ಅಕ್ಷರಗಳಿಂದ ಮಾಹಿತಿಯೆಡೆಗೆ

– ಡಾ. ಯು.ಬಿ. ಪವನಜ

“ಗಣಕದಲ್ಲಿ ಕನ್ನಡ ಸಾಧ್ಯವಿದೆ ಎಂದು ನಿಮಗೆ ಗೊತ್ತಿದೆಯೆ?”
“ಯಾಕೆ ಗೊತ್ತಿಲ್ಲ? ನಾನು ಕಂಪ್ಯೂಟರ್‌ನಲ್ಲಿ ಈಗಾಗಲೇ ಕನ್ನಡ ಬಳಸುತ್ತಿದ್ದೇನೆ. ನನ್ನನ್ನು ಏನೂ ಅರಿಯದವನು ಅಂದುಕೊಂಡಿದ್ದೀರಾ”
“ತುಂಬ ಸಂತೋಷ. ನೀವು ಗಣಕದಲ್ಲಿ ಕನ್ನಡವನ್ನು ಯಾವ ರೀತಿ ಬಳಸುತ್ತಿದ್ದೀರಾ? ಕನ್ನಡದಲ್ಲಿ ಏನೇನು ಮಾಡುತ್ತಿದ್ದೀರಾ?”
“ಬರಹ, ನುಡಿ ಸಾಫ್ಟ್‌ವೇರ್‌ಗಳನ್ನು ಬಳಸಿ ಕನ್ನಡ ಲೇಖನ ಸಿದ್ಧಮಾಡಬಲ್ಲೆ ಗೊತ್ತಾ?”
“ಅಷ್ಟೆನಾ?ಮತ್ತೇನೇನು ಮಾಡಬಲ್ಲಿರಿ?”
“ಅಷ್ಟು ಮಾಡಿದರೆ ಸಾಲದೆ? ಇನ್ನೇನಾದರೂ ಸಾಧ್ಯವಿದೆಯೇ?”
“ಯಾಕಿಲ್ಲ? ನಿಮ್ಮ ಎಲ್ಲ ಲೇಖನಗಳ ದತ್ತಸಂಚಯ ಅಂದರೆ ಡಾಟಾಬೇಸ್ ಮಾಡಿದ್ದೀರಾ? ನಿಮ್ಮ ಮನೆಯಲ್ಲಿರುವ ಕನ್ನಡ ಸಹಿತ ಎಲ್ಲ ಭಾರತೀಯ ಭಾಷೆಗಳ ಪುಸ್ತಕಗಳ ಯಾದಿ ಮಾಡಿದ್ದೀರಾ? ಹೋಗಲಿ. ಯಾವುದೋ ಒಂದು ವಿಷಯದ ಬಗ್ಗೆ ನೀವು ಬಳಸಿದ ಪದಗುಚ್ಛ ನಿಮ್ಮ ಯಾವುದೋ ಒಂದು ಲೇಖನದಲ್ಲಿ ಅಡಗಿದೆ. ಅದನ್ನು ಹುಡುಕಿ ತೆಗೆಯಬಲ್ಲಿರಾ?”
“ಇವೆಲ್ಲ ಕನ್ನಡದಲ್ಲಿ ಸಾಧ್ಯವೇ? ನನಗೆ ಗೊತ್ತೇ ಇರಲಿಲ್ಲ”
“ನೋಡಿದಿರಾ? ಗಣಕದಲ್ಲಿ ಕನ್ನಡದಲ್ಲಿ ಬೆರಳಚ್ಚು ಮಾಡುವುದನ್ನೇ ನೀವು ಕಂಪ್ಯೂಟರ್‌ನಲ್ಲಿ ಕನ್ನಡ ಅಂದುಕೊಂಡಿದ್ದೀರಾ. ಗಣಕದಲ್ಲಿ ಕನ್ನಡ ಎಂದರೆ ಅಷ್ಟು ಮಾತ್ರವಲ್ಲ. ಇಂಗ್ಲೀಶಿನಲ್ಲಿ ಏನೇನು ಸಾದ್ಯವೋ, ಅವೆಲ್ಲವೂ ಕನ್ನಡದಲ್ಲಿ ಸಾಧ್ಯ ಗೊತ್ತಾ?”
“ಇಲ್ಲ. ಸ್ವಲ್ಪ ತಿಳಿಸುತ್ತೀರಾ”

ಇದೊಂದು ಕಾಲ್ಪನಿಕ ಸಂವಾದವಾಗಬೇಕಾಗಿಲ್ಲ. ಬಹುಮಂದಿ ಕನ್ನಡಿಗರು ಗಣಕದಲ್ಲಿ ಕನ್ನಡ ಬಳಕೆ ಎಂದರೆ ನುಡಿ ಅಥವಾ ಬರಹ ತಂತ್ರಾಂಶ (ಸಾಫ್ಟ್‌ವೇರ್) ಬಳಸಿ ಬೆರಳಚ್ಚು ಮಾಡುವುದು ಎಂದೇ ತಿಳಿದುಕೊಂಡಿದ್ದಾರೆ.

ಪತ್ರಿಕೆಗಳನ್ನೇ ಗಮನಿಸಿ. ತಮ್ಮದೇ ಪತ್ರಿಕೆಯಲ್ಲಿ ತುಂಬ ಹಿಂದೆ ಪ್ರಕಟವಾಗಿದ್ದ ಯಾವುದೋ ಒಂದು ಕಥೆ ಅಥವಾ ಲೇಖನ ಹಲವು ವರ್ಷಗಳ ನಂತರ ಅದೇ ಪತ್ರಿಕೆಯಲ್ಲಿ ಇನ್ನೊಬ್ಬರ ಹೆಸರಿನಲ್ಲಿ ಪ್ರಕಟವಾಗುತ್ತದೆ. ಆಗ ಯಾರಾದರೊಬ್ಬ ಓದುಗ ಅಥವಾ ಮೂಲ ಲೇಖಕ ಈ ತಪ್ಪನ್ನು ತೋರಿಸಿಕೊಡುತ್ತಾರೆ. ಈ ರೀತಿ ಕೃತಿಚೌರ್ಯ ಮಾಡಿದ ಲೇಖಕರಿಗೆ ಸಂಪಾದಕರು ಛೀಮಾರಿ ಹಾಕುತ್ತಾರೆ. ಇದೇಕೆ ಹೀಗೆ? ಹಲವಾರು ವರ್ಷಗಳಿಂದ ಎಲ್ಲ ಪತ್ರಿಕೆಗಳವರೂ ತಮ್ಮ ಲೇಖನಗಳನ್ನು ಗಣಕಗಳನ್ನು ಬಳಸಿಯೇ ತಯಾರಿಸುತ್ತಿದ್ದಾರೆ. ಆದರೆ ಲೇಖನಗಳೊಳಗೆ ಕನ್ನಡ ಭಾಷೆಯಲ್ಲಿ ಅಡಗಿರುವ ಮಾಹಿತಿಗಳನ್ನು ಹುಡುಕಿ ತೆಗೆಯಲು ಮಾತ್ರ ಅವರಿಂದ ಸಾಧ್ಯವಾಗುತ್ತಿಲ್ಲ. ಯಾಕೆ? ಯಾಕೆಂದರೆ ಅವರು ಕೂಡ ಗಣಕದಲ್ಲಿ ಕನ್ನಡವನ್ನು ಬೆರಳಚ್ಚು ಮಾಡುವಷ್ಟೇ ಬಳಸುತ್ತಿದ್ದಾರೆ. “ನೀವೇನು ಹೇಳುತ್ತಿದ್ದೀರಾ. ನಮಗೆ ಅರ್ಥವಾಗುತ್ತಿಲ್ಲ” ಎನ್ನುತ್ತಿದ್ದೀರಾ?

ಇದನ್ನು ವಿವರಿಸಬೇಕಾದರೆ ಗಣಕದಲ್ಲಿ ಕನ್ನಡ ಭಾಷೆಯ ಅಳವಡಿಕೆ ಮತ್ತು ಬಳಕೆ ಬಗ್ಗೆ ಸ್ವಲ್ಪ ವಿವರವಾಗಿ ತಿಳಿಸಬೇಕಾಗುತ್ತದೆ. ಗಣಕಗಳಲ್ಲಿ ಕನ್ನಡದ ಬಳಕೆ ಸುಮಾರು ಮೂರು ದಶಕಗಳ ಹಿಂದೆ ಆರಂಭವಾಯಿತು. ಪದಸಂಸ್ಕರಣವು (word-processing) ಇದರಲ್ಲಿಯ ಮೊದಲನೆಯದು. ಪತ್ರ, ಲೇಖನ, ದಾಖಲೆಗಳನ್ನು ಬರೆಯಲು, ತಿದ್ದಲು ಇವುಗಳ ಬಳಕೆ ಆಗುತ್ತಿದೆ. ಪದಸಂಸ್ಕರಣದ ಮುಂದುವರೆದ ಸೌಕರ್ಯವೇ ಡಿ.ಟಿ.ಪಿ. (desktop publishing). ಅಂದರೆ ಪಠ್ಯದ ಜೊತೆ ಚಿತ್ರಗಳನ್ನು ಸೇರಿಸಿ ಪುಟವಿನ್ಯಾಸ ಮಾಡುವುದು. ಈಗ ಎಲ್ಲ ಪುಸ್ತಕಗಳು ಮತ್ತು ಪತ್ರಿಕೆಗಳು ಇದೇ ವಿಧಾನದಿಂದ ತಯಾರಾಗುತ್ತಿವೆ. ಆದರೆ ಪಠ್ಯವನ್ನು ಹುಡುಕಲು ಯಾಕೆ ಸಾಧ್ಯವಾಗುತ್ತಿಲ್ಲ?

ಕನ್ನಡದ ಡಿಟಿಪಿಗೆ ಬಳಸುವ ಎಲ್ಲ ತಂತ್ರಾಂಶಗಳು ನಿಜವಾಗಿ ನೋಡಿದರೆ ಕೇವಲ ಬೆರಳಚ್ಚು ತಂತ್ರಾಂಶಗಳು. ಅವುಗಳ ಜೊತೆ ಸುಂದರವಾದ ಹಲವು ಅಕ್ಷರಶೈಲಿಗಳನ್ನು (font) ನೀಡಿದ್ದಾರೆ. ಇವುಗಳು ಗಣಕಗಳನ್ನು ನಡೆಸುವ ತಳಹದಿಯ ವ್ಯವಸ್ಥೆಯಾದ ಕಾರ್ಯಾಚರಣೆ ವ್ಯವಸ್ಥೆಯ (operating system) ಮೇಲೆ ಒಂದು ಪದರದ ರೀತಿಯಲ್ಲಿ ಕೆಲಸ ಮಾಡುತ್ತವೆ. ಈ ವಿಧಾನದಲ್ಲಿ ಬಳಕೆಯಾಗುತ್ತಿರುವುದು ಟ್ರೂಟೈಪ್ ಎಂಬ ವಿಧಾನದ ಅಕ್ಷರಶೈಲಿಗಳು. ಇವುಗಳ ಮಿತಿಯೇನೆಂದರೆ ಸುಮಾರು ೧೯೦ ಅಕ್ಷರಭಾಗಗಳನ್ನು (glyph) ಮಾತ್ರ ಇವು ಒಳಗೊಂಡಿರಬಹುದು. ಕನ್ನಡ ಭಾಷೆಯನ್ನು ಮೂಡಿಸಲು ಬೇಕಾಗಿರುವ ಅಕ್ಷರಭಾಗಗಳನ್ನು ಇಂಗ್ಲೀಶಿನ ಅಕ್ಷರಗಳ ಸ್ಥಾನದಲ್ಲಿ ಕೂರಿಸಿರುತ್ತಾರೆ. ಕಾರ್ಯಾಚರಣೆಯ ವ್ಯವಸ್ಥೆ ಮಾತ್ರವಲ್ಲ ಡಿಟಿಪಿಗೆ ಬಳಸುವ ವರ್ಡ್, ಪೇಜ್‌ಮೇಕರ್, ಇನ್‌ಡಿಸೈನ್, ಕ್ವಾರ್ಕ್ ಇತ್ಯಾದಿ ತಂತ್ರಾಂಶಗಳಿಗೂ ಇವು ಕನ್ನಡ ಭಾಷೆ ಎಂದು ತಿಳಿಯುವುದಿಲ್ಲ. ಇದನ್ನು ಇಂಗ್ಲೀಶ್ ಎಂದೇ ಅರ್ಥೈಸಿಕೊಂಡು ಅವು ಕೆಲಸ ಮಾಡುತ್ತವೆ. ಅಕ್ಷರಶೈಲಿಯನ್ನು ಕನ್ನಡದ ನುಡಿ, ಬರಹ, ಇತ್ಯಾದಿಗಳಿಂದ ಇಂಗ್ಲೀಶಿನ ಏರಿಯಲ್, ಟೈಮ್ಸ್ ಇತ್ಯಾದಿಗಳಿಗೆ ಬದಲಿಸಿದರೆ ಅವು ಅರ್ಥಹೀನ ಅಸಂಬದ್ಧ ತುಂಡುಗಳಾಗಿ ಕಾಣಿಸುತ್ತವೆ. ಆದುದರಿಂದಲೇ ಈ ರೀತಿಯಲ್ಲಿ ಬೆರಳಚ್ಚು ಮಾಡಿದ ಮಾಹಿತಿಯ ಕಡತಗಳನ್ನು ಕಾರ್ಯಾಚರಣೆ ವ್ಯವಸ್ಥೆ ಅಥವಾ ಡಿಟಿಪಿಯ ತಂತ್ರಾಂಶಗಳಲ್ಲಿ ಅಳವಡಿಸಿರುವ “ಹುಡುಕುವ” ಸವಲತ್ತನ್ನು ಬಳಸಿ ಹುಡುಕಲು ಸಾಧ್ಯವಿಲ್ಲ. ಪತ್ರಿಕೆಗಳವರು ದಶಕಗಳಿಂದ ಕನ್ನಡ ಭಾಷೆಯಲ್ಲಿ ಪತ್ರಿಕೆ ತಯಾರಿಸಲು ಗಣಕವನ್ನು ಬಳಸುತ್ತಿದ್ದರೂ ಅವರ ಗಣಕದಲ್ಲಿ ಶೇಖರವಾಗಿರುವ ಕಡತಗಳಲ್ಲಿ ಇರುವ ಮಾಹಿತಿಯನ್ನು ಹುಡುಕಲು ಸಾಧ್ಯವಾಗದಿರುವುದು ಇದೇ ಕಾರಣದಿಂದ.

ನೀವು ನುಡಿ, ಬರಹ, ಇತ್ಯಾದಿ ಬೆರಳಚ್ಚಿನ ತಂತ್ರಾಶ ಬಳಸಿ ವರ್ಡ್ನಲ್ಲಿ ಕಡತ ತಯಾರಿಸುವವರಾದರೆ ಇನ್ನೊಂದು ವಿಷಯವನ್ನು ಗಮನಿಸಿದ್ದೀರಾ? ಅದೆಂದರೆ ಕನ್ನಡದ ಸರಿಯಾದ ಪದವನ್ನು ಬೆರಳಚ್ಚು ಮಾಡಿದರೂ ತಂತ್ರಾಂಶವು ಅದನ್ನು ತಪ್ಪು ಎಂದು ಹೇಳುವುದು. ಇದಕ್ಕೂ ಕಾರಣ ಮೇಲೆ ತಿಳಿಸಿದುದೇ. ಇಂಗ್ಲೀಶ್ನ ಅಕ್ಷರಭಾಗಗಳ ಜಾಗದಲ್ಲಿ ಕನ್ನಡದ ಅಕ್ಷರಭಾಗಗಳನ್ನು ಕೂರಿಸಿರುವುದರಿಂದ ನೀವು ಊಡಿಸಿದ ಮಾಹಿತಿ ಕನ್ನಡ ಎಂದು ವರ್ಡ್ ತಂತ್ರಾಂಶಕ್ಕೆ ಅರ್ಥವಾಗುವುದಿಲ್ಲ. ಊಡಿಸಿದ ಮಾಹಿತಿ ಇಂಗ್ಲೀಶ್ ಎಂದೇ ಅದು ಭಾವಿಸಿ ಎಲ್ಲವೂ ತಪ್ಪು ಎಂದು ಹೇಳುತ್ತದೆ.

ಗಣಕಗಳ ಕಾರ್ಯಾಚರಣೆ ವ್ಯವಸ್ಥೆಯಲ್ಲಿಯೇ ಕನ್ನಡವನ್ನು ಅಳವಡಿಸಿದರೆ ಈ ಸಮಸ್ಯೆ ಪರಿಹಾರವಾದಂತೆ ಎಂಬ ಆಲೋಚನೆ ನಿಮಗೆ ಬಂತೆ? ಹೌದು. ಈಗ ಅದು ಸಾಧ್ಯ. ಇದು ಸಾಧ್ಯವಾಗಿರುವುದು ಯುನಿಕೋಡ್ ಎಂಬ ಶಿಷ್ಟತೆಯಿಂದ. ಏನು ಈ ಯುನಿಕೋಡ್? ಗಣಕಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಲು ಬಳಸುವ ಹೊಸ ಸಂಕೇತೀಕರಣ ವ್ಯವಸ್ಥೆಯೇ ಯುನಿಕೋಡ್. ಇದರ ವೈಶಿಷ್ಟ್ಯವೆಂದರೆ ಜಗತ್ತಿನ ಎಲ್ಲ ಭಾಷೆಗೂ ಇದರಲ್ಲಿ ಪ್ರತ್ಯೇಕ ಸಂಕೇತವನ್ನು ನೀಡಲಾಗಿದೆ. ಅಂದರೆ ಇಂಗ್ಲೀಶ್ನ ಜಾಗದಲ್ಲಿ ಕನ್ನಡವನ್ನು ಕೂರಿಸಬೇಕಾಗಿಲ್ಲ. ಯುನಿಕೋಡ್ ವಿಧಾನದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಪರದೆಯಲ್ಲಿ (monitor) ಸರಿಯಾಗಿ ತೋರಿಸಲು ಓಪನ್‌ಟೈಪ್ ಎಂಬ ವಿಧಾನದ ಅಕ್ಷರಶೈಲಿಯನ್ನು ಬಳಸಬೇಕಾಗುತ್ತದೆ. ಈ ಅಕ್ಷರಶೈಲಿಯ ವೈಶಿಷ್ಟ್ಯವೆಂದರೆ ಎಷ್ಟು ಬೇಕಾದರೂ ಅಕ್ಷರಭಾಗಗಳನ್ನು ಬಳಸಬಹುದು. ಅಷ್ಟು ಮಾತ್ರವಲ್ಲ, ಯುನಿಕೋಡ್ ವಿಧಾನದಿಂದ ಮಾಹಿತಿಯನ್ನು ಶೇಖರಿಸುವುದರಿಂದ ಪ್ರಪಂಚದ ಎಲ್ಲ ಭಾಷೆಗಳನ್ನು ಒಂದೇ ಕಡತದಲ್ಲಿ ಸಂಗ್ರಹಿಸಲು ಸಾಧ್ಯ. ಯುನಿಕೋಡ್ ಮಾಹಿತಿಯನ್ನು ಕಾರ್ಯಾಚರಣೆ ವ್ಯವಸ್ಥೆಗಳು ಅರ್ಥಮಾಡಿಕೊಳ್ಳುವುದರಿಂದ ಕಡತಗಳಲ್ಲಿ ಸಂಗ್ರಹವಾದ ಮಾಹಿತಿಯನ್ನು ಹುಡುಕಬಹುದು. ಪತ್ರಿಕೆಗಳು ಯುನಿಕೋಡ್ ಬಳಸಿ ಕಡತ ತಯಾರಿ ಮಾಡಿದರೆ ಒಂದು ವಿಷಯದ ಬಗ್ಗೆ ಮಾಹಿತಿ ಯಾವ ಕಡತದಲ್ಲಿದೆ ಎಂದು ಸುಲಭವಾಗಿ ಹುಡುಕಿ ತೆಗೆಯಬಹುದು. ಅಂತರಜಾಲದಲ್ಲಿ ಮಾಹಿತಿಯನ್ನು ಹುಡುಕುವ ತಾಣವಾದ ಗೂಗ್ಲ್ ಕೂಡ ಯುನಿಕೋಡ್ ಮೂಲಕವೇ ಕನ್ನಡದ ಮಾಹಿತಿಯನ್ನು ಹುಡುಕುತ್ತದೆ. ಕನ್ನಡದ ಹಲವು ಪತ್ರಿಕೆಗಳವರು ಅಂತರಜಾಲದಲ್ಲಿ (Internet) ಹಲವು ವರ್ಷಗಳಿಂದ ತಮ್ಮ ಪ್ರತಿದಿನದ ಸಂಚಿಕೆಯನ್ನು ಪ್ರಕಟಿಸುತ್ತಿದ್ದಾರೆ. ಸಹಸ್ರಾರು ಪುಟಗಳಷ್ಟು ಮಾಹಿತಿಯನ್ನು ಅಂತರಜಾಲಕ್ಕೆ ಸೇರಿಸಿದ್ದಾರೆ. ಆದರೆ ಗೂಗ್ಲ್ ಬಳಸಿ ಕನ್ನಡದ ಮಾಹಿತಿ ಹುಡುಕಿದರೆ ಇವು ಸಿಗುವುದಿಲ್ಲ. ಗ್ರಂಥಾಲಯ, ಸಂಬಳದ ಪಟ್ಟಿ, ಪಡಿತರ ಚೀಟಿ, ಸಾರಿಗೆ ಸಂಸ್ಥೆಯ ವ್ಯವಹಾರ, ವಿದ್ಯುತ್ ಬಿಲ್ಲು, ಇತ್ಯಾದಿ ಎಲ್ಲ ನಮೂನೆಯ ಕನ್ನಡದ ಆನ್ವಯಿಕ ತಂತ್ರಾಂಶಗಳ (application software) ತಯಾರಿ ಯುನಿಕೋಡ್ ವಿಧಾನದಿಂದ ಸಾಧ್ಯ. ಇಂಹ ತಂತ್ರಾಂಶಗಳಲ್ಲಿ ಕನ್ನಡ ಮಾತ್ರವಲ್ಲ, ಹಿಂದಿ, ಇಂಗ್ಲಿಶ್, ಮತ್ತಿತರೆ ಭಾಷೆಗಳನ್ನು ಏಕ ಕಾಲದಲ್ಲಿ ಬಳಸಬಹುದು. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯವರು ತಮ್ಮ ಬಸ್ಸುಗಳ ವೇಳಾಪಟ್ಟಿಯನ್ನು ಅಂತರಜಾಲದಲ್ಲಿ ಹಲವು ಭಾಷೆಗಳಲ್ಲಿ ಏಕಕಾಲದಲ್ಲಿ ಪ್ರಕಟಿಸಬಹುದು.

ಇಷ್ಟೆಲ್ಲ ಸೌಲಭ್ಯಗಳಿದ್ದರೂ ಪತ್ರಿಕೆಗಳವರು ಮತ್ತಿತರರು ಯಾಕೆ ಯುನಿಕೋಡ್ ಬಳಸುತ್ತಿಲ್ಲ ಎಂದು ಆಲೋಚಿಸುತ್ತಿದ್ದೀರಾ? ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು ವಿಂಡೋಸ್ ಎಕ್ಸ್‌ಪಿ, ೨೦೦೩ ಮತ್ತು ಲಿನಕ್ಸ್ ಕಾರ್ಯಾಚರಣೆ ವ್ಯವಸ್ಥೆಗಳಲ್ಲಿ ಮಾತ್ರ ಭಾರತೀಯ ಭಾಷೆಯ ಯುನಿಕೋಡ್ ಸೌಲಭ್ಯ ಇದೆ. ನಮ್ಮ ದೇಶದಲ್ಲಿ ಇನ್ನೂ ಹಲವು ಮಂದಿ ವಿಂಡೋಸ್ ೯೮ನ್ನು ಬಳಸುತ್ತಿದ್ದಾರೆ. ಇನ್ನೊಂದು ಬಹಳ ಮುಖ್ಯವಾದ ಕಾರಣ ಪುಟವಿನ್ಯಾಸದ ತಂತ್ರಾಂಶಗಳಾದ ಪೇಜ್‌ಮೇಕರ್, ಇನ್‌ಡಿಸೈನ್, ಕ್ವಾರ್ಕ್‌ಗಳಲ್ಲಿ ಭಾರತೀಯ ಭಾಷೆಯ ಯುನಿಕೋಡ್ ಸವಲತ್ತನ್ನು ನೀಡಿಲ್ಲ. ವಿಂಡೋಸ್ ಎಕ್ಸ್‌ಪಿಯಲ್ಲಿ ಮೈಕ್ರೋಸಾಫ್ಟ್ ವರ್ಡ್ ೨೦೦೩ ಅಥವಾ ಓಪನ್ ಆಫೀಸ್ ಬಳಸಿ ಕನ್ನಡ ಯುನಿಕೋಡ್ ಬಳಸಬಹುದು. ಲಿನಕ್ಸ್‌ನಲ್ಲೂ ಓಪನ್ ಆಫೀಸ್ ಬಳಸಿ ಕನ್ನಡ ಯುನಿಕೋಡ್ ಬಳಸಬಹುದು. ಆದರೆ ವರ್ಡ್ ಆಗಲಿ ಓಪನ್ ಆಫೀಸ್ ಆಗಲಿ ಉತ್ತಮ ಮುದ್ರಣಕ್ಕೆ ಬಳಸಬಲ್ಲ ಡಿಟಿಪಿ ತಂತ್ರಾಂಶಗಳಲ್ಲ. ಆದರೂ ಸಾಧಾರಣ ಮಟ್ಟದ ಪುಸ್ತಕಗಳ ತಯಾರಿಗೆ ಇವು ಸಾಕು. ಲಿನಕ್ಸ್‌ನಲ್ಲಿ ಕಾರ್ಯನಿರ್ವಹಿಸುವ ಸ್ಕ್ರೈಬಸ್ ಎಂಬ ತಂತ್ರಾಂಶವನ್ನು ಬಳಸಿ ಕನ್ನಡ ಯುನಿಕೋಡ್ ವಿಧಾನದಲ್ಲಿ ಡಿಟಿಪಿ ಮಾಡಲು ಸಾಧ್ಯ. ಅಂದರೆ ಯುನಿಕೋಡ್ ವಿಧಾನ ಬಳಸಿ ಕನ್ನಡ ಪುಸ್ತಕ ತಯಾರಿ ಮಾಡಬಹುದು. ಆದರೆ ಯಾರೂ ಮಾಡುತ್ತಿಲ್ಲ. ಯಾಕೆ? (ಇನ್ನೊಂದು ಮಾಹಿತಿ: ಇತ್ತೀಚೆಗೆ ಸ್ಕ್ರೈಬಸ್‌ನ ವಿಂಡೋಸ್ ಆವೃತ್ತಿ ಸಿದ್ಧವಾಗಿದೆ. ಆದರೆ ಅದರಲ್ಲಿ ಕನ್ನಡ ಯುನಿಕೋಡ್ ಸರಿಯಾಗಿ ಕೆಲಸ ಮಾಡುತ್ತಿಲ್ಲ.)

ಕನ್ನಡ ಯುನಿಕೋಡ್ ಬಳಸಲು ಓಪನ್‌ಟೈಪ್ ಫಾಂಟ್ ಬೇಕು. ಉತ್ತಮ ಓಪನ್‌ಟೈಪ್ ಫಾಂಟ್‌ಗಳು ಕನ್ನಡಕ್ಕೆ ಲಭ್ಯವಿಲ್ಲ. ಇದರಿಂದಾಗಿ ಯಾರೂ ಡಿಟಿಪಿ ಮಾಡಲು ಕನ್ನಡ ಯುನಿಕೋಡ್‌ನ್ನು ಬಳಸುತ್ತಿಲ್ಲ. ಟ್ರೂಟೈಪ್ ಫಾಂಟ್‌ಗಳಲ್ಲಿ ಲಭ್ಯವಿರುವಂತೆ ನೂರಾರು ಓಪನ್‌ಟೈಪ್ ಫಾಂಟ್‌ಗಳು ಕನ್ನಡಕ್ಕೆ ಬೇಕಾಗಿವೆ.

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಸರಿಯಾದ ಅಳವಡಿಕೆ ಮತ್ತು ಶಿಷ್ಟತೆ ಬಗ್ಗೆ ಸಲಹೆ ನೀಡಲು ಸಮಿತಿಯೊಂದನ್ನು ಕರ್ನಾಟಕ ಸರಕಾರವು ಹಿಂದೊಮ್ಮೆ ನೇಮಿಸಿತ್ತು. ಆ ಸಮಿತಿ ತನ್ನ ವರದಿ ನೀಡಿ ಅದರಂತೆ ಕೆಲವು ಅಧಿಸೂಚನೆ ಹೊರಡಿಸಿದ್ದು, ನುಡಿ ಎಂಬ ತಂತ್ರಾಶವನ್ನು ತಯಾರಿಸಿ ಬಿಡುಗಡೆ ಮಾಡಿದ್ದು -ಇವೆಲ್ಲ ಈಗ ಇತಿಹಾಸ. ಆದರೆ ಯುನಿಕೋಡ್ ಜಗತ್ತಿನಲ್ಲಿ ನುಡಿ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆ. ಇದಕ್ಕೆ ಕಾರಣ ವಿಂಡೋಸ್ ಎಕ್ಸ್‌ಪಿ ಮತ್ತು ಲಿನಕಸ್‌ಗಳಲ್ಲಿ ಕಾರ್ಯಾಚರಣೆಯ ವ್ಯವಸ್ಥೆಯಲ್ಲೇ ಕನ್ನಡ ಯುನಿಕೋಡ್ ಬಳಸಲು ಬೇಕಾದ ಎಲ್ಲ ಸವಲತ್ತುಗಳು ಲಭ್ಯವಿವೆ. ಲಿನಕ್ಸ್‌ನಲ್ಲಿ ನುಡಿ ಕೆಲಸ ಮಾಡುವುದೂ ಇಲ್ಲ. ಗಣಕ ಕ್ಷೇತ್ರದಲ್ಲಿ ತಂತ್ರಜ್ಞಾನ ಅತಿ ವೇಗವಾಗಿ ಬದಲಾಗುತ್ತಿರುತ್ತದೆ. ಈ ಬದಲಾವಣೆಯಲ್ಲಿ ಕನ್ನಡದ ಶಿಷ್ಟತೆಯನ್ನು ಕಾಪಾಡಿಕೊಳ್ಳಲು ಸರಕಾರವು ಆಗಾಗ ಕ್ರಮ ಕೈಗೊಳ್ಳಬೇಕಾಗುತ್ತದೆ. ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಹೀಗೆಯೇ ಇರಬೇಕು ಎಂದು ಯುನಿಕೋಡ್ ಕನ್ಸೋರ್ಶಿಯಂ ಮತ್ತು ಖಾಸಗಿ ಕಂಪೆನಿಗಳಿಗೆ ಸೂಚನೆ ನೀಡಲು ಒಂದು ಪೂರ್ಣಾವಧಿಯ ಸಮಿತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ರಾಷ್ಟ್ರೀಯ ಮಾಹಿತಿವಿಜ್ಞಾನ ಕೇಂದ್ರದ ಕರ್ನಾಟಕ ಘಟಕವು ಹೆಜ್ಜೆ ಇಟ್ಟಿದೆ. ಇವರ ವತಿಯಿಂದ ಪ್ರಥಮ ಸಭೆಯನ್ನು ಬೆಂಗಳೂರಿನಲ್ಲಿ ಆಗಸ್ಟ್ ೮ರಂದು ಕರೆಯಲಾಗಿದೆ. ನುಡಿ ಬರಹಗಳಿಂದಾಚೆಗೆ ಕನ್ನಡವನ್ನು ಮುನ್ನಡೆಸುವ ದಿಟ್ಟಿನಲ್ಲಿ ಇದು ಉತ್ತಮ ಬೆಳವಣಿಗೆ.

(ಕೃಪೆ: ಉಷಾಕಿರಣ, ಆಗಸ್ಟ್ ೮ & ೯, ೨೦೦೬)

ನೋಡಿ: ಯುನಿಕೋಡ್ -ಮಿಥ್ಯೆ ಮತ್ತು ವಾಸ್ತವ

Leave a Reply