ಚಿನಕುರಳಿ – ೧೧

– ಮರ್ಕಟ

ವ್ಯಾಸರಾಯ ಬಲ್ಲಾಳರಿಗೆ ಅ.ನ.ಕೃ. ಪ್ರಶಸ್ತಿ.
ಗೋಪಾಲಕೃಷ್ಣ ಅಡಿಗರಿಗೆ ರಾಮಚಂದ್ರ ಶರ್ಮ ಪ್ರಶಸ್ತಿ ಕೊಟ್ಟಂತೆ ಎಂದು ಕುಹುಕಿಗಳು ಆಡಿಕೊಳ್ಳುತ್ತಿದ್ದಾರೆ.

ದ್ವಿತೀಯ ಪಿ.ಯು.ಸಿ. ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವುದಿಲ್ಲವೆಂದು ಶಿಕ್ಷಕರು ಮುಷ್ಕರ ಹೂಡಿದ್ದಾಗ ಸಚಿವ ವಿಶ್ವನಾಥರು ಬೆಳಿಗ್ಗೆಯಿಂದ ಸಾಯಂಕಾಲ ತನಕ ಗಾಂಧಿ ಪ್ರತಿಮೆ ಮುಂದೆ ಕುಳಿತು ಧರಣಿ ಹೂಡುವುದಾಗಿ ಬೆದರಿಕೆ ಒಡ್ಡಿದ್ದರು.
ಧರಣಿ ಕುಳಿತುಕೊಳ್ಳುವುದರ ಬದಲು ಕೆಲವು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವುದು ಒಳ್ಳೆಯದಿತ್ತು ಎಂದು ಕೆಲವರು ಆಡಿಕೊಂಡರು.

ಕನ್ನಡ ಭಾಷೆಯಲ್ಲಿ ತಯಾರಾಗುತ್ತಿರುವ ಶೇಕಡ ೭೦ರಷ್ಟು ಚಲನಚಿತ್ರಗಳು ಇತರ ಭಾಷೆಯಲ್ಲಿ ಬಂದ ಚಿತ್ರಗಳ ರಿಮೇಕಾಗಿವೆ.
ಕನ್ನಡ ಚಲನಚಿತ್ರರಂಗವನ್ನು ಒಂದು ದೊಡ್ಡ ನೆರಳಚ್ಚು ಯಂತ್ರ (photocopy machine)ವೆಂದು ಕರೆಯೋಣವೇ?

ಭಾರತದ ಜನಸಂಖ್ಯೆ ನೂರು ಕೋಟಿ ದಾಟಿದೆ.
ನಮ್ಮ ದೇಶದ ಏಕೈಕ ಸಾಧನೆಯೆಂದರೆ ಇದೇ ಆಗಿದೆ.

ಹೆಚ್ಚು ಹೆಚ್ಚು ಪಂದ್ಯಗಳು ನಡೆದಷ್ಟು ಆಟಗಾರರು ಬೇಗಬೇಗನೆ ಹೊಸ ಹೊಸ ದಾಖಲೆಗಳನ್ನು ಸ್ಥಾಪಿಸುತ್ತಾ ಮುನ್ನಡೆಯುತ್ತಾರೆ. ಯಾವ ದಾಖಲೆಯೂ ಸುದೀರ್ಘ ಬಾಳುವುದಿಲ್ಲ- ಕಪಿಲ್ ದೇವ್.
ಯಾರು ಹೆಚ್ಚು ಹಣ ತೆಗೆದುಕೊಂಡು ಸೋಲುವುದು ಎಂಬುದರಲ್ಲಿ ಈಗ ದಾಖಲೆ ನಿರ್ಮಾಣಕ್ಕೆ ಪೈಪೋಟಿ ನಡೆದಿದೆ.

ಮಾಜಿ ಪ್ರಧಾನಿ ಎಂಬ ದೊಡ್ಡಸ್ತಿಕೆಯಲ್ಲಿ ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ- ದೇವೇಗೌಡ.
ಪ್ರಧಾನಿ ಆಗಿದ್ದಾಗ ತೂಕಡಿಸುತ್ತಿದ್ದವರು ಈಗಲಾದರೂ ಎಚ್ಚೆತ್ತರೆ ಒಳ್ಳೆಯದಿತ್ತು.

ದೂರ ಸಂಪರ್ಕ ಇಲಾಖೆಯ ನೌಕರರಿಗೆ ಉಚಿತ ದೂರವಾಣಿ ಸಂಪರ್ಕವನ್ನು ಸಚಿವ ರಾಮ್ ವಿಲಾಸ್ ಪಾಸ್ವಾನ್ ಘೋಷಿಸಿದ್ದಾರೆ.
ಆದರ್ಶ ಸಂಸಾರ ಎಂದರೆ ಹೀಗಿರಬೇಕು -ಗಂಡ ಸಾರಿಗೆ ಸಂಸ್ಥೆ, ಹೆಂಡತಿ ದೂರಸಂಪರ್ಕ ಇಲಾಖೆ, ಮಗ ವಿದ್ಯುಚ್ಛಕ್ತಿ ಹಾಗೂ ಮಗಳು ಬ್ಯಾಂಕ್ ಉದ್ಯೋಗಿ ಅಗಿರಬೇಕು.

[೨೦೦೦]

Leave a Reply