ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ- ಭಾಗ-೩

ಡಾ| ಎಂ. ಚಿದಾನಂದ ಮೂರ್ತಿ

ಕ್ಷಾತ್ರ ಪರಂಪರೆ : ಪಂಪ
ಈ ಕ್ಷಾತ್ರ ಪರಂಪರೆಗೆ ನಮ್ಮ ಹಲವು ಕವಿಗಳು ಸೇರಿದ್ದಾರೆ. ಹತ್ತನೆಯ ಶತಮಾನದಲ್ಲಿ ಪಂಪನು ಸ್ವಂತಃ ಶೂರನೂ ಕವಿಯೂ ಆಗಿದ್ದ. ಕೈಯಲ್ಲಿ ಲೇಖನಿ ಹಿಡಿದು ಕಾವ್ಯಗಳನ್ನು ಬರೆದಂತೆಯೇ ಖಡ್ಗವನ್ನು ಹಿಡಿದು ಯುದ್ಧವನ್ನೂ ಮಾಡುತ್ತಿದ್ದ. ತಾನು ಕಲಿಯೂ ಹೌದು, ಕವಿಯೂ ಹೌದು ಎಂದು ಅವನೇ ಹೇಳಿಕೊಂಡಿದ್ದಾನೆ. ಅವನು ತನ್ನ ಪಂಪಭಾರತದಲ್ಲಿ ಪ್ರಸಿದ್ಧವಾದ ಮಹಾಭಾರತದ ಕತೆಯನ್ನೇ ಹೇಳಿದ್ದರೂ ಅದರಲ್ಲಿ ಕೃಷ್ಣನಾಗಲಿ ಧರ್ಮರಾಯನಾಗಲಿ ಯಾರೂ ಮೂಖ್ಯರಲ್ಲ. ತನ್ನ ಕಥಾನಾಯಕ ಅರ್ಜುನನೆಂದು ಹೇಳಿಕೊಂಡಿದ್ದರೂ ಪಂಪಭಾರತದಲ್ಲಿ ಅರ್ಜುನನಿಗಿಂತ ದುರ್ಯೋಧನನ ಒಂದು ಪಾತ್ರವಾಗಿ ಮೇಲೆದ್ದು ಕಾಣುತ್ತಾನೆ. ದುರ್ಯೋಧನನ ವಿಷಯದಲ್ಲಿ ಓದುಗರಿಗೆ ಪ್ರೀತಿ, ಅಭಿಮಾನಗಳು ಮೂಡುವಂತೆ ಕವಿ ಚಿತ್ರಿಸಿದ್ದಾನೆ. ಮೇಲ್ನೋಟಕ್ಕೆ ಇದು ವಿರೋಧದಂತೆ ಕಂಡರೂ ಅದು ವಿರೋಧದ ತೋರಿಕೆಯೇ ಹೊರತು ವಾಸ್ತವ ವಿರೋಧವಲ್ಲ. ಪಂಪ ಇದ್ದುದು ಕ್ಷಾತ್ರಯುಗದಲ್ಲಿ; ಅವನು ಕರ್ನಾಟಕದ ಸಂಸ್ಕೃತಿಯ ಸಾರವನ್ನು ತನ್ನ ಕೃತಿಗಳಲ್ಲಿ ಹಿಡಿದಿಡುವ ಯತ್ನವನ್ನು ಮಾಡಿದ. ತನ್ನ ಕಾಲದ ಪ್ರಮುಖ ಮೌಲ್ಯಗಳನ್ನು ಪ್ರತಿಪಾದಿಸುವುದರ ಮೂಲಕ ಅಂದಿನ ಯುಗಶಕ್ತಿಯನ್ನು ತನ್ನ ಕಾಶ್ಯದಲ್ಲಿ ಹಿಡಿದಿಟ್ಟ. ಕ್ಷಾತ್ರಯುಗದ ಶೌರ್‍ಯ ಸ್ವಾಭಿಮಾನಗಳಿಗೆ ದುರ್ಯೋಧನ ಒಳ್ಳೆಯ ಪ್ರತೀಕ. ತನಗೆ ಎಲ್ಲರ ಮುಂದೆ ದ್ರೌಪದಿ ಅವಮಾನ ಮಾಡಿದ್ದನ್ನು ನುಂಗಿಕೊಳ್ಳಲಾಗಲಿಲ್ಲ. ಯಾರು ಏನೇ ಹೇಳಲಿ, ಹಠ ಹಿಡಿದು ತನ್ನ ಚಲವನ್ನು ಪಾಂಡವರ ವಿರುದ್ಧವಾಗಿ ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿದ. ತನ್ನ ಬಂಧು ಬಾಂಧವರು, ಅಪಾರ ಸೇನೆ ಎಲ್ಲವನ್ನೂ ಆ ಚಲಕ್ಕಾಗಿ ಕಳೆದುಕೊಂಡ; ಕೊನೆಗೆ ತನ್ನನ್ನೇ ನೀಗಿಕೊಂಡ. ಪಂಪ ಅದಕ್ಕಾಗಿಯೇ “ಚಲದೊಳ್ ದುರ್ಯೋಧನಂ” ಎಂದು ಹೊಗಳಿ ತನ್ನ ಪ್ರಶಸ್ತಿ ಪದ್ಯದಲ್ಲಿ ಆ ಪಾತ್ರಕ್ಕೆ ಮೊದಲಮಣೆಯನ್ನು ಕೊಟ್ಟಿದ್ದಾನೆ. ಪಂಪನ ಜೊತೆ ರನ್ನನೂ ತನ್ನ ಧ್ವನಿ ಸೇರಿಸಿದ್ದಾನೆ. ತನ್ನ ಗದಾಯುದ್ಧದಲ್ಲಿ ದುರ್ಯೋಧನನನ್ನು `ಮಹಾನುಭಾವ’ನೆಂದು `ಅಭಿಮಾನಧನ’ನೆಂದೂ ರನ್ನ ಹೊಗಳಿದ್ದಾನೆ.

ಸ್ವಾಭಿಮಾನ : ವಚನಕಾರರು

ಇತರ ಮತ್ತು ಇಂತಹ ಹಲವು ಉದಾಹರಣೆಗಳ ಸಾರಾಂಶ- ಕರ್ನಾಟಕವು ಸ್ವಾಭಿಮಾನವನ್ನು ಒಂದು ಶ್ರೇಷ್ಠ ಮೌಲ್ಯವೆಂಬಂತೆ ಕಾಪಾಡಿಕೊಂಡು ಬಂದಿತು. ಈ ಸ್ವಾಭಿಮಾನವು ವಚನಕಾರರ ಯುಗದಲ್ಲಿ (ಹನ್ನೆರಡನೆಯ ಶತಮಾನದಲ್ಲಿ) ಒಂದು ಸಾಮಾಜಿಕ ಚಳವಳಿಯ ರೂಪದಲ್ಲಿಯೂ ವ್ಯಕ್ತವಾಗಿದೆ. ಸಾಮಾಜಿಕ, ಧಾರ್ಮಿಕ, ಆರ್ಥಿಕ ಅಸಮಾನತೆಗಳ ವಿರುದ್ಧವಾಗಿ ಬಂಡೆದ್ದ ಅವರು ರಾಜತ್ವವನ್ನು ಧಿಕ್ಕರಿಸಿ ನಿಂತು ವ್ಯಕ್ತಿ ಸ್ವಾತಂತ್ರ ವನ್ನು ಎತ್ತಿ ಹಿಡಿದರು. ಯಾವುದೇ ಜಾತಿಯಲ್ಲಿ ಹುಟ್ಟಿದರೂ ಅವನು ಬೆಳೆದು ವ್ಯಕ್ತಿತ್ವವನ್ನು ಸಾಧಿಸಿಕೊಳ್ಳಲು ಅವನ ಜಾತಿ ಅಡ್ಡಿಯಾಗದು ಎಂಬ ತತ್ವವನ್ನು ಪ್ರತಿಪಾದಿಸಿದರು. ಅದರಲ್ಲೂ ಸಮಾಜದ ಕೆಳವರ್ಗದ ಜನರಿಗೆ ಆತ್ಮಾಭಿಮಾನವನ್ನೂ, ಸ್ವಾವಲಂಬನೆಯನ್ನೂ ತಂದೂ ಕೊಟ್ಟುದು ಆ ಚಳವಳಿಯ ದೊಡ್ಡ ಸಿದ್ಧಿಗಳಲ್ಲಿ ಒಂದು. ಇದಕ್ಕೆ ಒಂದು ಐತಿಹಾಸಿಕ ನಿದರ್ಶನವೂ ಉಂಟು. ದಲಿತವರ್ಗದ ಜನಕ್ಕೆ ಸಾಮಾನ್ಯವಾಗಿ ಊರೊಳಗೆ ಪ್ರವೇಶವಿರಲಿಲ್ಲ. ಅವರು ಬಂದರೂ ಕೈಯಲ್ಲಿ ಕೋಲು ಹಿಡಿದು ಕುಟ್ಟುತ್ತ `ಸಂಬೋಳಿ’ ಎಂದು ಮತ್ತೆ ಮತ್ತೆ ಕೂಗುತ್ತ ಜನರು ತಮ್ಮಿಂದ ದೂರವಿರಲಿ ಎಂದು ಎಚ್ಚರಿಸುತ್ತ ಬರುತ್ತಿದ್ದರು. ಈ ಪದ್ಧತಿ ಬಹುಕಾಲದಿಂದ ನಡೆದು ಬಂದುದರಿಂದ ಎಲ್ಲ ದಲಿತರೂ ಅದು ತಮ್ಮ ಜಾತಿಯ ಪದ್ಧತಿ, ತಮಗೆ ಸ್ವಾಭಾವಿಕವಾಗಿ ಅನ್ವಯವಾದುದು ಎಂದೇ ಭಾವಿಸುತ್ತಾ ಬಂದಿದ್ದರು. ವಚನಕಾರರು ದಲಿತರ ಸುಧಾರಣೆಗೆ ಯತ್ನಿಸಿ ಅವರ ಬಳಿ ತಾವೇ ಹೋಗಿ ಅವರನ್ನು ತಮ್ಮ ಸಮೀಪ ಬರಮಾಡಿಕೊಂಡು ಸಮಾನತೆಯ ತತ್ವದ ಮೇಲೆ ಅವರ ಜೊತೆ ವ್ಯವಹರಿಸಲು ಆರಂಭಿಸಿದುದರ ಪರಿಣಾಮವಾಗಿ ಅವರಲ್ಲಿ ಹಲವರು ತಮ್ಮ ಹಕ್ಕುಗಳ ಬಗ್ಗೆ ಪ್ರಶ್ನಿಸಲಾರಂಭಿಸಿದರು. ಸಂಬೋಳಿ ನಾಗಿದೇವ ಎಂಬ ದಲಿತ ದೈರ್ಯಮಾಡಿ, ಕಲ್ಯಾಣ ಪಟ್ಟಣದಲ್ಲಿ ಸಂಚರಿಸುವಾಗ `ಸಂಬೋಳಿ’ ಎಂದು ಕೂಗುವುದನ್ನೇ ನಿಲ್ಲಿಸಿದ. ಈ ಚಿಕ್ಕ ಐತಿಹಾಸಿಕ ಘಟನೆ ಮೇಲ್ನೋಟಕ್ಕೆ ಕ್ಷುದ್ರವೆಂದೂ ಗಮನಾರ್ಹವಲ್ಲವೆಂದೂ ತೋರಿದರೂ, ಅದು ದಲಿತವರ್ಗದಲ್ಲಿ ಉಂಟಾಗಿದ್ದ ಒಂದು ವಿನೂತನ ಹೊಸ ಪ್ರಜ್ಞೆಯನ್ನೂ ಸ್ವಾಭಿಮಾನವನ್ನೂ ತೋರುತ್ತದೆ. ಈ ಬಗೆಯ ಇನ್ನೂ ಹಲವು ಉದಾಹರಣೆಗಳು ಉಂಟು.

ಇದು ಚರಿತ್ರೆ : ಕರ್ನಾಟಕ ಸಂಸ್ಕೃತಿಯ ಪ್ರಮುಖಲಕ್ಷಣಗಳಲ್ಲಿ ಸ್ವಾಭಿಮಾನ ಮುಖ್ಯವಾದುದೆಂಬುದನ್ನು ಸಮರ್ಥಿಸಲು ಇನ್ನೂ ಹಲವು ಸಾಕ್ಷಿಗಳನ್ನು ಒದಗಿಸಬಹುದು. ಸ್ವಾಭಿಮಾನವು ಅಹಂಕಾರವಾಗದೆ, ಬೆಳವಣಿಗೆಗೆ ಅವಕಾಶ ಕೊಡುವ ಗುಣವಾಗಿ ಪರಿವರ್ತನೆ ಹೊಂದಲು ಸಮನ್ವಯ ಎನ್ನುವ ಮೌಲ್ಯ ಸಹಾಯಕವಾಯಿತು.

ಸಮನ್ವಯ

ಸ್ವಾಭಿಮಾನವನ್ನೂ ಸ್ವಂತಿಕೆಯನ್ನೂ ಆತ್ಮವಿಶ್ವಾಸವನ್ನೂ ಬೆಳೆಸಿಕೊಂಡ ಕರ್ನಾಟಕ ಸಂಸ್ಕೃತಿಯು ಸಮನ್ವಯವನ್ನು ಸಾಧಿಸಿ ತೋರಿಸಿರುವ ರೀತಿ ಆಶ್ಚರ್ಯವನ್ನು ಹುಟ್ಟಿಸುತ್ತದೆ. ಆರೋಗ್ಯಶಾಲಿ ಮನುಷ್ಯ ಆಹಾರ ಪಾನೀಯಗಳನ್ನು ತೆಗೆದುಕೊಂಡು ಅವು ತನ್ನ ಭಾಗವಾಗುವಂತೆ ಅರಗಿಸಿಕೊಂಡು ಅವು ತನ್ನ ಬೆಳವಣಿಗೆಗೆ ಸಹಾಯಕವಾಗುವಂತೆ ಮಾಡಿಕೊಳ್ಳುವ ರೀತಿಯಲ್ಲಿ ಸತ್ವಶಾಲಿಯಾದ ಯಾವುದೇ ಸಂಸ್ಕೃತಿಯು ತನಗಿಂತ ಹೊರಗಿನ ಅಂಶಗಳನ್ನು ಸ್ವೀಕರಿಸಿದರೂ ಅವೆಲ್ಲವನ್ನೂ ಅರಗಿಸಿಕೊಂಡು ತನ್ನ ವಿಕಾಸಕ್ಕೆ ಅಗತ್ಯವಾದುದನ್ನು ತೆಗೆದುಕೊಂಡು ಉಳಿದುವನ್ನು ತಿರಸ್ಕರಿಸುತ್ತದೆ. ಈ ಕ್ರಿಯೆ, ಈ ಸಾಂಸ್ಕೃತಿಕ ಸಮನ್ವಯವು ಕರ್ನಾಟಕದಲ್ಲಿ ಕಂಡುಬಂದಿರುವ ರೀತಿಯನ್ನು ನೋಡೋಣ.

ಭಾಷೆ-ಸಾಹಿತ್ಯ

ಕನ್ನಡವು ಸಂಸ್ಕೃತ, ಹಿಂದಿ, ಮರಾಠಿ, ಗುಜರಾತಿಗಳ ಆರ್‍ಯನ್ ಭಾಷಾವರ್ಗಕ್ಕಿಂತ ಭಿನ್ನವಾದ ದ್ರಾವಿಡ ಭಾಷಾವಂಶಕ್ಕೆ ಸೇರಿದೆ. ಅದಕ್ಕೆ ತನ್ನದೇ ಆದ ವೈಶಿಷ್ಟ ಗಳಿವೆ. ಆದರೂ ಕನ್ನಡ ಭಾಷೆಯು ಎಲ್ಲ ಭಾಷೆಗಳಿಂದಲೂ ತನಗೆ ಅಗತ್ಯವಾದ ಪದಗಳನ್ನು ಸ್ವೀಕರಿಸುತ್ತ ಬೆಳೆದಿದೆ. ಸಂಸ್ಕೃತದಿಂದ ಯಥೇಚ್ಛವಾಗಿ ಪದಗಳನ್ನು ಸ್ವೀಕರಿಸಿದರೂ ಅದು ಬಂದು ಕನ್ನಡದ ದೇಸಿ ಪದಗಳನ್ನು ಹಿಂದಕ್ಕೆ ಹಾಕಲಿಲ್ಲ. ಕನ್ನಡ ಭಾಷೆ ತನ್ನ ಸತ್ವವನ್ನು ಕಳೆದುಕೊಳ್ಳುವಷ್ಟು ಸಂಸ್ಕೃತಕ್ಕೆ ಮಾರುಹೋಗಲಿಲ್ಲ. ಸಂಸ್ಕೃತ ಪದಗಳು ಕನ್ನಡದ ಜಾಯಮಾನಕ್ಕೆ ಹೊಂದಿಕೊಂಡೇ ಬಳಕೆಯಾಗಿವೆ. ಅಲ್ಲಿಂದಲೂ ಪ್ರಾಕೃತದಿಂದಲೂ ಬಂದ ತದ್ಭವಗಳಂತೂ ಕನ್ನಡ ದೇಶ್ಯ ಪದಗಳೇ ಎನ್ನುವಷ್ಟು ಕನ್ನಡ ನುಡಿಯೊಡನೆ ಸಮರಸವಾಗಿ ಬೆರತವು. ಹಿಂದಿನ ಕನ್ನಡ ಸಾಹಿತ್ಯವೂ ಅಷ್ಟೇ; ಮಡಿವಂತಿಕೆಯನ್ನು ಇಟ್ಟುಕೊಳ್ಳದೆ, ಹಾಗೆಂದು ಉಳಿದ ಸಾಹಿತ್ಯಗಳ ಪ್ರಭಾವಕ್ಕೆ ತಾನು ಸಂಪೂರ್ಣವಾಗಿ ಶರಣಾಗದೆ, ಎಲ್ಲ ಸಾಹಿತ್ಯಗಳಿಂದ ಪ್ರೇರಣೆ ಪ್ರಚೋದನೆಗಳನ್ನು ಸ್ವಾಗತಿಸಿ ಸ್ವತಂತ್ರ ಸಾಹಿತ್ಯವನ್ನು ಕನ್ನಡವು ಬೆಳೆಸಿಕೊಂಡಿತು. ಚಂಪೂ, ವಚನ, ರಗಳೆ, ಷಟ್ಟದಿ, ಸಾಂಗತ್ಯ ಈ ಯಾವ ಪ್ರಕಾರಗಳನ್ನು ತೆಗೆದುಕೊಂಡರು ಕನ್ನಡವು ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿದೆ. ಪಂಪ, ರನ್ನ, ಕುಮಾರವ್ಯಾಸರು ಮಹಾಭಾರತದ ವಸ್ತುವನ್ನು ಆರಿಸಿಕೊಂಡಿದ್ದರೂ ಅವು ಕನ್ನಡದ ನೆಲಕ್ಕೆ ಹೊಂದಿಕೊಂಡಿವೆ. ಕಥೆ ಹಲವು ಶತಮಾನಗಳಷ್ಟು ಹಿಂದಿನದಾದರೂ ಆ ಕತೆಯ ಮೂಲಕ ತಮ್ಮ ಸಮಾಕಾಲೀನ ಕ್ಷೇತ್ರದ ವಾತವರಣವನ್ನು ಅಲ್ಲಿ ಮೂಡಿಸಿದ್ದಾರೆ. ವಚನ ಸಾಹಿತ್ಯವಂತೂ ಕನ್ನಡದ್ದೇ ಎಂಬಷ್ಟು ಸ್ವಂತಿಕೆಯನ್ನು ಹೊಂದಿರುವ ಸಾಹಿತ್ಯವಾಗಿದ್ದು ಅದು ವಿಶ್ವಸಾಹಿತ್ಯಕ್ಕೆ ಕನ್ನಡವು ಕೊಟ್ಟ ಅತ್ಯಂತ ಮಹತ್ವದ ಕಾಣಿಕೆಯಾಗಿದೆ. ಸ್ವಂತ ಅನುಭವ, ಸಾಮಾಜಿಕ ಕಳಕಳಿಗಳ ದೃಷ್ಟಿಯಿಂದ ವಚನಸಾಹಿತ್ಯದ ಜೊತೆ ಹೋಲಿಸಲು ಭಾರತದಲ್ಲಿ ಮತ್ತೊಂದು ಉದಾಹರಣೆ ನಿಶ್ಚಿತವಾಗಿಯೂ ದೊರಕುವುದಿಲ್ಲ. ಭಕ್ತಿ, ಭಾವಗಳಲ್ಲಿ ಪುರಂದರದಾಸರ ಕೀರ್ತನೆಗಳಿಗೆ ತ್ಯಾಗರಾಜರ ತೆಲುಗು ಕೃತಿಗಳಿಗೆ ಹೋಲಿಕೆಯಾಗಬಹುದು.

`ಕರ್ನಾಟಕ ಸಂಗೀತ’

ದಕ್ಷಿಣ ಭಾರತದ ದಕ್ಷಿಣಾದಿ ಸಂಗೀತ ಪರಂಪರೆಗೆ `ಕರ್ನಾಟಕ ಸಂಗೀತ’ ವೆಂಬ ಹೆಸರೂ ಇದೆ. ಇದಕ್ಕೆ ಕಾರಣ, ಆ ಸಂಗೀತ ಪರಂಪರೆಯು ಹುಟ್ಟಿ ಬೆಳೆದುದು ಕರ್ನಾಟಕದಲ್ಲಿ; ಶ್ರೇಷ್ಠ ವಾಗ್ಗೇಯಕಾರರಿದ್ದುದು ಕರ್ನಾಟಕದಲ್ಲಿ; ಸಂಗೀತಶಾಸ್ತ್ರ ಗ್ರಂಥಗಳನ್ನು ರಚಿಸಿದವರಿದ್ದುದು ಕರ್ನಾಟಕದಲ್ಲಿ. ನಾನ್ಯದೇವ, ಸೋಮೇಶ್ವರ ಚಕ್ರವ;ರ್ತಿ, ಕಲ್ಲಿನಾಥ, ಪಂಡರೀಕ ವಿಠ್ಠಲ, ಶಾರ್ಙ್ಗದೇವ ಇವರ ಹೆಸರುಗಳು ಕರ್ನಾಟಕ ಸಂಗೀತದ ಚರಿತ್ರೆಯಲ್ಲಿ ಬಹು ಮುಖ್ಯವಾದುವು. ನಿಜಗುಣ ಸಿವಯೋಗಿಗಳು ಸಂಗೀತ ಶಾಸ್ತ್ರಕಾರರೂ ಅಂತೆಯೇ ಉನ್ನತಮಟ್ಟದ ವಾಗ್ಗೇಯಕಾರ್‍ಹ;ರೂ ಆಗಿದ್ದಾರೆ. `ಕರ್ನಾಟಕ ಸಂಗೀತ ಪಿತಾಮಹ’ ಪುರಂದರದಾಸರ ಹೆಸರು ಕರ್ನಾಟಕ ಸಂಗೀತದ ಚರಿತ್ರೆಯಲ್ಲಿ ಆಗ್ರ ಉಲ್ಲೇಖಾರ್ಹ.

ತಮಿಳಿನಲ್ಲಿ `ಕರ್ನಾಟಕ’ ಪದಕ್ಕೆ ಸಂಪ್ರದಾಯ ಮತ್ತು ಶುದ್ಧ ಎಂಬರ್ಥಗಳೂ ಇವೆ. ದಕ್ಷಿಣಾದಿ ಸಂಗೀತವೂ ಸಂಗೀತಶಾಸ್ತ್ರವೂ ಬೆಳೆದು ಎಂದು ವ್ಯವಸ್ಥಿತ ಆಕಾರವನ್ನು ಪಡೆದುದು ಕರ್ನಾಟಕದಲ್ಲಿ ಎಂಬುದು ಬಹುತೇಕ ಆಧುನಿಕ ಸಂಗೀತಶಾಸ್ತ್ರಜ್ಞರೆಲ್ಲರೂ ಒಕ್ಕೊರಲಿನಿಂದ ಒಪ್ಪಿಕೊಂಡಿರುವ ಮಾತು. ಕರ್ನಾಟಕದ ಹಿಂದಿನ ಕಾವ್ಯಗಳನ್ನೂ ಶಾಸನಗಳನ್ನೂ ನೋಡಿದರೆ ಕನ್ನಡ ಜನ ಸಂಗೀತ ಕಲೆಯನ್ನು ಸರ್ವಾಂಗೀಣವಾಗಿ ಬೆಳೆಸಿದ್ದ ಚಿತ್ರವು ದೊರಕುತ್ತದೆ. ಒಂದೊಂದು ಮನೆಯೂ ಮನೋಹರ ಸಂಗೀತದಿಂದ ನಿನದಿಸುತ್ತಿತ್ತು ಎಂಬಂತಹ ಮಾತುಗಳು ತಾಳಗುಂದ ಮತ್ತು ಇತರ ಕಡೆಗಳಲ್ಲಿ ದೊರಕಿರುವ ನೂರಾರು ಶಾಸನಗಳಲ್ಲಿ ದೊರಕುತ್ತವೆ. ಭಾರತದ ಎಲ್ಲ ಕಡೆಯ ಸಂಗೀತ ಪರಂಪರೆಗಳ ಸಾರವನ್ನು ತೆಗೆದುಕೊಂಡು ತನ್ನದೇ ಆದ ಕರ್ನಾಟಕ ಸಂಗೀತ ಶೈಲಿಯನ್ನು ರೂಪಿಸಿ ಗಾನಪ್ರಪಂಚಕ್ಕೆ ತನ್ನ ಆಪೂರ್ವ ಕಾಣಿಕೆಯಾಗಿ ಕೊಟ್ಟ ಹೆಗ್ಗಳಿಕೆ ಕರ್ನಾಟಕದ್ದು.

ನೃತ್ಯ ಮತ್ತು ಚಿತ್ರಕಲೆ

ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಿಗೆ ಅವುಗಳದೇ ಆದ ದೇಶಿಯ ನೃತ್ಯ ಶೈಲಿಗಳಿರುವಂತೆ ಕರ್ನಾಟಕಕ್ಕೆ ಇದೆಯೇ, ಇತ್ತೇ ಎಂಬ ಪ್ರಶ್ನೆಯನ್ನು ಹಲವರು ತ್ತಿ ಅಂತಹ ವಿಶಿಷ್ಟ ಶೈಲಿ ಕರ್ನಾಟಕಕ್ಕೆ ಇರಲಿಲ್ಲವೆಂದು ವಾದಿಸಿದ್ದಾರೆ. ಆದರೆ ಈ ವಿಷಯದಲ್ಲಿ ಈಚೆಗೆ ಸಂಶೋಧನೆ ನಡೆಸಿರುವ ಡಾ. ಚೂಡಾಮಣಿ ನಂದಗೋಪಾಲ್ ಅವರು ಕರ್ನಾಟಕಕ್ಕೆ ತನ್ನದೇ ಆದ ವಿಶಿಷ್ಟ ನೃತ್ಯ ಪರಂಪರೆಯಿದ್ದಿತೆಂದು ಐಹೊಳೆ, ಬಾದಾಮಿ, ಪಟ್ಟದಕಲ್ಲು, ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳ ಶಿಲ್ಪಗಳ ಆಧಾರದಿಂದಲೂ ಕನ್ನಡ ಕಾವ್ಯ ಶಾಸನಗಳಲ್ಲಿ ಬರುವ ನರ್ತನವರ್ಣನೆಗಳ ಆಧಾರದಿಂದಲೂ ಸಮರ್ಥಿಸಿದ್ದಾರೆ. ಸಾಂಗತ್ಯ ಕವಿ ರತ್ನಾಕರವರ್ಣಿಯು ತನ್ನ `ಭರತೇಶ ವೈಭವ’ ಕಾವ್ಯದಲ್ಲಿ ನರ್ತನಶಾಲೆಯ ವರ್ಣನೆಯನ್ನಲ್ಲದೆ ದಿಕ್ಕನ್ನಿಕಾ ನಾಟ್ಯ, ಜಲಕನ್ನಿಕಾ ನಾಟ್ಯಗಳಂತಹ `ಬ್ಯಾಲೆ’ಗಳನ್ನು ವರ್ಣಿಸಿದ್ದಾನೆ. ಆ ವರ್ಣನೆಗಳ ಆಧಾರದ ಮೇಲೆ ಇಂದಿಗೂ ಹೊಸ ಬ್ಯಾಲೆಗಳನ್ನು ರೂಪಿಸಿರಬಹುದು. ಶಾಂತಲೆ ಒಬ್ಬ ಅದ್ವಿತೀಯ ಅಸಮಾನ ನರ್ತಕಿಯಾಗಿದ್ದಳು. ಬಾದಾಮಿ ತಾಲ್ಲೂಕಿನ ಒಂದು ಶಾಸನದ ಅಚಲದ ಎಂಬ ನರ್ತಕನ ವರ್ಣನೆಯನ್ನು ಮಾಡಿದೆ. ಏಳನೇ ಶತಮಾನದ ಆ ಕನ್ನಡಿಗ ನಟನ ‘ಸಿಂಹನಾದ’ ವನ್ನು ಕೇಳಿದರೆ ಸಾಕು, ಉಳಿದ ನಟರು ತಮ್ಮ ಅಹಂಕಾರವನ್ನು ಉಡುಗಿಸಿಕೊಂಡು ತೆಪ್ಪಗಾಗುತ್ತಿದ್ದರೆಂದೂ ಅವನ ನರ್ತನ ಕಲೆಯ ವಜ್ರಾಘಾತಕ್ಕೆ ಉಳಿದ ನಟರೆಂಬ ಪರ್ವತಗಳು ನೆಲಸಮವಾಗುತ್ತಿದ್ದವೆಂದೂ ವರ್ಣನೆಯಿದೆ. ಚೀರಘಟ್ಟಿ ಎಂಬ ಒಬ್ಬ ಚಿತ್ರ ಗಲಾವಿದ ರಾಷ್ಟ್ರಕೂಟರ ಕಾಲದಲ್ಲಿ ಅಖಿಲ ಭಾರತ ಮಟ್ಟದ ಕೀರ್ತಿಯನ್ನು ಪಡೆದಿದ್ದನಂತೆ. ಅಜಂತಾ ಚಿತ್ರಕಲೆ ವಾಸ್ತವವಾಗಿ ಕರ್ನಾಟಕದ್ದೇ. ಏಳು ಎಂಟನೇಯ ಶತಮಾನಗಳಲ್ಲಿ ಎಲ್ಲೋರ-ಅಜಂತಾಗಳು ಕನ್ನಡ ಮಾತನಾಡುವ ಪ್ರದೇಶಗಳಾಗಿದ್ದವು.

ಶಿಲ್ಪ-ವಾಸ್ತುಶಿಲ್ಪ

ಕರ್ನಾಟಕವು ಉತ್ತರದ ನಾಗರ, ದಕ್ಷಿಣದ ದ್ರಾವಿಡ ಎಂಬ ಎರಡು ವಾಸ್ತುಶಿಲ್ಪ ಕಲೆಗಳ ಸಂಗಮವಾಗಿದ್ದಿತು. ಐಹೊಳೆ, ಪಟ್ಟದಕಲ್ಲುಗಳಲ್ಲಿ ಈ ಎರಡೂ ಶೈಲಿಗಳ ಸಂಗಮವನ್ನು ನೋಡುತ್ತೇವೆ. ಹಾಗೆ ನೋಡಿದರೆ, ಐಹೊಳೆ ಪಟ್ಟದಕಲ್ಲುಗಳು ಭಾರತೀಯ ವಾಸ್ತುಶಿಲ್ಪದ `ಕಾರ್‍ಯಾಗಾರ’ಗಳೆಂದು ಪ್ರಸಿದ್ಧವಾಗಿವೆ. ಅಲ್ಲಿನ ದೇವಾಲಯಗಳ, ಶಿಲ್ಪಗಳ ಜೀವಂತಿಯು ಸಮೃದ್ಧ ಸಾಮಾಜಿಕಜೀವನದ ಲವಲವಿಕೆ ಉತ್ಸಾಹಗಳ ಸಂಕೇತವಾಗಿದೆ. ರಾಯಚೂರು ಜಿಲ್ಲೆಯ ಇಟ್ಟಿಗೆ ಮಹಾದೇವ ದೇವಾಲಯವನ್ನು ಶಾಸನಗಳು `ದೇವಾಲಯಗಳ ಚಕ್ರವರ್ತಿ’ ಎಂದು ವರ್ಣಿಸಿವೆ. ಉತ್ತರ ಕರ್ನಾಟಕದ ಸಾಮಾನ್ಯ ಚಿಕ್ಕ ಹಳ್ಳಿ ಹಳ್ಳಿಗಳಲ್ಲಿಯೂ ಚಾಲುಕ್ಯರ ಕಾಲದ ನೂರಾರು ಸುಂದರ ದೇವಾಲಯಗಳನ್ನು ಕಾಣಬಹುದು.

ಗೊಮ್ಮಟ ವಿಗ್ರಹ

ಹತ್ತನೆಯ ಶತಮಾನದ ಗಂಗರ ಕಾಲದ ಗೊಮ್ಮಟ ವಿಗ್ರಹದ ಜೊತೆ ಗಾತ್ರ, ಭಾವ ಔನ್ನತ್ಯ, ಉದಾತ್ತತೆಗಳ ದೃಷ್ಟಿಯಿಂದ ಹೋಲಿಸಲು ಇಡೀ ವಿಶ್ವದಲ್ಲಿ ಮತ್ತೊಂದು ಶಿಲ್ಪ ದೊರಕಲಾರದು. ಕರ್ನಾಟಕವು ಸಂಸ್ಕೃತಿ, ಶೌರ್ಯ ಸಾಹಸ, ತ್ಯಾಗ, ಸ್ವಾಭಿಮಾನಗಳ ತನ್ನ ಅದ್ಭುತ ಸಂಕೇತದಂತೆ ಆ ವಿಗ್ರಹವನ್ನು ರೂಪಿಸಿದೆ. ಗೊಮ್ಮಟ, ವಾಸ್ತವವಾಗಿ ಬಾಹುಬಲಿ ಎಂಬ ರಾಜಕುಮಾರ. ಬಾಹುಬಲಿಯು ಭರತ ಚಕ್ರವರ್ತಿಯ ತಮ್ಮ. ಭರತನು ಇಡೀ ವಿಶ್ವವನ್ನು ಗೆದ್ದು, ತಮ್ಮನಾದ ಬಾಹುಬಲಿಯೂ ತನಗೆ ಅಡಿಯಾಳಾಗಬೇಕೆಂದು ಬಯಸುತ್ತಾನೆ. ತನ್ನ ತಂದೆಯಿಂದ ಬಂದ ರಾಜ್ಯವನ್ನು ತನ್ನಷ್ಟಕ್ಕೆ ತಾನು ಆಳಿಕೊಂಡಿದ್ದ ಬಾಹುಬಲಿಗೆ ತನ್ನ ಅಣ್ಣನ ಅಡಿಯಾಳಾಗಿ ಇರಲು ಬಯಕೆ ಬರಲಿಲ್ಲ. ಕಾಲು ಕೆರೆದು ಯುದ್ಧಕ್ಕೆ ಬಂದ ಭರತನನ್ನು ಆ ಸ್ವಾಭಿಮಾನಿ ಸುಲಭವಾಗಿ ಸೋಲಿಸಿ ವಿಜಯಿಯಾಗುತ್ತಾನೆ. ಆ ವಿಜಯದ ತುತ್ತ ತುದಿಯಲ್ಲಿಯೇ ಅವನಿಗೆ ವೈರಾಗ್ಯೋದಯಚವಾಗಿ ಅಣ್ಣನಿಂದ ಗೆದ್ದುಕೊಂಡಿದ್ದ ಇಡೀ ಭೂಮಂಡಲವನ್ನು ಅಣ್ಣನಿಗೆ ಒಪ್ಪಿಸಿ, ತಾನು ಸನ್ಯಾಸಿಯಾಗುತ್ತಾನೆ; ತ್ಯಾಗಗುಣದ ಪರಾಕಾಷ್ಠೆಯನ್ನು ಮೆರೆಯುತ್ತಾನೆ. ಆ ಬಾಹುಬಲಿಯೇ ಗೊಮ್ಮಟಸ್ವಾಮಿ. ಕನ್ನಡಿಗರ ರಕ್ತದಲ್ಲಿ ತ್ಯಾಗ, ಆಧ್ಯಾತ್ಮ ಇವೆಯಾದರೂ ಅವು ಹೇಡಿತನದಿಂದ ಬಂದುವಲ್ಲ; ಪೌರುಷ ಆತ್ಮಾಭಿಮಾನದಿಂದ ಬಂದಂಥವು. ಪೌರುಷ, ಸ್ವಾಭಿಮಾನ, ಅದ್ಭುತ ಸಾಹಸ. ಔದಾರ್‍ಯ, ಕ್ಷಮೆ, ತ್ಯಾಗಗುಣಗಳು ಬಾಹುಬಲಿಯ ಅಥವಾ ಗೊಮ್ಮಟನ ಗುಣಗಳಾಗಿರುವಂತೆ ಕರ್ನಾಟಕ ಸಂಸ್ಕೃತಿಯ ಗುಣಗಳೂ ಆಗಿವೆ.

ಬೇಲೂರು, ಹಳೇಬೀಡು, ಸೋಮನಾಥ ದೇವಾಲಯಗಳು ಕಲ್ಲಿನ ಸೂಕ್ಷ ಕುಸುರಿ ಕೆಲಸಕ್ಕೆ ಖ್ಯಾತವಾಗಿವೆ. ನಯಗಾರಿಕೆಯ ಶಿಲ್ಪಚಾತುರ್‍ಯಕ್ಕೆ ಅವುಗಳ ಜೊತೆ ವಿಶ್ವದ ಯಾವುದೇ ಶಿಲ್ಪಗಳು ಸಾಟಿಯಿಲ್ಲ. ಕರ್ನಾಟಕದ ಸೌಂದರ್‍ಯದ ಬೀಡು; ಶೂರರ ತವರುಮನೆ; ಶ್ರೇಷ್ಠ ಸಾಹಿತ್ಯದ ನೆಲೆವೀಡು; ಕಣ್ಮನಗಳನ್ನು ಆಹ್ಲಾದಗೊಳಿಸಿ, ಮನುಷ್ಯನನ್ನು ಆದರ್ಶಗಳ ಔನ್ನತ್ಯಕ್ಕೆ ಎತ್ತುವ ಕಲೆಗಳ ಆಗರ. ವಿಶ್ವದ ಶ್ರೇಷ್ಠ ಸಂಸ್ಕೃತಿಗಳ ಅಗ್ರಪಂಕ್ತಿಯಲ್ಲಿ ಕರ್ನಾಟಕಕ್ಕೆ ಪ್ರಮುಖ ಸ್ಥಾನವಿದೆ.

ನೋಡಿ: –
[http://vishvakannada.com/node/192|ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೧]
[http://vishvakannada.com/node/195|ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೨]
[http://vishvakannada.com/node/219|ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೪]
[http://vishvakannada.com/node/220|ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೫]

1 Response to ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ- ಭಾಗ-೩

  1. spoorthi

    VERY HELPFUL

Leave a Reply