಂಕ್ತಿಯ ಆದರ್ಶವೂ ಆಗಿದೆ. ಇದು ಕನ್ನಡ ಸಂಸ್ಕೃತಿಯ ಸಮನ್ವಯ ಗುಣ. ನೃಪತುಂಗ (ಅಥವಾ ಶ್ರೀ ವಿಜಯ) ಕನ್ನಡ ಜನರನ್ನು ವರ್ಣಿಸುವಾಗ, ಅವರು “ಸುಭಟರೂ ಕವಿಗಳೂ ಚೆಲುವರೂ ಗುಣಿಗಳೂ ಅಭಿಮಾನಿಗಳೂ ಅತ್ಯುಗ್ರರೂ ಗಂಭೀರಚಿತ್ತರೂ ವಿವೇಕಿಗಳೂ” ಆಗಿದ್ದರೆಂದು ಹೇಳುತ್ತಾನೆ. ಈ ಮಾತುಗಳು ಸ್ವಾಭಿಮಾನ ಮತ್ತು ಸಮದೃಷ್ಟಿಗಳು ಅವರ ಪ್ರಮುಖ ಲಕ್ಷಣವಾಗಿದ್ದುವೆಂಬುದನ್ನು ಹೇಳುತ್ತವೆ. “ಮನುಷ್ಯ ಜಾತಿ ತಾನೊಂದೆ ವಲಂ” ಎಂಬುದು ಆದಿಕವಿ ಪಂಪನ ಮಾತು. ಅದೇ ಪಂಪನ ಪ್ರಕಾರ ತ್ಯಾಗ, ಭೋಗ, ಗೇಯ (ಸಂಗೀತ), ಗೋಷ್ಠಿ, ವಿದ್ಯೆಗಳಿಂದ ಹದಗೊಂಡ ಬಾಳನ್ನು ಬಾಳುವವನೇ ನಿಜವಾದ ಮನುಷ್ಯ. ಯುದ್ಧದಲ್ಲಿ ಶೌರ್‍ಯವನ್ನು ತೋರಬೇಕು; ತನ್ನ ಬಳಿ ಇರುವ ಐಶ್ಚರ್‍ಯವನ್ನು ಬಡವರಿಗೆ ದಾನ ಮಾಡಬೇಕು- ಈ ಶೌರ್‍ಯ, ತ್ಯಾಗ ಗುಣಗಳನ್ನು ಅವನು ತನ್ನ ಕೃತಿಯಲ್ಲಿ ಎತ್ತಿ ಹಿಡಿದಿದ್ದಾನೆ. “ದೇವನೊಬ್ಬ ನಾಮ ಹಲವು” ಎಂದು ಬಸವಣ್ಣ ಸಾರಿದರು. ಸುಳ್ಳು ಹೇಳುವವನು ನಿಜವಾದ ಹೊಲೆಯನೇ ಹೊರತು ಹುಟ್ಟಿನಿಂದ ಹೊಲೆತನ ಬರುವುದಿಲ್ಲವೆಂದು ರಾಘವಾಂಕ ಕವಿ ಸಾರಿದರೆ, ಹರಿಹರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚೋಳ ಚಕ್ರವರ್ತಿಯು ಹೊಲೆಯ ಶಿವಭಕ್ತ ಮಾದಾರ ಚನ್ನಯ್ಯನ ಪಾದಗಳಿಗೆ ಎರಗುವಂತೆ ಮಾಡಿದ. ಮನುಷ್ಯ ವಗ೯ವೆಲ್ಲ ಒಂದು ಎಂಬ ತತ್ವವನ್ನು ತಮ್ಮ ತಮ್ಮ ಧರ್ಮದ ಚೌಕಟ್ಟಿನಲ್ಲೇ ಕನ್ನಡ ಜನ ಕಂಡಿದ್ದಾರೆ. ಕನಕದಾಸರು ತಮ್ಮ ರಾಮಧ್ಯಾನ ಚರಿತ್ರೆಯಲ್ಲಿ ಬತ್ತ-ರಾಗಿ ಇವುಗಳ ಸಂಘರ್ಷವನ್ನು ಚಿತ್ರಿಸಿದ್ದಾರೆ. ಅಂತ್ಯದಲ್ಲಿ ಬಡಜನರ ಆಹಾರವಾದ ರಾಗಿಯು ಶ್ರೀಮಂತರ ಉನ್ನತಕುಲದವರ ಆಹಾರವಾದ ಬತ್ತಕ್ಕಿಂತ ಶ್ರೇಷ್ಠ ಎಂಬ ಪ್ರಶಸ್ತಿಯನ್ನು ಶ್ರೀರಾಮನಿಂದ ಕೊಡಿಸಿದ್ದಾರೆ. ಬತ್ತಕ್ಕಿಂತ ರಾಗಿ ಶ್ರೇಷ್ಠವೆಂಬ ಕತೆ ಸಾಂಕೇತಿಕವೆಂದು ಯಾರು ಬೇಕಾದರೂ ಗುರುತಿಸಬಹುದು. ದಯೆಯೇ ಧರ್ಮದ ಮೂಲವೆಂದು ಬಸವಣ್ಣ ಹೇಳಿದರೆ, ಹೊಲೆಯ ಊರ ಹೊರಗಿಲ್ಲ. ಒಳಗೂ ಇರಲು ಸಾಧ್ಯವೆಂದು ಪುರಂದರದಾಸರು ಪ್ರತಿಪಾದಿಸಿ, ಸುಳ್ಳು ಹೇಳುವವ ಹೊಲೆಯ, ವಂಚನೆ ಮಾಡುವವ ಹೊಲೆಯ, ದಾರಿಗೆ ಮುಳ್ಳು ಹಚ್ಚುವವ ಹೊಲೆಯ ಇತ್ಯಾದಿ ಮಾತುಗಳ ಮೂಲಕ ಹೊಲೆತನಕ್ಕೆ ಬೇರೊಂದು ವ್ಯಾಖ್ಯಾನವನ್ನು ಕೊಟ್ಟರು.

ಬುಕ್ಕನ ಶಾಸನ

ಕ್ರಿ. ಶ. ೧೩೬೮ರ ಬುಕ್ಕರಾಯನ ಶ್ರವಣಬೆಳ್ಗೊಳದ ಶಾಸನವನ್ನು ಈ ಹಿನ್ನಲೆಯಲ್ಲಿ ಪರಿಶೀಲಿಸುವುದು ಅಗತ್ಯ. ಬುಕ್ಕ ವಿಜಯನಗರದ ಸಾಮ್ರಾಜ್ಯವನ್ನು ಸ್ಥಾಪಿಸಿದ ಹಕ್ಕ ಬುಕ್ಕ ಸೋದರರಲ್ಲಿ ಕಿರಿಯವನು. ಇಡೀ ದಕ್ಷಿಣ ಭಾರತವನ್ನು ಇಸ್ಲಾಮ್ ವ್ಯಾಪಿಸಿ ಭಾರತೀಯ ಸಂಸ್ಕೃತಿಯು ನಾಶಕ್ಕೆ ಒಳಗಾಗುವ ಸ್ಥಿತಿಯಲ್ಲಿದ್ದಾಗ ಕ್ರಿ. ಶ. ೧೩೩೬ರಲ್ಲಿ ವಿಜಯನಗರ ಸಾಮ್ರಾಜ್ಯವು ಸನಾತನ ಸಂಸ್ಕೃತಿಯ ಸಂರಕ್ಷಣೆಗಾಗಿ ಉದಯವಾಯಿತು. ಹದಿನಾಲ್ಕನೇ ಶತಮಾನದಲ್ಲಿ ನಾಶವಾಗಲಿದ್ದ ಭಾರತೀಯ ಸಂಸ್ಕೃತಿಯ ರಕ್ಷಣೆಯನ್ನು ಮಾಡಿದ್ದು ಕರ್ನಾಟಕದ ಹೆಗ್ಗಳಿಕೆ. ಬುಕ್ಕನ ಕಾಲದಲ್ಲಿ ಶ್ರೀವೈಷ್ಣವರಿಗೂ ಮತೀಯ ಘರ್ಷಣೆಗಳು ನಡೆದು, ಜೈನರು ಬುಕ್ಕ ದೊರೆಗೆ ಅಹವಾಲು ಹೇಳಿಕೊಳ್ಳುತ್ತಾರೆ. ಬುಕ್ಕನು ಜೈನ ಮತ್ತು ಶ್ರೀವೈಷ್ಣವ ಧಾರ್ಮಿಕ ನಾಯಕರೆಲ್ಲರನ್ನೂ ಕರೆಸಿಕೊಂಡು ಒಬ್ಬರ ಕೈಯಲ್ಲಿ ಇನ್ನೊಬ್ಬರ ಕೈಯಿಟ್ಟು, “ಜೈನಧರ್ಮಕ್ಕೂ ವೈಷ್ಣವ ಧರ್ಮಕ್ಕೂ ಭೇದವಿಲ್ಲ. ಎರಡೂ ಒಂದೇ. ಒಂದು ಧರ್ಮದ ಹೆಗ್ಗಳಿಕೆ ಅವನತಿಗಳು ಇನ್ನೊಂದು ಧರ್ಮದ ಹೆಗ್ಗಳಿಕೆ, ಅವನತಿಗಳೂ ಹೌದು” ಎಂದು ತೀರ್ಪು ಕೊಡುತ್ತಾನೆ. ಈ ರೀತಿ ಪರಸ್ಪರ ಧಾರ್ಮಿಕ ಸೌಹಾರ್ದ, ಭ್ರಾತೃತ್ವಗಳನ್ನು ಸಾರಿದ ಮಹನೀಯ ಬುಕ್ಕನ ಶಾಸನವು ಒಂದು ಪವಿತ್ರ ಹಾಗೂ ಹೆಮ್ಮೆಯ ದಾಖಲೆ. ಆ ಶಾಸನದ ಮೂಲ ಪಾಠವು ಮಾಗಡಿ ತಾಲ್ಲೂಕಿನ ಕಲ್ಯದಲ್ಲಿದೆ.

ಒಂದು ಧರ್ಮದ ಅತ್ಯುತ್ಸಾಹಿಗಳು ಮಾಡಿದ ಅಕೃತ್ಯವನ್ನು ಆ ಧರ್ಮದ ಮುಖಂಡರೇ ಮುಂದೆ ನಿಂತು ತಿದ್ದಿದ ಒಂದು ಉದಾಹರಣೆಯಿದೆ. ಹಳೇಬಿಡಿನ ಹುಚ್ಚಪ್ಪ ದೇವರು ಎಂಬ ವೀರಶೈವ ಅಲ್ಲಿನ ವಿಜಯ ಪಾರ್ಶ್ಚನಾಥ ಬಸದಿಗೆ ಲಿಂಗಮುದ್ರೆ ಹಾಕಿ ಅದು ತಮಗೆ ಸೇರಿದ್ದೆಂದು ಸವಾಲು ಹಾಕುತ್ತಾನೆ. ಆಗ ಜೈನರು, ವೀರಶೈವ ಗುರುಗಳಿಗೆ ಹೇಳಿಕೊಂಡಾಗ ಎಲ್ಲ ಮಠಗಳ ಮಹತ್ತುಗಳೂ (ಮುಖ್ಯರೂ) ಸೇರಿಕೊಂಡು ಬಸದಿಯನ್ನು ಪರಿಶೀಲಿಸಿ, ಅದು ಜೈನರದೆಂದೂ, ಜೈನರ ಧಾರ್ಮಿಕ ಕಟ್ಟಣೆಗಳಿಗೆ ಅಡ್ಡಿ ಬಂದವರು ನಿಜವಾದ ಶಿವಭಕ್ತರಲ್ಲವೆಂದೂ, ಅವರನ್ನು ಶಿವದ್ರೋಹಿಗಳೆಂದು ಧರ್ಮದ್ರೋಹಿಗಳೆಂದು ಭಾವಿಸಿ ಧರ್ಮದಿಂದ ಹೊರಹಾಕುವುದಾಗಿಯೂ ಹೇಳುತ್ತಾರೆ. ಕರ್ನಾಟಕ ಸಂಸ್ಕೃತಿಯಲ್ಲಿ ಧಾರ್ಮಿಕ ಅಸಹಿಷ್ಣುತೆ ವಿರಳ; ಇಲ್ಲಿ ನಿಯಮವೆಂದರೆ ಧಾರ್ಮಿಕ ಸಹನೆ. ಕೆಲವು ತಿಕ್ಕಾಟಗಳು ನಡೆದಿವೆ; ಆದರೆ ಅವು ಅಪವಾದಗಳು ಮಾತ್ರ. ಕರ್ನಾಟಕ ಸಂಸ್ಕೃತಿ ತನ್ನ ಎರಡು ಸಾವಿರ ವರ್ಷಗಳ ಚರಿತ್ರೆಯಲ್ಲಿ ವಿಶ್ವಕ್ಕೆ ತೋರಿಸಿರುವ ಮೌಲ್ಯವೆಂದರೆ -ಧಾರ್ಮಿಕ ಸಮನ್ವಯ.

ಕನ್ನಡ ಕವಿಗಳ ನಾಡು ನುಡಿ ಪ್ರೇಮ

ಕನ್ನಡದ ಕವಿಗಳು ನಾಡನ್ನು ಆಳವಾಗಿ ಪ್ರೀತಿಸಿದರು; ತಮ್ಮ ನುಡಿಯ ಜೊತೆ ಗಾಢವಾಗಿ ಸ್ಪಂದಿಸಿದರು. ನೃಪತುಂಗನಿಗೆ ಕರ್ನಾಟಕವು ಇಡೀ ವಿಶ್ವದಲ್ಲಿ ಒಂದು `ವಿಶಿಷ್ಟ ದೇಶ'(`ವಿಷಯ ವಿಶೇಷಂ’). ಚಾಲುಕ್ಯರಿಗಂತೂ ತಮ್ಮನ್ನು `ಕರ್ನಾಟಕ’ರು ಎಂದು ಕರೆಸಿಕೊಳ್ಳಲು ಹೆಮ್ಮೆ. ಪಂಪನಿಗೆ ಹುಟ್ಟುನಾಡಾದ ಕರ್ನಾಟಕದ ಬನವಾಸಿಯ ಬಗ್ಗೆ ಅಪರಿಮಿತ ಮಮತೆ. ಅಲ್ಲಿಯ ಸೌಂದರ್ಯ, ಹೃದಯವಂತಿಕೆ, ಸುಸಂಸ್ಕೃತ ಜೀವನಗಳು ಅವನನ್ನು ತೀವ್ರವಾಗಿ ಆಕರ್ಷಿಸಿದ್ದವು. “ನನ್ನ ಮನಸ್ಸಿಗೆ ಅಂಕುಶ ಹಾಕಿದರೂ ಅದು ನಿಲ್ಲದೆ ಬನವಾಸಿಯ ಕಡೆ ಓಡುತ್ತದೆ. ಅದನ್ನು ನೆನೆಯುತ್ತದೆ” (“ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ”) ಎಂದಿದ್ದಾನೆ. “ಸಂಸ್ಕೃತಿ ಸಂಪನ್ನ ಮನುಷ್ಯನಾಗಿ ಹುಟ್ಟಿದರೆ ಬನವಾಸಿ ದೇಶದಲ್ಲೇ ಹುಟ್ಟಬೇಕು; ಒಂದು ವೇಳೆ ಆಗದಿದ್ದರೆ ಅಲ್ಲಿ ಕೊನೆಯ ಪಕ್ಷ ಕೋಗಿಲೆಯಾಗಿಯಾದರೂ ಮರಿ ದುಂಬಿಯಾಗಿಯಾದರೂ ಹುಟ್ಟಬೇಕು”. (`ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್’). ಈ ಉದ್ಗಾರಗಳನ್ನು ಗಮನಿಸಿದರೆ ಪಂಪನ ತುಡಿತ ಅರ್ಥವಾಗುತ್ತದೆ. ೧೩ನೇ ಶತಮಾನದ ಅಂಡಯ್ಯ ಅಚ್ಚಗನ್ನಡದ ಅಭಿಮಾನಿ; ಸಂಸ್ಕೃತದ ಸಹಾಯವಿಲ್ಲದೆಯೇ ಕಾವ್ಯವನ್ನು ಬರೆಯುತ್ತೇನೆಂದು ಸಂಕಲ್ಪಿಸಿ, ಅಚ್ಚಗನ್ನಡದಲ್ಲೇ ತನ್ನ `ಕಬ್ಬಿಗರ ಕಾವ’ ಎಂಬ ಕಾವ್ಯವನ್ನು ಬರೆದ ವಿಶಿಷ್ಟ ಕವಿ. “ಕನ್ನಡಮೆನಿಪ್ಪಾ ನಾಡು ಚೆಲ್ವಾಯ್ತು” ಎಂಬ ವ್ಯಾಕದಲ್ಲಿ ತನ್ನೆಲ್ಲ ನಾಡ ಪ್ರೇಮವನ್ನು ಹಿಡಿದಿಟ್ಟಿದ್ದಾನೆ. ೧೭ನೇ ಶತಮಾನದ ಗೋವಿಂದ ವೈದ್ಯ ತನ್ನ `ಕಂಠೀರವ ನರಸಿಂಹರಾಜ ವಿಜಯ’ ದಲ್ಲಿ ಕನ್ನಡ ನಾಡನ್ನು ಅಷ್ಟೇ ಭಾವುಕವಾಗಿ ಕೊಂಡಾಡಿದ್ದಾನೆ. (“ಜಾತಿಸಂಕರವಿಲ್ಲ ಜಡದೇಹಿಗಳಿಲ್ಲ ನೀತಿ ಹೀನರು ಚೋರರಿಲ್ಲ ಘಾತುಕರಿಲ್ಲ ದುರ್ಜನರಿಲ್ಲ ಕರ್ನಾಟಕ ರೀತಿಯನೆಂತು ಬಣ್ಣಿಪೆನು”). ನೃಪತುಂಗನನ್ನು ಅನುಸರಿಸಿದ ನಂಜುಂಡ ಕವಿಯ (೧೬ನೇ ಶತಮಾನ) “ಕಾವೇರಿಯಿಂದ ಗೋದಾವರಿವರೆಗೆಮಿರ್ದಾ ವಸುಧಾತಳವಳಯ ಭಾವಿಸೆ ಕರ್ನಾಟಕ ಜನಪದವನು ಆವನೋಲಿದು ಬಣ್ಣಪನು” ಎಂದಿದ್ದಾನೆ. ಈ ಸುಂದರ ಕರ್ನಾಟಕದ ಚೆಲುವನ್ನು ಕವಿಗಳು ತಮ್ಮ ಕಾವ್ಯಗಳಲ್ಲಿ ಹಿಡಿದಿಡಲು ಯತ್ನಿಸಿದ್ದಾರೆ. ಹರಿಹರನಿಗೆ ಕರ್ನಾಟಕ, ಹಂಪೆ ಎಂದರೆ ತೀವ್ರ ಪ್ರೇಮ. ಅವನ ಪ್ರಕಾರ ಶಿವನ ತಪಸ್ಸು, ಕಾಮದಹನದ ಘಟನೆಗಳು ನಡೆದುದು ದೂರದ ಹಿಮಾಲಯದಲ್ಲಲ್ಲ; ಇಲ್ಲೇ, ಹಂಪೆಯಲ್ಲಿ, ಜನ ಸಾಮಾನ್ಯರ ಭಾಷೆಯಾದ ಕನ್ನಡವನ್ನು ವಚನಗಳಿಗೆ ಬಳಸಿ ಅದನ್ನು ದೇವ ಭಾಷೆಯ ಮಟ್ಟಕ್ಕೆ ಏರಿಸಿದ ಕೀರ್ತಿ ವಚನಕಾರರಾದರೆ (ಈ ಮಾತು ಶಿ. ಶಿ. ಬಸವನಾಳರದು), ಕನ್ನಡವು ಶೂದ್ರರ ಭಾಷೆಯಾದ ಕಾರಣ ಅದು ಪೂಜಾಸಮಯದಲ್ಲಿ ಬಳಕೆಯಾಗಲು ಅನರ್ಹವೆಂಬ ಭಾವನೆ ವೈದಿಕರಲ್ಲಿ ದಟ್ಟವಾಗಿದ್ದ ಕಾಲದಲ್ಲಿ ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಿ ಅವನ್ನು ಪೂಜಾಕಾಲದಲ್ಲೂ ಬಳಸಿದ ಕೀರ್ತಿ ಶ್ರೀಪಾದರಾಯರದು ಮತ್ತು ಮುಂದಿನ ಹರಿದಾಸರದು. ಸುಲಿದ ಬಾಳೆಯ eoಓ;ಣ್ಣಿನಂತೆ, ಸಿಬುರು ತೆಗೆದ ಕಬ್ಬಿನಂತೆ, ಕಾದು ತಂಪಾದ ಹಾಲಿನಂತೆ ಮಧುರವಾಗಿರುವ ಕನ್ನಡವಿರುವಾಗ ಸಂಸ್ಕೃತ ಏಕೆ ಎಂದು ತನ್ನ ಭಾಷಾ ಪ್ರೇಮವನ್ನು ಮೆರೆದ ಮಹಾಲಿಂಗರಂಗ ಕವಿಯನ್ನು ಮರೆಯಲು ಸಾಧ್ಯವೇ? ಹತ್ತನೆಯ ಶತಮಾನದ ರಾಷ್ಟ್ರಕೂಟ ಚಕ್ರವರ್ತಿ ಮೂರನೆಯ ಕೃಷ್ಣನು ಮಧ್ಯಪ್ರದೇಶವನ್ನು ಗೆದ್ದಾಗ ಅಲ್ಲಿ ಜೂರಾ ಎಂಬಲ್ಲಿ ಕನ್ನಡ ಶಾಸನವನ್ನು ಹಾಕಿಸಿ ತನ್ನ ಭಾಷಾ ಪ್ರೇಮವನ್ನು ಮೆರೆದಿದ್ದಾನೆ. ಗುಜರಾತಿನ ಚಾಲುಕ್ಯರು ಮೂಲತಃ ಕರ್ನಾಟಕದವರು. ಅವರು ಗುಜರಾತಿನಲ್ಲಿ ಹೊರಡಿಸಿದ ತಾಮ್ರಪಟಗಳಿಗೆ ಕನ್ನಡದಲ್ಲೇ ರುಜುಹಾಕುತ್ತಿದ್ದರು. ನಮ್ಮ ಹಿಂದಿನ ಚಕ್ರವರ್ತಿಗಳಿಗೆ ಮತ್ತು ಕವಿಗಳಿಗೆ ಕೀಳರಿಮೆ ಇರಲಿಲ್ಲ. ಕರ್ನಾಟಕದ ಹೊರಗೆ ಹೋದರೂ, ಅಲ್ಲಿ ತಾವು ಕನ್ನಡಿಗರು ಎಂಬ ಆತ್ಮಾಭಿಮಾನವನ್ನೇ ಮೆರೆದರು. ಇದು ವಾಸ್ತವ, ಇದು ಇತಿಹಾಸ, ನೈಜ ಚರಿತ್ರೆ. ಸ್ವಾಭಿಮಾನವಿಲ್ಲದ ವ್ಯಕ್ತಿ ಮಾತ್ರ ಇತರರನ್ನು ಅನುಕರಿಸುತ್ತಾನೆ. ವ್ಯಕ್ತಿತ್ವವಿಲ್ಲದ ವ್ಯಕ್ತಿ ಮಾತ್ರ ಗೋಸುಂಬೆಯಂತೆ ಬಣ್ಣ ಬದಲಾಯಿಸುತ್ತಾನೆ. ಹಿಂದಿನ ಕನ್ನಡ ಜನ ಗೋಸುಂಬೆಗಳಾಗಿರಲಿಲ್ಲ. ಅವರು ಸ್ವಾಭಿಮಾನಿಗಳೂ ಸಮನ್ವಯ ದೃಷ್ಟಿಯವರೂ ಆಗಿದ್ದು ವಿಶಿಷ್ಟವಾದ ಕರ್ನಾಟಕ ಸಂಸ್ಕೃತಿಯೊಂದನ್ನು ಬೆಳೆಸಲು ಸಮರ್ಥರಾದರು.

ಆಲೂರು ವೆಂಕಟರಾಯರ ಮಾತುಗಳು

೧೯೧೭ರಲ್ಲಿ ಹೊರಬಂದ `ಕರ್ನಾಟಕ ಗತವೈಭವ’ ಎಂಬ ಕೃತಿಯಲ್ಲಿ ಆಲೂರು ವೆಂಕಟರಾಯರು ಹೇಳುತ್ತಾರೆ: “ನಮ್ಮ ಆಶಾವೃಕ್ಷವನ್ನು ಕೊಳೆಯಿಸಿಬಿಡುವಂಥ ಹುಳುಗಳನ್ನು ಕೊಲ್ಲಲು ಇತಿಹಾಸವೇ ಮದ್ದು” ಅವರ ಕಾಲದಲ್ಲಿ ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಮತ್ತು ದೂರದ ಬಂಗಾಳದಲ್ಲಿ ಜನತೆ ತಮ್ಮ ಸಂಸ್ಕೃತಿ ಬಗ್ಗೆ ಎಚ್ಚೆತ್ತುಕೊಳ್ಳಲು ಅವರು ಇತಿಹಾಸದ ಬಗ್ಗೆ ಅರಿವು ಹೊಂದಿದ್ದುದೇ ಕಾರಣವೆಂಬುದನ್ನು ವೆಂಕಟರಾಯರು ಗುರುತಿಸಿದರು. ಅವರು ಹೇಳಿದ್ದರು : “ತಮ್ಮ ದೇಶದೊಡನೆ ತಾದಾತ್ಮ ಹೊಂದದ ಮುಖಂಡರಿರುವ ಪ್ರಾಂತವೆಂದರೆ ಕರ್ನಾಟಕ ಒಂದೇ.” ನೆರೆರಾಜ್ಯಗಳ ಜನತೆ ಮತ್ತು ಮುಖಂಡರು ತಮ್ಮ ಚರಿತ್ರೆಯ ಬಗ್ಗೆ ಹೆಮ್ಮೆಯುಳ್ಳವರಾಗಿದ್ದಾರೆ; ಮತ್ತು ಅವರ ಚರಿತ್ರೆಯನ್ನು ಉಜ್ವಲವಾಗಿ ವೈಭವಿಸಿಕೊಂಡು ಅದೇ ನಿಜವೆಂದು ನಂಬುತ್ತಿರುವಾಗ, ಕರ್ನಾಟಕದ ನಿಜವಾದ ಚರಿತ್ರೆ ಕನ್ನಡಿಗರಿಗೆ ಕಟ್ಟುಕತೆಯಂತೆ ಕಾದಂಬರಿಯಂತೆ ಕಾಣಿಸುವುದನ್ನು ಕಂಡ ಅವರು ಮನ ಕರಗಿ ಮಾತನಾಡಿದ್ದಾರೆ. ಅವರು ಸಾರಿ ಹೇಳಿದ್ದಾರೆ: “ನಾವು ನಿಮ್ಮಲ್ಲಿ ಕಡ್ಡೀ ಕೊಟ್ಟು ಸಾರಿ ಹೇಳುವುದೇನೆಂದರೆ ನಮ್ಮ ಕರ್ನಾಟಕವು ಮೃತರಾಷ್ಟ್ರವಲ್ಲ. ಅದು ಜೀವಂತರಾಷ್ಟ್ರವು; ಅಷ್ಟೇಕೆ, ಅದೊಂದು ಪ್ರತಿಭಾಸಂಪನ್ನ ರಾಷ್ಟ್ರವು”. ಎಂಬತ್ತು ವರ್ಷಗಳಿಗಿಂತ ಹಿಂದೆ ಆ ಕನ್ನಡನಾಡಿನ ಸುಪುತ್ರರು ಆಡಿದ ಮಾತು ಇಂದೂ ಪರಿಭಾವನೆಗೆ ಯೋಗ್ಯ.

ನೋಡಿ: –
[http://vishvakannada.com/node/192|ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೧]
[http://vishvakannada.com/node/195|ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೨]
[http://vishvakannada.com/node/196|ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೩]
[http://vishvakannada.com/node/220|ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೫]

Leave a Reply