ಇ-ಕನ್ನಡವೇ ಸತ್ಯ, ಇ-ಕನ್ನಡವೇ ನಿತ್ಯ
ಆಡಳಿತದ ಕ್ಷಮತೆಯನ್ನು ಹೆಚ್ಚಿಸುವುದಕ್ಕೆ, ಅಧಿಕಾರಿಗಳಲ್ಲಿ ಉತ್ತರದಾಯಿತ್ವವನ್ನು ಖಾತರಿ ಪಡಿಸುವುದಕ್ಕೆ, ಕೆಂಪು ಪಟ್ಟಿಯನ್ನು ತಪ್ಪಿಸುವುದಕ್ಕೆ…ಹೀಗೆ ಆಡಳಿತದಲ್ಲಿ ಕಾಣಿಸಿಕೊಳ್ಳಬಹುದಾದ ಎಲ್ಲಾ ಸಮಸ್ಯೆಗಳಿಗೂ ಸದ್ಯಕ್ಕೆ ಕಂಡುಕೊಂಡಿರುವ ಪರಿಹಾರ ಇ-ಆಡಳಿತ. ಅಥವಾ ವಿದ್ಯುನ್ಮಾನ ಆಡಳಿತ. ವಿದ್ಯುನ್ಮಾನ ಆಡಳಿತಕ್ಕೆ ಒತ್ತುಕೊಟ್ಟು ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುತ್ತಿರುವ ಭಾರತದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ. ರೈತನ ಭೂಮಿ ದಾಖಲೆಗಳನ್ನೆಲ್ಲಾ ಕಂಪ್ಯೂಟರೀಕರಿಸಲಾಗಿದೆ. ನಕ್ಷೆಗಳನ್ನು ಕಂಪ್ಯೂಟರೀಕರಿಸುವ ಕ್ರಿಯೆ ನಡೆಯುತ್ತಿದೆ. ಬ್ಯಾಂಕುಗಳಂತೂ ಹೆಚ್ಚು ಕಡಿಮೆ ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಂಡಿವೆ. ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಅದರ ಸಹೋದರ ಸಂಸ್ಥೆಗಳೆಲ್ಲವೂ ಕಂಪ್ಯೂಟರೀಕರಣಗೊಂಡಿವೆ. ನಿರ್ವಾಹಕರು ಅಂಗೈಯಲ್ಲೇ ಇರುವ ಯಂತ್ರವನ್ನು ಬಳಸಿ ಟಿಕೇಟು ಕೊಡುತ್ತಾರೆ. ಮನೆ ಮನೆಗೆ ಬಂದು ವಿದ್ಯುತ್ ಬಳಕೆಯ ಮೀಟರ್ ಓದುವವರೂ ಈಗ ತಮ್ಮಲ್ಲಿರುವ ಅಂಗೈಯಗಲದ ಯಂತ್ರದಿಂದಲೇ ಬಿಲ್ ಮುದ್ರಿಸಿ ಕೊಡುತ್ತಾರೆ. ಹಾದಿ-ಬೀದಿಗೆ ಒಂದರಂತೆ ವಿವಿಧ ಬ್ಯಾಂಕ್‌ಗಳ ಎಟಿಎಂಗಳಿವೆ. ಮಧ್ಯಮ ವರ್ಗದ ಮನೆಯ ಪ್ರತೀ ಸದಸ್ಯರ ಬಳಿಯೂ ಒಂದು ಮೊಬೈಲ್ ಇದೆ. ಒಂದು ಕಾಲದಲ್ಲಿ ಟಿ.ವಿ. ಖರೀದಿಸಿದಂತೆ ಈಗ ಜನರು ಕಂಪ್ಯೂಟರ್ ಖರೀದಿಸುತ್ತಿ್ದಾರೆ. ಇದರ ಪರಿಣಾಮವಾಗಿ ಸಂವಹನ, ಸಂಪರ್ಕ, ಆಡಳಿತದ ಕ್ಷಮತೆ ಎಲ್ಲವೂ ಹೆಚ್ಚಿವೆ. ಆದರೆ ಕಡಿಮೆಯಾಗಿರುವುದು ಕನ್ನಡ ಮಾತ್ರ. ಹಿಂದಿನ ಪೂರ್ವ ಮುದ್ರಿತ ಬಸ್ ಟಿಕೇಟುಗಳಲ್ಲಿ ಕನ್ನಡ ಕಾಣಿಸುತ್ತಿತ್ತು. ಈಗಿನ ತಂತ್ರಜ್ಞಾನ ಸ್ಥಳದಲ್ಲೇ ಮುದ್ರಿಸುವ ಟಿಕೇಟಿನಲ್ಲಿ ಕನ್ನಡ ಸುಳಿವೇ ಇಲ್ಲ. ವಿದ್ಯುತ್ ಬಿಲ್‌ನಲ್ಲೂ ಅಷ್ಟೇ. ಬರೇ ರೋಮನ್ ಅಕ್ಷರಗಳು, ಇಂಗ್ಲಿಷ್ ಭಾಷೆ. ಹೆಚ್ಚಿನ ಎಟಿಎಂಗಳಲ್ಲಿ ಇಂಗ್ಲಿಷ್‌ಗಷ್ಟೇ ಮಣೆ. ಎಸ್‌ಎಂಎಸ್ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಯಾರಿಗಾದರೂ ತಿಳಿಸಬೇಕೆಂದರೆ ಅದನ್ನೂ ರೋಮನ್ ಅಕ್ಷರಗಳಲ್ಲಿ ಟೈಪಿಸಿದರಷ್ಟೇ ಎಲ್ಲರಿಗೂ ಓದಲು ಸಾಧ್ಯ ಎಂಬ ಸ್ಥಿತಿ ನಮ್ಮದು.
ಈ ದೂರುಗಳು ತಂತ್ರಜ್ಞಾನವನ್ನು ಸ್ವೀಕರಿಸಲಾಗದ ಗೊಡ್ಡು ಮನಸ್ಸಿನ ಹಳಹಳಿಕೆಗಳೆಂದು ದೂರುವವರು ಈಗಲೂ ಸಾಕಷ್ಟಿದ್ದಾರೆ. ಆದರೆ ಇದು ಅಷ್ಟು ಸರಳವಾದ ವಿಷಯವಲ್ಲ. ತಂತ್ರಜ್ಞಾನಾಧಾರಿತ ಕ್ಷಮತೆಯ ಅಗತ್ಯ ನಮಗಿದೆ. ಆದರೆ ಈ ಕ್ಷಮತೆ ಕನ್ನಡವನ್ನು ಬದಿಗೆ ತಳ್ಳಬೇಕೇ ಎಂಬುದು ಇಲ್ಲಿರುವ ಪ್ರಶ್ನೆ. ಇದಕ್ಕೆ ತಂತ್ರಜ್ಞಾನದಲ್ಲೇ ಉತ್ತರವನ್ನು ಹುಡುಕಿದರೆ `ತಂತ್ರಜ್ಞಾನವೆಂಬುದು ಕೇವಲ ಒಂದು ಉಪಕರಣ. ಅದು ಯಾವ ಭಾಷೆಗೂ ಬಳಕೆಯಾಗಬಹುದು’ ಎಂಬ ಉತ್ತರ ದೊರೆಯುತ್ತದೆ. ನಮ್ಮ ದುರಂತವೆಂದರೆ ತಂತ್ರಜ್ಞಾನವನ್ನು ಆಡಳಿತದಲ್ಲಿ, ನಿತ್ಯದ ಬದುಕಿನಲ್ಲಿ ಅಳವಡಿಸುತ್ತಿರುವವರಿಗೆ ಈ ಸಾಧ್ಯತೆಯ ಅರಿವಿಲ್ಲದೇ ಇರುವುದು. ಅರಿವಿದ್ದರೂ ಆ ಸಾಧ್ಯತೆಯನ್ನು ಮರೆತು ಮುಂದುವರಿಯುತ್ತಿರುವುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಆಡಳಿತ ವ್ಯವಸ್ಥೆಯಲ್ಲಿ ಕನ್ನಡವನ್ನು ಬಳಸುತ್ತಿದೆ. ಆದರೆ ಟಿಕೆಟಿಂಗ್ ಯಂತ್ರಗಳನ್ನು ಖರೀದಿಸಲು ತೀರ್ಮಾನಿಸಿದಾಗ ಅದರಲ್ಲಿಯೂ ಕನ್ನಡವಿರಬೇಕು ಎಂಬ ಎಚ್ಚರಿಕೆಯನ್ನು ತೆಗೆದುಕೊಳ್ಳುವಲ್ಲಿ ಅದು ವಿಫಲವಾಯಿತು. ವಿದ್ಯುತ್ ಪ್ರಸರಣೆ ಮತ್ತು ವಿತರಣೆಯಲ್ಲಿ ತೊಡಗಿರುವ ಸಂಸ್ಥೆಯೂ ಅಷ್ಟೇ. ಬಿಲ್ಲಿಂಗ್ ಯಂತ್ರವನ್ನು ಖರೀದಿಸುವಾಗ ಈ ವಿಷಯವನ್ನು ಮರೆತೇಬಿಟ್ಟಿತು. ಈ ಮರೆವು ಬ್ಯಾಂಕುಗಳ ಎಟಿಎಂಗಳ ಸಂದರ್ಭದಲ್ಲೂ ನಿಜ. ಎಲ್ಲೋ ಕೆಲವು ಬ್ಯಾಂಕುಗಳು ಕನ್ನಡ ಮತ್ತು ಹಿಂದಿಯನ್ನು ಬಳಸುತ್ತಿವೆಯಾದರೂ ಎಲ್ಲಾ ಬ್ಯಾಂಕುಗಳೂ ಮಾಡುತ್ತಿಲ್ಲ. ಒಮ್ಮೆ ಹೀಗೆ ಮರೆತು ಬಿಡುವುದು ಮುಂದೆ ಶಾಶ್ವತವಾಗಿ ಕನ್ನಡವನ್ನು ಹೊರಗಿಡುವುದರ ಹೆಜ್ಜೆಗಳು. ಯಂತ್ರ ಬಳಕೆಗೆ ಕನ್ನಡ ಹೊಂದುವುದಿಲ್ಲ ಎಂಬ ನೆಪವನ್ನು ನಮ್ಮ ಅಧಿಕಾರಿಗಳು ಬಹಳ ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಸಲು ಬರುವುದಿಲ್ಲ ಎಂಬ ಕಾರಣವನ್ನಿಟ್ಟುಕೊಂಡು ನಮ್ಮ ಹಿರಿಯ ಅಧಿಕಾರಿಗಳು ಸಂಪೂರ್ಣವಾಗಿ ಇಂಗ್ಲಿಷ್‌ನಲ್ಲಿ ಪತ್ರವ್ಯವಹಾರ ನಡೆಸುತ್ತಾರೆ. ಅಂಥವರಿಗೆ `ಯಂತ್ರದ ತೊಂದರೆ’ ಎಂಬುದು ಕನ್ನಡವನ್ನು ಹೊರಗಿಡಲು ಒಳ್ಳೆಯ ನೆಪವಾಗುತ್ತದೆ.
ಬಿಲ್ಲಿಂಗ್ ಯಂತ್ರಗಳು, ಮೊಬೈಲ್ ಫೋನ್, ವಿದ್ಯುನ್ಮಾನ ನಾಮ ಫಲಕಗಳು ಮುಂತಾದ ಕಡೆಗಳಲ್ಲಿ ಕನ್ನಡವನ್ನು ಬಳಸಲು ಬೇಕಿರುವ ತಂತ್ರಜ್ಞಾನ ತಾತ್ವಿಕ ಮಟ್ಟದಲ್ಲಿ ಈಗಾಗಲೇ ಲಭ್ಯವಿದೆ. ಯಂತ್ರಾಂಶ ಮತ್ತು ತಂತ್ರಾಂಶಗಳೆರಡೂ ಒಳಗೊಂಡಿರುವ ಈ ತಂತ್ರಜ್ಞಾನದಲ್ಲಿ ಬಳಕೆಯಾಗಬೇಕಿರುವ ಕನ್ನಡವನ್ನು ಜಾಗತಿಕ ಪ್ರಮಾಣೀಕರಣ ಯೂನಿಕೋಡ್‌ನಲ್ಲಿರುವಂತೆ ನೋಡಿಕೊಳ್ಳಬೇಕು. ಬಿಲ್ಲಿಂಗ್ ಯಂತ್ರ, ಮೊಬೈಲ್ ಫೋನ್ ಹೀಗೆ ಯಂತ್ರಗಳ ಪಟ್ಟಿ ದೊಡ್ಡದಾಗಿ ಕಾಣಿಸಬಹುದಾದರೂ ಈ ಯಂತ್ರಗಳಲ್ಲೆಲ್ಲಾ ಬಳಕೆಯಾಗಬೇಕಿರುವ ತಂತ್ರಜ್ಞಾನ ಒಂದೇ. ಆದುದರಿಂದ ಇದೊಂದು ದೊಡ್ಡ ಸವಾಲಲ್ಲ. ಇದನ್ನು ಕಾರ್ಯರೂಪಕ್ಕೆ ತರುವುದಕ್ಕೆ ಇಚ್ಛಾಶಕ್ತಿಯ ಅಗತ್ಯವಿದೆ. ಕೆಲವು ಮೊಬೈಲ್ ಫೋನ್‌ಗಳು ಕನ್ನಡ ಸವಲತ್ತನ್ನು ಕೊಡುತ್ತವೆಯಾದರೂ ಇವು ಪ್ರಮಾಣೀಕೃತ ಕನ್ನಡ ಅಕ್ಷರಗಳನ್ನು ಬಳಸದೇ ಇರುವುದರಿಂದ ಒಂದು ಕಂಪನಿ ಬಳಸುವ ಕನ್ನಡ ಮತ್ತೊಂದು ಕಂಪೆನಿಯ ಫೋನ್‌ನಲ್ಲಿ ಕಾಣಿಸುವುದಿಲ್ಲ. ಈ ತೊಂದರೆಗಳನ್ನು ಸರಿಪಡಿಸುವ ನಿಟ್ಟಿನಲ್ಲೂ ಸರಕಾರ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಯುವ ಜನತೆಯ ಮಾಧ್ಯಮಗಳಾಗಿರುವ ಈ ಕ್ಷೇತ್ರಗಳಲ್ಲಿ ಕನ್ನಡ ಅಪ್ರಸ್ತುತವಾಗಿಬಿಟ್ಟರೆ ಕನ್ನಡವನ್ನು ವಸ್ತು ಸಂಗ್ರಹಾಲಯಗಳಲ್ಲಿ ಮಾತ್ರ ಉಳಿಸುವ ಸ್ಥಿತಿ ಬಂದೀತು.
(ಕೃಪೆ: ಉದಯವಾಣಿ. ಕನ್ನಡ ರಾಜ್ಯೋತ್ಸವ ಸಂಪಾದಕೀಯ)