ಚಿನಕುರಳಿ – ೦೯
– ಮರ್ಕಟ
`ನಾನು ಪೆಪ್ಸಿಯನ್ನು ಪ್ರತಿಸ್ಫರ್ಧಿ ಎಂದು ಪರಿಗಣಿಸಿಯೇ ಇಲ್ಲ. ನಮ್ಮ ನಿಜವಾದ ಪ್ರತಿಸ್ಫರ್ಧಿ ಎಂದರೆ ನೀರು’ -ಕೋಕೋ ಕೋಲಾ ಕಂಪೆನಿಯ ರಿಚರ್ಡ್ ನಿಕೊಲ್ಸನ್.
ಕೋಕೋ ಕೋಲಾ ಕುಡಿದಾಗ, ಅದು ಬಣ್ಣ, ಸಕ್ಕರೆ ಹಾಕಿದ ನೀರು ಎಂದೇ ನಮಗೆ ಅನ್ನಿಸುತ್ತದೆ.
ಉಪೇಂದ್ರರ ಇತ್ತೀಚಿನ ಚಿತ್ರದ ಹೆಸರು `A’.
ಇನ್ನು ೨೫ ಚಿತ್ರಗಳಿಗೆ ಹೆಸರಿಡಲು ಉಪೇಂದ್ರರು ತಡಕಾಡಬೇಕಾಗಿಲ್ಲ.
ಬೆಂಗಳೂರು ಏಷ್ಯಾದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರ.
ಭೂಪಟ ತಯಾರಕರು ಬೆಂಗಳೂರಿನ ಭೂಪಟ ಮುದ್ರಣವನ್ನು ನಿಲ್ಲಿಸಿ ಬಿಡುವ ಯೋಚನೆಯಲ್ಲಿದ್ದಾರೆ. ಮುದ್ರಿಸಿ ಮಾರುಕಟ್ಟೆಗೆ ಬರುವಷ್ಟರಲ್ಲಿ ಅದು ಅಪ್ರಸ್ತುತವಾಗಿ ಬಿಡುವ ಅಂಜಿಕೆ ಅವರಿಗೆ.
ಬೆಂಗಳೂರನ್ನು ಭಾರತದ `ಸಿಲಿಕಾನ್ ವ್ಯಾಲಿ’ ಎಂದು ಕರೆಯುತ್ತಾರೆ.
`ಸಿಲಿಕಾನ್ ವ್ಯಾಲಿ’ ಎಂದರೆ ಮರಳ ಕಣಿವೆ ಎಂದು ಕೆಟ್ಟದಾಗಿ ಅನುವಾದಿಸಬಹುದು. ಅರ್ಧ ಗಂಟೆ ಬಿಡದೆ ಮಳೆ ಸುರಿದ ನಂತರ ವಾರಗಳ ತನಕ ಎಲ್ಲಾ ಮಾರ್ಗಗಳಲ್ಲೂ ಮರಳು ತುಂಬಿರುವುದನ್ನು ಕಂಡಾಗ `ಮರಳ ಕಣಿವೆ’ ಹೆಸರು ಸೂಕ್ತವೆಂದು ನಮಗೆ ಅನ್ನಿಸುತ್ತಿದೆ.
`ಭಾರತವೊಂದು ಅದ್ಭುತ ಶ್ರೇಷ್ಠ ರಾಷ್ಟ್ರ. ತನ್ನ ಶ್ರೇಷ್ಠತನ ಸಾಬೀತು ಪಡಿಸಲು ಅದು ಪರಮಾಣು ಬಾಂಬು ಸಿಡಿಸಬೇಕಾಗಿರಲಿಲ್ಲ’ -ಬಿಲ್ ಕ್ಲಿಂಟನ್.
ಭಾರತ ಶ್ರೇಷ್ಠ ರಾಷ್ಟ್ರ ಎಂದು ಕ್ಲಿಂಟನ್ ಒಪ್ಪಿಕೊಂಡದ್ದು ಬಾಂಬು ಸಿಡಿಸಿದ ನಂತರ ತಾನೆ!
`ನಮ್ಮ ಜನರು ನಡೆಸುತ್ತಿರುವ ಹೀನ ಕೃತ್ಯಗಳನ್ನು, ಸುತ್ತ ನಡೆಯುತ್ತಿರುವ ಅಸಹ್ಯಕರ ಘಟನೆಗಳನ್ನು ನೋಡಿದಾಗ ಎಲ್ಲಿಯಾದರೂ ಹಾರಿಕೊಳ್ಳಬೇಕು ಅನ್ನಿಸುತ್ತಿದೆ’ -ಜೆ.ಎಚ್. ಪಟೇಲ್.
ಶುಭಸ್ಯ ಶೀಘ್ರಂ.
ದೊಡ್ಡಬಳ್ಳಾಪುರದ ಪೋಲೀಸರು ಮಾರುವೇಷ ಧರಿಸಿ ಕೆಲವು ಗೃಹಚೋರರನ್ನು ಹಿಡಿದಿದ್ದಾರೆ.
ಶಹಭಾಸ್. ಹೀಗೆಯೇ ಮಾರುವೇಷ ಧರಿಸಿ ವಿಧಾನ ಸೌಧ, ಜಿಲ್ಲಾ ಕಛೇರಿ, ತಾಲೂಕು ಕಛೇರಿಗಳ ಮುಂದೆ ಗಸ್ತು ತಿರುಗಿ ಅಲ್ಲಿರುವ ಲಂಚಕೋರ, ಕೆಲಸ ಚೋರರನ್ನು ಹಿಡಿದರೆ ಚೆನ್ನಾಗಿತ್ತು.
`ಎರಡು ತಪ್ಪು ಸೇರಿ ಒಂದು ಸರಿ ಆಗುವುದಿಲ್ಲ’ -ಬಿಲ್ ಕ್ಲಿಂಟನ್, ಭಾರತ ಮತ್ತು ಪಾಕಿಸ್ತಾನಗಳು ಬಾಂಬು ಸಿಡಿಸಿದ್ದಕ್ಕೆ ಪ್ರತಿಕ್ರಿಯಿಸುತ್ತ.
ಅಮೇರಿಕಾ ದೇಶವು ಇದುವರೆಗೆ ಮಾಡಿದ ಸಾವಿರಾರು ತಪ್ಪುಗಳನ್ನು ಸೇರಿಸಿದರೆ ದೊಡ್ಡ `ಸರಿ’ಆಗುತ್ತದೆಯೇ ಎಂದು ಇಲ್ಲಿ ಕೆಲವರು ಕೇಳುತ್ತಿದ್ದಾರೆ.
(೧೯೯೮)