ಚಿನಕುರಳಿ – ೨೦
– ಮರ್ಕಟ
`ನಾನು ರಾಜಕಾರಣದಿಂದ ಓಡಿ ಹೋಗುವುದಿಲ್ಲ’ -ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ.
ತೂಕಡಿಸುವ ವ್ಯಕ್ತಿ ಓಡಿ ಹೋಗಲು ಹೇಗೆ ತಾನೆ ಸಾಧ್ಯ?
`ನಾನು ಯಾವ ಪತ್ರಿಕೆಗೂ ಹೆದರೋಲ್ಲ. ನನಗೆ ಯಾರೂ ಏನೂ ಮಾಡಕ್ಕೆ ಆಗಲ್ಲ. ನನ್ನನ್ನು ಯಾವ ಪತ್ರಿಕೆಯೂ ಬೆಳೆಸಿಲ್ಲ. ಅಷ್ಟಕ್ಕೂ ಎಷ್ಟು ಜನ ಪತ್ರಿಕೆ ಓದ್ತಾರೆ?’ -ಚಲನಚಿತ್ರ ನಟ ಶಿವರಾಜಕುಮಾರ್.
ಹಿಂದೊಮ್ಮೆ ಕರ್ನಾಟಕದ (ಕು)ಖ್ಯಾತ ರಾಜಕಾರಣಿಯೊಬ್ಬರು `ಪತ್ರಿಕೆಯವರು ಅರಬ್ಬಿ ಸಮುದ್ರದಲ್ಲಿ ಹಾರಿಕೊಳ್ಳಲಿ’ ಎಂದಿದ್ದರು. ಅವರಿಗೇನಾಯಿತು ಎಂದು ಯಾರಿಗಾದರೂ ನೆನಪಿದೆಯಾ?
ಜಗದೇವಿ ಎಂಬ ಯುವತಿ ಕಳೆದ ಎರಡು ವರ್ಷಗಳಿಂದ ನಿರಾಹಾರಿಯಾಗಿ ಬರಿ ನೀರು ಕುಡಿದು ಆರೋಗ್ಯವಾಗಿ ಜೀವಿಸಿದ್ದಾಳೆ -ಸುದ್ದಿ.
ಆಕೆಯ ಜೀನ್‌ಗಳನ್ನು ಉಪಯೋಗಿಸಿ ತಳಿ ತಂತ್ರಜ್ಞಾನದ ಸಹಾಯದಿಂದ ಮುಂಬರುವ ಪೀಳಿಗೆಗಳನ್ನು ಸೃಷ್ಟಿಸಿದಲ್ಲಿ ದೇಶದಲ್ಲಿ ಆಹಾರ ಸಮಸ್ಯೆಯೇ ಇರದು.
`ಮಾಡೆಲಿಂಗ್ ನೈತಿಕವಾದುದಲ್ಲ ಹಾಗೂ ಸೂಕ್ತವಾದುದೂ ಅಲ್ಲ. ಅದರಿಂದ ಯುವಕರಿಗೆ ಕೆಟ್ಟ ಮಾದರಿಯನ್ನು ನಾವು ನೀಡಿದಂತಾಗುತ್ತದೆ’ -ಚ್ಯಾನಲ್ `ವಿ’ಯ ನಿರೂಪಕಿ ರುಬಿ ಭಾಟಿಯಾ.
ವಿಟಿವಿ, ಎಂಟಿವಿಗಳಲ್ಲಿ ನಿರೂಪಕಿಯರು ಅರೆಬೆತ್ತಲಾಗಿ ಕಾಣಿಸಿಕೊಳ್ಳುವುದು ಸೂಕ್ತವೇ ಎಂದು ಕುಹಕಿಗಳು ಕೇಳುತ್ತಿದ್ದಾರೆ.
ವರ್ಷಾಂತ್ಯದೊಳಗೆ ಕರ್ನಾಟಕ ವಿಧಾನಮಂಡಲದ ಅಂತರಜಾಲ ತಾಣ ನಿರ್ಮಾಣ ಮಾಡಲಾಗುವುದು ಎಂದು ವಿಧಾನ ಸಭಾಧ್ಯಕ್ಷ ಎಂ. ವಿ. ವೆಂಕಟಪ್ಪ ತಿಳಿಸಿದ್ದಾರೆ.
ಯಾವ ಯಾವ ಶಾಸಕರ ಬೆಲೆ ಎಷ್ಟು ಎಂಬ ಕೋಷ್ಟಕವನ್ನೂ ಆ ತಾಣಕ್ಕೆ ಸೇರಿಸಲಾಗುವುದು ಎಂದು ಅವರು ಸ್ಪಷ್ಟೀಕರಿಸಿಲ್ಲ.
`ಸರಕಾರಿ ಕಚೇರಿಗಳಲ್ಲಿ ಆಗುವ ಅನಗತ್ಯ ವಿಳಂಬವನ್ನು ಭ್ರಷ್ಟಾಚಾರದಂತೆಯೇ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುವುದು’ -ಮುಖ್ಯಮಂತ್ರಿ ಎಸ್. ಎಂ. ಕೃಷ್ಣ.
ಕಾರಾಗೃಹಗಳಲ್ಲಿ ಜಾಗ ಸಾಲದೆ ವಿಧಾನ ಸೌಧವೂ ಸೇರಿದಂತೆ ಎಲ್ಲ ಸರಕಾರಿ ಕಚೇರಿಗಳನ್ನು ಕಾರಾಗೃಹಗಳಾಗಿ ಮಾರ್ಪಡಿಸಬೇಕಾಗಬಹುದು.
`ಕೇಂದ್ರ ಸಮ್ಮಿಶ್ರ ಸರ್ಕಾರ ವಿಶಿಷ್ಟ ಬಗೆಯದು. ಅದಕ್ಕೆ ಒಬ್ಬ ನಾಯಕನಿದ್ದರೆ ಹಲವಾರು ದಂಡನಾಯಕರಿದ್ದಾರೆ’ -ಶರದ್ ಪವಾರ್.
ಒಬ್ಬ ಕೆಟ್ಟ ಸರ್ವಾಧಿಕಾರಿಗಿಂತ ಇದು ಒಳ್ಳೆಯದು.
`ದೇಶದ ಯಾವುದಾದರೂ ಪ್ರಧಾನಮಂತ್ರಿ ಅಧಿಕಾರದ ನಂತರ ಆರೋಪ ಮುಕ್ತನಾಗಿ ಹೊರಬಂದಿದ್ದರೆ ಅದು ಈ ದೇವೇಗೌಡ ಮಾತ್ರ’ -ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ.
ಬಹುಶಃ ಅದೊಂದೇ ಅವರ ಸಾಧನೆಯಿರಬೇಕು.
`ದೇವೇಗೌಡರೊಬ್ಬರೇ ಮಣ್ಣಿನ ಮಕ್ಕಳ ವಾರಸುದಾರರಲ್ಲ’ -ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ| ಎಂ. ಡಿ. ನಂಜುಂಡಸ್ವಾಮಿ.
ದೇವೇಗೌಡ ಮತ್ತು ನಂಜುಂಡಸ್ವಾಮಿ ಅವರು ಮಣ್ಣಿನ ಮಕ್ಕಳ ಪೋಷಕತನಕ್ಕೆ ಹೊಡೆದಾಡಲು ಅವರೇನು ಅನಾಥರಾಗಿಲ್ಲ.
ಭೂಕಂಪ, ಕಟ್ಟಡ ಕುಸಿತ, ಅಗ್ನಿ ದುರಂತ ಇತ್ಯಾದಿ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಮಾಹಿತಿಯನ್ನು ಒದಗಿಸಲು [http://www.karnatakadisaster.com|www.karnatakadisaster.com] ಅನ್ನುವ ಅಂತರಜಾಲ ತಾಣವನ್ನು ನಿರ್ಮಿಸಲಾಗಿದೆ.
ತಾಣದ ಸುರಕ್ಷತೆಗಾಗಿ ಅದನ್ನು ಅಮೇರಿಕಾದಲ್ಲಿ ಹೋಸ್ಟ್ (host) ಮಾಡಲಾಗಿದೆ.
`ರಾಜ್ಯದ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಅಂತರಜಾಲ ಸೌಲಭ್ಯ ಕಲ್ಪಿಸುವ ಬಗ್ಗೆ ರಾಜ್ಯ ಸರಕಾರ ಚಿಂತಿಸುತ್ತಿದೆ’ -ರಾಜ್ಯ ಸಚಿವ ಬಾಬುರಾವ್ ಚವ್ಹಾಣ್.
ತುಂಬಾ ಒಳ್ಳೆಯದು. ಪುಸ್ತಕದ ಹಾಳೆ ಹರಿಯುವವರ ಕಾಟ ಇಲ್ಲದಾಗುವುದು.
(೨೦೦೧)