ಕನ್ನಡ ರಾಜ್ಯೋತ್ಸವ(ಒಂದು ಸಂದೇಶ)
ಏಡಿಯಾ ಸೊಲೂಶನ್ಸ್ [http://vishvakannada.com/node/86|ಕಂಪೆನಿಯ ರಾಜ್ಯೋತ್ಸವದಲ್ಲಿ] ಹೊಸದಿಗಂತ ಪತ್ರಿಕೆಯ ಸಂಪಾದಕರಾದ ಶ್ರೀ ದು. ಗು. ಲಕ್ಷ್ಮಣ ಅವರು ಭಾಷಣ
ಕನ್ನಡ ರಾಜ್ಯೋತ್ಸವವನ್ನು ಸಡಗರ, ಸಂಭ್ರಮಗಳಿಂದ ಆಚರಿಸಲು ನಾವೆಲ್ಲ ಇಲ್ಲಿ ಸೇರಿದ್ದೇವೆ. ನವೆಂಬರ್ ತಿಂಗಳು ಕರ್ನಾಟಕದ ಪಾಲಿಗೆ ನಾಡಹಬ್ಬದ ಸಂಭ್ರಮವನ್ನು ತಂದುಕೊಡುತ್ತದೆ. ನಾಡು – ನುಡಿಯ ಸ್ಮರಣೆ ಮಾಡಿಕೊಳ್ಳುವುದರೊಂದಿಗೆ ಕನ್ನಡ ನಾಡು-ನುಡಿಯನ್ನು ಇನ್ನಷ್ಟು ಸಂಪದ್ಭರಿತ, ಶ್ರೀಮಂತಗೊಳಿಸುವ ಬಗೆ ಹೇಗೆ, ನಾಡು ಎದುರಿಸುತ್ತಿರುವ ಸಮಸ್ಯೆಗಳು ಯಾವುವು, ಕನ್ನಡಿಗರು ಮಾಡಬೇಕಾದುದೇನು ಮುಂತಾದ ಹತ್ತು ಹಲವು ಸಂಗತಿಗಳ ಕುರಿತು ಗಂಭೀರ ಸ್ವರೂಪದ ಚರ್ಚೆ, ಸಮಾಲೋಚನೆ, ಚಿಂತನೆಗಳು ನಡೆಯಬೇಕಾದ ಸಂದರ್ಭ ಇದು. ಈ ದಿಸೆಯಲ್ಲಿ ರಚನಾತ್ಮಕ, ಕೃತಿರೂಪದ ಕೆಲಸಗಳಿಗೆ ಚಾಲನೆ ದೊರೆಯಬೇಕಾದ ಸನ್ನಿವೇಶ ಇದು.
ಆದರೇನಾಗಿದೆ? ರಾಜ್ಯೋತ್ಸವವೆನ್ನುವುದು ಒಂದು ವಾರ್ಷಿಕ ಜಾತ್ರೆ ಆಗಿರುವುದು ವಿಪರ್‍ಯಾಸ. ನವೆಂಬರ್ ತಿಂಗಳು ಮುಗಿದ ಬಳಿಕ ಕನ್ನಡ- ನಾಡು ನುಡಿಯ ಕುರಿತು ನಾವ್ಯಾರೂ ತಲೆಕೆಡಿಸಿಕೊಳ್ಳಲು ಹೋಗದಿರುವುದು ದುರದೃಷ್ಟಕರ. ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವ ನಡೆಯಲಿ, ಅದಕ್ಕೆ ಯಾರದೂ ತಕರಾರಿಲ್ಲ. ಆದರೆ ಕನ್ನಡ ನಾಡು- ನುಡಿ ಕುರಿತ ಎಚ್ಚರ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ. ಅದು ವರ್ಷ ಪೂರ್ತಿ ಎಚ್ಚರವಾಗಿರಲಿ. ಕನ್ನಡ ಕುರಿತ ಕಾಳಜಿ, ಕಳವಳ ಹೀಗೆ ನಿರಂತರವಾಗಿ ನಮ್ಮೆದೆಯೊಳಗಿದ್ದರೆ ನಮ್ಮ ನಾಡು- ನುಡಿಗೆ ದೈನೇಸಿ ಸ್ಥಿತಿ ಒದಗುವ ಸಾಧ್ಯತೆ ಖಂಡಿತಾ ಬರೋಲ್ಲ.
ಕನ್ನಡ ಭಾಷೆಯ ಉಳಿವಿಗಾಗಿ ಇಂದು ಬೀದಿ ಹೋರಾಟ, ಮುಖಕ್ಕೆ ಮಸಿ ಬಳಿಯುವ ಹೋರಾಟ ನಡೆಸಬೇಕಾಗಿ ಬಂದಿರುವುದಕ್ಕೆ ಹೊಣೆ ಯಾರು? ಅನ್ಯ ಭಾಷಿಕರು ಖಂಡಿತ ಅಲ್ಲ. ಈ ಕುರಿತು ಪ್ರಾಮಾಣಿಕವಾಗಿ ಆಲೋಚಿಸಿದರೆ ಹೊಳೆಯುವ ಸತ್ಯಸಂಗತಿ ಏನೆಂದರೆ ಕನ್ನಡದ ಅಳಿವಿಗೆ , ಕನ್ನಡ ಮೂಲೆಗುಂಪಾಗುತ್ತಿರುವುದಕ್ಕೆ ಕನ್ನಡಿಗರೇ ಕಾರಣ. ನಾವು ಮಾತ್ರ ಸುಮ್ಮಸುಮ್ಮನೆ ಅನ್ಯರನ್ನು ನಿಂದಿಸುತ್ತಲೇ ರಾಜ್ಯೋತ್ಸವವನ್ನು ಆಚರಿಸುತ್ತಿರುತ್ತೇವೆ. ಮುಕ್ಕೋಟಿ ಕನ್ನಡಿಗರೆಂದು ಹೇಳಿಕೊಳ್ಳುವುದು ವಾಡಿಕೆ. ಈಗ ಬಿಡಿ, ಆ ಸಂಖ್ಯೆ ನಾಲ್ಕು ಕೋಟಿ ದಾಟಿ, ಐದು ಕೋಟಿಯ ಸನಿಹಕ್ಕೆ ಬಂದಿರಬಹುದು. ಆದರೆ ಈ ಐದು ಕೋಟಿ ಜನರು ಪ್ರಾಮಾಣಿಕವಾಗಿ ಕನ್ನಡದ ಬಗ್ಗೆ ಕಾಳಜಿ ಹೊಂದಿದ್ದಾರೆಯೆ? ಐದು ಕೋಟಿ ಎನ್ನುವುದು ಸಣ್ಣ ಸಂಖ್ಯೆಯೇನಲ್ಲ. ಇವರಿಷ್ಟೂ ಜನ ಮನಸ್ಸು ಮಾಡಿದರೆ ಕನ್ನಡ ಭಾಷೆಯ ಅಭಿವೃದ್ಧಿ, ಕನ್ನಡ ಪುಸ್ತಕಗಳ ಮಾರಾಟದ ಭರಾಟೆಗೆ ವೇಗೋತ್ಕರ್ಷ ತಂದುಕೊಡಲು ಸಾಧ್ಯವಿಲ್ಲವೆ? ಆ ಐದುಕೋಟಿ ಇವರೆಲ್ಲರ ಮನೆಯ ಮಾತು ಕನ್ನಡ. ಹೃದಯದ ಭಾಷೆ ಕನ್ನಡ. ಆದರೆ ವ್ಯಾವಹಾರಿಕ ಭಾಷೆ? ಈ ಪೈಕಿ ದೊಡ್ಡ ಸಂಖ್ಯೆಯ ಜನರು ಜಾಣತನದಿಂದ ಕನ್ನಡವನ್ನು ಮರೆತಿರುವುದನ್ನು ನಾವು ಹೇಗೆ ಮರೆಯಲು ಸಾಧ್ಯ?ಅದರಲ್ಲೂ ಬೆಂಗಳೂರಿನಲ್ಲಿ ವಾಸಿಸುವ ಕನ್ನಡಿಗರು ಕನ್ನಡವೂ ಅಲ್ಲದ ಇತ್ತ ಇಂಗ್ಲಿಷ್ ಕೂಡ ಅಲ್ಲದ `ಕಂಗ್ಲಿಷ್ ‘ ಭಾಷೆಗೆ ಮೊರೆ ಹೋಗಿರುವುದು ಯಾವ ಪುರುಷಾರ್ಥಕ್ಕಾಗಿ? ನಮ್ಮ ನಮ್ಮ ಮನೆಗಳಲ್ಲಿ ದಿನ ಬೆಳಗಾದರೆ ಕೇಳಿಬರುವ ಭಾಷೆಯ ಇಂಪು ಯಾವುದು? ಅದು ಕನ್ನಡದ ಕಂಪನ್ನು ಹೊರಸೂಸುತ್ತಿದೆಯೆ? ಅಪ್ಪ, ಅಮ್ಮ, ಅಣ್ಣತಂಗಿ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ ಅತ್ತಿಗೆ, ಅತ್ತೆ, ಮಾವ , ಭಾವ, ನಾದಿನಿ, ಮೈದುನ,ಅಜ್ಜ ಅಜ್ಜಿ, ದೊಡ್ಡಪ್ಪ , ಮೊಮ್ಮಗ, ಷಡ್ಕ ಮುಂತಾದ ಅಪ್ಪಟ ಕನ್ನಡದ ಮನುಷ್ಯ ಸಂಬಂಧವನ್ನು ಗುರುತಿಸುವ ಪದಗಳು ಈಗಿನ ಹೊಸ ಪೀಳಿಗೆಗೆ ಅಪರಿಚಿತ ಶಬ್ದಗಳಾಗಿರುವುದಕ್ಕೆ ಯಾರು ಹೊಣೆ? ಡ್ಯಾಡಿ, ಮಮ್ಮಿ (ಈಗ ಅದು ಡ್ಯಾಡ್, ಮಾಮ್) ಅಂಕಲ್, ಆಂಟಿ, ಕಸಿನ್ , ಗ್ರ್ಯಾಂಡ್‌ಪಾ, ಕೋ-ಬ್ರದರ್ , ಫಾದರ್ ಇನ್ ಲಾ, ಸಿಸ್ಟರ್ ಇನ್ ಲಾ, ನೀಸ್ ಶಬ್ದಗಳು ನಮ್ಮ ಮನೆಯನ್ನು ಆಕ್ರಮಿಸಿಕೊಳ್ಳಲು ಮರಾಠಿಗರಾಗಲಿ, ಇಂಗ್ಲಿಷರಾಗಲಿ, ತಮಿಳರಾಗಲಿ , ತೆಲುಗಿನವರಾಗಲಿ ಖಂಡಿತ ಕಾರಣರಲ್ಲ. ಮಮ್ಮಿ ಅಂದರೆ ಅರ್ಥ dead body. ಅಮ್ಮ ಎಂದಾಗ ಆಗುವ ಸಂತಸ, ಆನಂದ ಮಮ್ಮಿ ಎಂದಾಗ ಆಗೋದಿಲ್ಲ. ಆದರೂ ನಮ್ಮ ಮಕ್ಕಳಿಗೆ ನಾವು `ಅಮ್ಮ ಎಂದು ಹೇಳು ‘ ಎಂದು ಕಲಿಸುವುದಿಲ್ಲ.
ಮನೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಬೇಕಾದ ಹುಟ್ಟುಹಬ್ಬ ಎಂಬ ಸಂಭ್ರಮ ಕಾರ್ಯಕ್ರಮ ಇವತ್ತು ಬರ್ತ್‌ಡೇ ಆಗಿ ಮಾರ್ಪಟ್ಟು ದೀಪ ಆರಿಸುವ ಅಸಂಬದ್ಧ ನಡವಳಿಕೆಗೆ ಸೀಮಿತವಾಗಿರುವುದು ಅದೆಂತಹ ವಿಪರ್ಯಾಸ ಅನ್ನೋದನ್ನ ನೀವೇ ಆಲೋಚಿಸಿ. ದೀಪ ಬೆಳಗಿಸುವುದು ಭಾರತೀಯ ಪದ್ಧತಿ. ಬದುಕು ದೀಪದಂತೆ ಚಿರಕಾಲ ಬೆಳಗುತ್ತಿರಲಿ, ಆರದಿರಲಿ ಬೆಳಕು -ಎನ್ನುವ ಕಾರಣಕ್ಕಾಗಿ ಹುಟ್ಟುಹಬ್ಬದಂದು ದೀಪ ಹಚ್ಚುತ್ತೇವೆ. ಆದರೆ `ಬರ್ತ್‌ಡೇ’ಯಲ್ಲಿ ದೀಪ ಬೆಳಗುವ ಬದಲು ದೀಪ ನಂದಿಸುತ್ತೇವೆ. ತನ್ಮೂಲಕ ಬದುಕೆಲ್ಲ ಕತ್ತಲಾಗಿರಲಿ ಎಂದು ನಾವೇ ಬಯಸುತ್ತೇವೆ. ದೀಪ ಆರಿಸಿ Happy birthday to you ಎಂದು ಶುಭ ಹಾರೈಸುವುದು ಅದೆಷ್ಟು ಹಾಸ್ಯಸ್ಪದ . ಎಂದು ನಮ್ಮ ತಾಯಂದಿರು, ದೊಡ್ಡವರು ಎಂದಾದರೂ ಯೋಚಿಸಿದ್ದಾರೆಯೇ? ಹೀಗೇಕೆ ಮಾಡ್ತೀರಿ ಎಂದು ಕೇಳಿದರೆ ತಟ್ಟನೆ ಸಿಗುವ ಉತ್ತರ : `ಅಯ್ಯೋ, ಪಕ್ಕದ್ಮನೇಲಿ ಹಾಗೇ ಮಾತ್ತಾರೆ ಅಥವಾ ಅವರ ಮನೇಲಿ ಹಾಗೇ ಆಚರಿಸ್ತಾರೆ. ಅದಕ್ಕೇ ನಾವು ಹಾಗೇ ಅಚರಿಸಿದರೆ ತಪ್ಪೇನು?’
ಹೀಗೆ ಯಾರೋ ಹಾಗೆ ಆಚರಿಸ್ತಾರೆ ಅನ್ನೋ ಕಾರಣಕ್ಕೆ ನಾವು ಕುರುಡರಾಗಿ ಅದನ್ನೇ ಅನುಸರಿಸುವುದಿದೆಯಲ್ಲ -ಅದನ್ನೇ ಸರಳವಾದ ಶಬ್ದಗಳಲ್ಲಿ `ಸ್ವಾಭಿಮಾನಶೂನ್ಯರು ‘ ಎನ್ನಬೇಕಾಗುತ್ತದೆ. ನಮಗೆ ನಮ್ಮದೇ ಆದ ಸಂಸ್ಕೃತಿ, ರೀತಿ- ರಿವಾಜು, ಪದ್ಧತಿ, ನಡವಳಿಕೆ ಅನ್ನೋದು ಬೇಡವೆ? ಯಾರೋ ಪರಕೀಯರ ಪದ್ಧತಿ, ಅವರ ಹುಟ್ಟುಹಬ್ಬದ ಅನುಕರಣೆ ನಮಗೇಕೆ ಆಪ್ಯಾಯಮಾನವೆನಿಸಬೇಕು? ಪರಕೀಯ ಸಂಸ್ಕೃತಿಯ ವ್ಯಾಮೋಹ ನಮ್ಮನ್ನು ಇಷ್ಟೊಂದು ಸ್ವಾಭಿಮಾನಶೂನ್ಯರನ್ನಾಗಿ ಮಾಡಬೇಕೆ ?
ಆದರೆ ಕೆಲವರಿದ್ದಾರೆ : ಅವರು ಮನೆಯಲ್ಲಿ ತಮ್ಮ ಮಕ್ಕಳಿಗೆ ಗುಟ್ಟಾಗಿ ದೀಪ ಹಚ್ಚಿ ಹುಟ್ಟುಹಬ್ಬ ಆಚರಿಸಿ, ಸಾರ್ವಜನಿಕವಾಗಿ ದೀಪ ಆರಿಸಿ ಕೇಕ್ ಕತ್ತರಿಸಿ ಬರ್ತ್‌ಡೇ ಆಚರಿಸುತ್ತಾರೆ. ಅದೂ ಇರಲಿ, ಇದೂ ಇರಲಿ ಯಾರಿಗೂ ಬೇಜಾರಾಗದಿರಲಿ. ನಮ್ಮ ಸೋಪಿಯಲ್ ಸ್ಟೇಟಸ್‌ಗೆ ತೊಂದರೆಯಾಗದಿರಲಿ ಅನ್ನೋದು ಇಂಥವರ ಯೋಚನೆ.
ಮಕ್ಕಳಿಗೆ ಎದೆ ಹಾಲು ಸರ್ವಶ್ರೇಷ್ಠ ಎಂಬುದು ಹಿಂದಿನಿಂದಲೂ ನಮ್ಮವರ ನಂಬಿಕೆ. ಈಗ ವಿಶ್ವ ಆರೋಗ್ಯ ಸಂಸ್ಥೆ (World Health organisation ) ಕೂಡ ಜಗತ್ತಿನಾದ್ಯಂತ ಇದೇ ಸಂದೇಶ ಸಾರುತ್ತಲೇ ಇದೆ. ಆದರೆ ನಗರದ ಸಂಸ್ಕೃತಿಯನ್ನು ಅಪ್ಪಿಕೊಂಡಿರುವ ಕೆಲವು ತಾಯಂದಿರಿಗೆ ತಮ್ಮ ದೇಹ ಸೌಂದರ್‍ಯ ಕೆಡಕೂಡದು ಎನ್ನುವ ಕಾರಣಕ್ಕಾಗಿ, ತಮ್ಮ Physique maitain ಆಗಬೇಕು ಎಂಬ ಭ್ರಮೆಗಾಗಿ ಮಕ್ಕಳಿಗೆ ಎದೆಹಾಲು ಕೊಡದೆ ಬಾಟಲಿ ಹಾಲನ್ನು ನೀಡುತ್ತಾರೆ. ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ಆ ಹಾಲು ಕುಡಿದರೆ ದೇಹ ಬಲಿಷ್ಠವಾಗುವುದಲ್ಲದೆ ಯಾವುದೇ ರೋಗರುಜಿನ ಬರುವುದಿಲ್ಲ. ಅದರಲ್ಲಿ ರೋಗ ನಿವಾರಕ ಶಕ್ತಿ ಇರುತ್ತದೆ. ಆದರೆ ಬಾಟಲಿ ಹಾಲಿನಲ್ಲಿ ಅಂಥ ರೋಗ ನಿರೋಧಕ ಶಕ್ತಿ ಇರಲು ಸಾಧ್ಯವಿಲ್ಲ. ತಾಯಿಯ ಹಾಲು ಕುಡಿದವರು ತಾಯಿಪ್ರೇಮ, ದೇಶಪ್ರೇಮ ಬೆಳೆಸಿಕೊಂಡು ಉತ್ತಮ ಪ್ರಜೆಯಾಗುತ್ತಾನೆ. ದೇಶಭಕ್ತನಾಗುತ್ತಾನೆ ಆದರೆ ಬಾಟಲಿ ಹಾಲು ಕುಡಿದವನು ಮುಂದೆ ಕೇವಲ `ಬಾಟಲಿಪ್ರೇಮಿ’ಆಗಬಹುದಷ್ಟೆ.
ಬ್ರಿಟಿಷರು ನಮ್ಮ ದೇಶದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ವರ್ಷ ಆಡಳಿತ ನಡೆಸಿದರು. ಹಾಗಾಗಿ ಇಂಗ್ಲಿಷ್ ಭಾಷೆ, ಇಂಗ್ಲಿಷ್ ಸಂಸ್ಕೃತಿ ನಮ್ಮ ಮೇಲೆ ಗಾಢ ಪ್ರಭಾವ ಬೀರಿದೆ ಎಂದು ವಾದಿಸುವವರಿದ್ದಾರೆ. ಹೀಗೆ ಹೇಳಿಕೊಳ್ಳಲು ನಮಗೆ ನಾಚಿಕೆಯಾಗಬೇಕು. ಇಸ್ರೇಲ್ ದೇಶ ಕೂಡ ಹರಿದು ಹಂಚಿಹೋಗಿತ್ತು.ಯಹೂದಿಗಳು ಎಲ್ಲೆಲ್ಲೋ ಇದ್ದರು. ಆದರೂ ಆ ದೇಶವನ್ನು ಯಹೂದಿಗಳು ತಮ್ಮ ಪರಾಕ್ರಮದಿಂದ ಮತ್ತೆ ಒಂದುಗೂಡಿಸಿದರು. ಹೀಬ್ರೂ ಭಾಷೆಯನ್ನು ಜೀವಂತವಾಗಿಟ್ಟರು. ಈಗಲೂ ಇಸ್ರೇಲ್‌ನಲ್ಲಿ ಹೀಬ್ರೂ ಅಧಿಕೃತ ಭಾಷೆ. ಅವರ ವ್ಯವಹಾರವೆಲ್ಲ ಅದೇ ಭಾಷೆಯಲ್ಲಿ. ಜಪಾನ್ ಪ್ರಧಾನಿ ಎರಡು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದರು. ಅವರಿಗೆ ಇಂಗ್ಲಿಷ್ ಬರುತ್ತಿತ್ತು. ಆದರೆ ಅವರು ಇಲ್ಲಿನ ಮುಖ್ಯಮಂತ್ರಿಯವರ ಜೊತೆ ಮಾತನಾಡಿದ್ದು ಜಪಾನಿ ಭಾಷೆಯಲ್ಲಿ. ಭಾಷಾಂತರಕಾರ ಅದನ್ನು ಇಂಗ್ಲಿಷಿಗೆ ತರ್ಜಮೆ ಮಾಡುತ್ತಿದ್ದ. ನಮ್ಮ ಮುಖ್ಯಮಂತ್ರಿಯೂ ಇದೇ ರೀತಿ ಕನ್ನಡದಲ್ಲೂ ಮಾತನಾಡಬಹುದಿತ್ತು. ಅದನ್ನು ಭಾಷಾಂತರಿಸಿ ಜಪಾನ್ ಭಾಷೆಯಲ್ಲಿ ಜಪಾನ್ ಪ್ರಧಾನಿಗೆ ತಿಳಿಸುವವರಿದ್ದರು. ಆದರೆ ನಮ್ಮ ಮುಖ್ಯಮಂತ್ರಿ ಜೋತು ಬಿದ್ದಿದ್ದು ಇಂಗ್ಲಿಷ್‌ಗೆ. ಜಪಾನಿನ ಪ್ರಖ್ಯಾತ ಹೀರೊ ಹೊಂಡಾ ಮೋಟಾರ್ ಕಂಪೆನಿಯ ಸಿಇಓ ಬೆಂಗಳೂರಿಗೆ ಬಂದಿದ್ದಾಗ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ್ದು ಜಪಾನ್ ಭಾಷೆಯಲ್ಲಿ. ಪತ್ರಕರ್ತರು ಇಂಗ್ಲಿಷ್‌ನಲ್ಲಿ ಕೇಳುತ್ತಿದ್ದ ಪ್ರಶ್ನೆ ಅವನಿಗರ್ಥವಾಗುತ್ತಿತ್ತು. ಆದರೆ ಆತ ಉತ್ತರಿಸುತ್ತಿದ್ದುದು ಜಪಾನ್ ಭಾಷೆಯಲ್ಲಿ. ಅದನ್ನು ಅನಂತರ ಭಾಷಾಂತರಿಸಿ ಇಂಗ್ಲಿಷ್‌ನಲ್ಲಿ ಒಬ್ಬಾಕೆ ಹೇಳುತ್ತಿದ್ದರು. ಜಪಾನೀಯರು ಎಲ್ಲೇ ಹೋದರೂ ಅವರ ಭಾಷೆಯಲ್ಲೇ ವ್ಯವಹರಿಸುತ್ತಾರೆ. ಇಂಗ್ಲಿಷ್ ಬಳಸುವುದಿಲ್ಲ. ಪ್ರೆಂಚರೂ ಕೂಡ ಹಾಗೆಯೇ. ಬೇರೆ ದೇಶಗಳಿಗೆ ಹೋದಾಗ ತಮ್ಮ ಭಾಷೆಯಲ್ಲಿ ಮಾತನಾಡುವುದು ಅವರಿಗೆ ಕಿರಿಕಿರಿ ಎನಿಸುವುದಿಲ್ಲ. ಹೆಮ್ಮೆಯೆನಿಸುತ್ತದೆ. ಆದರೆ ನಮಗೆ ನಮ್ಮ ಪಕ್ಕದ ಮನೆಯವರ ಬಳಿ, ಕಚೇರಿಯ ಸಹೋದ್ಯೋಗಿ ಬಳಿ ಮಾತನಾಡುವ ಸಂದರ್ಭ ಬಂದಾಗಲೂ ನಾವು ಬಳಸುವುದು ಇಂಗ್ಲಿಷ್. ನಾವು ಮೊರೆಹೋಗುವುದು ಇಂಗ್ಲಿಷ್‌ಗೆ. ಇಂತಹ ಹೀನಾಯತೆ ನಮಗೇಕೆ? ನಾವ್ಯಾಕೆ ನಮ್ಮನ್ನು ಇಂಗ್ಲಿಷ್ ಭಾಷೆಗೆ ಮಾರಿಕೊಂಡಿದ್ದೇವೆ?
ಇದರರ್ಥ ಇಂಗ್ಲಿಷ್ ನಮಗೆ ಬೇಡವೇ ಬೇಡ ಎಂದಲ್ಲ. ಇಂಗ್ಲಿಷನ್ನು ದ್ವೇಷಿಸಬೇಕು ಎಂದೂ ಅಲ್ಲ. ಇಂಗ್ಲಿಷನ್ನು ಕಲಿಯೋಣ. ಜಗತ್ತಿನ ಜ್ಞಾನ- ವಿಜ್ಞಾನಗಳನ್ನು ಅರಗಿಸಿಕೊಳ್ಳಲು, ನಮ್ಮದಾಗಿಸಿಕೊಳ್ಳಲು ಇಂಗ್ಲಿಷ್ ಒಂದು ಬೆಳಕಿಂಡಿಯಿದ್ದಂತೆ . ಆದರೆ ಇಂಗ್ಲಿಷ್ ಎಲ್ಲಿ ಅವಶ್ಯಕವೋ ಅಲ್ಲಿ ಮಾತ್ರ ಬಳಸೋಣ. ಅದಕ್ಕೊಂದು ಪರಿ ಹಾಕೋಣ. ಇತ್ತೀಚೆಗೆ ಬೆಂಗಳೂರಿನ ಹೆಸರಾಂತ ಸಾಫ್ಟ್‌ವೇರ್ ಕಂಪನಿಯೊಂದರ ಸಾಂಸ್ಕೃತಿಕ ಕಾರ್‍ಯಕ್ರಮದಲ್ಲಿ ಕನ್ನಡ ಹಾಡು ಹೇಳಲು ಗಾಯಕಿಯೊಬ್ಬರು ಪ್ರಯತ್ನಿಸುತ್ತಿದ್ದಂತೆ `ನೋ ಕನ್ನಡ ಸಾಂಗ್ಸ್ . ವಿ ವಾಂಟ್ ಹಿಂದಿ ಸಾಂಗ್ಸ್’ ಎಂಬ ಪ್ರತಿಭಟನೆ ಕೇಳಿಬಂತು. ತೆಲುಗು ಹಾಡನ್ನು ಹಾಡಿದಾಗ ಈ ಪ್ರತಿಭಟನೆ ಕೇಳಿಬರಲಿಲ್ಲ. ಕನ್ನಡದ ಬಗ್ಗೆ ಇಂತಹ ತಾತ್ಸಾರ ಏಕೆ?
ಕನ್ನಡದ ದಾಸವರೇಣ್ಯರಾದ ಪುರಂದರದಾಸರು, ಕನಕದಾಸರು ಭಕ್ತಿಪಂಥದ ಮೂಲಕ, ತಮ್ಮ ಕೀರ್ತನೆಗಳ ಮೂಲಕ ಅದ್ಭುತವಾದ ಕ್ರಾಂತಿ ಮಾಡಿದರು. ನಾಡು- ನಾಡಿಯನ್ನು ಶ್ರೀಮಂತಗೊಳಿಸಿದರು. ಏಳುಬಾರಿ ಜ್ಞಾನಪೀಠ ಪ್ರಶಸ್ತಿ ಪಡೆದ ಹೆಮ್ಮೆ ಕನ್ನಡದ್ದು, ಬೇರೆ ಯಾವ ಭಾಷೆಗೂ ಇಂತಹ ಹೆಮ್ಮೆಯ ಕಿರೀಟ ಇರಲು ಸಾಧ್ಯವಿಲ್ಲ. ಎಸ್.ಎಲ್. ಭೈರಪ್ಪ ಅವರ ಕಾದಂಬರಿಗಳು ೧೩ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಜನಪ್ರಿಯತೆ ತಂದುಕೊಟ್ಟಿದೆ. ಇಂತಹ ಒಬ್ಬ ಶ್ರೇಷ್ಠ ಕಾದಂಬರಿಕಾರ ಇನ್ನಾವ ಭಾಷೆಯಲ್ಲೂ ಇಲ್ಲ. ಹೀಗೆ ಸಾಹಿತ್ಯ- ಸಂಸ್ಕೃತಿ- ಸದಭಿರುಚಿ- ಸಂಗೀತ ಯಾವ ಕ್ಷೇತ್ರದಲ್ಲೂ ನಾವು ಯಾರಿಗೂ ಕಡಿಮೆಯಿಲ್ಲ. ಮೊನ್ನೆ ಭಾನುವಾರ ಸುವರ್ಣಕರ್ನಾಟಕ ಮಹೋತ್ಸವ ಆಚರಣೆ ನಿಮಿತ್ತ ವಿಧಾನಮಂಡಲದ ಉಭಯ ಸದನಗಳ ಜಂಟಿ ಅವೇಶನದಲ್ಲಿ ಮಾತನಾಡಿದ ರಾಷ್ಟ್ರಪತಿ ಎಪಿಜೆ ಅಬ್ದುಲ್‌ಕಲಾಂ ಅವರು ಮೈಸೂರು ಪಾಕ್, ಮದ್ದೂರು ವಡೆ, ಇಡ್ಲಿ, ಸಾಂಬಾರ್, ಮಸಾಲೆ ದೋಸೆ, ಉಪ್ಪಿಟ್ಟು ಇತ್ಯಾದಿ ಕರ್ನಾಟಕದ ರುಚಿಕರ, ಸ್ವಾದಿಷ್ಟ ತಿನಿಸುಗಳನ್ನು ಭಾಷಣದಲ್ಲಿ ನೆನಪಿಸಿಕೊಂಡು ಸಂತಸಪಟ್ಟರು. ಕರ್ನಾಟಕದ ಅಸೀಮ ಸಂಪನ್ಮೂಲ, ಈ ರಾಜ್ಯಕ್ಕಿರುವ ಅಗಾಧ ಶಕ್ತಿಯನ್ನು ಅವರು ನೆನಪು ಮಾಡಿಕೊಟ್ಟಿದ್ದಾರೆ. ಸಾಂಸ್ಕೃತಿಕವಾಗಿ ಇದೊಂದು ಸಂಪದ್ಭರಿತ, ಶ್ರೀಮಂತ ರಾಜ್ಯವೆಂದು ಅವರೇ ಕೊಂಡಾಡಿದ್ದಾರೆ. ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಮುತ್ತುರತ್ನ, ವಜ್ರವೈಡೂರ್ಯಗಳನ್ನು ಸೇರಿನಲ್ಲಿ ಅಳೆದುಕೊಡುತ್ತಿದ್ದರು. ಅಷ್ಟೊಂದು ವೈಭವಶಾಲಿ ಇತಿಹಾಸ ನಮ್ಮದು ಎಂಬುದು ನಮಗೆಲ್ಲ ತಿಳಿದಿರುವ ಸಂಗತಿಯೇ ಆಗಿದೆ. ಹೀಗಿರುವಾಗ ನಾವು ನಮ್ಮ ನಾಡು- ನುಡಿಯ ಬಗ್ಗೆ ಯಾವುದೇ ಚಿಲ್ಲರೆ ಕಾರಣಕ್ಕಾಗಿ ಅನಾದರ, ಅನಾಸ್ಥೆ ಬೆಳೆಸಿಕೊಳ್ಳುವುದು ಎಷ್ಟರಮಟ್ಟಿಗೆ ಸಮಂಜಸ? ನೀವೇ ಹೇಳಿ.
ಕನ್ನಡಾಭಿಮಾನ ಬೆಳೆಸಿಕೊಳ್ಳುವುದೆಂದರೆ ಇತರ ಭಾಷೆಗಳನ್ನು ದ್ವೇಷಿಸಬೇಕೆಂಬ ತಪ್ಪು ಕಲ್ಪನೆ ಖಂಡಿತ ಸರಿಯಲ್ಲ. ಭಾರತದಂಹ ವಿಶಾಲ ಬಾಹುಳ್ಯವಿರುವ ದೇಶದಲ್ಲಿ ರಾಜ್ಯಕ್ಕೊಂದು ಜಿಲ್ಲೆಗೊಂದು ಭಾಷೆಗಳಿವೆ. ಹಲವು ಹೂಗಳ ಸುಂದರ ತೋಟವಿದ್ದಂತೆ ಹಲವು ಭಾಷೆಗಳ ವೈವಿದ್ಯಪೂರ್ಣ ದೇಶ ನಮ್ಮದು. ಕನ್ನಡದಲ್ಲೇ ಹಲವಾರು ಬಗೆಗಳಿವೆ. ಬೆಂಗಳೂರು ಕಂಗ್ಲಿಷ್ ಕನ್ನಡ, ಮೈಸೂರಿನ ಮೆಲುದನಿ ಕನ್ನಡ, ಧಾರವಾಡದ ಗಂಡುಕನ್ನಡ, ದಕ್ಷಿಣಕನ್ನದ ಗ್ರಾಂಥಿಕ ಕನ್ನಡ, ಕಾಸರಗೋಡಿನ ಮಲೆಯಾಳಿ ಕನ್ನಡ, ಹೈದಾರಾಬಾದ್ ಕರ್ನಾಟಕದ ಉರ್ದು ಮಿಶ್ರಿತ ಕನ್ನಡ – ಹೀಗೆ ಹತ್ತು ಹಲವು ತರ. ಅಸ್ಸಾಂ ರಾಜ್ಯದಲ್ಲಂತೂ ಜಿಲ್ಲೆಗೊಂದು ಭಾಷೆ ಇದೆ. ಅದಕ್ಕೇ ಅದನ್ನೂ ಅಸಮ ಯಾವುದರಲ್ಲೂ ಸಮಾನತೆ ಇಲ್ಲ ಎಂಬ ಹೆಸರು ಬಂದಿದೆ.
ಇವೆಲ್ಲವನ್ನೂ ಮನಗಂಡೇ ರಾಷ್ಟ್ರಕವಿ ಕುವೆಂಪು ತಮ್ಮ ಕವನದಲ್ಲಿ ಹೇಳಿರೋದು – ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ: ಭಾರತಾಂಬೆಯ ಪುತ್ರಿ ಕರ್ನಾಟಕ ಮಾತೆ . ಭಾರತವೇ ತಾಯಿ- ಆಕೆಯ ಪುತ್ರಿ ಕರ್ನಾಟಕ ಮಾತ್ರ ಕನ್ನಡಾಂಬೆ. ತಾಯಿ ಭಾರತಾಂಬೆಗೆ ಕನ್ನಡಾಂಬೆ ಹೇಗೆ ಮಗಳೋ ಅದೇ ರೀತಿ ತೆಲುಗು,ತಮಿಳು, ಮಲಯಾಳಂ, ಮರಾಠಿ, ಅಸ್ಸಾಂ, ಹಿಂದಿ, ಬೆಂಗಾಲಿ , ಒರಿಯಾ,ಬಿಹಾರಿ, ಗುಜರಾತಿ, ಭೋಜ್‌ಪುರಿ ಎಲ್ಲ ಭಾಷೆಗಳು ಮಕ್ಕಳು. ನಮಗೆ ಅವೆಲ್ಲಾ ಸೋದರ ಭಾಷೆಗಳು. ಕರ್ನಾಟಕ ಹಿತ ರಕ್ಷಣೆ ಪ್ರಶ್ನೆ ಬಂದಾಗ ನಾವು ಸ್ವಾಭಿಮಾನವನ್ನು ಪ್ರಕಟಿಸುವುದರ ಜತೆಗೆ ನಾವು ಭಾರತಾಂಬೆಯ ಮಕ್ಕಳು, ಆಕೆಯ ಸತ್ಪುತ್ರರು ಎಂಬುದನ್ನು ನೆನಪಿಟ್ಟುಕೊಳ್ಳಬೇಕಾದ ಅಗತ್ಯವಿದೆ. ಹಾಗೆ ನೆನಪಿಟ್ಟುಕೊಂಡರೆ, ನಮ್ಮ ಮನದಲ್ಲಿ ಆ ವಿಶಾಲ ಭಾವನೆಯಿದ್ದರೆ ಯಾವುದೇ ಸಂಘರ್ಷಕ್ಕೆ ಅವಕಾಶ ಇರುವುದಿಲ್ಲ. ಈಗ ಬೇಕಾಗಿರುವುದು ಸಂಘರ್ಷವಲ್ಲ, ಸಾಮರಸ್ಯ. ಇಡೀ ಭಾರತದಲ್ಲಿ ಕೋಮುಸಾಮರಸ್ಯ , ಭಾಷಾ ಸಾಮರಸ್ಯ, ಸಾಂಸ್ಕೃತಿಕ ಸಾಮರಸ್ಯ ಏರ್ಪಟ್ಟಾಗ ರಾಜ್ಯಹಿತ ರಕ್ಷಣೆಯ ಜೊತೆಗೆ ರಾಷ್ಟ್ರಹಿತದ ರಕ್ಷಣೆಯೂ ಆಗುತ್ತದೆ.
ಕನ್ನಡಕ್ಕಾಗಿ ಕೈ ಯೆತ್ತೋಣ
ಅದು ಕಲ್ಪವೃಕ್ಷವಾಗಲಿ, ಕಾಮಧೇನುವಾಗಲಿ
ಕನ್ನಡಕ್ಕಾಗಿ ಕೈಯೆತ್ತೋಣ
ಅದು ಮೋರೆಗೆ ಮಸಿ ಬಳಿಯುವುದಕ್ಕಷ್ಟೇ ಸೀಮಿತವಾಗದಿರಲಿ
ಕೊನೆಯದಾಗಿ ಇಲ್ಲಿ ಸೇರಿರುವ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆಲ್ಲ ನನ್ನ ನಿವೇದನೆ. ಇದುವರೆಗೆ ನಾನು ಹೇಳಿದ್ದರಲ್ಲಿ ಏನಾದರೂ ಕಾಳಿನಂಶ ಇದ್ದರೆ ಅದನ್ನು ಆರಿಸಿಕೊಳ್ಳಿ. ಬರೇ ಜೋಳ್ಳು ಎನಿಸಿದರೆ ಅದನ್ನು ಗಾಳಿಯಲ್ಲಿ ತೂರಿಬಿಡಿ.
ಇನ್ನೊಂದು ಸಂದೇಶ : Surf your innernet than the internet. Then only you can become a perfect gentleman.
ನಮಸ್ಕಾರ ಕನ್ನಡ . ರಾಜ್ಯೋತ್ಸವದ ಶುಭಾಶಯಗಳು.
October 12th, 2012 at 6:41 pm
very good
October 12th, 2012 at 6:42 pm
The above statement is very good
October 24th, 2012 at 5:49 pm
kannada rajyosvta shubashegalhu
October 24th, 2012 at 5:50 pm
ok sar
October 24th, 2012 at 5:51 pm
awaiting
October 29th, 2012 at 10:22 am
very nice
October 29th, 2012 at 4:23 pm
Bhala chulo baradi
October 29th, 2012 at 4:23 pm
Bahal chulo baradi
November 6th, 2012 at 1:00 pm
superb and heart touching sentences written in the message
November 7th, 2012 at 10:25 pm
plz even put other recent and short speeches on kannada rajotsava
November 10th, 2012 at 7:23 pm
prathiyobba kannadigarigu ee sandeshavannu tilisabeku …
October 31st, 2013 at 7:53 pm
excellent
October 31st, 2013 at 7:53 pm
superb
October 31st, 2013 at 10:06 pm
splended speech… helped me a lot… thanks.. 🙂
November 1st, 2014 at 8:36 am
VERY GOOD
November 1st, 2014 at 8:38 am
very nice 7 pentastic
October 31st, 2017 at 8:38 am
ಸಾರ್ ಅದ್ಬುತವಾಗಿದೆ ನಿಮಗೆ ನನ್ನ ನಮನಗಳು
October 31st, 2017 at 6:20 pm
one of the best speeches sir…
November 24th, 2017 at 11:15 pm
Hats off for timely call.