ಶತಾವಧಾನಿ ಡಾ| ರಾ. ಗಣೇಶ

– ವಿ. ಕೃಷ್ಣಾನಂದ
ವಿದ್ಯೆಗೆ ಅಧಿದೇವತೆ ವಿನಾಯಕ. ಅದೇ ನಾಮಧೇಯದ, ವಿನಾಯಕನ ಸಂಪೂರ್ಣ ಕೃಪಾಶೀರ್ವಾದಗಳನ್ನು ಪಡೆದಿರುವ ಡಾ| ಆರ್. ಗಣೇಶ್ ಅವಧಾನ ಕಲೆಯಲ್ಲಿ ದೇಶದಲ್ಲೇ ದೊಡ್ಡ ಹೆಸರು. ಕಿರಿವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಇವರ ಪ್ರತಿಭೆ ಅನೇಕ ಕ್ಷೇತ್ರಗಳಲ್ಲಿ ಔನ್ನತ್ಯಕ್ಕೇರಿದೆ.

ಎಂಜಿನಿಯರಿಂಗ್‌ನಿಂದ ಹಿಡಿದು ತತ್ವಶಾಸ್ತ್ರದವರೆಗೆ ಅನೇಕ ವಿಷಯಗಳಲ್ಲಿ ಪರಿಣತಿಯನ್ನು ಪಡೆದಿರುವ ಇವರು ಕನ್ನಡದ, ಭಾರತದ ಸಾರಸ್ವತ ಲೋಕದಲ್ಲಿ ಅತ್ಯಂತ ಪ್ರತಿಭಾಪೂರ್ಣರೆಂಬುದರಲ್ಲಿ ಸಂಶಯವಿಲ್ಲ. ಯಂತ್ರಶಾಸ್ತ್ರದಲ್ಲಿ ಎಂಜಿನಿಯರಿಂಗ್ ಪದವಿ, ಸ್ನಾತ್ತಕೋತ್ತರ ಪದವಿ, ಲೋಹಶಾಸ್ತ್ರ ಹಾಗೂ ವಸ್ತುವಿಜ್ಞಾನದಲ್ಲಿ ತಮ್ಮ ಪಿ.ಎಚ್.ಡಿ. ಪದವಿಯನ್ನು ಪಡೆದು ವೃತ್ತಿಯಿಂದ ಅಧ್ಯಾಪಕರಾಗಿದ್ದ ಇವರು ಅದೃಷ್ಟವಶಾತ್ [http://vishvakannada.com/node/326|ಅವಧಾನ ಕಲೆ]ಯತ್ತ ತಮ್ಮ ಪೂರ್ಣ ಗಮನವನ್ನು ನೀಡಿ ಅದರ ಪ್ರಚಾರ ಕೈಗೊಂಡದ್ದು ಕನ್ನಡಿಗರ ಸುದೈವ. “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಇತ್ತೀಚೆಗಷ್ಟೇ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ಅತ್ಯಮೂಲ್ಯ ಸೇವೆಯನ್ನು ಸಲ್ಲಿಸುತ್ತಿರುವ ಆರ್. ಗಣೇಶ್ ಕನ್ನಡ ನಾಡಿನ, ಜನರ ಹೆಮ್ಮೆಯ ಆಸ್ತಿ.

ಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು ಹಾಗೂ ಮೂರು ಕನ್ನಡ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್ ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಕೀರ್ತಿ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ. ಕಾವ್ಯಮೀಮಾಂಸೆ, ಛಂದಶ್ಯಾಸ್ತ್ರ, ವೇದಾಂತ ಉಪನಿಷತ್, ಧರ್ಮಶಾಸ್ತ್ರ, ಇತಿಹಾಸ, ಸಂಸ್ಕೃತಿ, ಕಲೆ, ಭಾರತೀಯ ತತ್ವಶಾಸ್ತ್ರ, ವ್ಯಾಕರಣ, ಅಲಂಕಾರ ಶಾಸ್ತ್ರ ಹೀಗೆ ಹತ್ತು ಹಲವು ವಿವಿಧ ಕ್ಷೇತ್ರಗಳಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದಾರೆ. ಅಲ್ಲದೆ ಲಲಿತ ಕಲೆಗಳಾದ ಸಂಗೀತ, ನೃತ್ಯ, ಚಿತ್ರಕಲೆ ಮುಂತಾದುವುಗಳಲ್ಲಿಯೂ ಸಹಾ ಪ್ರಾವೀಣ್ಯವನ್ನು ಪಡೆದಿದ್ದಾರೆ. ಭಾರತೀಯ ಭಾಷೆಗಳಾದ ಕನ್ನಡ, ಸಂಸ್ಕೃತ, ತೆಲುಗು, ತಮಿಳು, ಹಿಂದಿ, ಪಾಳಿ, ಶೌರಸೇನಿ, ಮರಾಠೀ, ಬಂಗಾಲೀ ಮುಂತಾದುವುಗಳಲ್ಲದೇ ವಿದೇಶೀಯ ಭಾಷೆಗಳಾದ ಇಂಗ್ಲೀಷ್, ಗ್ರೀಕ್, ಲ್ಯಾಟಿನ್, ಇಟಾಲಿಯನ್ ಮುಂತಾದ ಭಾಷೆಗಳಲ್ಲಿಯೂ ಸಹಾ ಅಪಾರ ಪರಿಣತಿಯನ್ನು ಹೊಂದಿದ್ದಾರೆ.

ಸ್ವತಃ ಉತ್ತಮ ಕವಿಯೂ, ಉಪನ್ಯಾಸಕರೂ, ಚಿಂತಕರೂ ಆಗಿರುವ ಡಾ. ಗಣೇಶ್ ಇದುವರೆವಿಗೂ ನೂರಕ್ಕೂ ಮಿಕ್ಕಿದಂತೆ ಲೇಖನಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕನ್ನಡ, ಸಂಸ್ಕೃತ ಹಾಗೂ ತೆಲುಗು ಸಾಹಿತ್ಯ, ತತ್ವಶಾಸ್ತ್ರ, ನೀತಿಶಾಸ್ತ್ರ, ಅಲಂಕಾರ ಶಾಸ್ತ್ರ, ವಿಮರ್ಶೆ, ನೃತ್ಯ, ತಂತ್ರಜ್ಞಾನ, ವಿಜ್ಞಾನ ಮುಂತಾದ ವಿಷಯಗಳಿಗೆ ಸಂಬಂಧಪಟ್ಟ ಅಪೂರ್ವವಾದ ಹಾಗೂ ಆಸಕ್ತಿದಾಯಕವಾದ ವಿಚಾರಗಳನ್ನು ಚರ್ಚಿಸಿದ್ದಾರೆ. ಉತ್ತಮ ಸಂಶೋಧಕರೂ ಆಗಿರುವ ಇವರು ಪ್ರಾಚೀನ ಭಾರತದ ವಾಸ್ತುಶಾಸ್ತ್ರ ಹಾಗೂ ತಂತ್ರಜ್ಞಾನವೂ ಸೇರಿದಂತೆ ವೇದಗಳ ಇತಿಹಾಸ ಮುಂತಾದ ವಿರಳ ವಿಷಯಗಳ ಬಗ್ಗೆ ಅನೇಕ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ. ಸಂಸ್ಕೃತದಲ್ಲಿ ಹನ್ನೆರಡಕ್ಕೂ ಹೆಚ್ಚಿನ ನಾಟಕಗಳನ್ನೂ, ಸುಮಾರು ಹದಿನಾರು ಕಾವ್ಯಗಳನ್ನೂ ರಚಿಸಿರುವ ಇವರು ಕನ್ನಡದಲ್ಲಿ ಎಂಟು ಕಾವ್ಯಗಳನ್ನು, ಮೂರು ಕಾದಂಬರಿಗಳನ್ನು ಹಾಗೂ ಆರು ಅನುವಾದಗಳನ್ನು ಪೂರೈಸಿದ್ದಾರೆ. ವಿದ್ವಜ್ಜನಗಳಿಂದ, ಅಭಿಮಾನಿಗಳಿಂದ, ಸರ್ಕಾರದಿಂದ ಅನೇಕ ಪ್ರಶಸ್ತಿ ಹಾಗೂ ಬಿರುದುಗಳನ್ನು ಪಡೆದಿರುವ ಇವರು ತಮ್ಮ ಅಮೋಘ ಪಾಂಡಿತ್ಯ, ಅಸಾಧಾರಣ ಚಾತುರ್ಯ, ಸರಳತೆ, ನಿಷ್ಕಪಟತೆ ಹಾಗೂ ಸ್ನೇಹ ಶಾಲೀನ್ಯತೆಯಿಂದ ಪಂಡಿತ-ಪಾಮರ ವರ್ಗಗಳೆರಡರಲ್ಲಿಯೂ, ಪ್ರೀತಿ ಮತ್ತು ಅಭಿಮಾನಕ್ಕೆ ಪಾತ್ರರಾಗಿದ್ದಾರೆ.

`ಕೃತಿ ಭುವನದ ಭಾಗ್ಯದಿಂದಮಕ್ಕುಂ’ ಎಂಬ ನೇಮಿಚಂದ್ರನ ನುಡಿಯಂತೆ ಸಮಸ್ತ ಕನ್ನಡಿಗರ ಪುಣ್ಯದ ಫಲವಾಗಿ ಗಣೇಶ್‌ರಂಥ ಅವಧಾನಿಗಳು ಹಾಗೂ ಅವಧಾನಗಳು ನಮಗೆ ಲಭ್ಯವಾಗಿವೆ. ಜನರಲ್ಲಿ ದಿನೇ ದಿನೇ ಕುಸಿಯುತ್ತಿರುವ ಭಾಷೆ, ಸಾಹಿತ್ಯಗಳ ಆಸಕ್ತಿಯ ನಡುವೆ ಅವುಗಳ ಪುನರುಜ್ಜೀವನಕ್ಕಾಗಿ ದುಡಿಯುತ್ತಿರುವ ಕನ್ನಡದ ಸೇವಕರಿಗೆ ಗಣೇಶ್‌ರಂಥ ಅವಧಾನಿಗಳ ಇರುವಿಕೆ ಹಾಗೂ ಅವರಿಂದ ಸಾಹಿತ್ಯ ಕ್ಷೇತ್ರಕ್ಕೆ ಸಂದಿರುವ, ಸಂದಲಿರುವ ಕಾಣಿಕೆ ಆಶಾದೀಪಗಳು. ತಮ್ಮ ವಿಸ್ತೃತ ಪ್ರತಿಭೆಯಿಂದ ಬಹುಶೃತರಾಗಿರುವ ಗಣೇಶರ ಪಾಂಡಿತ್ಯ ಪ್ರತಿಭೆಗೆ `ವಿಶ್ವ ಕನ್ನಡ’ ತನ್ನ ಅಭಿನಂದನೆಗಳನ್ನು ಸಲ್ಲಿಸುತ್ತದೆ.


ವಿಶ್ವಕನ್ನಡಕ್ಕೆ ಗಣೇಶರ ಹಾರೈಕೆ:
ವಿಶ್ವ-ಕನ್ನಡಿಯಲ್ಲಿ ಕನ್ನಡದ ಅಡಿಮೂಡೆ
ವಿಶ್ವಕನ್ನಡ ಗೆಜ್ಜೆ ಕಟ್ಟಿಕೊಳಲಿ
ಕನ್ನಡಿಯ ಪ್ರತಿಬಿಂಬದಂತೆ ಪ್ರತೀಪತೆಯ
ಭಿನ್ನತೆಯ ತಳೆಯದೆಯೆ ಸಮವಾಗ

(೧೯೯೯)

10 Responses to ಶತಾವಧಾನಿ ಡಾ| ರಾ. ಗಣೇಶ

 1. Srinivasa SA

  Reading about Sri Dr. R. Ganesh makes me elated and happy that such a great soul is living in between us now! Wishing Sri Dr. R. Ganesh continued health and sufficient wealth to contiue to elavate the minds of the Indians.

  Inti,
  Srinivasa, Bengaluru

 2. sutheekshna

  I am fortunate to lisiten to Shri Dr, RA. Ganesh at Gokhale Institure, NR Colony Basavana Gudi, on many occasions. What is said above is absolutely true.

 3. sutheekshna

  I had the oppurtunity to listen to Dr. Ra. Ganesh on many occasions at Gokhale Institute, NR Colony, Basavana Gudi. What is said above is very very true.

 4. ಸಂತೋಷ ಕುಮಾರ್

  ಶತಾವಧಾನಿ ಗಣೇಶರು ಕನ್ನಡಿಗರ ಭಾಗ್ಯ.

 5. ಬಾಲು ಮಚ್ಚೇರಿ

  ಶತಮಾನದ ಆದ್ಭುತ ಈ ಗಣೇಶ್…..ಅವರನ್ನು ಹತ್ತಿರದಿಂದ ಕಂಡಿದ್ದೇನಂಬುದೇ ನನ್ನ ಭಾಗ್ಯ

 6. Shiva Shankara

  ಅವದಾನಿಗಳ ಜ್ಞಾನ ದಾನ ಯಜ್ಞಕ್ಕೆ ಉಧ್ಧರಣೆ ಆಗಿಯಾದರೂ
  ನಮ್ಮ ಸೇವೆ ಸೇವೆ ಇರಬೇಕು ಪರವಾಗಿಲ್ಲ ಆಗಾಗ ಸುಟ್ಟರೂ
  ಅದು ಆಗದಿದ್ದರೂ ನಾವು ನೋಡಿ ಕೇಳಿ ಪುನೀತರಾಗಬೇಕು
  ಪುಣ್ಯ ಹಂಚುವ ಇವರ ಬದುಕು ನಿತ್ಯ ಸತ್ಯ ಅನಂತವಾಗಬೇಕು.

 7. Ishwara Bhat

  ನಮ್ಮ ಅದ್ಭುತ ಗಣೇಶರಿಗೆ ಆಯುರಾರೋಗ್ಯ ಭಾಗ್ಯ ಸಿಗಲಿ ಎಂಬ ಪ್ರಾರ್ಥನೆ.

 8. subrahmanya shastri

  “jnana sagara”

 9. Holalkere rangarao laxmivenkatesh

  I am a Fan of Dr. Ganesh. I do not have credentials to talk about his Avadhana kale. But, like a music love, Dance love, I love his Avadhana vidye.

  I love to hear his scholarly talk on various topics of Indian literature, epics, and philosophy. He has great wealth of learning and quotes from various books and authors. I have been watching and hearing in public discourese of various Scholars, like, Dr. Pavagada prakash rao, Chinmayananda, Swamy Ranganathanandji of Ramakrishna mutt, and varous other scholars.

  I like the way Dr. R.Ganesh talks, and the flow of thoughts, starting from DVG,Ramanamaharshi, Ananda kumaraswamy, etc etc. I salute to his scholarship and the great service he is doing in giving the exact definitions, with lots of references.

 10. Saritha.K

  ಶ್ರೀಯುತ ಗಣೇಶರವರು ಕನ್ನಡಿಗರಾದ ನಮ್ಮಲ್ಲರ ಹೆಮ್ಮ ಇತ್ತೀಚೆಗಷ್ಟೇ ಅವರ ಪ್ರವಚನಗಳನ್ನು ಕೇಳುತ್ತಿದ್ದೇನೆ (ಹಿಂದೆ ತಿಳಿದಿರಲಿಲ್ಲ) ಆದರೆ ಹಿಂದಿನಿಂದಲೂ ನಮ್ಮ ಸಂಸ್ಕೃತಿಯು ಬೆಳೆದು ಬಂದ ದಾರಿಯನ್ನು ತಿಳಿಯ ಬೇಕೆಂಬ ಹಂಬಲವಿತ್ತು. ಪ್ರತಿ ಪ್ರವಚನದಲ್ಲಿ ಅವರು ನೀಡುವ ಪರಾಮರ್ಶನ ಗ್ರಂಥಗಳಲ್ಲಿ ಕೆಲವನ್ನಾದರೂ ಓದಬೇಕೆಂಬ ತುಡಿತ ಬಹಳಷ್ಟಿದೆ ಸಂಸ್ಕೃತ ಭಾಷೆಯನ್ನ ಕಲಿಯಲೇ ಬೇಕೆಂಬ ಉತ್ಕಟ ಬಯಕೆ ಇರುವ ನನಗೆ ಯಾವುದಾದರೊಂದು ಮಾರ್ಗ ತೋರಿಸಿ.

Leave a Reply