ಚಿನಕುರಳಿ – ೧೬
– ಮರ್ಕಟ
`ಬ್ರಿಟಿಷರು ನಮ್ಮ ದೇಶವನ್ನು ೨೦೦ ವರ್ಷಗಳ ಕಾಲ ಆಳಿದ್ದು ಒಳ್ಳೆಯದೇ ಆಯಿತು. ಇದರಿಂದ ನಾವು ಇಂಗ್ಲಿಷ್ ಮಾಧ್ಯಮದಲ್ಲಿ ಓದಿ, ಇಂಗ್ಲಿಷ್‌ನಲ್ಲಿ ಯೋಚಿಸಲು ಸಾಧ್ಯವಾಯಿತು’ -ಎಸ್. ಎಂ. ಕೃಷ್ಣ, ಬೆಂಗಳೂರು ಐ. ಟಿ. ಡಾಟ್ ಕಾಂ ಉದ್ಘಾಟನೆಯ ಸಂದರ್ಭದಲ್ಲಿ.
ಒಳ್ಳೆಯದಾಗಿದ್ದು ನಮ್ಮ ದೇಶಕ್ಕಲ್ಲ. ಅಗ್ಗದಲ್ಲಿ ತಂತ್ರಾಂಶ ತಯಾರಿ ಮಾಡಿಸಿಕೊಳ್ಳುತ್ತಿರುವ ವಿದೇಶಿ ಕಂಪೆನಿಗಳಿಗೆ ಎಂದು ಕುಹಕಿಗಳು ಆಡಿಕೊಳ್ಳುತ್ತಿದ್ದಾರೆ.
`ಜೀವಂತವಾದ ಸಮಾಜದಲ್ಲಿ ಸಮಸ್ಯೆಗಳು ಇದ್ದೇ ಇರುತ್ತವೆ. ಎಲ್ಲವೂ ಚೆನ್ನಾಗಿದೆ ಅಂದರೆ, ಆ ಸಮಾಜ ಸತ್ತಿದೆ ಎಂದರ್ಥ’ -ಪ್ರೊ| ಜಿ. ಎಸ್. ಸಿದ್ಧಲಿಂಗಯ್ಯ.
ಅದಕ್ಕೇ ಇರಬೇಕು ನಮ್ಮ ರಾಜಕಾರಣಿಗಳು ಒಂದಲ್ಲ ಒಂದು ಸಮಸ್ಯೆಯನ್ನು ಹುಟ್ಟು ಹಾಕುತ್ತಲೇ ಇರುವುದು.
`ನಾಡಿಗೆ ನಾವು ಏನು ಮಾಡಿದ್ದೇವೆ ಎಂದು ಪ್ರಶ್ನಿಸಿಕೊಳ್ಳಲು ನಾಡಹಬ್ಬದ ಸಂದರ್ಭ ಸಕಾಲ’ -ಎಸ್. ಎಂ. ಕೃಷ್ಣ.
ನೀವೇನು ಮಾಡಿದ್ದೀರೋ ನಮಗೆ ಗೊತ್ತಿಲ್ಲ. ನಾವು ಏನೇನು ಮಾಡಿದ್ದೇವೆ ಎಂದು ಎದೆಯುಬ್ಬಿಸಿ ಹೇಳಬಲ್ಲೆವು.
ಈ ನಾಡಿನ ಮಾತೃಭಾಷೆಯಾದ ಕನ್ನಡವನ್ನು ಎಲ್ಲ ವ್ಯವಹಾರಗಳಲ್ಲಿ ಬಳಸಬೇಕೆಂದು ಹೊರಡಿಸಿರುವ ಸುತ್ತೋಲೆಗಳ ಸಂಖ್ಯೆ ೨೦೦ಕ್ಕೂ ಹೆಚ್ಚು.
ಪಾಪ ಬಡಪಾಯಿ ಕನ್ನಡ ಕೇವಲ ಸುತ್ತೋಲೆಗಳಲ್ಲೇ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.
ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜ ಹಾರಿಸಲು ಹೊರಟಾಗ ಅದು ಅರಳುವ ಬದಲು ಹರಿದು ಹೋಯಿತು.
ಕನ್ನಡಿಗರ ಕನ್ನಡಾಭಿಮಾನ ಹರಿದು ಹೋಗಿರುವುದರ ದ್ಯೋತಕವೇ?
`ಮೇಲಕ್ಕೆ ಹೋಗಬೇಕಾದರೆ ಸರ್ಕಾರಿ ಆಸ್ಪತ್ರೆಗಳಿಗೆ ಸೇರಿಸಬೇಕು’ -ಎಸ್. ಎಂ. ಕೃಷ್ಣ.
`ಅಪ್ರಿಯವಾದ ಸತ್ಯವನ್ನು ಹೇಳಬಾರದು’ ಎಂಬ ಉಪನಿಷತ್ತಿನ ಮಾತನ್ನು ಕೃಷ್ಣ ಅವರು ಮರೆತಿರಬೇಕು.
`ನನಗೆ ಹಿಂದಿ ನಟ ಗೋವಿಂದನ ಹಾಗೆ ಆಗುವ ಆಸೆ’ -ಕನ್ನಡ ಚಿತ್ರನಟ ರಮೇಶ್.
ಅದಕ್ಕೇನಂತೆ. ಪ್ಯಾಂಟಿನೊಳಗಡೆ ಕೆಲವು ಚೇಳುಗಳನ್ನು ಹಾಕಿಕೊಂಡರೆ ಆಯಿತು.
ಮಹಾತ್ಮಾಗಾಂಧಿಯವರ ಪ್ರತಿಮೆಯಿಂದ ಅದರ ಕನ್ನಡಕ ನಾಪತ್ತೆಯಾದ ಸುದ್ದಿ ಗುಜರಾತಿನಿಂದ ಬಂದಿದೆ.
ಗಾಂಧೀಜಿಯವರ ಧ್ಯೇಯ, ಆದರ್ಶಗಳು ನಾಡಿನಿಂದ ಎಂದೋ ನಾಪತ್ತೆಯಾಗಿರುವಾಗ ಒಂದು ಕನ್ನಡಕ ನಾಪತ್ತೆಯಾದರೆ ಏನು ಮಹಾ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಜನರ ಹತ್ತಿರ ತಲುಪಲು ಒಂದು ಧ್ವನಿಸುರುಳಿ ಬಿಡುಗಡೆ ಮಾಡಿದೆ.
ಸದ್ಯದಲ್ಲೇ ವಿದ್ಯುತ್ ಬೆಲೆ ಏರಿಕೆಯ ಶಾಕ್ ನೀಡಲು ಪೂರ್ವಸಿದ್ಧತೆಯೇ ಎಂದು ಕುಹಕಿಗಳು ಕೇಳುತ್ತಿದ್ದಾರೆ.
ದಶಂಬರ ೧೫ರ ಒಳಗೆ ಬೆಂಗಳೂರಿನ ರಸ್ತೆಗಳಲ್ಲಿನ ೨೬೦೦೦ ಹೊಂಡಗಳನ್ನು ಮುಚ್ಚಿ ಬಿಡಲಾಗುವುದು -ಎಸ್. ಎಂ. ಕೃಷ್ಣ.
ಹಿಂದೊಮ್ಮೆ ಬೆಂಗಳೂರಿನ ಮಾಜಿ ಮೇಯರ್ ಹುಚ್ಚಪ್ಪನವರು “ಇನ್ನು ಹದಿನೈದು ದಿನಗಳಲ್ಲಿ ಬೆಂಗಳೂರಿನ ರಸ್ತೆ ಹೊಂಡಗಳು ಇತಿಹಾಸವಾಗುತ್ತವೆ” ಎಂದಿದ್ದು ಈಗ ಇತಿಹಾಸವಾಗಿದೆ.
ರಾಯಚೂರಿನಲ್ಲಿ ಸೋನಿಯಾಗಾಂಧಿ ಜೊತೆ ತಾವೂ ಉದ್ಘಾಟಿಸಿದ ಹೈಟೆಕ್ ಆಸ್ಪತ್ರೆಯಲ್ಲಿ ಕರ್ನಾಟಕದ ಆರೋಗ್ಯ ಸಚಿವ ಡಾ| ಎ. ಬಿ. ಮಾಲಕ ರೆಡ್ಡಿ ಅವರು ಪ್ರಪ್ರಥಮ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದ ವರದಿ ಬಂದಿದೆ.
ಮಾನ್ಯ ಸಚಿವರು ವಿದ್ಯುತ್ ಚಿತಾಗಾರವನ್ನು ಉದ್ಘಾಟಿಸಿದ್ದರೆ ಏನು ಮಾಡುತ್ತಿದ್ದರು ಎಂದು ಕುಹಕಿಗಳು ಕೇಳುತ್ತಿದ್ದಾರೆ.
[೨೦೦೦]