ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ- ಭಾಗ-೫

– ಡಾ| ಎಂ. ಚಿದಾನಂದ ಮೂರ್ತಿ

ಕರ್ನಾಟಕ – ಸಂಸ್ಕೃತಿ ಸಂಪನ್ನ ದೇಶ

ಈ ಮುಂಚಿನ ಪುಟಗಳಲ್ಲಿ ಕರ್ನಾಟಕ ಸಂಸ್ಕೃತಿಯ ಮುಖ್ಯ ಲಕ್ಷಣಗಳನ್ನು ತಿಳಿಸಿಕೊಟ್ಟಿದ್ದೇನೆ. ಭಾರತೀಯ ಅಥವಾ ವಿಶ್ವ ಸಂಸ್ಕೃತಿಗೆ ಕರ್ನಾಟಕವು ಕೊಟ್ಟಿರುವ ಮೌಲಿಕ ಕೊಡುಗೆಗಳನ್ನು ಸೂಕ್ಷ ವಾಗಿ ಪರಿಚಯಿಸಿಕೊಟ್ಟಿದ್ದೇನೆ. ಕನ್ನಡ ಜನ ತಮ್ಮ ಪರಂಪರೆಯ ನಿಜವಾದ ಅರಿವನ್ನು ಪಡೆದಾಗ ಅವರ ಕೀಳರಿಮೆ ತೊಲಗಿ ಅವರು ಸ್ವಾಭಿಮಾನಿಗಳಾಗುತ್ತಾರೆ. ಈಗೀಗ ಕನ್ನಡ ಜನ ಹೆಚ್ಚು ಹೆಚ್ಚಾಗಿ ಕರ್ನಾಟಕದ ಬಗ್ಗೆ ತಿಳಿಯಲು ಕಾತರರಾಗುತ್ತಿದ್ದಾರೆ. ಕಾರ್ಖಾನೆ, ಕಛೇರಿ, ಸಿನಿಮಾ ಮಂದಿರ, ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅಕ್ಷರಸ್ಥ ಕನ್ನಡಿಗರಿಗೆ ಕರ್ನಾಟಕದ ಪರಂಪರೆಯನ್ನು ತಿಳಿಯುವ ಹಸಿವು ಹೆಚ್ಚುತ್ತಿದೆ. ಆ ಹೆಮ್ಮೆ ಅವರನ್ನು ಮುಂದಿನ ಭವಿಷ್ಯದತ್ತ ಉತ್ಸಾಹದಿಂದ ಹೆಜ್ಜೆಹಾಕಲು ಸ್ಫೂರ್ತಿಕೇಂದ್ರವೂ ಆಗುತ್ತದೆ. ಇತಿಹಾಸದ ಅರಿವು ಅತ್ಯಂತ ಅಗತ್ಯ. ಇತಿಹಾಸದ ಅರಿವು ಮನುಷ್ಯನಿಗೆ ಮಾತ್ರ ಇದೆ -ಆ ಕಾರಣದಿಂದಲೇ ಅವನಿಗೊಂದು ಸಂಸ್ಕೃತಿ ನಾಗರಿಕತೆ ಉಂಟು. ಪ್ರಾಣಿಗಳಿಗೆ ಇತಿಹಾಸದ ಅರಿವಿಲ್ಲ -ಆ ಕಾರಣದಿಂದಲೇ ಅವುಗಳಲ್ಲಿ ಪ್ರಗತಿ ಇಲ್ಲ.

ಹುಲಿತನವನ್ನು ಮರೆತ ಹುಲಿಮರಿ

ಸ್ವಾಮಿ ವಿವೇಕಾನಂದರ ಒಂದು ಕತೆ ಜ್ಞಾಪಕಕ್ಕೆ ಬರುತ್ತದೆ. ಚಿಕ್ಕ ಹುಲಿಮರಿಯೊಂದು ಕುರುಬನ ಕೈಗೆ ಸಿಕ್ಕಿ ಅದು ಕುರಿಗಳ ಜೊತೆ ಬೆಳೆಯಿತು. ಅದೂ ಹುಲ್ಲು ತಿಂದು ಮೇ ಮೇ ಎಂದು ಅರಚಿತು. ಒಂದು ದಿನ ಬೇರೊಂದು ದೊಡ್ಡ ಹುಲಿ ಅಟ್ಟಿಸಿಕೊಂಡು ಬಂದಾಗ ಉಳಿದ ಕುರಿಗಳಂತೆಯೇ ಅದೂ ಹೆದರಿ ಓಡಿತು. ಆ ಹುಲಿ ಅಚ್ಚರಿಗೊಂಡು ಹುಲಿಮರಿಯನ್ನು ಆರಿಸಿ ಹಿಡಿದು, ಎಳೆದುಕೊಂಡು ಹೋಗಿ ಒಂದು ಕೊಳದ ಮೇಲೆ ಮುಖವನ್ನು ಚಾಚಿದಾಗ ತಾನೂ ಆ ಹುಲಿಮರಿಯಂತೆಯೇ ಇರುವುದನ್ನು ಕಂಡು ಹುಲಿಮರಿಗೆ ಆಶ್ಚರ್ಯವೋ ಆಶ್ಚರ್ಯ! “ನೀನು ಕುರಿಯಲ್ಲ, ಹುಲಿ” ಎಂದು ಹೇಳಿ, ಗರ್ಜಿಸುವುದನ್ನು ಹುಲಿ ಆ ಮರಿಗೆ ಕಲಿಸಿತು. ಆ ಹುಲಿಮರಿ ಹಿಂದಕ್ಕೆ ಕುರಿಗಳ ಮಂದೆಗೆ ಹೋಗಿ ಗರ್ಜಿಸಿದಾಗ ಕುರಿಗಳೆಲ್ಲ ದಿಕ್ಕಾಪಾಲಾದವು. ಸ್ವಸ್ವರೂಪ eನವನ್ನು ಪಡೆದ ಆ ಹುಲಿಮರಿ ಕುರಿತನದಿಂದ ಹುಲಿತನವನ್ನು ಪಡೆದು ಕಾಡಿಗೆ ಹಿಂದಿರುಗಿ ವನರಾಜನಾಗಿ ಮೆರೆಯಿತು. ಗರ್ಜಿಸುತ್ತ ಎದೆ ಉಬ್ಬಿಸಿ ನಡೆದಾಡಿತು. ಕನ್ನಡ ಜನ ಹುಲಿಮರಿಗಳಿದ್ದಂತೆ. ಅವರ ಸ್ವರೂಪeನ ಅವರಿಗೆ ತಾತ್ಕಾಲಿಕವಾಗಿ ಮರೆಯಾಗಿದೆ. ಅಥವಾ ಮರೆಯಾಗಿತ್ತು. ಇಡೀ ಭಾರತದಲ್ಲಿ ಯಾವುದೇ ದೃಷ್ಟಿಯಿಂದಲೂ ಅವರು ತಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿ, ಬುದ್ಧಿಶಕ್ತಿ, ಕಲೆಗಳಲ್ಲಿ ಹೆಮ್ಮೆ ಪಟ್ಟುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಇತಿಹಾಸದ ಅರಿವು ಅವರಿಗೆ ಈಗೀಗ ಜ್ಞಾನೋದಯವನ್ನುಂಟುಮಾಡಿದೆ.

ಸ್ವಾಭಿಮಾನ, ಸಮನ್ವಯ ತಪ್ಪುಗ್ರಹಿಕೆ

ಸ್ವಾಭಿಮಾನವನ್ನು ಅಹಂಕಾರವೆಂದೂ ಸಮನ್ವಯವನ್ನು ಎಲ್ಲರ ಜೊತೆ ಅವರಂತೆಯೇ ಹೊಂದಿಕೊಂಡು ಹೋಗುವ ಮೆದುಗುಣವೆಂದೂ ತಪ್ಪಾಗಿ ಭಾವಿಸಿದ ಹಲವರಿದ್ದಾರೆ. ಆಯಾಯ ಭಾಷೆಯವರ ಜೊತೆ ಅವರವರ ಭಾಷೆಯಲ್ಲೇ ಮಾತನಾಡುವ, ಎಲ್ಲರನ್ನೂ ಬರಮಾಡಿಕೊಂಡು ಅವರಿಗೆ ಆಶ್ರಯ ನೀಡಿ ಅವರು ಪ್ರಬಲರಾಗುವಂತೆ ತಾವೇ ಪ್ರೋತ್ಸಾಹಿಸಿ ಬಳಿಕ ಅವರ ಯಜಮಾನ್ಯವನ್ನೇ ಒಪ್ಪಿಕೊಳ್ಳುವ ಗುಣವು ದೌರ್ಬಲ್ಯವೇ ಹೊರತು ಸದ್ಗುಣವೂ ಅಲ್ಲ, ಸಮನ್ವಯವೂ ಅಲ್ಲ. ಕರ್ನಾಟಕಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಆ ವೈಶಿಷ್ಟ್ಯದ ನಾಶವು ಸಂಸ್ಕೃತಿಯ ನಾಶವೇ ಸರಿ. ಒಳ್ಳೆಯತನಕ್ಕೂ ದೌರ್ಬಲ್ಯಕ್ಕೂ ವ್ಯತ್ಯಾಸವನ್ನು ಅರಿಯಬೇಕು. ಸ್ವಾಭಿಮಾನಿಯ ಒಳ್ಳೆಯತನ ಬೇರೆ, ದುರ್ಬಲನ ಒಳ್ಳೆಯತನ ಬೇರೆ. ಕರ್ನಾಟಕವು ಇತರ ಸಂಸ್ಕೃತಿಗಳ ಒಳ್ಳೆಯ ಅಂಶಗಳನ್ನು ಬಳಸಿಕೊಂಡು ಅರಗಿಸಿಕೊಂಡು, ತಾನು ತಾನಾಗಿ ಉಳಿದು ಬೆಳೆಯಬೇಕು. ಅದು ಬಿಟ್ಟು ತನ್ನ ಭಾಷೆ, ಕಲೆ, ಜೀವನ ರೀತಿ, ಉದ್ಯೋಗಗಳನ್ನು ಅನ್ಯರ ಭಾಷೆ ಕಲೆಗಳು, ಅನ್ಯಜನ ಬಂದು ಆಕ್ರಮಿಸಿ ಅವನನ್ನು ಹಿನ್ನಲೆಗೆ ತಳ್ಳಿದರೆ ಅವನೊಬ್ಬ ನಿಷ್ಟ್ರಯೋಜಕನಾಗುತ್ತಾನೆ. ಅನ್ಯ ಪ್ರಾಂತೀಯರು ಬಂದು ಕನ್ನಡಿಗರ ಔದಾರ್‍ಯವನ್ನು ಹೊಗಳಿ ಉಬ್ಬಿಸಿದಾಗ ಉಬ್ಬಿ ಹೋದ ಕನ್ನಡಿಗ ತನಗೆ ತಾನೇ ಮಾಡಿಕೊಂಡಿರುವ ಅನ್ಯಾಯ ಅನೂಹ್ಯ. ಅದೆಲ್ಲವನ್ನೂ ವಿವರಿಸಲು ಇದು ಜಾಗ ಅಲ್ಲ.

ಕನ್ನಡ – ಕರ್ನಾಟಕ – ಭಾರತ

ಕನ್ನಡಿಗರಿಗೆ ಕರ್ನಾಟಕವನ್ನು ದುರ್ಬಲಗೊಳಿಸಿ ಕಟ್ಟುವ ಭಾರತ ಬೇಕಾಗಿಲ್ಲ. ಸಂಪದ್ಭರಿತ ಸಂಸ್ಕೃತಿಸಂಪನ್ನ ಕರ್ನಾಟಕವು ಮಾತ್ರ ಕನ್ನಡಿಗರ ವೈಶಿಷ್ಟ ವನ್ನು ಕಾಪಾಡಬಲ್ಲದು. ಕನ್ನಡ ಇತಿಹಾಸದಿಂದ ಕಲಿಯಬೇಕಾದ ದೊಡ್ಡ ಪಾಠವಿದೆ. ಕ್ರಿ. ಶ. ೧೫೬೫ರಲ್ಲಿ ವಿಜಯನಗರ ಸಾಮ್ರಾಜ್ಯವು ಮಣ್ಣು ಪಾಲಾದ ರಕ್ಕಸತಂಗಡಿ ಯುದ್ಧದ ಬಳಿಕ ಕನ್ನಡಿಗನಿಗೆ ಜೀವಸತ್ವವನ್ನು ಒದಗಿಸುತ್ತಿದ್ದ ದೊಡ್ಡ ರಾಜಮನೆತನಗಳು ಮರೆಯಾದವು. ಅಲ್ಲಿಂದ ಇಪ್ಪತ್ತನೆಯ ಶತಮಾನದವರೆಗೆ ಚರಿತ್ರೆಯ ಘಟನೆಗಳು ಕನ್ನಡಿಗರನ್ನು ಅಧೀರರನ್ನಾಗಿ ಮಾಡಿದವು. ಕರ್ನಾಟಕವು ಅನ್ಯಭಾಷೀಯರ ಆಡುಂಬೊಲ್ಲವಾಯಿತು. ಅನಂತಪುರ, ಸೇಲಂ, ನೀಲಗಿರಿ, ಕಾಸರಗೋಡು, ಗೋವಾ, ಔರಂಗಾಬಾದ್, ಸೊಲ್ಲಾಪುರ, ಕೊಲ್ಲಾಪುರ, ನಾಂದೇಡ್ ಇವೇ ಮೊದಲಾದ ಪ್ರದೇಶಗಳಲ್ಲಿ ಅನ್ಯಭಾಷೀಯರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಯೂರಿ ಅವು ಕನ್ನಡಿಗರ ಕೈ ತಪ್ಪಿದವು. ಕನ್ನಡಿಗ ತನ್ನತನದ ಬಗ್ಗೆ ಇದ್ದ ಜಾಗೃತಿಯನ್ನು ಕಳೆದುಕೊಂಡ ಫಲ ಇದು. ಅತಿ ವಲಸೆಯಿಂದಾಗಿ ಕರ್ನಾಟಕದಲ್ಲೇ ಇರುವ ಬೆಳಗಾವಿಯ ಪರಿಸ್ಥಿತಿ ಏನಾಗಿದೆ ನೋಡಿ.

ಏಳಿ, ಎದ್ದೇಳಿ !

ಕನ್ನಡ ಜನರೆ, ಏಳಿ! ಎದ್ದೇಳಿ! ಎದ್ದೇಳಿ! ಬೌದ್ಧಿಕರೆಂದು ಕರೆದುಕೊಳ್ಳುವ ಜನರೂ ರಾಜಕಾರಣಿಗಳೂ ವಿಶ್ವಭ್ರಾತೃತ್ವ, ಭಾರತದ ಅಖಂಡತೆ, ಭಾಷಾಂಧತೆ ಇತ್ಯಾದಿ ಮಾತುಗಳಿಂದ ನಮ್ಮನ್ನು ವಂಚಿಸಲು ಯತ್ನಿಸುತ್ತಿರುವ ಬಗ್ಗೆ ಜಾಗೃತರಾಗಿರಿ. ಕನ್ನಡಿಗ ಎಂದೂ ಭಾಷಾಂಧನಲ್ಲ. ಅವನು ಎಂದೂ ದೇಶದ್ರೋಹಿಯಲ್ಲ. ನಿಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಇರಲಿ. ತನ್ನತನವನ್ನು ಉಳಿಸಿಕೊಳ್ಳದ ಪ್ರಾಂತಕ್ಕೆ ಉಳಿಗಾಲಿವಿಲ್ಲ. ಅನ್ಯಭಾಷೀಯ ಸೋದರರ ಬಗ್ಗೆ ಗೌರವವಿಡೋಣ. ಆದರೆ ಅನ್ಯಭಾಷೀಯ ಸೋದರರು ಕರ್ನಾಟಕ್ಕೆ ಬಂದು ಕರ್ನಾಟಕವು ತಮ್ಮ ವಸಾಹತುಗಳಾಗುವಂತೆ ಮಾಡುತ್ತಿದ್ದಾರೆ. ಇದನ್ನು ತಡೆಯದಿದ್ದರೆ ಕರ್ನಾಟಕವು ಸರ್ವನಾಶವಾಗುತ್ತದೆ. ಧೀರರಾದ ಅಸ್ಸಾಮ್ ಯುವಕರು ಹೋರಾಡಿ ತಮ್ಮ ಪ್ರಾಂತ್ಯವನ್ನು ವಿನಾಶದಿಂದ ತಪ್ಪಿಸಿದರು. ಅಂತಹ ಹೋರಾಟಕ್ಕೆ ಕನ್ನಡದ ಜನ ಸಿದ್ಧವಾಗಬೇಕಾಗಿದೆ. ಗಡಿಗಳಲ್ಲಿ ಮರಾಠಿಗರು, ತಮಿಳರು, ಮಲೆಯಾಳಿಗಳು ಕನ್ನಡವನ್ನು ಲೆಕ್ಕಿಸುತ್ತಿಲ್ಲ. ಭವಿಷ್ಯದ ಬೆಂಗಳೂರು ಗಾಬರಿಯನ್ನು ಹುಟ್ಟಿಸುತ್ತದೆ. ಹಿಂದಿ ಅಧಿಕೃತಭಾಷೆಯ ಹೆಸರಲ್ಲಿ ವಿಜೃಂಭಿಸುತ್ತಿದೆ. ಕೇಂದ್ರದಲ್ಲಿ ಕನ್ನಡಿಗರ ಧ್ವನಿ -ದುರ್ಬಲದ ಮಾತಿರಲಿ -ಅದು ಇಲ್ಲವೇ ಇಲ್ಲ. ಇಂತಹ ಸಂದರ್ಭದಲ್ಲಿ ಕನ್ನಡ ಜನ ಒಗ್ಗಟಿನಿಂದ ನಿಂತು ತಮ್ಮೆಲ್ಲ ಶಕ್ತಿಯನ್ನು ಬಳಸಿ ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳಬೇಕಾಗಿದೆ. ೧೯೫೬ರಲ್ಲಿ ಭಾಷಾವಾರು ಪ್ರಾಂತಗಳ ವಿಂಗಡಣೆಯಾಗಿ, ಹತ್ತೊಂಬತ್ತು ಜಿಲ್ಲೆಗಳ ಕರ್ನಾಟಕವು ಉದಯ ಆಯಿತು. ಅದು ಇನ್ನೂ ಕುಗ್ಗದಂತೆ ಮಾಡೋಣ. ಕರ್ನಾಟಕದಲ್ಲಿ ಕನ್ನಡವು ರಾಜರಾಜೇಶ್ವರಿಯಾಗಿ ಮೆರೆದು ಭಾರತೀಯ ಸಂಸ್ಕೃತಿಯ ವಜ್ರ ಮಕುಟದಂತೆ ಬೆಳಗಲಿ ಎಂದು ಹಾರೈಸೋಣ. ಅದಕ್ಕಾಗಿ ಶ್ರಮಿಸೋಣ. ಭವಿಷ್ಯದತ್ತ ಕಣ್ಣು ನೆಟ್ಟು ನಮ್ಮ ಹಿಂದಿನ ಸಂಸ್ಕೃತಿಯಿಂದ ಸ್ಫೂರ್ತಿಯನ್ನು ಪಡೆದು ಮುನ್ನಡೆಯೋಣ.

ಇಂದು ಅಗತ್ಯವಾಗಿರುವುದು ಒಗ್ಗಟ್ಟು. ಒಕ್ಕಲಿಗ, ಲಿಂಗಾಯತ, ಬೇಡ, ಕುರುಬ, ಬ್ರಾಹ್ಮಣ, ದಲಿತ, ಮುಸಲ್ಮಾನ, ಕ್ರಿಶ್ಚಿಯನ್ ಎಂಬ ಬೇಧವಿಲ್ಲದೆ, ಜನತಾದಳ, ಕಾಂಗ್ರೆಸ್, ಬಿಜೆಪಿ ಎಂಬ ಬೇಧವಿಲ್ಲದೆ ಎಲ್ಲ ಕನ್ನಡದ ಜನ ಕನ್ನಡದ ಉಳಿವು ಬೆಳವಣಿಗೆಗಾಗಿ ಒಂದಾಗುವುದು ತೀರ ಅಗತ್ಯ. ಪಂಪನಲ್ಲಿ ಒಂದು ಪ್ರಸಂಗ: ದುರ್ಯೋಧನನು ಭೀಷ್ಮನಿಗೆ ಸೇನಾಪತಿ ಪಟ್ಟವನ್ನು ಕಟ್ಟಿ ಶತ್ರುಗಳನ್ನು ತನ್ನ ಮಂಚದ ಕಾಲಿಗೆ ಕಟ್ಟಿದೇನೆಂದು ಬೀಗುತ್ತಾನೆ. ಭೀಷ್ಮರು ವೃದ್ಧರೂ ಪಾಂಡವ ಪಕ್ಷಪಾತಿಗಳೂ ಆದುದರಿಂದ ಯುದ್ಧದಲ್ಲಿ ಕಾದಾಡಲಾರರು; ಆ ಕಾರಣ ತನಗೆ ಪಟ್ಟಕಟ್ಟಬೇಕೆಂಬ ಕರ್ಣನ ಮಾತಿನಿಂದ ಸಿಡಿದೆದ್ದ ದ್ರೋಣರು ಆತ ಹೀನ ಕುಲದವನೆಂದು ಹೀಯಾಳಿಸಿ, “ನಾಲಗೆ ಕುಲವನ್ನು ಹೇಳಿತು” ಎಂದು ಅವಮಾನಿಸುತ್ತಾರೆ. “ಕುಲಂ ಕುಲಮಲ್ತು, ಚಲಂ ಕುಲಂ, ಗುಣಂ ಕುಲಂ, ಅಭಿಮಾನಂ ಅದೊಂದೆ ಕುಲಂ..” ಹುಟ್ಟಿದ ಕುಲವು ನಿಜವಾದ ಕುಲವಲ್ಲ. ಚಲವೇ ಕುಲ, ಗುಣವೇ ಕುಲ, ಅಭಿಮಾನ ಒಂದೇ ಕುಲ. ಪಂಪನ ಈ ಕುಲದ ವ್ಯಾಖ್ಯೆ ನಮಗೆ ಪ್ರಸ್ತುತವಾದುದು. ಹುಟ್ಟಿನಿಂದ ನಾವು ಬೇರೆ ಬೇರೆ ಜಾತಿಯವರಾದರೂ ನಾವು ಚಲ, ಗುಣ, ಅಭಿಮಾನಗಳೆಔಟ್ಹ; ಕುಲವೆಂದು ಸಾರಿದ ಪಂಪನ ನಾಡಿನವರು. ನಮ್ಮದು ಅಭಿಮಾನದ ಕುಲ; ಸ್ವಾಭಿಮಾನವನ್ನು ಎತ್ತಿ ಹಿಡಿದ ಕನ್ನಡ ಕುಲ. ಯಾವನು ಸ್ವಾಭಿಮಾನಿಯಲ್ಲವೋ ಅವನು ಕನ್ನಡಿಗ ಅಲ್ಲ. ಇದು ನಮ್ಮ ದಾರಿದೀಪವಾಗಿರಲಿ. ತನ್ನ ಒಳಗೇ ಆಳವಾದ ಕೊರಗಿನಿಂದ ನೊಂದು ಬಸವಳಿದಿದ್ದಾಳೆ ಕನ್ನಡ ದೇವಿ. ಅವಳ ನೋವು ಒಳಗಣ್ಣಿಗೆ ಕಾಣುತ್ತಿದ; ಒಳಗಿವಿಗೆ ಕೇಳುತ್ತಿದೆ. ಆ ತಾಯಿ ತನ್ನ ಬಿಡುಗಡೆಗಾಗಿ ತನ್ನ ಮಕ್ಕಳಿಗೆ ಕರೆಯನ್ನು ಕೊಡುವ ಕಾಲವೂ ಬಂದೀತು. ಆ ಕಾಲ ಬಹುಬೇಗ ಬರಲಿ ಎಂದು ಕನ್ನಡ ಸೋದರರೇ ದಯಮಾಡಿ ಪ್ರಾರ್ಥಿಸಿ.
(ಮುಗಿಯಿತು)

ನೋಡಿ: –
ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೧
ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೨
ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೩
ಕನ್ನಡ ಸಂಸ್ಕೃತಿ – ನಮ್ಮ ಹೆಮ್ಮೆ – ಭಾಗ – ೪

Leave a Reply