ಚಿನಕುರಳಿ-೦೧

ಮರ್ಕಟ

ಪ್ರಪಂಚದ ಅತಿ ಭ್ರಷ್ಟ ದೇಶಗಳಲ್ಲಿ ಪಾಕಿಸ್ತಾನಕ್ಕೆ ಎರಡನೆಯ ಸ್ಥಾನ ಮತ್ತು ಭಾರತಕ್ಕೆ ಒಂಭತ್ತನೆಯ ಸ್ಥಾನ. ಕನಿಷ್ಠ ಈ ಒಂದು ವಿಷಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದಕ್ಕೆ ನಾವು ಹೆಮ್ಮೆ ಪಡಬಹುದು.

ಬೊಂಬಾಯಿ (ಮುಂಬಯಿ) ಮದರಾಸು(ಚೆನ್ನೈ) ನಂತರ ಹೆಸರು ಬದಲಿಸುವ ಸರದಿ ಬೆಂಗಳೂರಿನದು. ಇದಕ್ಕಾಗಿ ಬೆಂಗಳೂರಿನ ಹಳೆ ಹೆಸರನ್ನು ಗೆದ್ದಲು ಹಿಡಿದ ಹಳೆಯ ಗ್ರಂಥಗಳಲ್ಲಿ, ತಾಳೆಗರಿಗಳಲ್ಲಿ , ಕನ್ನಡದ ಉಟ್ಟು ಓರಾಟಗಾರರು ಹುಡುಕುತ್ತಿರುವುದಾಗಿ ನಂಬಲನರ್ಹ ಮೂಲಗಳಿಂದ ತಿಳಿದು ಬಂದಿದೆ.

ದೆಹಲಿಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ಅಧಿವೇಶನದಲ್ಲಿ ಪ್ರಧಾನಿ ದೇವೇಗೌಡರು ಭಾಷಣ ಆರಂಭಿಸುತ್ತಿದ್ದಂತೆ ಪತ್ರಕರ್ತರ ಸಹಿತ ಬಹುಮಂದಿ ಸಭಿಕರು ತೂಕಡಿಸಲು ಪ್ರಾರಂಭಿಸಿದರಂತೆ. ಗೌಡರಿಗೆ ಅವರದೇ ರೀತಿಯಲ್ಲಿ ಜನರು ಉತ್ತರಿಸಿದ್ದಾರೆಂದು ತಿಳಿದು ಬರಲೇ ಇಲ್ಲವಂತೆ.

ಸಸ್ಯಜನ್ಯ ಪೆಟ್ರೋಲ್ ರೀತಿಯಲ್ಲಿ ಸಸ್ಯಜನ್ಯ ಪಂಪ್ ಕಂಡುಹಿಡಿದಿರುವುದಾಗಿ ಕೇರಳದಿಂದ ವರದಿಯಾಗಿದೆ. ನೆಲದಾಳದಿಂದ ನೂರಾರು ಅಡಿಗಳೆತ್ತರ ಎಲೆಗಳ ತನಕ ನೀರನ್ನು ಸಸ್ಯಗಳು ಎತ್ತಿ ತಲುಪಿಸುವುದು ಎಲ್ಲರಿಗೂ ತಿಳಿದ ವಿಷಯ. ಇದೇ ತತ್ವವನ್ನಾಧರಿಸಿ ಈ ಹೊಸ ಪಂಪನ್ನೂ ತಯಾರಿಸಲಾಗಿದೆ.

ಹಗರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೊಸಹೊಸ ಹಗರಣಗಳು, ಅವುಗಳ ತನಿಖೆ, ಇತ್ತೀಚಿನ ಸ್ಥಿತಿ ಇತ್ಯಾದಿಗಳನ್ನು ವರದಿ ಮಾಡಲು ಹಗರಣವಾಣಿ ಎಂಬ ಹೊಸ ಪತ್ರಿಕೆಯೊಂದು ಹೊರಬಂದಿದೆ.

ತಾನು ಇನ್ನು ಮುಂದೆ ಯಾವುದೇ ಒಡವೆ ಧರಿಸುವುದಿಲ್ಲ ಎಂದು ಜಯಲಲಿತ ಹೇಳಿಕೆ ನೀಡಿದ್ದಾರೆ.
ಇದ್ದ ಒಡವೆಗಳನ್ನೆಲ್ಲಾ ಸಿ.ಬಿ.ಐ.ನವರು ವಶಪಡಿಸಿಕೊಂಡಿರುವಾಗ ಧರಿಸುವುದಾದರೂ ಏನನ್ನು?

(೧೯೯೭)

Leave a Reply