ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರ ಸಂದರ್ಶನ
ಋಷಿವಾಕ್ಯದೊಡನೆ ವಿಜ್ಞಾನ ಎಂಬ ಧ್ಯೇಯದೊಂದಿಗೆ ವಿಶ್ವಕನ್ನಡವು ಸುಮಾರು ಹತ್ತು ವರ್ಷಗಳ ಹಿಂದೆ ಅಂದರೆ ೧೯೯೬ರಲ್ಲಿ ಪ್ರಾರಂಭವಾಯಿತು. ಜೀವನದ ಅಂತಿಮ ಗುರಿ ಮೋಕ್ಷಸಾಧನೆ. ಮೋಕ್ಷಕ್ಕೆ ಸಾಧನೆ ಮಾಡಲು ದೇಹದ ಅಗತ್ಯ ಇದೆ. ದೇಹವನ್ನು ಸುಸ್ಥಿತಿಯಲ್ಲಿಡಲು ವಿಜ್ಞಾನ ಬೇಕು. ಇದನ್ನೇ ಡಿವಿಜಿಯವರು ಹೇಳಿದ್ದು. ಜನಸಾಮಾನ್ಯರಿಗೆ ದಾರಿದೀಪವಾಗಿ ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಸ್ವಾಮೀಜಿಯವರಿದ್ದಾರೆ. ಇವರು ಮಠದ, ಪೀಠದ ಸ್ವಾಮಿಯಾಗಿ ಮಾತ್ರವಲ್ಲ, ಹಲವು ಜನಪರ, ಪರಿಸರಪರ ಕಾರ್ಯಗಳಿಂದ ಖ್ಯಾತರಾಗಿದ್ದಾರೆ. ಹೊಸನಗರ ರಾಮಚಂದ್ರಾಪುರ ಮಠ, ಶ್ರೀ ಗುರುಗಳ ಕ್ರಿಯಾಯೋಜನೆಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ಮಠದ ಜಾಲತಾಣದಲ್ಲಿ ಓದಬಹುದು. ಶ್ರೀ ಶ್ರೀ ರಾಘವೇಶ್ವರ ಸ್ವಾಮೀಜಿಯವರನ್ನು ಸಂದರ್ಶಿಸಿ ವಿಶ್ವಕನ್ನಡದ ಓದುಗರ ಪರವಾಗಿ ಕೆಲವು ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಬೇಕೆಂದು ಬಹುದಿನಗಳಿಂದ ಅಂದುಕೊಂಡಿದ್ದೆ. ಅದು ಇತ್ತೀಚೆಗೆ ಈಡೇರಿತು. ಸಂದರ್ಶನ ಇಲ್ಲಿದೆ.
ಪವನಜ: ವಿಶ್ವ ಕನ್ನಡದ ಓದುಗರ ಪರವಾಗಿ ಶ್ರೀ ಶ್ರೀ ರಾಘವೇಶ್ವರ ಸ್ವಾಮೀಜಿಯವರಿಗೆ ಪ್ರಣಾಮಗಳು. ಕೆಲವು ಪ್ರಶ್ನೆಗಳನ್ನು ಒಂದೊಂದಾಗಿ ಕೇಳುತ್ತೇನೆ. ಮೊದಲನೆಯದಾಗಿ ಶ್ರೀ ಮಠದ ಯೋಜನೆಗಳ ಬಗ್ಗೆ ನಮ್ಮ ಓದುಗರಿಗೆ ಸಂಕ್ಷಿಪ್ತವಾಗಿ ತಿಳಿಸಬೇಕಾಗಿ ವಿನಂತಿ.
ಸ್ವಾಮೀಜಿ: ಹರೆ ರಾಮ್. ಮಠದ ಉಗಮವಾಗಿದ್ದು ಅಶೋಕ ಎಂಬ ಸ್ಥಳದಲ್ಲಿ. ಅದರ ಸಂಕೇತ ಈ ಜಗತ್ತು ಅಶೋಕವಾಗಬೇಕು, ಶೋಕರಹಿತವಾಗಬೇಕು ಎಂದು. ಶಂಕರಾಚಾರ್ಯರು ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ಕುಳಿತಿದ್ದಾಗ, ಆ ಅಶೋಕ ಎಂಬ ಸ್ಥಳದಲ್ಲಿ, ತಬ್ಬಲಿ ಜಿಂಕೆಮರಿಗೆ ಹೆಬ್ಬುಲಿಯೊಂದು ಹಾಲುಣಿಸಿದ್ದನ್ನು ಕಂಡರು. ಅದನ್ನು ಕಂಡ ಶಂಕರಾಚಾರ್ಯರು ಅಲ್ಲಿ ಮಠವನ್ನು ಸ್ಥಾಪನೆ ಮಾಡಿದರು. ಹಾಗಾಗಿ ಎರಡು ಸಂದರ್ಭಗಳು. ಒಂದು ಅಶೋಕ ಎನ್ನುವ ಹೆಸರು. ಇನ್ನೊಂದು ಆ ನಿಸರ್ಗದ ವೈರಿಗಳ ಸಂಯೋಜನೆ, ಸಂಘಟನೆ. ಈ ಎರಡರ ತಾತ್ಪರ್ಯ ಇಷ್ಟೆ. ಜಗತ್ತು ಶೋಕರಹಿತವಾಗಬೇಕು. ಜಗತ್ತು ವೈರಮುಕ್ತವಾಗಬೇಕು. ಸಹಬಾಳ್ವೆ ಮತ್ತು ಸಂತೋಷ. ಮಠದ ಪ್ರಧಾನ ಧ್ಯೇಯಗಳು ಇವೆರಡು. ಇದನ್ನು ಸಾಧನೆ ಮಾಡಲಿಕ್ಕೆ ಅನೇಕ ಯೋಜನೆಗಳಿವೆ. ಅದರಲ್ಲಿ ಎರಡು ಮುಖ್ಯ ಸಂಗತಿಗಳ ಬಗ್ಗೆ ನಿಮ್ಮೆದುರಿಗೆ ನಾವು ಪ್ರಸ್ತಾಪ ಮಾಡಲಿಕ್ಕೆ ಇಷ್ಟಪಡುತ್ತೇವೆ. ಅದರಲ್ಲಿ ಒಂದು ಕಾಮದುಘಾ. ಕಾಮದುಘಾ ಅಂದರೆ ಕೇಳಿದ್ದನ್ನು ಕೊಡಬಲ್ಲಂತಹ ಗೋಮಾತೆ. ಆ ಗೋಮಾತೆಯ ರಕ್ಷಣೆಗಾಗಿ ಒಂದು ಅಪರೂಪದ ಯೋಜನೆ. ಗೋತಳಿಗಳು ಜಗತ್ತಿನಲ್ಲಿ ಅನೇಕ ಇವೆ. ಭಾರತದಲ್ಲಿ ನೂರಾರು ಇದ್ದುವು. ಈಗ ಗೊತ್ತಿರುವಂಥ ತಳಿಗಳು ಕೇವಲ ಮೂವತ್ತು ಮಾತ್ರ. ಅವು ಕೂಡ ನಶಿಸುತ್ತಾ ಇವೆ. ಹಾಗಾಗಿ ಅಳಿವಿನ ಅಂಚಿನಲ್ಲಿರತಕ್ಕಂತಹ ವಿಶಿಷ್ಟ ಭಾರತೀಯ ಗೋತಳಿಗಳನ್ನ ಸಂರಕ್ಷಣೆ ಮಾಡಿ, ಸಂವರ್ಧನೆ ಮಾಡಿ ಅವುಗಳ ಬಗ್ಗೆ ಸಂಶೋಧನೆ ಮಾಡಿ, ಸಂಭೋಧನೆ, ಜಾಗೃತಿ -ಈ ನಾಲ್ಕು ಮಹದುದ್ದೇಶಗಳನ್ನು ಒಳಗೊಂಡಿರುವಂತಹ ಯೋಜನೆ ಕಾಮದುಘಾ. ಇನ್ನೊಂದು ಶ್ರೀ ಭಾರತೀ ಗುರುಕುಲ ವಿಶ್ವವಿದ್ಯಾಲಯ. ಪ್ರಾಚೀನ ಭಾರತದಲ್ಲಿ ಇದ್ದಂತಹ ಹದಿನಾಲ್ಕು ವಿದ್ಯಾಸ್ಥಾನಗಳ ವಿಕಾಸಕ್ಕೆ. ನಾಲ್ಕು ವೇದಗಳು. ಆರು ವೇದಾಂಗಗಳು. ನಾಲ್ಕು ಉಪವೇದಗಳು, ಆಯುರ್ವೇದ, ಧನುರ್ವೇದ, ಗಾಂಧರ್ವ ವೇದ ಮತ್ತು ಅರ್ಥಶಾಸ್ತ್ರ. ಅರುವತ್ತನಾಲ್ಕು ಕಲೆಗಳು. ಅದರಲ್ಲಿ ವಾಸ್ತು, ಶಿಲ್ಪ, ಚಿತ್ರ ಇವೆಲ್ಲವೂ ಬಂತು. ಸಂಗೀತ, ವಾದ್ಯ ಈ ಎಲ್ಲವನ್ನೂ ಕೊಡತಕ್ಕಂತಹ ಪ್ರಾಚೀನ ಭಾರತೀಯ ಎಲ್ಲ ವಿದ್ಯೆ ಕಲೆಗಳನ್ನು ಒಂದೆಡೆ ಕಲಿಸತಕ್ಕಂತಾದ್ದು. ಸಂಸ್ಕಾರವಂತ ಪ್ರಯೋಗಗಳನ್ನು ನಿರ್ಮಾಣ ಮಾಡತಕ್ಕಂಥ ಬೃಹತ್ ಯೋಜನೆ ಶ್ರೀ ಭಾರತೀ ಗುರುಕುಲ ವಿಶ್ವವಿದ್ಯಾಲಯ. ಇಂತಹ ಅನೇಕ ಉಪಕ್ರಮಗಳನ್ನು ಮಠ ಕೈಕೊಂಡಿದೆ. ಗುರಿ ದೊಡ್ಡದು. ಪ್ರಯತ್ನ ಬಹಳ ಸಣ್ಣದು. ಮಹಾಜನತೆ ನಮ್ಮೊಂದಿಗಿದ್ದರೆ ಭಗವಂತನ ಕೃಪೆಯದ್ದರೆ ಜಗತ್ತನ್ನು ಶೋಕಮುಕ್ತವಾಗಿ ವೈರಮುಕ್ತವನ್ನಾಗಿ ಮಾಡಬಹುದು ಎನ್ನುವ ಆಶಾಭಾವನೆ.
ಪವನಜ: ಈಗಿನ ಈ ಬದಲಾಗುತ್ತಿರುವ ಸಮಾಜದಲ್ಲಿ ಇಂದಿನ ಕಲಿಯುಗ ಅಂತ ಹೇಳ್ತಾರಲ್ಲ ಈ ಪರಿಸ್ಥಿತಿಯಲ್ಲಿ ಈ ಮಠಗಳ ಕಾರ್ಯ, ಉದ್ದೇಶ ಏನು ? ಅವು ಹೇಗೆ, ಎಷ್ಟು ಪ್ರಸ್ತುತ ?
ಸ್ವಾಮೀಜಿ: ಕತ್ತಲೆ ಇದ್ದಾಗ ದೀಪದ ಅಗತ್ಯ ಜಾಸ್ತಿ. ಕಡಿಮೆಯಲ್ಲ. ಹಾಗಾಗಿ ಒಂದು ವೇಳೆ ಕಾಲ ವಿಷಮವಾಗಿದ್ದರೆ ಅದರ ಅರ್ಥ ನಮ್ಮ ಕಾರ್ಯ ಇನ್ನೂ ಹೆಚ್ಚಾಗಿದೆ ಅಂತ. ನಮ್ಮ ಅಗತ್ಯ, ನಮ್ಮ ಕಾರ್ಯ, ನಮ್ಮ ಜವಾಬ್ದಾರಿ ಜಾಸ್ತಿ ಆಗಿದೆ ಅಂತ. ಹಾಗಾಗಿ ಇಂದು ಮಠಗಳು ಹೆಚ್ಚು ಹೆಚ್ಚು ಪ್ರಸ್ತುತ.
ಪವನಜ: ತಾವು ಸಮಕಾಲೀನ ಪ್ರಜ್ಞೆಯನ್ನು ತುಂಬಾ ತೋರ್ಪಡಿಸಿಕೊಳ್ಳುತ್ತಾ ಇದ್ದೀರಿ. ಉದಾಹರಣೆಗೆ ಪರಿಸರ ಹೋರಾಟ. ಇದರಲ್ಲಿ ತಮ್ಮ ಭಾಗವಹಿಸುವಿಕೆಯನ್ನು ನಮಗೆ ಸ್ವಲ್ಪ ವಿವರಿಸುತ್ತೀರಾ ?
ಸ್ವಾಮೀಜಿ: ಕನ್ನಡದಲ್ಲಿ ಒಂದು ಗಾದೆ ಇದೆ. ಬಡವ ನೀ ಮಡಿಗಿದಂಗಿರು. ಒಂದು ಗ್ರಾಮೀಣ ಗಾದೆ ಇದು. ನಾವೆಲ್ಲರೂ ಬಡವರೆ. ಪ್ರಕೃತಿ ಶ್ರೀಮಂತ. ಆದರೆ ಅದು ಹೇಗಿಟ್ಟಿದೆಯೋ ಹಾಗಿರಬೇಕು ನಾವು. ಅದನ್ನು ಅಸ್ತವ್ಯಸ್ತ ಮಾಡಲಿಕ್ಕೆ ಹೋದರೆ ಸಮಸ್ಯೆಗಳ ಮಾಲಿಕೆಯೇ ನಮ್ಮೆದುರಿಗೆ ಬರುತ್ತದೆ. ಚಿನ್ನದ ಮೊಟ್ಟೆ ಇಡುವ ಕೋಳಿ ಪ್ರಕೃತಿ .ನಾವು ನಿತ್ಯ ಒಂದೊಂದೇ ಮೊಟ್ಟೆ ತೆಗೆದುಕೊಳ್ಳುವ ಬದಲು ಒಂದೇ ದಿನ ಕಡಿದು ಒಮ್ಮೆಲೇ ತಿಂದು ಬಿಡುವ ಅಂತ ತೆಗೆದುಕೊಂಡು ಹೋದರೆ ನಾಳೆ ನಮಗೆ ಏನೂ ಇರುವುದಿಲ್ಲ. ಆದುದರಿಂದ ಪ್ರಕೃತಿಯ ಸಂರಕ್ಷಣೆ ಮನುಷ್ಯನ ಮೂಲಭೂತವಾದ ಆವಶ್ಯಕತೆ. ಅದರ ಜೊತೆ ನಾವಿದ್ದೇವೆ.
ಪವನಜ: ಪರಿಸರ ಸಂರಕ್ಷಣೆ, ಪರಿಸರವಾದಿಗಳ ವಿರೋಧವಾಗಿ ದೊಡ್ಡದೊಡ್ಡ ಯೋಜನೆಗಳನ್ನು ನಡೆಸುವವರ ವಾದವೇನೆಂದರೆ ಇದಕ್ಕೆ ಪರ್ಯಾಯವೇನು? ಅಂತ. ಉದಾಹರಣೆಗೆ ತದಡಿ ಯೋಜನೆ ಇದೆ. ಪರ್ಯಾಯ ಏನು. ನಮಗೆ ವಿದ್ಯುತ್ತು ಬೇಕೇ ಬೇಕು. ಅದಕ್ಕೆ ಪರ್ಯಾಯ ಏನು ಅಂತ ಅವರು ಕೇಳಿಯೇ ಕೇಳ್ತ್ತಾರೆ. ಅದಕ್ಕೆ ತಾವು ಏನು ಹೇಳ್ತೀರಿ?
ಸ್ವಾಮೀಜಿ: ತದಡಿ ಪರಾಮರ್ಶೆಯಲ್ಲಿದೆ. ಒಂದು ಪರಿಣತರ ಸಮಿತಿ ಅದನ್ನು ಪರಾಮರ್ಶೆ ಮಾಡುತ್ತ ಇದೆ. ಹಾಗಾಗಿ ಅದರ ಬಗ್ಗೆ ಹೆಚ್ಚು ಮಾತನಾಡುವುದು ಸೂಕ್ತವಲ್ಲ. ಆದರೆ ಬದಲಿ ವ್ಯವಸ್ಥೆಯೂ ತುಂಬ ಇವೆ. ಈಗ ಸೌರವಿದ್ಯುತ್ ಇದೆ. ಅಥವಾ ಗಾಳಿಯಿಂದ ವಿದ್ಯುತ್ತನ್ನು ತಯಾರು ಮಾಡಬಹುದು. ಗೋವುಗಳಿಂದ ವಿದ್ಯುತ್ತನ್ನು ತಯಾರು ಮಾಡಬಹುದು. ಗೋವುಗಳ ಚಲನೆಯ ಮೂಲಕವಾಗಿ ಚಕ್ರ ತಿರುಗುವಂತೆ ಮಾಡಿ ವಿದ್ಯುತ್ತನ್ನು ತಯಾರು ಮಾಡಲಿಕ್ಕೆ ಸಾಧ್ಯ ಇದೆ. ಇಂತಹ ಪರಿಸರಕ್ಕೆ ಮಾರಕವಲ್ಲದ ಪರ್ಯಾಯ ಯೋಜನೆಗಳು ತುಂಬ ಇವೆ. ನಾವು ಅಭಿವೃದ್ಧಿಯನ್ನು ಒಪ್ಪುತ್ತೇವೆ. ಆದರೆ ವಿನಾಶದ ಮೂಲಕ ಅಭಿವೃದ್ಧಿಯಲ್ಲ.
ಪವನಜ: ಒಳ್ಳೆ ಮಾತು. ಅಂದರೆ ಈ ಚಿಕ್ಕ ಚಿಕ್ಕ ವಿದ್ಯುತ್ ಯೋಜನೆಗಳು ಮತ್ತು ಸೌರವಿದ್ಯುತ್ತಿನಂತಹ ಯೋಜನೆಗಳು ಬೇಕು ಅಂತ ನೀವು ಹೇಳುವುದು.
ಸ್ವಾಮೀಜಿ: ಹೌದು. ಒಳ್ಳೆ ಯೋಜನೆಗಳು. ಮತ್ತು ಎಲ್ಲಕಿಂತ ಹೆಚ್ಚಾಗಿ ಈಗ ಪೋಲಾಗುತ್ತಿರುವ ವಿದ್ಯುತ್ತನ್ನು ಉಳಿಸುವ ಮೂಲಕ ಕೂಡ ನಾವು ತುಂಬ ಸಾಧನೆ ಮಾಡಲಿಕ್ಕೆ ಸಾಧ್ಯವಿದೆ.
ಪವನಜ: ಅದು ಸರಿ. ಕೊಡಚಾದ್ರಿ ಹೋರಾಟದ ಬಗ್ಗೆ ಸ್ವಲ್ಪ ಹೇಳುತ್ತೀರಾ?
ಸ್ವಾಮೀಜಿ: ಅದೊಂದು ರೋಮಾಂಚಕವಾದ ಹೋರಾಟ. ಯಾಕೆಂದರೆ ಅಂಬಾರಗುಡ್ಡ ಕೊಡಚಾದ್ರಿಯಲ್ಲೇ ಎರಡನೇ ಶಿಖರ ಅದು. ಚಿಕ್ಕಂದಿನಿಂದ ಆ ಗುಡ್ಡವನ್ನು ನೋಡುತ್ತಾ ಆಡುತ್ತಾ ಬೆಳೆದವರು ನಾವು. ಆದರೆ ಒಂದು ದಿನ ಇದ್ದಕ್ಕಿದ್ದ ಹಾಗೆ ನಮಗೆ ಗೊತ್ತಾಯಿತು ಆ ಗುಡ್ಡವೇ ಇಲ್ಲವಾಗಿ ಬಿಡುತ್ತದೆ ಅಂತ. ಇಡಿಯ ಪರ್ವತವನ್ನೇ ನೆಲಮಟ್ಟಕ್ಕೆ ತಂದು ಬಿಡುತ್ತಾರೆ ಅಂತ. ಇಡೀ ಪ್ರದೇಶ ನರಕಮಯವಾಗುತ್ತದೆ. ಯಾಕೆಂದರೆ ಆ ಗುಡ್ಡ ಮೋಡಗಳನ್ನು ತಡೆದು ಮಳೆ ತರುತ್ತಿತ್ತು. ಆ ಗುಡ್ಡದ ಸುತ್ತಮುತ್ತ ಎಲ್ಲ ಜಲಧಾರೆ ಇತ್ತು. ಆ ಗುಡ್ಡದಲ್ಲಿ ಅಪರೂಪದ ಸಸ್ಯಸಂಕುಲವಿತ್ತು. ಪ್ರಾಣಿಸಂಕುಲ ಇತ್ತು. ಆದರೆ ಅದನ್ನು ಆಗಲೆ ಆಂಶಿಕವಾಗಿ ಅದನ್ನು ಹಾಳುಗೆಡವಿ ಆಗಿತ್ತು. ಅತ್ಯಂತ ಹಿಂದುಳಿದ ಪ್ರದೇಶ ಅದು. ವಾಹನ ಸೌಕರ್ಯಗಳಾಗಲಿ, ಆಡಳಿತ ವ್ಯವಸ್ಥೆಗಳಾಗಲಿ ಇಲ್ಲದಂಥಹಾ ಪ್ರದೇಶ ಅದು. ಜನರು ಕೂಡಾ ಮುಗ್ಧರು. ಹೋಗಿ ಯಾರನ್ನಾದರೂ ಮಾತನಾಡಿಸುತ್ತಿದ್ದಾಗ ಸಿಕ್ಕ ಪ್ರತಿಕ್ರಿಯೆ ಅತ್ಯದ್ಭುತ. ಈಗ ಸಂಪೂರ್ಣವಾಗಿ ಆ ಯೋಜನೆಯನ್ನು ಬಿಟ್ಟು ಅಲ್ಲಿಂದ ಕಾಲ್ತೆಗೆದಿದ್ದು. ಗಣಿಗಾರಿಕೆ ಕೂಡ ಸಂಪೂರ್ಣವಾಗಿ ನಿಂತಿದೆ. ಪರಿಸರ ಹೋರಾಟಕ್ಕೆ ಸಂದಂತಹ ಒಂದು ಮಹಾ ವಿಜಯ ಇದು.
ಪವನಜ: ತುಂಬಾ ಸಂತೋಷದ ಸುದ್ದಿ . ಇಂದಿನ ಬದಲಾಗುತ್ತಿರುವ ಸಮಾಜದಲ್ಲಿ ಮಠಗಳ ಪಾತ್ರದ ಬಗ್ಗೆ ನಮಗೆ ಮಾತನಾಡಿ ಆಯಿತು. ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು. ಇಂದಿನ ಸಮಾಜ ಸುಧಾರಣೆಯಲ್ಲಿ ಮಠಗಳ ಪಾತ್ರ. ಅಂದರೆ ಈ ಸಮಾಜ ಬದಲಾಗುತ್ತಿದೆ. ಉದಾ: ವಿಧವಾ ವಿವಾಹ ಇತ್ಯಾದಿಗಳ ಬಗ್ಗೆ ತಮ್ಮ ಅಭಿಪ್ರಾಯ, ಪ್ರೋತ್ಸಾಹ ಬಗ್ಗೆ ಸ್ವಲ್ಪ ಹೇಳುತ್ತೀರಾ ?
ಸ್ವಾಮೀಜಿ: ಒಂದೊಂದೇ ವಿಷಯಕ್ಕೆ ಬರುವುದಕ್ಕಿಂತ ಸಾಮಾನ್ಯವಾಗಿ ಹೇಳುವುದೇನೆಂದರೆ ಬದಲಾಗುವ ವಾತಾವರಣಕ್ಕೆ ಹೊಂದಿಕೊಳ್ಳುವ ಪ್ರಾಣಿಗಳು ಮಾತ್ರ ಉಳಿದಿವೆ. ಯಾವ ಪ್ರಾಣಿಗಳಿಗೆ ಹೊಂದಾಣಿಕೆ ಆಗಿಲ್ಲ ಅಂತವುಗಳು ಉಳಿದಿಲ್ಲ. ಉದಾ: ಜಿರಾಫೆ ಉಳಿದಿದೆ. ಡೈನೋಸಾರಸ್ ಉಳಿದಿಲ್ಲ. ಯಾಕೆ ಉಳಿದಿಲ್ಲ ಅಂದರೆ ಬದಲಾಗುವ ವಾತವರಣಕ್ಕೆ ಅವು ಹೊಂದಿಕೊಂಡಿಲ್ಲ. ಅದಕ್ಕೆ ಬದಲಾವಣೆ ಕೇವಲ ಬದಲಾವಣೆಗಾಗಿ ಇರಬಾರದು. ಬದಲಾವಣೆಗೆ ಅದಕ್ಕೇ ಆದಂತಹಾ ದೃಷ್ಟಿಕೋನಗಳಿರಬೇಕು.
ಪವನಜ: ಈಗ ಸದ್ಯ ಪ್ರಚಲಿತವಾದ ವಿಷಯ ಅಂದರೆ ಈ ಮೀಸಲಾತಿ. ಮೀಸಲಾತಿಯಿಂದ ಪ್ರತಿಭಾವಂತರಿಗೆ ಅದರಲ್ಲೂ ಮುಖ್ಯವಾಗಿ ಬ್ರಾಹ್ಮಣ ಸಮಾಜದವರಿಗೆ ತುಂಬಾ ತೊಂದರೆಯಾಗಿದೆ. ಇದರ ಬಗ್ಗೆ ಏನಾದರೂ ಹೇಳಲಿಕ್ಕೆ ಇಷ್ಟಪಡುತ್ತೀರಾ ?
ಸ್ವಾಮೀಜಿ: ನಮಗೆ ಅನಿಸುವ ಪ್ರಕಾರವಾಗಿ ಮೀಸಲಾತಿಯಿಂದ ಹೆಚ್ಚು ತೊಂದರೆಯಾಗಿರುವುದು ಹಿಂದುಳಿದವರಿಗೆ .
ಪವನಜ: ಯಾವರೀತಿ ?
ಸ್ವಾಮೀಜಿ: ಯಾಕೆಂದರೆ ಅವರಲ್ಲಿ ಆಲಸ್ಯ ಬೆಳೆಸುತ್ತದೆ ಈ ಮೀಸಲಾತಿ ಅನ್ನೋದು. ಅವರು ಪ್ರಯತ್ನ ಮಾಡವುದೇ ಇಲ್ಲ. ಪ್ರಯತ್ನ ಮಾಡದೇನೆ ಅವರಿಗೆಲ್ಲ ಫಲ ಸಿದ್ಧಿಯಾಗುತ್ತದೆ ಎಂದರೆ ಸೋಮಾರಿತನವನ್ನ, ಆಲಸಿತನವನ್ನು ಚೇತನಗೊಳಿಸುತ್ತದೆ. ಹಿಂದುಳಿದವರು ಯಾವಾಗಲೂ ಹಿಂದೇ ಇರಬೇಕು, ಆ ಕೀಳರಿಮೆ ಹಾಗೇ ಇರಬೇಕು –ಹಾಗೆ ಮಾಡಿಸುತ್ತದೆ. ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಬೇಕು .
ಪವನಜ: ತುಂಬಾ ಸರಿಯಾದ ಮಾತು. ಅಂದರೆ ಒಂದು ರೀತಿಯಲ್ಲಿ ಊರುಗೋಲು ಕೊಟ್ಟ ಹಾಗೆ ಆಯಿತು. ಊರುಗೋಲು ಇದ್ದವರಿಗೆ ಅದನ್ನು ಬಿಟ್ಟು ಹೋಗುವುದಕ್ಕೆ ಪ್ರಯತ್ನ ಪಡುವುದೇ ಇಲ್ಲ.
ಇನ್ನು ಸ್ವಲ್ಪ ಅಧ್ಯಾತ್ಮ ಅಥವಾ ಧಾರ್ಮಿಕ ಪ್ರಶ್ನೆಗಳು ಒಂದೆರಡು.
ಈ ಶ್ರಾದ್ಧ ದ ಬಗ್ಗೆ. ನಮ್ಮ ಹಿಂದೂ ಧರ್ಮದಲ್ಲಿ, ಭಗವದ್ಗೀತೆ ಪ್ರಕಾರ, ಹೇಳುವುದಿದ್ದರೆ ಆತ್ಮ ಅವಿನಾಶಿ. ದೇಹವನ್ನು ಬದಲಿಸುತ್ತದೆ. ಈ ಅವಿನಾಶಿಯಾದ ಆತ್ಮಕ್ಕೆ ದೇಹ ಬದಲಿಸಿ ಅದು ಇನ್ನೊಬ್ಬರ ದೇಹದಲ್ಲಿ ಹೋಗಿ ಸೇರಿಕೊಳ್ಳುತ್ತದೆ ಅಂತ ನಮ್ಮ ನಂಬಿಕೆ. ಅದಕ್ಕೆ ಈ ಶ್ರಾದ್ಧ ಮಾಡುವ ಅಗತ್ಯ ಏನು ಅಂತ. ಸಾಮಾನ್ಯವಾಗಿ ಮತ್ತೆ ಮತ್ತೆ ಈ ಪ್ರಶ್ನೆ ಬರುತ್ತದೆ. ಇದಕ್ಕೆ ನಮ್ಮ ಓದುಗರಿಗೆ ನೀವು ಉತ್ತರ ಕೊಟ್ಟರೆ ಚೆನ್ನಾಗಿರುತ್ತಿತ್ತು.
ಸ್ವಾಮೀಜಿ: ಶ್ರಾದ್ಧದಲ್ಲಿ ಭಗವಂತನ ಪೂಜೆಯನ್ನು ಮಾಡುತ್ತಾರೆ. ವಸು, ರುದ್ರ, ಆದಿತ್ಯ ಈ ಮೂರು ದೇವತೆಗಳ ರೂಪದಲ್ಲಿರುವಂತಹ ಭಗವಂತನಿಗೆ ಹವಿಸ್ಸನ್ನು ಅರ್ಪಣೆ ಮಾಡುತ್ತಾರೆ. ಶ್ರಾದ್ಧದಲ್ಲಿ ಯಾವರೂಪದಲ್ಲಿ ಭಗವಂತನಿಗೆ ಕೊಡಬಹುದೋ ಆ ರೂಪದಲ್ಲಿ ಕೊಡಬಹುದು. ನಾವು ನೇರವಾಗಿ ಅವರಿಗೇನೂ ಕೊಡಲಿಕ್ಕೆ ಸಾಧ್ಯವಿಲ್ಲದಿದ್ದರೂ ಕೂಡಾ ನಮ್ಮೊಡನೆ ಹಾಡಿ, ಪಾಡಿ ಬೆಳೆದು ಒಡನಾಡಿದಂತಹಾ ಅಳಿದು ಹೋದಂತಹಾ ಜೀವಕ್ಕೆ ನಮ್ಮ ಕಡೆಯಿಂದ ಒಂದು ಕೃತಜ್ಞತಾ ಸಮರ್ಪಣೆ ಇದ್ದ ಹಾಗೆ. ಅದು ಒಂದು ರೀತಿಯ ಪ್ರೀತಿಯ ಸಮರ್ಪಣೆ ಇದ್ದ ಹಾಗೆ. ಅದು ಭಗವಂತನ ಮೂಲಕ ಆದ್ದರಿಂದ ಅಲ್ಲಿ ನಮಗೆ ಏನೂ ದೋಷ ಕಾಣುವುದಿಲ್ಲ. ಒಂದು ರೀತಿಯಲ್ಲಿ ಆ ಜೀವದ ಸ್ಮರಣೆ. ಇನ್ನೊಂದು ರೀತಿಯಿಂದ ಅಲ್ಲಿ ತಾತ್ತ್ವಿಕತೆಯಿದೆ. ಎಲ್ಲವೂ ಭಗವಂತನಿಗೇ. ನಮ್ಮ ಸಂಸ್ಕೃತಿಯಲ್ಲಿ ಬದುಕಿರುವ ಗುರುಹಿರಿಯರಿಗೆ ನಮಸ್ಕಾರ ಮಾಡುವುದೂ ಕೂಡ ಹಾಗೆ. ಅದು ಅವರಿಗೆ ಸಲ್ಲುಚ ನಮಸ್ಕಾರ ಅಲ್ಲ. ಅಲ್ಲಿರುವಂತಹಾ ಪರಮಾತ್ಮನಿಗೆ, ಭಗವಂತನಿಗೆ ನಮಸ್ಕಾರ ಮಾಡುವಂತಹಾ ಒಂದು ತಾತ್ವಿಕ ಕಲ್ಪನೆ. ಹಾಗಾಗಿ, ಪಿತೃಕಾರ್ಯ ಇರಬಹುದು ದೇವಕಾರ್ಯ ಇರಬಹುದು ಅದೆಲ್ಲವನ್ನೂ ಸ್ವೀಕಾರ ಮಾಡುವವನು ಭಗವಂತ. ಒಂದು ಶ್ಲೋಕ
ಹವ್ಯಕವ್ಯ ಭುವೇಕಸ್ತುಂ ಪಿತೃದೇವೋ ಸ್ವರೂಪಸ್ತ್ವಂ
ಹವ್ಯ ಅಂದರೆ ದೇವತೆಗಳಿಗೆ ಕೊಡತಕ್ಕಂತಹಾ ಆವೃತ್ತಿ, ಕವ್ಯ ಹಸುಗಳಿಗೆ ಕೊಡತಕ್ಕಂತಹಾ ಆವೃತ್ತಿ. ಎರಡೂ ಸ್ವೀಕಾರ ಮಾಡುವವನು ನೀನೇ .
ಪವನಜ: ಅಧ್ಯಾತ್ಮಕ್ಕೆ ಸಂಬಂಧಪಟ್ಟಂತೆ ಇನ್ನೊಂದು ಪ್ರಶ್ನೆ. ಆತ್ಮಸಾಕ್ಷಾತ್ಕಾರಕ್ಕೆ ಸಂಬಂಧಿಸಿದಂತೆ. ಈ ಆತ್ಮಸಾಕ್ಷಾತ್ಕಾರ ಎಂದರೆ ಏನು? ಅದು ಯಾಕೆ ಬೇಕು? ಅದನ್ನು ಪಡೆಯುವುದು ಹೇಗೆ?
ಸ್ವಾಮೀಜಿ: ಜನ್ಮಜನ್ಮಗಟ್ಟಲೆ ಉತ್ತರ ಹೇಳಬೇಕಾದಂತಹ ಪ್ರಶ್ನೆ ಇದು. ಆತ್ಮಸಾಕ್ಷತ್ಕಾರ ಎಂದರೆ ಏನು ಎಂದರೆ ಸ್ವಪರಿಚಯ. ತನ್ನ ಪರಿಚಯವನ್ನು ಸಂಪೂರ್ಣವಾಗಿ ಅನುಭೂತಿ ಮೂಲಕ ಮಾಡಿಕೊಳ್ಳುವುದೇ ಆತ್ಮಸಾಕ್ಷಾತ್ಕಾರ. ಅದು ಹೇಗೆ ಪಡೆದುಕೊಳ್ಳಬೇಕು ಎಂದರೆ ಅಂತರ್ಮುಖಿಯಾಗುವ ಮೂಲಕವಾಗಿ. ಜಗತ್ತನ್ನು ನೋಡಿಕೊಂಡು ತನ್ನನ್ನು ನೋಡಿಕೊಳ್ಳಬೇಕು. ಜಗತ್ತನ್ನು ಕೇಳಬೇಕಾದುದನ್ನು ತನ್ನನ್ನು ಕೇಳಿಕೊಳ್ಳಬೇಕು. ಹೊರಕ್ಕೆ ಹರಿಯುವ ಮನಸ್ಸು ಒಳಕ್ಕೆ ತಿರುಗಬೇಕು. ಈ ಇಂದ್ರಿಯಗಳು ಹೊರಜಗತ್ತನ್ನು ನೋಡುತ್ತ ಇವೆ. ಇವು ಒಳಮುಖವಾಗಿ ತಿರುಗಿದರೆ ತನ್ನನ್ನು ತಾನು ತಿಳಿದುಕೊಳ್ಳಬಹುದು. ಮೂರನೆಯ ಪ್ರಶ್ನೆ ಅದರಿಂದ ಏನು ಪ್ರಯೋಜನ ಅಂತ. ಸ್ವರೂಪ ಲಾಭ ಪಡೆಯುವುದು. ಸ್ವರೂಪ ಲಾಭ ಎಂದರೆ ತನ್ನ ಮೂಲ ಸ್ವರೂಪ ತನಗೆ ಸಿಕ್ಕಿದರೆ ಅದಕ್ಕಿಂತ ಇನ್ನೇನು ಬೇಕು? ಯಾವುದು ನಿಜವಾಗಿ “ನಾನು” ಅದು ಸಿಕ್ಕಿದರೆ ಅದಕ್ಕಿಂತ ದೊಡ್ಡ ಲಾಭ ಯಾವುದು? ಆತ್ಮ ಲಾಭ ಆದ ಮೇಲೆ ತಾನೆ ಜಗತ್ತಿನ ಕಡೆ ನಮ್ಮ ದೃಷ್ಟಿ ಹರಿಯತಕ್ಕದ್ದು? ಹಾಗಾಗಿ ತನ್ನನ್ನು ತಾನು ಪಡೆಯುವುದೇ ಆತ್ಮ ಸಾಕ್ಷಾತ್ಕಾರದ ಪ್ರಯೋಜನ.
ಪವನಜ: ಕೊನೆಯದಾಗಿ ನಮ್ಮ ಓದುಗರಿಗೆ ತಮ್ಮ ಸಂದೇಶ. ಸ್ವಾಮೀಜಿ: “ವಿಶ್ವಕನ್ನಡ” ಪತ್ರಿಕೆಯ ಹೆಸರು ತುಂಬ ಅರ್ಥಪೂರ್ಣವಾಗಿದೆ. ಅದರಲ್ಲೇ ಸಂದೇಶ ಅಡಗಿದೆ. ನೀವು ವಿಶ್ವದಲ್ಲಿ ಒಂದಾಗಿ ಆದರೆ ನಿಮ್ಮ ಕನ್ನಡತನವನ್ನು ಅದರ ವೈಶಿಷ್ಟ್ಯವನ್ನು ಮರೆಯಬೇಡಿ.
ಪವನಜ: ತುಂಬ ಧನ್ಯವಾದಗಳು. ಮತ್ತೊಮ್ಮೆ ಪ್ರಣಾಮಗಳು.
ಸಂದರ್ಶನವನ್ನು ಎಂಪಿ-3 ಸ್ವರೂಪದಲ್ಲಿ ಆಲಿಸಲು ಇಲ್ಲಿ ಕ್ಲಿಕ್ ಮಾಡಿ. ಗಮನಿಸಿ -ಕಡತದ ಗಾತ್ರ ಸುಮಾರು ೧೧ ಮೆಗಾಬೈಟ್‌ನಷ್ಟಿದೆ ಮತ್ತು ಗುಣಮಟ್ಟ ಸುಮಾರಾಗಿದೆ.