ಮೊಬೈಲ್ ಸಂಖ್ಯೆ ಕದಿಯುವ ಬ್ಯಾಂಕುಗಳಿಂದ ಬೇಷರತ್ ಕ್ಷಮಾ
– [http://mitramaadhyama.co.in|ಬೇಳೂರು ಸುದರ್ಶನ]
ನೀವು ಹೊಸದಾಗಿ ಒಂದು ಮೊಬೈಲ್ ಕೊಳ್ಳುತ್ತೀರಿ. ಯಾವುದೋ ಮೊಬೈಲ್ ಕಂಪನಿಯ ಯಾವುದೋ ಸಂಖ್ಯೆ ನಿಮ್ಮದಾಗುತ್ತದೆ. ನಿಮ್ಮ ಗೆಳೆಯರು, ಬಂಧುಗಳಿಗೆ ಆ ಸಂಖ್ಯೆಯನ್ನು ಹೇಳಿ ಅವರಿಂದ ಕರೆ ಬರಲಿ ಎಂದು ನಿರೀಕ್ಷಿಸುತ್ತೀರಿ. ನಿಮ್ಮ ವ್ಯವಹಾರ ವೃದ್ಧಿಯಾಗಲಿ ಎಂದು ಬಯಸುತ್ತೀರಿ. ನೀವು ಈ ಮೊಬೈಲ್ ಖರೀದಿಗೆ ನಿಮ್ಮದೇ ಕ್ರೆಡಿಟ್ / ಡೆಬಿಟ್ ಕಾರ್ಡನ್ನು ಬಳಸಿರಲೂಬಹುದು.
ಆದರೂ, ನಿಮಗೆ ಆಗಾಗ್ಗೆ ಒಂದು ಕರೆ ಬರುತ್ತಲೇ ಇರುತ್ತದೆ. `ನಾನು ….. ಬ್ಯಾಂಕಿನಿಂದ ಫೋನ್ ಮಾಡ್ತಾ ಇದೀನಿ. ನಿಮಗೆ ಕ್ರೆಡಿಟ್ ಕಾರ್ಡ್ ಬೇಕಾ? ನಿಮಗೆ ಮನೆ ಸಾಲ ಬೇಕಾ? ನಿಮಗೆ ವೆಹಿಕಲ್ ಲೋನ್ ಬೇಕಾ?’ ಹೀಗೆ ಯಾವುದೋ ಬ್ಯಾಂಕಿನ ಯಾವುದೋ ಸೇವೆಯನ್ನು ಯಾವುದೋ ಯುವತಿ ನಿಮಗಾಗಿ ಬಾಯಿಪಾಠ ಮಾಡಿದಂತೆ ಉಲಿಯುತ್ತಾಳೆ.
ನೀವೇನು ಮಾಡುತ್ತೀರಿ? `ಇಲ್ಲಾರೀ, ನನ್ನ ಹತ್ರ ಪ್ಲಾಸ್ಟಿಕ್ ಕಾರ್ಡ್ ಇದೆ, ಈಗ ಬೇಡ, ಆಮೇಲೆ ಕರೆ ಮಾಡಿ’ ಏನೋ ಒಂದು ಕಾರಣ ಹೇಳಿ ಕರೆಯನ್ನು ಮುಗಿಸಬಯಸುತ್ತೀರಿ. ನೀವು ಮಾತುಕತೆ ಮುಂದುವರಿಸಿದಿರೋ, ಸರಿ, ನಿಮ್ಮ ಎಲ್ಲ ಮಾಹಿತಿಗಳನ್ನೂ ಕೇಳಿ ನಿಮ್ಮ ಮನೆ / ಕಚೇರಿಗೇ ಯಾರೋ ಬಂದು ಈ ಬಗ್ಗೆ ಹೆಚ್ಚಿನ ಮಾಹಿತಿ ಕೊಡುತ್ತಾರೆಂದೂ, ನಿಮ್ಮ ಅನುಕೂಲದ ಸಮಯ ನೋಡಿಕೊಂಡೇ ಬರುತ್ತೇವೆ ಎಂದೂ ಆ ಯುವತಿ ಮೆಲ್ಲಗೆ ಹೇಳುತ್ತಾಳೆ.
ಆದರೆ ಈ ಕರೆ ಮಾಡಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಅವರಿಗೆ ನೀಡಿದವರು ಯಾರು ಎಂದು ಯಾವತ್ತಾದರೂ ಕೇಳಿದ್ದೀರಾ? ಒಂದು ಸಲ ಕೇಳಿ ನೋಡಿ. ಯಾರೂ ಹೇಳುವುದಿಲ್ಲ. `ನಮಗೆ ಡಾಟಾಬೇಸ್ನಿಂದ ಸಿಕ್ಕಿದೆ’ ಎಂಬ ಯಾಂತ್ರಿಕ, ಜಾರಿಕೆಯ ಉತ್ತರ ಬರುತ್ತದೆ. ಡಾಟಾಬೇಸ್ ಎಂದಕೂಡಲೇ ಅಕೃತ ಮಾಹಿತಿಕೋಶ ಎಂದು ಸಾರ್ವಜನಿಕರು ತಪ್ಪು ತಿಳಿಯುವುದೇ ಹೆಚ್ಚು. ಅಂದರೆ ಕರೆಗೆ ಕಾರಣವಾದ ದೂರವಾಣಿ ಸಂಖ್ಯೆಯನ್ನು ಪಡೆದ ಮಾಹಿತಿಮೂಲವನ್ನು ಈ ಕರೆ ಮಾಡುವ ಯುವತಿಯರಾಗಲೀ, ಅವರ ಮುಖ್ಯಸ್ಥರಾಗಲೀ, ಅಥವಾ ಸದರಿ ಬ್ಯಾಂಕಿನ ಮುಖ್ಯಸ್ಥರಾಗಲೀ ಹೇಳುವುದಿಲ್ಲ. ಆದರೆ ಅಂಥ ಮಾಹಿತಿಯನ್ನು ಪಡೆಯುವುದು ನಿಮ್ಮ ಹಕ್ಕು.
ಕಳೆದ ಒಂದು ವರ್ಷದಿಂದ ಇಂಥ ಕರೆಗಳನ್ನು ಮಾಡಿದವರನ್ನೇ ಮಾಹಿತಿಮೂಲದ ಬಗ್ಗೆ ಪ್ರಶ್ನಿಸಿದ ಈ ಲೇಖಕನ ಅನುಭವ ಹೀಗಿದೆ:
೧) ಎ ಬಿ ಎನ್ ಆಮ್ರೋ ಬ್ಯಾಂಕ್: ಈ ಪ್ರತಿಷ್ಠಿತ ವಿದೇಶಿ ಬ್ಯಾಂಕಿನ ಕಾಲ್ಸೆಂಟರಿನಿಂದ ಕರೆಬಂದ ಸಂಖ್ಯೆಯನ್ನು, ಕರೆಯ ಸಮಯ ಎಲ್ಲವನ್ನೂ ಉಲ್ಲೇಖಿಸಿ ಬ್ಯಾಂಕಿನ ವಿಳಾಸವನ್ನು ಪತ್ತೆ ಹಚ್ಚಿ (ಯಾಕೆಂದರೆ ಕರೆ ಮಾಡಿದವರು ಬ್ಯಾಂಕಿನ ವಿಳಾಸ ಕೊಡುವುದಿಲ್ಲ) ಪತ್ರ ಬರೆದೆ. ಮೊದಲು ಹಾರಿಕೆಯ ಉತ್ತರ. ಆಮೇಲೆ ನಾವು ಡಾಟಾಬೇಸ್ ಯಾವುದು ಎಂದು ಹೇಳುವುದಿಲ್ಲ ಎಂಬ ವಾದ. ಜೊತೆಗೆ ವಿಷಾದಿಸುತ್ತೇವೆ ಎಂಬ ಮಾತು. ನಮ್ಮ ಅಮೂಲ್ಯ ಗ್ರಾಹಕರಾದ ತಮಗೆ ಹೀಗಾಗಿದ್ದಕ್ಕೆ ಬೇಸರಿಸಬೇಡಿ ಎಂಬ ಅನುನಯ. ಆದರೆ ನಾನು ಬ್ಯಾಂಕಿನ ಗ್ರಾಹಕನೇ ಅಲ್ಲವಲ್ಲ ಎಂದಾಗ ನಿರುತ್ತರ. ಆಮೇಲೆ ಭಾರತೀಯ ರಿಸರ್ವ್ ಬ್ಯಾಂಕಿಗೆ ದೂರು ಕೊಟ್ಟ ಮೇಲೆ ರಿಸರ್ವ್ ಬ್ಯಾಂಕಿನಿಂದಲೂ ಉತ್ತರ ಕೇಳಿ ಪತ್ರ ಹೋದಮೇಲೆ ಬೇಷರತ್ ಕ್ಷಮೆ. ಹಾಗಾದರೆ ನನ್ನ ದೂರವಾಣಿ ಸಂಖ್ಯೆ ಸಿಕ್ಕಿದ್ಛ್ದು ಹೇಗೆ? ……. ಸಂಸ್ಥೆಯ ಡಾಟಾಬೇಸ್ನಿಂದ ಪಡೆದಿದ್ದೇವೆ, ಆದರೆ ಯಾರು ಈ ಮಾಹಿತಿ ಕೊಟ್ಟರು ಎಂದು ಹೇಳುವುದಿಲ್ಲ ಎಂಬ ವಾದ.
೨) ಸಿಂಡಿಕೇಟ್ ಬ್ಯಾಂಕಿನಿಂದ ಕರೆ. ಆದರೆ ನಾನು ಬ್ಯಾಂಕಿನ ಗ್ರಾಹಕನೂ ಹೌದು, ನನ್ನ ಬಳಿ ಇಂಥ ಕಾರ್ಡ್ ಇರುವುದೂ ನಿಮಗೆ ಗೊತ್ತಿಲ್ಲವೆ ಎಂದು ಪ್ರಶ್ನಿಸಿದರೆ `ಹೌದ? ಸರಿ ಬಿಡಿ’ ಎಂಬ ಉಡಾಫೆಯ ಮಾತು. ಆದರೆ ನನ್ನ ದೂರವಾಣಿ ಸಂಖ್ಯೆ ನಿಮಗೆ ಸಿಕ್ಕಿದ್ದಾದರೂ ಹೇಗೆ ಎಂದಾಗ ಉತ್ತರವೇ ಇಲ್ಲ. ಲಿಖಿತ ದೂರು ಸಲ್ಲಿಸಿದಾಗ ಅವರಿಂದಲೂ ಬೇಷರತ್ ಕ್ಷಮೆಯಾಚನೆಯ ಪತ್ರ.
೩) ಇದೀಗ ಐ ಸಿ ಐ ಸಿ ಐ ಬ್ಯಾಂಕಿನಿಂದಲೂ ಅಂಥದೇ ಕರೆ ಬಂದಾಗ ಮತ್ತೆ ಸೀದಾ ಭಾರತೀಯ ರಿಸರ್ವ್ ಬ್ಯಾಂಕಿಗೆ ದೂರು. ಅವರಿಂದ ಈಗ ಸದರಿಬ್ಯಾಂಕಿಗೆ ಉತ್ತರ ಕೇಳಿ ಪತ್ರ ಹೋಗಿದೆ. ಇನ್ನು ಹದಿನೈದು ದಿನಗಳಲ್ಲಿ ಉತ್ತರ ಬರಬೇಕಿದೆ. ಬೇಷರತ್ ಕ್ಷಮೆ ಕೇಳುವ ನಿರೀಕ್ಷೆ ಹೆಚ್ಚಾಗಿದೆ!
ಗೊತ್ತಾಯಿತಲ್ಲ? ಈ ಬ್ಯಾಂಕುಗಳು ಮೊಬೈಲ್ ದೂರವಾಣಿ ಸೇವಾಸಂಸ್ಥೆಗಳಿಂದಲೇ ನಮ್ಮೆಲ್ಲರ ದೂರವಾಣಿ ಸಂಖ್ಯೆಗಳನ್ನು ಪಡೆಯುತ್ತಾರೆ. ಹೀಗೆ ಮಾಹಿತಿಗಳನ್ನು ಮಾರಿಕೊಳ್ಳುವ ಬಗ್ಗೆ ಮೊಬೈಲ್ ಸಂಸ್ಥೆಯು ನಿಮ್ಮೊಂದಿಗೆ ಒಪ್ಪಂದವನ್ನೇನೂ ಮಾಡಿಕೊಂಡಿರುವುದಿಲ್ಲ ಎಂದೇನೂ ತಿಳಿಯಬೇಡಿ. ಕೆಲವೊಮ್ಮೆ ಕಣ್ಣಿಗೆ ಕಾಣದ (ಫೈನ್ಪ್ರಿಂಟ್ ಎನ್ನುತ್ತಾರೆ) ಪದಗಳಿರುವ ಒಪ್ಪಂದಕ್ಕೆ ನಾವು ಕಣ್ಣುಮುಚ್ಚಿ ಸಹಿ ಹಾಕಿರುತ್ತೇವೆ. ಇಷ್ಟಾಗಿಯೂ ನಮಗೆ ಮಾಹಿತಿಮೂಲವನ್ನು ತಿಳಿದುಕೊಳ್ಳುವ ಹಕ್ಕು ಇದ್ದೇ ಇದೆ.
ಅಲ್ಲಾರೀ, ನಾವು ಮಾಹಿತಿ ಪಡೆಯುವ ಹಕ್ಕು ಕಾಯ್ದೆಯನ್ನು ಬಳಸಬಹುದಲ್ಲ ಎಂದು ನೀವು ಕೇಳಬಹುದು. ಅದೇನೇ ಇದ್ದರೂ ಸಾರ್ವಜನಿಕ ಬಳಕೆಗೆ ಮಾತ್ರ. ಅಲ್ಲದೆ ನಮ್ಮ ದೇಶದಲ್ಲಿ ಮಾಹಿತಿ ಸಂರಕ್ಷಣೆ ಕಾಯ್ದೆಯೇ ಇಲ್ಲ ಎಂಬುದು ಇನ್ನೊಂದು ಕಟು ವಾಸ್ತವ. ಅಂದರೆ ನಮ್ಮ ಮಾಹಿತಿಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಯಾವುದೇ ಕಾಯ್ದೆಯೂ ಈವರೆಗೂ ಇಲ್ಲ. ಈಗ ದೇಶದ ವಿವಿಧ ನ್ಯಾಯಾಶರು, ನ್ಯಾಯವಾದಿಗಳು ಈ ಬಗ್ಗೆ ಯೋಚಿಸುತ್ತಿದ್ದಾರಂತೆ.
ಇನ್ನು ಇಂಥ ಕರೆಗಳನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಕೂಡಾ ಕ್ರಮಗಳನ್ನು ತೆಗೆದುಕೊಂಡಿದೆ. ಅದು ೨೦೦೫ರ ನವೆಂಬರಿನಲ್ಲೇ `ಡು ನಾಟ್ ಕಾಲ್ ರಿಜಿಸ್ಟ್ರಿಯನ್ನು’ (ಕರೆ ಮಾಡಬೇಡಿ ಎಂದು ಗಹಕರು ನೋಂದಣಿ ಮಾಡಿಕೊಳ್ಳುವ ಪುಸ್ತಕ) ಎಲ್ಲ ಬ್ಯಾಂಕುಗಳೂ ತೆರೆಯಬೇಕು; ಈ ಬಗ್ಗೆ ತಂತಮ್ಮ ಜಾಲತಾಣಗಳಲ್ಲಿ ಗ್ರಾಹಕರು `ನನಗೆ ಇಂಥ ಕರೆ ಮಾಡಬೇಡಿ’ ಎಂದು ತಿಳಿಸುವುದಕ್ಕೆ ಅವಕಾಶ ಇರಬೇಕು ಎಂದು ಸೂಚಿಸಿತ್ತು. ಆದರೆ ಈಗಲೂ ನನ್ನಂಥ ಗ್ರಾಹಕರಲ್ಲದವರಿಗೂ ಈ ಕರೆಗಳು ಬರುತ್ತಲೇ ಇವೆ. ಡು ನಾಟ್ ಕಾಲ್ ರಿಜಿಸ್ಟ್ರಿಯಂತೂ ಯಾವ ಜಾಲತಾಣದಲ್ಲೂ ಕಂಡುಬಂದಿಲ್ಲ. ಅಲ್ಲದೆ ಕರೆ ಬಂದ ಬ್ಯಾಂಕಿನಿಂದಲೇ ಮತ್ತೆ ಮತ್ತೆ ಬೇರೆ ಬೇರೆ ಕಾಲ್ ಸೆಂಟರ್ಗಳಿಂದ ಕರೆ ಬರುತ್ತಲೇ ಇರುತ್ತದೆ.
ಹಾಗಾದರೆ ನಿಮಗೆ ಇನ್ನುಮುಂದೆ ಇಂಥ ಕರೆ ಬಂದರೆ ಏನು ಮಾಡಬೇಕು?
ಮೊದಲು ಈ ಕರೆ ಯಾವ ದೂರವಾಣಿ ಸಂಖ್ಯೆಯಿಂದ ಬಂತು ಎಂದು ಟಿಪ್ಪಣಿ ಮಾಡಿಕೊಳ್ಳಿ. ಆಮೇಲೆ ಕರೆ ಮಾಡಿದವರಿಗೆ `ನೀವು ಯಾರು, ನಿಮ್ಮ ಹೆಸರೇನು. ನಿಮ್ಮ ಕಚೇರಿ ಮುಖ್ಯಸ್ಥರ ಹೆಸರೇನು, ಅವರ ದೂರವಾಣಿ ಸಂಖ್ಯೆಯೇನು’ ಈ ಕನಿಷ್ಠ ಮಾಹಿತಿಗಳನ್ನು ಪಡೆದುಕೊಳ್ಳಿ. ಅಷ್ಟುಹೊತ್ತಿಗೆ ಅವರು ಈ ಆಸಾಮಿ ಬಡಪೆಟ್ಟಿಗೆ ಬಗ್ಗುವುದಿಲ್ಲ ಎಂದು ಸುಮ್ಮನೆ ರಿಸೀವರ್ ಇಟ್ಟುಬಿಡುತ್ತಾರೆ.
ಆಮೇಲೆ ಸದರಿ ಬ್ಯಾಂಕಿನ ಮುಖ್ಯಕಚೇರಿಗೆ ಲಿಖಿತ ದೂರು ಸಲ್ಲಿಸಿ. ಇದರಲ್ಲಿ ಕೇವಲ ಖಾಸಗಿ ವಲಯವನ್ನು ಉಲ್ಲಂಘಿಸಿದ್ದಕ್ಕಷ್ಟೇ ಅಲ್ಲ, ಮಾಹಿತಿ ಮೂಲ ಯಾವುದೆಂದು ತಿಳಿಸಿ ಎಂದು ಒತ್ತಾಯಿಸಿ.
ಸಾಮಾನ್ಯವಾಗಿ ಇಂಥ ದೂರಿಗೆ ಜಾರಿಕೆಯ ಉತ್ತರ ಬರುತ್ತದೆ. ಬೇಷರತ್ ಕ್ಷಮೆ ಬರುವುದೇ ಇಲ್ಲ. ಇಂಥ ಸಂದರ್ಭದಲ್ಲಿ ಈ ವಲ್ ಬಳಸಿ rdbangalore@rbi.org.in ಇವರಿಗೆ ದೂರು ಸಲ್ಲಿಸಿ. ಆಗ ಅಲ್ಲಿಂದಲೂ ಬ್ಯಾಂಕಿಗೆ ವಿವರಣೆ ಕೇಳಿ ಪತ್ರ ಹೋಗುತ್ತದೆ. ಸಾಮಾನ್ಯವಾಗಿ ಈ ಹೊತ್ತಿಗೆ ಬ್ಯಾಂಕಿನ ಅಕಾರಿಗಳು ಎಚ್ಚೆತ್ತುಕೊಂಡು ಬೇಷರತ್ ಕ್ಷಮೆಯ ಪತ್ರವನ್ನು ಬರೆಯುತ್ತಾರೆ.
ಇಷ್ಟಾಗಿಯೂ ಮತ್ತೆ ಅದೇ ಬ್ಯಾಂಕಿನಿಂದ ಅಂಥದೇ ಕರೆ ಬಂದರೆ ಅದನ್ನು ಉಲ್ಲೇಖಿಸಿ ಮತ್ತೆ ಭಾರತೀಯ ರಿಸರ್ವ್ ಬ್ಯಾಂಕಿಗೆ ಕಾಗದ ಬರೆದು….
ಹೌದು. ಗ್ರಾಹಕ ಜಾಗೃತಿ ಎಂದರೆ ಕಾಗದ ಬರೆಯುವುದು, ಒತ್ತಾಯಿಸುವುದು, ವಿವರಣೆ ಕೇಳುವುದು……. ಇದು ಕೊಂಚ ಸಹನೆ ಬೇಡುವ ಹಾದಿ. ಆದರೆ ಈ ಹಾದಿಯಲ್ಲಿ ಹೋದರೆ ಉತ್ತರ ಸಿಗುವ ಸಾಧ್ಯತೆ ಹಚ್ಚು. ಇಂಥ ಪ್ರಕರಣಗಳು ಹೆಚ್ಚಾಗಿ ಗ್ರಾಹಕೇತರರು ದೂರು ಸಲ್ಲಿಸುತ್ತ ಹೋದರೆ ಭಾರತೀಯ ರಿಸರ್ವ್ ಬ್ಯಾಂಕು ಇವರ ಮಾಹಿತಿ ರಕ್ಷಣೆಗೂ ಒಂದು ನಿಯಮ ರೂಪಿಸಬಹುದು.
(ಈ ಬಗ್ಗೆ ಹೆಚ್ಚಿನ ನೆರವು, ಮಾಹಿತಿ ಬೇಕಿದ್ದರೆ ನನಗೆ beluru@gmail.com ಈ ಈ ಮೈಲ್ಗೆ ಪತ್ರ ಬರೆಯಲು ಹಾರ್ದಿಕ ಸ್ವಾಗತ.)
[ಕೃಪೆ: ಹೊಸದಿಗಂತ]
ಬೇಳೂರು ಸುದರ್ಶನರ ಇತರೆ ಲೇಖನಗಳು, ಬರೆಹಗಳನ್ನು [http://mitramaadhyama.co.in|mitramaadhyama.co.in] ಈ ಜಾಲತಾಣದಲ್ಲಿ ನೋಡಬಹುದು.