ಚಿನಕುರಳಿ – ೨೧

– ಮರ್ಕಟ

`ಸರ್ಕಾರಿ ನೌಕರರು ಅಮಾನತಿಗೆ ಒಳಗಾಗುವುದನ್ನು ಬಹಳ ಇಷ್ಟಪಡುತ್ತಾರೆ’ -ಡಾ| ಸಿದ್ಧಲಿಂಗಯ್ಯ.
ಕೆಲಸ ಮಾಡದೆ ಅರ್ಧ ಸಂಬಳ ಪಡೆಯುವ ಅವಕಾಶ ಮತ್ತು ಅದೇ ಸಮಯದಲ್ಲಿ ಇತರ ಕೆಲಸ ಮಾಡಿ ಹಣ ಸಂಪಾದಿಸುವ ಅವಕಾಶವನ್ನು ಯಾರು ತಾನೆ ಇಷ್ಟಪಡುವುದಿಲ್ಲ?

`ದೇಶಭಕ್ತಿ ಬಗ್ಗೆ ನಾನು ಯಾರೊಬ್ಬರಿಂದಲೂ ಪ್ರಮಾಣಪತ್ರ ಪಡೆಯಬೇಕಾಗಿಲ್ಲ’ -ಪ್ರಧಾನಿ ವಾಜಪೇಯಿ.
ಖಂಡಿತಾ. ಪ್ರಮಾಣಪತ್ರ ಹಿಡಿದುಕೊಂಡು ಮಾಸಾಶನಕ್ಕೆ ಅಲೆದಾಡುವ ಗತಿ ಅವರಿಗೆ ಬಂದಿಲ್ಲ.

`ಎಐಸಿಸಿ ಅಧಿವೇಶನಕ್ಕೆ ಸರ್ಕಾರಿ ಯಂತ್ರದ ದುರುಪಯೋಗ ನಡೆದಿಲ್ಲ’ -ಎಸ್. ಎಂ. ಕೃಷ್ಣ.
ಸರ್ಕಾರಿ ಯಂತ್ರ ಉಪಯೋಗಿಸಲು ಅರ್ಹ ಸ್ಥಿತಿಯಲ್ಲಿಲ್ಲ ಎಂದು ಎಲ್ಲರಿಗೂ ಗೊತ್ತು.

`ಜನಸಾಮಾನ್ಯರಿಗೂ ನ್ಯಾಯಾಲಯಗಳ ಕಲಾಪ ತಿಳಿಯುವಂತಾಗಲು ವಕೀಲರು ಕನ್ನಡದಲ್ಲಿಯೇ ವಾದ ಮಂಡಿಸಲು ಪ್ರಯತ್ನಿಸಬೇಕು’ -ಕಾನೂನು ಸಚಿವ ಡಿ. ಬಿ. ಚಂದ್ರೇಗೌಡ.
ವಕೀಲರು ಕನ್ನಡದಲ್ಲಿ ಮಂಡಿಸಿದ ವಾದವನ್ನು ಅರ್ಥಮಾಡಿಕೊಳ್ಳುವಷ್ಟು ಕನ್ನಡ ನಮ್ಮ ನ್ಯಾಯಾಧೀಶರುಗಳಿಗೆ ಗೊತ್ತಿದೆಯೇ?

`ಮರ್ಯಾದೆ ಬಿಟ್ಟು ದುಡ್ಡು ಮಾಡು, ನಂತರ ಮರ್ಯಾದೆ ತಾನಾಗಿ ಬರುತ್ತದೆ ಎಂಬುದು ಇಂದಿನ ರಾಜಕೀಯಕ್ಕೆ ಅನ್ವಯಿಸುತ್ತದೆ’ -ಡಾ| ಯು. ಆರ್. ಅನಂತಮೂರ್ತಿ.
ವಶೀಲಿ ಉಪಯೋಗಿಸಿ ಪ್ರಶಸ್ತಿ ಗಿಟ್ಟಿಸಿಕೊ, ಜನಮನ್ನಣೆ ತಾನಾಗಿ ಬರುತ್ತದೆ ಎಂಬುದು ಇಂದಿನ ಸಾಹಿತಿಗಳಿಗೆ ಅನ್ವಯಿಸುತ್ತದೆ.

`ಈ ದೇಶವನ್ನು ಆಳುತ್ತಿರುವವರು ಕೇವಲ ಮುಷ್ಟಿಗಾತ್ರದ ಹಣಕ್ಕಾಗಿ ತಾವು ಕುಳಿತ ಕುರ್ಚಿಯ ಗೌರವವನ್ನೇ ಹರಾಜು ಹಾಕಿದ್ದಾರೆ’ -ಸೋನಿಯಾ ಗಾಂಧಿ.
ಛೇ ಛೇ ಎಂಥ ಅನ್ಯಾಯ. ಜುಜುಬಿ ಲಕ್ಷ ರೂ. ತೆಗೆದುಕೊಂಡು ಮಾನ ಕಳೆದುಕೊಳ್ಳುವುದೇ? ನುಂಗುವಾಗ ಕೋಟಿಗಳಲ್ಲೇ ನುಂಗಬೇಕು ಎಂದು ತಿಳಿದಿಲ್ಲವೇ?

ತೆಹಲ್ಕಾ ಡಾಟ್ ಕಾಂ ಹೊರಹಾಕಿದ ಹಗರಣದಿಂದ ಎಚ್ಚತ್ತ ಕೇಂದ್ರ ಸರ್ಕಾರ ತನಿಖಾ ಆಯೋಗ ರಚಿಸಿದೆ.
ಹಗರಣ ಬಗ್ಗೆ ತನಿಖೆ ಮಾಡಲು ಅಲ್ಲ. ತೆಹಲ್ಕಾ ಡಾಟ್ ಕಾಂನವರಿಗೆ ಹಣ ಎಲ್ಲಿಂದ ಬಂತು ಎಂಬುದನ್ನು ಪತ್ತೆ ಹಚ್ಚಲು.

ಅಮೇರಿಕದ ಖ್ಯಾತ ಐ. ಬಿ. ಎಮ್. ಕಂಪೆನಿಯ ಮಾಜಿ ಉದ್ಯೋಗಿ ರಾಬರ್‍ಟ್ ಎಸ್. ಜರ್ಮೈನ್ ಎಂಬಾತನನ್ನು ಭ್ರಷ್ಟಾಚಾರ ಆರೋಪದಲ್ಲಿ ದೋಷಿ ಎಂದು ನ್ಯಾಯಾಲಯವು ತೀರ್ಮಾನಿಸಿ ಶಿಕ್ಷೆ ವಿಧಿಸಿದೆ.
ಭಾರತದಲ್ಲಿರುವ ಎಲ್ಲ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ಈಗ `ಅಮೇರಿಕಾದಲ್ಲೂ ಭ್ರಷ್ಟಾಚಾರ ಇದೆ’ ಎಂದು ಸಮಜಾಯಿಸಿ ನೀಡಬಹುದು.

`ಈ ಮುಂಗಡ ಪತ್ರ ಜನ ವಿರೋಧಿ’ -ಕೇಂದ್ರ ಮುಂಗಡ ಪತ್ರದ ಬಗ್ಗೆ ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ, ಕರ್ನಾಟಕದಲ್ಲಿ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್‌ನ ನಾಯಕರು.
`ಈ ಮುಂಗಡ ಪತ್ರ ಜನ ವಿರೋಧಿ’ -ರಾಜ್ಯದಲ್ಲಿ ವಿರೋಧಪಕ್ಷವಾಗಿರುವ ಬಿಜೆಪಿ ನಾಯಕರು ಕರ್ನಾಟಕದ ಮುಂಗಡ ಪತ್ರದ ಬಗ್ಗೆ ಪ್ರತಿಕ್ರಿಯಿಸುತ್ತಾ.
ವಿರೋಧಿಸುವುದೊಂದೇ ವಿರೋಧ ಪಕ್ಷದವರ ಧರ್ಮ.

`ವಾಜಪೇಯಿ ಅವರು ದೇಶದ್ರೋಹಿ’ -ಸೋನಿಯಾ ಗಾಂಧಿ.
ತನ್ನ ಎಲೆಯಲ್ಲಿ ಕತ್ತೆ ಸತ್ತುಬಿದ್ದಿರಲು ನಿನ್ನ ಎಲೆಯಲ್ಲಿ ನೋಣ ಸತ್ತು ಬಿದ್ದಿದೆ ಎಂದಂತಾಯಿತು.

`ರಾಜ್ಯದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ. ದಲಿತರ ನೋವಿಗೆ ಕೊನೆ ಇಲ್ಲ. ದಲಿತರ ಸಮಸ್ಯೆಗಳು ಭಾಷಣದಿಂದ ಪರಿಹಾರ ಆಗಲಾರವು’ -ಶಾಸಕ ಸಿದ್ಧಲಿಂಗಯ್ಯ.
ಹಾಗೆಂದು ಅವರು ಭಾಷಣ ನೀಡುತ್ತಾ ಹೇಳಿದರು.

`ಬೀರು ವೈನ್ ಕುಡದರ ನಿಶೆಯೇನೂ ಆಗೂದಿಲ್ಲ. ಬೇಕಾದರ ಟೆ ಮಾಡಿ ನೋಡಿ’ -ಕಾಂಗ್ರೆಸ್ ಶಾಸಕ ಎಸ್. ಜಿ. ನಂಜಯ್ಯನಮಠ.
ರಾಜಕೀಯದ ನಿಶೆ ಏರಿದವರಿಗೆ ಬೇರೆ ಯಾವ ನಿಶೆಯೂ ಏರುವುದಿಲ್ಲ.

ನಕಲಿ ಮತ್ತು ಕಲಬೆರಕೆ ಮದ್ಯ ತಯಾರಿಕೆ ತಡೆಗಟ್ಟುವ ಸಲುವಾಗಿ ಮದ್ಯದ ಸೀಸೆಗಳ ಮೇಲೆ ಹಾಲೋಗ್ರಾಮ್ ಮುದ್ರೆಯನ್ನು ಸರಕಾರ ಕಡ್ಡಾಯಗೊಳಿಸಿದೆ.
ನಕಲಿ ಹಾಲೋಗ್ರಾಮ್ ತಯಾರಿಕೆಯ ಉದ್ಯಮವೂ ಹುಟ್ಟಿಕೊಳ್ಳಲಿದೆ.

ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ರಂಗಭೂಮಿ ಕ್ರಿಯಾ ಸಮಿತಿ ಮಂಗಳವಾರ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು.
ಆಗಮಿಸಿದ್ದ ಗಣ್ಯರು ಯಾರೂ ಕುಣಿದುದು ವರದಿಯಾಗಿಲ್ಲ.

`ಪ್ರಧಾನಿ ವಾಜಪೇಯಿ ಕಾಂಗ್ರೆಸ್ ವಿರುದ್ಧ ಸಮರ ಸಾರುವ ಬದಲು ಭ್ರಷ್ಟಾಚಾರದ ವಿರುದ್ಧ ಸಮರ ಘೋಷಿಸಿದ್ದರೆ ಒಳ್ಳೆಯದಾಗುತ್ತಿತ್ತು’ -ಕಾಂಗ್ರೆಸ್ ವಕ್ತಾರ ಆನಂದ ಶರ್ಮ.
ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಪರ್ಯಾಯ ಪದಗಳೆಂಬುದು ಆನಂದ ಶರ್ಮರಿಗೆ ಮರೆತೇ ಹೋಯಿತೇ ಎಂದು ಕುಹಕಿಗಳು ಆಡಿಕೊಳ್ಳುತ್ತಿದ್ದಾರೆ.

(೨೦೦೧)

Leave a Reply