ಅಮೆರಿಕಾದ್ದು ಗಗನನೀತಿಯಲ್ಲ, ವಿಶ್ವಭೀತಿ !

– ಬೇಳೂರು ಸುದರ್ಶನ

ಆಕಾಶವೂ ನನ್ನದೇ ಎಂದು ಅಮೆರಿಕಾ ಈಗಷ್ಟೇ ಘೋಷಿಸಿಕೊಂಡಿದೆ. ಉತ್ತರ ಕೊರಿಯಾದ ಪರಮಾಣು ಪರೀಕ್ಷೆ, ಚೀನಾದ ತೋಳೇರಿಸುವ ಪರಿ, ಮುಸ್ಲಿಮ್ ದೇಶಗಳಲ್ಲಿ ಅಮೆರಿಕಾದ ವಿರುದ್ಧ ಎದ್ದಿರುವ ದನಿ, ಭಾರತದಂಥ ಹಲವು ಶಾಂತಿಪ್ರಿಯ ದೇಶಗಳು ವಿeನ – ತಂತ್ರಜ್ಞಾನದಲ್ಲಿ ಮುನ್ನುಗ್ಗುತ್ತಿರುವ ವೇಗವನ್ನು ನೋಡಿ ತತ್ತರಿಸಿದ ಅಮೆರಿಕಾ ಈಗ ತನ್ನ ಆಕಾಶನೀತಿಯನ್ನು ಪರಾಮರ್ಶಿಸಿಕೊಂಡು, ಆಕಾಶ ನನ್ನದೇ ಎಂದು ಘೋಷಿಸಿಕೊಂಡಿದೆ.
ವಾಯುಶಕ್ತಿ, ಜಲಶಕ್ತಿಯಷ್ಟೇ ಆಕಾಶ ಶಕ್ತಿಯೂ ಮುಖ್ಯ ಎಂದು ಹೇಳಿಕೊಳ್ಳುತ್ತ ಇನ್ನುಮುಂದೆ ತನ್ನ `ವಿರೋಧಿಗಳಿಗೆ’ ತನ್ನ ವಿರುದ್ಧ ಆಕಾಶವನ್ನು ಬಳಸಿಕೊಳ್ಳುವುದಕ್ಕೆ ಖಂಡಿತಾ ಬಿಡುವುದಿಲ್ಲ ಎಂದು ಪ್ರಕಟಿಸಿದೆ. ಆದರೆ ಈ ವಿರೋಧಿಗಳಾರು ಎಂದು ಮಾತ್ರ ಬಾಯಿಬಿಟ್ಟಿಲ್ಲ.

`ಜಗತ್ತಿನ ಎಲ್ಲಾ ದೇಶಗಳೂ ಆಕಾಶವನ್ನು ಶಾಂತಿಯ ಉದ್ದೇಶಗಳಿಗಾಗಿ, ಇಡೀ ಮನುಕುಲದ ಏಳಿಗೆಗಾಗಿ ಬಳಸಿಕೊಳ್ಳುವುದನ್ನು ನಾವು ಬೆಂಬಲಿಸುತ್ತೇವೆ’ ಎಂದು ಒಂದು ಉಸಿರಿನಲ್ಲಿ ಹೇಳಿರುವ ಅಮೆರಿಕಾ ಇನ್ನೊಂದು ಉಸಿರಿನಲ್ಲಿ ಗಗನ ಶಸ್ತ್ರಗಳನ್ನು ನಿಷೇಧಿಸುವ ಯಾವುದೇ ಯತ್ನಗಳನ್ನು ಖಡಾಖಂಡಿತವಾಗಿ ವಿರೋಧಿಸುತ್ತೇವೆ ಎಂದೂ ಪ್ರಕಟಿಸಿದೆ. ನೀವೆಲ್ಲರೂ ಶಾಂತಿಮಂತ್ರ ಪಠಿಸಿ, ನಾನು ಮಾತ್ರ ಬಂದೂಕು ತಯಾರಿಸುವೆ ಎಂದು ಅಮೆರಿಕಾ ನಾಚಿಕೆಯ ಲವಲೇಶವೂ ಇಲ್ಲದೆ ಹೇಳಿದೆ.

ಆಕಾಶದಿಂದ ಯಾವುದೇ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ತನಗೆ ಇರುವ ಯಾವುದೇ ಸ್ವಾತಂತ್ರ್ಯವನ್ನೂ ಯಾವುದೇ ದೇಶವೂ ಕಸಿದುಕೊಳ್ಳಲಾಗದು ಎಂಬ ಧಿಮಾಕಿನ ಮಾತೂ ಅಮೆರಿಕಾವು ಆಗಸ್ಟ್ ೩೧ರಂದು [http://www.ostp.gov/html/US%20National%20Space%20Policy.pdf|ಪ್ರಕಟಿಸಿದ ಗಗನನೀತಿ]ಯಲ್ಲಿ ದಾಖಲಾಗಿದೆ. ಅಷ್ಟೆ ಅಲ್ಲ…

ಇಡೀ ಜಗತ್ತಿನ ಶಾಂತಿಗಾಗಿ ಗಗನಸಂಶೋಧನೆ ಮುಂತಾದ ಯತ್ನಗಳನ್ನು ಅಮೆರಿಕಾ ಬೆಂಬಲಿಸುತ್ತದೆ. ಆದರೆ ತನ್ನ ಗಗನ ಸಂಶೋಧನೆಗೆ ಯಾರೂ ಅಡ್ಡಿಬರಬಾರದು. ಈ ಶಾಂತಿಯ ಪ್ರಯತ್ನಗಳಲ್ಲಿ ಅಮೆರಿಕಾವು ತನ್ನ ಹಿತಕ್ಕಾಗಿ ನಡೆಸುವ ರಕ್ಷಣಾ ಮತ್ತು ಗೂಢಚರ್ಯೆ ಸಂಬಂಧಿತ ಚಟುವಟಿಕೆಗಳು ಸೇರಿಕೊಳ್ಳುತ್ತವೆ. ಅಂದರೆ ಅಮೆರಿಕಾ ರಕ್ಷಣಾ ಸಂಶೋಧನೆಯಲ್ಲಿ ತೊಡಗಬಹುದು. ಉಳಿದೆಲ್ಲ ದೇಶಗಳೂ ತೆಪ್ಪಗೆ ಕುಳಿತಿರಬೇಕು.

ಅಮೆರಿಕಾವು ಹೀಗೆ ಗಗನವನ್ನು ಬಳಸಿಕೊಳ್ಳುವ ಹಕ್ಕನ್ನು ಮಿತಿಗೊಳಿಸುವ ಯಾವುದೇ ದೇಶದ ಯಾವುದೇ ಕಾನೂನು ಕ್ರಮಗಳನ್ನೂ ಅಮೆರಿಕವು ಬಲವಾಗಿ ವಿರೋಧಿಸುತ್ತದೆ. ಈಗ ಜಗತ್ತಿನಲ್ಲಿ ಇರುವ ಶಸ್ತ್ರಾಸ್ತ್ರ ನಿರ್ಬಂಧ ಒಪ್ಪಂದಗಳು ಅಮೆರಿಕಾದ ಈ ಗಗನಮುಖಿ ರಕ್ಷಣಾ ಸಂಶೋಧನೆಗಳನ್ನು ತಡೆಯಲಾಗದು. ಇಲ್ಲಿ ರಕ್ಷಣಾ ಸಾಧನಗಳ ಸಂಶೋಧನೆ, ಪರೀಕ್ಷೆ ಮತ್ತು ಕಾರ್ಯಾಚರಣೆಗಳನ್ನು ಅಮೆರಿಕಾವು ತನ್ನ ರಾಷ್ಟ್ರೀಯ ಹಿತದ ಹಿನ್ನೆಲೆಯಲ್ಲಿ ನಡೆಸುತ್ತದೆ. ಇವುಗಳಿಗೆ ಈಗಿರುವ ಯಾವುದೇ ಒಪ್ಪಂದಗಳೂ ಅಡ್ಡಿ ಬರುವುದಿಲ್ಲ. ವಾಣಿಜ್ಯಿಕ ಗಗನ ಸಂಶೋಧನೆಗಳಿಗೆ, ಪ್ರಯೋಗಗಳಿಗೆ ತಾನು ಎಲ್ಲ ಬಗೆಯ ಬೆಂಬಲವನ್ನೂ ನೀಡುವುದಾಗಿ ಅಮೆರಿಕಾವು ಈ ನೀತಿಯನ್ನು ತನ್ನ ದೇಶದ ಉದ್ಯಮಿಗಳಿಗೆ ಹೇಳಿದೆ.

ಹೀಗೆ ಹತ್ತು ಪುಟಗಳ ರಾಷ್ಟ್ರೀಯ ಗಗನನೀತಿಯನ್ನು ಪ್ರಕಟಿಸಿರುವ ಅಮೆರಿಕಾ ಮತ್ತೆ ತಾನೇ ಜಗತ್ತಿನ ತಳವಾರ ಎಂದು ಹೇಳಿಕೊಳ್ಳಲು ಮುಂದಾಗಿದೆ! ಈ ನೀತಿ ಪ್ರಕಟವಾಗಿ ಒಂದೂವರೆ ತಿಂಗಳುಗಳೇ ಕಳೆದಿದ್ದರೂ ಅದು ಪ್ರಕಟವಾಗಿದ್ದು ಇತ್ತೀಚೆಗೆ. ಬಿಬಿಸಿಯಲ್ಲೇ ಈ ಸುದ್ದಿ ಪ್ರಕಟವಾಗಿದ್ದು ಅಕ್ಟೋಬರ್ ೧೮ರಂದು. ಈಗ ನಿಧಾನವಾಗಿ ಈ ನೀತಿಯ ಹಿಂದಿನ ಕುಟಿಲನೀತಿ ಅರ್ಥವಾಗುತ್ತಿದೆ.

ಶೀತಲಸಮರದ ಸಂದರ್ಭದಲ್ಲಿ ಅಮೆರಿಕಾದ ಆಗಿನ ಅಧ್ಯಕ್ಷ ರೋನಾಲ್ಡ್ ರೀಗನ್ `ತಾರಾ ಸಮರ’ ಎಂಬ ಹೊಸ ನೀತಿಯನ್ನು ಪ್ರಕಟಿಸಿದ್ದರೂ ಅದು ವಿಫಲವಾಗಿತ್ತು. ಆಮೇಲೆ ೧೯೯೬ರಲ್ಲಿ ಅಮೆರಿಕಾದ ಗಗನನೀತಿ ಪ್ರಕಟವಾಗಿತ್ತು. ಈಗಷ್ಟೇ ಅದು ಮತ್ತೆ ಅಮೆರಿಕಾದ ಎಲ್ಲ ಸರ್ವಾಕಾರಿ ಧೋರಣೆಗಳನ್ನು ಹೊತ್ತುಕೊಂಡು ರೂಪಾಂತರಗೊಂಡಿದೆ.
ಗಗನದಲ್ಲಿ ಉಪಗ್ರಹಗಳ ಮೂಲಕ ಸಮರ ಕಾರ್ಯಾಚರಣೆಗಳನ್ನು ನಡೆಸಬಲ್ಲ ಸಾಮರ್ಥ್ಯ ಇರುವ ಏಕೈಕ ದೇಶ ಅಮೆರಿಕಾ ಎಂಬುದು ಯಾರಿಗೆ ಗೊತ್ತಿಲ್ಲ? ಈಗ ಚೀನಾ ದೇಶವೂ ಇಂಥ ಸಾಮರ್ಥ್ಯವನ್ನು ಪಡೆಯುತ್ತಿದೆ ಎಂದೇ ಅಮೆರಿಕಾ ಈ ನೀತಿಯನ್ನು ಪ್ರಕಟಿಸಿದೆ ಎನ್ನುತ್ತಾರೆ ಬ್ರೂಕಿಂಗ್ಸ್ ಸಂಸ್ಥೆಯ ಸಂಶೋಧಕ ಮೈಖೇಲ್ ಓ ಹ್ಯಾನ್ಲಾನ್. `ಚೀನಾ ಮತ್ತು ರಶಿಯಾ ದೇಶಗಳು ಗಗನಶಸ್ತ್ರ ನಿಷೇಧದತ್ತ ಮುಖ ಮಾಡಿದ್ದರೂ, ಅಮೆರಿಕಾವನ್ನು ಹೇಗಾದರೂ ಮಣಿಸಬೇಕು ಎಂದು ಚೀನಾವು ಗಂಭೀರ ಪ್ರಯತ್ನ ಮಾಡುತ್ತಿದೆ’ ಎಂದು ಅವರು ಹೇಳುತ್ತಾರೆ.

ಬಹುಶಃ ಮುಂದಿನ ದಿನಗಳಲ್ಲಿ ವಿಶ್ವವು ಎದುರಿಸಲಿರುವ ಮುಖ್ಯ ಸವಾಲುಗಳಲ್ಲಿ ಅಮೆರಿಕಾದ ಗಗನನೀತಿಯೂ ಒಂದು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಆಕಾಶ ಎಂದರೆ ಬರೀ ಗಾಳಿಯಲ್ಲ, ಜಾಗವೂ ಅಲ್ಲ, ಅಲ್ಲಿ ತರಂಗಗಳಿವೆ. ಗಗನದಕೆಳಗೆ ಇಡೀ ವಸುಂಧರೆಯೇ ಇದೆ. ಅಮೆರಿಕಾವೆಂಬ ತುಂಡನ್ನು ಬಿಟ್ಟರೂ ಈ ಗಗನದ ಕೆಳಗೆ ನೂರಾರು ದೇಶಗಳು ಬಾಳುತ್ತಿವೆ. ಉಳಿದೆಲ್ಲ ದೇಶಗಳ ಮೇಲೆ ಸವಾರಿ ಮಾಡುವ ಗಗನನೀತಿಯನ್ನು ಅಮೆರಿಕಾ ಜಾರಿ ಮಾಡಿದರೆ ಭಾರತದಂಥ ದೇಶವೂ ಸುಮ್ಮನಿರುವುದು ಮಾತ್ರ ವಿಚಿತ್ರ. ಅಣುನೀತಿಯಲ್ಲಿ ಅಮೆರಿಕಾವನ್ನು ಬಗ್ಗಿಸಿಬಿಟ್ಟೆವು ಎಂಬ ಗರ್ವವೇನಾದರೂ ಇದ್ದರೆ ಭಾರತದ ಸರ್ಕಾರವು ಎಚ್ಚರಗೊಳ್ಳುವುದು ಒಳ್ಳೆಯದು. ಯಾಕೆಂದರೆ ನಾಳೆ ಬೆಳಗಾದರೆ ಆಕಾಶದಲ್ಲಿ ಜಾರ್ಜ್ ಬುಶ್ ತಮ್ಮ ವಕ್ರನಗೆ ಬೀರುತ್ತ ನಮ್ಮನ್ನು ನೋಡುತ್ತಾರೆ.

ವಿಜ್ಞಾನದ ಪ್ರಗತಿ, ಅಣುಶಕ್ತಿಯ ಭಂಡಾರ, ಇಂಟರ್‌ನೆಟ್ ಮೇಲಿನ ಸಂಪೂರ್ಣ ಅಧಿಕಾರ, – ಹೀಗೆ ಎಲ್ಲ ರಂಗಗಳಲ್ಲೂ ಹೆಜ್ಜೆ ಬಲಪಡಿಸಿಕೊಳ್ಳುತ್ತ ಸಾಗಿರುವ ಅಮೆರಿಕಾಕ್ಕೆ ಇದೂ ಒಂದು ರಾಷ್ಟ್ರೀಯ ಹಿತದ ಹೆಜ್ಜೆ. ಆದರೆ ಇದು ಖಂಡಿತವಾಗಿಯೂ ನಿಸರ್ಗದ ನಿಯಮವನ್ನು ಮುರಿವ ಕ್ರೌರ್ಯ.

ಕಾಲದ ಲೆಕ್ಕಾಚಾರದಲ್ಲಿ, ಮನುಕುಲದ ಏಳಿಗೆಯ ಚಿಂತನೆಯ ಪರಂಪರೆಯ ಮಾನದಂಡದಲ್ಲಿ ನೋಡಿದರೆ ನಿನ್ನೆ ಮೊನ್ನೆಯಷ್ಟೇ ಹುಟ್ಟಿರುವ ಅಮೆರಿಕಾಗೆ ಭಾರತದಂಥ ಹಿರಿಯಜ್ಜನೇ ಪಾಠ ಕಲಿಸಬೇಕಾಗುತ್ತದೆ. ಆದರೆ ಭಾರತದ ರಾಜಕಾರಣಿಗಳು ಮಾತ್ರ ಅಂಥ ರಾಜಕೀಯ ದೃಢತೆಯನ್ನು ತೋರಿಸುವುದೇ ಇಲ್ಲವಲ್ಲ?

(ಕೃಪೆ: ಹೊಸದಿಗಂತ)

Leave a Reply