ಚಿನಕುರಳಿ – ೧೨

– ಮರ್ಕಟ

ನಮ್ಮ ದೇಶದಲ್ಲಿ ನಿರುದ್ಯೋಗ ಎಲ್ಲ ಸಮಸ್ಯೆಗಳ ತಾಯಿಯಾದರೆ ಭ್ರಷ್ಟಾಚಾರ ತಂದೆ -ಜಾರ್ಜ್ ಫೆರ್ನಾಂಡಿಸ್
ರಾಜಕಾರಣಿ ಸೂಲಗಿತ್ತಿ ಎಂದು ಹೇಳಲು ಅವರು ಮರೆತಿದ್ದಾರೆ.

ಸದ್ಯದಲ್ಲಿಯೇ ರಾಜಕೀಯ ಸಂನ್ಯಾಸ ಸ್ವೀಕರಿಸುತ್ತೇನೆ -ರಾಮಕೃಷ್ಣ ಹೆಗಡೆ
ಎಟುಕದ ದ್ರಾಕ್ಷಿ ಹುಳಿ ಅಥವಾ `ಅಭಾವ ವೈರಾಗ್ಯ’

ಸರ್ಕಾರಿ ಅಧಿಕಾರಿಗಳು ಸುಧಾರಣಾ ಪ್ರಜ್ಞೆಯನ್ನೆ ಕಳೆದುಕೊಂಡಿದ್ದಾರೆ. -ಎಸ್. ಎಂ. ಕೃಷ್ಣ
ಇಲ್ಲದಿದ್ದನ್ನು ಕಳೆದುಕೊಳ್ಳಲು ಹೇಗೆ ಸಾಧ್ಯ?

ಬಾಗಲಕೋಟೆಯಲ್ಲಿ ಜರುಗಿದ ೬೮ನೇ ಸಾಹಿತ್ಯ ಸಮ್ಮೇಳನ ಸಮಯದಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ಮೊತ್ತದ ಪುಸ್ತಕಗಳ ಮಾರಾಟವಾಗಿ ದಾಖಲೆಯಾಯಿತು.
ಸುಮಾರು ಮೂರು ಕೋಟಿ ರೂಪಾಯಿ ಮೊತ್ತದ ಹೆಂಡ ಮಾರಾಟದ ದಾಖಲೆ ಯಾರ ಗಮನಕ್ಕೂ ಬರಲಿಲ್ಲ.

ಸರ್ಕಾರವೆಂದರೆ ವ್ಯವಹಾರವಿದ್ದಂತೆ ಎಂದು ನಾನು ಸರ್ಕಾರಿ ನೌಕರರಿಗೆ ಹೇಳುತ್ತಲೇ ಇದ್ದೇನೆ – ಎಸ್. ಎಂ. ಕೃಷ್ಣ
ಅದನ್ನು ಅವರಿಗೆ ಹೇಳುವ ಅಗತ್ಯವೇ ಇಲ್ಲ. ಅವರದನ್ನು ಎಂದಿನಿಂದಲೂ ಪಾಲಿಸಿಕೊಂಡು ಬಂದಿದ್ದಾರೆ. ಸರ್ಕಾರದಲ್ಲಿ ಯಾವ ಕೆಲಸ ಆಗಬೇಕಾದರೂ ನಾವು ನೌಕರರ ಜೊತೆ `ವ್ಯವಹಾರ’ ನಡೆಸಲೇ ಬೇಕು.

ಸಾಹಿತಿಗಳು ಸಾಯಂಕಾಲ ಕಳೆದ ನಂತರ ಹೇಗಿರುತ್ತಾರೆಂಬುದು ಎಲ್ಲರೂ ಬಲ್ಲರು- ಎಸ್. ಎಲ್. ಭೈರಪ್ಪ
`ಉತ್ತೇಜಕ ಸಾಹಿತ್ಯ’ ಸೃಷ್ಟಿಯಾಗುವುದೇ ಆವಾಗ.

ಅಮಿತಾಬ್ ಬಚ್ಚನ್ ಮಗ ಅಭಿಷೇಕ್ ನಟಿಸಿದ್ದ ರೆಫ್ಯೂಜಿ (ನಿರಾಶ್ರಿತ) ಎರಡೇ ವಾರಗಳಲ್ಲಿ ಥಿಯೇಟರುಗಳಿಂದ ಎತ್ತಂಗಡಿ ಆಗಿದೆ.
ಈಗ ನಿರ್ಮಾಪಕ ಜೆ. ಪಿ. ದತ್ತಾ ಅವರು ನಿಜಕ್ಕೂ ನಿರಾಶ್ರಿತರಾಗಿದ್ದಾರೆ.

ಬಹುದಿನಗಳಿಂದ ಚಿಂಪಾಂಜಿಗಳನ್ನಿಟ್ಟುಕೊಂಡು ಚಿತ್ರವೊಂದನ್ನು ನಿರ್ಮಿಸುವ ಆಲೋಚನೆ ಇದೆ -ಸುನೀಲ್‌ಕುಮಾರ ದೇಸಾಯಿ
ಬಹುಪಾಲು ಕನ್ನಡ ಚಿತ್ರಗಳನ್ನು ನೋಡಿದರೆ ಈಗಾಗಲೇ ಇದು ಕಾರ್ಯಗತವಾದಂತೆ ಅನ್ನಿಸುತ್ತಿದೆ.

ಶುದ್ಧ ಮೂರ್ಖರ ತಂಡ ದೇಶವನ್ನು ಆಳುತ್ತಿದೆ -ಶಿವಸೇನಾ ಮುಖ್ಯಸ್ಥ ಭಾಳ ಠಾಕ್ರೆ
ಆ ಮೂರ್ಖರಲ್ಲಿ ಶಿವಸೇನಾ ಸದಸ್ಯರೂ ಇದ್ದಾರೆಂಬುದು ಅವರಿಗೆ ಮರೆತೇ ಹೋಯಿತೇ?

[೨೦೦೦]

Leave a Reply