ಮೂಕಜ್ಜಿಯ ಕನಸುಗಳು ಚಲನಚಿತ್ರ
– ಸುಶ್ರುತ ದೊಡ್ಡೇರಿ
ಕಾದಂಬರಿ ಆಧಾರಿತ ಸಿನೆಮಾಗಳನ್ನು ನೋಡಲು ಹೋಗಲು ಹಿಂಜರಿಕೆಯಾಗುತ್ತದೆ. ಅದೂ ನಾವು ಇಷ್ಟ ಪಟ್ಟು ಓದಿದ ಕಾದಂಬರಿ/ಕೃತಿಯಾಗಿದ್ದರೆ, ಸಿನೆಮಾದಲ್ಲಿ ಎಲ್ಲಿ ಅದನ್ನು ಹಾಳು ಮಾಡಿಬಿಟ್ಟಿರುತ್ತಾರೋ ಎಂಬ ಭಯ. ಓದುವಾಗ ನಮಗೆ ಆದ ನವಿರು ಅನುಭವ, ಕಲ್ಪಿಸಿಕೊಂಡ ಚಿತ್ರಗಳು, ಊಹಿಸಿಕೊಂಡ ಪಾತ್ರಗಳ ಮುಖಗಳು ಇಲ್ಲಿ ಬೇರೆಯೇ ಆಗಿ, ಓದಿನ ನೆನಪಿನ ಸುಖ ಅಳಿಸಿಹೋಗುವ ಅಳುಕು ಬಹಳ ಸಲ ಕಾಡುತ್ತದೆ.
ಆದರೆ ಪಿ. ಶೇಷಾದ್ರಿಯವರ ಹಿಂದಿನ ಸಿನೆಮಾಗಳನ್ನು ನೋಡಿದವರು ಅಷ್ಟೆಲ್ಲಾ ಹಿಂಜರಿಯಬೇಕಿಲ್ಲ. ಅವರ ಮೇಲೆ ಈಗಾಗಲೇ ಒಂದು ನಂಬಿಕೆ ಮೂಡಿರುತ್ತೆ. ಆ ನಂಬಿಕೆಯನ್ನಿಟ್ಟುಕೊಂಡೇ ಹೋಗಿದ್ದು ‘ಮೂಕಜ್ಜಿಯ ಕನಸುಗಳು’ ಸಿನೆಮಾಗೆ. ಬೆಂಗಳೂರು ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವ-2019ರಲ್ಲಿ ಇದರ ಮೊದಲ ಪ್ರದರ್ಶನಗಳು ಇದ್ದವು. ನಿರ್ದೇಶಕರೂ-ಕಲಾವಿದರೂ ಜತೆಗೇ ಇದ್ದರು.
ಕಾದಂಬರಿಯನ್ನು ತೆರೆಗೆ ತರುವಲ್ಲಿ ಶೇಷಾದ್ರಿಯವರು ವಹಿಸಿರುವ ಶ್ರಮ ಮತ್ತು ಶ್ರದ್ಧೆ ಸಿನೆಮಾದಲ್ಲಿ ಎದ್ದು ಕಾಣುತ್ತದೆ. ಪ್ರತಿ ಫ್ರೇಮಿನಲ್ಲೂ ಅವರ ಕುಸುರಿ ಕೆಲಸವಿದೆ. ಅವರೇ ಹೇಳಿಕೊಂಡಂತೆ ಇದರ ಚಿತ್ರಕತೆ ಬರೆಯಲು ಅವರು ನಾಲ್ಕೈದು ವರ್ಷಗಳನ್ನು ವ್ಯಯಿಸಿದ್ದಾರೆ. ‘ಮೂಕಜ್ಜಿಯ ಕನಸುಗಳು’ ಕೃತಿಯೇ ಹಾಗಿದೆ. ಶಿವರಾಮ ಕಾರಂತರಿಗೆ ಜ್ಞಾನಪೀಠ ತಂದುಕೊಟ್ಟ ಈ ಕೃತಿ, ನಮ್ಮ ದೇಶದ ಅತ್ಯಂತ ಸೂಕ್ಷ್ಮ ಪ್ರಶ್ನೆಗಳಾದ ದೇವರು, ಧರ್ಮ, ಜಾತಿ, ಆಚರಣೆಗಳು, ಸಂಬಂಧಗಳು, ಮದುವೆ –ಇತ್ಯಾದಿ ವಿಷಯಗಳನ್ನು ಸ್ಥೂಲವಾಗಿ ತಾಕುತ್ತದೆ. ಮೂಕಜ್ಜಿಯೆಂಬ ಮುದುಕಿಯ ಬಾಯಿಯಿಂದ ಈ ಎಲ್ಲವನ್ನೂ ಹೇಳಿಸುತ್ತದೆ. ಈ ಮೂಕಜ್ಜಿ ದಾರ್ಶನಿಕಳೋ, ಮಾಟಗಾತಿಯೋ, ಪ್ರಾಜ್ಞಳೋ, ಭ್ರಮಿತೆಯೋ –ತಿಳಿಯುವುದಿಲ್ಲ. ಆದರೆ ಭಾಗಶಃ ವಿಷಯಗಳಲ್ಲಿ ಮೂಕಜ್ಜಿ ಹೇಳುತ್ತಿರುವುದು ಸರಿ ಅನ್ನಿಸುತ್ತದೆ. ಅವಳ ಮೊಮ್ಮಗ ಸುಬ್ರಾಯ ಕೇಳುವ ಪ್ರಶ್ನೆಗಳು ಒಂದಲ್ಲಾ ಒಂದು ದಿನ ನಮ್ಮನ್ನೂ ಕಾಡಿದ ಪ್ರಶ್ನೆಗಳೇ. ಇಲ್ಲಿ ಮೂಕಜ್ಜಿ ಯಾವ ಪ್ರಶ್ನೆಗೂ ನೇರವಾಗಿ ಉತ್ತರ ಕೊಡುವುದಿಲ್ಲ. ಆಕೆಗೂ ಅವುಗಳ ಬಗ್ಗೆ ನೂರು ಪ್ರತಿಶತ ಆತ್ಮವಿಶ್ವಾಸವಿದ್ದಂತಿಲ್ಲ. ಮತ್ತೆ ಅದು ಹೇಗೆ ಅವಳು ಇಷ್ಟೆಲ್ಲಾ ತಿಳಿದುಕೊಂಡಿದ್ದಾಳೆ ಅಂತ ಕೇಳಿದರೆ, ಅವಳು ಹೇಳುತ್ತಾಳೆ: ‘ಈ ಅಶ್ವತ್ಥ ಮರ ನೋಡು.. ನೂರಾರು ವರ್ಷ ಆಗಿದೆ ಇದಕ್ಕೆ. ಅದು ಏನೆಲ್ಲ ನೋಡಿರಬಹುದು, ಏನೆಲ್ಲ ತಿಳಿದಿರಬಹುದು ಅದಕ್ಕೆ. ಆದ್ರೆ ಅದು ಮಾತಾಡಲ್ಲ, ನಾನು ಮಾತಾಡ್ತೀನಿ ಅಷ್ಟೇ’. ಹೀಗೆ ಅವಳ ಉತ್ತರಗಳೆಲ್ಲ ಒಗಟುಗಳೇ. ಅದನ್ನು ಬಿಡಿಸುವ ಯತ್ನ ನಾವು ಮಾಡಬೇಕು.
ಮೂಕಜ್ಜಿಯ ಈ ವಿಚಿತ್ರ ಸ್ವಭಾವ, ವರ್ಚಸ್ಸು ಮತ್ತು ವರ್ತನೆಗಳನ್ನು ಸಿನೆಮಾದಲ್ಲಿ ಯಥಾವತ್ತು ಕಾಣಿಸುವಲ್ಲಿ ಶೇಷಾದ್ರಿ ಗೆದ್ದಿದ್ದಾರೆ. ದೃಶ್ಯದಿಂದ ದೃಶ್ಯಕ್ಕೆ ಬೇರೆಯದೇ ಕಥೆ ಹೇಳುವ ಈ ಸಿನೆಮಾದಲ್ಲಿ, ನಾಗಿಯ ಕತೆಗೆ ಮಾತ್ರ ಒಂದು ತಾರ್ಕಿಕ ಅಂತ್ಯ ಇದೆ. ಇನ್ನುಳಿದ ಕಥೆಗಳ ಮುಂದುವರಿಕೆಯನ್ನು ನಾವೇ ಕಲ್ಪಿಸಿಕೊಳ್ಳಬೇಕು. ಕಾರಂತರ ಕಾದಂಬರಿಗೆ ಶೇಷಾದ್ರಿ ನ್ಯಾಯ ಒದಗಿಸಿದ್ದಾರೆ ಅಂತ ಒಂದೇ ಮಾತಲ್ಲಿ ಹೇಳಬಹುದಾದರೂ, ಕಾದಂಬರಿಯನ್ನು ಓದದವರಿಗೂ ಸಿನೆಮಾ ಅರ್ಥವಾಗುತ್ತದೆ ಮತ್ತು ಬಹುಶಃ ಇಷ್ಟವಾಗುತ್ತದೆ. 1968ರಲ್ಲಿ ಕಾರಂತರು ಬರೆದ ಈ ಕಾದಂಬರಿ ಮತ್ತು ಕಥಾವಸ್ತು ಈಗಲೂ ಪ್ರಸ್ತುತವಾಗುತ್ತದೆ ಎಂಬುದು ಸಿನೆಮಾ ನೋಡಿದಾಗ ತಿಳಿಯುತ್ತದೆ. ಭಾಸ್ಕರ್ ಅವರ ಛಾಯಾಗ್ರಹಣದಲ್ಲಿ ಮೂಕಜ್ಜಿಯ ಕೆನ್ನೆಯ ಪ್ರತಿ ಸುಕ್ಕೂ, ಅಶ್ವತ್ಥಮರದ ಎಲೆಗಳ ಹಚ್ಛಹಸಿರೂ, ಭೂಮಿಯೊಡಲಿಂದ ಹೆಕ್ಕಿದ ವಸ್ತುಗಳ ಮಾಟವೂ, ಮೂಕಾಂಬಿಕೆಗೆತ್ತಿದ ಮಂಗಳಾರತಿಯ ಸುಳಿಯೂ ಅತ್ಯಂತ ಸ್ಪಷ್ಟವಾಗಿ -ಆಪ್ಯಾಯಮಾನವಾಗಿ ಕಾಣುತ್ತದೆ. ಪ್ರವೀಣ್ ಗೋಡ್ಕಿಂಡಿಯವರ ಹಿನ್ನೆಲೆ ಸಂಗೀತ ಚಿತ್ರಕಥೆಗೆ ಪೂರಕವಾಗಿದೆ. ವಿಭಿನ್ನ ದೃಶ್ಯಗಳನ್ನು ಸಂಕಲನ ಮಾಡಿ ಒಟ್ಟಂದ ಕೊಟ್ಟ ಬಿ.ಎಸ್. ಕೆಂಪರಾಜುರವರಿಗೂ ಚಪ್ಪಾಳೆ ತಟ್ಟಲೇಬೇಕು.
ಇನ್ನು ಚಿತ್ರದ ಜೀವಾಳವಾದ ಪಾತ್ರಗಳು. ಬಿ. ಜಯಶ್ರೀ ಇಲ್ಲಿ ಮೂಕಜ್ಜಿಯ ಪಾತ್ರವನ್ನು ಮಾಡಿಲ್ಲ; ಮೂಕಜ್ಜಿಯೇ ಆಗಿದ್ದಾರೆ. ಅವರು ವಸ್ತುಗಳನ್ನು ಸವರುತ್ತಾ ಕಾಲದೊಂದಿಗೆ ಹಿಂದೋಡುವುದು, ಪ್ರಶ್ನೆಗಳಿಗೆ ಕೊಡುವ ಮೊನಚು ಉತ್ತರಗಳು, ಹಳೆಯ ನೆನಪಾದಾಗ ಅರಳುವ ಮುಖ, ಸದಾ ಏನನೋ ಮಥಿಸುತ್ತಾ ಅಡಕೆಯ ಹೋಳುಗಳನ್ನು ಕುಟ್ಟುವುದು, ಆ ಅಶ್ವತ್ಥ ಮರಕ್ಕೆ ಎಷ್ಟೋ ವರ್ಷಗಳಿಂದ ಒರಗಿಕೊಂಡೇ ಇದ್ದಾರೇನೋ ಅನಿಸುವ ಭಂಗಿ –ಎಲ್ಲದರಲ್ಲೂ ಜಯಶ್ರೀ ಮೂಕಜ್ಜಿಯಾಗಿ ಮುಳು’ಗೆದ್ದಿದ್ದಾರೆ’. ಮೊಮ್ಮಗ ಸುಬ್ರಾಯನ ಕುತೂಹಲಗಳು-ಗೊಂದಲಗಳು ನಮ್ಮವೂ ಆಗುತ್ತವೆ. ನಾಗಿಯ ಸಿಟ್ಟು ಮತ್ತು ತಳಮಳಗಳು ನಮಗೂ ತಾಕುತ್ತವೆ. ಸುಬ್ರಾಯನ ಹೆಂಡತಿ, ಅವನ ಪುಟ್ಟ ಮಕ್ಕಳು, ಜನಾರ್ಧನ, ರಾಮದಾಸ –ಯಾರೂ ಅಭಿನಯ ಮತ್ತು ಸಂಭಾಷಣೆಯಲ್ಲಿ ಎಡವಿಲ್ಲ. ತಿಪ್ಪಜ್ಜಿಯ ಪಾತ್ರದಲ್ಲಿ ಸ್ವಲ್ಪ ಹೊತ್ತು ಮಾತ್ರ ಬರುವ ಹಿರಿಯ ನಟಿ ರಾಮೇಶ್ವರಿ ಕಣ್ಣಂಚಲ್ಲಿ ನೀರು ತರಿಸುತ್ತಾರೆ. ಸಿನೆಮಾದ ಮತ್ತೊಂದು ಮುಖ್ಯ ಪಾತ್ರ ಪ್ರಹ್ಲಾದ ಆಚಾರ್ಯ ಅವರ ಶಾಡೋಪ್ಲೇ. ಹೇಳಲಾಗದ ಎಷ್ಟೊಂದು ಕಥೆಗಳನ್ನು ಅವರ ನೆರಳು-ಬೆಳಕಿನ ಆಟ ಹೇಳುತ್ತದೆ.
‘ಮೂಕಜ್ಜಿಯ ಕಥೆಗಳು’ ಒಂದೇ ಸಲಕ್ಕೆ ಅರ್ಥವಾಗಿಬಿಡುವ ಕೃತಿಯಲ್ಲ. ಅಲ್ಲಿ ಚರ್ಚಿಸಲ್ಪಟ್ಟಿರುವ ವಿಷಯ ಮತ್ತು ವಸ್ತು ನಾವು ಬಹಳ ಕಾಲ ಯೋಚಿಸಬಹುದಾದಂತಹುದು. ಮತ್ತೆ ಮತ್ತೆ ಯೋಚಿಸಿ ಅರಿತುಕೊಳ್ಳಬೇಕಾದುದು. ಮತ್ತು ಎಷ್ಟು ತಿಳಿದುಕೊಂಡೆ ಎನಿಸಿದರೂ ಅಪೂರ್ಣ ಎನಿಸುವಂತಹುದು. ಹೀಗಾಗಿ, ಇಂತಹ ಕ್ಲಿಷ್ಟ ಕೃತಿಯನ್ನಿಟ್ಟುಕೊಂಡು ಸಿನೆಮಾ ಮಾಡಿದ ಶೇಷಾದ್ರಿ ನಿಜಕ್ಕೂ ಅಭಿನಂದನೀಯರು.
ಇದನ್ನೂ ನೋಡಿ – ಕನ್ನಡ ವಿಕಿಪೀಡಿಯದಲ್ಲಿ ಮೂಕಜ್ಜಿಯ ಕನಸುಗಳು ಬಗ್ಗೆ.