ರಘು ದೀಕ್ಷಿತ್ ಸಂದರ್ಶನ

ಸಂದರ್ಶಕರು: ಡಾ| ಯು. ಬಿ. ಪವನಜ

ಪ್ರ: ನಿಮ್ಮ ಸಂಗೀತ ಯಾವ ವಿಭಾಗಕ್ಕೆ ಸೇರುತ್ತದೆ? ರಾಕ್, ಪಾಪ್, ಇಂಡಿಪಾಪ್, .. ಏನದು?
ಉ: ಈ ರಾಕ್, ಪಾಪ್, ಎಂದೆಲ್ಲ ಹೇಳುವುದಕ್ಕಿಂತಲೂ ಸಮಕಾಲೀನ ಎನ್ನುವುದು ಹೆಚ್ಚು ಸೂಕ್ತ. ಇಂದಿನ ಪೀಳಿಗೆಗೆ ಅಂದರೆ ನನ್ನ ನಂತರದ ಯುವ ಜನತೆಗೆ ನನ್ನ ಹಿಂದಿನ ತಲೆಮಾರಿನ ಸಾಹಿತ್ಯವನ್ನು, ಉದಾಹರಣೆಗೆ ಶಿಶುನಾಳ ಶರೀಫ, ವಚನಗಳು, ಬೇಂದ್ರೆಯವರ ಪ್ರೇಮ ಕವಿತೆಗಳು, ನಮ್ಮ ನಾಡಿನ ಬಗ್ಗೆ ಇರುವ ಗೀತೆಗಳು, ಇವೆಲ್ಲವನ್ನು ತಲುಪಿಸುವುದು ನನ್ನ ಉದ್ದೇಶ. ಇವುಗಳು ತುಂಬ ಶ್ರೇಷ್ಠ. ಇವುಗಳನ್ನು ಜನ ಹಾಡುತ್ತಲೇ ಬಂದಿದ್ದಾರೆ. ಆದರೆ ಹಾಡುವ ವಿಧಾನ ವಿಕಾಸವಾಗಿಲ್ಲ. ನನ್ನದೇ ಉದಾಹರಣೆ ತೆಗೆದುಕೊಳ್ಳುವುದಾದರೆ ನನಗೆ ೨೬ ವರ್ಷ ಪ್ರಾಯ ಆಗುವ ತನಕ ನನಗೆ ನಮ್ಮ ಭಾಷಾ ಸಾಹಿತ್ಯದ ಬಗ್ಗೆ ಏನೇನೂ ತಿಳಿವಳಿಕೆ ಇರಲಿಲ್ಲ. ಆಗ ಯಾರೋ ಒಬ್ಬರು ನಾನು ಇಂಗ್ಲಿಶ್‌ನಲ್ಲಿ ಹಾಡಲು ಪ್ರಯತ್ನಿಸುವುದನ್ನು ಪ್ರಶ್ನೆ ಮಾಡಿದರು.
Raghu Dixit with Pavanaja
ರಘು ದೀಕ್ಷಿತ್ ಜೊತೆ ಸಂದರ್ಶಕ ಪವನಜ

 

ಪ್ರ: ಅಂದರೆ ನೀವು ಹಾಡಲು ಪ್ರಾರಂಭಿಸಿದ್ದು ಇಂಗ್ಲಿಶಿನಿಂದಲೇ?
ಉ: ಹೌದು. ಎಲ್ಲ ಯುವಕರಂತೆ ನಾನೂ ಗಿಟಾರ್ ಹಿಡಿದುಕೊಂಡು ಹಾಡು ಹಾಡಿದರೆ ಹುಡುಗಿಯರು ಬಲೆಗೆ ಬೀಳುತ್ತಾರೆ ಅಂದುಕೊಂಡು ಹಾಡಲು ಪ್ರಯತ್ನಿಸುತ್ತಿದ್ದೆ.

ಪ್ರ: ಯಾರಾದರೂ ಬಿದ್ದರಾ?
ಉ: ಇಲ್ಲ. ಆದರೆ ಗಿಟಾರ್ ಕಲಿತುಕೊಂಡೆ, ಅಷ್ಟೆ. ಹ್ಹ ಹ್ಹ ಹ್ಹಾ. ಹಾಡುವುದು ಕಲಿತುಕೊಂಡೆ. ಗಿಟಾರ್ ನುಡಿಸುವುದು ಕಲಿತುಕೊಂಡೆ. ಅದೊಂದು ರೀತಿಯಲ್ಲಿ ಉತ್ತೇಜನಕಾರಕ ಆದರೂ ಕೂಡ ಒಳ್ಳೆ ರೀತಿಯಲ್ಲೇ ಮೋಟಿವೇಶನ್ ಆಗಿದೆ ಅದು. ನಾನು ಕೂಡ ಇಂಗ್ಲಿಶಿನಲ್ಲಿ ಹಾಡಿದರೇ ಏನೋ ಒಂದು ಲೆವೆಲ್ ಎಂಬ ಒಂದು ಆಭಿಪ್ರಾಯದಲ್ಲಿದ್ದೆ. ಅದರಲ್ಲೂ ನಮ್ಮದೇ ಹಾಡಿದ್ರೆ ಬೆಲೆ ಇರ್ಲಿಲ್ಲ. ಅದ್ಯಾವುದೋ ಬ್ರೈನ್ ಆಡಮ್ಸ್‌ದೋ ಇನ್ಯಾರದ್ದೋ ಅದು ಹೆಂಗಿದೆಯೋ ಹಂಗೇ ನುಡಿಸಿಬಿಟ್ರೆ ನೀನು ದಾದ ಅಂತ. ಅದು ಒಂದು ತಪ್ಪು ನಂಬಿಕೆ. ಆ ಒಂದು ಗುಂಗಿನಲ್ಲೇ ಹಲವು ವರ್ಷ ಇಂಗ್ಲಿಶ್‌ನಲ್ಲೇ ಹಾಡೊದು ಆಗೋಯ್ತು. ಹಾಗಾಗಿ ನಮ್ಮಲ್ಲೇ ಎಷ್ಟೊಂದು ಸಾಹಿತ್ಯ ಇದೆ. ನಮ್ಮ ಹಿತ್ತಲಲ್ಲೇ ಎಷ್ಟೊಂದು ಮದ್ದುಗಳಿವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸ್ವಲ್ಪ ಸಮಯ ಹೋಯಿತು.

ಹೀಗಿರುವಾಗ ನಾನು ಕಷ್ಟಪಟ್ಟುಕೊಂಡು ತಪ್ಪು ತಪ್ಪು ವಿಚಿತ್ರ ಉಚ್ಛಾರದಲ್ಲಿ ಇಂಗ್ಲಿಶ್ ಹಾಡುವುದನ್ನು ಕೇಳಿ ಒಬ್ಬರು ನೀನು ಯಾಕೆ ಈ ರೀತಿ ಫೇಕ್ ಮಾಡ್ತಿದ್ದೀಯಾ ನಿನ್ನ ಭಾಷೆಯಲ್ಲೇ ಯಾಕೆ ಹಾಡಬಾರದು ಎಂದು ಕೇಳಿದರು.

ಪ್ರ: ಯಾರು ಹಾಗೆ ಕೇಳಿದ್ದು?
ಉ: ಸ್ವಲ್ಪ ವಿಡಂಬನೀಯ ಅಂದ್ರೆ ಹಾಗೆ ಕೇಳಿದ್ದು ಇಬ್ಬರು ಹೆವಿ ಮೆಟಲ್ ಸಂಗೀತಗಾರರು.

ಪ್ರ: ನೀವು ಶಾಸ್ತ್ರೀಯವಾಗಿ ಸಂಗೀತ ಕಲಿತ್ತಿದ್ದೀರಾ?
ಉ: ಇಲ್ಲ. ಕಲಿತಿಲ್ಲ. ನೃತ್ಯ ಕಲಿತಿದ್ದೇನೆ. ಶಾಸ್ತ್ರೀಯ ಭರತನಾಟ್ಯವನ್ನು ಸುಮಾರು ಹದಿನೆಂಟು ವರ್ಷ ಕಲಿತಿದ್ದೇನೆ. ಅದರಲ್ಲಿ ವಿದ್ವತ್ ಕೂಡ ಮಾಡಿದ್ದೇನೆ. ನಂದಿನೀಶ್ವರ್ ನನ್ನ ಗುರು.

ಪ್ರ: ನಿಮ್ಮ ಹೆಂಡತಿ ಕೂಡ ನೃತ್ಯಗಾತಿ ಇರಬೇಕಲ್ವಾ?
ಉ: ನನ್ನ ಹೆಂಡತಿ ಕಂಟೆಂಪೊರರಿ ಡ್ಯಾನ್ಸರ್. ಆಕೆ ಒಡಿಸ್ಸಿ, ಕಥಕ್, ಭರತನಾಟ್ಯ ಎಲ್ಲ ಕಲಿತು ಕೊರಿಯೋಗ್ರಫಿ ಮಾಡ್ತಾಳೆ.

ಪ್ರ: ಹಾಗಾದ್ರೆ ನೀವು ಹಾಡುವಾಗ, ಸಂಗೀತ ಶ್ರುತಿ, ರಾಗ, ತಾಳ ಎಲ್ಲ ಕಲಿಯದೇ ತಿಳಿಯದೇ ಹಾಡುವುದೋ? ಅದು ಹೇಗೆ ಸಾಧ್ಯ? ಸಂಗೀತ ಜ್ಞಾನ ಬೇಕೇ ಬೇಕಲ್ಲವಾ?
ಉ: ಈ ಸಂಗೀತ ಅನ್ನುವುದು ಕೆಲವರಿಗೆ ಅಂತರ್ಗತವಾಗಿಯೇ ಇರುತ್ತದೆ.

ಪ್ರ: ಅಂದರೆ ಅದು ಒಂದು ಪ್ರತಿಭೆ.
ಉ: ಪ್ರತಿಭೆ ಅನ್ನುವುದಕ್ಕಿಂತಲೂ ಅದು ಒಂದು ನಡವಳಿಕೆಯ ಸ್ವಭಾವ ಎನ್ನಹುದು. ಅದನ್ನು ನಾವು ಎಷ್ಟರ ಮಟ್ಟಿಗೆ ನಮ್ಮ ಪ್ರತಿಭೆಯನ್ನು ಬಳಸಿಕೊಂಡು ಎಷ್ಟು ಸುಧಾರಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಾವು ಎಷ್ಟು ಉತ್ತಮ ಸಂಗೀತಗಾರರಾಗುತ್ತೇವೆ ಎನ್ನುವುದು ಅವಲಂಬಿಸಿರುತ್ತದೆ. ಕೆಲವರಿಗೆ ಈ ಸಂಗೀತ ನೃತ್ಯ ಎನ್ನುವುದು ಅಂತರ್ಗತ ಸ್ವಧರ್ಮ ಆಗಿರುತ್ತದೆ.

ಪ್ರ: ಅಂದರೆ ನಿಮಗೆ ಈ ಸಂಗೀತ ಎನ್ನುವುದು ನಿಮ್ಮ ಸ್ವಧರ್ಮ ಎನ್ನುವುದು ಗೊತ್ತಾದದ್ದು ಯಾವಾಗ?

ಉ: ಒಬ್ಬ ರೈತ ಹೊಲದಲ್ಲಿ ಕೆಲಸ ಮಾಡುವಾಗ ಹಾಡುತ್ತಿರುತ್ತಾನೆ. ಆತನಿಗೆ ಯಾವುದೇ ತರಬೇತಿ ಇರುವುದಿಲ್ಲ. ಹಾಗೆ ನೋಡಿದರೆ ನನಗೂ ಆ ರೈತನಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಒಬ್ಬ ವ್ಯಕ್ತಿ ತನ್ನ ಒಳಗಿನ ಯಾವುದೋ ಒಂದು ತೊಳಲಾಟ, ಸುಖ, ಇನ್ನೇನೋ ಒಂದು ಭಾವನೆಯನ್ನು ಹಾಡಿನ ರೂಪದಲ್ಲಿ ಹೊರಹಾಕಲು ಪ್ರಯತ್ನಿಸುತ್ತಾನಲ್ವಾ ಅದೇ ಜನಪದ ಸಂಗೀತ.

ಪ್ರ: ಅದಕ್ಕೆ ಶಾಸ್ತ್ರೀಯವಾದ ಚೌಕಟ್ಟು ಇಲ್ಲ.
ಉ: ಇಲ್ಲ. ಏನೂ ಚೌಕಟ್ಟಿಲ್ಲ. ಅದು ಅಂತರಾಳದಿಂದ ಬರುವಂತದ್ದು.

ಪ್ರ: ಈಗ ನೀವು ಹಾಡುತ್ತೀರಲ್ಲ, ಅದಕ್ಕೆ ಒಂದು ರಾಗ, ತಾಳ ಎಲ್ಲ ಇದ್ದೇ ಇರುತ್ತಲ್ವಾ?
ಉ: ಈ ಭಾವಕ್ಕೆ ಇದೇ ರಾಗ ಇರಬೇಕು, ನೀನು ಈ ರಾಗದಿಂದ ಆ ರಾಗಕ್ಕೆ ನೆಗೆದೆ, ಅದು ಸರಿಯಿಲ್ಲ, ಎನ್ನುವ ಒಂದು ಚೌಕಟ್ಟು ಇಲ್ಲ ನನಗೆ.

ಪ್ರ: ಶಾಸ್ತ್ರೀಯ ಎಂದೆನಿಸಿಕೊಳ್ಳದ ಸುಗಮ ಸಂಗೀತದಲ್ಲಿ ಕೂಡ ಒಂದೊಂದು ಭಾವನೆಗೆ ಒಂದೊಂದು ರಾಗವನ್ನು ಸಂಯೋಜಿಸುತ್ತಾರೆ. ನಿಮಗೆ ಹಾಗೆ ಇಲ್ಲವಾ?
ಉ: ಜನಪದ ಸಂಗೀತಕ್ಕೆ ಹಾಗೆ ಇಲ್ಲ ಅಂದುಕೊಂಡಿದ್ದೇನೆ.

ಪ್ರ: ಈಗ ನೀವು ಹಾಡುತ್ತೀರಲ್ವಾ? ಅದರಲ್ಲಿ ಕೂಡ ಒಂದಿಷ್ಟು ರಾಗ, ತಾಳ, ಎಲ್ಲ ಇರ‍್ಲೇ ಬೇಕಲ್ವಾ?
ಉ: ಅದಿಕ್ಕೇನೀಗ? ಇಷ್ಟನೇ ಮನೇನೇ ಇರ್ಬೇಕು, ಈ ರಾಗದಲ್ಲೇ ಇರ್ಬೇಕು, ಈ ರಾಗದಿಂದ ಆ ರಾಗಕ್ಕೆ ಹೋದ್ರೆ ಕೆಟ್ಟದಾಗಿರ್ತದೆ, ಒಳ್ಳೆದಲ್ಲ ಅದು, ಆ ರಾಗ ಬಿಟ್ಟುಬಿಟ್ಟು ನೀನು ರಾಗ ಭೇದ ಮಾಡಿ ಬೇರೆ ರಾಗಕ್ಕೆ ಹೊರಟು ಹೋದೆ, ಶುದ್ಧವಾಗಿರ್ಲಿಲ್ಲ ನೀನು ಹಾಡಿದ್ದು, ಅನ್ನೋ ಒಂದು ಚೌಕಟ್ಟು ಏನೂ ಇಲ್ಲ ನನಗೆ.

ಪ್ರ: ಹಾಗಿದ್ದರೆ ನಿಮ್ಮದು ಜನಪದ ಸಂಗೀತವೇ?
ಉ: ಜನಪದದ ತಳಹದಿಯನ್ನಿಟ್ಟುಕೊಂಡು, ಸಮಕಾಲೀನ ಉಪಕರಣಗಳನ್ನು ಬಳಸಿ ಹಾಡುವುದು. ಸಮಕಾಲೀನ ಜನಪದ ಎಂದು ಹೇಳಬಹುದೇನೋ?

ಪ್ರ: ಈಗ ನೀವು ಶಿಶುನಾಳ ಶರೀಫರ ಹಾಡನ್ನೆಲ್ಲಾ ನಿಮ್ಮದೇ ರೀತಿಯಲ್ಲಿ ಹಾಡ್ತೀರಲ್ವಾ? ಇದನ್ನು ಇವನು ಕೆಡಿಸ್ತಾ ಇದ್ದಾನೆ ಎಂದು ಯಾರಾದ್ರೂ ಅಪಸ್ವರ ಎತ್ತಿದ್ದಾರಾ?
ಉ: ಆ ತರಹ ಇದುವರೆಗೂ ಯಾರೂ ಬಂದಿಲ್ಲ. ಯಾಕೆಂದರೆ ಅದರಿಂದ ಇದುವರೆಗೆ ಕೆಟ್ಟದೇನೋ ಆಗಿಲ್ಲ. ಈಗಿನ ತಲೆಮಾರಿನ ಹುಡುಗರಿಗೆ ನಾನು ಶಿಶುನಾಳ ಶರೀಫರ ಹಾಡನ್ನು ತಲುಪಿಸುತ್ತೇನೆ ಎಂದರೆ ಯಾರೂ ಅದಕ್ಕೆ ಅಡ್ಡಿ ವ್ಯಕ್ತಪಡಿಸಲಿಕ್ಕಿಲ್ಲ ಅಂದುಕೊಂಡಿದ್ದೇನೆ. ಈಗ ಜೆ.ಸಿ. ಕಾಲೇಜಿನಲ್ಲಿ ನಾನು ಶಿಶುನಾಳ ಶರೀಫರ ಹಾಡನ್ನು ಹಾಡುತ್ತೇನೆ, ಹುಡುಗರೆಲ್ಲ ಅದನ್ನು ಕೇಳಿ ಸಂತೋಷಪಡುತ್ತಾರೆ ಎಂದರೆ ಅದರಿಂದ ಒಳ್ಳೆಯದೇ ಅಲ್ಲವಾ? ಯಾವನೋ ಒಬ್ಬ ಸ್ಟೇಜ್ ಮೇಲೆ ಬಂದು ರಾಕ್ ಹಾಡಿದ್ರೆ ಪ್ರಿನ್ಸಿಪಾಲ್ ಅದನ್ನು ನಿಲ್ಲಿಸಲು ಹೇಳಬಹುದು. ಅದರೆ ಇದು ಹಾಗಲ್ಲ.

ಪ್ರ: ನಾನು ಕೂಡ ಇದುತನಕ ನಿಮ್ಮ ಹಾಡಿನ ಬಗ್ಗೆ ಯಾರೂ ಅಪಸ್ವರ ಎತ್ತಿದ್ದು ಕೇಳಿಲ್ಲ.
ಉ: ಅಪಸ್ವರ ಅಲ್ಲದಿದ್ರೂ, ನನ್ನ ಹಾಡಿನ ಧಾಟಿಯ ಬಗ್ಗೆ ಕೆಲವರು ಹೇಳಿದ್ದಾರೆ. ತುಂಬ ಎತ್ತರದ ಸ್ಥಾಯಿಯಲ್ಲಿ ಹಾಡುತ್ತಾನೆ, ಕೆಳಗಿನ ಶ್ರುತಿಯಲ್ಲಿ ಹಾಡುವುದಿಲ್ಲ ಅವನು ಎಂದೆಲ್ಲ ಹೇಳುತ್ತಾರೆ. ಅದಕ್ಕೆ ನಾನೇನೂ ಮಾಡುವಂತಿಲ್ಲ. ನಾನು ಹಾಡುವುದೇ ಹಾಗೆ. ಬೇರೆ ರೀತಿ ಹಾಡಲು ಬರುವುದೇ ಇಲ್ಲ.

ಪ್ರ: ಈಗ ಸ್ವಲ್ಪ ಹಿಂದೆ ಹೋಗೋಣ. ಈ ಕ್ಷೇತ್ರಕ್ಕೆ ನೀವು ಹೇಗೆ ಬಂದಿರಿ ಎಂಬುದರ ಬಗ್ಗೆ ಸ್ವಲ್ಪ ತಿಳಿಸಿ.
ಉ: ಅದು ತುಂಬ ತಮಾಷೆ ಆಗಿದೆ. ನಾನು ಯುವರಾಜ ಕಾಲೇಜಿನಲ್ಲಿ ಎರಡನೆ ವರ್ಷ ಬಿಎಸ್‌ಸಿ ಓದುತ್ತಿರುವಾಗ ಒಮದು ಭರತನಾಟ್ಯ ಕಾರ್ಯಕ್ರಮ ನೀಡಿ, ವೇಷ ಕಳಚುತ್ತಿರುವಾಗ ಆಧುನಿಕ ಶೈಲಿಯ ಅಂದರೆ ಉದ್ದ ಕೂದಲು ಬಿಟ್ಟುಕೊಂಡು ಕೈಯಲ್ಲ ಗಿಟಾರ್ ಹಿಡಿದುಕೊಂಡ ಒಬ್ಬ ಹುಡುಗ ಬಂದು ನನಗೆ ಗೇಲಿ ಮಾಡಿದ. ನೀನು ಹೀಗೆ ಹುಡುಗಿಯರ ಹಾಗೆ ವೇಷ ಹಾಕಿಕೊಂಡು ಡ್ಯಾನ್ಸ್ ಮಾಡಿದ್ರೆ ನಿನ್ನ ಹಿಂದೆ ಹುಡುಗಿಯರು ಬೀಳೊಲ್ಲ. ನನ್ನ ಹಾಗೆ ಗಿಟಾರ್ ಹಿಡಿದುಕೊ ಆಗ ಹುಡುಗಿಯರು ಹಿಂದೆ ಬೀಳುತ್ತಾರೆ ಎಂದ. ನನಗೆ ಅವನ ಅಜ್ಞಾನ ಏನಿದೆಯೋ ಕೋಪ ಬರುವಂತೆ ಮಾಡಿತು. ನನಗೆ ಈಗಲೂ ನಮ್ಮ ಶಾಸ್ತ್ರೀಯ ನಾಟ್ಯ ಬಗ್ಗೆ ಅಪಾರ ಅಭಿಮಾನ ಇದೆ. ನನಗೆ ಎರಡು ತಿಂಗಳು ಸಮಯ ಕೊಡು. ನಾನು ಗಿಟಾರ್ ಕಲಿತು ತೋರಿಸುತ್ತೇನೆ. ನೀನು ಎರಡು ತಿಂಗಳಲ್ಲಿ ಎರಡು ಹೆಜ್ಜೆ ಭರತನಾಟ್ಯ ಕಲಿತು ತೋರಿಸು ನೋಡೋಣ ಎಂದೆ. ಅದು ತುಂಬ ಸಿಲ್ಲಿ ಜಗಳ ಎನ್ನಬಹುದು. ಆದರೆ ನಾನು ಅದನ್ನು ಸೀರಿಯಸ್ ಆಗಿ ತೆಗೆದುಕೊಂಡು ಗಿಟಾರ್ ಕಲಿತೆ. ಗಿಟಾರ್ ನುಡಿಸುತ್ತ ನನಗೆ ಅದರಲ್ಲಿರುವ ಸ್ವಾತಂತ್ರ್ಯ ಶಾಸ್ತ್ರೀಯದಲ್ಲಿ ಇಲ್ಲ ಅನ್ನಿಸಿತು. ಇಲ್ಲಿ ನಾನು ಹೇಗೆ ಬೇಕಾದರೂ ಹಾಡಬಹುದು. ಏನು ಬೇಕಾದರೂ ಹಾಡಬಹುದು. ನನಗೆ ಇಷ್ಟ ಬಂದ ಸಾಹಿತ್ಯ ನಾನೇ ಬರೆದುಕೊಂಡು ನನಗಿಷ್ಟ ಬಂದಂತೆ ಹಾಡಬಹುದು.

ಪ್ರ: ಅಂದರೆ ನಿಮ್ಮ ಹಾಡುಗಳ ಸಾಹಿತ್ಯ ನೀವೇ ರಚಿಸುವುದಾ?
ಉ: ಸುಮಾರು ವರ್ಷಗಳ ಕಾಲ ನಾನೇ ಬರೀತಾ ಇದ್ದೆ ಇಂಗ್ಲಿಶಿನಲ್ಲಿ.

ಪ್ರ: ಮೈಸೂರ್‌ಸೆ ಆಯೀ ಎಲ್ಲ ನೀವೇ ಬರೆದಿದ್ದಾ?
ಉ: ಹೌದು, ಶಿಶುನಾಳ ಶರೀಫ, ಬೇಂದ್ರೆ, ಕುವೆಂಪು ಇವರನ್ನೆಲ್ಲ ನಾನು ಸಂಶೋಧಿಸುವ ತನಕ. ಸಂಶೋಧಿಸಿದೆ ಎಂದರೆ ನಾನು ಅವರನ್ನೆಲ್ಲ ಶಾಲೆಯಲ್ಲಿ ಕಲಿತಿದ್ದಿರಬಹುದು. ಆದರೆ ಅವುಗಳ ಮಹತ್ವ ಆಗ ನನಗೆ ಅರಿವಾಗಿರಲಿಲ್ಲ.

ಪ್ರ: ಶಿಶುನಾಳ ಶರೀಫರ ಹಾಡುಗಳಿಗೆ ಎರಡೆರಡು ಅರ್ಥಗಳಿರುತ್ತವೆ. ಒಂದು ಮೇಲ್ನೋಟದ ಅರ್ಥ. ಇನ್ನೊಂದು ಒಳಗಿನ ಅಧ್ಯಾತ್ಮದ ಅರ್ಥ. ಅದನ್ನು ಅರ್ಥ ಮಾಡಿಕೊಂಡೇ ನೀವು ಹಾಡ್ತೀರಾ?
ಉ: ಹೌದು. ನಾನು ಸುಮಾರು ಜನ ಕನ್ನಡ ಅಧ್ಯಾಪಕರನ್ನು ಭೇಟಿ ಮಾಡಿ ಅವರಿಂದ ಈ ಹಾಡುಗಳ ಅರ್ಥ ತಿಳಿದುಕೊಂಡಿದ್ದೇನೆ.

ಪ್ರ; ನೀವು ಸಿ. ಅಶ್ವಥ್ ಅವರನ್ನು ಭೇಟಿ ಆಗಿದ್ರಾ?
ಉ: ಆಗಿದ್ದೆ. ಅವರು ಸಂಯೋಜನೆ ಮಾಡಿದ ಹಾಡುಗಳನ್ನೇ ಇಟ್ಟುಕೊಂಡು, ಅವರದೇ ರಾಗ ಸಂಯೋಜನೆಗೆ, ನನ್ನ ಈ ಸಮಕಾಲೀನ ಅಲಂಕಾರ ಮಾಡಿ, ಅವರಿಗೆ ಕೇಳಿಸಿ, ಅವರಿಂದ ಈ ರೀತಿಯಲ್ಲಿ ಹಾಡಲು ಅಪ್ಪಣೆ ಕೇಳಿದ್ದೆ.

ಪ್ರ: ಏನು ಹೇಳಿದರು?
ಉ: ಅವರಿಗೂ ನನ್ನ ಅಪ್ಪನಿಗೂ ಯಾವುದೇ ವ್ಯತ್ಯಾಸ ಇರಲಿಲ್ಲ. ಅವರಲ್ಲಿ ಒಂದು ಎಲ್‌ಎಂಎಲ್ ವೆಸ್ಪ ಇತ್ತು. ಒಂದು ದಿನ ಕೂಡ ನನಗೆ ಅದನ್ನು ಓಡಿಸಲು ಬಿಡುತ್ತಿರಲಿಲ್ಲ. ಎಲ್ಲಾದ್ರೂ ಗುದ್ದಿಸಿಬಿಡುತ್ತೀಯಾ ಎಂದು ಹೇಳುತ್ತಿದ್ದರು. ಅದೇ ಭಯ ಬಹುಶಃ ಸಿ. ಅಶ್ವಥ್ ಅವರಿಗೂ ಇತ್ತೇನೋ ಅವರು ಸಂಯೋಜಿಸಿದ ಹಾಡುಗಳ ಬಗ್ಗೆ?

ಪ್ರ: ಮುಖತಃ ಭೇಟಿ ಮಾಡಲೇ ಇಲ್ಲವೇ?
ಉ: ಮುಖತಃ ಭೇಟಿ ಮಾಡಿದ್ದೆ. ಅವರ ಮನೆಗೇ ಹೋಗಿದ್ದೆ. ಹೋಗಿ ಹಾಡಲು ಅನುಮತಿ ಕೇಳಿದ್ದೆ. ಇಲ್ಲಪ್ಪ, ನಾನು ಇಷ್ಟು ವರ್ಷ ಕಷ್ಟಪಟ್ಟು ಸಂಯೋಜಿಸದ ಹಾಡುಗಳನ್ನು ನಿವು ಯುವಕರು ಕೆಡಿಸಿಬಿಟ್ರೆ ಎಂಬ ಆತಂಕ ಅವರಿಗಿತ್ತು. ನನಗೆ ಅನುಮತಿ ಸಿಗಲಿಲ್ಲ. ಒಂದು ರೀತಿಯಲ್ಲಿ ಅವರು ನನಗೆ ಆಶೀರ್ವಾದ ಮಾಡಿದಂತೆ ಅಂದುಕೊಳ್ಳುತ್ತೇನೆ ಇವತ್ತಿನ ದಿವಸ ತಿರುಗಿ ನೋಡಿದರೆ. It was a blessing in disguise ಅಂತ.

ಪ್ರ: ಅಂದರೆ ನೀವು ಅನುಮತಿ ಕೇಳಿದ್ದು ಅವರ ಟ್ಯೂನ್‌ನಲ್ಲಿ ಹಾಡಲು? ಅವರು ಬೇಡ ಅಂತ ಹೇಳಿದ್ದಕ್ಕೆ ನೀವು ನಿಮ್ಮದೇ ಟ್ಯೂನ್ ಮಾಡಿಕೊಂಡ್ರಿ?
ಉ: ಹೌದು. ಒಂದು ರೀತಿಯಲ್ಲಿ ಸಿ. ಅಶ್ವಥ್ ನನಗೆ ಒಂದು ಬೇರೆಯೇ ದಾರಿಯಲ್ಲಿ ಹೋಗಲು ಆಶೀರ್ವದಿಸಿ ಕಳುಹಿಸಿದಂತೆ ಆಯಿತು. ಶಿಶುನಾಳ ಶರೀಫ ಮಾತ್ರವಲ್ಲ, ಕನ್ನಡದ ಎಲ್ಲ ಕವಿಗಳ ಸಾಹಿತ್ಯದ ಬಗ್ಗೆ ಬೇರೆಯೇ ರೀತಿಯಲ್ಲಿ ನಾನು ನೋಡುವಂತೆ ಅದು ಪ್ರೇರೇಪಿಸಿತು. ಕನ್ನಡ ಸಾಹಿತ್ಯಕ್ಕೆ ಬೇರೆಯೇ ಒಂದು ಆಯಾಮವನ್ನು ಅದು ನನಗೆ ನೀಡಿತು.

ಪ್ರ: ಕನ್ನಡ ಕವಿಗಳ ಸಾಹಿತ್ಯದಲ್ಲಿ ನೀವು ಶಿಶುನಾಳ ಶರೀಫ ಹೊರತಾಗಿ ಬೇರೆ ಯಾವ ಕವಿಗಳ ಹಾಡನ್ನೂ ತೆಗೆದುಕೊಂಡೇ ಇಲ್ಲವಲ್ಲ? ಉದಾಹರಣೆಗೆ ಭಾವಗೀತೆಗಳನ್ನು ಯಾವುದನ್ನೂ ತೆಗೆದುಕೊಂಡೇ ಇಲ್ಲವಲ್ಲ?
ಉ: ಈಗ ಬೇಂದ್ರೆ ತೆಗೆದುಕೊಳ್ಳುತ್ತಾ ಇದ್ದೇನೆ. ನಾನು ಮೂರು ಹಾಡುಗಳನ್ನು ಸಂಯೋಜಿಸಿದ್ದೇನೆ.

ಪ್ರ: ನಾನು ಇದೇ ಪ್ರಶ್ನೆಯನ್ನು ಟ್ವಿಟ್ಟರ್‌ನಲ್ಲೆ ಕೇಳಿದ್ದೆ, ನೆನಪಿದೆಯಾ?
ಉ: ಹ್ಞೂಂ, ಇದೆ. ನಾನು ಬೇಂದ್ರೆಯವರ “ಬಾರೊ ಸಾಧನಕೇರಿಗೆ” ಎಂಬ ಹಾಡನ್ನು …

ಪ್ರ: ಎಂ. ಡಿ. ಪಲ್ಲವಿ ಅದನ್ನು ತುಂಬ ಚೆನ್ನಾಗಿ ಹಾಡುತ್ತಾರೆ.
ಉ: ನಾನು ಅದನ್ನು ಇಂಗ್ಲೆಂಡಿನಲ್ಲಿ ಮತ್ತು ಅಮೆರಿಕದಲ್ಲಿ ಪ್ರಸ್ತುತಪಡಿಸಿದೆ. ಎಷ್ಟೋ ಜನ ಆ ಹಾಡನ್ನು ಮೆಚ್ಚಿಕೊಂಡು, ಈ ಅಮೆರಿಕ, ಎಲ್ಲ ಬಿಟ್ಟು ವಾಪಾಸು ಬಂದುಬಿಡೋಣ ಕನ್ನಡ ನಾಡಿಗೆ ಎಂಬ ಭಾವನೆ ಬಂತು ಎಂದು ಹೇಳಿದರು.

ಪ್ರ: ಇವತ್ತು ಅದನ್ನು ಹಾಡುತ್ತೀರಾ?
ಉ: ಇಲ್ಲ. ಇನ್ನೂ ಅದರ ರಾಗ ಸಂಯೋಜನೆ ಪರಿಪೂರ್ಣವಾಗಿಲ್ಲ.

ಪ್ರ: ನಾವು ಸಾಫ್ಟ್‌ವೇರ್‌ನವರು ಹೇಳುತ್ತೇವಲ್ಲಾ “ಬೀಟಾ ಆವೃತ್ತಿ” ಅಂತ, ಹಾಗೆನಾ?
ಉ: ಹೌದು.

ರಘು ದೀಕ್ಷಿತ್ ಇಲ್ಲಿ ಅವರು ಸಂಯೋಜಿಸುತ್ತಿರುವ ಬೇಂದ್ರೆಯವರ ಬಾರೋ ಸಾಧನಕೇರಿಗೆ ಹಾಡನ್ನು ಹಾಡಿ ತೋರಿಸಿದರು. ಅದನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ.

ಪ್ರ: ಬಹುಶಃ ನೀವು ಜನಪದ ಶೈಲಿಗೆ ಸಮೀಪವಾದ ಹಾಡುಗಳನ್ನು ಅಂದರೆ, ಬೇಂದ್ರೆ, ಮಧುರಚೆನ್ನ, ಕಣವಿ, ಇಂತಹವರ ಹಾಡುಗಳನ್ನು ತೆಗೆದುಕೊಂಡು ಸಂಯೋಜಿಸಬಹುದೇನೋ.
ಉ: ಹೌದು. ತೆಗದುಕೊಳ್ಳುತ್ತಾ ಇದ್ದೇನೆ.

ಪ್ರ: ನಿಮ್ಮ ಹಾಡುಗಳಲ್ಲಿ ಇನ್ನೊಂದು ಆಯಾಮ ಇದೆ. ಅದು ರಾಕ್ ಶೈಲಿ.
ಉ: ರಾಕ್ ಶೈಲಿ ಅಲ್ಲ ಅದು (ಇಲ್ಲಿ ಅವರು ಅದನ್ನು ಒತ್ತಿ ಹೇಳಿದರು). ನನ್ನ ಉಪಕರಣಗಳನ್ನು ಬಿಟ್ಟು ಹಾರ್ಮೋನಿಯಂ ತಬಲ ಹಾಕಿ, ನನಗೂ ಆ ಜನಪದ ಗಾಯಕನಿಗೂ ಏನೂ ವ್ಯತ್ಯಾಸ ಇರುವುದಿಲ್ಲ. ಟ್ಯೂನ್ ವಿಷಯದಲ್ಲಿ ನಾನು ಯಾವತ್ತೂ ಪಾಶ್ಚಿಮಾತ್ಯ ಶೈಲಿಯಲ್ಲಿ ಹಾಡಲು ಹೋಗಿಯೇ ಇಲ್ಲ. ಇನ್ಸ್ಟ್ರುಮೆಂಟೇಶನ್ ಏನಿದೆಯೇ ಅದನ್ನು ನಾನು ಸ್ವಲ್ಪ ಆಧುನಿಕಗೊಳಿಸಿದ್ದೇನೆ, ಅಷ್ಟೆ. ನಾನು ಅದನ್ನು ಬಾರೋ ಸಾಧನ ಕೇರಿಗೆ ಅಂತ ಹಾಡಲು ಹೋಗಿಲ್ಲ (ಪಾಶ್ಚಿಮಾತ್ಯ ಶೈಲಿಯಲ್ಲಿ ಹಾಡಿ ತೋರಿಸುತ್ತಾರೆ). ನಾನು ಹಾಡುವಾಗ ಕನ್ನಡನಾಡಿನ ಒಬ್ಬ ಹಾಡುಗಾರ ಹೇಗೆ ಹಾಡುತ್ತಾನೋ ಹಾಗೆಯೇ ಹಾಡುತ್ತೇನೆ. ಕೇವಲ ಸಂಗೀತದ ಉಪಕರಣಗಳು ಮಾತ್ರ ಪಾಶ್ಚಿಮಾತ್ಯ, ಅಷ್ಟೆ.

ಪ್ರ: ಯುವರಾಜ ಕಾಲೇಜಿನಲ್ಲಿದ್ದಾಗ ನಾನು ಗಿಟಾರ್ ಕಲಿತೆ ಅಂತ ಹೇಳಿದ್ರಿ. ಅಲ್ಲಿಂದ ಮುಂದೇನಾಯಿತು?
ಉ: ಅದು ಆದ ನಂತರ ನಾನು ನನ್ನಷ್ಟಕ್ಕೆ ಗಿಟಾರ್ ನುಡಿಸುತ್ತ ಇದ್ದೆ. ಮೈಸೂರಿನಲ್ಲಿ ಎಚ್ ಎನ್ ನರಸಿಂಹಮೂರ್ತಿ ಎಂಬ ದೊಡ್ಡ ಪಿಟೀಲು ವಿದ್ವಾಂಸರಿದ್ದಾರೆ. ಅವರ ಮಗ ಎಚ್ ಎನ್ ಭಾಸ್ಕರ್ ಅಂತ ಆತನೂ ಪಿಟೀಲು ವಿದ್ವಾಂಸ. ಆತನನ್ನು ಕಷ್ಟಪಟ್ಟು ನನ್ನ ಜೊತೆ ಫ್ಯೂಶನ್ ಸಂಗೀತ ತಯಾರಿಸಲು ಒಪ್ಪಿಸಿದೆ. ನಾನೂ ಅವನೂ ಸೇರಿಕೊಂಡು ಅಂತರಾಗ್ನಿ ಅಂತ ಒಂದು ಬ್ಯಾಂಡ್ ಸುರುಮಾಡಿಕೊಂಡೆವು.

ಪ್ರ: ಆ ಅಂತರಾಗ್ನಿ ಈಗಲೂ ಇದೆಯಾ?
ಉ: ಇಲ್ಲ ೨೦೦೫ರ ತನಕ ಮಾತ್ರ ಇತ್ತು. ನಂತರ ಭಾಸ್ಕರ್ ದೊಡ್ಡ ದೊಡ್ಡ ಗಾಯಕರ ಜೊತೆ ನುಡಿಸತೊಡಗಿದ. ಹಾಗಾಗಿ ನಮಗೆ ಒಟ್ಟಿಗೆ ಸಮಯ ಸಿಗುವುದು ಕಡಿಮೆಯಾಯಿತು.

ಪ್ರ: ನೀವು ಎಂಎಸ್‌ಸಿ ಮಾಡಿ ಯಾವುದೋ ಕಂಪೆನಿಯಲ್ಲಿ ಕೆಲಸ ಮಾಡ್ತಾ ಇದ್ರಲ್ವ? ಆವಾಗ ಹಾಡ್ತಾ ಇದ್ರಾ?
ಉ: ನಾನು ಬೆಲ್ಜಿಯಂನಲ್ಲಿ ಕೆಲಸ ಮಾಡುತ್ತಾ ಇದ್ದಾಗ ಒಂದು ಕಡೆ ಪೇಯಿಂಗ್ ಗೆಸ್ಟ್ ಆಗಿದ್ದೆ. ಆ ಮನೆಯ ಯಜಮಾನ ನಾನು ಹಾಡುವುದನ್ನು ಮೆಚ್ಚಿಕೊಂಡು ಅಲ್ಲಿಯ ಒಂದು ರೇಡಿಯೋ ಕೇಂದ್ರದಲ್ಲಿ ಹಾಡಲು ಅವಕಾಶ ಮಾಡಿಸಿಕೊಟ್ಟರು. ಅಲ್ಲಿ ಹಾಡಿದಾಗ ಜನ ಅದನ್ನು ತುಂಬ ಮೆಚ್ಚಿಕೊಂಡರು. ಆಗ ನನಗೆ ಅನ್ನಿಸಿತು. ಯಾವುದೋ ಒಂದು ದೇಶದಲ್ಲಿ, ನಮ್ಮ ಭಾಷೆಯೇ ಅರ್ಥವಾಗದಿದ್ದರೂ ಜನ ನನ್ನ ಹಾಡನ್ನು ಮೆಚ್ಚಿಕೊಳ್ಳಬೇಕಾದರೆ ನಮ್ಮ ದೇಶದಲ್ಲಿ ನಮ್ಮ ಭಾಷೆ ಅರ್ಥವಾಗುವವರು ಇನ್ನೆಷ್ಟು ಮೆಚ್ಚಿಕೊಳ್ಳಬಹುದು ಅಂದುಕೊಂಡು ನಮ್ಮ ದೇಶಕ್ಕೆ ವಾಪಾಸು ಬಂದೆ. ನಾನು ಅತಿ ಬೇಗದಲ್ಲೆ ಖ್ಯಾತ ಗಾಯಕನಾಗುತ್ತೇನೆ ಅಂದುಕೊಂಡೆ. ಆದರೆ ನಾನು ೯ ವರ್ಷಗಳ ಕಾಲ ಕಷ್ಟಪಡಬೇಕಾಯಿತು.

ಪ್ರ: ೯ ವರ್ಷ ನೀವು ಆ ಫಾರ್ಮಸ್ಯೂಟಿಕಲ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡೆ ಗಾಯಕನಾಗಲು ಪ್ರಯತ್ನಿಸಿದಿರಾ?
ಉ: ಇಲ್ಲ. ಆ ರೇಡಿಯೋ ಕಾರ್ಯಕ್ರಮದ ಒಂದು ವಾರದಲ್ಲೇ ಕೆಲಸ ಬಿಟ್ಟುಬಿಟ್ಟು ನಮ್ಮ ದೇಶಕ್ಕೆ ಬಂದೆ. ಆ ವಯಸ್ಸು ಹಾಗಿತ್ತು. ಅದು ಒಂದು ಹುಚ್ಚು ಕುದುರೆ ಹತ್ತಿದಂತೆ.

ಪ್ರ: ತುಂಬ ಜನ ಸಾಧಕರು ಇದೇ ಕತೆ ಹೇಳುತ್ತಾರೆ. ಒಂದು ಹತ್ತು ವರ್ಷ ಒದ್ದಾಡಿದೆ ಅಂತ.
ಉ: ಹೌದು. ನನ್ನ ಸಂಗೀತ ಬಾಲಿವುಡ್‌ನಲ್ಲಿ ಆಗಾಗಲೇ ಇದ್ದುದಕ್ಕಿಂತ ಸಂಪೂರ್ಣ ವಿಭಿನ್ನವಾಗಿತ್ತು. ನಾನು ಕಾರ್ಯಕ್ರಮ ನೀಡಿದಾಗ ಜನ ಇಷ್ಟಪಡುತ್ತಿದ್ದರು. ಆದರೆ ಯಾವುದೇ ರೆಕಾರ್ಡಿಂಗ್ ಕಂಪೆನಿಯವರು ಅದನ್ನು ನಂಬುತ್ತಾ ಇರಲಿಲ್ಲ. ಅಲ್ಲಿ ಇಲ್ಲಿ ಚಿಕ್ಕಪುಟ್ಟ ಕಾರ್ಯಕ್ರಮ ನೀಡುವ ಮಟ್ಟದಲ್ಲೇ ಇತ್ತು.

ಪ್ರ: ನಿಮಗೆ ಮೊದಲ ಬ್ರೇಕ್ ಸಿಕ್ಕಿದ್ದು ಆಲ್ಬಂ ಬಂದ ಮೇಲೆಯಾ?
ಉ: ಹೌದು. ೨೦೦೭ರಲ್ಲಿ ಮೊದಲ ಆಲ್ಬಂ ಬಂದರೂ ಜನಕ್ಕೆಲ್ಲ ಗೊತ್ತಾಗಿದ್ದು ಎರಡು ವರ್ಷ ಆದ ಮೇಲೆಯೇ. ಆದರೂ ನಾನು ಸಿನಿಮಾದಲ್ಲಿ ಹಾಡಿದ ಮೇಲೆಯೇ ಜನರನ್ನು ತಲುಪಲು ಸಾಧ್ಯವಾಗಿದ್ದು. ಜನರು ಇಂದಿಗೂ ಸಿನಿಮಾದಲ್ಲಿ ಬಂದವನೇ ಪ್ರತಿಭಾವಂತ ಅನ್ನುವ ತಪ್ಪುಕಲ್ಪನೆಯಲ್ಲೇ ಇದ್ದಾರೆ. ನನಗೆ ಸಾಂಗ್‌ಲೈನ್ಸ್ ಪ್ರಶಸ್ತಿ ಬಂತು. ಆದರೂ ಸಿನಿಮಾದ ಮೂಲಕವೇ ನಾನು ಹೆಚ್ಚು ಬೆಳಕಿಗೆ ಬಂದಿದ್ದು. ನನ್ನನ್ನು ಕನ್ನಡಿಗರು ಯಾರೂ ಗಮನಿಸಲೂ ಇಲ್ಲ. ನೀವು ಜಗತ್ತೆಲ್ಲ ಪ್ರಖ್ಯಾತರಾಗಿರಬಹುದು. ಅದರೆ ಮನೆಯಲ್ಲೇ ನಿಮ್ಮನ್ನು ಗುರುತಿಸಿಲ್ಲ ಅಂದರೆ ಏನೋ ಒಂದು ಕೊರತೆ ಎಂಬ ಭಾವನೆ ಇರುತ್ತದೆ.

ಪ್ರ: ಹಿತ್ತಿಲ ಗಿಡ ಮದ್ದಲ್ಲ ಅನ್ನುತ್ತಾರಲ್ಲ ಹಾಗೆ.
ಉ: ಆದರೆ ಜನರು ಗುರುತಿಸಿದ್ದಾರೆ. ಅವರ ಪ್ರೀತಿ ಸಿಕ್ಕಿದೆ. ಆದರೂ ಇಂಡಸ್ಟ್ರಿ ಅದರಲ್ಲೂ ಮುಖ್ಯವಾಗಿ ಸಿನಿಮಾ ಇಂಡಸ್ಟ್ರಿ ಇನ್ನೂ ಪೂರ್ತಿಯಾಗಿ ಗುರುತಿಸಿಲ್ಲ.

ಪ್ರ: ಸಿನಿಮಾಕ್ಕೆ ಸಂಗೀತ ನೀಡಿದ್ದೀರಲ್ಲಾ?
ಉ: ಮೂರು ಸಿನಿಮಾ ಮಾಡಿದೆ. ಆದರೆ, (ಮೆತ್ತಗೆ) ಬಿಟ್ಟಿ ಮಾಡಬೇಕಾಗಿ ಬಂತು. ಹ್ಹ ಹ್ಹ

ಪ್ರ: ನಿಜಾನಾ?
ಉ: ಇನ್ನೇನು ಮಾಡುವುದು?

ಪ್ರ: ಮೊನ್ನೆ ಯಾವನೋ ಒಬ್ಬ ಯಾವುದೋ ಒಂದು ವೆಬ್‌ಸೈಟ್‌ನಲ್ಲಿ ಹಾಕಿದ್ದ, ರಘು ದೀಕ್ಷಿತ್ ಒಂದು ಸಿನಿಮಾಕ್ಕೆ ಒಂದು ಕೋಟಿ ಸಂಭಾವನೆ ಎಂದು..
ಉ: ಅದರಿಂದಲೇ ನನಗೆ ತೊಂದರೆ ಆಗಿದ್ದು. ಅದರಿಂದ ಜನ ನನ್ನ ಹತ್ತಿರ ಬರುವುದೇ ನಿಲ್ಲಿಸಿಬಿಟ್ರು.

ಪ್ರ: ಹಾಗಾದರೆ ಆ ವೆಬ್‌ಸೈಟಿನಲ್ಲಿ ಹಾಕಿದ್ದು ಸುಳ್ಳಾ?
ಉ: ಹೌದು. ಈವಾಗ ಅದರ ಬಗ್ಗೆ ಏನೂ ಚರ್ಚಿಸಿ ಪ್ರಯೋಜನವಿಲ್ಲ. ಈಗ ನನಗೆ ಕನ್ನಡ ಸಿನಿಮಾಕ್ಕೆ ಸಂಗೀತ ಮಾಡಬೇಕು ಎನ್ನುವ ಹಂಬಲವೂ ಹೋಗುತ್ತಾ ಇದೆ.

ಪ್ರ: ನೀವು ನಾಟಕಕ್ಕೂ, ಹಯವದನಕ್ಕೆ, ಸಂಗೀತ ನೀಡಿದ್ದಿರಲ್ವಾ? ಅದು ಯಾವ ಶೈಲಿಯಲ್ಲಿ ಸಂಗೀತ ನೀಡಿದ್ದಿರಿ?
ಉ: ಭಾರತೀಯ ಜನಪದ ಸಂಗೀತ, ಆದರೆ ಹಾಡಿದ್ದು ಇಂಗ್ಲಿಶಿನಲ್ಲಿ. ಅದು ಇಂಗ್ಲಿಶ್ ನಾಟಕ, ಗಿರೀಶ್ ಕಾರ್ನಾಡರೇ ಬರೆದಿದ್ದು.

ಪ್ರ: ಜಸ್ಟ್ ಮಾತ್ ಮಾತಲ್ಲಿ ಸಿನಿಮಾದಲ್ಲಿಯ ನಿಮ್ಮ ಸಂಗೀತ ಚೆನ್ನಾಗಿದೆ.
ಉ: ಸಂಗೀತ ಚೆನ್ನಾಗಿದ್ದರೂ ಸಿನಿಮಾ ಹಿಟ್ ಆಗಿಲ್ವಲ್ಲ? ಅವರಿಗೆ ನಾನು unlucky ಸಂಗೀತ ನಿರ್ದೇಶಕ ಆಗಿಬಿಟ್ಟೆ. ಸೈಕೋ ಕೂಡ ಹಾಗೆಯೇ. ಜನ ಇಂದಿಗೂ ನನ್ನನ್ನು ನೆನಪಿಟ್ಟುಕೊಳ್ಳುವುದು ಸೈಕೋದ ಹಾಡಿಗೇ.

ಪ್ರ: ಜಸ್ಟ್ ಮಾತ್ ಮಾತಲ್ಲಿ ನಿಮ್ಮ ಸಂಗೀತ ನಿಜಕ್ಕೂ ಚೆನ್ನಾಗಿದೆ. ಶ್ರೇಯಾ ಘೋಶಾಲ್ ಹಾಡಿದ ಎಲ್ಲೊ ಜಿನಿಗಿರುವ ನೀರು ಎಂಬ ಹಾಡಿನ ಸಂಗೀತ ತುಂಬ ಚೆನ್ನಾಗಿದೆ. ಅಂದ ಹಾಗೆ, ನೀವು ಸಿಟ್ಟು ಮಾಡಿಕೊಳ್ಳಬಾರದು, ಮೊನ್ನೆ ಯಾರೋ ಹೇಳುವುದನ್ನು ಕೇಳಿದೆ -“ರಘು ದೀಕ್ಷಿತ್ ಹಾಡಬಾರದು, ಸಂಗೀತ ನೀಡಬೇಕು” ಎನ್ನುತ್ತಿದ್ದರು.
ಉ: ನನಗೂ ಗೊತ್ತಿದೆ. ಎಲ್ಲ ಹಾಡುಗಳನ್ನು ನಾನೇ ಹಾಡಬೇಕೆಂದುಕೊಂಡಿರುವುದಿಲ್ಲ. ಆದರೆ ನಿರ್ದೇಶಕರಿಗೆ ಕೇಳಿಸುವುದಕ್ಕೋಸ್ಕರ ಟ್ಯೂನ್ ಮಾಡುವಾಗ ನಾನೇ ಹಾಡಿರುತ್ತೇನೆ. ಅವರು ಅದೇ ಇರಲಿ, ನೀವು ಹಾಡಿದ್ದೇ ಚೆನ್ನಾಗಿದೆ ಎಂದು ಒತ್ತಾಯ ಮಾಡಿ ಅದನ್ನೇ ಇಟ್ಟುಕೊಂಡರು. ಹಾಗೆ ಆಗಿರುವುದು ಅದು.

ಪ್ರ: ನೀವು ಈಗ ಬೇಂದ್ರೆಯವರ ಒಂದು ಹಾಡನ್ನು ಸಂಯೋಜನೆ ಮಾಡುತ್ತಾ ಇದ್ದೀರಿ. ಅದೇ ರೀತಿ ಇನ್ನೂ ಹಲವಾರು ಕವಿಗಳ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುವ ಆಲೋಚನೆ ಮಾಡುತ್ತಾ ಇದ್ದೀರಾ? ಉದಾಹರಣೆಗೆ ಅಡಿಗರ ಕಟ್ಟುವೆವು ನಾನು, ನಿಸಾರ್ ಅಹಮದ್ ಅವರ ಕುರಿಗಳು ಸಾರ್, ಇತ್ಯಾದಿ?
ಉ: ಹಾಗೆ ಎಲ್ಲ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಬೇಕಾದರೆ ನನ್ನ ಒಂದು ಆಯುಸ್ಸು ಸಾಕಾಗಲಾರದು. ಆಸೆಯೇನೋ ಇದೆ. ಎಷ್ಟರ ಮಟ್ಟಿಗೆ ನೆರವೇರುತ್ತೋ ಗೊತ್ತಿಲ್ಲ.

ಪ್ರ: ಯಕ್ಷಗಾನ ನೋಡಿದ್ದೀರಾ?
ಉ: ಹೌದು. ನನಗೆ ತುಂಬ ಇಷ್ಟ.

ಪ್ರ: ಅದಕ್ಕೇನಾ ಒಂದು ಹಾಡಿನಲ್ಲಿ “ಎಲವೆಲವೋ ಧೂರ್ತ” ಎಂದು ಸೇರಿಸಿದ್ದು?
ಉ: ಹೌದು. ಯಕ್ಷಗಾನದಲ್ಲಿರುವ ತೂಕ, ಶ್ರೀಮಂತಿಕೆ ಮತ್ತು ಕಚ್ಚಾ ಇವುಗಳ ಸಮ್ಮಿಶ್ರಣ ಇನ್ನೆಲ್ಲೂ ಇಲ್ಲ. ನನಗೆ ಅದು ತುಂಬ ಇಷ್ಟ. ಅದಕ್ಕೆ ಅದನ್ನು ಕೋಟೆ ಸಿನಿಮಾದಲ್ಲಿ ಬಳಸಿಕೊಂಡೆ.

ಪ್ರ: ಈ ಲುಂಗಿ ಟೀಶರ್ಟ್ ವೇಷದ ಆಲೋಚನೆ ಎಲ್ಲಿಂದ ಬಂತು?
ಉ: ವೇದಿಕೆಯಲ್ಲಿ ಕಾರ್ಯಕ್ರಮ ನಿಡುವಾಗ ಅದಕ್ಕೆ ಒಂದು ಬೇರೆ ಆಯಾಮ ನೀಡಬೇಕೆಂದು ತುಂಬ ಆಲೋಚಿಸಿ ಈ ವೇಷ ತೀರ್ಮಾನಿಸಿದ್ದು. ಇದು ತುಂಬ ಆಲೋಚಿಸಿಯೇ ತೆಗೆದುಕೊಂಡ ತೀರ್ಮಾನ. ಕಾರ್ಯಕ್ರಮಕ್ಕೆ ಬರುವವರಿಗೆ ಒಂದು ಅನುಭವ ನೀಡಬೇಕು. ಅದಿಲ್ಲವಾದಲ್ಲಿ ಜನ ಸಿ.ಡಿ. ಹಾಕಿಕೊಂಡು ಮನೆಯಲ್ಲೇ ಕೇಳುವವರು. ವೇದಿಕೆಯ ಏರ್ಪಾಡು, ಬೆಳಕಿನ ವ್ಯವಸ್ಥೆ, ಧ್ವನಿ ತಂತ್ರಜ್ಞಾನ, ಎಲ್ಲಾ ಮುಖ್ಯವಾಗುತ್ತವೆ. ಹಾಗೆಯೇ ಅವನು ವೇದಿಕೆಯಲ್ಲಿ ಹೇಗೆ ಮಾತನಾಡುತ್ತಾನೆ, ಯಾವ ರೀತಿ ಡ್ರೆಸ್ ಮಾಡಿಕೊಂಡಿದ್ದಾನೆ ಎಲ್ಲವೂ ಮುಖ್ಯವಾಗುತ್ತವೆ.

ಪ್ರ: ಅಂದರೆ ನೀವು ಜನಪದ ಮತ್ತು ಆದುನಿಕ ವೇಷಗಳ ಫ್ಯೂಶನ್ ಮಾಡುತ್ತಿದ್ದೀರಾ?
ಉ: ಇಲ್ಲ. ನಾವು ಮನೆಯಲ್ಲಿ ಯಾವ ಬಟ್ಟೆ ಹಾಕಿಕೊಳ್ಳುತೇವೆಯೋ ಅದೇ ಬಟ್ಟೆ. ಕುರ್ತ ಒಂದು ಪಂಚೆ. ಮನೆಯಲ್ಲಿ ಬಿಳಿ ಪಂಚೆ ಉಟ್ಟುಕೊಂಡೇ ಬೆಳೆದವನು ನಾನು. ನನ್ನ ಸಂಗೀತ ಅಂದರೆ ಮೂಲತಃ ಜನಪದ ಸಂಗೀತ ತುಬ ವರ್ಣಮಯ. ಅದನ್ನು ಬಿಂಬಿಸಲು ಬಣ್ಣದ ಬಟ್ಟೆ. ನನ್ನ ಉಡುಪು ನೋಡಿದ ತಕ್ಷಣ ಜನರಿಗೆ ಗೊತ್ತಾಗಬೇಕು ಈತ ದಕ್ಷಿಣ ಭಾರತದವನು ಎಂದು.

ಪ್ರ: ಮತ್ತೆ ಗೆಜ್ಜೆ?
ಉ: ಗೆಜ್ಜೆ ಒಂದು ಜಾನಪದ ಸಂಪ್ರದಾಯ ಅದು. ನಮ್ಮ ಹರಿದಾಸರು ಕೂಡ ಅದನ್ನು ಬಳಸಿದ್ದಾರೆ. ನಾನು ಭರತನಾಟ್ಯ ಕಲಿತಿರುವುದರಿಂದ ನನಗೆ ಅದು ಸಹಜ ಅನ್ನಿಸಿದೆ. ನಾನು ಅದನ್ನು ಲಯಕ್ಕೆ ಬಳಸುತ್ತೇನೆ. ಕೆಲವೊಮ್ಮೆ ಮಾನಿಟರ್ ಸ್ಪೀಕರ್ ಕೆಲಸ ಮಾಡದಿದ್ದಾಗ ಬ್ಯಾಂಡಿನ ಎಲ್ಲ ಕಲಾವಿದರು ಲಯಬದ್ಧವಾಗಿ ನುಡಿಸಲು ನಾನು ಕಾಲುಕುಟ್ಟುವುದು ಸಹಾಯ ಮಾಡುತ್ತದೆ.

Raghu Dixit

ಪ್ರ: ನಿಮ್ಮ ಯಶಸ್ಸಿಗೆ ಕಾರಣ ಏನು?
ಉ: ಯಶಸ್ಸಿಗೆ ಕಾರಣ ಎಂದರೆ ಹಣೆಬರಹ. ಹ್ಹ ಹ್ಹ ಹ್ಹ. ಇಲ್ಲ. ಅದಕ್ಕೆ ತುಂಬ ಕಷ್ಟಪಡಬೇಕಾಗಿತ್ತು. ಇನ್ನೂ ಕಷ್ಟಪಡುತ್ತಲೇ ಇದ್ದೇನೆ. ನಾನು ಯಶಸ್ವಿಯಾಗಿದ್ದೇನೆ ಎಂದು ಹೇಳುವ ಹಾಗಿಲ್ಲ ಈಗಲೇ. ನಾನು ಏನು ಸಾಧಿಸಬೇಕೆಂದುಕೊಂಡಿದ್ದೇನೋ ಅದರಿಂದ ಇನ್ನೂ ಎರಡು ಮೂರು ವರ್ಷ ದೂರ ಇದ್ದೇನೆ.

ಪ್ರ: ಏನು ಅದು ನೀವು ಸಾಧಿಸಬೇಕೆಂದುಕೊಂಡಿರುವುದು?
ಉ: ಒಬ್ಬ ಅಂತಾರಾಷ್ಟ್ರೀಯ ಕಲಾವಿದನಾಗಿ ಗುರುತಿಸಿಕೊಳ್ಳುವುದು. ಸದ್ಯಕ್ಕೆ ನಾನು ಈಗಲೂ ನನ್ನ ಕೈಯಿಂದ ಹಣ ಖರ್ಚು ಮಾಡಿ ವಿದೇಶಗಳಿಗೆ ಹೋಗಿ ಕಾರ್ಯಕ್ರಮ ನೀಡುತ್ತಿದ್ದೇನೆ.

ಪ್ರ: ಅಂದರೆ ಈಗ ನಿವು ವಿದೇಶಗಳಿಗೆ ಕಾರ್ಯಕ್ರಮ ನೀಡಲು ನಿಮ್ಮ ಕೈಯಿಂದ ಖರ್ಚು ಮಾಡಿಕೊಂಡು ಹೋಗುತ್ತಿದ್ದೀರಾ?
ಉ: ಹೌದು. ಅಂದರೆ ಅವರು ನೀಡುತ್ತಿರುವ ಹಣ ಪ್ರಯಾಣ ಸಹಿತ ನನ್ನ ಎಲ್ಲ ಖರ್ಚುಗಳನ್ನು ಸರಿದೂಗಿಸುತ್ತಿಲ್ಲ. ಅಲ್ಲಿ ನಾನು ಸ್ಥಾಪಿತಗೊಳ್ಳುತ್ತಿದ್ದಂತೆ ನನ್ನ ಫೀಸು ಜಾಸ್ತಿ ಆಗಿ ನನ್ನ ಖರ್ಚನ್ನು ಸರಿದೂಗಿಸುತ್ತದೆ.

ಪ್ರ: ಆಗ ನಾವು ನಿಮ್ಮನ್ನು ಆಹ್ವಾನಿಸಲು ಆಗಲಿಕ್ಕಿಲ್ಲ 😉
ಉ: ಹ್ಹ ಹ್ಹ. ಅಲ್ಲಿಯ ಫೀಸಿಗೂ ಇಲ್ಲಿಯ ಫೀಸಿಗೂ ಹೋಲಿಸುವಂತಿಲ್ಲ.

ಪ್ರ: ಗ್ರಾಮ್ಮಿ ಅವಾರ್ಡ್ ತರಹ ಪ್ರಶಸ್ತಿಗಳು …
ಉ: ಪ್ರಶಸ್ತಿಗಳು ಒಂದು ರೀತಿಯ ಗುರುತಿಸುವಿಕೆಯೇ. ನನಗೆ ಸಾಂಗ್‌ಲೈನ್ಸ್ ಅವಾರ್ಡ್ ಬಂದಿದ್ದು ಹಾಗೆನೇ. ಸಂಗೀತಗಾರನಾಗಿ ಕೆಲಸ ಪ್ರಾರಂಭಿಸಿ ಹದಿಮೂರು ವರ್ಷಗಳ ನಂತರ ಬಂದ ಪ್ರಶಸ್ತಿ ಇದು. ನನ್ನ ಲೈಫಿನಲ್ಲಿ ಇದು ಪ್ರಥಮ ಪ್ರಶಸ್ತಿ.

ಪ್ರ: ನನಗೆ ಒಂದು ವಿಷಯ ಅರ್ಥವಾಗಲಿಲ್ಲ. ಹದಿಮೂರು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿದ್ದೀರಾ. ಹಾಗಿದ್ದಾಗ best newcomer ಎಂಬ ಪ್ರಶಸ್ತಿ ಹೇಗೆ ಸಾಧ್ಯ?
ಉ: ಜಾಗತಿಕ ಕ್ಷೇತ್ರದಲ್ಲಿ ಹೊಸಬ ಎಂದು. ಜಾಗತಿಕ ಮಟ್ಟದಲ್ಲಿ ೨೫೩ ಹೊಸ ಕಲಾವಿದರಲ್ಲಿ ನಾನು ಮೇಲೆ ಹೋಗಿ ನಿಂತಿರುವುದು.

ಪ್ರ: ನನಗೆ ನಿಮ್ಮ ಬಗ್ಗೆ ಒಂದು ತುಂಬ ಇಷ್ಟದ ವಿಷಯವೆಂದರೆ ನೀವು ಕರ್ನಾಟಕದ ಗಡಿಯಾಚೆ ಕನ್ನಡ ಮತ್ತು ಕನ್ನಡದ ಸಾಹಿತ್ಯ ಸಂಗೀತಗಳನ್ನು ತೆಗೆದುಕೊಂಡು ಹೋಗಿದ್ದೀರಿ, ಅದಕ್ಕೆ.
ಉ: ಧನ್ಯವಾದಗಳು.

ಪ್ರ: ನೀವು ಇಂಗ್ಲೆಂಡ್, ಡೆನ್ಮಾರ್ಕ್ ಇತ್ಯಾದಿ ದೇಶಗಳಲ್ಲಿ ಹೋಗಿ ಅಲ್ಲಿಯವರಿಗೆ ಕನ್ನಡದ ಪರಿಚಯ ಮಾಡಿಕೊಟ್ಟಿದ್ದೀರಿ. ಇಂತಹವರು ತುಂಬ ಕಡಿಮೆ ಎಂದು ನನ್ನ ಅಭಿಪ್ರಾಯ. ಈ ವಿಷಯದಲ್ಲಿ ನಿಮ್ಮ ಸಾಧನೆ ಅತಿಮುಖ್ಯವಾಗುತ್ತದೆ.
ಉ: ನನ್ನಂತಹವರು ಒಟ್ಟು ಹದಿನೈದು ಜನ ಬೇಕಾಗಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ. ಉದಾಹರಣೆಗೆ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಇನ್ಫೋಸಿಸ್‌ನ ನಾರಾಯಣ ಮೂರ್ತಿ. ಆಗ ಜಗತ್ತಿಗೆಲ್ಲ ಕನ್ನಡ ಕರ್ನಾಟಕದ ಪರಿಚಯ ಆಗುತ್ತಿತ್ತು.

ಪ್ರ: ಸಾಧನೆ ಮಾಡಬೇಕು ಎಂದುಕೊಳ್ಳುವವರಿಗೆ ನಿಮ್ಮ ಉಪದೇಶ ಏನು?
ಉ: ಉಪದೇಶ ಮಾಡುವಷ್ಟು ನಾನು ಇನ್ನೂ ಸಾಧನೆ ಮಾಡಿಲ್ಲ. ಆದರೂ ಹೇಳುವುದಾದರೆ ಎಲ್ಲವನ್ನೂ ಎಲ್ಲರನ್ನೂ ಕಳೆದುಕೊಳ್ಳಲು ತಯಾರಿರಬೇಕು. ಅದು ಕೇವಲ ಹಣ ಆಗಬೇಕಾಗಿಲ್ಲ. ಅಪ್ಪ, ಅಮ್ಮ, ಹೆಂಡತಿ, ಸಂಬಂಧಿಕರು, ಸ್ನೇಹಿತರು, ಎಲ್ಲ ಕಳಕೊಳ್ಳಲು ಸಿದ್ಧರಿರಬೇಕು.

ಪ್ರ: ನೀವೇನೂ ಅಂತಹ ಸ್ಥಿತಿಗೆ ಬಂದಿಲ್ಲವಲ್ಲ?
ಉ: ಇಲ್ಲ. ಈಗ ನೋಡಿ ನಾನಿಲ್ಲಿ ಮೈಸೂರಿಗೆ ಕಾರ್ಯಕ್ರಮ ನೀಡಲು ಬಂದಿದ್ದೇನೆ. ಅಮ್ಮನಿಗೆ ಫೋನೂ ಕೂಡ ಮಾಡಿಲ್ಲ. ಅಮ್ಮನಿಗೆ ಗೊತ್ತಿದೆಯೋ ಇಲ್ಲವೋ ಇವತ್ತು ನನ್ನ ಕಾರ್ಯಕ್ರಮ ಇದೆ ಎಂದು. ನಿಮ್ಮ ಸುತ್ತಮುತ್ತ ಇರುವವರು ನಿಮ್ಮನ್ನು ತುಂಬ ಅರ್ಥಮಾಡಿಕೊಳ್ಳುವವರಾಗಿರಬೇಕು. ನನ್ನಮ್ಮ ಇದುವರೆಗೆ ನನ್ನ ಹತ್ತಿರ ಬೇಸರ ಮಾಡಿಕೊಂಡಿಲ್ಲ. ಯಾಕೋ ಒಮ್ಮೆ ಫೋನಾದ್ರೂ ಮಾಡಬಾರದಾ ಎಂದಾಗಲೀ, ನನ್ನ ಹೆಂಡತಿ ಕೂಡ ನಿನ್ನನ್ನು ಬಿಟ್ಟುಹೋಗುತ್ತೇನೆ ಎಂದಾಗಲಿ, ಈ ರೀತಿ ನನಗೆ ಯಾವತ್ತೂ ಆಗಿಲ್ಲ. ಈ ವಿಷಯದಲ್ಲಿ ನಾನು ತುಂಬ ಅದೃಷ್ಟವಂತ.

Raghu Dixit

ಪ್ರ: ಈ ಕ್ಷೇತ್ರದಲ್ಲಿ ಮೇಲೆ ಬರಲು ನಿಮಗೆ ಯಾರಾದರೂ ಗಾಡ್‌ಫಾದರ್ ಅಂತ ಸಿಕ್ಕಿದ್ರಾ?
ಉ: ತುಂಬ ಜನ ನನ್ನ ಕಷ್ಟ ಕಾಲದಲ್ಲಿ ಸಹಾಯ ಮಡಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ಇನ್ನು ನನ್ನ ಕಥೆ ಮುಗಿಯಿತು ಅನ್ನೋ ಸಂದರ್ಭಕ್ಕೆ ಸರಿಯಾಗಿ ಒಬ್ಬರು ಸಹಾಯ ಮಾಡುವವರು ಸಿಕ್ಕಿದ್ದಾರೆ. ಒಮ್ಮೆ ಬೆಂಗಳೂರಿನಲ್ಲಿ ಒಂದು ಚಿಕ್ಕ ಕಾರ್ಯಕ್ರಮ ನೀಡಿದ್ದೆವು. ನಾನು ಭಾಸ್ಕರ ಮತ್ತು ಒಬ್ಬ ಲಯವಾದ್ಯಗಾರ. ಅದು ಬೆಂಗಳೂರಿನಲ್ಲಿ ನನ್ನ ಪ್ರಥಮ ಕಾರ್ಯಕ್ರಮ. ವೇದಿಕೆಯ ಕೆಳಗೆ ಒಬ್ಬ ಗಂಡ ಹೆಂಡತಿ ಮತ್ತು ಚಿಕ್ಕ ಮಗು ನಿಂತಿದ್ದರು. ಅವರು “ನಿಮ್ಮ ಕಾರ್ಯಕ್ರಮ ತುಂಬ ಚೆನ್ನಾಗಿದೆ. ನೀವು ಇದರ ಸಿ.ಡಿ. ಮಾಡಲೇಬೇಕು” ಎಂದರು. “ನನ್ನ ಹತ್ತಿರ ಅಷ್ಟೆಲ್ಲ ಹಣ ಇಲ್ಲ” ಅಂದೆ. ಆಗ ನನಗೆ ದೊಡ್ಡ ಸಂಬಳದ ಕೆಲಸವೂ ಇರಲಿಲ್ಲ. ನನ್ನ ಫೋನ್ ನಂಬರ್ ತೆಗೆದುಕೊಂಡರು. ಒಂದು ವಾರದ ನಂತರ ಪುನಃ ಫೋನ್ ಮಾಡಿದರು. ಭಾನುವಾರ ನಮ್ಮ ಮನೆಗೆ ಊಟಕ್ಕೆ ಬನ್ನಿ. ಬರುವಾಗ ನಿಮ್ಮ ಗಿಟಾರ್ ಕೂಡ ತೆಗೆದುಕೊಂಡು ಬನ್ನಿ ಎಂದರು. ಹಾಗೆಯೇ ಮಾಡಿದೆ. ಸುಮಾರು ಹದಿನೈದು ಜನ ಸ್ನೇಹಿತರನ್ನೂ ಆಹ್ವಾನಿಸಿದ್ದರು. ಎಲ್ಲರ ಮುಂದೆ ಹಾಡು ಹೇಳಿಸಿದರು. ಊಟ ಮಾಡಿ ಹೊರಡುವ ಸಮಯದಲ್ಲಿ ಆ ಮಗು ಒಂದು ಗ್ರೀಟಿಂಗ್ ಕಾರ್ಡ್ ಕೊಟ್ಟಿತು. ಆ ಗ್ರೀಟಿಂಗ್ ಕಾರ್ಡ್ ತೆರೆದು ನೊಡಿದರೆ ಅದರಲ್ಲಿ ಮೂವತ್ತು ಸಾವಿರ ರೂಪಾಯಿಯ ಒಂದು ಚೆಕ್.

ಪ್ರ: ಮೂವತ್ತು ಸಾವಿರ? ೧೯೯೭ರಲ್ಲಿ ಅದು ದೊಡ್ಡ ಮೊತ್ತವೇ. ಈಗಲೂ ಕೂಡ.
ಉ: ಹೌದು. ಹರಿಹರನ್ ಅಂತ ಅವರ ಹೆಸರು. ನಾನು ಕೇಳಿದೆ. ಏನಿದು ಎಂದು. ಅವರು ಹೇಳಿದರು -“ನಿಮಗೆ ಡೆಮೊ ರೆಕಾರ್ಡ್ ಮಾಡಲೂ ಹಣ ಇಲ್ಲ ಅಂದಿದ್ದಿರಿ ಆವತ್ತು. ಈ ಹಣ ಬಳಸಿ ನಿಮ್ಮ ಡೆಮೊ ರೆಕಾರ್ಡ್ ಮಾಡಿಸಿ. ನಿಮ್ಮ ಸಂಗೀತ ಇದಕ್ಕೆ ಅರ್ಹ”.

ಪ್ರ: ತುಂಬ ಶ್ರೀಮಂತರಿರಬೇಕು ಅವರು.
ಉ: ಶ್ರೀಮಂತರಲ್ಲ. ಒಬ್ಬ ಮಧ್ಯಮ ವರ್ಗದ ವ್ಯಕ್ತಿ ಅಷ್ಟೆ.

ಪ್ರ: ನೀವು ಆ ಮೇಲೆ ಎಂದಾದರೂ ಅವರನ್ನು ಭೇಟಿ ಆಗಿದ್ದೀರಾ?
ಉ: ಹರಿಹರನ್ ನನ್ನ ಉತ್ತಮ ಸ್ನೇಹಿತರಾಗಿದ್ದಾರೆ. ನನ್ನ ಜೀವನದ ಎಲ್ಲ ಪ್ರಮುಖ ಘಟ್ಟಗಳಲ್ಲಿ ಅವರು ನನ್ನ ಜೊತೆ ಇದ್ದೇ ಇದ್ದಾರೆ. ನಾನು ಅವರನ್ನು ಭೇಟಿ ಆಗಿ ಎಲ್ಲ ಚರ್ಚಿಸುತ್ತೇನೆ.

ಪ್ರ: ಆ ರೀತಿ ಮತ್ತೆ ಎಂದಾದರೂ ಆಗಿದೆಯಾ?
ಉ: ಆಗಿದೆ. ೨೦೦೫ರಲ್ಲಿ ಮುಂಬಯಿನಲ್ಲಿ ಒಬ್ಬ ಖ್ಯಾತ ರೆಕಾರ್ಡಿಂಗ್ ಕಂಪೆನಿಗೆ ನನ್ನ ಡೆಮೊ ತೆಗೆದುಕೊಂಡು ಹೋಗಿದ್ದೆ. ಸುಮಾರು ಎರಡು ಗಂಟೆ ಕಾಯಿಸಿದರು. ಕೊನೆಗೆ ಆಕೆ ಹೊರಗೆ ಬಂದು “ಹೇಳು ಏನಾಗಬೇಕು? ನಿನಗೆ ೫ ನಿಮಿಷ ಸಮಯ ಇದೆ” ಅಂದಳು. ನಾನು ನನ್ನ ಬಗ್ಗೆ ಹೇಳಿದೆ. “ನಿನ್ನ ಹತ್ತಿರ ಎಷ್ಟು ಹಣ ಇದೆ? ನೀನು ಸುಂದರ ಇಲ್ಲ. ನಿನ್ನನ್ನು ಪ್ರೊಮೋಟ್ ಮಾಡಬೇಕಾದರೆ ೩೦ ಲಕ್ಷ ರೂ. ಬೇಕು. ಅಷ್ಟು ಇದೆಯಾ?” ಎಂದು ಕೇಳಿದಳು. ನನಗೆ ತಲೆ ಎಲ್ಲ ಸುತ್ತಿ ಬಂದಂತಾಯಿತು. ನನಗೆ ಅಳುವೇ ಬಂದಿತ್ತು. ನಾನು ಹೊರಗೆ ಬಂದು ರಸ್ತೆ ದಾಟುವಾಗ ಶಶಾಂಕ್ ಘೋಶ್ ಎಂಬ ನನ್ನ ಸ್ನೇಹಿತ ಸಿನಿಮಾ ನಿರ್ದೇಶಕ ಫೋನ್ ಮಾಡಿ ಬಾಂದ್ರದಲ್ಲಿ ಒಂದು ಬಾರ್‌ನಲ್ಲಿ ಕಾರ್ಯಕ್ರಮ ನೀಡುತ್ತೀಯಾ ಎಂದು ಕೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ವಿಶಾಲ್ ಮತ್ತು ಶೇಖರ್ ಆ ಕಾರ್ಯಕ್ರಮ ನೋಡಿದವರಲ್ಲಿದ್ದವರು ಬಂದು ನನ್ನನ್ನು ಮಾತನಾಡಿಸಿದರು. “ನಿನ್ನ ಸಂಗೀತ ಇಷ್ಟು ಚೆನ್ನಾಗಿದೆಯಲ್ಲ, ನಿನ್ನ ಆಲ್ಬಂ ಯಾಕೆ ಮಾಡಿಲ್ಲ?” ಎಂದು ಕೇಳಿದರು. ನಾನು ೯ ವರ್ಷದಿಂದ ಒದ್ದಾಡುತ್ತಿರುವ ಬಗ್ಗೆ ಹೇಳಿದೆ. ಚಿಂತೆ ಮಾಡಬೇಡ. ನಾವೇ ಒಂದು ರೆಕಾರ್ಡಿಂಗ್ ಕಂಪೆನಿ ಸುರು ಮಾಡುತ್ತೇವೆ. ನಿನ್ನದೇ ಪ್ರಥಮ ಆಲ್ಬಂ ಮಾಡುತ್ತೇವೆ ಎಂದು ಹೇಳಿ ಐದು ತಿಂಗಳಲ್ಲಿ ನನ್ನ ಪ್ರಥಮ ಆಲ್ಬಂ ಹೊರಬಂತು. ಆ ಆಲ್ಬಂನಿಂದಾಗಿ ನಾನು ಇಡಿಯ ದೇಶದಲ್ಲೇ ಎಲ್ಲರಿಗು ಪರಿಚಿತನಾದೆ.

ಪ್ರ: ಈ ರೀತಿ ನಿಮ್ಮ ಜೀವನದಲ್ಲಿ “ಎಲ್ಲ ಮುಗಿಯಿತು, ಇನ್ನೇನೂ ಇಲ್ಲ” ಅಂದುಕೊಂಡಿದ್ದಾಗ ಯವುದೋ ಜಾದು ನಡೆದದ್ದು ಎಷ್ಟು ಸಲ ಆಗಿದೆ?
ಉ: ಹದಿನೈದು ಸಲವಾದರೂ ಆಗಿದೆ. ಅದೂ ಸರಿಯಾದ ಸಮಯದಲ್ಲೇ. ನನ್ನ ಕಾಲ ಚೆನ್ನಾಗಿ ನಡೆಯುತ್ತಿದ್ದಾಗ ಅಂತಹ ಯಾವ ಜಾದೂ ನಡೆಯಲಿಲ್ಲ. ಕಷ್ಟದಲ್ಲಿದ್ದಾಗಲೇ ಜಾದೂ ನಡೆದ್ದು. ನಾನು ಕೂಡ ಇಂತಹ ಪವಾಡಗಳನ್ನು ಗುರುತಿಸುವುದನ್ನು ಕರಗತ ಮಾಡಿಕೊಂಡಿದ್ದೇನೆ. ಎಲ್ಲರ ಜೀವನದಲ್ಲೂ ಈ ರೀತಿ ಚಮತ್ಕಾರಗಳು ನಡೆಯುತ್ತಲೇ ಇರುತ್ತವೆ. ಆದರೆ ನಾವು ಅವುಗಳನ್ನು ಗುರುತಿಸುವುದಿಲ್ಲ. ಯಾವುದೋ ಒಂದು ಚಿಕ್ಕ ಘಟನೆ ಎಂದುಕೊಳ್ಳುತ್ತೇವೆ. ಅದರ ಮಹತ್ವ ನಮಗೆ ಹತ್ತು ವರ್ಷದ ನಂತರ ಅರಿವಾಗುತ್ತದೆ.

ಪ್ರ: ಅಂದರೆ ನಿಮಗೆ ಒಂದು ಸಿಕ್ಸ್ತ್ ಸೆನ್ಸ್ ಇದೆ ಅಂದುಕೊಳ್ಳಬಹುದೇ?
ಉ: ಸಿಕ್ಸ್ತ್ ಸೆನ್ಸ್ ಅಲ್ಲ. ನಿಮ್ಮನ್ನು ಒಬ್ಬ ಭೇಟಿ ಆದಾಗ ಪ್ರತಿಯೊಬ್ಬನಲ್ಲೂ ಈತನನ್ನು ಯಾವುದೋ ಉದ್ದೇಶದಿಂದ ನನ್ನ ಬಳಿಗೆ ಕಳುಹಿಸಲಾಗಿದೆ ಎಂದು ನಂಬಬೇಕು. ಒಬ್ಬ ವ್ಯಕ್ತಿಯನ್ನು ಒಳ್ಳೆಯತನದಿಂದ ಭೇಟಿ ಆದಾಗ ನಿಮಗೆ ಒಳ್ಳೆಯದೇ ಸಿಗುತ್ತದೆ. ಇವನು ನನಗೆ ಗ್ಯಾರಂಟಿ ಟೋಪಿ ಹಾಕುತ್ತಾನೆ ಎಂದು ಅಂದುಕೊಂಡರೆ ಆತ ಖಂಡಿತವಾಗಿಯೂ ನಿಮಗೆ ಟೋಪಿ ಹಾಕುತ್ತಾನೆ.

ಪ್ರ: ಅಂದರೆ ನಿಮಗೆ ಗೊತ್ತಾಗುತ್ತದೆಯಾ ಯಾರು ಮೋಸ ಮಾಡುತ್ತಾರೆ ಯಾರು ಮೋಸ ಮಾಡುವುದಿಲ್ಲ ಎಂದು?
ಉ: ಅದು ಹಾಗಲ್ಲ. ಇದು ನೀವು ಈ ವಿಶ್ವಕ್ಕೆ ನೀಡುವ ಸಂದೇಶ. ಈ ವಿಶ್ವವು ನನ್ನನ್ನು ಕಾಪಾಡುತ್ತದೆ ಎಂಬ ಸಂದೇಶವನ್ನು ನೀವು ನೀಡಿದರೆ ಅದು ನಿಮ್ಮನ್ನು ನಿಜವಾಗಿಯೂ ಕಾಪಾಡುತ್ತದೆ. ಈ ಪ್ರಪಂಚ ಒಂದು ನರಕ ಎಂದುಕೊಂಡರೆ ಅದು ನಿಜವಾಗಿಯೂ ನರಕವೇ ಆಗುತ್ತದೆ. ಆಗ ಪ್ರತಿಯೊಬ್ಬರೂ ನಿಮಗೆ ನರಕವನ್ನೇ ಸೃಷ್ಟಿಸುತ್ತಾರೆ.

ಪ್ರ: ಅಂದರೆ ಯಾವಾಗಲೂ ಧನಾತ್ಮಕವಾಗಿಯೇ ಆಲೋಚಿಸಬೇಕು. Always think positive.
ಉ: ಹೌದು. ನೀವು ಈಗ ಮಾಡುವ ಸಕಾರಾತ್ಮಕ ಆಲೋಚನೆ ಸುಮಾರು ನಾಲ್ಕು ಐದು ವರ್ಷಗಳ ನಂತರ ಕಾರ್ಯಗತವಾಗುತ್ತದೆ.

ಪ್ರ: ಇನ್ನೇನಾದರೂ ಹೇಳಲಿಕ್ಕೆ ಇದೆಯಾ? ನಮ್ಮ ಕನ್ನಡದ ಪ್ರಥಮ ಅಂತರಜಾಲ ಪತ್ರಿಕೆ “ವಿಶ್ವಕನ್ನಡ”ದ ಓದುಗರಿಗೆ ಏನಾದರೂ ಸಂದೇಶ ಇದೆಯಾ?
ಉ: ಲುಂಗಿ ಹಾಕಿಕೊಳ್ಳಿ, ಮಜಾ ಮಾಡಿ, ಒಳ್ಳೆ ಏರ್ ಕಂಡಿಶನಿಂಗ್.

ಪ್ರ: ಕನ್ನಡಿಗರನ್ನು ಅದನ್ನು ಮಾಡುತ್ತಲೇ ಇದ್ದಾರೆ. ನಮ್ಮ ಮನೆಗೆ ಬಂದು ನೋಡಿ. ನಾನು ಮನೆಯಲ್ಲಿ ಲುಂಗಿಯನ್ನೇ ಉಟ್ಟುಕೊಂಡಿರುತ್ತೇನೆ. ನನ್ನ ಮಗಳು ಈ ದಿನ ಹೇಳುತ್ತಿದ್ದಳು “ರಘು ದೀಕ್ಷಿತ್ ಸಂದರ್ಶನ ಮಾಡಲು ಹೋಗುತ್ತಿದ್ದೀಯಾ, ಲುಂಗಿ ಉಟ್ಟುಕೊಂಡು ಹೋಗು” ಅಂತ.
ಉ: ಹ್ಹ ಹ್ಹ ಹ್ಹಾ. ಸಮಯ ಆಯಿತು. ಬನ್ನಿ. ಕಾರ್ಯಕ್ರಮಕ್ಕೆ ಹೋಗೋಣ.

24 Responses to ರಘು ದೀಕ್ಷಿತ್ ಸಂದರ್ಶನ

  1. Aravinda

    ನಮಸ್ಕಾರ,

    ರಘು ದೀಕ್ಷಿತ್ ರ ದೀರ್ಘ ಪರಿಚಯ ಖುಷಿ ತಂದಿತು.

  2. Lingaraj

    Tumba channagide. DhanyavadagaLu

  3. ಶ್ರೀಕಾಂತ ಮಿಶ್ರೀಕೋಟಿ

    ಸಂದರ್ಶನ ತುಂಬ ಚೆನ್ನಾಗಿದೆ . ಧನ್ಯವಾದಗಳು .
    ““ವಿಶ್ವಕನ್ನಡ”ದ ಓದುಗರಿಗೆ ಏನಾದರೂ ಸಂದೇಶ ಇದೆಯಾ?
    ಉ: ಲುಂಗಿ ಹಾಕಿಕೊಳ್ಳಿ, ಮಜಾ ಮಾಡಿ, ಒಳ್ಳೆ ಏರ್ ಕಂಡಿಶನಿಂಗ್.”

    ಸೂಪರ್ !!

    ಅಂದ ಹಾಗೆ

    “ರಘು ದೀಕ್ಷಿತ್ ಇಲ್ಲಿ ಅವರು ಸಂಯೋಜಿಸುತ್ತಿರುವ ಬೇಂದ್ರೆಯವರ ಬಾರೋ ಸಾಧನಕೇರಿಗೆ ಹಾಡನ್ನು ಹಾಡಿ ತೋರಿಸಿದರು. ಅದನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ. ”

    ಎಲ್ಲಿ?

  4. pavanaja

    @ಶ್ರೀಕಾಂತ ಮಿಶ್ರೀಕೋಟಿ – ಈಗ ಹಾಕಿದ್ದೆನೆ ನೋಡಿ. ಅದೇ ರೀತಿ ಮುಮದಿನ ಪ್ಯಾರಾದಲ್ಲೂ ಅವರು ಪಾಶ್ಚಾತ್ಯ ಮಾದರಿಯಲ್ಲಿ ಹಾಡಿದ ಹಾಡಿನ ಕೊಂಡಿ ನ ಈಡಿದ್ದೇನೆ. ಅವೆರಡು ಬಿಟ್ಟು ಹೋಗಿದ್ದವು. ಈಗ ಕೇಳಿ ಆನಂದಿಸಿ 🙂

    -ಪವನಜ

  5. ಹಂಸಾನಂದಿ

    ಚೆನ್ನಾಗಿದೆ!

  6. ನನ್ನಿ ಸುನಿಲ

    ತುಂಬಾ ಚೆನ್ನಾಗಿ ಮೂಡಿಬಂದಿರುವ ಸಂದರ್ಶನ. ಸಂದರ್ಶನವನ್ನು ನಮಗೆಲ್ಲರಿಗೂ ನೀಡಿದ್ದಕ್ಕಾಗಿ ಹೆನ್ನನ್ನಿ 😉

  7. ನನ್ನಿ ಸುನಿಲ

    ನನಗೆ “ಹೊಸ ಹಾದಿಯನ್ನು ಹಿಡಿದು ನಡೆಯಣ್ಣ” ಎಂಬ ಹಾಡನ್ನು ರಘು ಅವರ ಗಿಟಾರಿನಿಂದ ಕೇಳಿಸಿಕೊಳ್ಳಬೇಕು ಎಂಬ ಆಸೆ ಇದೆ.

  8. Pramod

    ಇದು ಬರಿಯ ಸ೦ದರ್ಶನವಲ್ಲ, ಒ೦ದು ಪ್ರತಿಭೆಯ ಜೀವನ ಸ೦ಘರ್ಷದ, ಸ್ಫೂರ್ತಿ ಚಿಲುಮೆಯ ಕಥೆ

  9. Anil

    ಬಹಳ ಚನ್ನಾಗಿದೆ ಸಂದರ್ಶನ.

  10. Lakshmi shashidhar Chaitanya

    ಸಂದರ್ಶನ ಬಹಳ ಚೆನ್ನಾಗಿ ಮೂಡಿ ಬಂದಿದೆ ಸರ್ !

  11. Revathi

    ತುಂಬಾ ಚೆನ್ನಾಗಿದೆ 🙂

  12. ದತ್ತಾತ್ರಿ

    ತುಂಬಾ ಅಚ್ಚುಕಟ್ಟಾಗಿ ಮೂಡಿ ಬಂದ ಸಂದರ್ಶನ ಅಲ್ಲಲ್ಲ ಮಾತುಕತೆ ಇದು. ಧನ್ಯವಾದಗಳು. ನೆನಪಿಡಬೇಕಾದ ಸಾಲುಗಳು:

    ನಿಮ್ಮನ್ನು ಒಬ್ಬ ಭೇಟಿ ಆದಾಗ ಪ್ರತಿಯೊಬ್ಬನಲ್ಲೂ ಈತನನ್ನು ಯಾವುದೋ ಉದ್ದೇಶದಿಂದ ನನ್ನ ಬಳಿಗೆ ಕಳುಹಿಸಲಾಗಿದೆ ಎಂದು ನಂಬಬೇಕು. ಒಬ್ಬ ವ್ಯಕ್ತಿಯನ್ನು ಒಳ್ಳೆಯತನದಿಂದ ಭೇಟಿ ಆದಾಗ ನಿಮಗೆ ಒಳ್ಳೆಯದೇ ಸಿಗುತ್ತದೆ. ಇವನು ನನಗೆ ಗ್ಯಾರಂಟಿ ಟೋಪಿ ಹಾಕುತ್ತಾನೆ ಎಂದು ಅಂದುಕೊಂಡರೆ ಆತ ಖಂಡಿತವಾಗಿಯೂ ನಿಮಗೆ ಟೋಪಿ ಹಾಕುತ್ತಾನೆ. ಈ ವಿಶ್ವವು ನನ್ನನ್ನು ಕಾಪಾಡುತ್ತದೆ ಎಂಬ ಸಂದೇಶವನ್ನು ನೀವು ನೀಡಿದರೆ ಅದು ನಿಮ್ಮನ್ನು ನಿಜವಾಗಿಯೂ ಕಾಪಾಡುತ್ತದೆ. ಈ ಪ್ರಪಂಚ ಒಂದು ನರಕ ಎಂದುಕೊಂಡರೆ ಅದು ನಿಜವಾಗಿಯೂ ನರಕವೇ ಆಗುತ್ತದೆ. ಆಗ ಪ್ರತಿಯೊಬ್ಬರೂ ನಿಮಗೆ ನರಕವನ್ನೇ ಸೃಷ್ಟಿಸುತ್ತಾರೆ.

  13. Srikrishna

    ಪವನಜ ಮಾವ ಭಾರಿ super ಬನ್ದಿದೆ ಈ ಸಂದರ್ಶನ..
    ಪ್ರ: ಅಂದರೆ ಯಾವಾಗಲೂ ಧನಾತ್ಮಕವಾಗಿಯೇ ಆಲೋಚಿಸಬೇಕು. Always think positive.
    ಉ: ಹೌದು. ನೀವು ಈಗ ಮಾಡುವ ಸಕಾರಾತ್ಮಕ ಆಲೋಚನೆ ಸುಮಾರು ನಾಲ್ಕು ಐದು ವರ್ಷಗಳ ನಂತರ ಕಾರ್ಯಗತವಾಗುತ್ತದೆ. ಇದು ನನ್ನ favorite

  14. En ta Hegde

    ಒಳ್ಳೇ ಪ್ರೋಬಿಂಗ್ ಸಂದರ್ಶನ ಇದು. ಒಂದು ಕೋಟಿ ರೂಪಾಯಿ ಶುಲ್ಕ ಪಡೆಯುತ್ತಾರೆಂದು ಇವರ ಬಗ್ಗೆ ಉತ್ಪ್ರೇಕ್ಷೆಯ ಸುದ್ದಿ ಹಬ್ಬಿಸಿ ಇವರಿಗೆ ಬರಗಾಲ ಬರುವಂತೆ ಮಾಡಿದ ವೆಬ್ ಪತ್ರಿಕೆಯನ್ನೂ ಎಕ್ಸ್ ಪೋಸ್ ಮಾಡಿದಿರಿ.

  15. S BALI

    Thanks Pavanaja for a fantastic interview, Raghu’s honesty is verymuch visible. . . Kudos to you once again for giving the hungry kannadigas good food for thought.

    Regards
    S BALI

  16. ಸಂದೀಪ್ ಕಾಮತ್

    ತುಂಬಾ ಚೆನ್ನಾಗಿದೆ.

  17. ಕನ್ನಡತಿ

    ರಘು ದೀಕ್ಷಿತ್ ಕನ್ನಡಿಗರ ಹೆಮ್ಮೆ! ಅವರಿಗೆ ದೇವರು ಆರೋಗ್ಯ, ನೆಮ್ಮದಿ ಕೊಟ್ಟು ಕಾಪಾಡಲಿ ! ಅವರ ಕನಸುಗಳೆಲ್ಲ ಸಾಕಾರಗೊಳ್ಳಲಿ !! .ಎಲ್ಲೆಡೆ ಕನ್ನಡತನ ಮೆರೆಯಲಿ!!

  18. ನಾರಾಯಣ

    ರಘು ದೀಕ್ಷಿತ್‌ ಸಮಕಾಲೀನ, ಪಾಶ್ಚಾತ್ಯ ಸಂಗೀತದಲ್ಲಿಯೂ ಸಹ ಮಾಧುರ್ಯ ತರಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಹಾಡುಗಾರಿಕೆಯೂ ಚೆನ್ನಾಗಿದೆ. ‘ಮುಂಜಾನೆ ಮಂಜಲ್ಲಿ..’ ಹಾಡು ಇದಕ್ಕೆ ಅತ್ಯುತ್ತಮ ಉದಾಹರಣೆ.

    ಕನ್ನಡ ಚಲನಚಿತ್ರರಂಗ ಹಾಗೂ ಕನ್ನಡ ಹಾಡುಗಳಿಗೆ ಇನ್ನಷ್ಟು ಇಂಪಾದ ಪಾಶ್ಚಾತ್ಯ ಸಂಗೀತ ರಘು ದೀಕ್ಷಿತ್‌ ವಾದ್ಯವೃಂದದಿಂದ ಮೂಡಿಬರಲೆಂದು ಹಾರೈಸುವೆ.

  19. ಪ್ರಕಾಶ ಮೂಲಿಮನಿ

    ಪ್ರ: ಅಂದರೆ ಯಾವಾಗಲೂ ಧನಾತ್ಮಕವಾಗಿಯೇ ಆಲೋಚಿಸಬೇಕು. Always think positive.
    ಉ: ಹೌದು. ನೀವು ಈಗ ಮಾಡುವ ಸಕಾರಾತ್ಮಕ ಆಲೋಚನೆ ಸುಮಾರು ನಾಲ್ಕು ಐದು ವರ್ಷಗಳ ನಂತರ ಕಾರ್ಯಗತವಾಗುತ್ತದೆ.
    ಅದು ನಿಜಾ, ಕೆಲವಬ್ಬರಿಗೆ ಬೇಗ ಕಾರ್ಯಗತವಾಗುತ್ತದೆ ಆದರೆ ಕೆಲವಬ್ಬರಿಗೆ ತಡವಾಗಿ ಕಾರ್ಯಗತವಾಗುತ್ತದೆ ಅಲ್ಲಿಯವರೆಗೆ ಕಾಯಬೇಕು ಅಸ್ಟೆ.

  20. MANJUNATH MANTUR

    Sandarshana savivaravagi moodibandide …..raghu bagge idda esto kutoohala taniside …tumbane danyavada nimage….

  21. radhatanaya

    ರಘು ದೀಕ್ಷಿತ್ ಸಂದರ್ಶನ ಬಹಳ ಮುದಕೊಟ್ಟಿತು. ಅತಿ ತಡವಾಗಿ ತಮಗೆ ಧನ್ಯವಾದಗಳನ್ನು ಹೇಳುತ್ತಿದ್ದೇನೆ ಕ್ಷಮಿಸಿ. ಈ ಲೇಖನ ವಿಕಿಪೀಡಿಯದಲ್ಲಿ ಸೇರಿಸುತ್ತೇನೆ. ನಮಸ್ಕಾರ.

  22. Vijay

    Nice interview!!!

  23. ರವಿಶಂಕರ ಶಾಸ್ತ್ರಿ

    ತುಂಬಾ ಆಪ್ತವಾದ ಸಂದರ್ಶನ, ಧನ್ಯವಾದಗಳು.

  24. Maanikya

    Maanya Raghu dixithare…Nanobba yuvakavi nanna haadugalige neevu dhvaniyaagtheera?

Leave a Reply