ಸಿ. ಅಶ್ವಥ್ – ಪರಿಚಯ ಮತ್ತು ಸಂದರ್ಶನ
ಗಾಯಕ ಹಾಗೂ ಸಂಗೀತ ನಿರ್ದೇಶಕರಾಗಿ ಸಿ. ಅಶ್ವಥ್ ಅವರದು ಸುಗಮ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು. ಹಾಗೆಂದು ಅವರ ಪ್ರತಿಭೆ ಸುಗಮ ಸಂಗೀತಕ್ಕೆ ಸೀಮಿತವಾಗಿ ಉಳಿದಿಲ್ಲ. ನಾಟಕ, ಸಿನಿಮಾಗಳಿಗೂ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅಲ್ಲೂ ಅವರ ವೈಶಿಷ್ಟ್ಯವನ್ನು ಕಾಣಬಹುದು, ಅಲ್ಲ ಕೇಳಬಹುದು. ಸುಗಮ ಸಂಗೀತಕ್ಕೆ ಅದರದೇ ಒಂದು ಸ್ಥಾನವನ್ನು ದೊರಕಿಸಿಕೊಟ್ಟವರಲ್ಲಿ ಪಿ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿ ಮತ್ತು ಸಿ. ಅಶ್ವಥ್ ಪ್ರಮುಖರು. ಕವಿಗಳು ಬರೆದ ಸಾಲುಗಳು ಪುಸ್ತಕಗಳಲ್ಲಿ ಅಡಗಿರುತ್ತಿದ್ದವು. ಕೆಲವು ಸಹೃದಯ ಓದುಗರ ಮನವನ್ನು ಅವು ತಲುಪಿದ್ದವು. ಜನಸಾಮಾನ್ಯರನ್ನು ಅವು ತಲುಪುವಲ್ಲಿ ಈ ಮಹನೀಯರ ಪಾಲು ದೊಡ್ಡದು.
ಸ್ವರ ಸಂಯೋಜನೆಯಲ್ಲಿ ಸಂಗೀತಕ್ಕಿಂತ ಭಾವಕ್ಕೇ ಪ್ರಾಶಸ್ತ್ಯ. ಅದಕ್ಕೆಂದೇ ಅವರು ಸಂಗೀತ ಸಂಯೋಜನೆ ಎನ್ನದೆ ಸ್ವರಸಂಯೋಜನೆ ಎನ್ನುವುದು. ಕವನದಲ್ಲಿ ಬರುವ ಪ್ರತಿ ಪ್ರಶ್ನೆ, ವಿರಾಮ, ಮೌನ -ಎಲ್ಲವುಗಳು ಅವರ ಸಂಯೋಜನೆಯಲ್ಲಿ ಮಹತ್ವ ಪಡೆಯುತ್ತವೆ. ಉದಾಹರಣೆಗೆ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಯ ಸಾಲುಗಳನ್ನು ಗಮನಿಸಿ-
ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ
ಚಿಂತೆ, ಬಿಡಿ ಹೂವ ಮುಡಿದಂತೆ
ಅಶ್ವತ್ಥರು ಚಿಂತೆಯ ನಂತರ ಸ್ವಲ್ಪ ಮೌನವನ್ನು ಕೊಟ್ಟು ಅಲ್ಪವಿರಾಮ ಚಿಹ್ನೆಯನ್ನು ಸ್ವರಸಂಯೋಜನೆಯಲ್ಲಿ ಸೂಚಿಸಿದ್ದಾರೆ. ಒಂದು ಕವಿತೆ ಚರಣದಿಂದ ಚರಣಕ್ಕೆ ಭಾವದಲ್ಲಿ ಬದಲಾಗುತ್ತಾ ಹೋಗಿದ್ದರೆ ಸ್ವರಸಂಯೋಜನೆಯ ರಾಗವೂ ಅದೇ ರೀತಿ ಬದಲಾಗುತ್ತಾ ಹೋಗುತ್ತದೆ.
ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದ ಅಶ್ವತ್ಥ್ ಸ್ವಯಂ ನಿವೃತ್ತಿ ಪಡೆದು ಪೂರ್ಣವಾಗಿ ತಮ್ಮನ್ನು ಸಂಗೀತ ಲೋಕಕ್ಕೇ ಅರ್ಪಿಸಿಕೊಂಡರು. ತಮ್ಮ ವಯಸ್ಸಿನ ಸಂಖ್ಯೆ (೫೮)ಯಷ್ಟೇ ಕ್ಯಾಸೆಟ್ಟುಗಳನ್ನು ಹೊರತಂದಿರುವ ಅಶ್ವತ್ಥ್ ನಾಡಿನ ಒಳಹೊರಗೆಲ್ಲ ಹೆಸರುವಾಸಿ. ನಾಡಿನ ಎಲ್ಲ ಹಿರಿಯ ಮತ್ತು ತರುಣ ಕವಿಗಳ ಗೀತೆಗಳನ್ನು ಅರ್ಥಫೂರ್ಣವಾಗಿ ಸಂಯೋಜಿಸಿ ಕ್ಯಾಸೆಟ್‌ಗಳಾಗಿ ಹೊರತಂದಿದ್ದಾರೆ. ಕೆಲವು ಪ್ರಮುಖ ಭಾವಗೀತೆ ಕ್ಯಾಸೆಟ್ಟುಗಳು- ಮೈಸೂರು ಮಲ್ಲಿಗೆ, ಇರುವಂತಿಗೆ (ಕೆ.ಎಸ್. ನರಸಿಂಹಸ್ವಾಮಿ), ದೀಪಿಕಾ(ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ), ಶ್ರೀಮುಖ(ಕಯ್ಯಾರ ಕಿಂಞ್ಞಣ್ಣ ರೈ), ಕೈಲಾಸಂ ಗೀತೆಗಳು, ಮಂಕುತಿಮ್ಮನ ಕಗ್ಗ(ಡಿ.ವಿ.ಜಿ.), ಸುಬ್ಬಾಭಟ್ಟರ ಮಗಳೇ(ಬಿ.ಆರ್. ಲಕ್ಷ್ಮಣ ರಾವ್), ಗೀತ ಸೌಹಾರ್ದ(ದೇಶಭಕ್ತಿ ಗೀತೆಗಳು), ಬಣ್ಣದ ಹಕ್ಕಿ(ಮಕ್ಕಳ ಗೀತೆಗಳು), ಶ್ರಾವಣ(ದ.ರಾ. ಬೇಂದ್ರೆ), ಕವಿಶೈಲ(ಕುವೆಂಪು), ನಾಡಿನೆಲ್ಲೆಡೆಗೆ ಶರೀಫರ ಹಾಡುಗಳನ್ನು ಪಸರಿಸಿದ ಶಿಶುನಾಳ ಶರೀಫರ ಹಾಡುಗಳ ಏಳು ಕ್ಯಾಸೆಟ್ಟುಗಳು. ದೂರದರ್ಶನಕ್ಕಾಗಿ ತಯಾರಿಸಿದ `ಗೀತ ಮಾಧುರಿ’ ಕಾರ್ಯಕ್ರಮದ ವೀಡಿಯೋ ಕ್ಯಾಸೆಟ್ ಲಭ್ಯವಿದೆ.
ಸೃಜನಶೀಲತೆಯ ಅಗತ್ಯವಿದ್ದ ಎಲ್ಲ ಕಡೆ ಅಶ್ವತ್ಥ್ ಕೈಯಾಡಿಸಿದ್ದಾರೆ. ಗಿರೀಶ್ ಕಾರ್ನಾಡರ ಹಯವದನ, ತುಘಲಕ್, ನಾಗಮಂಡಲ, ಮಾಸ್ತಿಯವರ ಕಾಕನಕೋಟೆ ಇತ್ಯಾದಿ ನಾಟಕಗಳಿಗೆ ಅವರ ಸಂಗೀತ ಜೀವ ತುಂಬಿದೆ. ಮೈಸೂರು ಮಲ್ಲಿಗೆ, ಕಾಕನ ಕೋಟೆ, ಸ್ಪಂದನ, ಚಿನ್ನಾರಿ ಮುತ್ತ, ನಾಗಮಂಡಲ ಇತ್ಯಾದಿ ಚಲನ ಚಿತ್ರಗಳಿಗೂ ಅವರು ಸಂಗೀತ ನೀಡಿದ್ದಾರೆ. ಅವರ ವೈಶಿಷ್ಟ್ಯವೆಂದರೆ ಚಿತ್ರಕಥೆಯ ರಚನೆಯಲ್ಲಿ ಅವರು ಪಾಲ್ಗೊಳ್ಳುವಿಕೆ. ಇದರಿಂದ ಹಾಡುಗಳು ಚಿತ್ರದ ಅವಶ್ಯಕ ಭಾಗಗಳಾಗುತ್ತವೆ. ಇತರ ಚಿತ್ರಗಳಲ್ಲಿ ಇರುವಂತೆ ಹಾಡುಗಳನ್ನು ಅನವಶ್ಯಕ ತುರುಕಿಸಿದ್ದೆಂದು ಅನ್ನಿಸುವುದಿಲ್ಲ.
ಸುಗಮ ಸಂಗೀತವನ್ನು ಕುರಿತು ಅಶ್ವತ್ಥ್ ಅದೇ ಹೆಸರಿನ ಪುಸ್ತಕ ಬರೆದು ಆ ಕ್ಷೇತ್ರಕ್ಕೂ ಅದರ ಅಭ್ಯಾಸಿಗಳಿಗೂ ಒಂದು ಉಪಕಾರ ಮಾಡಿದ್ದಾರೆ. ಸುಗಮ ಸಂಗೀತ ಎಂದರೇನು ಎಂಬಲ್ಲಿಂದ ಶುರುವಾಗಿ ಸ್ವರಸಂಯೋಜನೆ, ಸುಗಮ ಸಂಗೀತದಲ್ಲಿ ಶ್ರುತಿಯ ಕಲ್ಪನೆ, ಸುಗಮ ಸಂಗೀತ ಗಾಯನ, ಸುಗಮ ಸಂಗೀತದಲ್ಲಿ ವಾದ್ಯ ಸಂಯೋಜನೆ, ಕೆಲವು ಉತ್ತಮ ಸಂಯೋಜನೆಗಳು, ಸುಗಮ ಸಂಗೀತದ ಮುನ್ನಡೆ, ಖ್ಯಾತ ಸುಗಮ ಸಂಗೀತ ಗಾಯಕ-ಗಾಯಕಿಯರು ಮುಂತಾದ ಎಲ್ಲ ಪಾಂಡಿತ್ಯಪೂರ್ಣ ವಿಶ್ಲೇಷಣೆ ಇಲ್ಲಿದೆ. ಈ ಪುಸ್ತಕದ ಇನ್ನೊಂದು ಹೆಗ್ಗಳಿಕೆಯೆಂದರೆ ಕನ್ನಡದ ಸುಪ್ರಸಿದ್ಧ ಹಿರಿಯ ಕವಿಗಳು ಮತ್ತು ಗಾಯಕ-ಗಾಯಕಿಯರ ಫೋಟೋ ಆಲ್ಬಂ. `ಸುಗಮ ಸಂಗೀತ’ ಆ ಕ್ಷೇತ್ರದ ಎಲ್ಲ ಮಾಹಿತಿ ನೀಡುವ ಏಕೈಕ ಆಕರ ಗ್ರಂಥ (ಸಹನ ಪ್ರಕಾಶನ, ಬೆಂಗಳೂರು, ೭೨ ಪುಟ, ರೂ.೩೦).
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಚಲನಚಿತ್ರ ಸಂಗೀತ ನಿರ್ದೇಶನಕ್ಕಾಗಿ ಮೂರು ಬಾರಿ ರಾಜ್ಯ ಪ್ರಶಸ್ತಿ, ಸಂಗೀತ-ನೃತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಹೀಗೆ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಅಶ್ವತ್ಥ್‌ಗೆ ಇತ್ತೀಚಿಗೆ ಸುಗಮ ಸಂಗೀತ ಕ್ಷೇತ್ರದ ಸೇವೆಗಾಗಿ ಪ್ರತಿಷ್ಠಿತ `ಸಂತ ಶಿಶುನಾಳ ಶರೀಫ’ ಪ್ರಶಸ್ತಿ.
ಅಶ್ವತ್ಥ್‌ರಿಗೆ ಸಂತ ಶಿಶುನಾಳ ಶರೀಫ ಪ್ರಶಸ್ತಿ ಬಂದದ್ದಕ್ಕಾಗಿ ಅವರ ೫೮ನೆಯ ಹುಟ್ಟುಹಬ್ಬದಂದು (ದಶಂಬರ೨೯, ೧೯೯೭) ಆದರ್ಶ ಸುಗಮ ಸಂಗೀತ ಅಕಾಡೆಮಿಯವರು ಅವರನ್ನು ಸನ್ಮಾನಿಸಲಿದ್ದಾರೆ. ಸ್ಥಳ ರವೀಂದ್ರ ಕಲಾಕ್ಷೇತ್ರ, ಬೆಂಗಳೂರು. ಸಮಯ ಸಾಯಂಕಾಲ ೬-೩೦. ಅದೇ ದಿನ ಅಶ್ವತ್ಥರ ಹೊಸ ಪುಸ್ತಕ `ಸ್ವರ ಮಾಧುರಿ’ (೩೫೦ ಪುಟ, ರೂ.೪೦೦) ಯನ್ನು ಕವಿ ಡಾ| ಜಿ.ಎಸ್. ಶಿವರುದ್ರಪ್ಪ ಬಿಡುಗಡೆ ಮಾಡುವವರಿದ್ದಾರೆ.