ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೨
– ಡಾ| ಎಂ ಚಿದಾನಂದ ಮೂರ್ತಿ
ಸ್ವಾಭಿಮಾನ
ಕನ್ನಡ ಸಂಸ್ಕೃತಿಯ ತಿರುಳನ್ನು ಒಂದೆರಡು ಮಾತುಗಳಲ್ಲಿ ವಿವರಿಸಿ ಎಂದು ಯಾರಾದರೂ ಕೇಳಿದರೆ ಅವರಿಗೆ ನಾನು ಕೊಡುವ ಉತ್ತರ: “ಸ್ವಾಭಿಮಾನ ಮತ್ತು ಸಮನ್ವಯ”. ಸ್ವಾಭಿಮಾನವೆಂದರೆ ತನ್ನ ಬಗ್ಗೆ ಮತ್ತು ತನ್ನತನದ ಬಗ್ಗೆ ಇರುವ ಪೂರ್ಣ ಅರಿವು ಮತ್ತು ವಿಶ್ವಾಸ. ಸ್ವಾಭಿಮಾನವೆಂದರೆ ಅಹಂಕಾರವಲ್ಲ. ಅಹಂಕಾರವು ಬಹುತೇಕ ಸ್ವಾರ್ಥಪರವೂ ಇತರ ಯಾರನ್ನೇ ಗುರುತಿಸದೆ ತನ್ನನ್ನು ಮಾತ್ರ ಎತ್ತಿ ಹಿಡಿದುಕೊಳ್ಳುವ ಸ್ವಪ್ರೇಮವೂ ಆಗಿದ್ದು ಟೊಳ್ಳುತನವನ್ನು ಬೆಳೆಸಿಕೊಂಡಿರುವ ಸ್ವಪ್ರತಿಷ್ಠೆಯ ಪ್ರತೀಕ. ಸ್ವಾಭಿಮಾನಿಯು ಬೆಳೆದ ಮತ್ತು ಬೆಳೆಯುವ ವ್ಯಕ್ತಿಯಾದುದರಿಂದ ಅವನು ಇತರ ವ್ಯಕ್ತಿ ಅಥವಾ ವ್ಯಕ್ತಿಗಳ ದೊಡ್ಡತನವನ್ನು ಗುರುತಿಸಲು ಸಿದ್ಧನಿರುತ್ತಾನೆ. ಸ್ವಾಭಿಮಾನವೆನ್ನುವುದು ಎರಡು ಮುಖಗಳ ನಾಣ್ಯವಿದ್ದಂತೆ – ನಾನು ಇನ್ನೊಬ್ಬನಿಗಿಂತ ಕಡಿಮೆ ಅಲ್ಲವೆಂಬ ನಂಬಿಕೆ ಇರುವಂತೆಯೇ ಇತರರೂ ತನಗಿಂತ ಕಡಮೆ ಇರಲಾರರು ಎಂಬ ನಂಬಿಕೆಯು ಅವನಿಗಿರುತ್ತದೆ. ಅವನು ಎಂದೂ ಇನ್ನೊಬ್ಬರ ನೆರಳಾಗಿರಲು ಬಯಸದೆ ತನ್ನ ವಿಶಿಷ್ಟ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಯತ್ನಿಸುತ್ತಾನೆ. ಯಾವುದೇ ಕ್ಷೇತ್ರದಲ್ಲಾಗಲಿ ಅಂತಹ ಸ್ವಾಭಿಮಾನಿಗಳಿಂದ ಮಾತ್ರವೇ ಮೌಲಿಕ ಕಾರ್ಯಗಳು ನಡೆಯುತ್ತವೆ.
ಸಮನ್ವಯ
ಸಮನ್ವಯ ಎನ್ನುವುದು ವ್ಯಕ್ತಿ ಬೆಳೆಯಲು ಎಲ್ಲ ಕಡೆಗಳಿಂದ ಎಲ್ಲ ಬಗೆಯ ಅಂಶಗಳನ್ನು ಸ್ವಾಗತಿಸುವ ಗುಣವನ್ನು ಹೇಳುತ್ತದೆ. ಅದು ಎಲ್ಲ ಕಡೆಗಳಿಂದ ಹಳ್ಳ, ನದಿ, ಕೊರಕಲುಗಳ ಮೂಲಕ ಹರಿದು ಬರುವ ನೀರನ್ನೆಲ್ಲ ತನ್ನಲ್ಲಿ ಒಳಗೊಳ್ಳುವ ಜಲಾಶಯವಿದ್ದಂತೆ. ಜಲಾಶಯವು ಹಳ್ಳ, ನದಿ, ಕೊರಕಲುಗಳ ನಕಲಲ್ಲ- ಅದಕ್ಕೊಂದು ವ್ಯಕ್ತಿತ್ವವಿದೆ. ವಿಶಿಷ್ಟ ಉದ್ದೇಶವಿದೆ. ವ್ಯಕ್ತಿಯ ವ್ಯಕ್ತಿತ್ವ ಬೆಳೆಯಬೇಕಾದರೆ ಅವನು ತನ್ನನ್ನು ಹತ್ತೂ ಕಡೆಗೆ ತೆರೆದುಕೊಳ್ಳಬೇಕು.
ಹಲವು ಹತ್ತು ಬಗೆಯ ಪ್ರಭಾವಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳಬೇಕು. ಆದರೆ ಯಾವುದೋ ಒಂದನ್ನು ನೋಡಿಕೊಂಡು ಅದನ್ನೇ ಒಪ್ಪಿಕೊಂಡು ಅದನ್ನೇ ಬೆಳಸಿಕೊಂಡು ಅದಿಲ್ಲದೆ ಉಳಿದ ಎಲ್ಲವೂ ಸುಳ್ಳು ಎನ್ನುವ ಗುಣವು ಸಮನ್ವಯಕ್ಕೆ ತೀರ ವಿರುದ್ಧವಾದುದು. ಮಣ್ಣು, ಗೊಬ್ಬರ, ನೀರು, ಗಾಳಿ, ಬೆಳಕು ಇವೆಲ್ಲವನ್ನೂ ಬಳಸಿಕೊಂಡು ಬೆಳೆಯುವ ಮರವು ಸಮನ್ವಯಕ್ಕೆ ಒಂದು ಭೌತಿಕ ದೃಷ್ಟಾಂತವಾಗಬಲ್ಲದು. ಎಲ್ಲ ಬಗೆಯ ಪ್ರಭಾವಗಳಿಗೂ ಒಡ್ಡಿಕೊಂಡು ವ್ಯಕ್ತಿ ತನ್ನ ಕಾಲ ಮೇಲೆ ತಾನು ನಿಂತು ಅವೆಲ್ಲವನ್ನೂ ಅರಗಿಸಿಕೊಂಡು ಬೆಳೆದಾಗಲೇ ಅವನಲ್ಲಿ ನಿಜವಾದ ಸಮನ್ವಯ ಕಾಣುವುದು. ಸಮನ್ವಯವು ಹಲವು ಹತ್ತು ಅಂಶಗಳ ಮಿಶ್ರಣವಲ್ಲ. ಅವೆಲ್ಲ ಮಿಶ್ರವಾಗಿ, ಕ್ರಮೇಣ ಕರಗಿ, ಒಂದರಿಂದ ಒಂದು ಬೆರ್ಪಡಿಸಲಾರದಷ್ಟು ಸೇರಿಹೋಗಿ, ಅವಲ್ಲದರ ಗುಣಗಳನ್ನೂ ಒಳಗೊಂಡು ವ್ಯಕ್ತಿಯನ್ನು ಬೆಳೆಸುವ ಜೀವದ್ರವ್ಯವಾದಾಗಲೇ ನಿಜವಾದ ಸಮನ್ವಯವೆನ್ನಿಸಿಕೊಳ್ಳುತ್ತದೆ.
ಹೀಗೆ ಸ್ವಾಭಿಮಾನ ಮತ್ತು ಸಮನ್ವಯಗಳು ಹೆಸರಿಗೆ ಬೇರೆಯಾದರೂ ಬೆಳೆಯುವ ಅಥವಾ ಬೆಳೆದ ವ್ಯಕ್ತಿಯ ಎರಡು ಬಹು ಮುಖ್ಯ ಲಕ್ಷಣಗಳೂ ಆಗುತ್ತವೆ.
ಸಂಸ್ಕೃತಿ
ಮೇಲೆ ಸ್ವಾಭಿಮಾನ ಮತ್ತು ಸಮನ್ವಯಗಳನ್ನು ವ್ಯಕ್ತಿಯನ್ನು ಲಕ್ಷ ದಲ್ಲಿರಿಸಿಕೊಂಡು ವಿವರಿಸಿದ್ದರೂ ಆ ಗುಣಗಳನ್ನು ಒಂದು ಒಟ್ಟು ಜನಾಂಗಕ್ಕೆ, ಒಂದು ಅಖಂಡ ಸಂಸ್ಕೃತಿಗೂ ಅನ್ವಯಿಸಬಹುದು. ಸಂಸ್ಕೃತಿಯು ಒಂದು ಜನತೆಯ ಸಮಗ್ರ ಜೀವನ ವಿಧಾನವನ್ನು ಹೇಳುತ್ತದೆ. ಅದು ಜನತೆ ಒಟ್ಟಾರೆ ಬಾಳುವ ರೀತಿಯಲ್ಲಿ ವ್ಯಕ್ತವಾಗುತ್ತಿದ್ದರೂ ಭೂಮಿಯಂತೆ ಜನರಿಗೆ ಆಶ್ರಯವನ್ನು ನೀಡಿ, ಅದರ ಜೊತೆಗೆ ಆಕಾಶವಾಗಿ ನಿಂತು ಆದರ್ಶಗಳ ಕಡೆ ಬೆಳೆಸುವ ಉತ್ತೇಜನವೂ ಆಗಿ ನಿಲ್ಲುತ್ತದೆ. ಜನತೆಯ ಧರ್ಮ, ಮೌಲ್ಯ, ಕಲೆಗಳು, ಸಾಹಿತ್ಯ, ರಾಜಕೀಯ ವಿಧಾನ, ಉಡುಗೆ ತೊಡುಗೆ, ಆಹಾರ ವಿಧಾನಗಳು, ಉದ್ಯೋಗ, ಆರ್ಥಿಕ ಸ್ಥಿತಿ, ಕಾನೂನು, ಆಚರಣೆ ಇತ್ಯಾದಿ ಎಲ್ಲವನ್ನೂ ಸಂಸ್ಕೃತಿ ಒಳಗೊಳ್ಳುತ್ತದೆ.
ಕರ್ನಾಟಕ ಸಂಸ್ಕೃತಿ: ಉಗಮ – ಕದಂಬರು
ಕರ್ನಾಟಕ ಸಂಸ್ಕೃತಿ ಅತ್ಯಂತ ಪ್ರಾಚೀನವಾದದ್ದು. ಗುಹಾನಿವಾಸಿಯಾಗಿದ್ದ ಆದಿಮಾನವ ಬರೆದ ಸಾವಿರಾರು ಬಂಡೆ ಚಿತ್ರಗಳು, ಗುಹಾ ಭಿತ್ತಿಚಿತ್ರಗಳು, ಅವನ ಶಿಲಾಯುಧಗಳು, ಬೃಹತ್ ಶಿಲಾ ಗೋರಿಗಳು ಕರ್ನಾಟಕದ ನೂರಾರು ಜಾಗಗಳಲ್ಲಿ ದೊರಕಿವೆ. ಆದರೆ ಕರ್ನಾಟಕ ಸಂಸ್ಕೃತಿ ತನ್ನೆಲ್ಲ ವೈಶಿಷ್ಟಗಳೊಡನೆ ರೂಪುಗೊಳ್ಳಲು ಆರಂಭವಾದುದು ಒಂದು ಬಹು ಚಿಕ್ಕ, ಆದರೆ ಮುಂದಿನ ಪರಿಣಾಮಗಳ ದೃಷ್ಟಿಯಿಂದ ಅತ್ಯಂತ ಮಹತ್ವದ ಘಟನೆಯಿಂದ ಎಂದು ಹೇಳಿದರೆ ಆಶ್ಚರ್ಯಪಡಬೇಕಾಗಿಲ್ಲ. ಸುಮಾರು ಕ್ರಿ. ಶ. ೩೨೫ ರಲ್ಲಿ ಶಿವಮೊಗ್ಗ ಜಿಲ್ಲೆಯ ತಾಳಗುಂದ ಎಂಬ ಅಗ್ರಹಾರದ ಮಯೂರಶರ್ಮ ಎಂಬ ಬ್ರಾಹ್ಮಣರ ಹುಡುಗ ಹೆಚ್ಚಿನ ಅಧ್ಯಯನಕ್ಕಾಗಿ ತಮಿಳುನಾಡಿನ ಕಂಚಿಗೆ ಹೋಗಿದ್ದಾಗ ಅಲ್ಲಿನ ಪಲ್ಲವ ಕ್ಷತ್ರಿಯರಿಂದ ಅವಮಾನಿತನಾದ. ಕನ್ನಡ ಸಂಸ್ಕೃತಿಯ ಮೂಲದ್ರವ್ಯವನ್ನು ಹೊಂದಿದ್ದ ಆ ಹುಡುಗ ಅಪಮಾನವನ್ನು ನುಂಗಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ತಾನು ಬ್ರಾಹ್ಮಣನೆಂಬ ಕಾರಣಕ್ಕಾಗಿ ಅಪಮಾನ ಮಾಡಿದರೆಂಬುದನ್ನೇ ಮನಸ್ಸಿನಲ್ಲಿಟ್ಟುಕೊಂ?ಡು ಬ್ರಾಹ್ಮಣ್ಯವನ್ನೇ ತ್ಯಜಿಸಿ, ಕೈಯಲ್ಲಿ ಖಡ್ಗವನ್ನು ಹಿಡಿದು ಚಿತ್ರದುರ್ಗದ ಸಮೀಪದ ಚಂದ್ರವಳ್ಳಿಯ ಕಣಿವೆ ಪ್ರದೇಶದಲ್ಲಿ ನೆಲೆಸಿ ಸೈನ್ಯವನ್ನು ಕಟ್ಟಿ ಬಲಿಷ್ಠರಾಗಿದ್ದ ಪಲ್ಲವರನ್ನೇ ಸೋಲಿಸಿ ಅವರಿಂದಲೇ ಅಭಿಷಿಕ್ತನಾಗುತ್ತಾನೆ. ಬ್ರಾಹ್ಮಣ ಕದಂಬ ವಂಶವು ಹೀಗೆ ಕ್ಷತ್ರಿಯ ಕದಂಬ ವಂಶವಾಗಿ ಪರಿವರ್ತನೆಯನ್ನು ಹೊಂದಿತು. ಮಯೂರಶರ್ಮನ ಬಳಿಕ ಉಳಿದ ದೊರೆಗಳೆಲ್ಲ ಶರ್ಮ ಎಂದು ಕೊನೆಯಾಗುವ ಬ್ರಾಹ್ಮಣ ಸೂಚಕ ತ್ಯಜಿಸಿ ವರ್ಮ ಎಂದು ಕೊನೆಯಾಗುವ ಕ್ಷಾತ್ರಸೂಚಕ ಹೆಸರುಗಳನ್ನಿಟ್ಟುಕೊಂಡರು.
ಕೇವಲ `ಜಾತಿ ಕಲಹ’ ಅಲ್ಲ
ಮೇಲಿನದು ಎಲ್ಲ ಕಡೆ ನಡೆಯುವ ಜಾತಿ ಕಲಹದಂತಹ ಒಂದು ಕ್ಷುದ್ರಜಗಳವಲ್ಲ. ಮಯೂರಶರ್ಮನೂ ತನಗಾದ ಅವಮಾನವನ್ನು ನುಂಗಿಕೊಂಡು ಕಂಚಿಯಿಂದ ಬ್ರಾಹ್ಮಣನಾಗಿಯೇ ಹಿಂದಿರುಗಿದ್ದರೆ ಕದಂಬವಂಶ ಇರುತ್ತಿರಲಿಲ್ಲ. ಬಹುಶಃ ಕರ್ನಾಟಕ ಚರಿತ್ರೆ ಈಗ ಇರುವ ರೀತಿಯಲ್ಲಂತೂ ಇರುತ್ತಿರಲಿಲ್ಲ. ಈ ಮಾತುಗಳನ್ನು ವಿವರಿಸುವ ಅಗತ್ಯವಿದೆ. ಕದಂಬರಿಗಿಂತ ಮೊದಲು ಕರ್ನಾಟಕವನ್ನು ಆಳುತ್ತಿದ್ದ ದೊರೆಗಳು ಉತ್ತರದ ಮೌರ್ಯರು, ಬಳಿಕ ಆಂಧ್ರದ ಶಾತವಾಹನರು, ಬಳಿಕ ತಮಿಳುನಾಡಿನ ಪಲ್ಲವರು. ಆ ದೊರೆಗಳಿಗೆ ಕರ್ನಾಟಕ ಸಂಸ್ಕೃತಿ ಬಗ್ಗೆಯಾಗಲೀ ಕನ್ನಡದ ಬಗ್ಗೆಯಾಗಲೀ ಹೇಗೆ ಮತ್ತು ಏಕೆ ಮಮತೆ ಬಂದೀತು? ನೆನಪಿಡಬೇಕು: ಕದಂಬವಂಶವೇ ಕರ್ನಾಟಕವನ್ನು ಆಳಿದ, ಕನ್ನಡವನ್ನು ಮನೆಮಾತಾಗಿ ಉಳ್ಳ ಮೊದಲ ಕನ್ನಡಿಗ ರಾಜವಂಶ. ಕನ್ನಡ ಜನ ತಮ್ಮನ್ನು ತಾವು ಆಳಿಕೊಳ್ಳಲು ಆರಂಭಿಸಿದ್ದು ಕದಂಬರ ಕಾಲದಿಂದ. ಸಹಜವಾಗಿಯೇ ಕದಂಬರಿಂದಾಗಿ ಕನ್ನಡ ಜನಕ್ಕೆ ಆತ್ಮವಿಶ್ವಾಸವು ಮೂಡಿತು. ಅವರು ಕನ್ನಡವನ್ನು ಆಡಳಿತ ಭಾಷೆಯಾಗಿ ಮತ್ತು ಸಾಂಸ್ಕೃತಿಕ ಭಾಷೆಯಾಗಿ ಬೆಳೆಸಿದರು.
ಅದೆಲ್ಲದರ ಚರಿತ್ರೆಗೆ ಹೋಗದೆ ಸೂಕ್ಷ ವಾಗಿ ಹೇಳುವುದಾದರೆ, ಕನ್ನಡ ಸಂಸ್ಕೃತಿ ಉದಯವಾದುದೇ ಸ್ವಾಭಿಮಾನದಲ್ಲಿ, ಸ್ವಾಭಿಮಾನವನ್ನು ಉಳಿಸಿಕೊಳ್ಳುವಲ್ಲಿ. ಅಪಮಾನವನ್ನು ಸಹಿಸಿಕೊಳ್ಳದೆ, ಸ್ವಾಭಿಮಾನವನ್ನು ಬೆಳೆಸಿಕೊಳ್ಳುವ ಕೆಚ್ಚು ಆ ಮಯೂರಶರ್ಮನಲ್ಲಿ ಪ್ರಜ್ವಲಿಸಿತು. ಆ ಸ್ವಾಭಿಮಾನ ಚಲಗಳು ಕರ್ನಾಟಕ ಸಂಸ್ಕೃತಿಯ ಒಟ್ಟಂದದಲ್ಲಿ ಒಂದು ಮುಖ್ಯ ಲಕ್ಷಣವಾಗಿ ಉದ್ದಕ್ಕೂ ಕಾಣಿಸಿಕೊಂಡಿವೆ.
ಬಾದಾಮಿಯ ಚಾಲುಕ್ಯರು
ಕದಂಬ ರಾಜ್ಯದ ಉದಯದೊಂದಿಗೆ (ಕ್ರಿ. ಶ. ೪ನೇ ಶತಮಾನ) ಕನ್ನಡ ಸಂಸ್ಕೃತಿಯ ಉದಯವೂ ಆಯಿತು. ಅದೇ ಕಾಲಕ್ಕೆ ದಕ್ಷಿಣದಲ್ಲಿ ಗಂಗರಾಜ್ಯದ ಉದಯವೂ ಆಯಿತು. ಕನ್ನಡ ಸಂಸ್ಕೃತಿ ದಕ್ಷಿಣ ಕರ್ನಾಟಕದಲ್ಲಿ ನೆಲೆಗೊಳ್ಳಲು ಅದು ಸಹಾಯಕವಾಯಿತು. ಸ್ವಾಭಿಮಾನಿ ಕನ್ನಡಿಗರಾಗಿದ್ದ ಆ ಎಲ್ಲ ದೊರೆಗಳು ಪ್ರಾಕೃತ ಭಾಷೆಯನ್ನು ಕ್ರಮೇಣ ಬಿಟ್ಟು ಕನ್ನಡವನ್ನು ಆಡಳಿತ ಭಾಷೆಯಾಗಿ ರೂಢಿಸಿಕೊಂಡರು. ಕನ್ನಡವು ಆಡುಭಾಷೆಯಾಗಿದ್ದುದು ಹೀಗೆ ಆಡಳಿತ ಭಾಷೆಯ ಸ್ಥಾನಕ್ಕೆ ಏರಿದುದು ಮುಂದೆ ಅದು ಸಾಹಿತ್ಯಸಂಪನ್ನ ಭಾಷೆಯೂ ಆಗಿ ಮೆರೆಯಲು ಬೀಜವಾಯಿತು. ಕದಂಬರ ಬಳಿಕ ಬಂದ ಬಾದಾಮಿ ಚಾಲುಕ್ಯರ ಕಾಲವನ್ನು (೬-೮ನೇ ಶತಮಾನ)ಕರ್ನಾಟಕ ಸಂಸ್ಕೃತಿ ರೂಪುಗೊಂಡ ಕಾಲವೆಂದು ಚರಿತ್ರಕಾರರು ಗುರುತಿಸಿದ್ದಾರೆ. ಅವರ ಕಾಲದಲ್ಲಿ, ಅದರಲ್ಲೂ ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ (ಕ್ರಿ. ಶ. ೬೩೦) ಕನ್ನಡಿಗನ ಸ್ವಾಭಿಮಾನ, ಶೌರ್ಯ, ಧೈರ್ಯಗಳು ತಮ್ಮ ಚರಮಸೀಮೆಯನ್ನು ತಲುಪಿದವು. ಉತ್ತರಾಪಥೇಶ್ವರನೆಂದು ಬೀಗುತ್ತಿದ್ದ ಹರ್ಷನನ್ನು ಸೋಲಿಸಿ ನರ್ಮದೆಗಿಂತ ಆಚೆಗೆ ಅಟ್ಟುವಷ್ಟು ಕರ್ನಾಟಕ ಸೇನೆಯು ಬಲಿಷ್ಠವಾಗಿತ್ತು. “ಕರ್ನಾಟಕ ಬಲ” ವೆಂದೇ ಚಾಲುಕ್ಯರ ಸೈನ್ಯವು ಭಾರತದಲ್ಲಿ ಎಲ್ಲೆಲ್ಲೂ ಪ್ರಖ್ಯಾತವಾಗಿತ್ತು ಮತ್ತು ಅದನ್ನು “ಅಜೇಯ” ವೆಂದೇ ಭಾರತದಲ್ಲಿ ಎಲ್ಲರೂ ಪರಿಗಣಿಸಿದ್ದರು.
ಹುಯೆನ್‌ತ್ಸಾಂಗನ ಮಾತುಗಳು
ಪುಲಕೇಶಿಯ ರಾಜಧಾನಿಗೆ ಭೇಟಿ ಕೊಟ್ಟಿದ್ದ ಚೀನಿ ಪ್ರವಾಸಿ ಹುಯೆನ್‌ತ್ಸಾಂಗನು ಆ ಮುಂಚೆ ಹರ್ಷನ ರಾಜಧಾನಿಗೂ ಭೇಟಿಕೊಟ್ಟಿದ್ದ. ಅವನು ಹರ್ಷನನ್ನು ಪುಲಕೇಶಿಯು ಯುದ್ಧದಲ್ಲಿ ಸೋಲಿಸಿ ಹಿಂದಕ್ಕಟ್ಟಿದ ಸಂಗತಿಯನ್ನು ಹೇಳಿದ್ದಾನೆ. ಈ ಸಂಗತಿ ಚಾಲುಕ್ಯರ ಸಮಕಾಲೀನ ಮತ್ತು ಮುಂದಿನ ಶಾಸನಗಳಲ್ಲಿ ಮಾರ್ದನಿಗೊಂಡಿದೆ. ಜೊತೆಗೆ, ಪುಲಕೇಶಿಯ ಪ್ರಜೆಗಳಾಗಿದ್ದ ಕನ್ನಡಿಗರನ್ನು ಕುರಿತಂತೆ ಅವನು ಆಡಿರುವ ಮಾತುಗಳೂ ಗಮನಾರ್ಹವಾಗಿವೆ. ಅವನ ಪ್ರಕಾರ ಅವರು ಶೂರರೂ, ಸ್ವಾಭಿಮಾನಿಗಳೂ, ನಿಷ್ಠಾವಂತರೂ ಆಗಿದ್ದರು. ಯುದ್ಧದಲ್ಲಿ ಸೋತು ಅವರಿಗೆ ತಿಳಿಯದು. ಅವರು ಯುದ್ಧಕ್ಕೆ ಹೋಗುವಾಗ ಹೆಂಡಿರು ಜಯವನ್ನು ಹಾರೈಸಿ ಯುದ್ಧರಂಗಕ್ಕೆ ಕಳುಹಿಸಿಕೊಡುತ್ತಿದ್ದರು. ಒಂದು ವೇಳೆ ಸೋತು ಹಿಂತಿರುಗಿದರೆ ತಮ್ಮ ಪತ್ನಿಯರೇ ತಮಗೆ ಸೀರೆ, ಬಳೆ, ಕುಂಕುಮಗಳನ್ನು ಕೊಟ್ಟು ಅಪಮಾನಪಡಿಸುವರೆಂದು ಹೆದರಿ ಹೋರಾಡಿ ಮಡಿಯುತ್ತಿದ್ದರೇ ಹೊರತು ಸೋತು ಹಿಂದಕ್ಕೆ ಬರುತ್ತಿರಲಿಲ್ಲ. ತಾವೂ ಮದ್ಯವನ್ನು ಕುಡಿದು ಆನೆಗಳಿಗೂ ಮದ್ಯವನ್ನು ಕುಡಿಸಿ ಯುದ್ಧಕ್ಕೆ ನುಗ್ಗುತ್ತಿದ್ದ ಅವರನ್ನು ತಡೆಯುವ ಮತ್ತೊಂದು ಸೇನೆ ಅಂದಿನ ಭಾರತದಲ್ಲಿರಲಿಲ್ಲ. ಅಂತಹ ಶೂರ ಸೈನಿಕರ, ಸ್ವಾಭಿಮಾನಿ ಪ್ರಜೆಗಳ ಪ್ರೀತಿಯೇ ಪುಲಕೇಶಿಗೆ ನಿಜವಾದ ಕೋಟೆಯಾಗಿತ್ತು. ಹುಯೆನ್‌ತ್ಸಾಂಗನ ಮಾತುಗಳು ಚಾಲುಕ್ಯರ ಕಾಲದ ವೀರಜೀವನಕ್ಕೆ ಒಂದು ಕಿಟಕಿಯನ್ನು ಒದಗಿಸುತ್ತವೆ.
ಸಮಕಾಲೀನ ಶಾಸನಾಧಾರ
ಇದಕ್ಕೆ ಸಮಕಾಲೀನ ಶಾಸನಗಳು ಪುಷ್ಟಿಕೊಡುತ್ತವೆ. ಏಳನೇ ಶತಮಾನದ ಬಾದಾಮಿ ಶಾಸನವೊಂದು ಹೀಗೆ ಹೇಳುತ್ತದೆ:
ವರಂ ತೇಜಸ್ವಿನೋ ಮೃತ್ಯುಃ ನ ತು ಮಾನಾವಖಂಡನಂ
ಮೃತ್ಯುಃ ತತ್ ಕ್ಷಣಿಕೋ ದುಃಖಂ ಮಾನಭಂಗಂ ದಿನೇ ದಿನೇ
ಶೂರರಿಗೆ ಅಪಮಾನಕ್ಕಿಂತ ಮೃತ್ಯುವೇ ಶ್ರೇಷ್ಠವಾದುದು, ಏಕೆಂದರೆ ಮೃತ್ಯುವು ಕ್ಷಣಿಕ ದುಃಖವನ್ನು ತರುತ್ತದೆ. ಮಾನಭಂಗವಾದರೋ ದಿನ ದಿನವೂ ದುಃಖವನ್ನು ತರುತ್ತದೆ. ಇಂತಹ ಶೂರನೊಬ್ಬನ ವರ್ಣನೆ ಬಾದಾಮಿಯ ಶಾಸನದಲ್ಲಿ ಅದೇ ಕಾಲದಲ್ಲಿ ದೊರಕುತ್ತದೆ.
ಸಾಧುಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ,
ಬಾಧಿಪ್ಪ ಕಲಿಗೆ ಕಲಿಯುಗವಿಪರೀತನ್,
ಮಾಧವನೀತನ್ ಪೆರನಲ್ಲ
ಕಪ್ಪೆ ಅರಭಟ್ಟನೆಂಬ ಸ್ವಾಭಿಮಾನಿಯು ಒಳ್ಳೆಯವರಿಗೆ ಒಳ್ಳೆಯವನೂ ಕೆಟ್ಟವರಿಗೆ ತೀರ ಕೆಟ್ಟವನೂ ಆಗಿದ್ದನಂತೆ. ಅವನನ್ನು ಹೋಲುವ ಸಾವಿರಾರು ವೀರಯೋಧರ ವರ್ಣನೆಗಳು ಕರ್ನಾಟಕದ ಶಾಸನಗಳಲ್ಲಿ ದೊರಕುತ್ತವೆ. ಕರ್ನಾಟಕದಲ್ಲಿ ದೊರಕುವಷ್ಟು ವೀರಗಲ್ಲುಗಳು ಭಾರತದ ಯಾವುದೇ ಭಾಗದಲ್ಲೂ ದೊರಕುವುದಿಲ್ಲ. ಶೂರರ ನಾಡು ಕರ್ನಾಟಕ.
ನೋಡಿ:
[http://vishvakannada.com/node/192|ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೧]
[http://vishvakannada.com/node/196|ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೩]
[http://vishvakannada.com/node/219|ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೪]
[http://vishvakannada.com/node/220|ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೫]