ಕನ್ನಡ ಚಳುವಳಿ : ಇತಿಹಾಸ ಮತ್ತು ವ್ಯಾಪ್ತಿ
(ಸಂಗ್ರಹ)
ಎರಡು ಸಾವಿರ ವರ್ಷಗಳಿಂದ ಕೋಟ್ಯಂತರ ಜನರಿಗೆ ಬದುಕಿನ ಎಲ್ಲಾ ರಂಗಗಳಲ್ಲಿ ಅಭಿವ್ಯಕ್ತಿ ಮಾಧ್ಯಮವಾಗಿರುವ ನಮ್ಮ ಕನ್ನಡ ಭಾಷೆಯ ಈಗಿರುವ ಕರ್ನಾಟಕ ವ್ಯಾಪ್ತಿಗೂ ಮೀರಿ ಹರಡಿದ್ದ ಕಾಲವೊಂದಿತ್ತು. ನಮ್ಮ ಜನ ಕನ್ನಡವನ್ನು ಹೆಮ್ಮೆಯಿಂದ ಎದೆಗೆ ಅಪ್ಪಿಕೊಂಡಿದ್ದರು. ಈಗ ಅದರ ತೀವ್ರತೆ ಇಳಿದಿದೆ. ನಮ್ಮ ನುಡಿಯ ಬಗ್ಗೆ ಅಭಿಮಾನವನ್ನು ಬಡಿದೆಬ್ಬಿಸುವ ಸಾಮೂಹಿಕ ಪ್ರಯತ್ನವನ್ನೇ ನಾವು `ಕನ್ನಡ ಚಳುವಳಿ’ ಎಂದು ಕರೆಯುವುದು.
ಇತರ ಭಾಷೆಗಳ ಪ್ರಭಾವವು ಹೆಚ್ಚಾಗಿ, ಕನ್ನಡವನ್ನು ಕಡಿಮೆ ಅಭಿಮಾನದಿಂದ ಕಾಣುವ ಕಾಲಘಟ್ಟಗಳು ಹಿಂದೆಯೂ ಆಗಾಗ್ಗೆ ಬಂದಿದ್ದವು. ಆಗೆಲ್ಲ ನಮ್ಮ ಪ್ರಜ್ಞಾವಂತರು ಕನ್ನಡದ ಹಿರಿಮೆಯನ್ನು ಜೋರಾಗಿ ಘೋಷಿಸಿ ಜನರನ್ನು ಎಚ್ಚರಿಸಿದ್ದುಂಟು. ಸಂಸ್ಕೃತದ ವ್ಯಾಮೋಹ ಹೆಚ್ಚಾದಾಗ ಒಬ್ಬ ಕವಿಯು `ಬೆರಸಲ್ಕೆ ತಕ್ಕುದೆ ಘೃತಮುಮಂ ತೈಲಮುಮಂ’ (ತುಪ್ಪದೊಡನೆ ಎಣ್ಣೆಯನ್ನು ಬೆರೆಸುತ್ತಾರೆಯೇ) ಎಂದು ಹೇಳಿ ಕನ್ನಡವನ್ನು ಶ್ರೇಷ್ಠವಾದ ತುಪ್ಪಕ್ಕೂ ಸಂಸ್ಕೃತವನ್ನು ಅಷ್ಟು ಶ್ರೇಷ್ಠವಲ್ಲದ ಎಣ್ಣೆಗೂ ಹೋಲಿಸುತ್ತಾನೆ. ಈಚೆಗೆ ಇನ್ನೊಬ್ಬ ಕವಿ “ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿಕೊಂಡೊಡೆ ಸಾಲದೇ ಸಂಸ್ಕೃತದೊಳಿನ್ನೇನು” ಎಂದು ಕೆಚ್ಚೆದೆಯಿಂದ ಎಚ್ಚರಿಸುತ್ತಾನೆ.
ವಿಜಯನಗರ ಸಾಮ್ರಾಜ್ಯದ ಪತನದವರೆಗೆ ಈ ಭಾಗದ ನೆಲವನ್ನಾಳಿದ ರಾಜರು, ಮಂತ್ರಿಗಳು ತಮ್ಮ ತಾಯಿನುಡಿಯಾದ ಕನ್ನಡವನ್ನೇ ತಮ್ಮೆಲ್ಲ ವ್ಯವಹಾರಗಳಲ್ಲಿ ಸಂಪೂರ್ಣವಾಗಿ ಬಳಸುತ್ತಿದ್ದುದರಿಂದ ಕನ್ನಡಿಗರಲ್ಲಿ ತಮ್ಮ ಭಾಷೆಯ ಸಾಮರ್ಥ್ಯದ ಬಗ್ಗೆ ಸಂಪೂರ್ಣ ವಿಶ್ವಾಸವಿತ್ತು. ಆ ಸಾಮ್ರಾಜ್ಯ ನಾಶವಾದ ಮೇಲೆ ಕನ್ನಡ ಮಾತನಾಡುವ ಜನ ಬೇರೆ ಬೇರೆ ರಾಜಕೀಯ ಭಾಗಗಳಲ್ಲಿ ಹಂಚಿಹೋಗಿ ಸುಮಾರು ನಾಲ್ಕು ನೂರು ವರ್ಷಗಳ ಕಾಲ ಬೇರೆಯಾಗಿದ್ದುದರಿಂದ ಕನ್ನಡ ನುಡಿಯ ಬಗೆಗಿನ ಅಭಿಮಾನ ಕುಗ್ಗಿತು.
ಸ್ವಾತಂತ್ರ ಹೋರಾಟದ ದಿನಗಳಲ್ಲಿ ದೇಶದ ಸ್ವಾತಂತ್ರ ಕ್ಕೆ ಚಳುವಳಿ ನಡೆಸಿದ ಧೀಮಂತ ಚೇತನಗಳು ಕರ್ನಾಟಕದ ಏಕೀಕರಣಕ್ಕೂ ಪಣತೊಟ್ಟರು. ಅವರ ಮುಂದಾಲೋಚನೆಯ ಫಲವಾಗಿ ನವೆಂಬರ್ ೧, ೧೯೫೬ ರಂದು ಬಹುಪಾಲು ಕನ್ನಡ ಮಾತನಾಡುವ ಜನರು ಬಂದು ಹಳೆಯ ಮೈಸೂರು ರಾಜ್ಯದಲ್ಲಿ ಸೇರಿದರು. ಇದಾಗಿ ಅನೇಕ ವರ್ಷಗಳ ನಂತರ ನವಂಬರ್ ೧, ೧೯೭೩ರಂದು ನಮ್ಮ ರಾಜ್ಯಕ್ಕೆ `ಕರ್ನಾಟಕ’ ಎಂಬ ಸರಿಯಾದ ನಾಮಕರಣವಾಯಿತು.
ಹೆಸರಾಯಿತು ಕರ್ನಾಟಕ; ಆದರೆ ಕನ್ನಡ ಉಸಿರಾಗಲಿಲ್ಲ. ಇಲ್ಲಿನ ಆರೋಗ್ಯಪೂರ್ಣ ವಾತಾವರಣ, ಜನರ ಮಿದುತನ ಇವುಗಳ ಕಾರಣಗಳಿಂದ ಇತರ ಭಾಷೆಯ ಜನ ಇಲ್ಲಿ ಬಂದು ತಮ್ಮ ದಾಷ್ಟೀಕತನದಿಂದ ಇಲ್ಲಿನವರ ಮೇಲೆಯೇ ಸವಾರಿ ನಡೆಸಲು ತೊಡಗಿದರು. ಬೀದಿಯಲ್ಲಿ ಇತರ ಭಾಷೆಗಳ ಅಬ್ಬರ, ಹಾಡುಗಳಲ್ಲಿ ಅನ್ಯಭಾಷೆಗಳ ಜೋರು, ಸಿನಿಮಾಗಳಲ್ಲಿ ಬೇರೆಯ ನುಡಿಗಳ ದಾಳಿ -ಇವುಗಳಿಂದ ಬಿಡುಗಡೆ ಹೊಂದಲು ಅರವತ್ತರ ದಶಕದಲ್ಲಿ ದಿವಂಗತರಾದ ಅ. ನ. ಕೃ. ಮತ್ತು ಎಂ. ರಾಮಮೂರ್ತಿಯವರ ಮುಂದಾಳುತನದಲ್ಲಿ ಕನ್ನಡ ಚಳುವಳಿ ಭಾಷೆಯ ಮೇಲ್ಮೆಗಾಗಿ ಹೊಸ ಹೆಜ್ಜೆ ಹಾಕಲು ಪ್ರಾರಂಭಿಸಿತು. ಅದೊಂದು ಮರೆಯಬಾರದ ಅವಧಿ.
ಕನ್ನಡ ಭಾಷೆಯ ಸಾರ್ವಭೌಮತೆಗಾಗಿ ನಡೆಸುತ್ತಿರುವ ಹರವು ಟಿಸಿಲುಗಳ ಇಂದಿನ ಚಳುವಳಿ ಮೇಲೆ ಹೇಳಿದ ಚಳುವಳಿಯ ವಿಸ್ತೃತ ರೂಪ. ಕನ್ನಡದ ಸಾರ್ವಭೌಮತೆ, ಕನ್ನಡಿಗನ ಹೆಮ್ಮೆಯ ಅಭಿಮಾನಪೂರ್ಣ ಅಸ್ತಿತ್ವ ಹಾಗೂ ನಮ್ಮ ನಾಡಾದ ಕರ್ನಾಟಕದ ಅಭಿವೃದ್ಧಿ, ಮೇಲ್ಮೆ -ಇವುಗಳನ್ನು ಸಾಧಿಸಲು ನೂರಾರು ಸಂಘಟನೆಗಳು ಸಾವಿರಾರು ಜನರು ತಮ್ಮದೇ ಆದ ರೀತಿಗಳಿಂದ ಪ್ರಯತ್ನಿಸುತ್ತಿದ್ದಾರೆ.
ಕನ್ನಡಿಗರು ಸಮರ್ಥರಾದರೆ ಕನ್ನಡ ಭಾಷೆ ಸಾಮರ್ಥ್ಯ ಪಡೆಯುತ್ತದೆ; ನಾಡು ಪ್ರಗತಿಯತ್ತ ಸಾಗುತ್ತದೆ. ಹೀಗಾಗಿ ಪ್ರತಿ ಕನ್ನಡಿಗನೂ ತನ್ನ ವೈಯಕ್ತಿಕ ಯೋಗ್ಯತೆಯನ್ನು ಹೆಚ್ಚಿಸಿಕೊಂಡು, ಅದನ್ನು ನಾಡು-ನುಡಿಗಳ ಮೇಲ್ಮೆಗಾಗಿ ಧಾರೆಯೆರೆಯಬೇಕು. ಸ್ವಾಭಿಮಾನವಿಲ್ಲದ ಬಾಳು ವ್ಯರ್ಥ; ಕನ್ನಡದ ಬಗೆಗೆ ಹೆಮ್ಮೆಯಿರದ ಕನ್ನಡಿಗನ ಇರವು ಪೊಳ್ಳಾದದ್ದು. ಆದ್ದರಿಂದ ಅಂತಹ ನುಡಿ ಹೆಮ್ಮೆಯಿಂದ ಬೆಳಸಿಕೊಂಡು ಬಾಳಿದರೆ, ಕನ್ನಡದ ಕಂಪು ಕರ್ನಾಟಕದ ಗಾಳಿಯಲ್ಲಿ ಸೇರಿ ಎಲ್ಲೆಲ್ಲೂ ಕನ್ನಡತನವೇ ರಾರಾಜೀಸುವುದರಲ್ಲಿ ಸಂಶಯವಿಲ್ಲ.
ಮಹಾಜನ ವರದಿ
ರಾಜ್ಯ ಪುನರ್ಘಟನೆಯ ನಂತರ ಹುಟ್ಟಿದ ಗಡಿವಿವಾದ ಪರಿಹಾರಕ್ಕಾಗಿ ಮಹಾರಾಷ್ಟ್ರವು ತೀರ ಒತ್ತಡ ತಂದಿತು. ಕರ್ನಾಟಕವೂ ತನಗೆ ಬರಬೇಕಾಗಿದ್ದ ಕಾಸರಗೋಡು, ಮಡಕಶಿರಾ, ತಾಳವಾಡಿ ಮುಂತಾದ ಪ್ರದೇಶಗಳ ಬಗ್ಗೆ ತಕರಾರು ಮಾಡುತ್ತಲಿತ್ತು. ಮಹಾರಾಷ್ಟ್ರವು ತೀರ ಒತ್ತಾಯ ತಂದಾಗ (ಬಾಪಟ್ ಉಪವಾಸ ಪ್ರಕರಣ) ೨೫. ೧೦. ೧೯೬೬ರಲ್ಲಿ ಮೆಹರ್ ಚಂದ್ ಮಹಾಜನ್ ಅಯೋಗ ನೇಮಿಸಲಾಯಿತು. ಈ ಆಯೋಗದ ವರದಿಯನ್ನು ಅಂತಿಮವಾಗಿ ಒಪ್ಪುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ವಿ. ಪಿ. ನಾಯಕ್ ಮುಂತಾದ ಎಲ್ಲ ಮಹಾರಾಷ್ಟ್ರದ ನಾಯಕರು ಪದೇ ಪದೇ ಹೇಳಿದ್ದರು. ಆಗಸ್ಟ್ ೧೯೬೭ರಲ್ಲಿ ಆಯೋಗವು ತನ್ನ ವರದಿ ಒಪ್ಪಿಸಿತು. “ಆಯೋಗದ ವರದಿ ಹೇಗಿದ್ದರೂ ಅದಕ್ಕೆ ನಾವು ಬದ್ಧರು” ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ವಿ. ಪಿ. ನಾಯಕ್ ೧೪. ೯. ೧೯೬೭ರಲ್ಲಿ ಹೇಳಿದ್ದರು.
ಆಯೋಗವು ತನ್ನ ವರದಿಯಲ್ಲಿ (೧) ಉತ್ತರ ಕನ್ನಡ ಜಿಲ್ಲೆಯಲ್ಲಿನ ತನಗೆ ಬರಬೇಕೆಂದು ಮಹಾರಾಷ್ಟ್ರವು ಒತ್ತಾಯಿಸಿದ್ದ ಪ್ರದೇಶಗಳ ಬಗೆಗಿನ ಹಕ್ಕನ್ನು ತಿರಸ್ಕರಿಸಿತು. (೨) ಮಹಾರಾಷ್ಟ್ರ ಬೇಡಿದ್ದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ೨೦೬ ಗ್ರಾಮಗಳಲ್ಲಿ ಪಶ್ಟಿಮದ ೧೫೬ ಗ್ರಾಮಗಳು, ಬೆಳಗಾವಿ ತಾಲೂಕಿನ ೮೪ ಗ್ರಾಮಗಳಲ್ಲಿ ಪಶ್ಚಿಮದ ಅರ್ಧದಷ್ಟು ಗ್ರಾಮಗಳು (ಬೆಳಗಾವಿ ನಗರ ಹೊರತುಪಡಿಸಿ), ಚಿಕ್ಕೊಡಿ ತಾಲೂಕಿನ ೪೧ ಗ್ರಾಮಗಳಲ್ಲಿ ನಿಪ್ಪಾಣಿ ಸಹಿತ ೩೨ ಗ್ರಾಮಗಳು, ಇವುಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲು ಒಪ್ಪಿತು; ಹುಕ್ಕೇರಿ ತಾಲೂಕಿನ (೧೮) ಗ್ರಾಮ ಹಾಗೂ ಅಥಣಿ ತಾಲೂಕಿನ (೧೦) ಗ್ರಾಮಗಳ ಬೇಡಿಕೆಯನ್ನೂ ತಿರಸ್ಕರಿಸಿತು. (೩) ಬೀದರ ಜಿಲ್ಲೆಯ ೧೪೬ ಗ್ರಾಮಗಳ ಬಗ್ಗೆ ಮಹಾರಾಷ್ಟ್ರ ಮಂಡಿಸಿದ್ದ ಹಕ್ಕನ್ನು ತಿರಸ್ಕರಿಸಿತು. (೪) ಗುಲ್ಬರ್ಗ ಜಿಲ್ಲೆಯ ಆಳಂದ ತಾಲೂಕಿನ ೮ ಗ್ರಾಮಗಳ ಬಗ್ಗೆ ಮಂಡಿಸಿದ ಹಕ್ಕನ್ನೂ ತಿರಸ್ಕರಿಸಿತು.
ಎರಡನೆಯದಾಗಿ, ಕರ್ನಾಟಕದ ಬೇಡಿಕೆಯಾದ ಮಹಾರಾಷ್ಟ್ರದಲ್ಲಿರುವ ಸೊಲ್ಲಾಪುರ ಜಿಲ್ಲೆಯ (೧) ಇಡೀ ಅಕ್ಕಲ ಕೋಟೆ ತಾಲೂಕು, (೨) ದಕ್ಷಿಣ ಸೊಲ್ಲಾಪುರ ತಾಲೂಕಿನ ೬೫ ಗ್ರಾಮಗಳು, (೩) ಸಾಂಗ್ಲಿ (ದ. ಸತಾರಾ) ಜಿಲ್ಲೆಯ ಜತ್ ತಾಲೂಕಿನ ೪೪ ಗ್ರಾಮಗಳು, (೪) ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ್ ತಾಲೂಕಿನ ೧೫ ಗ್ರಾಮಗಳು, ಇವುಗಳನ್ನು ಕರ್ನಾಟಕಕ್ಕೆ ವರ್ಗಾಯಿಸಬೇಕೆಂದು ಒಪ್ಪಿಗೆ ನೀಡಿ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸೊಲ್ಲಾಪುರ ಜಿಲ್ಲೆಯ ಮಂಗಳವೇಡೆ ಮತ್ತು ಶಿರೋಳ ತಾಲೂಕಿನ ಒಟ್ಟು ೧೩ ಗ್ರಾಮಗಳ ವರ್ಗಾವಣೆಗೆ ಆಯೋಗವು ಒಪ್ಪಲಿಲ್ಲ. ಮೂರನೆಯದಾಗಿ, ಕೇರಳದಲ್ಲಿನ ಕಾಸರಗೋಡು ತಾಲೂಕಿನ ೭೧ ಗ್ರಾಮಗಳನ್ನು ಕರ್ನಾಟಕಕ್ಕೆ ವರ್ಗಾಯಿಸಲು ಶಿಫಾರಸುಮಾಡಿತು.
ಮಹಾರಾಷ್ಟ್ರವು ತನಗೆ ಸೇರಬೇಕೆಂದು ಕೇಳಿದ್ದ ೮೧೪ ಗ್ರಾಮಗಳ ಪೈಕಿ ೨೬೪ ಗ್ರಾಮಗಳ (ಒಟ್ಟು ಕ್ಷೇತ್ರ ೬೫೬.೩ ಚ.ಮೈ)ನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲು ಶಿಫಾರಸಾಯಿತು. ಇವು ಬೆಳಗಾವಿ ಜಿಲ್ಲೆಯ ಗ್ರಾಮಗಳು; ವರ್ಗಾಯಿಸಬೇಕಾದ ಒಟ್ಟು ಜನಸಂಖ್ಯೆ ೨.೩೧ ಲಕ್ಷ. ಕರ್ನಾಟಕವು ಮಹಾರಾಷ್ಟ್ರದಿಂದ ಕೇಳಿದ್ದ ೫೧೬ ಗ್ರಾಮಗಳ ಪೈಕಿ ೨೪೭ ಗ್ರಾಮಗಳು (ಒಟ್ಟು ಕ್ಷೇತ್ರ ೧.೩೬೮ ಚ.ಮೈ) ಕರ್ನಾಟಕಕ್ಕೆ ಸೇರಬೇಕೆಂದು ಶಿಫಾರಸಾಯಿತು; ವರ್ಗಾಯಿಸಬೇಕಾದ ಜನಸಂಖ್ಯೆ ೩.೫೦ ಲಕ್ಷ.
(೨೦೦೧)