ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಬರೆವಣಿಗೆ

ಡಾ. ಯು. ಬಿ. ಪವನಜ

ಕುಮಾರವ್ಯಾಸ ತನ್ನ ಭಾರತ ಕಥಾಮಂಜರಿಯಲ್ಲಿ ತನ್ನ ಬಗ್ಗೆ ಹೇಳಿಕೊಳ್ಳುತ್ತಾನೆ “ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ” ಎಂದು. ಇತ್ತೀಚಿಗೆ ಗಣಕಗಳು (ಕಂಪ್ಯೂಟರ್) ಜನಜೀವನದಲ್ಲಿ ಹಾಸುಹೊಕ್ಕಾಗಿ ವ್ಯಾಪಿಸುತ್ತಿವೆ. ಮುಂದಿನ ಪೀಳಿಗೆಯ ಜನರು ಪೆನ್ನು ಪೆನ್ಸಿಲ್ ಉಪಯೋಗಿಸದೆ ಗಣಕಗಳ ಕೀಲಿಮಣೆಯನ್ನು (ಕೀಬೋರ್ಡ್) ಕುಟ್ಟಿಯೇ ಕಲಿಯುತ್ತಾರೆ. ಅವರನ್ನು ಆಧುನಿಕ ಕುಮಾರವ್ಯಾಸರು ಎನ್ನಲು ಅಡ್ಡಿಯಿಲ್ಲ. ಸ್ವಲ್ಪ ಮುಂದುವರೆದು “ಕೀಲಿಮಣೆಯ ಕುಟ್ಟಿಯೇ ಕಲಿತೆನೆಂಬೊಂದಗ್ಗಳಿಕೆ” ಎಂದು ಹೇಳಿದರೂ ಹೇಳಿಯಾರು!

ಗಣಕಗಳು ಜನಜೀವನದಲ್ಲಿ ಹಾಸುಹೊಕ್ಕಾಗಿ ವ್ಯಾಪಿಸುತ್ತಿದ್ದಂತೆ ನಮ್ಮ ಕನ್ನಡ ಭಾಷೆಯನ್ನೂ ಅದರಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಇದರ ಜೊತೆಜೊತೆಗೆ ಕನ್ನಡ ಭಾಷೆಯಲ್ಲಿ ಮಾಹಿತಿ ತಂತ್ರಜ್ಞಾನದ ಬಗೆಗಿನ ಸಾಹಿತ್ಯ ಸೃಷ್ಟಿಯಾಗಬೇಕಾಗಿದೆ. ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಸಾಹಿತ್ಯ ಇಲ್ಲವೇ ಇಲ್ಲವೆಂದಲ್ಲ. ಆದರೆ ಈಗಿರುವುದು ಏನೇನೂ ಸಾಲದು. ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆಯಂತಾಗಿದೆ. ಕೆಲವು ಪುಸ್ತಕಗಳು, ಒಂದೆರಡು ಪತ್ರಿಕೆಗಳು, ಪತ್ರಿಕೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಲೇಖನಗಳು -ಇಷ್ಟು ಮಾತ್ರ ಲೆಕ್ಕಕ್ಕೆ ಸಿಗುತ್ತವೆ. ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಭಾಷೆ ಬೆಳೆಯಬೇಕಾದರೆ ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಸಾಹಿತ್ಯ ನಿರ್ಮಾಣ ದೊಡ್ಡ ಮಟ್ಟದಲ್ಲಿ ಆಗಬೇಕಾಗಿದೆ.

ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಸಾಹಿತ್ಯ ಕನ್ನಡ ವಿಜ್ಞಾನ ಸಾಹಿತ್ಯಕ್ಕೆ ಬಹುಮಟ್ಟಿಗೆ ಸಾಮ್ಯವಾಗಿದೆ. ಕನ್ನಡ ವಿಜ್ಞಾನ ಸಾಹಿತ್ಯಕ್ಕೆ ಸುಮಾರು ೯೦ ವರ್ಷಗಳ ಇತಿಹಾಸವಿದೆ. ವಿಜ್ಞಾ‌ನವನ್ನು (ಮಾತೃಭಾಷೆಯಲ್ಲಿ) ಜನಪ್ರಿಯಗೊಳಿಸಿದ್ದಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿ ಕನ್ನಡಕ್ಕೆ ಏಳು ಸಲ ದೊರಕಿದೆ. ಜ್ಞಾನಪೀಠ ಪ್ರಶಸ್ತಿಯಲ್ಲಿ ಹೇಗೋ ಹಾಗೆಯೇ ಇಲ್ಲೂ ನಾವು ರಾಷ್ಟ್ರಕ್ಕೆ ಪ್ರಥಮ ಸ್ಥಾನದಲ್ಲಿದ್ದೇವೆ. ಹೀಗಿದ್ದೂ ನಮ್ಮ ಸಾಹಿತಿಗಳು ಮತ್ತು ಸಾಹಿತ್ಯ ಪರಿಷತ್ತು ವಿಜ್ಞಾನ ಸಾಹಿತ್ಯವನ್ನು ಸಾಹಿತ್ಯವೆಂದು ಪರಿಗಣಿಸುತ್ತಿಲ್ಲ. ಅದು ಬೇರೆ ವಿಷಯ. ಜನಪ್ರಿಯ ವಿಜ್ಞಾನ ಸಾಹಿತ್ಯಕ್ಕೆ ಅನ್ವಯವಾಗುವ ಸೂತ್ರಗಳು ಜನಪ್ರಿಯ ಮಾಹಿತಿ ತಂತ್ರಜ್ಞಾನ ಸಾಹಿತ್ಯಕ್ಕೂ ಅನ್ವಯವಾಗುತ್ತವೆ. ಮಾಹಿತಿ ತಂ ತಂತ್ರಜ್ಞಾನವು ವಿಜ್ಞಾನ ದ ಒಂದು ವಿಭಾಗವಾಗಿರುವುದು ಇದಕ್ಕೆ ಕಾರಣ. ಸರಳವಾದ ವಾಕ್ಯಗಳು, ಸೂಕ್ತ ಪಾರಿಭಾಷಿಕ ಪದಗಳ ಬಳಕೆ, ಆಕರ್ಷಕ ಭಾಷೆ, ನಮ್ಮ ಸಂಸ್ಕೃತಿಗೆ ಅನುಗುಣವಾದ ಉದಾಹರಣೆಗಳು, ಇತ್ಯಾದಿಗಳೆಲ್ಲವೂ ಜನಪ್ರಿಯ ವಿಜ್ಞಾನ ಸಾಹಿತ್ಯದಲ್ಲಿ ಅಡಕವಾಗಿರಬೇಕು. ಇದು ಮಾಹಿತಿ ತಂತ್ರಜ್ಞಾನ ಬರೆವಣಿಗೆಗೂ ಅನ್ವಯಿಸುತ್ತದೆ.

ಲೇಖನ ಬರೆಯುವಾಗ ಬಹುಮುಖ್ಯವಾಗಿ ಎದುರಾಗುವುದು ಪಾರಿಭಾಷಿಕ ಪದಗಳ ಸಮಸ್ಯೆ. ಇಂಗ್ಲೀಷ್ ಭಾಷೆಯಲ್ಲಿ ರಚಿತವಾಗಿರುವ ವಿಜ್ಞಾನ ಸಾಹಿತ್ಯಕ್ಕೂ ಈಗ ಬರುತ್ತಿರುವ ಮಾಹಿತಿ ತಂತ್ರಜ್ಞಾನ ಸಾಹಿತ್ಯಕ್ಕೂ ಒಂದು ಪ್ರಮುಖ ವ್ಯತ್ಯಾಸವಿದೆ. ಅದು ತಾಂತ್ರಿಕ ಪದಗಳಿಗೆ ಸಂಬಂಧಪಟ್ಟದ್ದು. ೧೮-೧೯ನೆಯ ಶತಮಾನಗಳಲ್ಲಿ ಯುರೋಪ್ ಮತ್ತು ೨೦ನೆಯ ಶತಮಾನದಲ್ಲಿ ಯುರೋಪ್ ಮತ್ತು ಅಮೇರಿಕಗಳಲ್ಲಿ ವಿಜ್ಞಾನವು ವಿಪುಲವಾಗಿ ಬೆಳೆಯಿತು. ಆಗ ವಿಜ್ಞಾನಿಗಳು ಹಲವು ಹೊಸ ಹೊಸ ಪದಗಳ ಸೃಷ್ಟಿ ಮಾಡಿದರು. ಆಗಿನ ವಿಜ್ಞಾನಿಗಳು ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಪರಿಣತರಾಗಿದ್ದರು. ಹೊಸ ಪದಗಳ ಸೃಷ್ಟಿ ಮಾಡುವಾಗ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಿಂದ ಮೂಲವನ್ನು ಎರವಲಾಗಿ ತೆಗೆದುಕೊಂಡು ಹೊಸ ಪದಗಳ ಸೃಷ್ಟಿ ಮಾಡಿದರು. ಟೆಲಿಫೋನ್, ಟೆಲಿವಿಶನ್, ಕ್ಯಾಲ್ಕುಲಸ್, ಕ್ಯಾಲ್ಕುಲೇಟರ್, ಫೋಟೋಸಿಂಥೆಸಿಸ್, ಫ್ಲೋರೆಸೆನ್ಸ್, ಇತ್ಯಾದಿ. ಕ್ಯಾಲ್ಕುಲಸ್ ಮತ್ತು ಕ್ಯಾಲ್ಕುಲೇಟರ್‌ಗಳನ್ನೇ ಗಮನಿಸೋಣ. ಇವೆರಡಕ್ಕೂ ಮೂಲ ಲ್ಯಾಟಿನ್ ಭಾಷೆಯ ಕ್ಯಾಲ್ಕ್ಸ್ ಎಂಬ ಪದ. ಈ ಪದದ ಅರ್ಥ ಸುಣ್ಣದ ಸಣ್ಣಸಣ್ಣ ಕಲ್ಲುಗಳು ಎಂದು. ಹಿಂದಿನ ಕಾಲದಲ್ಲಿ ಕಲ್ಲುಗಳ ಮೂಲಕ ಲೆಕ್ಕ ಹಾಕುತ್ತಿದ್ದರು. ಇದನ್ನೇ ಮೂಲವಾಗಿಟ್ಟುಕೊಂಡು ಕ್ಯಾಲ್ಕುಲೇಟ್ ಮತ್ತು ಕ್ಯಾಲ್ಕುಲೇಟರ್ ಪದಗಳ ಸೃಷ್ಟಿಯಾಯಿತು. ಕನ್ನಡ ಭಾಷೆಯಲ್ಲಿ ಪಾರಿಭಾಷಿಕ ಪದಗಳ ಸೃಷ್ಟಿ ಮಾಡುವಾಗ ಇದೇ ಸೂತ್ರವನ್ನು ಇಟ್ಟುಕೊಂಡು ಸಂಸ್ಕೃತದಿಂದ ಎರವಲು ಪಡೆಯಲಾಯಿತು. ಉದಾಹರಣೆಗೆ ಫೋಟೋಸಿಂಥೆಸಿಸ್‌ಗೆ ದ್ಯುತಿ ಸಂಶ್ಲೇಷಣೆ.

ಇಂದಿನ ಮಾಹಿತಿ ತಂತ್ರಜ್ಞಾನ ಯುಗದ ವಿಜ್ಞಾನಿ ಮತ್ತು ತಂತ್ರಜ್ಞರು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಪರಿಣತರಲ್ಲ. ಅವರಿಗೆ ಗೊತ್ತಿರುವುದು ಇಂಗ್ಲೀಷ್ ಮಾತ್ರ. ಅವರು ಇಂಗ್ಲೀಷ್ ಭಾಷೆಯಿಂದಲೇ ಪದಗಳನ್ನು ಹೆಕ್ಕಿಕೊಂಡು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅವುಗಳನ್ನು ಬೇರೆಯೇ ಅರ್ಥದಲ್ಲಿ ಬಳಸುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನದ ಬಗ್ಗೆ ಸ್ವಲ್ಪವೂ ಗೊತ್ತಿಲ್ಲದ ಇಂಗ್ಲೀಷ್ ಭಾಷಿಗರಿಗೇ ಈ ಪದಗಳು ವಿಚಿತ್ರವಾಗಿ ಕಂಡುಬರುತ್ತವೆ. ಉದಾಹರಣೆಗೆ ಮೌಸ್, ಬಗ್, ವರ್ಮ್, ಥ್ರೆಡ್, ಸೋಪ್, ಇತ್ಯಾದಿ. ಇವುಗಳನ್ನು ಶಬ್ದಶಃ ಕನ್ನಡಕ್ಕೆ ಅನುವಾದ ಮಾಡಿದರೆ ಅದಕ್ಕಿಂತ ಆಭಾಸ ಇನ್ನಿಲ್ಲ.

ಮಾಹಿತಿ ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಬರೆಯುವವರಿಗೆ ಆ ವಿಷಯದಲ್ಲಿ ಪರಿಣತಿ ಇರುವುದು ಅತೀ ಅಗತ್ಯ. ಇದಕ್ಕೆ ಕಾರಣ ಈಗಾಗಲೇ ವಿವರಿಸಿದಂತೆ ಪದಗಳ ಅನುವಾದದಲ್ಲಿ ಆಗಬಹುದಾದ ಆಭಾಸಗಳು. ಪದಗಳ ಅನುವಾದ ಮಾಡುವಾಗ ಭಾವಾನುವಾದ ಮಾಡಬೇಕು. ಶಬ್ದಾನುವಾದ ಮಾಡಬಾರದು. ಸುಮಾರು ೮ ವರ್ಷಗಳ ಹಿಂದೆ ಕನ್ನಡದ ವಾರಪತ್ರಿಕೆಯೊಂದು ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಪದಗಳಿಗೆ ಕನ್ನಡದಲ್ಲಿ ಸೂಕ್ತ ಪದಗಳಿಲ್ಲ ಎಂದು ಘೋಷಿಸಿ ಅಂತಹ ಪದಗಳ ಸೃಷ್ಟಿಗೆ ಒಂದು ಸ್ಪರ್ಧೆಯನ್ನು ಏರ್ಪಡಿಸಿತ್ತು. ಬಹುಶಃ ಅದರ ಸಂಪಾದಕರು ಮೈಸೂರು ವಿಶ್ವವಿದ್ಯಾನಿಲಯವು ಪ್ರಕಟಿಸಿದ ಕನ್ನಡ ವಿಶ್ವಕೋಶ ಮತ್ತು ಎರಡು ದಶಕಗಳ ಹಿಂದೆಯೇ ಪ್ರಕಟವಾದ ದಿವಂಗತ ಡಾ. ನಳಿನಿ ಮೂರ್ತಿಯವರ “ಗಣಕಯಂತ್ರ” ಪುಸ್ತಕಗಳನ್ನು ಓದಿರಲಿಲ್ಲವೆಂದು ಕಾಣುತ್ತದೆ. ಅವುಗಳನ್ನು ಓದಿದ್ದರೆ ಈ ಸ್ಪರ್ಧೆಯ ಅಗತ್ಯವೇ ಇರಲಿಲ್ಲ. ಇರಲಿ. ಆ ಪತ್ರಿಕೆಯವರು ಕೊನೆಗೆ ಸಾಫ್ಟ್‌ವೇರ್ ಪದಕ್ಕೆ ಲಘುವರ ಮತ್ತು ಹಾರ್ಡ್‌ವೇರ್ ಪದಕ್ಕೆ ಗುರುವರ ಎಂದು ಪಾರಿಭಾಷಿಕ ಪದಗಳನ್ನು ಸೂಚಿಸಿದವರಿಗೆ ಬಹುಮಾನ ಕೊಟ್ಟರು. ಇದು ಶುದ್ಧ ತರಲೆ ಅನುವಾದ. ಸಾಫ್ಟ್ ಮತ್ತು ವೇರ್ ಪದಗಳನ್ನು ಪ್ರತ್ಯೇಕವಾಗಿ ಅನುವಾದ ಮಾಡಿದ್ದಾರೆ. ಇದೇ ರೀತಿ ಶಬ್ದಾನುವಾದ ಮಾಡಿದರೆ “Microsoft Windows is hanging” ಎಂಬುದು “ಸೂಕ್ಷ್ಮಮೃದು ಕಿಟಿಕಿ ನೇಣು ಹಾಕಿಕೊಂಡಿದೆ” ಎಂದಾಗುತ್ತದೆ!

ಈಗ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಪದಗಳನ್ನು ಗಮನಿಸೋಣ. ಹಾರ್ಡ್‌ವೇರ್ ಎಂದರೆ ಗಣಕದಲ್ಲಿ ಕಣ್ಣಿಗೆ ಕಾಣಸಿಗುವ ಯಂತ್ರ ಭಾಗಗಳು. ಮದರ್‌ಬೋರ್ಡ್, ಹಾರ್ಡ್‌ಡಿಸ್ಕ್, ಕೀಲಿಮಣೆ, ಇತ್ಯಾದಿ. ಇದನ್ನು ಕನ್ನಡದಲ್ಲಿ ಯಂತ್ರಾಂಶ ಎಂದು ಕರೆಯಬಹುದು. ಸಾಫ್ಟ್‌ವೇರ್ ಎಂದರೆ ಗಣಕ ಕೆಲಸ ಮಾಡಲು ಬೇಕಾಗುವ ಯಂತ್ರಭಾಗವಲ್ಲದ ಕಣ್ಣಿಗೆ ಕಾಣಸಿಗದ ಕಾರ್ಯಾಚರಣ ವ್ಯವಸ್ಥೆ (operating system), ಕ್ರಮವಿಧಿ (program), ಇತ್ಯಾದಿ. ಕನ್ನಡದಲ್ಲಿ ತಂತ್ರಾಂಶ. ಯಂತ್ರಾಂಶವನ್ನು ಒಂದು ಸಂಗೀತ ಉಪಕರಣಕ್ಕೆ (ಉದಾ. ವೀಣೆ) ಹೋಲಿಸಿದರೆ, ಆ ಉಪಕರಣದಲ್ಲಿ ಬಾರಿಸುವ ರಾಗ ತಾಳ ಬದ್ಧವಾದ ಸಂಗೀತವು ತಂತ್ರಾಂಶ ಆಗಿರುತ್ತದೆ. ಈ ಪಾರಾದಲ್ಲಿ ನಾನು ಈಗಾಗಲೇ ಕೆಲವು ಇಂಗ್ಲೀಷ್ ಪದಗಳನ್ನು ಹಾಗೆಯೇ ಬಳಸಿದುದನ್ನು ನೀವು ಗಮನಿಸಿರಬಹುದು.

ಕೆಲವೊಮ್ಮೆ ಇಂಗ್ಲೀಷ್ ಭಾಷೆಯ ಪದಗಳನ್ನು ಹಾಗೆಯೇ ಬಳಸುವುದು ಹೆಚ್ಚು ಸೂಕ್ತ. ಉದಾ. ಮೌಸ್, ವೈರಸ್, ಮೋಡೆಮ್, ಇತ್ಯಾದಿ. ನಾವು ಕಾರು, ಬಸ್ಸು, ಪೆನ್ನು, ಪೆನ್ಸಿಲ್, ಇತ್ಯಾದಿಗಳನ್ನು ಬಳಸುತ್ತಿಲ್ಲವೆ, ಹಾಗೆ. ಕೆಲವು ಪದಗಳು ಅಂಕಿತನಾಮಗಳಾಗಿರುತ್ತವೆ. ಕೆಲವು ಕಂಪೆನಿಗಳು ರೂಪಿಸಿಕೊಂಡ ಹೆಸರುಗಳೂ ಇರುತ್ತವೆ. ಇವುಗಳನ್ನು ಅನುವಾದಿಸುವಂತಿಲ್ಲ. ಉದಾ. ಫ್ಲಾಷ್, ರಿಯಲ್ ಆಡಿಯೋ, ಬ್ಲೂಟೂತ್, ಪಾಸ್ಕಲ್, ಜಾವಾ, ಇತ್ಯಾದಿ. ಅನುವಾದ ಮಾಡಲಾರದ ಇನ್ನೂ ಒಂದು ಗುಂಪಿನ ಪದಗಳಿವೆ. ಅವು ಉದ್ದ ಹೆಸರಿನ ಸಂಕಿಪ್ತ ರೂಪ. ಇವುಗಳಲ್ಲಿ ಎರಡು ಬಗೆಯವಿವೆ. ಇವನ್ನು ಇಂಗ್ಲೀಷಿನಲ್ಲಿ abbreviation ಮತ್ತು acronym ಎಂದು ವಿಭಾಜಿಸಿದ್ದಾರೆ. ಅಬ್ರಿವಿಯೇಶನ್ ಎಂದರೆ ಉದ್ದ ಹೆಸರಿನ ಪ್ರತಿಯೊಂದು ಪದದ ಮೊದಲಿನ ಅಕ್ಷರಗಳ ಜೋಡಣೆ. ಉದಾ: COBOL (Common Business Oriented Language), BASIC (Beginners All-purpose Symbolic Instruction Code), DOS (Disk Operating System), SOAP (Simple Object Access Protocol). ಅಕ್ರೋನಿಮ್‌ಗೆ ಉದಾಹರಣೆಗಳು: FORTRAN (Formula Translation), ARPANET (Advanced Research Projects Agency Network), BIT (Binary Digit).

ಇಂಗ್ಲೀಷ್ ಭಾಷೆಯ ಪದಗಳನ್ನು ಹಾಗೆಯೇ ಬಳಸಬೇಕೇ ಅಥವಾ ಕೆಲವು ಪದಗಳನ್ನು ಮಾತ್ರ ಅನುವಾದಿಸಬೇಕೆ ಎಂಬುದು ಚರ್ಚೆಗೆ ಉತ್ತಮ ವಿಷಯ. ಗಣಕ ಎಂಬ ಪದಕ್ಕೇ ವಿರೋಧಿಗಳಿದ್ದಾರೆ. ಕಂಪ್ಯೂಟರ್ ಎಂದು ಬಳಸುವುದೇ ಸೂಕ್ತ, ಕನ್ನಡ ಭಾಷೆ ಬೆಳೆಯಲಿ ಎಂದು ಈ ಗುಂಪಿನವರ ವಾದ. ಕೆಲವು ಪಾರಿಭಾಷಿಕ ಪದಗಳನ್ನು ಉಪಯೋಗಿಸಿದರೆ ಯಾರಿಗೂ ಅರ್ಥವಾಗುವುದಿಲ್ಲ ಎಂಬ ಹೇಳಿಕೆಯೂ ಇದೆ. ಉದಾಹರಣೆಗೆ ಫ್ಲಾಪಿ ಡಿಸ್ಕ್‌ಗೆ ನಮ್ಯ ಮುದ್ರಿಕೆ ಎಂದು ಬಳಸಿದರೆ ಖಂಡಿತ ಬಹಳಷ್ಟು ಮಂದಿಗೆ ಅರ್ಥವಾಗಲಾರದು. ಬಳಸುವ ಶಬ್ದಗಳನ್ನು ಓದುವವರು ಯಾರು ಎಂಬುದರ ಮೇಲೆ ಈ ಶಬ್ದಗಳನ್ನು ಬಳಸಬೇಕೆ ಬೇಡವೇ ಎಂಬುದು ಅವಲಂಬಿಸಿದೆ. ಮಾಹಿತಿ ತಂತ್ರಜ್ಞಾನದ ಬಗ್ಗೆ ಏನೇನೂ ತಿಳಿಯದವರಿಗೆ ಕನ್ನಡದಲ್ಲಿ ನೀಡುವ ಪದವೂ ಹೊಸತೇ, ಇಂಗ್ಲೀಷಿನ ಪದವೂ ಹೊಸತೇ. ಇಂಗ್ಲೀಷಿನ ಪದವನ್ನು ಬಳಸಿದರೆ ಅದನ್ನು ಓದುವ ಓದುಗರು ಸದ್ಯಕ್ಕೆ ಕನ್ನಡದಲ್ಲೇ ಓದುವವರಾದರೂ ಮುಂದಕ್ಕೆ ಇಂಗ್ಲೀಷ್ ಭಾಷೆಯಲ್ಲಿ ಓದುವವರಾದರೆ ಅವರಿಗೆ ಸುಲಭವಾಗುವುದು ಎನ್ನುವ ಒಂದು ವಾದವೂ ಇದೆ. ಇದರಲ್ಲಿ ಹುರುಳಿಲ್ಲದಿಲ್ಲ. ಯಾಕೆಂದರೆ ನಾವು ಹೆಚ್ಚೆಂದರೆ ಹತ್ತನೇ ತರಗತಿ ತನಕ ಮಾತ್ರ ಕನ್ನಡವನ್ನು ಬಳಸುವವರು. ಹಾಗೆಂದು ಹೇಳಿ ಸಂಪೂರ್ಣ ಇಂಗ್ಲೀಷ್‌ಮಯ ಪದಗಳಿಂದ ತುಂಬಿದ್ದರೆ ಆ ಲೇಖನವನ್ನು ಕನ್ನಡ ಲೇಖನ ಎಂದು ಕರೆಯುವುದು ಹೇಗೆ? ಉದಾಹರಣೆಗೆ ಮೂಲ ಇಂಗ್ಲೀಷಿನ ವಾಕ್ಯವೊಂದನ್ನು ಗಮನಿಸೋಣ -“press the Enter key on the keyboard”. ಇದನ್ನು ಕನ್ನಡದಲ್ಲಿ “ಕೀಲಿಮಣೆಯಲ್ಲಿರುವ ಎಂಟರ್ ಕೀಲಿಯನ್ನು ಒತ್ತಿ” ಅಥವಾ “ಕೀಬೋರ್ಡ್‌ನಲ್ಲಿರುವ ಎಂಟರ್ ಕೀಯನ್ನು ಒತ್ತಿ” ಎಂದು ಅನುವಾದಿಸಬಹುದು. ನನ್ನ ಪ್ರಕಾರ ಮೊದಲನೆಯ ವಾಕ್ಯವೇ ಹೆಚ್ಚು ಸೂಕ್ತ. ಯಾಕೆಂದರೆ ಎರಡನೆ ವಾಕ್ಯದಲ್ಲಿ “ಒತ್ತಿ” ಎಂಬುದು ಮಾತ್ರ ಕನ್ನಡ ಪದ.

ನಾವು ದಿನನಿತ್ಯ ಮಾತನಾಡುವಾಗ ಹಲವು ಪದಗಳನ್ನು ಬಳಸುತ್ತೇವೆ. ಅವುಗಳಲ್ಲಿ ಬಹಳಷ್ಟನ್ನು ನಾವು ಪುಸ್ತಕಗಳಲ್ಲಿ, ಲೇಖನಗಳಲ್ಲಿ, ಭಾಷಣಗಳಲ್ಲಿ ಬಳಸುವುದಿಲ್ಲ. ಅದೇ ರೀತಿ ಲೇಖನದಲ್ಲಿ ಬಳಸುವ ಬಹಳಷ್ಟು ಪದಗಳನ್ನು ದಿನನಿತ್ಯದ ವ್ಯವಹಾರಗಳಲ್ಲಿ ಬಳಸುವುದಿಲ್ಲ. ಉದಾಹರಣೆಗೆ ಲೇಖನಿ ಎಂಬ ಪದ. ಇದನ್ನು ಲೇಖನದಲ್ಲಿ ಬಳಸಿದಷ್ಟು ಮಾತಿನಲ್ಲಿ ಬಳಸುವುದಿಲ್ಲ. ಇದೇ ಸಿದ್ಧಾಂತವನ್ನು ಗಣಕ ಪಾರಿಭಾಷಿಕ ಪದಗಳಿಗೆ ಉಪಯೋಗಿಸೋಣ. ನಿಮ್ಮ ಸ್ನೇಹಿತನ ಜೊತೆ ಮಾತನಾಡುವಾಗ “ನನ್ನ ಕೀಬೋರ್ಡ್ ಹಾಳಾಗಿದೆ” ಎಂದೇ ಹೇಳಿ. ಆದರೆ ಲೇಖನದಲ್ಲಿ “ನನ್ನ ಕೀಲಿಮಣೆ ಹಾಳಾಗಿದೆ” ಎಂದಿರಲಿ.

ಕನ್ನಡದ ಪದಗಳನ್ನು ಹೊಸದಾಗಿ ಸೃಷ್ಟಿ ಮಾಡಿದರೆ ಅವು ಎಷ್ಟರ ಮಟ್ಟಿಗೆ ಉಳಿಯುತ್ತವೆ ಎಂಬುದನ್ನು ಜನರೇ ನಿರ್ಧರಿಸುತ್ತಾರೆ. ಇಂಜಿನಿಯರ್ ಪದಕ್ಕೆ ಅಭಿಯಂತರ ಮತ್ತು ಪೋಲೀಸ್ ಸ್ಟೇಶನ್‌ಗೆ ಆರಕ್ಷಕ ಠಾಣೆ ಎಂದು ಸೃಷ್ಟಿ ಮಾಡಿದ ಪದಗಳನ್ನು ಜನರು ಸ್ವೀಕರಿಸಲಿಲ್ಲ. ಆದರೆ ಪೋಸ್ಟ್ ಆಫೀಸ್‌ಗೆ ಅಂಚೆ ಕಚೇರಿ, ರೇಡಿಯೋಗೆ ಆಕಾಶವಾಣಿ ಎಂದು ಸೃಷ್ಟಿ ಮಾಡಿದ ಪದಗಳು ಉಳಿದುಕೊಂಡವು. ಅಂಚೆ ಕಚೇರಿ ಪದ ಒಂದು ಉತ್ತಮ ಕನ್ನಡ ಪದವನ್ನು ಸೃಷ್ಟಿ ಮಾಡುವುದು ಹೇಗೆ ಎಂಬುದಕ್ಕೆ ಉದಾಹರಣೆ. ಇದು ಪೋಸ್ಟ್ ಆಫೀಸ್‌ನ ಶಬ್ದಾನುವಾದವಲ್ಲ. ಅಂಚೆ ಎನ್ನುವುದು ಸಂಸ್ಕೃತದ ಹಂಸ ಪದದ ಕನ್ನಡ ರೂಪ. ಮಹಾಭಾರತದಲ್ಲಿ ಬರುವ ನಳದಮಯಂತಿ ಕಥೆಯಲ್ಲಿ ನಳ ಮಹಾರಾಜ ದಮಯಂತಿಗೆ ಹಂಸ ಪಕ್ಷಿಯ ಮೂಲಕ ಸಂದೇಶ ಕಳುಹಿಸುತ್ತಾನೆ. ಅಂಚೆ ಕಚೇರಿ ಪದದ ಮೂಲ ಇಲ್ಲಿದೆ. ಒಂದು ಪದವನ್ನು ಭಾರತೀಕರಣ ಮತ್ತು ಕನ್ನಡೀಕರಣ ಮಾಡುವುದು ಹೇಗೆಂಬುದಕ್ಕೆ ಅಂಚೆ ಕಚೇರಿ ಉತ್ತಮ ಉದಾಹರಣೆ.

ಯಾವುದೇ ವಿಷಯದ ಬಗ್ಗೆ ಬರೆಯಬೇಕಾದರೆ ಆ ವಿಷಯದ ಬಗ್ಗೆ ಜ್ಞಾನ ಇರುವುದು ಅತೀ ಅಗತ್ಯ. ಮಾಹಿತಿ ತಂತ್ರಜ್ಞಾನದ ಬಗೆಗಂತು ಇದು ಇನ್ನೂ ಹೆಚ್ಚು ಪ್ರಸ್ತುತ. ಯಾವುದಾದರೊಂದು ಪುಸ್ತಕ, ಅಂತರಜಾಲ ತಾಣದಲ್ಲಿ (ಇಂಟರ್‌ನೆಟ್) ಪ್ರಕಟವಾದ ಲೇಖನವನ್ನು ಓದಿ ಅನುವಾದ ಮಾಡಿ ಬರೆಯ ಹೊರಟರೆ ಕೆಲವೊಮ್ಮೆ ತಪ್ಪುಗಳು ನುಸುಳುತ್ತವೆ. ಇದು ವೇದ್ಯವಾಗುವುದು ಇಂಗ್ಲೀಷ್ ಭಾಷೆಯ ಪದಗಳನ್ನು ಕನ್ನಡೀಕರಿಸುವಲ್ಲಿ. ಅಂತರಜಾಲದಲ್ಲಿ ಹಲವು ಮಂದಿ ಸೇರಿ ಯಾವುದಾದರೊಂದು ವಿಷಯದ ಬಗ್ಗೆ ಚರ್ಚಿಸುವ ಸೌಕರ್ಯವಿದೆ. ಇವಕ್ಕೆ ಇಂಗ್ಲೀನಲ್ಲಿ Newsgroup ಎನ್ನುತ್ತಾರೆ. ಇಲ್ಲಿ ಇಂಗ್ಲೀಷಿನ ಹೆಸರೇ ಇದು ಏನು ಎಂಬುದನ್ನು ಅಸಂದಿಗ್ಧವಾಗಿ ಸೂಚಿಸುವಲ್ಲಿ ಸೋಲುತ್ತದೆ. ಇದನ್ನು ಕನ್ನಡದಲ್ಲಿ ಬರೆಯುವಾಗ “ಸುದ್ದಿಗುಂಪು” ಎಂದು ಬರೆಯಬಹುದು ಅನ್ನಿಸುವುದು ಸಹಜ. ಆದರೆ ಇದರ ಹೆಸರು ಮೂಲ ಇಂಗ್ಲೀಷಿನಲ್ಲೇ ಸರಿ ಇಲ್ಲದಿರುವುದರಿಂದ ಇದಕ್ಕೆ ಕನ್ನಡದಲ್ಲಿ “ವಿಚಾರಜಾಲ” ಎಂದು ಕರೆಯುವುದು ಹೆಚ್ಚು ಸೂಕ್ತ. ಮಾರುಕಟ್ಟೆಯಲ್ಲಿ ಸಿಗುವ ಇಂಗ್ಲೀಷ್ ಭಾಷೆಯ ಗಣಕ ಪದಕೋಶವನ್ನು ಕೊಂಡುಕೊಂಡು ಅದರಲ್ಲಿ ಕೊಟ್ಟಿರುವ ಪದಗಳನ್ನು ಶಬ್ದಶಃ ಕನ್ನಡೀಕರಿಸುವುದು ತಪ್ಪು. ವಿಷಯಜ್ಞಾನ ಅತೀ ಅಗತ್ಯ. ಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮಾತ್ರ ಸಂಬಂಧಿಸಿದ ವಿಚಿತ್ರ ಸಮಸ್ಯೆ. ವಿಜ್ಞಾನ ವಿಷಯವನ್ನು ಪುಸ್ತಕಗಳಲ್ಲಿ ಓದಿ ಕನ್ನಡೀಕರಿಸುವಾಗ ಇಷ್ಟು ತೊಂದರೆಗಳಿರಲಿಲ್ಲ.

ಪದಗಳ ಸೃಷ್ಟಿ ಮಾಡುವಾಗ ಅಥವಾ ಅನುವಾದ ಮಾಡುವಾಗ ಮೂಲ ಇಂಗ್ಲೀಷಿನ ಪದವನ್ನು ಯಾವ ಸಂದರ್ಭದಲ್ಲಿ ಮತ್ತು ಯಾವ ವಿಷಯವನ್ನು ತಿಳಿಸಲು ಬಳಸಿದ್ದಾರೆ ಎಂದು ತಿಳಿದುಕೊಂಡಿರುವುದು ಮುಖ್ಯ. ಉದಾಹರಣೆಗೆ ಇಂಗ್ಲೀಷ್ ಭಾಷೆಯ script ಪದವನ್ನು ಹಲವು ಅರ್ಥದಲ್ಲಿ ಬಳಸಬಹುದು. ಮಾಹಿತಿ ತಂತ್ರಜ್ಞಾನಕ್ಕೆ ಸಬಂಧಪಟ್ಟಂತೆಯೇ ಇದನ್ನು ಬೇರೆ ಬೇರೆ ಅರ್ಥಗಳಲ್ಲಿ ಬಳಸಿದ್ದಾರೆ. ಯುನಿಕೋಡ್ ಸಂದರ್ಭದಲ್ಲಿ ಸ್ಕ್ರಿಪ್ಟ್ ಲಿಪಿಯನ್ನು ಸೂಚಿಸುತ್ತದೆ. ದೇವನಾಗರಿ ಲಿಪಿ (ಸ್ಕ್ರಿಪ್ಟ್). ಸಂಸ್ಕೃತ, ಹಿಂದಿ, ಮರಾಠಿ, ನೇಪಾಳಿ, ಕೊಂಕಣಿ -ಇವು ದೇವನಾಗರಿ ಲಿಪಿಯನ್ನು ಬಳಸುವ ಭಾಷೆಗಳು (ಲಾಂಗ್ವೇಜ್). ಕೆಲವು ತಂತ್ರಾಂಶ ಮತ್ತು ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಕೆಲವೊಂದು ಆದೇಶಗಳನ್ನು (instructions) ಒಟ್ಟಿಗೆ ಒಂದು ಕಡತ (file) ರೂಪದಲ್ಲಿ ಕೊಡುವುದನ್ನೂ ಗಣಕ ಪರಿಭಾಷೆಯಲ್ಲಿ ಸ್ರಿಪ್ಟ್ ಎಂದು ಕರೆಯುತ್ತಾರೆ. ಇಲ್ಲಿ ಸ್ಕ್ರಿಪ್ಟ್‌ನ ಕನ್ನಡ ರೂಪ ಕ್ರಮವಿಧಿ ಎಂದೆನಿಸಿಕೊಳ್ಳುತ್ತದೆ. ಈಗ ಲಾಂಗ್ವೇಜ್ ಶಬ್ದವನ್ನು ಗಮನಿಸೋಣ. ಇಂಗ್ಲೀಷ್, ಕನ್ನಡ ಇತ್ಯಾದಿಗಳನ್ನು ಲಾಂಗ್ವೇಜ್ ಎಂದು ಕರೆಯುತ್ತಾರೆ. ಜೊತೆಗೆ ಬೇಸಿಕ್, ಸಿ, ಜಾವಾ, ಕೋಬೋಲ್, ಇತ್ಯಾದಿ ಗಣಕ ಕ್ರಮವಿಧಿ ರಚನೆಯ ಭಾಷೆಗಳನ್ನೂ ಲಾಂಗ್ವೇಜ್ ಎಂದೇ ಕರೆಯುತ್ತಾರೆ. ಸರಿಯಾದ ರೀತಿಯಲ್ಲಿ ಬರೆಯುವವರಾದರೆ ಪ್ರೋಗ್ರಾಮ್ಮಿಂಗ್ ಲಾಂಗ್ವೇಜ್ ಎಂದು ಬರೆಯುತ್ತಾರೆ. ಕೆಲವರು ಚುಟುಕಾಗಿ BASIC Language ಎಂದು ಬರೆದಿದ್ದಾರೆ ಎಂದಿಟ್ಟುಕೊಳ್ಳೋಣ. ಇದನ್ನು ಕನ್ನಡದಲ್ಲಿ “ಮೂಲಭೂತ ಭಾಷೆ” ಎಂದು ಅನುವಾದಿಸಿ ಬರೆದರೆ ಅದಕ್ಕಿಂತ ಆಭಾಸ ಇನ್ನೊಂದಿಲ್ಲ. ಸಂದರ್ಭ ಗೊತ್ತಿಲ್ಲದೆ ಅನುವಾದ ಮಾಡಹೊರಡುವುದು ಉಚಿತವಲ್ಲ. ಈ ಉದಾಹರಣೆಯನ್ನು ಗಮನಿಸಿ: ಕನ್ನಡ ಗಣಕ ಪರಿಷತ್ತಿನವರು ತಯಾರಿಸಿರುವ, ಕನ್ನಡ ಅಭಿವೃದ್ಧಿ ಪ್ರಾಧಿಕಾರದವರು ಪ್ರಕಟಿಸಿರುವ “ಕನ್ನಡ ಗಣಕ ಪದವಿವರಣಕೋಶ” ದಲ್ಲಿ Active Server Pages ಎನ್ನುವುದನ್ನು “ಅಂತರಜಾಲದ ಪುಟದಲ್ಲಿ ಪೂರೈಕೆದಾರ ಸಂಬಂಧಿ ಕ್ರಮವಿಧಿ ರಚನೆಯನ್ನು ಅಳವಡಿಸಲು ಮೈಕ್ರೊಸಾಫ್ಟ್ ಅಭಿವೃದ್ಧಿಪಡಿಸಿದ ಒಂದು ಮಾನಕ ತಂತ್ರಾಂಶ” ಎಂದು ವಿವರಿಸಲಾಗಿದೆ. ಸೂಕ್ಷ್ಮವಾಗಿ ಗಮನಿಸಿದಾಗ ಇಲ್ಲೊಂದು ತಪ್ಪು ನುಸುಳಿದೆ. ಮಾನಕ ಎಂದರೆ standard. ಮೈಕ್ರೋಸಾಫ್ಟ್ ಕಂಪೆನಿಯವರ ಕಾಪಿರೈಟ್ ಆಗಿರುವ ಒಂದು ಕ್ರಮವಿಧಿ ರಚನೆಯ ಭಾಷೆ ಮಾನಕವಾಗಲು ಸಾಧ್ಯವಿಲ್ಲ.

ತಪ್ಪಾಗಿ ಅನುವಾದ ಮಾಡುವುದು ಅಥವಾ ತಪ್ಪು ಪದದ ಸೃಷ್ಟಿ ಮಾಡಿ ಬಳಸುವುದಕ್ಕಿಂತ ಮೂಲ ಇಂಗ್ಲೀಷ್ ಪದವನ್ನೇ ಬಳಸುವುದು ಉತ್ತಮ ಎಂದು ಕೆಲವು ಸಲ ಅನ್ನಿಸಬಹುದು.

ಮಾಹಿತಿ ತಂತ್ರಜ್ಞಾನ ದ ವಿಷಯ ಜ್ಞಾನ ಎಲ್ಲಿ ಸಿಗುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ. ಉತ್ತಮ ಪುಸ್ತಕಗಳಲ್ಲಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮಾಹಿತಿಯ ಅತಿದೊಡ್ಡ ಭಂಡಾರವೇ ಆಗಿರುವ ಅಂತರಜಾಲದಲ್ಲಿ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಳಸುವ ಇಂಗ್ಲಿಷ್ ಪದಗಳ ವಿವರಣೆ ಬೇಕಿದ್ದಲ್ಲಿ www.webopaedia.com ಮತ್ತು whatis.techtarget.com ತಾಣಗಳನ್ನು ನೋಡಬಹುದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳ ಬಗೆಗೆ ತಿಳಿಯಲು www.internetnews.com ತಾಣಕ್ಕೆ ಭೇಟಿ ನೀಡಬಹುದು.

ಪದಗಳ ಬಗ್ಗೆ ಇಷ್ಟೊಂದು ಹೇಳುವುದೇಕೆ ಎಂದು ಕೇಳಬಹುದು. ಪದಗಳಿಲ್ಲದೆ ವಾಕ್ಯವಿಲ್ಲ. ವಾಕ್ಯವಿಲ್ಲದೆ ಲೇಖನವಿಲ್ಲ. ಒಂದು ಪಾರಿಭಾಷಿಕ ಪದವನ್ನು ಲೇಖನದಲ್ಲಿ ಮೊಟ್ಟಮೊದಲು ಬಳಸುವಾಗ ಅದರ ಇಂಗ್ಲೀಷಿನ ಮೂಲ ರೂಪವನ್ನು ಕಂಸಗಳಲ್ಲಿ ಕೊಟ್ಟು ಅನಂತರ ಎಲ್ಲ ಕಡೆ ಕನ್ನಡದ ಪದವನ್ನು ಬಳಸುವುದು ಹೆಚ್ಚಿನ ಲೇಖಕರ ವಿಧಾನ. ಇದು ಸರಿಯಾದ ಕ್ರಮ. ಪದಗಳ ಆಯ್ಕೆಯ ನಂತರ ಭಾಷೆ. ಭಾಷೆ ಸರಳವಾಗಿರಬೇಕು. ಪದಗಳು ಮತ್ತು ವಾಕ್ಯಗಳು ಅಸಂದಿಗ್ಧವಾಗಿರತಕ್ಕದ್ದು. ಲೇಖನದಲ್ಲಿ ಬಳಸುವ ಉದಾಹರಣೆಗಳು ಭಾರತೀಯವಾಗಿರಲಿ. ಕೇವಲ ಭಾರತೀಯವಾಗಿದ್ದರೆ ಸಾಲದು. ಕನ್ನಡದ ಜಾಯಮಾನಕ್ಕೆ ಒಗ್ಗುವ ಉದಾಹರಣೆಗಳಾಗಿದ್ದರೆ ಇನ್ನೂ ಚೆನ್ನು. ವಿಷಯದ ಮಂಡನೆ ಒಂದು ಕ್ರಮಬದ್ಧವಾದ ರೀತಿಯಲ್ಲಿ ಸಾಗಬೇಕು. ಮೊದಲು ಹೇಳಬೇಕಾದುದನ್ನು ಮತ್ತೆ ಹೇಳುವುದು, ಮತ್ತೆ ಹೇಳಬೇಕಾದುದನ್ನು ಮೊದಲು ಹೇಳುವುದು ಸಲ್ಲದು.

ಅಕ್ಷರಾಭ್ಯಾಸವಿಲ್ಲದವನು ಅವಿದ್ಯಾವಂತ ಎಂದೆನಿಸಿಕೊಳ್ಳುತ್ತಿದ್ದ ಕಾಲ ಮುಗಿಯಿತು. ಈಗ ಗಣಕ ಗೊತ್ತಿಲ್ಲದವನು ಅವಿದ್ಯಾವಂತ ಎಂದು ಕರೆಯಿಸಿಕೊಳ್ಳುವ ಕಾಲ ಬಂದಿದೆ. ಮಾಹಿತಿ ತಂತ್ರಜ್ಞಾನದ ನೆಪದಲ್ಲಿ ಕನ್ನಡವನ್ನು ಮೂಲೆಗುಂಪು ಮಾಡಿ ಇಂಗ್ಲೀಷನ್ನು ಹಿಂದಿನ ಬಾಗಿಲಿನಿಂದ ಒಳತರಬಾರದು. ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಅಳವಡಿಕೆಯ ಜೊತೆಜೊತೆಗೇ ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನದ ಬಗ್ಗೆ ಸಾಹಿತ್ಯ ಸೃಷ್ಟಿ ದೊಡ್ಡ ಮಟ್ಟದಲ್ಲಿ ಆಗಬೇಕು. ಹಾಗೆ ಮಾಡದಿದ್ದಲ್ಲಿ ಇನ್ನು ಹತ್ತು ವರ್ಷಗಳಲ್ಲಿ ನಮ್ಮ ಕಸ್ತೂರಿ ಕನ್ನಡ ಕೇವಲ ಹಳ್ಳಿಗಳಲ್ಲಿ ಆಡುಭಾಷೆಯಾಗಿ ಉಳಿಯುವ ಸಾಧ್ಯತೆಗಳಿವೆ. ಇದನ್ನು ತಪ್ಪಿಸಲು ಎಲ್ಲರೂ ಕೈಜೋಡಿಸೋಣ. ಅಲ್ಲ. ಕೀಲಿಮಣೆ ಕುಟ್ಟೋಣ. ಗೋಪಾಲಕೃಷ್ಣ ಅಡಿಗರ ಕವನದ ಸಾಲನ್ನು ತಿರುಚಿ “ಕುಟ್ಟುವೆವು ನಾವು ಕೀಲಿಮಣೆಯೊಂದನು” ಎನ್ನೋಣ.

[ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮೇ ೨೦೦೧ರಲ್ಲಿ ಆಯೋಜಿಸಿದ್ದ ವಿಜ್ಞಾನ ಲೇಖಕರ ಶಿಬಿರದಲ್ಲಿ ಇದೇ ವಿಷಯದ ಬಗ್ಗೆ ಭಾಷಣ ಮಾಡಲಾಗಿತ್ತು. ಈ ಲೇಖನ ಅದರ ವಿಸ್ತೃತ ರೂಪ]

[ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಇದರ ಸಂಗ್ರಹ ರೂಪ ಪ್ರಕಟವಾಗಿತ್ತು]

2 Responses to ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಬರೆವಣಿಗೆ

  1. Bhaskar Narasimhaiah

    ‘ಸಾಫ್ಟ್ ವೇರ್’ ಪದದ ಪರಿಕಲ್ಪನೆ, ಆ ಕಲ್ಪನೆಯ ಮೂಸೆಯಲ್ಲಿ ಅದನ್ನು ಮೆದುವೆಂದು ಗ್ರಹಿಸಿ ಅದನ್ನು ‘ಸಾಫ್ಟ್’ ಎಂದು ಕರೆದು, ಹೀಗೆ ಮೆದು ವಾಗಿರುವ ಅಂಶವನ್ನು ಸಾಫ್ಟ್ ವೇರ್ ಎಂದು ಕರೆದದ್ದು, ಇಲ್ಲಿ ಕನ್ನಡದ ಸಂದರ್ಭದಲ್ಲಿ ತಂತ್ರವನ್ನೊಳಗೊಂಡ ‘ತಂತ್ರಾಶ’ ಆದದ್ದು ಅಚ್ಚರಿಯೆ!

    ಸರ್ವತೋಮುಖ ಭೌಗೋಳಿಕರಣದ, ಕ್ಷಿಪ್ರ ಸಾಮಾಜಿಕ, ರಾಜಕೀಯ, ಆರ್ಥಿಕ, ತಂತ್ರಜ್ಞಾನದ ಕ್ರಾಂತಿಕಾರಿ ಬದಲಾವಣೆಗೆ ಈ ಕಾಲಘಟ್ಟದಲ್ಲಿ ಈ ಜಗತ್ತು ಹೊಸ ವಸ್ತು, ವಿಚಾರಗಳ ಹುಟ್ಟು ಕಾಣುತ್ತಲೇ ಇದೆ. ಇವಕ್ಕೆ ಪೂರಕವಾಗಿ ಹೊಸ ಹೊಸ ಪದಗಳು ಹಲವಾರು ಮೂಲಗಳಿಂದ ಜನರ ಜೀವನವಾಹಿನಿಗೆ ಸೇರುತ್ತಲೇ ಇವೆ. ಈ ತೀವ್ರ ಗತಿಯ ಹರಿವಿನಲ್ಲಿ ಹುಟ್ಟುವ ಸಾಫ್ಟ್ ವೇರ್ ನಂಥ ಪದಗಳು ಒಂದು ಭಾಷೆಯ ಪರಿಧಿಯಲ್ಲಿ ಮಾತ್ರ ಇರುವುದಿಲ್ಲ; ಮೇಲಾಗಿ ಅವಕ್ಕೆ ಒಂದು ಭಾಷೆಯ ಲೇಪ, ಬಂಧನ ಇರುವುದಿಲ್ಲ. ಅವು ವಿಶ್ವಮಾನವನಂತೆ (Globalized) ಜಾಗತೀಕರಣಗೊಂಡಿರುತ್ತವೆ. ಯುರೋಪಿನಲ್ಲಿ ಬಹುತೇಕ ಎಲ್ಲ ಭಾಷೆಗಳಲ್ಲಿ ಅದು ಸಾಫ್ಟ್ ವೇರೇ ಆಗಿದೆ. ಅಷ್ಟೇ ಏಕೆ ನಮ್ಮ ರಾಷ್ಟ್ರ ಭಾಷೆಯಲ್ಲಿಯೂ ಸುಮಾರು ಪದಗಳು ಮೂಲ ರೂಪದಲ್ಲಿಯೇ ಬಳಕೆಯಾಗುತ್ತಿವೆ.

    ಈಗೀಗ ಹುಟ್ಟುವ ಅಸಂಖ್ಯಾತ ಪದಗಳನ್ನು ಕನ್ನಡಕ್ಕೆ ತಂದರೂ ಅವುಗಳ ಬಳಕೆ ಪ್ರಾಯೋಗಿಕವಲ್ಲ. ಅದೂ ಭಾರತದಂಥ ಬಹು ಭಾಷಾ ದೇಶದಲ್ಲಿ ಎಲ್ಲರನ್ನೂ ತಲುಪಲು ಎಲ್ಲರಿಗೂ ಸರ್ವಸಮ್ಮತವಾದ ಪದಗಳ ಬಳಕೆ ಮಾತ್ರ ಉಪಯೋಗಕ್ಕೆ ಬರುತ್ತವೆ. ನಿಘಂಟಿನಲ್ಲಿ ಮಾತ್ರ ಉಳಿಯುವ ಪದಗಳ ಕಟ್ಟುವುದರ ಪ್ರಯೋಜನವೇನು?

    .

  2. Prashasti

    Nice article

Leave a Reply