ಪ್ಲೂಟೋ ಓಕೆ, ಬೋಸ್ ಇಲ್ಲ ಯಾಕೆ?

ಅವರು ಮಾರ್ಕೋನಿಯ ಹಣ ತಿರಸ್ಕರಿಸಿದರು. ನಾವು ಬೋಸರನ್ನೇ ತಿರಸ್ಕರಿಸಿದೆವು

– ಬೇಳೂರು ಸುದರ್ಶನ

ಪ್ಲೂಟೋ ಇನ್ನು ನವಗ್ರಹವಲ್ಲ.
ಪರವಾಗಿಲ್ಲ.
ಅದು ಕುಬ್ಜಗ್ರಹ.
ಪರವಾಗಿಲ್ಲ.

ಈ ಬಗ್ಗೆ ಎಲ್ಲ ದಿನಪತ್ರಿಕೆಗಳೂ ಶೋಕ ಆಚರಿಸಿವೆ. ದಿ ಹಿಂದೂಪತ್ರಿಕೆಯಿಂದ ಹಿಡಿದು ಹಲವು ಮುಖ್ಯವಾಹಿನಿಪತ್ರಿಕೆಗಳಲ್ಲಿ ಭಾರೀ ಸಂಪಾದಕೀಯಗಳೇ ಬಂದಿವೆ.

ಪರವಾಗಿಲ್ಲ.
ಪರವಾಗಿಲ್ಲ. ಆದರೆ…

ಪ್ಲೂಟೋಗೆ ಒದಗಿದ ದುಸ್ಥಿತಿಯ ವರದಿಯ ಹಿನ್ನೆಲೆಯಲ್ಲಿ ದೇಶದ ಎಲ್ಲ ಪಠ್ಯಪುಸ್ತಕಗಳಲ್ಲೂ ತಿದ್ದುಪಡಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ ಸಿ ಇ ಆರ್ ಟಿ) ಪ್ರಕಟಿಸಿದೆಯಲ್ಲ….. ಇದು ಮಾತ್ರ ಮತಾಂಧತೆಯ ಅತಿರೇಕ ಎಂದರೆ ತಪ್ಪಿಲ್ಲ. ಅಥವಾ ಇದನ್ನು ಸುದ್ದಿಗುಮ್ಮನ ಗುಲಾಮಗಿರಿತನ, ವಿಶ್ವಮಟ್ಟದ ದೇಶಾವರಿ ಬಿಕ್ಕಳಿಕೆ ಎಂದೂ ಬಣ್ಣಿಸಬಹುದು. ಸುದ್ದಿ ಬಂದ ೨೪ ಗಂಟೆಗಳಲ್ಲಿ ಪ್ರತಿಕ್ರಿಯೆ… ವಾರೆವ್ಹಾ ಎನ್ನಬೇಡಿ.

ಪ್ಲೂಟೋಗೆ ಕುಬ್ಜಗ್ರಹದ ಸ್ಥಾನಮಾನ ಮುಂದುವರೆದಿದೆ, ಅದಕ್ಕೆ ಒಂಬತ್ತನೇ ಗ್ರಹದ ಸ್ಥಾನವನ್ನೇ ನೀಡಿಲ್ಲ ಎಂದು ೧೯೯೯ರ ಫೆಬ್ರುವರಿ ೩ರಂದು ಅಂತಾರಾಷ್ಟ್ರೀಯ ಖಗೋಳವಿeನ ಸಂಘವೇ ಸ್ಪಷ್ಟನೆ ನೀಡಿದಾಗ ಎನ್ ಸಿ ಇ ಆರ್ ಟಿ ನಿದ್ದೆ ಮಾಡುತ್ತಿತ್ತೆ? ಅದು ನಿಜವೇ. ಎನ್ ಆಇ ಇ ಆರ್ ಟಿ ಅದು ಹುಟ್ಟಿದಾಗಿನಿಂದಲೂ ಗೊರಕೆ ಹೊಡೆಯುತ್ತಿದೆ. ಅದು ತಯಾರಿಸಿದ ಪಠ್ಯಗಳಲ್ಲಿರುವುದೆಲ್ಲ ಎರವಲು ತಂದ ಮಾಹಿತಿಗಳು.

ಯಾಕೆಂದರೆ, ಇಡೀ ಮನುಕುಲದ ಸಂದೇಶವಾಹಕವಾದ ಮೈಕ್ರೋವೇವ್ / ರೇಡಿಯೋ ಸಂಶೋಧನೆಯ ಕೀರ್ತಿಯನ್ನು ಈಗಲೂ ವಿನಾಕಾರಣ ಮಾರ್ಕೋನಿಗೆ ನೀಡುತ್ತಿರುವುದೂ ಎನ್ ಸಿ ಇ ಆರ್ ಟಿಯೇ. ಅದಕ್ಕೂ ನಾಚಿಕೆಯಿಲ್ಲ. ನಮಗೂ ಮಾನವಿಲ್ಲ.

ಜಗದೀಶ ಚಂದ್ರ ಬೋಸರೇ ಆದ್ಯ ರೇಡಿಯೋ ಸಂಶೋಧಕರು, ಮಾರ್ಕೋನಿಯಲ್ಲ ಎಂದು ಅಂತಾರಾಷ್ಟ್ರೀಯ ಎಲೆಕ್ಟ್ರಿಕಲ್ ಎಂಡ್ಎಲೆಕ್ಟ್ರಾನಿಕ್ಸ್ ಎಂಜಿನೀಯರ್ಸ್ (ಐ ಇ ಇ ಇ ) ಎಂಬ ಪ್ರತಿಷ್ಠಿತ ಸಂಘಟನೆಯೇ ೧೯೯೮ರಲ್ಲಿ ಒಪ್ಪಿಕೊಂಡಿದೆ. ಈ ಬಗ್ಗೆ ಯಾಕೆ ಇನ್ನೂ ಎನ್ ಸಿ ಇ ಆರ್ ಟಿಗೆ ಎಚ್ಚರವೇ ಆಗಿಲ್ಲ? ಅಥವಾ ಹೋಗಲಿ ಬಿಡಿ ಎನ್ನಬಹುದೆ?

ಮಾರ್ಕೋನಿ ತನ್ನ ರೇಡಿಯೋ ಸಾಧನದಲ್ಲಿ ಬಳಸಿದ ಮರ್ಕ್ಯುರಿ ಡ್ರಾಪ್ ಕೊಹೆರರ್ ಸಾಧನವನ್ನು ಮೂಲತಃ ಕಂಡು ಹಿಡಿದದ್ದು ಜಗದೀಶಚಂದ್ರ ಬೋಸರು. ಜೆಲೆನಾ ಕ್ರಿಸ್ಟಲ್ ಆಧಾರಿತ ಸಾಲಿಡ್ ಸ್ಟೇಟ್ ಡಿಟೆಕ್ಟರನ್ನೂ (ಅಂದರೆ ಇಂದು ಕಂಪ್ಯೂಟರ್ ಯುಗದಲ್ಲಿ ಅತ್ಯಂತ ಅಗತ್ಯವಾಗಿರುವ ಸೆಮಿಕಂಡಕ್ಟರ್) ಕಂಡುಹಿಡಿದು ಅದಕ್ಕಾಗಿ ಪ್ರಪ್ರಥಮವಾಗಿ ಪೇಟೆಂಟ್ ಪಡೆದವರೂ ಬೋಸರೇ.

ಆದರೆ ೧೯೦೧ರ ಡಿಸೆಂಬರ್ ೧೨ರಂದು ನ್ಯೂಫೌಂಡ್ಲ್ಯಾಂಡಿನಲ್ಲಿ ಇದೇ ಕೊಹೆರರ್ ಬಳಸಿ ಇಂಗ್ಲಿಶಿನ `ಎಸ್’ ಸಂಕೇತವನ್ನು ಪೋಲ್ಡ್ಹುನಿಂದ ಪಡೆದವನು ಮಾತ್ರ ಮಾರ್ಕೋನಿ.

ಮೈಕ್ರೋವೇವ್ ಸಂಶೋಧನೆಗಳಿಗಾಗಿ ಲಾರ್ಡ್ ಕೆಲ್ವಿನ್, ಲಾರ್ಡ್ ರೇಲೀಘ್ರಂಥ ಗಟ್ಟಿ ವಿಜ್ಞಾನಿಗಳಿಂದ ಮುಕ್ತಕಂಠದ ಶ್ಲಾಘನೆಗೆ ಭಾಜನರಾದವರೂ ಬೋಸರೇ. ೧೮೯೫ರಲ್ಲೇ ಒಂದು ಮೈಲಿಗೂ ದೂರದಲ್ಲಿರುವ ಗನ್ಪೌಡರನ್ನು ದೂರ ಸಂವೇದಿ (ರಿಮೋಟ್) ಗಂಟೆಯನ್ನು ಬಳಸಿ ಸ್ಫೋಟಿಸಿದವರೂ…. ಹೌದು. ನಮ್ಮ ಹೆಮ್ಮೆಯ ಜಗದೀಶಚಂದ್ರ ಬೋಸರು. ಅಂದರೆ ವಿದ್ಯುತ್ಕಾಂತೀಯ ತರಂಗಗಳ ಸಂವಹನವನ್ನು ಮೊದಲು ತೋರಿಸಿದರು.ಆಮೇಲೆ ಅದನ್ನು ಸಾಧನಗಳ ಮೂಲಕ ಸಿದ್ಧಪಡಿಸಿದರು. ರೇಡಿಯೋ ರಿಸೀವರಿಗೆ (ಗ್ರಾಹಕ) ಬೇಕಾದ ಸಾಧನಗಳನ್ನೂ ತಯಾರಿಸಿದರು.

ಅದಿರಲಿ, ಸೂರ್ಯನಿಂದಲೂ ಹೀಗೆ ವಿದ್ಯುತ್ಕಾಂತೀಯ ತರಂಗಗಳು ಬರುತ್ತಿವೆ ಎಂದು ಮೊಟ್ಟಮೊದಲು ಹೇಳಿದವರು ಕೂಡಾ ಬೋಸರೇ. ಅವರು ಈಮಾತನ್ನು ಹೇಳಿದ್ದು ೧೮೯೭ರಲ್ಲಿ. ಅವರ ಮಾತು ನಿಜವೆಂದು ಗೊತ್ತಾಗಿದ್ದು ೧೯೪೨ರಲ್ಲಿ.

ಅದು ಬೇರೇನಲ್ಲ…. ಈಗ ನಾವು, ನೀವು ಬಳಸುತ್ತಿರೋ ಮೊಬೈಲ್ಗಳಲ್ಲಿ ಸಂವಹನಕ್ಕೆ ಬಳಕೆಯಾಗುತ್ತಿರೋ ಮೈಕ್ರೋವೇವ್ (ಮಿಲಿಮೀಟರ್ ತರಂಗಾಂತರ). ಅಂದರೆ ತಮ್ಮ ಕಾಲದಲ್ಲೇ ಅರ್ಧ ಶತಮಾನ ಮುಂದಿದ್ದ ಬೋಸರು ನಮ್ಮ ದೇಶದಲ್ಲೇ ಉಳಿದರು. ಕೋಲ್ಕತಾದಪ್ರೆಸಿಡೆನ್ಸಿ ಕಾಲೇಜಿನಲ್ಲಿ ತಮ್ಮದೇ ಪುಟ್ಟ ದೇಸಿ ಪ್ರಯೋಗಾಲಯದಲ್ಲಿ ಅವರು ಇಡೀ ಮನುಕುಲವೇ ಬೆರಗಾಗುವ ಸಂಶೋಧನೆಗಳನ್ನು ಮಾಡಿದರು. ಸಸ್ಯಗಳಿಗೂ ಸಂವೇದನೆ ಇದೆ ಎಂಬ ಅವರ ಸಂಶೋಧನೆಯ ಬಗ್ಗೆ ಮಾತ್ರ ನಾವು ಭುಜ ಹಾರಿಸಿದ್ದೇವೆ. ಆದರೆ ಅವರೇ ರೇಡಿಯೋ ಕಂಡುಹಿಡಿದರು ಎಂದು ಅಂತಾರಾಷ್ಟ್ರೀಯ ಸಂಘಟನೆಯೇ ಹೇಳಿದ್ದರೂ….

ನಾವು ಸಂವೇದನೆಯನ್ನೇ ಕಳೆದುಕೊಂಡಿದ್ದೇವೆ. ಇವತ್ತಿಗೂ,ಎಲ್ಲ ಪಠ್ಯಪುಸ್ತಕಗಳಲ್ಲೂ ಮಾರ್ಕೋನಿಯದೇ ಸಾಮ್ರಾಜ್ಯ. ಎಲ್ಲೋ ಅಪ್ಪಿತಪ್ಪಿ ಬೋಸರು ಬಂದರೆ ಅದು ಬಾಕ್ಸಿನಲ್ಲಿ, ಯಾವುದೋ ಹೆಚ್ಚುವರಿ ಮಾಹಿತಿ ಎಂಬಂತೆ. ಶಿಕ್ಷಕರಿಗಂತೂಇದೆಲ್ಲ ವಿಚಿತ್ರ ಸುದ್ದಿಗಳು.

ಪ್ಲೂಟೋ ಗ್ರಹದ ಸಂಶೋಧನೆಗೆಂದೇ ನ್ಯೂ ಹೊರೈಝಾನ್ ಎಂಬ ಗಗನ ನೌಕೆ ಈ ವರ್ಷದ ಜನವರಿ ೧೯ರಂದು ಭೂಮಿಯನ್ನು ಬಿಟ್ಟಿದೆ. ೨೦೧೫ರ ಜುಲೈ ತಿಂಗಳಿನಲ್ಲಿ ಅದು ನವಗ್ರಹಸ್ಥಾನವಂಚಿತ ಪ್ಲೂಟೋವನ್ನು ತಲುಪಲಿದೆ.
ಅಷ್ಟು ಹೊತ್ತಿಗಾದರೂ ಎನ್ ಸಿ ಆರ್ ಟಿಯು ನಿದ್ದೆ ಬಿಟ್ಟೆದ್ದು ಜಗದೀಶಚಂದ್ರ ಬೋಸರಿಗೆ ಸಲ್ಲಬೇಕಾದ ಗೌರವ, ಸ್ಥಾನಮಾನ ಕೊಟ್ಟೀತೆ? ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ನಾಟಕವನ್ನು ಮೀರಿಸುವ ಕಮ್ಯುನಿಸ್ಟರೂ ಸಾವರಿಸಿಕೊಂಡು ಬಂಗಾಳದ ಹೆಮ್ಮೆ ಎಂಬಕಾರಣಕ್ಕಾದರೂ ಬೋಸರಿಗೆನ್ಯಾಯ ಒದಗಿಸುವರೆ? ಬೋಸರನ್ನು ಅವಗಣನೆ ಮಾಡಿದ್ದನ್ನು ಪ್ರತಿಭಟಿಸಿ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸು ಪಡೆದು ರಾಜಕೀಯ ಇತಿಹಾಸದಲ್ಲಿ ದಾಖಲಾಗುವರೆ? ನಮ್ಮ ದೇಶದಲ್ಲಿ ವಿಜ್ಞಾನದ ಕಾರಣಕ್ಕಾಗಿ ಸರ್ಕಾರಗಳು ಬೀಳುವುದು ಕನಸೇ.

ಆದರೂ, ನಮ್ಮ ರಾಷ್ಟ್ರಪತಿಯವರೂ ವಿಜ್ಞಾನಿಯೇ ಎಂಬುದನ್ನು ಮರೆಯುವ ಹಾಗಿದೆಯೆ? ಕೊನೇಪಕ್ಷ ಅವರಿಗಾದರೂ ಮನವಿ ಸಲ್ಲಿಸಬಹುದಲ್ಲ?

ನಮ್ಮ ದೇಶದ ಗ್ರಹಗತಿಯೇ ಹೀಗಿದೆ. ದಾಖಲೆಗಳೇ ಸಾಬೀತುಮಾಡಿರುವ ಭಾರತೀಯ ಶತಮಾನದ ಸಂಶೋಧನೆಗಳೇ ನಮ್ಮ ಪಠ್ಯದೊಳಕ್ಕೆ ಬರುವುದಿರಲಿ, ಒಂದು ಸಣ್ಣ ಚರ್ಚೆಯೂ ನಡೆಯುವುದಿಲ್ಲ. ಆದರೆ ಕಣ್ಣಿಗೂ ಗೋಚರಿಸದ ಪ್ಲೂಟೋ ಸ್ಥಾನಮಾನದ ಬಗ್ಗೆ ಮಾಡಿದ ಚಿಕ್ಕ ಬದಲಾವಣೆ ಮಾತ್ರ ಮನುಕುಲದ ಇನ್ನೊಂದು ಹೆಜ್ಜೆಯೆಂಬಂತೆ ಚರ್ಚೆಯಾಗುತ್ತದೆ.

ಯಾಕೆಂದರೆ ಬೋಸ್ ಎಂದೂ ಹಣಕ್ಕೆ ಆಸೆ ಪಡಲಿಲ್ಲ. ೧೯೦೧ರ ಮೇ ೧೭ರಂದು ಅವರು ತಮ್ಮನ್ನು ಮಾರ್ಕೋನಿಯ ಸಂಸ್ಥೆಯಾದ ವೈರ್ಲೆಸ್ ಎಂಡ್ ಟೆಲಿಗ್ರಾಫ್ ಕಂಪನಿಯ ಸಿರಿವಂತ ಮೇಜರ್ ಸ್ಟೀಫನ್ ಫ್ಲಡ್ಪೇಜ್ ತನಗೆ ಹಣದ ಆಮಿಷ ತೋರಿಸಿದ ಬಗ್ಗೆ ಕಾಗದ ಬರೆದರು:

A short time before my lecture, a multi-millionaire proprietor of a very famous telegraph company telegraphed me with an urgent request to meet me. I replied that I had no time. In response he said that he is coming to meet me in person and within a short time he himself arrived with patent forms in hand. He made an earnest request to me not to divulge all valuable research results in today’s lecture : “There is money in it — let me take out patent for you. You donot know what money you are throwing away” etc. Of course, ” I will only take half share in the profit — I will finance it” etc.

This multi-millionaire has come to me like a beggar for making some more profits. Friend, you would have seen the greed and hankering after money in this country, – money, money – what a terrible all pervasive greed ! If I once get sucked into this terrible trap, there wont’ be any escape ! See, the research that I have been dedicated to doing, is above commercial profits. I am getting older – I am not getting enough time to do what I had set out to do — I refused him.


ಜಗದೀಶ ಚಂದ್ರ ಬೋಸ್

ಜಗದೀಶ ಚಂದ್ರ ಬೋಸರು ಮಾರ್ಕೋನಿಯ ಹಣದ ಆಮಿಷವನ್ನು ತಿರಸ್ಕರಿಸಿ ಸಂಶೋಧನೆ ಮುಂದುವರಿಸಿದರು. ನಾವು? ಬೋಸರನ್ನೇ ತಿರಸ್ಕರಿಸಿದ್ದೇವೆ ಅಲ್ಲವೆ?

(ಕೃಪೆ: ಹೊಸದಿಗಂತ)

ಪೂರಕ ಮಾಹಿತಿಗೆ ಈ ತಾಣಗಳನ್ನು ನೋಡಿ-
[http://www.tuc.nrao.edu/~demerson/bose/bose.html|http://www.tuc.nrao.edu/~demerson/bose/bose.html]
[http://web.mit.edu/varun_ag/www/bose.html|http://web.mit.edu/varun_ag/www/bose.html]
[http://ieee-virtual-museum.org/collection/people.php?taid=&id=1234735&lid=1|http://ieee-virtual-museum.org/collection/people.php?taid=&id=1234735&lid=1]

ಪ್ರಜಾವಾಣಿ (೩೧-೦೮-೨೦೦೬) ಪತ್ರಿಕೆಯಲ್ಲಿ ನಾಗೇಶ ಹೆಗಡೆಯವರ [http://prajavani.net/aug312006/6479920060831.php|ಲೇಖನ].

1 Response to ಪ್ಲೂಟೋ ಓಕೆ, ಬೋಸ್ ಇಲ್ಲ ಯಾಕೆ?

  1. ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ? | Mitra Maadhyama

    […] ಬೋಸ್ ಎಂದೂ ಹಣಕ್ಕೆ ಆಸೆ ಪಡಲಿಲ್ಲ. ೧೯೦೧ರ ಮೇ… […]

Leave a Reply