ಚಿನಕುರಳಿ – ೧೫

– ಮರ್ಕಟ

`ಮೂಳೆಚಕ್ಕಳಗಳನ್ನು ಹೊಂದಿದ್ದ ಇಂಥೊಬ್ಬ ಮನುಷ್ಯ ನಮ್ಮ ನಡುವೆ ನಡೆದಾಡುತ್ತಿದ್ದ ಎಂಬುದನ್ನು ನಂಬಲು ಮುಂದಿನ ಜನಾಂಗಕ್ಕೆ ಕಷ್ಟವಾಗುತ್ತದೆ’ -ಅಲ್ಬರ್ಟ್ ಐನ್‌ಸ್ಟೀನ್, ಮಹಾತ್ಮಾ ಗಾಂಧಿ ಬಗ್ಗೆ.
ಇದು ಈಗಾಗಲೆ ಗಾಂಧಿಯ ತಾಯಿನಾಡಿನಲ್ಲೇ ನಿಜವಾಗಿದೆ.

`ರಾಜ್ಯದಲ್ಲಿ ಹಲವು ಹತ್ತು ಗಂಭೀರ ಸಮಸ್ಯೆಗಳಿರುವಾಗ ಬಿಲ್ ಗೇಟ್ಸ್ ಅಂತೆ ಅವನಂತೆ ಇವನಂತೆ ಅಂತೆ ಬೆಂಗಳೂರನ್ನು ಐಟಿ, ಸಾಪ್ಟ್‌ವೇರ್ ಸಿಟಿ ಮಾಡಲು ಹೊರಟಿದ್ದಾರೆ ಕೃಷ್ಣ. ನಮ್ಮ ದೇಶದಲ್ಲಿ ಶೇ.೪೬ ಮಂದಿ ಹೆಬ್ಬೆಟ್ಟಿನ ಪ್ರಜೆಗಳಿದ್ದಾರೆ’ -ಮಾಜಿ ಮುಖ್ಯಮಂತ್ರಿ ಜೆ. ಎಚ್. ಪಟೇಲ್.
ಹೆಬ್ಬೆಟ್ಟನ್ನು ಸಂಸ್ಕರಿಸುವ ಮತ್ತು ಪರಿಶೀಲಿಸುವ ತಂತ್ರಾಂಶವೂ ಸಿದ್ಧವಾಗಿದೆ.

`ವಿದೇಶದಲ್ಲಿ ಭಾರತೀಯರು ಏನು ಮಾಡಿದರೂ ಅದನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ’ – ಗೃಹ ಸಚಿವ ಎಲ್. ಕೆ. ಅಡ್ವಾಣಿ.
ಭಾರತದಲ್ಲೇ ಅಚ್ಚುಕಟ್ಟಾಗಿ ಕೆಲಸ ಮಾಡುವ ಭಾರತೀಯರೂ ಇದ್ದಾರೆ ಎಂಬುದನ್ನು ಅಡ್ವಾಣಿಯವರಿಗೆ ನೆನಪಿಸೋಣ.

`ಸುಸಂಸ್ಕೃತ ವ್ಯಕ್ತಿತ್ವದ ಮುಖ್ಯಮಂತ್ರಿ ಕೃಷ್ಣ ಅವರಿಗೆ ಬಿಲ್ ಗೇಟ್ಸ್ ಜೊತೆ ಹೇಗೆ ವ್ಯವಹರಿಸಬೇಕು ಎನ್ನುವುದು ಗೊತ್ತೇ ಹೊರತು ವೀರಪ್ಪನ್ ಜೊತೆಗೆ ವ್ಯವಹರಿಸುವುದು ಗೊತ್ತಿಲ್ಲ’ -ಜೆ. ಎಚ್. ಪಟೇಲ್.
ಅಸಂಸ್ಕೃತ ವೀರಪ್ಪನ್ ಜೊತೆ ವ್ಯವಹರಿಸಲು ನಾನೇ ಸೂಕ್ತ ಎಂದು ಪಟೇಲರು ಬಾಯಿ ಬಿಟ್ಟು ಹೇಳಿಲ್ಲ.

ರಾಜಸ್ತಾನದ ರಾಜೇಶ್ ಟೇಲಿ ಎಂಬಾತ ವ್ಯವಹಾರದಲ್ಲಿ ಸೋಲುಂಟಾಗಿ ಹಣಕ್ಕೋಸ್ಕರ ಹೆಂಡತಿಯನ್ನೇ ೨೦,೦೦೦ರೂ. ಗಳಿಗೆ ಮಾರಿದ ಸುದ್ದಿ ಬಂದಿದೆ.
ರಾಜೇಶ್‌ನನ್ನು ಆಧುನಿಕ ಸತ್ಯ ಹರಿಶ್ಚಂದ್ರ ಎನ್ನೋಣವೇ?

ಅಕ್ರಮ ವಿದ್ಯುತ್ ಸಂಪರ್ಕ ಪಡೆದುಕೊಂಡವರಿಗೆ ಅದನ್ನು ಸಕ್ರಮಗೊಳಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಅಕ್ಟೋಬರ್ ೧೫ರ ವರೆಗೆ ವಾಯಿದೆ ವಿಸ್ತರಿಸಿದೆ. ಸಾಮಾನ್ಯ ಜನರಿಗೆ ರೂ. ೨,೫೦೦ ಮತ್ತು ಪರಿಶಿಷ್ಟ ಜಾತಿಯವರಿಗೆ ರೂ. ೧೨೫೦ ಶುಲ್ಕ ನಿಗದಿಪಡಿಸಿದೆ.
ಪರಿಶಿಷ್ಟ ಜಾತಿಯವರಿಗೆ ಕಡಿಮೆ ವೋಲ್ಟೇಜಿನಲ್ಲೇ ಶಾಕ್ ಹೊಡೆಯುವಂತಹ ವ್ಯವಸ್ಥೆಯನ್ನು ಕ.ವಿ.ಪ್ರ.ನಿ. ಮಾಡಿದೆಯೇ ಎಂದು ಕುಹುಕಿಗಳು ಕೇಳುತ್ತಿದ್ದಾರೆ.

`ಕನ್ನಡ ನಿರ್ಮಾಪಕರು ಸಿನಿಮಾ ಮಾಡೋದೇ ವೇಸ್ಟು. ಸಿನಿಮಾ ಮಾಡದೇ ಇದ್ರೆ ಆಕಾಶ ಏನೂ ಬಿದ್ದು ಹೋಗೊಲ್ಲ. ಇಂಥ ಕೆಟ್ಟ ಸಿನಿಮಾ ಮಾಡಿ ಯಾಕೆ ಜನರನ್ನು ಸಾಯಿಸ್ತೀರಿ? ಯಾರು ಏನೇ ಹೇಳಿದರೂ ನನ್ನ ಮಕ್ಕಳನ್ನು ಸಿನಿಮಾ ನೋಡೋಕೆ ಬಿಡಲಾರೆ’ -ಎಸ್. ಎಲ್. ಭೈರಪ್ಪ.
ಅಂಥಾ ಕೆಟ್ಟ ಸಿನಿಮಾಗಳೇ ಇವೊತ್ತಿನ ಉಪಗ್ರಹ ಟಿವಿಗಳಿಗೆ ಬಂಡವಾಳ ತಾನೆ? ನಿಮ್ಮ ಮಕ್ಕಳು ಥಿಯೇಟರಿಗೆ ಹೋಗದಿದ್ದರೆ ಏನಂತೆ, ಟಿವಿಗಳೇ ನಿಮ್ಮೆದುರು ಕೂತಿವೆಯಲ್ಲಾ?

ಮನುಷ್ಯನ ಮತ್ತು ಹಂದಿಯ ಡಿ.ಎನ್.ಎ. ಗಳನ್ನು ಕಸಿ ಮಾಡುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಹಂದಿ-ಮನುಷ್ಯರ ತಯಾರಿ ದೂರವೇನಿಲ್ಲ.
ಅದಕ್ಕಾಗಿ ಯಾಕೆ ಶ್ರಮ ಪಡಬೇಕು? ಭಾರತದಲ್ಲಿ ಈಗಾಗಲೇ ಬೇಕಷ್ಟು ಹಂದಿ ಮನುಷ್ಯರು ರಾಜಕಾರಣಿಗಳ ರೂಪದಲ್ಲಿ ಇದ್ದಾರೆ.

ಮಾಡಿ ಪ್ರಧಾನಿ ದೇವೇಗೌಡ ಮತ್ತು ಅವರ ಅನುಯಾಯಿಗಳು ತೈಲ ಬೆಲೆ ಹೆಚ್ಚಳ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿ ರಸ್ತೆ ಸಂಚಾರ ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿತು.
ಟ್ರಾಫಿಕ್ ಜಾಮಿನಲ್ಲಿ ಸಿಕ್ಕಿಕೊಂಡು ಹಾಗೂ ಸುತ್ತಿ ಬಳಸಿ ಹೋಗಲು ವಾಹನಗಳು ಹೆಚ್ಚು ತೈಲ ವ್ಯಯಿಸಬೇಕಾಯಿತು.

ಸರಕಾರದ ವೆಚ್ಚದಲ್ಲಿ ಶೇಕಡ ೧೦ರಷ್ಟು ಕಡಿತ ಮಾಡಬೇಕು ಎಂದು ಕೇಂದ್ರ ಸರಕಾರವು ಆಜ್ಞೆ ಹೊರಡಿಸಿತು.
ಆ ಆಜ್ಞೆಯ ಪ್ರತಿಯನ್ನು ಕೇಂದ್ರದಿಂದ ರಾಜ್ಯಗಳಿಗೆ, ರಾಜ್ಯಗಳ ರಾಜಧಾನಿಯಲ್ಲಿರುವ ಎಲ್ಲ ಸರಕಾರಿ ಕಚೇರಿಗಳಿಗೆ, ಜಿಲ್ಲೆಗಳಲ್ಲಿರುವ ಕಚೇರಿಗಳಿಗೆ, ತಾಲೂಕುಗಳಲ್ಲಿರುವ ಕಚೇರಿಗಳಿಗೆ -ಹೀಗೇ ಲಕ್ಷಾಂತರ ಪ್ರತಿ ಮಾಡಿ ಕಳುಹಿಸಿದಾಗ ಶೇಕಡ ೧೦ ರ ಉಳಿತಾಯದಿಂದ ಹೆಚ್ಚು ವೆಚ್ಚವಾಯಿತು.

ಮಾಜಿ ಪ್ರಧಾನಿ ಪಿ. ವಿ. ನರಸಿಂಹರಾವ್ ಹಾಗೂ ಮಾಜಿ ಗೃಹ ಸಚಿವ ಬೂಟಾ ಸಿಂಗ್ ಅವರಿಗೆ ಮೂರು ವರ್ಷ ಕಠಿಣ ಕಾರಾಗೃಹ ವಾಸ ಶಿಕ್ಷೆ -ಸುಪ್ರೀಂ ಕೋರ್ಟ್ ತೀರ್ಪು.
ಭೇಷ್! ಭಾರತದಲ್ಲಿನ್ನೂ ನ್ಯಾಯಾಂಗ ಜೀವಂತವಾಗಿದೆ ಅನ್ನೋದಕ್ಕೆ ಇದು ಪುರಾವೆ.

[೨೦೦೦]

Leave a Reply