'ಸಾಫ್ಟ್‌ವೇರ್ ಸಂತ' ಎನ್. ಆರ್. ನಾರಾಯಣಮೂರ್ತಿ

– ಡಾ| ಆರ್. ಪೂರ್ಣಿಮಾ

ಇನ್‌ಪೋಸಿಸ್, ವಿಶ್ವ ಉದ್ಯಮ ಕ್ಷೇತ್ರಕ್ಕೆ ಹೊಸದಿಕ್ಕು ತೋರಿಸಿದ ಭಾರತದ ಹೆಮ್ಮೆಯ ಸಂಸ್ಥೆ. ಕನ್ನಡದ ನೆಲದಲ್ಲಿ ಅರಳಿ, ಪ್ರಪಂಚದ ಅಂಗಣದಲ್ಲಿ ದೇಶದ ವಿಜಯ ಪತಾಕೆ ಹಾರಿಸಿದ, ದಾಖಲೆಗಳ ಮೇಲೆ ದಾಖಲೆ ಸ್ಥಾಪಿಸುತ್ತ ಮುನ್ನಡೆಯುತ್ತಿರುವ ಪ್ರತಿಭಾವಂತರ ಕೂಟ. ಇದರ ಜನಕ ದೇಶದ ಶ್ರೀಮಂತ ವ್ಯಕ್ತಿ, ನ್ಯಾಯಬದ್ಧ ಮಾರ್ಗದಲ್ಲಿ ಹಣದ ರಾಶಿಯನ್ನೇ ಕೂಡಿಹಾಕಿದ ಸಾಫ್ಟ್‌ವೇರ್ ಸಂತ ಎನ್. ಆರ್. ನಾರಾಯಣಮೂರ್ತಿ. ಶಾಲಾ ಮಾಸ್ತರರ ಮಗನೊಬ್ಬ ಇಂದು ಪ್ರಪಂಚದ ಗಮನಾರ್ಹ ಉದ್ಯಮಿಯಾಗಿ ಬೆಳೆದು ನಿಂತ ಯಶೋಗಾಥೆ ಇದು.


ಸರ್ ಎಂ. ವಿಶ್ವೇಶ್ವರಯ್ಯ ಅವರ ಅನಂತರ ಕರ್ನಾಟಕದ ಹೆಸರು ಜಗತ್ತಿನಾದ್ಯಂತ ಮೆರೆಯುವಂತೆ ಮಾಡಿದ ಮತ್ತೊಬ್ಬ ತಾಂತ್ರಿಕ ತಜ್ಞರೆಂದರೆ ಎನ್. ಆರ್. ನಾರಾಯಣಮೂರ್ತಿ. ಅವರ ನಡೆನುಡಿಯಲ್ಲಿ ಪ್ರತಿಬಿಂಬಿಸುವುದು ಸರ್. ಎಂ. ವಿ. ಅವರ ನಿಷ್ಣುರತೆ ಮತ್ತು ನ್ಯಾಯಪರತೆಗಳ ಮತ್ತೊಂದು ಅಧ್ಯಾಯ.
ಎನ್. ರಾಮರಾವ್-ಪದ್ಮಾವತಮ್ಮ ದಂಪತಿಗಳ ಮಗನಾಗಿ ೧೯೪೬ರ ಆಗಸ್ಟ್ ೨೦ರಂದು ಜನಿಸಿದ ನಾರಾಯಣಮೂರ್ತಿ ಮೈಸೂರಿನ ಶಾರದಾ ವಿಲಾಸ ಶಾಲೆಯಲ್ಲಿ ಕಲಿತರು. ಕಷ್ಟಪಟ್ಟು ಓದುತ್ತಿದ್ದ ಈ ಬುದ್ಧಿವಂತ ವಿದ್ಯಾರ್ಥಿ ಉದ್ದಕ್ಕೂ ರ್‍ಯಾಂಕ್ ಗಳಿಸಿದ್ದು ಆಶ್ಚರ್ಯವಲ್ಲ. ನಾರಾಯಣಮೂರ್ತಿ ಅವರ ತಂದೆ ಎನ್. ರಾಮರಾವ್ ಅವರು ಶಾಲಾ ಮಾಸ್ತರರಾಗಿದ್ದು, ಮೈಸೂರಿನ ಅನೇಕ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದರು. ಚುರುಕುಬುದ್ಧಿಯ ತಮ್ಮ ಮಗ ಮುಂದೊಂದು ದಿನ ದೊಡ್ಡ ಸಂಸ್ಥೆಯನ್ನು ಕಟ್ಟಿ, ಉದ್ಯಮರಂಗಕ್ಕೇ ಪಾಠಗಳನ್ನು ಹೇಳುವ `ಸಾಫ್ಟ್‌ವೇರ್ ಗುರು’ವಾಗಿ ಪ್ರಸಿದ್ಧಿ ಪಡೆಯುವನೆಂದು ಅವರು ಊಹಿಸಿರಲಿಲ್ಲ.

ಎಸ್. ಎಸ್. ಎಲ್. ಸಿ. ಮತ್ತು ಪಿ. ಯೂ. ಸಿ. ಯಲ್ಲಿ ರ್‍ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿ ನಾರಾಯಣಮೂರ್ತಿ, ಅನಂತರ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಪದವಿ ಕೋರ್ಸ್‌ಗೆ ಪ್ರವೇಶವನ್ನೇನೋ ಸುಲಭವಾಗಿ ಪಡೆದರು. ಆದರೆ ಮಗನನ್ನು ದೂರದ ಊರಿನಲ್ಲಿರಿಸಿ ಓದಿಸುವಷ್ಟು ಅನುಕೂಲ ಎಂಟು ಮಕ್ಕಳ ತಂದೆಯಾದ ಶಾಲಾ ಮಾಸ್ತರರಿಗೆ ಇರಲಿಲ್ಲ. ಐಐಟಿಯಲ್ಲಿ ಪದವಿ ಪಡೆಯಬೇಕೆಂಬ ಕನಸು ನನಸಾಗದೆ ನಿರಾಸೆಗೊಂಡ ಆ ವಿದ್ಯಾರ್ಥಿ, ಮುಂದೆ ದೇಶದ ಎಲ್ಲ ಐಐಟಿಗಳ ಪದವಿಧರರು ಕೆಲಸಕ್ಕೆ ಸೇರುವ ಕನಸು ಕಾಣುವಂಥ ಸಂಸ್ಥೆಯೊಂದನ್ನು ಕಟ್ಟಿದ್ದು ಬೇರೆ ಮಾತು!

“ಬುದ್ಧಿವಂತರು ಎಲ್ಲಿ ಓದಿದರೂ ಮುಂದೆ ಬರ್‍ತಾರೆ, ಐಐಟಿನೇ ಆಗಬೇಕಿಲ್ಲ. ಇಲ್ಲೇ ಶೇಷಪ್ಪನ ಕಾಲೇಜಿಗೆ ಸೇರಿಕೋ” ಎಂದ ತಂದೆಯ ಅಸಹಾಯಕ ಮಾತಿಗೆ ಮಣಿದು ನಾರಾಯಣಮೂರ್ತಿ, ಇಂಜಿನಿಯರಿಂಗ್ ಅಧ್ಯಾಪಕ ಪ್ರೊ| ಶೇಷಪ್ಪ ಅವರು ರೂಪಿಸಿದ್ದ ಮೈಸೂರಿನ ‘ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್’ಗೆ ಸೇರಿದರು. ಬಿ. ಇ. ಪದವಿಯಲ್ಲೂ ರ್‍ಯಾಂಕ್ ಪಡೆದಾಗ, ಐಐಟಿಯಲ್ಲಿ ಓದುವ ಕನಸು ಮತ್ತೆ ಚಿಗುರಿತು. ಕಾನ್ಪುರದ ಐಐಟಿಯಲ್ಲಿ ಎಂ. ಟೆಕ್. ಗೆ ಪ್ರವೇಶ ಪಡೆದಾಗ, ಸಕಾಲಕ್ಕೆ ಬಂದ ಸ್ಕಾಲರ್‌ಶಿಪ್ ಮತ್ತೆ ಚಿಗುರಿದ ಕನಸು ಬಾಡದಂತೆ ನೋಡಿಕೊಂಡಿತು.

ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದಿದ್ದರೂ ಅಷ್ಟು ಹೊತ್ತಿಗೆ ಕಂಪ್ಯೂಟರ್ ಇಂಜಿನಿಯರಿಂಗ್‌ಗೆ ಹೊರಳಿಕೊಂಡಿದ್ದ ನಾರಾಯಣಮೂರ್ತಿ, ಅಹಮದಾಬಾದ್‌ನ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್’ (ಐಐಎಂ)ನಲ್ಲಿ ಉದ್ಯೋಗಕ್ಕೆ ಸೇರಿದಾಗ ಮಾಹಿತಿ ತಂತ್ರಜ್ಞಾನದ ಮಹಾಮಹಿಮೆಯನ್ನು ಅರಿತುಕೊಂಡರು. ‘ಸಿಲಿಕಾನ್ ಕಣಿವೆ’ಯ ಆಳ, ವಿಸ್ತಾರಗಳು ಅವರಿಗೆ ಗೋಚರಿಸಿದವು. (ಸಿಲಿಕಾನ್ ಕಣಿವೆ ಎಂಬುದು ಅಮೆರಿಕದಲ್ಲಿ ಮಾಹಿತಿ ತಂತ್ರಜ್ಞಾನದ ಕಾಶಿ; ಇಡೀ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಒಂದು ರೂಪಕ.)
ಅಂದಿನಿಂದ ‘ಸಿಲಿಕಾನ್ ಕಣಿವೆ’ಯಲ್ಲಿ ಅವರದು ನಿಲ್ಲದ ಪಯಣ. ಐಐಎಂನ ಕೆಲಸ, ಅದನ್ನು ಬಿಟ್ಟು ಪ್ಯಾರಿಸ್‌ನ ಪ್ರಸಿದ್ಧ ‘ಸೇಸಾ’ ಕಂಪೆನಿಯಲ್ಲಿ ಸವಾಲೆನಿಸುವ ಹುದ್ದೆ ನಿರ್ವಹಣೆ, ಸ್ವದೇಶಕ್ಕೆ ಮರಳಿ ಪುಣೆಯ ‘ಎಸ್‌ಆರ್‌ಐ’ ಕಂಪೆನಿಯಲ್ಲಿ ಗುರುಗಳಾದ ಪ್ರೊ| ಜೆ. ಬಿ. ಕೃಷ್ಣಯ್ಯ ಅವರ ಜತೆ ಕೆಲಸ, ಅಲ್ಲಿಂದ ಮುಂದೆ ‘ಪತ್ನಿ ಕಂಪ್ಯೂಟರ್ಸ್’ ಜವಾಬ್ದಾರಿ- ಇವೆಲ್ಲವೂ ನಾರಾಯಣಮೂರ್ತಿ ಅವರು ‘ಸಿಲಿಕಾನ್ ಕಣಿವೆ’ಯಲ್ಲಿ ಇಟ್ಟ ಮೊದಲ ಹೆಜ್ಜೆಗಳು.

ಆದರ್ಶಗಳ ಆಕರ್ಷಣೆ

೧೯೭೮ ನಾರಾಯಣಮೂರ್ತಿ ಅವರ ಬದುಕಿನಲ್ಲಿ ಇನ್ನೊಂದು ಕಾರಣಕ್ಕೂ ಮಹತ್ತ್ವದ ವರ್ಷ. ಪ್ಯಾರಿಸ್‌ನಿಂದ ಪುಣೆಗೆ ಮರಳಿದ ಅನಂತರ ಸುಧಾ ಕುಲಕರ್ಣಿ ಎಂಬ ಪ್ರತಿಭಾವಂತೆಯ ಪರಿಚಯ ಆಗಿತ್ತು. ಹುಬ್ಬಳ್ಳಿಯ ಸಾಂಪ್ರದಾಯಿಕ ಸಮಾಜದಲ್ಲಿ ಹೆಣ್ಣು ಮಕ್ಕಳು ಇಂಜಿನಿಯರಿಂಗ್ ಕೋರ್ಸ್‌ಗೆ ಸೇರುವುದು ಯಾರೂ ಕೇಳದ ಸಂಗತಿಯಾಗಿದ್ದರೂ ಸುಧಾ ಬಿ. ಇ. ಪದವಿ ಪಡೆದು, ಎಲ್ಲ ವಿಷಯಗಳ್ಲಲೂ ಚಿನ್ನದ ಪದಕಗಳನ್ನು ಗಳಿಸಿದ್ದರು. ಅನಂತರ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಕಂಪ್ಯೂಟರ್ ವಿಜ್ಞಾನದ ಎಂ. ಟೆಕ್ ಕೋರ್ಸ್‌ನಲ್ಲಿ ಆ ವರ್ಷದ ಒಬ್ಬಳೇ ಹುಡುಗಿಯಾಗಿ ಓದಿ ಸಾಧನೆ ಮಾಡಿದ್ದರು.

ಇಂಥ ದಿಟ್ಟ ಹೆಣ್ಣುಮಗಳು ನಾರಾಯಣಮೂರ್ತಿ ಅವರಿದ್ದ ಪುಣೆಗೆ ಬಂದದ್ದೂ ಒಂದು ವಿಶೇಷ ಸಂಗತಿ. ಟಾಟಾ ಸಮೂಹದ ಟೆಲ್ಕೊ ಕಾರ್ಖಾನೆಯ ಒಂದು ಜಾಹಿರಾತಿನಲ್ಲಿ “ಮಹಿಳಾ ಅಭ್ಯರ್ಥಿಗಳು ಅರ್ಜಿ ಹಾಕಬೇಕಿಲ್ಲ” ಎಂದಿದ್ದ ಸೂಚನೆ ಹುಡುಗರಿಗೆ ಮಿಗಿಲಾಗಿ ಓದಿ ಎಂ. ಟೆಕ್ ಪಡೆದಿದ್ದ ಸುಧಾರನ್ನು ನೋಯಿಸಿತು. “ಇದೇಕೆ ಇಂಥ ತಾರತಮ್ಮ, ಹುಡುಗರ ಹಾಗೆ ನಾನೂ ಇಂಜಿನಿಯರ್ ಅಲ್ಲವೆ?” ಎಂದು ನೇರವಾಗಿ ಟಾಟಾ ಸಮೂಹದ ಅಧಿಪತಿ ಜೆ. ಆರ್. ಡಿ. ಟಾಟಾ ಅವರಿಗೇ ಧೈರ್ಯವಾಗಿ ಪತ್ರ ಬರೆದರು. ಅದರ ಫಲವಾಗಿ ಪುಣೆಯ ವಾಹನ ತಯಾರಿಕಾ ಉದ್ಯಮ ಟೆಲ್ಕೊದಲ್ಲಿ ಸುಧಾಗೆ ಕೆಲಸ ಸಿಕ್ಕಿತ್ತು. ಮೈಸೂರಿನ ನಾರಾಯಣಮೂರ್ತಿ, ಹುಬ್ಬಳ್ಳಿಯ ಸುಧಾ ಇಬ್ಬರಿಗೂ ಪುಣೆಯಲ್ಲಿ ಸ್ನೇಹ ಬೆಸೆಯಿತು. ಇಬ್ಬರಿಗೂ ಪರಸ್ಪರದಲ್ಲಿದ್ದ ಆದರ್ಶಗಳೇ ಆಕರ್ಷಣೆ.

೧೯೭೮ರಲ್ಲಿ ನಾರಾಯಣಮೂರ್ತಿ ಮತ್ತು ಸುಧಾ ಕುಲಕರ್ಣಿ ಅವರ ಮದುವೆ ನಡೆದಿದ್ದು, ಅವರ ವಿಚಾರಧಾರೆಗೆ ಅನುಗುಣವಾಗಿ ಮೈಸೂರಿನಲ್ಲಿ. ಮೂರ್ತಿ ಅವರ ಮನೆಯಲ್ಲೇ ನಡೆದ ಸರಳ ಮದುವೆಗೆ ತಗುಲಿದ ವೆಚ್ಚ ಕೇವಲ ೮೦೦ ರೂಪಾಯಿ ಮಾತ್ರ! ಈ ವೆಚ್ಚವನ್ನೂ ಇಂಜಿನಿಯರ್ ಕೆಲಸದಲ್ಲಿದ್ದ ಇಬ್ಬರೂ ಅರ್ಧರ್ಧ ಹಂಚಿಕೊಂಡರು. ಇಂಜಿನಿಯರ್ ದಂಪತಿಗಳಿಗೆ ಕೈತುಂಬ ಸಂಬಳ. ಸ್ವಂತಕ್ಕೊಂದು ಸಣ್ಣ ಗೂಡು, ಜತೆಗೆ ಮುದ್ದಾದ ಮಗಳು ಅಕ್ಷತಾ- ಸುಖೀ ಸಂಸಾರದಲ್ಲಿ ಮೈಮರೆಯಲು ಮತ್ತೇನೂ ಬೇಕಿರಲಿಲ್ಲ. ಆದರೆ ಗುರಿ ಕೈಬೀಸಿ ಕರೆಯುತ್ತಿತ್ತು. ಬಿತ್ತುವ ಗಳಿಗೆ ಯಾವುದು ಎಂದು ಮನಸ್ಸಿನಲ್ಲಿದ್ದ ಕನಸುಗಳು ಒತ್ತುತ್ತಿದ್ದವು.
ಭಾರತ ಆಗಿನ್ನೂ ಕಂಪ್ಯೂಟರ್ ತಂತ್ರಜ್ಞಾನಕ್ಕೆ ತೆರೆದುಕೊಳ್ಳುವ ಬೆರಗಿನಲ್ಲಿತ್ತು. ಎಂಬತ್ತರ ದಶಕ ಆರಂಭವಾಗುತ್ತಿದ್ದಂತೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಅದಕ್ಕೇ ಮೊದಲ ಪ್ರಾಶಸ್ತ್ಯ; ದೇಶದ ಪ್ರತಿಭಾವಂತರಿಗೆಲ್ಲ ಅದರತ್ತಲೇ ಕಣ್ಣು ಹೊರಳಿಸುವ ತವಕ. ಇಂಥ ಪರಿವರ್ತನಾ ಪರ್ವದಲ್ಲಿ ಒಂದು ದಿನ ನಾರಾಯಣಮೂರ್ತಿ ಹೆಂಡತಿಗೆ ಹೇಳಿದರು: “ನಾನು ಈ ಜನರಲ್ ಮ್ಯಾನೇಜರ್ ಕೆಲಸ ಬಿಟ್ಟುಬಿಡ್ತೀನಿ. ಸಹೋದ್ಯೋಗಿಗಳೊಂದಿಗೆ ಸೇರಿ ಸ್ವಂತ ಕಂಪೆನಿ ಆರಂಭಿಸುವ ಆಲೋಚನೆ ಇದೆ. ನೋಡತಾ ಇರು, ಭಾರತೀಯರು ಹೆಮ್ಮೆಪಡಬೇಕು, ಅಂಥ ಕಂಪೆನಿ ಕಟ್ಟೀನಿ”

‘ಸಿಲಿಕಾನ್ ಕಣಿವೆ’ಯಲ್ಲಿ ಸ್ವತಂತ್ರವಾಗಿ ಹೈಕಿಂಗ್ ಮಾಡಲು ಪ್ರಶಸ್ತ ಕಾಲ ಬಂದಿದೆ ಎಂದು ಅನ್ನಿಸಿದೊಡನೆ ನಾರಾಯಣಮೂರ್ತಿ ತಮ್ಮ ಆಲೋಚನೆಯನ್ನು ಸಹೋದ್ಯೋಗಿಗಳಾದ ಎನ್. ಎಸ್. ರಾಘವನ್, ಎಸ್. ಗೋಪಾಲಕೃಷ್ಣನ್, ಎಸ್. ಡಿ. ಶಿಬು ಪಾಲ್, ಕೆ. ದಿನೇಶ್, ನಂದನ್ ಎಂ. ನೀಲೇಕಣಿ ಮತ್ತು ಅಲೋಖ್ ಅರೋರ ಅವರೊಂದಿಗೆ ಹಂಚಿಕೊಂಡರು. ಸಮಾನ ಮನಸ್ಕರಾದ ಅವರಿಂದ ಬಂದ ಸ್ಪಂದನ ಮತ್ತು ಉತ್ತೇಜನ ಇನ್‌ಫೋಸಿಸ್‌ಗೆ ತೊಟ್ಟಲಾಯಿತು. ಆದರೆ, ಈ ತೊಟ್ಟಿಲನ್ನು ತೂಗಿದ್ದು ಸುಧಾ ಅವರ ಧೈರ್ಯ ಮತ್ತು ಔದಾರ್ಯ, ೧೯೮೧ರಲ್ಲಿ ಕಂಪೆನಿ ಆರಂಭಿಸಲು ಬೇಕಾದ ಹತ್ತು ಸಾವಿರ ರೂಪಾಯಿ ಬಂಡವಾಳವನ್ನು ಹೊಂದಿಸಿ ಕೊಟ್ಟ ಸುಧಾ ಮನೆಯ ಒಂದು ಕೊಠಡಿಯನ್ನೂ ಅದಕ್ಕಾಗಿ ಬಿಟ್ಟುಕೊಟ್ಟರು. ಕಂಪ್ಯೂಟರ್ ವಿಜ್ಞಾನ, ಮಾಹಿತಿ ತಂತ್ರಜ್ಞಾನವೆಂಬ ವಿಸ್ತಾರವನ್ನು ಪಡೆದಿದ್ದರಿಂದ ‘ಇನ್‌ಫರ್‌ಮೇಶನ್ ಸಿಸ್ಟಮ್ಸ್’ ಎಂಬುದನ್ನು ಸಂಕುಚಿತ ‘ಇನ್‌ಫೋಸಿಸ್’ ಎಂದು ಹೊಸ ಕಂಪೆನಿಗೆ ಹೆಸರಿಡಲಾಯಿತು.

ಸುಧಾ ಎಂಬ ತಾಯಿ

ಅತ್ಯುನ್ನತ ಶಿಕ್ಷಣ ಪಡೆದಿದ್ದ ಸುಧಾ ಕೂಡ ಹೊಸ ಕಂಪೆನಿಗೆ ಸೇರಬಹುದಾಗಿದ್ದರೂ ಗಂಡ-ಹೆಂಡತಿ ಇಬ್ಬರೂ ಇರುವುದು ಬೇಡ ಎಂದು ನಿರ್ಧಾರವಾಯಿತು. ಮೂರ್ತಿ ಆರಂಭಿಸಿದ ಕಂಪೆನಿಗೆ, ಅದಾಗಲೇ ದೊಡ್ಡ ಸಂಸ್ಥೆಯಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದ ಸುಧಾ ಹೊರಗಿನಿಂದ ಒತ್ತಾಸೆ ನೀಡಿದರು. ಸರ್ಕಸ್‌ನಲ್ಲಿ ಕಲಾವಿದರು ತೂಗುಕಂಬಿಗಳ ನಡುವೆ ಹಾರಾಟ ನಡೆಸುವಾಗ ಬಿದ್ದರೆ ರಕ್ಷಣೆಗೆ ಇರಲಿ ಎಂದು ಕೆಳಗೆ ಅಗಲವಾದ ಬಲೆ ಹರಡಿ ಹಿಡಿಯುವುದುಂಟು. ಏಳು ಮಂದಿ ಉತ್ಸಾಹಿ ಇಂಜಿನಿಯರ್‌ಗಳ ಹೊಸ ಸಾಹಸಕ್ಕೆ ಸುಧಾ ಆ ರಕ್ಷಣಾ ಬಲೆಯಂತೆ ಉಳಿದರು. ಇನ್‌ಫೋಸಿಸ್ ಸಂಸ್ಥೆಗೆ ನಾರಾಯಣಮೂರ್ತಿ ಅಧ್ಯಕ್ಷರು. ಆದರೆ ಸುಧಾ ನಿಸ್ಸಂಶಯವಾಗಿ ಅದರ ತಾಯಿ!

ದೇಶದಲ್ಲಿದ್ದ ಇತರ ಸಾಫ್ಟ್‌ವೇರ್ ಕಂಪೆನಿಗಳಿಗಿಂತ ವಿಭಿನ್ನವಾಗಿ ಕಾರ್ಯಸೂತ್ರವನ್ನು ಇನ್‌ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ (ಐಟಿಎಲ್) ಅಳವಡಿಸಿಕೊಂಡಿದ್ದು ಮುಂದೆ ಅದರ ಯಶಸ್ಸಿನ ಸೂತ್ರವೂ ಆಯಿತು. ಬೇರೆ ಕಂಪೆನಿಗಳು ದೇಶದೊಳಗಿನ ಗ್ರಾಹಕರನ್ನು ಸೆಳೆಯಲು ಒದ್ದಾಡುತ್ತಿದ್ದರೆ ಇನ್‌ಫೋಸಿಸ್ ಆರಂಭದಿಂದಲೂ ವಿದೇಶೀ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿತು. ಮಾಹಿತಿ ತಂತ್ರಜ್ಞಾನದಲ್ಲಿ ಅಗಾಧ ಪ್ರಗತಿ ಸಾಧಿಸಿದ್ದ ಹೊರದೇಶಗಳು ಭಾರತದ ಪುಟ್ಟ ಕಂಪೆನಿಯ ಸೇವೆಯನ್ನು ಪಡೆಯುವ ಬಗ್ಗೆ ಎಲ್ಲರೂ ವ್ಯಕ್ತಪಡಿಸುತ್ತಿದ್ದ ಸಂಶಯವನ್ನು ಅದು ಮೊದಲು ನಿವಾರಿಸಬೇಕಿತ್ತು.

ತೊಡಕು-ತೊಡರುಗಳೆಂಬ ಮೆಟ್ಟಿಲುಗಳನ್ನು ಹತ್ತಿಕೊಂಡೇ ಇನ್‌ಫೋಸಿಸ್ ಯಶಸ್ಸಿನ ಗೋಪುರದತ್ತ ನಿಧಾನವಾಗಿ ನಡೆಯಿತು. ೧೯೮೪ರಲ್ಲಿ ಪುಣೆಯಲ್ಲಿದ್ದ ಕಂಪೆನಿಯನ್ನು ದೇಶದ `ಸಿಲಿಕಾನ್ ಕಣಿವೆ’ಯಾಗಿ ರೂಪುಗೊಳ್ಳುತ್ತಿದ್ದ ಬೆಂಗಳೂರಿಗೆ ವರ್ಗಾಯಿಸಲಾಯಿತು. ಎಂಬತ್ತರ ದಶಕದಲ್ಲಿ ಅಪಾರವಾಗಿ ವಿಸ್ತಾರಗೊಂಡ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳುವ ಆತಂಕ. ಅಸಾಧ್ಯವೆಂದೇ ತೋರುವ ಗುರಿ ಮುಟ್ಟುವ ಕಾತರ. ವಿದೇಶಗಳಲ್ಲಿ ಗ್ರಾಹಕರನ್ನು ಸೆಳೆಯುವ ಸ್ಪರ್ಧೆಯ ಒತ್ತಡ, ಕಂಪ್ಯೂಟರ್ ಮತ್ತಿತರ ಮೂಲಭೂತ ಸೌಕರ್ಯಗಳ ಆಮದು-ವಿದೇಶಿ ವಿನಿಮಯ ಕುರಿತ ಸರಕಾರಿ ನೀತಿ-ನಿಯಮಗಳೊಂದಿಗೆ ಸೆಣಸಾಟ ಮುಂತಾದ ನೂರೊಂದು ಸವಾಲುಗಳು ಇನ್‌ಫೋಸಿಸ್‌ಗೆ ಎದುರಾದವು. ನಿರಾಶೆ, ಹತಾಶೆಯ ಸಂದರ್ಭದಲ್ಲಿ ಜತೆಗಾರರನ್ನು ಹುರಿದುಂಬಿಸುತ್ತ, ದೃಢನಿಶ್ಟಯದ ನಿರ್ಧಾರಗಳನ್ನು ಕೈಗೊಳ್ಳುತ್ತ, ನಾರಾಯಣಮೂರ್ತಿ ಕಂಪೆನಿಯನ್ನು ಮುನ್ನೆಡಿಸಿದರು. ಕಂಪೆನಿಯ ಉದ್ಯೋಗಿಗಳಿಗೆ ವೇತನ ನೀಡಲು ಹಣವಿಲ್ಲದ ಪರಿಸ್ಥಿತಿ ಒಮ್ಮೆ ಏರ್ಪಟ್ಟಾಗ, ಮದುವೆಯ ಅನಂತರ ಹೆಂಡತಿಗೆ ಕೊಡಿಸಿದ್ದ ಅಲ್ಪ-ಸ್ವಲ್ಪ ಚಿನ್ನದ ಒಡವೆಗಳನ್ನೂ ಒತ್ತೆಯಿಟ್ಟು ಹಣ ತಂದು ನಿಭಾಯಿಸಿದರು. ಸನ್ನಿವೇಶಗಳಿಗೆ ಶರಣಾಗುವ ಬದಲು ಅವನ್ನು ಕೈಗೆತ್ತಿಕೊಂಡು ತಿದ್ದುವ ಅವರ ಛಲ ಕಂಪೆನಿಯನ್ನು ಸದಾ ಕಾಯುತ್ತಿತ್ತು.

ತೊಂಬತ್ತರ ದಶಕದಲ್ಲಿ ದೇಶದಲ್ಲಿ ಜಾರಿಯಾದ ಆರ್ಥಿಕ ಉದಾರೀಕರಣದೊಂದಿಗೆ ಬಹುರಾಷ್ಟ್ರೀಯ ಕಂಪೆನಿಗಳು ಹೆಬ್ಬಾಗಿಲು ತೆರೆಯಲಾಯಿತು. ಈ ಹೆಬ್ಬಾಗಿಲ ಮೂಲಕ ಹೊಸ ಸಮಸ್ಯೆಗಳು ಮತ್ತು ಸವಾಲುಗಳು ಒಳನುಗ್ಗಿದ್ದವು. ಇನ್‌ಪೋಸಿಸ್‌ನಂಥ ದೇಶೀಯ ಕಂಪೆನಿಗಳ ಕಥೆ ಮುಗಿಯಿತು. ಅಂತಾರಾಷ್ಟ್ರೀಯ ಖ್ಯಾತಿಯ ಕಂಪೆನಿಗಳು ಭಾರತಕ್ಕೆ ಬಂದಿರುವುದರಿಂದ ಅವುಗಳ ಮುಂದೆ ಇವರ ಆಟ ನಡೆಯುವುದಿಲ್ಲ ಎಂದೇ ಎಲ್ಲರೂ ತೀರ್ಪಿತ್ತರು. ಆದರೆ ನಾರಾಯಣಮೂರ್ತಿ ಬೇರೆ ರೀತಿಯಲ್ಲಿ ಆಲೋಚಿಸಿದರು: ನಮ್ಮ ಹಣೆಬರಹ ಇಷ್ಟೇ ಎಂದು ಸೋಲುವುದು ಬೇಡ, ಬದಲಿಗೆ ನಾವೇ ಬಹುರಾಷ್ಟ್ರೀಯ ಕಂಪೆನಿಗಳ ಮಟ್ಟಕ್ಕೆ ಏರೋಣ.

ಇನ್‌ಫೋಸಿಸ್ ಈ ಅತ್ಯಂತ ಕಠಿಣವಾದ ತಪಸ್ಸನ್ನು ಕೈಗೊಂಡಿತು. ಅದರ ಫಲವಾಗಿ `ಇನ್‌ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್’ ಇಂದು ಜಾಗತಿಕರಂಗದಲ್ಲಿ ಭಾರತದ ಮಾಹಿತಿ ತಂತ್ರಜ್ಞಾನ ಪ್ರತಿಭೆ, ಪರಿಣಿತಿ ಮತ್ತು ಪ್ರಯತ್ನಶೀಲತೆಗಳಿಗೆ ಒಂದು ಸಂಕೇತವಾಗಿ ಬೆಳಗುತ್ತಿದೆ.

ದೇಶೀ ಗಾರುಡಿ

ಜಗತ್ತಿನಲ್ಲಿ ಕೈಗಾರಿಕಾ ಕ್ರಾಂತಿ ನಡೆದ ಮೇಲೆ ಮಾಹಿತಿ ತಂತ್ರಜ್ಞಾನಕ್ಕೆ (ಇನ್‌ಫರ್‍ಮೇಶನ್ ಟೆಕ್ನಾಲಜಿ) ಬೆಳೆದಿರುವಷ್ಟು ಆಕರ್ಷಣೆ ಬೇರೆ ಯಾವುದೇ ಕೈಗಾರಿಕೆಗೆ ಇಲ್ಲ. ಈ ಕ್ಷೇತ್ರಕ್ಕೆ ಹರಿದು ಬಂದಿರುವಷ್ಟು ಉತ್ತೇಜಕ ಬಂಡವಾಳ, ಇದರಲ್ಲಿ ಇರುವಷ್ಟು ಹಣಕ್ಕೆ ತಕ್ಕ ಮೌಲ್ಯ ಬೇರೊಂದು ಕೈಗಾರಿಕೆಯಲ್ಲಿ ಇಲ್ಲ. ಮಾಹಿತಿ ತಂತ್ರಜ್ಞಾನಕ್ಕೆ ಮಾರುಹೋದಷ್ಟು ಉತ್ಸಾಹಿ ಉದ್ಯಮಿಗಳು, ಇದರ ಮೋಡಿಗೆ ಒಳಗಾದಷ್ಟು ಪ್ರತಿಭಾವಂತರು ಬೇರೆ ಇನ್ನಾವ ಕೈಗಾರಿಕೆಗೂ ಲಭ್ಯವಿಲ್ಲ. ಮಾಹಿತಿ ತಂತ್ರಜ್ಞಾನದ ಮಂತ್ರ ಜಪಿಸದಿದ್ದರೆ ಯಾವ ದೇಶಕ್ಕೂ ಉಳಿಗಾಲವಿಲ್ಲ. ಈ ಭರಾಟೆಯ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ನಿರ್ಮಿಸಿಕೊಂಡದ್ದು ಇನ್‌ಫೋಸಿಸ್‌ನ ಮೇರು ಸದೃಶ ಸಾಧನೆ.

ಭಾರತದ ಬಹುಪಾಲು ಉದ್ಯಮಗಳು ಮನೆತನಗಳ ಒಡೆತನದಲ್ಲಿದ್ದು, ತಲೆಮಾರುಗಳಲ್ಲಿ ಸಾಗಿಬರುತ್ತವೆ. ಆದ್ದರಿಂದ ಉದ್ಯಮರಂಗದಲ್ಲಿ ಏನಾದರೂ ಸಾಧಿಸಬೇಕಾದರೆ ದೊಡ್ಡ ಮನೆತನದ ಹಿನ್ನಲೆ, ಬ್ರ್ಯಾಂಡ್‌ನೇಮ್ ಬೆಂಬಲ, ಅಪಾರ ಬಂಡವಾಳ ಮುಂತಾದವು ಬೇಕು ಎಂಬ ನಂಬಿಕೆ ಸಾಮಾನ್ಯವಾಗಿದೆ. ಇವುಗಳೇನೂ ಇಲ್ಲದ, ಶಾಲಾ ಮಾಸ್ತರನ ಮಗ ನಾರಾಯಣಮೂರ್ತಿ ಇನ್‌ಫೋಸಿಸ್‌ನಂಥ ಸಂಸ್ಥೆಯನ್ನು ಕಟ್ಟಿ, ಬೆಳೆಸಿ ಯಶಸ್ಸಿಗೆ ಹೊಸ ಸಿದ್ಧಾಂತ ಮತ್ತು ಸೂತ್ರಗಳನ್ನು ರೂಪಿಸಿಕೊಟ್ಟಿದ್ದಾರೆ. ದೇಶದ ಮಾಹಿತಿ ತಂತ್ರಜ್ಞಾನದ ಪ್ರತಿಭಾವಂತರ ಆಕರ್ಷಣೆಯ ಕೇಂದ್ರವಾಗಿ ಬೆಳೆದಿರುವ ಇನ್‌ಫೋಸಿಸ್, ವಿದೇಶಗಳಿಗೆ ಪ್ರತಿಭಾ ಪಲಾಯನ ಆಗುವುದನ್ನು ತಡೆಯುವ ‘ದೇಶಿ ಗಾರುಡಿ’ ಆಗಿದೆ ಎಂದರೆ ತಪ್ಪಲ್ಲ.

ದೇಶದ ಅಗ್ರಮಾನ್ಯ ಸಾಫ್ಟ್‌ವೇರ್ ಸಂಸ್ಥೆಯಾಗಿ, ಏಷ್ಯದ ಗಮನಾರ್ಹ ಕಂಪೆನಿಯಾಗಿ ಮರೆಯುತ್ತಿರುವ ಇನ್‌ಫೋಸಿಸ್ ತನ್ನ ಶ್ರೇಷ್ಠ ಗುಣಮಟ್ಟ, ಅಪಾರ ಪಾರದರ್ಶಕತೆ, ಅನುಸರಿಸುವ ನೈತಿಕತೆಗಳಿಂದಾಗಿ ಉದ್ಯಮ ಕ್ಷೇತ್ರಕ್ಕೇ ಮಾದರಿಯಾಗಿದೆ. ಅದರ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದ್ದು, ಕರ್ನಾಟಕ, ತಮಿಳುನಾಡು, ಒರಿಸ್ಸಾ, ಮಹಾರಾಷ್ಟ್ರಗಳಲ್ಲಿ ೧೧ ಕಚೇರಿಗಳು, ವಿದೇಶಗಳಲ್ಲಿ ೧೩ ಕಚೇರಿಗಳು ಅದಕ್ಕಿದ್ದು, ೪,೮೦೦ ಉದ್ಯೋಗಿಗಳು ಅದರ `ಗುಣಮಟ್ಟ ಚಳವಳಿ’ಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿವಿಧ ಉದ್ಯಮಗಳಿಗೆ ಅಗತ್ಯವಾದ ಸಾಫ್ಟ್‌ವೇರ್ ಅಭಿವೃದ್ಧಿ, ಮರುಜೋಡಣೆ ಮತ್ತು ನಿರ್ವಹಣೆ ಸೇರಿ ಸಾಫ್ಟ್‌ವೇರ್ ತಂತ್ರಜ್ಞಾನದ ಸಮಗ್ರ ಸೇವೆ ನೀಡುವುದು ಇನ್‌ಫೋಸಿಸ್‌ನ ಮುಖ್ಯ ಕಾರ್ಯಕ್ಷೇತ್ರ. ಇ-ಕಾಮರ್ಸ್ ಮತ್ತು ಇಂಟರ್‌ನೆಟ್ ಸೇವೆಗಳಲ್ಲಿ ಹೆಚ್ಚುತ್ತಿರುವ ಬೇಡಿಕೆ, ಅದರ ದಿಗಂತಗಳನ್ನು ಇನ್ನಿಲ್ಲದಂತೆ ವಿಸ್ತರಿಸಲಿದೆ.

ತನ್ನ ಕೆಲಸದ ಶ್ರೇಷ್ಠತೆಯಿಂದಾಗಿ ಜಾಗತಿಕ ಮನ್ನಣೆ ಪಡೆದ ಮೊದಲ ಭಾರತೀಯ ಸಂಸ್ಥೆ ಎನ್ನುವುದು ಇನ್‌ಫೋಸಿಸ್‌ನ ಹೆಗ್ಗಳಿಕೆ. ಮೂರನೆಯ ಜಗತ್ತಿನಲ್ಲಿ ಹುಟ್ಟಿ ಬೆಳೆದ ಇನ್‌ಫೋಸಿಸ್, ಮೊದಲ ಜಗತ್ತಿನ ಖ್ಯಾತ ಉದ್ಯಮಗಳಿಗೆ ಬಹಳ ಅಚ್ಚುಮೆಚ್ಚು. ಜಾಗತಿಕರಂಗದಲ್ಲಿ ಅತ್ಯಂತ ಬೇಡಿಕೆಯಿರುವ ವಸ್ತುಗಳನ್ನು ತಯಾರಿಸುವ ಬಹುತೇಕ ಕಂಪೆನಿಗಳು ಅದರ ಗ್ರಾಹಕ ಸೇವೆಯನ್ನು ಪಡೆಯುತ್ತಿವೆ. ರೀಬೊಕ್, ಸಿಟಿಗ್ರೂಪ್, ಗ್ಯಾಪ್, ಬೋಯಿಂಗ್, ನೆಸ್ಲೆ, ನಾರ್ಡ್‌ಸ್ಟಾರ್ಮ್, ಜನರಲ್ ಇಲೆಕ್ಟ್ರಿಕ್, ವೀಸಾ, ಆಯಪೆಲ್, ನಾರ್ಟೆಲ್ ಮೊದಲಾದ ಲೋಕಪ್ರಸಿದ್ಧ ಹೆಸರುಗಳೂ ಸೇರಿ ಸುಮಾರು ೧೩೦ ವಿದೇಶಿ ಕಂಪೆನಿಗಳಿಗೆ ಇನ್‌ಫೋಸಿಸ್ ಸಾಫ್ಟ್‌ವೇರ್ ಸೇವೆ ಒದಗಿಸಿದೆ. ಕೀಳರಿಮೆ ಬಿಟ್ಟು ತಲೆಯೆತ್ತಿ ನಿಲ್ಲುವುದನ್ನು, ಪ್ರಯತ್ನಿಸಿದರೆ ಜಗತ್ತಿನ ಶ್ರೇಷ್ಠ ಕಂಪೆನಿಗಳನ್ನು ಸರಿಗಟ್ಟಲು ಸಾಧ್ಯ ಎಂಬುದನ್ನು ಅದು ಭಾರತೀಯ ಉದ್ಯಮರಂಗಕ್ಕೆ ಕಲಿಸುತ್ತಿದೆ. ಇನ್‌ಫೋಸಿಸ್‌ನಿಂದ ಒಮ್ಮೆ ಸೇವೆ ಪಡೆದ ಯಾವ ಕಂಪೆನಿಯೂ ಅದನ್ನು ಬಿಟ್ಟು ಬೇರೆಯದಕ್ಕೆ ಹೋಗುವುದಿಲ್ಲ ಎಂಬುದು ಜಗತ್ತು ಅದಕ್ಕೆ ನೀಡಿದ ಪ್ರಮಾಣಪತ್ರ!

ಇನ್‌ಪೋಸಿಸ್‌ಗೆ ಯಶಸ್ಸಿಗೆ ಎರಡು ಆಯಾಮಗಳಿವೆ. ಮೊದಲನೆಯದು ಅದು ಸೃಷ್ಟಿಸುತ್ತಿರುವ ಮತ್ತು ವೃದ್ಧಿಸುತ್ತಿರುವ ಸಂಪತ್ತು, ಎರಡನೆಯದು ಸಂಪತ್ತು ಸೃಷ್ಟಿಸುವ ಕೆಲಸದಲ್ಲಿ ಅದು ಎತ್ತಿ ಹಿಡಿಯುತ್ತಿರುವ ನೈತಿಕ ಮೌಲ್ಯಗಳು. ಈ ಎರಡರಲ್ಲೂ ಅದನ್ನು ಸರಿಗಟ್ಟುವ ಉದ್ಯಮಗಳು ನಮ್ಮ ದೇಶದಲ್ಲಿ ಬಹಳ ವಿರಳ.
೧೯೯೩ರಲ್ಲಿ ಇನ್‌ಫೋಸಿಸ್, ದೇಶದ ಶೇರು ಮಾರುಕಟ್ಟೆಯನ್ನು ಪ್ರವೇಶಿಸಿದಾಗ, ಶೇರು ಗಣಿತಕ್ಕೇ ಹೊಸ ಲೆಕ್ಕಾಚಾರವನ್ನು ಕಲಿಸುವುದೆಂದು ಹೆಚ್ಚು ಜನ ನಿರೀಕ್ಷಿಸಿರಲಿಲ್ಲ. ಇಂದು ಶೇರು ಮಾರುಕಟ್ಟೆಯನ್ನು ಕಂಪ್ಯೂಟರ್ ಕಂಪೆನಿಗಳು ಆಳುತ್ತಿದ್ದರೆ, ಅವುಗಳ ಪೈಕಿ ಇನ್‌ಫೋಸಿಸ್ ಹೂಡಿಕೆದಾರರ ಕಣ್ಮಣಿ ಎನ್ನಿಸಿದೆ. ಅದರ ಮಾರುಕಟ್ಟೆ ಬಂಡವಾಳ ೪೦ ಸಾವಿರ ಕೋಟಿ ರೂಪಾಯಿಗಳಾಗುತ್ತಿವೆ. ಈ ಕಂಪೆನಿಯ ಶೇರುಗಳನ್ನು ಕೊಂಡ ಮೇಲೆ ಲಕ್ಷಾಂತರ ಜನರ ಜೀವನ ಸ್ಥಿತಿಗತಿಯೇ ಬದಲಾಗಿದೆ. ತನ್ನ ಶೇರುಗಳ ಒಂದು ಪಾಲನ್ನು ತನ್ನ ಉದ್ಯೋಗಿಗಳಿಗೇ ವಿತರಿಸಿದ ಮೊದಲ ಕಂಪೆನಿ ಇನ್‌ಫೋಸಿಸ್. “ಪ್ರತಿಭಾವಂತ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಈ ದೇಶದಲ್ಲೇ ಮತ್ತು ಈ ಕಂಪೆನಿಯಲ್ಲೇ ಉಳಿಯುವಂತೆ ಮಾಡಲು, ಜಾಗತಿಕ ಮಟ್ಟದ ಸಾಫ್ಟ್‌ವೇರ್ ಅಗ್ರಗಣ್ಯರನ್ನು ಕಂಪೆನಿಗೆ ಆಕರ್ಷಿಸಲು ಇದು ಸಹಾಯಕ” ಎಂಬುದು ನಾರಾಯಣಮೂರ್ತಿ ಅವರ ಆಲೋಚನೆ. ಈ ಉದಾರ ಮತ್ತು ವಿವೇಚನಾಯುಕ್ತ ನಿರ್ಧಾರದಿಂದಾಗಿ ಇಂದು ಇನ್‌ಫೋಸಿಸ್ ಕಂಪೆನಿಯಲ್ಲೇ ಲಕ್ಷಾಧೀಶರು, ಕೋಟ್ಯಧೀಶರು ಕಿಕ್ಕಿರಿದಿದ್ದಾರೆ.

ದೇಶದ ಶೇರು ಮಾರುಕಟ್ಟೆಯಲ್ಲಿ ಹೊಸ ಗಾಳಿಯನ್ನು ತಂದ ಇನ್‌ಫೋಸಿಸ್ ವಿದೇಶಿ ಶೇರು ಮಾರುಕಟ್ಟೆಯನ್ನು ಪ್ರವೇಶಿಸಿದ್ದೂ ಒಂದು ಅದ್ಭುತ ಸಾಧನೆ. ನ್ಯೂಯಾರ್ಕ್‌ನಲ್ಲಿರುವ `ನಾಸ್‌ಡಾಕ್’, ಹೈಟೆಕ್ ಕಂಪೆನಿಗಳ ನೆಚ್ಚಿನ ಶೇರು ವಿನಿಮಯ ಕೇಂದ್ರ. ಅಲ್ಲಿ ಪ್ರವೇಶ ಪಡೆಯಲು ಜಗತ್ತಿನ ಅತ್ಯುತ್ತಮ ಕಂಪೆನಿಗಳು ಪೈಪೋಟಿ ನಡೆಸುತ್ತವೆ. ಅಂಥ `ನಾಸ್‌ಡಾಕ್’ನಲ್ಲಿ ನೋಂದಣಿ ಪಡೆದು, ಜಾಗತಿಕ ಶೇರು ಮಾರುಕಟ್ಟೆಯನ್ನು ಪ್ರವೇಶಿಸಿದ ಮೊದಲ ಭಾರತೀಯ ಕಂಪೆನಿಯಾಗಿ ಇನ್‌ಫೋಸಿಸ್ ಇತಿಹಾಸ ಸೃಷ್ಟಿಸಿದೆ. ಇಲ್ಲಿ ಇದರ ಮಾರುಕಟ್ಟೆ ಬಂಡವಾಳ ೧೧ ಬಿಲಿಯನ್ ಡಾಲರ್‌ಗಳಿಗೂ ಹೆಚ್ಚಾಗಿದೆ. ವಿದೇಶಿ ಹಣ ಹೂಡಿಕೆದಾರರು ಇನ್‌ಫೋಸಿಸ್ ಡಿಪಾಸಿಟರ್‌ಗಳಲ್ಲಿ ಹಣ ಹೂಡಿ, ಅದರ ಬೆಲೆ ೩೫೦ ಡಾಲರ್‌ಗಳ ಆಸುಪಾಸಿನಲ್ಲಿ ಇರುವುದನ್ನು ಖುಷಿಯಿಂದ ಬೆರಗಿನಿಂದ ನೋಡುತ್ತಿದ್ದಾರೆ.

ಇನ್‌ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್‌ನ ಒಡೆತನದಲ್ಲಿ ಪ್ರಮುಖ ಪಾಲು ಪಡೆದಿರುವ ನಾರಾಯಣಮೂರ್ತಿ ಅವರ ಶೇರುಗಳ ಮೌಲ್ಯವಂತೂ ಬಿಲಿಯನ್ ಮಟ್ಟಕ್ಕೆ ಹತ್ತಿರದಲ್ಲಿದೆ. ಸಂಪತ್ತನ್ನು ನ್ಯಾಯಬದ್ಧವಾಗಿ, ನೀತಿಬದ್ಧವಾಗಿ ಸೃಷ್ಟಿಸುವ ಪ್ರತಿಜ್ಞೆ ಈಡೇರಿದ ಸಮಾಧಾನ ಬಿಟ್ಟರೆ, ಸಿರಿವಂತಿಕೆಯ ಯಾವ ಕುರುಹೂ ಅವರಲ್ಲಿ ಕಾಣುವುದೇ ಇಲ್ಲ. ಇನ್‌ಫೋಸಿಸ್‌ನ ಯಶಸ್ಸು ಆರ್ಥಿಕವಾಗಿ ಎಷ್ಟು ಮುಖ್ಯವೋ ನೈತಿಕವಾಗಿ ಅಷ್ಟೇ ಮುಖ್ಯ ಎನ್ನುವುದು ಅವರ ನಿಲುವು. ಶೇರುಗಳ ಲೆಕ್ಕಾಚಾರದಲ್ಲಿ ತಮ್ಮ ಯಶಸ್ಸನ್ನು ಅಳೆಯಲು ಇಚ್ಛಿಸಿದ ಅವರು “ನನಗೆ ಶೇರು-ಗೀರು ವ್ಯವಹಾರ ಅರ್ಥವಾಗುವುದೇ ಇಲ್ಲ. ನಾನೆಂದೂ ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವುದಿಲ್ಲ” ಎಂದು ಹೇಳುತ್ತಾರೆ!

ಇನ್‌ಫೋಸಿಸ್‌ನಂಥ ಬೃಹತ್ ಸಂಸ್ಥೆಯನ್ನು ಕಂಡು ಬೆಳೆಸುವ ಮಾರ್ಗದಲ್ಲಿ ಪಾರದರ್ಶಕತೆ ಮತ್ತು ನೈತಿಕತೆಗಳು ಕಳೆದುಹೋಗದಂತೆ ನಾರಾಯಣಮೂರ್ತಿ ಕಟ್ಟೆಚ್ಚರದಿಂದ ಕಾಯುತ್ತಿದ್ದಾರೆ. ‘ಬಿಲಿಯನ್ ಮೌಲ್ಯದ ಯೋಜನೆ ಕೈಬಿಟ್ಟರೆ ಬಿಡಲಿ ಆದರೆ ಒಂದು ರಾತ್ರಿಯ ಸುಖನಿದ್ದೆ ಕಳೆದುಕೊಳ್ಳಬಾರದು” ಎಂದು ಕಂಪೆನಿಯ ಉದ್ಯೋಗಿಗಳಿಗೆ ಅವರು ಕಿವಿಮಾತು ಹೇಳುತ್ತಾರೆ. “ದಿ ಸೋಫ್ಟೆಸ್ಟ್ ಪಿಲ್ಲೋ ಈಸ್ ಎ ಕ್ಲಿಯರ್ ಕಾನ್ಯಿಯನ್ಸ್” ಎಂದು ಸದಾ ಹೇಳುವ ಅವರಿಗೆ ಬಹಿರಂಗ ಶುದ್ಧಿಯಷ್ಟೇ ಅಂತರಂಗ ಶುದ್ಧಿಯೂ ಬಹಳ ಮುಖ್ಯ. ಕಾನೂನಿನ ಕಣ್ಣಿಗೆ ಮಣ್ಣೆರಚದೆ, ರಾಜಕಾರಣಿಗಳು-ಅಧಿಕಾರಿಗಳಿಗೆ ಬೆಣ್ಣೆ ಹಚ್ಚದೆ, ಭ್ರಷ್ಟ ವ್ಯವಸ್ಥೆಯನ್ನು ಪೋಷಿಸದೆ ಭಾರತದಲ್ಲಿ ಯಾವ ಉದ್ಯಮವೂ ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬ ವಾಡಿಕೆಯ ಮಾತನ್ನು ಇನ್‌ಫೋಸಿಸ್ ಸುಳ್ಳು ಮಾಡಿದೆ. ಬೇರೆ ಸಾಧನೆಗಳಿರಲಿ, ವಾರ್ಷಿಕ ಲೆಕ್ಕಪತ್ರ ಮಂಡನೆಯ ಪಾರದರ್ಶಕತೆಗೂ ಇನ್‌ಫೋಸಿಸ್ ಪ್ರಶಸ್ತಿಗಳನ್ನು ಪಡೆದಿವೆ. ಆದಾಯ ತೆರಿಗೆಯನ್ನು ಕ್ಲುಪ್ತವಾಗಿ ಸಂದಾಯ ಮಾಡುವ ಇನ್‌ಫೋಸಿಸ್‌ನಲ್ಲಿ ತೆರಿಗೆ ತಪ್ಪಿಸುವ ‘ಪ್ರೋಗ್ರಾಮ್’ಗಳು ಇಲ್ಲವೇ ಇಲ್ಲ. ದೇಶದ ಉದ್ಯಮರಂಗ ಎಂದೂ ಕೇಳಿರದ ಮೌಲ್ಯ ವ್ಯವಸ್ಥೆಯನ್ನು ರೂಪಿಸಿಕೊಂಡಿರುವ ಈ ಕಂಪೆನಿ ಅದರಲ್ಲೂ ಹೊಸ ಮಾದರಿಗಳನ್ನು ರೂಪಿಸಿದೆ. “ಪವರ್‍ಡ್ ಬೈ ಇಂಟಲೆಕ್ಟ್, ಡೆವನ್ ಬೈ ವ್ಯಾಲ್ಯೂಸ್” ಎನ್ನುವುದು ಇನ್‌ಫೋಸಿಸ್‌ನ ಸ್ವಯಂ ವರ್ಣನೆ ಮತ್ತು ಧೈಯ. ಮೌಲ್ಯಾಧಾರಿತ ರಾಜಕಾರಣ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮೌಲ್ಯಾಧಾರಿತ ಉದ್ಯಮಶೀಲತೆ ಇಲ್ಲಿದೆ ಎಂದು ಇನ್‌ಫೋಸಿಸ್ ಸಾರುತ್ತಿದೆ.

ಐಎಸ್‌ಓ ೯೦೦೧, ಸಿಎಂಎಂ ಲೆವೆಲ್ ಐದು ಪಡೆದ ಮೊದಲ ಭಾರತೀಯ ಸಾಫ್ಟ್‌ವೇರ್ ಕಂಪೆನಿ ಎಂಬ ಹೆಗ್ಗಳಿಕೆ ಪಡೆದಾಯಿತು. ರಾಷ್ಟ್ರಮಟ್ಟದಲ್ಲಿ ಉದ್ಯಮರಂಗದ ಶ್ರೇಷ್ಠ ಪ್ರಶಸ್ತಿಗಳನ್ನೆಲ್ಲ ಪಡೆದಾಯಿತು. ಜಗತ್ತಿನ ಸಾಫ್ಟ್‌ವೇರ್ ಉದ್ಯಮರಂಗದ ಪ್ರತಿಷ್ಠಿತ ಕಂಪೆನಿಗಳ ಪಂಕ್ತಿಯಲ್ಲಿ ಸ್ಥಾನ ಸಿಕ್ಕಿತು. ಎರಡು ತಲೆಮಾರುಗಳು ಉದ್ಯಮಿಗಳ ಕಣ್ಣಲ್ಲಿ `ಉದ್ಯಮ ಎಂದರೆ ಹೀಗಿರಬೇಕು’ ಎಂಬ ಮೆಚ್ಚುಗೆ ಮೂಡಿತು. ಸಾಧನೆಗಳ ಸರಮಾಲೆಯನ್ನೇ ತೊಟ್ಟಿದ್ದರೂ ಅದರಲ್ಲಿ ಮೈಮರೆಯುವ ಮನೋಭಾವ ಇನ್‌ಫೋಸಿಸ್‌ನಲ್ಲಿ ಹುಡುಕಿದರೂ ಸಿಗದು. ಮಾಹಿತಿ ತಂತ್ರಜ್ಞಾನದ ಪ್ರತಿಯೊಂದು ಬೆಳವಣಿಗೆಗೆ ಕನ್ನಡಿ ಹಿಡಿಯಲು, ಅದನ್ನು ಅರಗಿಸಿಕೊಳ್ಳಲು ಇಲ್ಲಿ ಸತತ ಪ್ರಯತ್ನ ನಡೆಯುತ್ತಿದೆ. ಜಗತ್ತಿನ ಪ್ರಸಿದ್ಧ ಸಾಫ್ಟ್‌ವೇರ್ ಕಂಪೆನಿಗಳಿಗೆ ಸರಿಸಾಟಿಯಾಗಿ ತನ್ನಲ್ಲೂ ಮೂಲಭೂತ ಸೌಕರ್ಯ ಮತ್ತು ತಾಂತ್ರಿಕ ವ್ಯವಸ್ಥೆ ನಿರ್ಮಿಸಿಕೊಂಡಿದ್ದರೂ ಇನ್‌ಫೋಸಿಸ್ ತನ್ನ ಲಾಭಾಂಶದ ಶೇಕಡಾ ೧೦ರಷ್ಟು ಹಣವನ್ನು ಪ್ರತಿವರ್ಷ ತನ್ನ ತಾಂತ್ರಿಕ ವ್ಯವಸ್ಥೆಯ ನವೀಕರಣಕ್ಕೆ ವಿನಿಯೋಗಿಸುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ಕ್ರಿಯಾಶೀಲವಾಗಿರಲು ಇನ್‌ಫೋಸಿಸ್ ಸಿಬ್ಬಂದಿ ಸದಾ ಸೇನೆಯಂತೆ ಸನ್ನದ್ಧವಾಗಿರುತ್ತದೆ. ‘ಪರಿಪೂರ್ಣತೆ’ ಎನ್ನುವುದು ನಿರಂತರವಾಗಿ ಬೆನ್ನಟ್ಟಬೇಕಾದ ಮಾಯಾಮೃಗ ಎಂದು ನಂಬುವ ಇನ್‌ಫೋಸಿಸ್, ಪ್ರತಿಕ್ಷಣ ಶರವೇಗದಲ್ಲಿ ಅದರತ್ತ ಧಾವಿಸುತ್ತಿರುತ್ತದೆ. ಆರಾಮ-ವಿರಾಮಗಳಿಗೆ ಆಸ್ಪದವಿಲ್ಲದ ಅಲ್ಲಿ ‘ಆಲಸ್ಯವೇ ಮರಣ, ಜಾಗೃತಿಯೇ ಜೀವನ.’ ಅಲ್ಲಿಯೂ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ! ಎಷ್ಟೊಂದು ಪ್ರಪ್ರಥಮಗಳ ಸಾದನೆಯಿದ್ದರೂ “ಅತ್ಯುತ್ತಮವಾದದ್ದು ಇನ್ನೂ ಬರಬೇಕಿದೆ” ಎಂಬ ನಾರಾಯಣಮೂರ್ತಿಯವರ ಚಿಂತನೆಯೇ ಇನ್‌ಫೋಸಿಸ್‌ನ ಮಾರ್ಗದರ್ಶಿ ಸಿದ್ಧಾಂತ.
ಇನ್‌ಫೋಸಿಸ್ ರೂಪಿಸಿಕೊಂಡಿರುವ ಮೌಲ್ಯ ವ್ಯವಸ್ಥೆಯ ಅನೇಕ ಅಂಶಗಳು ಭಾರತೀಯ ಉದ್ಯಮರಂಗಕ್ಕೆ ನಿಜಕ್ಕೂ ಹೊಸತು. “ಕಲಿಯುವ ಸಾಮರ್ಥ್ಯ”ದ ಕಟ್ಟುನಿಟ್ಟಾದ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಅಭ್ಯರ್ಥಿಗಳಿಗೆ ಮಾತ್ರ ಕಂಪೆನಿಗೆ ಪ್ರವೇಶವೇ ಹೊರತು ಪ್ರಭಾವ, ವಶೀಲಿ ಮುಂತಾದ ಬೇರೆ ಯಾವುದರಿಂದಲೂ ಅಲ್ಲ. ನಾಳೆಗಳನ್ನು ಇಂದೇ ಕಲ್ಪಿಸಿಕೊಂಡು, ನಾಳೆಯದನ್ನು ಇಂದೇ ಕಲಿಯಬಲ್ಲ ಜಾಣ-ಜಾಣೆಯರ ತಂಡ ಇನ್‌ಫೋಸಿಸ್‌ನ ಅಮೂಲ್ಯ ಆಸ್ತಿ. ಉದ್ಯೋಗಿಗಳು ಕಂಪೆನಿಯಿಂದ ಕಂಪೆನಿಗೆ ಹಾರುವುದು ಮತ್ತು ಅವರೇ ಸ್ವಂತ ಕಂಪೆನಿ ರಚಿಸಿಕೊಳ್ಳುವುದು- ಇವೆರಡೂ ಸಾಫ್ಟ್‌ವೇರ್ ಕಂಪೆನಿಗಳ ಮುಖ್ಯ ಸಮಸ್ಯೆ. ಆದರೆ ಇನ್‌ಫೋಸಿಸ್ ಕಂಪೆನಿಯನ್ನು ಬಿಡುವ ಉದ್ಯೋಗಿಗಳ ಸಂಖ್ಯೆ ತೀರಾ ಕಡಿಮೆ. ಬೇರೆ ಕಂಪೆನಿಗಳಲ್ಲಿ ಇದು ಶೇಕಡಾ ೨೫ರಷ್ಟಿದ್ದರೆ, ಇಲ್ಲಿ ಶೇಕಡಾ ೧೦ ಮಾತ್ರ ಇದೆ. ಗುಣಮಟ್ಟವನ್ನೇ ಉಸಿರಾಡುವ, ಕೈತುಂಬ ವೇತನ ನೀಡುವ ಕಂಪೆನಿಯನ್ನು ಬಿಡಲು ಇಚ್ಛಿಸುವುದು ಕಡಿಮೆ. ಇಲ್ಲಿಂದ ಬೇರೆ ಎಲ್ಲಿಗೆ ಹೋದರೂ ‘ನಂಬರ್ ವನ್’ ಸ್ಥಾನದಿಂದ ಕೆಳಗಿಳಿದಂತೆ. ಆದ್ದರಿಂದಲೇ ಇಂದಿನ ಪ್ರತಿಭಾವಂತ ಯುವಜನರ ಆಯ್ಕೆ ಮಾಹಿತಿ ತಂತ್ರಜ್ಞಾನದ ಕ್ಷೇತ್ರವಾಗಿದ್ದರೆ, ಮಾಹತಿ ತಂತ್ರಜ್ಞಾನದ ಪ್ರತಿಭಾವಂತರ ಆಯ್ಕೆ ಇನ್‌ಫೋಸಿಸ್ ಆಗಿರುತ್ತದೆ. ಇನ್‌ಫೋಸಿಸ್ ಸ್ಥಾಪಕರು ರೂಪಿಸಿಕೊಂಡಿರುವ ನೀತಿಸಂಹಿತೆಯಂತೂ ಅಸಾಧಾರಣವಾದದ್ದು. ಸ್ಥಾಪಕರ ಮಕ್ಕಳು ಇಲ್ಲಿ ಸಹಜವಾಗಿ ಉತ್ತರಾಧಿಕಾರಿಗಳಂತೆ ಸ್ಥಾನ ಪಡೆಯುವುದಿಲ್ಲ. “ನನ್ನ ಮಕ್ಕಳು ಇನ್‌ಫೋಸಿಸ್‌ಗೆ ಸೇರಬೇಕಾದರೂ ಎಲ್ಲರಂತೆ ಟೆಸ್ಟ್ ಪಾಸಾಗಬೇಕು. ಇಲ್ಲದಿದ್ದರೆ ಸಾಧ್ಯವಿಲ್ಲ” ಎಂದು ನಾರಾಯಣಮೂರ್ತಿ ಘೋಷಿಸಿದ್ದಾರೆ. ನಮ್ಮ ದೇಶದ ಎಲ್ಲರಂಗಗಳಲ್ಲೂ ಉತ್ತರಾಧಿಕಾರ ಮತ್ತು ಸ್ವಜನಪಕ್ಷಪಾತ ಸಾಮಾನ್ಯ ನಿಯಮವಾಗಿರುವಾಗ ಇಂಥ ಮಾತು ಬೆಚ್ಚಿಬೀಳಿಸುತ್ತದೆ. ಇನ್‌ಫೋಸಿಸ್‌ಗೆ ಯಾರೂ ಹಕ್ಕಿನಿಂದ ಉತ್ತರಾದಿಕಾರಿಗಳಿಲ್ಲ. ಇದ್ದರೆ ಅವರು ದೇಶದ ಪ್ರತಿಭಾವಂತರು ಮಾತ್ರ.

ಇನ್‌ಫೋಸಿಸ್ ಕಂಪೆನಿಯ ಸಾಮಾಜಿಕ ಮುಖವೂ ಅದರ ಆರ್ಥಿಕ ಮುಖದಷ್ಟೇ ಆಕರ್ಷಕ. ಅನೇಕ ವಿಚಾರಗಳಲ್ಲಿ ಮಾದರಿಯಾಗುವ ಇದು, ಕಾರ್ಪೋರೇಟ್ ಸಮಾಜಸೇವಾ ಕಾರ್ಯದಲ್ಲೂ ಮಾದರಿಯಾಗಿದೆ. ಆ ಮೂಲಕ ಇನ್‌ಫೋಸಿಸ್ ಸೃಷ್ಟಿಸುತ್ತಿರುವ ಸಂಪತ್ತು ಸಮಾಜದಲ್ಲಿ ವಿತರಣೆಯಾಗುತ್ತಿದೆ. ಕಂಪೆನಿಯಿಂದ ದೇಣಿಗೆ ನೀಡುವುದಲ್ಲದೆ, ಅದರ ಸ್ಥಾಪಕರ ವೈಯಕ್ತಿಕ ಆದಾಯದಿಂದಲೂ ಕೋಟಿಗಟ್ಟಲೆ ಸಹ ಸಮಾಜಕ್ಕೆ ಸಂದಾಯವಾಗುತ್ತಿದೆ. ಇತ್ತೀಚೆಗೆ ತಾನೇ ಬೆಂಗಳೂರಿನ ಅಭಿವೃದ್ಧಿಗೆ ರೂಪಿಸಿದ ನಿಧಿಗೆ, ಇನ್‌ಫೋಸಿಸ್ ಮಾತ್ರವಲ್ಲದೆ ನಾರಾಯಣಮೂರ್ತಿ-ಸುಧಾಮೂರ್ತಿ, ನಂದನ್ ನೀಲೇಕಣಿ-ರೋಹಿಣಿ ನೀಲೇಕಣಿ ದಂಪತಿಗಳೂ ಕೋಟ್ಯಂತರ ರೂಪಾಯಿ ದೇಣಿಗೆ ನೀಡಿದ್ದಾರೆ.

ಸಿಲಿಕಾನ್ ಕಣಿವೆಯಲ್ಲಿ ಹೊಳೆಯುತ್ತಿರುವ ಹೊನ್ನ ಶಿಖರವಾದ ಇನ್‌ಫೋಸಿಸ್ ಭಾರತದ ಹೆಮ್ಮೆ ಮತ್ತು ಪ್ರತಿಭೆಯ ಪ್ರತೀಕ. ಅದರ ಯಶಸ್ಸು ಭಾರತದ ಉದ್ಯಮರಂಗದ ಆತ್ಮವಿಶ್ವಾಸವನ್ನು ಕುದುರಿಸಿದೆ ಎಂದರೆ ಅತಿಶಯೋಕ್ತಿ ಅಲ್ಲ. ‘ದುಡ್ಡು ಮಾಡುವುದು’ ಎಂಬ ಮಾತಿಗೆ ಅಂಟಿಕೊಂಡಿದ್ದ ಅಕ್ರಮ, ಅನ್ಯಾಯಗಳ ಕಿಲುಬನ್ನು ಇನ್‌ಫೋಸಿಸ್ ತೊಳೆದುಹಾಕಲು ಯತ್ನಿಸಿದೆ.

ಇನ್‌ಫೋಸಿಸ್ ಮನ್ನಣೆ ಮಾಲೆ

* ಸಾಫ್ಟ್‌ವೇರ್ ಇಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್‌ನಿಂದ `ಸಿಎಂಎಂ-ಲೆವೆಲ್ ೫’ ಗೌರವ. (ಕಂಪ್ಯೂಟರ್ ಕ್ಷೇತ್ರದಲ್ಲಿ ವಿಶ್ವದ ಅತ್ಯುನ್ನತ ಸಂಸ್ಥೆಯಾದ ಸಾಫ್ಟ್‌ವೇರ್ ಇಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್ (ಎಸ್‌ಇಐ). ಸಾಫ್ಟ್‌ವೇರ್ ಕಂಪೆನಿಗಳ `ಸಾಮರ್ಥ್ಯ ಪಕ್ವತೆ ಮಾದರಿ’ (ಕೆಪಬಲಿಟಿ ಮೆಚುರಿಟಿ ಮಾಡೆಲ್-ಸಿಎಂಎಂ) ಅನ್ನು ಅಳೆದು, ಮಟ್ಟ ಒಂದರಿಂದ ಐದರವರೆಗೆ ಶ್ರೇಣಿಕರಣವನ್ನು ನಿರ್ಧರಿಸುತ್ತದೆ. ಇದರಲ್ಲಿ ಇನ್‌ಫೋಸಿಸ್ ಅತ್ಯುನ್ನತ ಐದನೆಯ ಮಟ್ಟದ ಗೌರವವನ್ನು ಪಡೆದಿದೆ. ಪ್ರಪಂಚದ ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಕೇವಲ ಶೇಕಡ ೧.೫ರಷ್ಟು ಮಾತ್ರ ಈ ಮಟ್ಟ ತಲುಪಿವೆ.)

* ಐಎಸ್‌ಓ ೯೦೦೧ ಪ್ರಮಾಣಪತ್ರ-ಶ್ರೇಷ್ಠ ಗುಣಮಟ್ಟ ಸಾಧನೆಗೆ.

* ೧೯೯೮ರಲ್ಲಿ ಕಾರ್ಪೋರೇಟ್ ಶ್ರೇಷ್ಠತೆಗೆ ‘ಎಕಾನಾಮಿಕ್ ಟೈಮ್’ ಪತ್ರಿಕೆಯ ಪ್ರಶಸ್ತಿ.

* ‘ಏಷ್ಯಾ ಮನಿ ಪೋಲ್’ನಲ್ಲಿ ೧೯೯೬, ೧೯೯೭ ಮತ್ತು ೧೯೯೮ರಲ್ಲಿ ಭಾರತದ `ಬೆಸ್ಟ್ ಮ್ಯಾನೇಜ್ಡ್ ಕಂಪೆನಿ’ ಎಂಬ ಗೌರವ.

* ಅಮೆರಿಕದ ಪ್ರತಿಷ್ಠಿತ ಷೇರು ವಿನಿಮಯ ಕೇಂದ್ರವಾದ `ನಾಸ್‌ಡಾಕ್’ನಲ್ಲಿ ಇನ್‌ಫೋಸಿಸ್ ಷೇರುಗಳ ನೋಂದಣಿ-ನಾಸ್‌ಡಾಕ್ ಪ್ರವೇಶಿಸಿದ ಪ್ರಪ್ರಥಮ ಭಾರತೀಯ ಕಂಪೆನಿ ಎಂಬ ಹೆಗ್ಗಳಿಕೆ.

* ವಿಶ್ವದ ೩೦೦ ಅತ್ಯುತ್ತಮ ಸಣ್ಣ ಉದ್ಯಮಗಳನ್ನು ಕುರಿತು `ಫೋರ್ಬ್ಸ್’ ಪತ್ರಿಕೆ ತಯಾರಿಸಿರುವ ಪಟ್ಟಿಯಲ್ಲಿ ಸೇರ್ಪಡೆ.

* ವಿಶ್ವದ ಅತ್ಯುತ್ತಮ ೫೦೦ ಸಾಫ್ಟ್‌ವೇಪ್ ಕಂಪೆನಿಗಳ ಮೊದಲ ನೂರರ ಪಟ್ಟಿಯಲ್ಲಿ ಸೇರ್ಪಡೆ.

* ‘ಬಿಸಿನೆಸ್ ಇಂಡಿಯಾ’ ಪತ್ರಿಕೆಯ ೧೯೯೯ರ ‘ಬಿಸಿನೆಸ್ ಮ್ಯಾನ್’ ಆಗಿ ಇನ್‌ಫೋಸಿಸ್ ಅಧ್ಯಕ್ಷ ಎನ್. ಆರ್. ನಾರಾಯಣಮೂರ್ತಿ ಆಯ್ಕೆ.

* ನಾರಾಯಣಮೂರ್ತಿ ಅವರಿಗೆ ‘ಡಾಟಾಕ್ವೆಸ್ಟ್’ ಪತ್ರಿಕೆಯಿಂದ ಮಾಹಿತಿ ತಂತ್ರಜ್ಞಾನದ ವರ್ಷದ ವ್ಯಕ್ತಿ ಪ್ರಶಸ್ತಿ (೧೯೯೬).

* ನಾರಾಯಣಮೂರ್ತಿ ಅವರಿಗೆ ಜೆ. ಆರ್. ಡಿ. ಟಾಟಾ ಉದ್ಯಮ ನಾಯಕತ್ವ ಪ್ರಶಸ್ತಿ.

* ಈ ವರ್ಷದ ಭಾರತ ಸರಕಾರದಿಂದ `ಪದ್ಮಶ್ರೀ’ ಪ್ರಶಸ್ತಿಗೆ ಎನ್. ಆರ್. ನಾರಾಯಣಮೂರ್ತಿ ಆಯ್ಕೆ. ಅವರಿಗೆ ವೈಯಕ್ತಿಕವಾಗಿ ಮತ್ತು ಉದ್ಯಮಪತಿಯಾಗಿ ಇನ್ನೂ ಅನೇಕ ಪ್ರಶಸ್ತಿಗಳು ಸಂದಿವೆ. ತನ್ನ ಸಮಾಜ ಸೇವಾ ಕಾರ್ಯಗಳಿಗೆ `ಇನ್‌ಫೋಸಿಸ್ ಪ್ರತಿಷ್ಠಾನವೂ ಹಲವು ಪ್ರಶಸ್ತಿಗಳನ್ನು ಗಳಿಸಿದೆ.

* ಎನ್. ಆರ್. ನಾರಾಯಣಮೂರ್ತಿಯವರಿಗೆ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (೧೯೯೯).

* ಸುಧಾಮೂರ್ತಿಯವರಿಗೆ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (೨೦೦೦).

ಛಲ, ಶ್ರದ್ಧೆಗಳ ಹಾಗೆ ವಿನಯ, ಸಂಕೋಚಗಳೂ ನಾರಾಯಣಮೂರ್ತಿ ಅವರ ಹುಟ್ಟುಗುಣಗಳು. ಕನ್ನಡ ಸಾಹಿತಿಗಳು ಬಹಳವಾಗಿ ಹೊಗಳುವ ‘ಮೈಸೂರು ನಯ’ವನ್ನು ಕಾಣಬೇಕಾದರೆ ಅವರ ಜತೆ ಸ್ವಲ್ಪ ಹೊತ್ತು ಮಾತನಾಡಿದರಾಯಿತು. ಯಶಸ್ಸನ್ನು ತಲೆಗೇರಿಸಿಕೊಳ್ಳದ, ಅಹಂಕಾರವನ್ನು ಹತ್ತಿರ ಸುಳಿಯಗೊಡದ ಈ ಸರಳ ವ್ಯಕ್ತಿ, ಮಾಹಿತಿ ತಂತ್ರಜ್ಞಾನದ ಸಂಕೀರ್ಣ ಜಗತ್ತಿನ ‘ಸಾಫ್ಟ್‌ವೇರ್ ಸಂತ’. ನಾರಾಯಣಮೂರ್ತಿ ಅವರು ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಸಾಧಿಸಿರುವ ಎಲ್ಲ ಯಶಸ್ಸುಗಳಿಗಿಂತ ಪ್ರಶಸ್ತವಾದದ್ದು ಸರಳತೆಯನ್ನು ಕಾದುಕೊಳ್ಳುವುದರಲ್ಲಿ ಅವರು ಸಾಧಿಸಿರುವ ಯಶಸ್ಸು. ಏಕೆಂದರೆ ಸಾಮಾನ್ಯರಾಗಿ ಯಶಸ್ಸಿನ ಲೋಕವೆಂಬುದು “ಸಿರಿಗರ ಹೊಡೆದವರ” ಸಂತೆ.

“ನ್ಯಾಯಬದ್ಧವಾಗಿ ಮತ್ತು ನೀತಿಬದ್ಧವಾಗಿ” ಕೊಟ್ಯಂತರ ರೂಪಾಯಿಗಳನ್ನು ಗಳಿಸಿದ್ದರೂ ನಾರಾಯಣಮೂರ್ತಿ ಅವರ ಮಧ್ಯಮವರ್ಗದ ಸರಳ ಜೀವನ ಶೈಲಿ ಕಿಂಚಿತ್ತೂ ಬದಲಾಗಿಲ್ಲ. ಬೆಂಗಳೂರಿನ ಜಯನಗರದಲ್ಲಿರುವ ತಮ್ಮ ಹಳೆಯ ಎರಡು ಬೆಡ್‌ರೂಮ್‌ಗಳ ಮನೆಯಲ್ಲೇ ಇಂದಿಗೂ ವಾಸವಾಗಿರುವ ಅವರ ಜೀವನ ಅಬ್ಬರ, ಆಡಂಬರಗಳಿಂದ ಬಹಳ ದೂರ. ಮನೆಯಲ್ಲಿದ್ದರೆ ಮೂರ್ತಿ ತಮ್ಮ ಹೆಂಡತಿ ಸುಧಾ ಜತೆಗೆ ಮನೆಗೆಲಸಗಳನ್ನೂ ಮಾಡುತ್ತಾರೆ. ಸ್ನಾನದ ಕೋಣೆ, ಕಮೋಡ್‌ಗಳನ್ನು ಅವರೇ ತೊಳೆಯುತ್ತಾರೆ. ತಾವು ಊಟ ಮಾಡಿದ ತಟ್ಟೆಯನ್ನು ಇನ್ನೊಬ್ಬರು ತೊಳೆಯುವುದನ್ನು ಇಷ್ಟ ಪಡುವುದಿಲ್ಲ. ಮೂರ್ತಿ ಮಲಗಿದ ಹಾಸಿಗೆಯನ್ನು ಬೆಳಗ್ಗೆ ತಾವೇ ಸರಿಪಡಿಸುವ ಅಭ್ಯಾಸದವರು. ಈ ಸಾಫ್ಟ್‌ವೇರ್ ಕುಬೇರನ ಮನೆಯಲ್ಲಿ ಕೆಲಸದಾಳುಗಳಿಲ್ಲ. ಏಕೆಂದರೆ ಕಚೇರಿ ಕೆಲಸದಂತೆ ಮನೆಗೆಲಸವೂ ಅವರ ಜೀವನಶ್ರದ್ಧಯ ಒಂದು ಭಾಗ.

ಉದ್ಯಮರಂಗದ ವ್ಯವಹಾರಕ್ಕೆ ಅಗತ್ಯವಾದಷ್ಟು ಮಾತ್ರ ಉಡುಪುಗಳನ್ನು ಹೊಂದಿರುವ ನಾರಾಯಣಮೂರ್ತಿ ಅವರು ಧರಿಸಿರುವ `ಆಭರಣ’ಗಳೆಂದರೆ ಗಡಿಯಾರ ಮತ್ತು ಕನ್ನಡಕ ಮಾತ್ರ. ಅಷ್ಟು ಬಿಟ್ಟರೆ ಚಿನ್ನ, ಬೆಳ್ಳಿಯನ್ನು ಅವರು ಮುಟ್ಟಿದವರೇ ಅಲ್ಲ. ಜಗತ್ ಸಂಚಾರಿಯಾಗಿದ್ದರೂ ಅವರ ಮನಸ್ಸು ಸದಾ ಬಯಸುವುದು ರುಚಿಯಾದ ಮೈಸೂರು ಅಡುಗೆಯನ್ನು. ಸಿಗರೇಟ್ ಮೊದಲಾದ ದುಶ್ಚಟಗಳು ಗೊತ್ತಿಲ್ಲದ ಮೂರ್ತಿ ಅವರು ಕ್ಲಬ್‌ಗಳು, ಪಾರ್ಟಿಗಳಲ್ಲಿ ಕಾಲ ಕಳೆಯುವ ಜಾಯಮಾನದವರಲ್ಲ. ಆದ್ದರಿಂದಲೇ `ಕಾರ್ಪೊರೇಟ್ ಗಾಂಧಿ’ ಎಂಬ ಬಿರುದು ಅವರಿಗೆ ಸಂದಿದೆ.

ಆಡಂಬರದ ಪೂಜೆಯನ್ನು ನಿರಾಕರಿಸುವ ನಾರಾಯಣಮೂರ್ತಿ ಅವರಿಗೆ ದೇವರಲ್ಲಿ ನಂಬಿಕೆಯಿದೆ. ಪೂಜೆಗಿಂತ ದಾನಧರ್ಮದಲ್ಲಿ ಅವರಿಗೆ ದಟ್ಟವಾದ ನಂಬಿಕೆ. ಹೇರಳ ಸಂಪತ್ತು ಇದ್ದರೂ ನಾರಾಯಣಮೂರ್ತಿ ಮತ್ತು ಸುಧಾ ಇಬ್ಬರೂ ನಡೆಸುತ್ತಿರುವ ಸರಳ ಜೀವನ ನಮ್ಮ ಕಾಲದ ಅಚ್ಚರಿಗಳಲ್ಲೊಂದು. ಅವರ ಗಳಿಕೆಯ ಬಹುಪಾಲು ದಾನಕ್ಕೆ ವಿನಿಯೋಗವಾಗುತ್ತದೆ. “ನನ್ನ ಎಲ್ಲ ಹಣ ದಾನಧರ್ಮಗಳಿಗೆ ಮೀಸಲು” “ದ ಪವರ್ ಆಫ್ ಮನಿ ಈಸ್ ದ ಪವರ್ ಟು ಗಿವ್” ಎಂಬುದು ನಾರಾಯಣಮೂರ್ತಿ ಅವರ ನಂಬಿಕೆ. “ಇಷ್ಟೊಂದು ಹಣಕ್ಕೆ ನಾವು ಟ್ರಸ್ಟಿಗಳು ಮಾತ್ರ, ಅದು ಸೇರಬೇಕಾದದ್ದು ಸಮಾಜಕ್ಕೆ” ಎಂದು ಸುಧಾಮೂರ್ತಿ ಹೇಳುತ್ತಾರೆ.

[http://vishvakannada.com/node/120|ನಾರಾಯಣ ಮೂರ್ತಿ ಸಂದರ್ಶನ]

ವಿಳಾಸ: ಎನ್. ಆರ್. ನಾರಾಯಣಮೂರ್ತಿ, ಇನ್‌ಫೋಸಿಸ್ ಟೆಕ್ನಾಲೋಜಿಸ್ ಲಿಮಿಟೇಡ್, ೪೪, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ, ಬೆಂಗಳೂರು-೫೬೧೨೨೯, ಭಾರತ.
ವೆಬ್‌ಸೈಟ್: [http://www.infy.com|www.infy.com]

ಲೇಖಕರ ವಿಳಾಸ: ಡಾ| ಆರ್. ಪೂರ್ಣಿಮಾ, ಸುದ್ದಿ ಸಂಪಾದಕರು, [http://www.udayavani.com|ಉದಯವಾಣಿ], ಮಣಿಪಾಲ್ ಟವರ್‍ಸ್, ಡಿಕೆನ್‌ಸನ್ ರಸ್ತೆ, ಬೆಂಗಳೂರು-೫೬೦೦೦೧.

(೨೦೦೧)

Leave a Reply