Press "Enter" to skip to content

ಶರಣಾಗತ

– ಕೆ. ತ್ರಿವೇಣಿ ಶ್ರೀನಿವಾಸ ರಾವ್

ಮಧ್ಯಾಹ್ನದ ಸುಡು ಸುಡು ಬಿಸಿಲು ಭೂಮಿಯನ್ನು ನಿರ್ದಯವಾಗಿ ಸುಡುತ್ತಿತ್ತು. ಕೊರಳಿನ ಸುತ್ತ ಹರಿಯುತ್ತಿದ್ದ ಬೆವರನ್ನು ಕರವಸ್ತ್ರದಿಂದ ಒರೆಸಿಕೊಳ್ಳುತ್ತಾ ಗೇಟು ತೆರೆದು ಕಾಂಪೊಂಡಿನೊಳಗೆ ಪ್ರವೇಶಿಸಿದ ರಾಜೀವ.
ಪಾರಿಜಾತದ ನೆರಳಿನಲ್ಲಿ ಆಡಿಕೊಂಡಿದ್ದ ಎರಡು ಮುದ್ದಾದ ಮಕ್ಕಳು ಅಪರಿಚಿತನನ್ನು ಕಂಡು ಬೆರಗಾಗಿ ನಿಂತವು. ನಾಲ್ಕು ವರ್ಷದ ಗಂಡು ಮಗು ಸುದ್ದಿಯನ್ನು ಹಿರಿಯರಿಗೆ ತಲುಪಿಸಲು ಒಳಗೋಡಿದರೆ ಎಂಟು ವರ್ಷದ ಹುಡುಗಿ ಅಲ್ಲಿಯೇ ನಿಂತು ರಾಜೀವನನ್ನು ಮಿಕಿ ಮಕಿ ನೋಡತೊಡಗಿತು.

ಆ ಹುಡುಗಿಯ ಮುಖ ನೋಡುತ್ತಿದ್ದರೆ ರಾಜೀವನಿಗೆ ತನ್ನ ತಾಯಿಯನ್ನೇ ಕಂಡಂತಾಯಿತು. ತಾನು ಎಂಟು ವರ್ಷದ ಹಿಂದೆ ಮನೆಯನ್ನು ತ್ಯಜಿಸಿ ಹೊರನಡೆದಾಗ ಅತ್ತಿಗೆ ತುಂಬಿದ ಬಸುರಿ. ಆಗ ಹುಟ್ಟಿದ್ದವಳೇ ಇವಳಿರಬೇಕು. ಅಜ್ಜಿಯ ಸುಂದರ ರೂಪವನ್ನು ಎರಕ ಹೊಯ್ದುಕೊಂಡು ಹುಟ್ಟಿದೆ ಎಂದು ವಾತ್ಸಲ್ಯದಿಂದ-
“ನಿನ್ನ ಹೆಸರೇನು ಮರೀ?”
ಹುಡುಗಿಯನ್ನು ಮಾತಿಗೆಳೆಯಲು ಯತ್ನಿಸಿದ.
“ವತ್ಸಲಾ” ಎಳಸಾದ ಕಂಠ ಉತ್ತರಿಸಿತು. ಅಣ್ಣನ ಮಗಳು ನನಗೂ ಮಗಳಲ್ಲವೇ? ಅಭಿಮಾನ ಉಕ್ಕಿ ಬಂದು “ನಿನ್ನ ಅಪ್ಪ ಮನೆಯಲ್ಲಿದ್ದಾರಾ ಪುಟ್ಟಿ” ಎಂದು ಕೇಳಿದ ಮೆಲುವಾಗಿ.
“ಇಲ್ಲ, ಕೆಲಸಕ್ಕೆ ಹೋಗಿದಾರೆ” ಎಂದು ಹುಡುಗಿ ನುಡಿಯುವಷ್ಟರಲ್ಲಿಯೇ ಒಳಗೋಡಿದ್ದ ಹುಡುಗ ತಾಯಿಯ ಕೈ ಹಿಡಿದು ಹೊರಗೆ ಕರೆತಂದಿದ್ದ.

ಅತ್ತಿಗೆ ಹಾಗೆಯೇ ಇದ್ದಾರೆ. ಅದೇ ಚೆಲುವಾದ ಶಾಂತಿ, ನೆಮ್ಮದಿ ಹೊರಸೂಸುವ ಸಿರಿಮೊಗ. ಬಿಳುಪಾದ ಮೊಗದಲ್ಲಿ ಈಗ ಸ್ವಲ್ಪ ಕೆಂಪು ಬೆರೆತಿದ್ದು, ಮತ್ತಷ್ಟು ಶೋಭೆ ಹೆಚ್ಚಿದೆ. ದೇಹ ಮೊದಲಿಗಿಂತ ಸ್ವಲ್ಪ ತುಂಬಿಕೊಂಡಿದೆ ಅಷ್ಟೆ.
ಅತ್ತಿಗೆಗೆ ಕೂಡಲೇ ಗುರುತು ಹತ್ತಲಿಲ್ಲ. ಒಂದೆರಡು ಕ್ಷಣಗಳ ನಂತರ ಗುರುತು ಹಿಡಿದಂತೆ ಕಂಡರೂ ಮುಖದಲ್ಲಿ ಅಪನಂಬಿಕೆ ಒಡೆದು ತೋರುತ್ತಿತ್ತು.

ಅನುಮಾನದಿಂದಲೇ –
ರಾಜೂ ಅಲ್ವಾ ನೀನು? ಎಂದರು.
ಇನ್ನೂ ಹತ್ತಿರ ಬಂದು –
“ಎಷ್ಟು ಬದಲಾಗಿ ಹೋಗಿದ್ದೀಯಾ? ನಿನ್ನಣ್ಣನಿಗಿಂತ ನಿನಗೇ ವಯಸ್ಸಾದಂತೆ ಕಾಣುತ್ತಲ್ಲೋ” -ಎಂದರು ಸಲಿಗೆಯಿಂದ.
ಅತ್ತಿಗೆಯ ಪ್ರಶ್ನೆಗಳಿಗೆ ರಾಜೀವ ಉತ್ತರಿಸಿದೆ ತಲೆದೂಗಿದ.
“ಬಾ, ಬಾ. ಆಗಿನಿಂತ ಇಲ್ಲೇ ನಿಂತಿದ್ದೀಯಾ? ಒಳಗೆ ಬರಬಾರದೇನೋ. ಏನೋ ಒಂದು ಮಾತು ಬಂದು ಮನೆ ಬಿಟ್ಟು ಹೋದ ಮಾತ್ರಕ್ಕೆ ಪರಕೀಯನಾಗಿ ಹೋದೆಯಾ?” –
ಎಂದು ನೋವಿನಿಂದ ಆಕ್ಷೇಪಿಸಿ, ಒಳಗೆ ಕರೆದೊಯ್ದು ಸೋಫಾದ ಮೇಲೆ ಕೂಡಿಸಿದರು.

“ಒಂದು ನಿಮಿಷ ಸುಧಾರಿಸಿಕೊ. ಉಳಿದದ್ದು ಆಮೇಲೆ” ಎಂದು ಸರ ಸರನೆ ಒಳನಡೆದು ಮಾಯವಾದರು.
ತನ್ನ ಬದುಕಿನ ಬಹು ಭಾಗವನ್ನು ಕಳೆದಿದ್ದ ಆ ಮನೆಯನ್ನು ಒಮ್ಮೆ ಪ್ರೀತಿಯಿಂದ ವೀಕ್ಷಿಸಿದ ರಾಜೀವ. ಬಿಸಿಲಿನಿನಲ್ಲಿ ಬೆಂದು ಬಂದಿದ್ದ ಅವನಿಗೆ ಮನೆಯ ನಸುಕತ್ತಲು ತುಂಬಿಕೊಂಡಿದ್ದ ಶೀತಲ ವಾತಾವರಣ ಅಪ್ಯಾಯಮಾನವಾಗಿತ್ತು. ತಾಯಿಯ ಮೃದುವಾದ ಮಡಿಲಿನಲ್ಲಿ ಮಲಗಿದ್ದಂತಹ ಹಿತವಾದ ಭಾವವೊಂದು ಅವನನ್ನು ಆವರಿಸಿಕೊಂಡಿತು.
ಮೀರಾ, ಒಂದು ದೊಡ್ಡ ಲೋಟದ ತುಂಬಾ ನಿಂಬೆ ಹಣ್ಣಿನ ಪಾನಕವನ್ನು ತಂದು ಅವನ ಕೈಗಿತ್ತರು. ಸವಿಯಾಗಿ ತಂಪಾಗಿದ್ದ ಅದು ಹನಿ ಹನಿಯಾಗಿ ಒಳ ಸೇರಿದಂತೆ ಮೆತ್ತಿಕೊಂಡಿದ್ದ ಆಯಾಸ ಆವಿಯಾಗಿ ಹೋದಂತೆ ಭಾಸವಾಯಿತು.

ಮೀರಾ ಅವನು ಪೂರ್ತಿಯಾಗಿ ಕುಡಿದು ಮುಗಿಸುವವರೆಗೆ ಅವನನ್ನೇ ನಿಟ್ಟಿಸುತ್ತಾ ಕೂತಿದ್ದರು.
ರಾಜೀವ ಹೇಗಿದ್ದವನು ಹೇಗಾಗಿ ಹೋಗಿದ್ದಾನೆ? ಅವನ ಹಿಂದಿನ ಆ ಕಣ್ತುಂಬುವ ಆ ಸುಂದರ ರೂಪ ಎಲ್ಲಿ ಮರೆಯಾಯಿತು? ಬತ್ತಿ ಹೋದ ಕೆನ್ನೆಗಳು, ಗುಳಿಬಿದ್ದ ಕಣ್ಣುಗಳು, ತುಂಬಿಕೊಂಡ ಕ್ರಾಪು ವಿರಳವಾಗಿ ಅಲ್ಲಲ್ಲಿ ಇಣುಕಿ ಹಾಕುತ್ತಿರುವ ಬಿಳಿಗೂದಲುಗಳು. ಅವರೆದೆಯಲ್ಲಿ ನೋವಿನ ತಂತಿ ವಿಷಾದ ರಾಗ ಮೀಟುತ್ತಿತ್ತು.

“ರಾಜೀವ, ಈ ಎಂಟು ವರ್ಷಗಳು ನಿನಗೆ ನಾವ್ಯಾರೂ ನೆನಪೇ ಆಗಲಿಲ್ಲವೇನೋ? ಇಷ್ಟು ವರ್ಷದ ನಂತರ ಈ ಕಡೆ ತಲೆ ಹಾಕಿದೀಯಲ್ಲಾ?”
ಎಂದು ನಿಟ್ಟುಸಿರುಬಿಟ್ಟರು.
“ಹೋಗಲಿ, ನಮ್ಮನ್ನು ಬೇಡ, ನಿಮ್ಮಮ್ಮನ್ನಾದರೂ ನೋಡಬೇಕು ಅನ್ನಿಸಲೇ ಇಲ್ಲವೇನೋ?”
ಎಂದು ಮತ್ತೆ ಕೆಣಕಿದರು.
“ಅದೆಲ್ಲಾ ಬಿಡು, ಮುಗಿದುಹೋದ ಕಥೆ. ನಿಮ್ಮಮ್ಮ ತಮ್ಮ ಕೊನೆಯ ಘಳಿಗೆಯವರೆಗೂ ನೀನು ಬರುತ್ತೀಯಾ ಎಂದು ಕಾಯುತ್ತಲೇ ಇದ್ದರು. ಅವರ ಯಾತನೆಯನ್ನು ನಾನು ಎಂದಿಗೂ ಮರೆಯುವಂತಿಲ್ಲ.” ಎಂದು ತುಂಬಿ ಬಂದ ಕಣ್ಣುಗಳನ್ನು ಸೆರಗಿನಿಂದ ಒತ್ತಿಕೊಂಡರು.

ರಾಜೀವನಿಗೆ ವಿಷಯ ತಲುಪಿತ್ತು. ಗೆಳೆಯರೊಬ್ಬರ ಮೂಲಕ ತಾಯಿಯ ದೇಹಾಂತ್ಯದ ಸುದ್ದಿ ತಿಳಿದ ಇಡೀ ದಿನ ಹುಚ್ಚನಂತೆ ಆಗಿ ಹೋಗಿದ್ದ. ವಾಪಸ್ಸು ಊರಿಗೆ ಹೋಗಲೇ ಎಂಬ ಅನಿಸಿಕೆ ಮೂಡಿದರೂ ತಾಯಿಯೇ ಇಲ್ಲದ ಆ ಮನೆಗೆ ಹೋಗಿ ತಾನು ಮಾಡಬೇಕಾದುದಾರೂ ಏನು? ಮತ್ತೆ ಅಪ್ಪನ ದರ್ಪ, ವ್ಯಂಗ್ಯ, ಅಹಂಕಾರ ತುಂಬಿದ ಮಾತಿಗೆ ಬಲಿಯಾಗುವುದರ ಹೊರತಾಗಿ ಮತ್ತಾವ ಫಲವೂ ಇಲ್ಲ ಎಂದುಕೊಂಡು ಮನಸ್ಸನ್ನು ಕಲ್ಲಾಗಿಸಿಕೊಂಡು ಸುಮ್ಮನಾಗಿಬಿಟ್ಟಿದ್ದ! ಈಗನಿಸಿತು ರಾಜೀವನಿಗೆ – ತಪ್ಪು ಮಾಡಿದೆ, ಬರಬೇಕಿತ್ತು, ಆಗ ನಾನು ಬರಬೇಕಿತ್ತು. ಇಲ್ಲೇ ಎಲ್ಲೋ ಅಲೆಯುತ್ತಿದ್ದ ತಾಯಿಯ ಆತ್ಮಕ್ಕೆ ಶಾಂತಿ ದೊರಕುತ್ತಿತ್ತೇನೋ ಎಂದು. ಕೂಡಲೇ ನಗುವು ಬಂತು. ಇದ್ದಾಗ ಸಿಗದ ಶಾಂತಿ, ಸಮಾಧಾನ ಸತ್ತ ಮೇಲೆ ಸಿಗುವುದಾದರೂ ಹೇಗೆ ಅನ್ನಿಸಿತು? ರಾಜೀವ ಎಲ್ಲಾ ನಂಬಿಕೆಗಳಿಂದ ಕಳಚಿಕೊಂಡು ಬಹು ದಿನಗಳೇ ಆಗಿಹೋಗಿತ್ತು.

ರಾಜೀವ ಮಾತಿಲ್ಲದೇ ಯೋಚನೆಗಳ ಹುತ್ತದಲ್ಲಿ ಸೇರಿಹೋಗಿದ್ದು ಕಂಡು ಮೀರಾನೇ-
“ನಿನ್ನ ವಿಷಯ ಹೇಳು? ಏನು ಮಾಡಿಕೊಂಡಿದ್ದೀಯ? ಮಕ್ಕಳೆಷ್ಟು? ನಿನ್ನ ಹೆಂಡತಿಯನ್ನು ಯಾಕೆ ಕರೆದುಕೊಂಡು ಬರಲಿಲ್ಲ?” ರಾಜೀವ ಉತ್ತರಿಸುವ ಗೋಜಿಗೆ ಹೋಗದೆ ವಿಷಾದದಿಂದ ನಕ್ಕ. ಅವನಿಗೆ ಮಾತಾಡುವ ಮನಸ್ಸಿಲ್ಲದ್ದು ಕಂಡು ಮೀರಾ ತಾವೇ ಇಲ್ಲಿಯ ವಿದ್ಯಮಾನಗಳನ್ನು ಅರುಹತೊಡಗಿದರು.

“ನೀನು ಹೋದ ಮೇಲೆ ಅತ್ತೆಗೆ ನಿನ್ನದೇ ಕೊರಗಾಗಿ ಹೋಯಿತು. ಮೊದಲೇ ಇಳಿ ವಯಸ್ಸಿನಿಂದ ಸೋತಿದ್ದ ಅವರಿಗೆ ನೀನಿಲ್ಲದೆ ಬಹು ದೊಡ್ಡ ಆಘಾತ ಉಂಟುಮಾಡಿತು. ಯೋಚನೆಗಳು ಹೆಚ್ಚಾದಂತೆ ಅವರ ಮನಸ್ಸಿನ ಸಮತೋಲನವೇ ತಪ್ಪಿಹೋಯಿತು ನೋಡು. ಕೂತರೇ ಕೂತೇ ಬಿಟ್ಟರು, ನಿಂತರೇ ನಿಂತೇ ಬಿಟ್ಟರು. ಊಟ ಮಾಡಿದರೆ ಉಂಟು, ಇಲ್ಲದಿದ್ದರೆ ಇಲ್ಲ. ನಿನ್ನ ವಯಸ್ಸಿನ ಯಾವ ಹುಡುಗರನ್ನು ಕಂಡರೂ ಸರಿ, ರಾಜೂ ಅಂತ ಓಡಿ ಹೋಗಿ ತಬ್ಬಿಕೊಂಡು ಬಿಡುತ್ತಿದ್ದರು. ಮಾವನವರಂತೂ ಅವರನ್ನು ಹಿಡಿಯುವುದರಲ್ಲಿ ಹಣ್ಣಾಗಿ ಹೋಗುತ್ತಿದ್ದರು. ಅವರ ಉಪಟಳ ತುಂಬಾ ಹೆಚ್ಚಾಗಿದ್ದರೂ ತಮ್ಮ ಕಣ್ಣಿಗಿಂತ ಹೆಚ್ಚಾಗಿ ಅವರನ್ನು ಕಾಪಾಡಿದರು. ಎರಡು ವರುಷಗಳ ಕೆಳಗೆ ಅತ್ತೆ ತೀರಿಕೊಂಡ ಮೇಲೆ ನಿಮ್ಮ ತಂದೆ ಪೂರ್ತಿ ಕುಸಿದು ಹೋದರು. ಒಂದು ದುರ್ದಿನ ಇದ್ದಕ್ಕಿದ್ದಂತೆ ಅವರಿಗೆ ಪಾರ್ಶ್ವವಾಯು ಬಡಿದು, ಅವರ ಇಡೀ ದೇಹದ ಸ್ವಾಧೀನವೇ ತಪ್ಪಿಹೋಯಿತು. ಎಲ್ಲಾ ಹಾಸಿಗೆಯ ಮೇಲೇ ಆಗಬೇಕು. ಮಗನನ್ನು ನಾನೇ ದೂರ ಮಾಡಿಕೊಂಡೆ ಎಂದು ಸುಮ್ಮನೆ ಕಣ್ಣೀರು ಸುರಿಸುತ್ತಾರೆ. ಈಗ ನಿನ್ನನ್ನು ನೋಡಿ ಅವರ ಜೀವಕ್ಕೆ ಹಾಯೆನಿಸಬಹುದು. ಈಗ ತಾನೇ ಚೂರು ಹಣ್ಣಿನ ರಸ ಕುಡಿದು ಮಲಗಿದ್ದಾರೆ. ಎದ್ದ ಮೇಲೆ ಹೋಗಿ ನೋಡುವೆಯಂತೆ.”

ಅತ್ತಿಗೆಯ ಮಾತುಗಳನ್ನು ಕೇಳುತ್ತಾ ಇದ್ದಂತೆ ರಾಜೀವ ಒಂದು ಕೆಟ್ಟ ಸಂಕಟವನ್ನು ಅನುಭವಿಸುತ್ತಿದ್ದ. ಬದುಕಿನ ಆಗಾಧವಾದ ಪಯಣದಲ್ಲಿ ಕೇವಲ ಎಂಟೇ ವರ್ಷದ ಅವಧಿಯಲ್ಲಿ ಇಷ್ಟೆಲ್ಲಾ ಘಟಿಸಿಹೋಯಿತೇ? ಪ್ರಾಣಕ್ಕೂ ಮಿಗಿಲಾಗಿ ಪ್ರೀತಿಸುತ್ತಿದ್ದ ತಾಯಿಯ ಸಾವಿಗೆ ನಾನೇ ಕಾರಣನಾದೆನಲ್ಲಾ ಎಂಬ ನೋವು ಅವನ ಕಣ್ಣಂಚಿನಲ್ಲಿ ನೀರಿನ ರೂಪದಲ್ಲಿ ಮಿಂಚುತ್ತಿತ್ತು. ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡ ನಿರ್ಭಾಗ್ಯನಂತೆ ಕುಳಿತಿದ್ದ ಅವನನ್ನು ಕಂಡು ಮೀರಾಗೆ ಮರುಕ ಉಕ್ಕಿ ಬಂದಿತು.

“ನೋಡಿಲ್ಲಿ ರಾಜೂ, ನಡೆದಿದ್ದಕ್ಕೆಲ್ಲಾ ನೀನೇ ಕಾರಣ ಎಂದುಕೊಂಡು ಕಂಬನಿಗರೆಯಬೇಡ. ಏನಾಗಬೇಕೆಂದಿತ್ತೋ ಅದು ಆಯಿತು ಅಷ್ಟೆ. ಅದಕ್ಕೆಲ್ಲಾ ನೀನು ಕಾರಣ ಹೇಗಾಗುತ್ತೀಯಾ ಹೇಳು? ನಿಮಿತ್ತ ಅಂದುಕೊ ಬೇಕಾದರೆ. ಇಷ್ಟೆಲ್ಲಾ ದುರಂತಗಳು ನಮ್ಮ ಮನೆಯಲ್ಲಿ ನಡೆಯಬಾರದಿತ್ತು. ಏನು ಮಾಡೋಕಾಗತ್ತೆ? ಎಲ್ಲಾ ವಿಧಿಲಿಖಿತ!.”
ಹಿಂದಾದರೆ ಇಂತಹ ಮಾತುಗಳಿಗೆ ರಾಜೀವ ಗೊಡ್ಡು ವೇದಾಂತ ಎಂದು ನಕ್ಕು ಬಿಡುತ್ತಿದ್ದ. ಕೆಲವು ಸಲ ಇಂತಹ ಮಾತುಗಳಿಂದಲೂ ಗಾಯಗೊಂಡ ಮನಸ್ಸಿಗೆ ಸಾಂತ್ವನ ಸಿಗುವುದು ಸುಳ್ಳಲ್ಲ ಅನ್ನಿಸಿತು.

“ರಾಜೀವ ನಿನ್ನ ಕಥೆಯೇನೋ? ನೆಮ್ಮದಿಯಿಂದ ಇದೆ ತಾನೇ ನಿನ್ನ ಜೀವನದಲ್ಲಿ?”
ಮೀರಾ ಮತ್ತೆ ಒತ್ತಾಯಿಸಿದರು.
ರಾಜೀವನಿಗೆ ಬೇರೆ ದಾರಿಯೇ ಇಲ್ಲ. ಅತ್ತಿಗೆಯ ಒತ್ತಾಯಕ್ಕೆ ಅವನು ತಲೆಬಾಗಲೇ ಬೇಕಾಗಿತ್ತು. ಇವರಿಂದ ತನ್ನ ಬದುಕಿನ ಕರ್ಮಕಥೆಯನ್ನು ಮುಚ್ಚಿಡುವುದು ಸಾದ್ಯವೇ ಇಲ್ಲ ಅನ್ನಿಸಿತು. ಬಣ್ಣಗೆಟ್ಟ ತನ್ನ ಬಾಳಿನ ಬಣ್ಣನೆಯನ್ನು ಎಲ್ಲಿಂದ ಪ್ರಾರಂಭಿಸಲಿ? ಎಂದು ಪದಗಳಿಗೆ ತಡಕುತ್ತಿರುವಂತೆಯೇ-

“ಮೀರಾ……………”
ಎಂಬ ನರಳಿಕೆಯ ದನಿ ಒಳಕೋಣೆಯಿಂದ ಕೇಳಿ ಬಂದಿತು. ತನ್ನ ಅಪ್ಪನ ದನಿಯೇ ಇದು ಯಾವಾಗಲೂ ಎಲ್ಲರನ್ನು ನಡುಗಿಸುತ್ತಿದ್ದ ಆ ಗಡುಸಾದ ಕಂಠವೆಲ್ಲಿ? ಈ ನೋವಿನ ಮುದ್ದೆಯಾದ ಗೊರಗು ದನಿಯೆಲ್ಲಿ?

“ಮಾವನವರು ಎಚ್ಚರವಾಗಿದ್ದಾರೆ ಬಾ. ನಿನ್ನನ್ನು ನೋಡಿದರೆ ಅವರ ಜೀವಕ್ಕೆ ಎಷ್ಟೋ ಸುಖವಾಗುತ್ತದೆ.”
ಮುನ್ನಡೆದ ಅತ್ತಿಗೆಯನ್ನು ಹಿಂಬಾಲಿಸಿದ ರಾಜೀವ. ಈ ಮನೆ ಅವನಿಗೆ ಅಪರಿಚಿತವೇನಲ್ಲವಲ್ಲ? ಕೋಣೆಯ ಕತ್ತಲಿಗೆ ಹೊಂದಿಕೊಂಡ ಮೇಲೆಯೇ ಅವನಿಗೆ ಮಂಚದ ಮೇಲೆ ಮುದುರಿ ಮಲಗಿದ್ದ ಆಕೃತಿ ಕಾಣಿಸಿದ್ದು.

ತನ್ನ ತಂದೆಯೇ ಇದು? ಅಡಿಯಿಂದ ಮುಡಿಯವರೆಗೂ ದರ್ಪ, ದಬ್ಬಾಳಿಕೆ, ಮುಂಗೋಪಗಳನ್ನು ತುಂಬಿಕೊಂಡ ಆ ಆಜಾನುಬಾಹು ವ್ಯಕ್ತಿತ್ವ ದೈನ್ಯ, ಅಸಹಾಯಕತೆಗಳೇ ಮೈವೆತ್ತಂತೆ ರೂಪಾಂತರಗೊಂಡಿರುವುದು ಮಲಗಿರುವುದು ನಿಜವೇ, ಭ್ರಮೆಯೇ? ಲೋಕದೆಲ್ಲಾ ವೈಭೋಗಗಳು ಕ್ಷಣದಲ್ಲಿ ಗಾಳಿಗುಳ್ಳೆಯಂತೆ ಕರಗಿ ಕೊನೆಗುಳಿಯುವ ಸಾವೊಂದೇ ಶಾಶ್ವತ ಸತ್ಯವೇನೋ? ಅನ್ನಿಸಿಬಿಟ್ಟಿತು ರಾಜೀವನಿಗೆ.

ಅತ್ತಿಗೆ ಮಲಗಿದ್ದ ತಂದೆಯ ಮುಖದ ಹತ್ತಿರ ಬಾಗಿ ಜೋರಾಗಿ ಕೂಗಿ ಹೇಳಿದರು-
“ಮಾವಾ, ನಿಮ್ಮ ಮಗ ರಾಜೀವ ಬಂದಿದ್ದಾನೆ, ದಿನಾ ಹಲುಬುತ್ತಿದ್ದಿರಲ್ಲಾ, ನೋಡಿ ಇಲ್ಲಿ.”
ರಾಜೀವ ತಂದೆಯ ಸನಿಹ ಹೋಗಿ ಕುಳಿತು ಅವರ ಹತ್ತಿಯಂತೆ ಕೃಶವಾಗಿ ಹೋಗಿದ್ದ ಕೈಗಳನ್ನು ಒತ್ತಿ ಹಿಡಿದುಕೊಂಡ.
ಒಣಗಿ ಬರಡಾಗಿ ಹೋಗಿದ್ದ ಅಪ್ಪನ ಮುಖದಲ್ಲಿ ಮಿಂಚಿನ ಸೆಳಕೊಂದು ಕಂಡಂತಾಯಿತು.

“ಅಂತೂ ಬಂದೆಯಾ ರಾಜೂ, ಒಂದೆರಡು ವರ್ಷಗಳ ಮುಂಚೆಯಾದರೂ ಬರಬಾರದಿತ್ತೇನೋ? ನಿನ್ನ ತಾಯಿ ನೆಮ್ಮದಿಯಾಗಿ ತನ್ನ ಪ್ರಾಣ ಬಿಡುತ್ತಿದ್ದಳು. ಹೋಗಲಿ ಈಗಲಾದರೂ ಬಂದೆಯಲ್ಲಾ, ನನ್ನ ಜೀವಕ್ಕೆ ಸಮಾಧಾನವಾಯಿತು ಕಣೊ. ಇನ್ನು ನಾನು ನಿರಾಳವಾಗಿ ಪ್ರಾಣಬಿಡುತ್ತೇನೆ.”

ಎಂದು ಅಪ್ಪ ಅಸ್ಪಷ್ಟವಾಗಿ ತೊದಲು, ತೊದಲಾಗಿ ಹೇಳುತ್ತಿದ್ದರೆ ಕಣ್ಣೀರು ಅವರ ದಿಂಬನ್ನು ತೋಯಿಸುತ್ತಿತ್ತು.
ಇದೇ ತಂದೆಯ ಕೋಪ, ತಾಪಗಳಿಗೆ, ಸರ್ವಾದಿಕಾರೀ ಧೋರಣೆಯ ಉಗ್ರ ವೃಕ್ತಿತ್ವಕ್ಕೆ ರಾಜೀವ ಬೇಸತ್ತು ಹೋಗಿದ್ದ. ಪ್ರತಿಯೊಂದರಲ್ಲೂ ಕುಂದು ಹುಡುಕುತ್ತಿದ್ದರು. ಎಲ್ಲರನ್ನೂ ಆಕ್ಷೇಪಿಸುತ್ತಾ ಕ್ರೂರವಾಗಿ ನೋಯಿಸುವುದು ಅವರ ಸ್ವಭಾವ. ಅವರನ್ನು ಸಂತೋಷಪಡಿಸುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಮನೆಯಲ್ಲಿ ಪ್ರತಿಯೊಬ್ಬರೂ ತಮ್ಮ ಇಷ್ಟದಂತೆಯೇ ನಡೆಯಬೇಕೆಂಬುದು ಅವರ ಹಟ. ಯಾರಾದರೂ ಅವರ ಮಾತು ಮೀರಿ ತಮ್ಮ ಸ್ವಂತಿಕೆ ತೋರಲು ಯತ್ನಿಸಿದರೆ ಅವತ್ತಿಡೀ ದಿನ ಮನೆಯಲ್ಲಿ ಯಾರಿಗೂ ನೆಮ್ಮದಿಯಿಲ್ಲ. ಗುಡುಗು, ಸಿಡಿಲು, ರಂಪ, ರಾಧ್ಧಾಂತವಾಗಿಹೋಗುತ್ತಿತ್ತು. ಗಂಡ ಈ ಗುಣದಿಂದಾಗಿ ರಾಜೀವನ ತಾಯಿಗೆ ಮನೆಯೇ ನರಕಪ್ರಾಯವಾಗಿ ಹೋಗಿತ್ತು. ಆದರೆ ಅವರು ಎಂದು ಯಾರ ಮುಂದೆಯೂ ತಮ್ಮ ವೇದನೆಯನ್ನು ತೋರಗೊಡುತ್ತಿರಲಿಲ್ಲ.
ಅಪ್ಪನ ಈ ಅದಿಕಾರಶಾಹೀ ಮನೋಭಾವದ ವಿರುದ್ಧ ಮೊದಲಬಾರಿಗೆ ಸಿಡಿದು ನಿಂತಿದ್ದ ರಾಜೀವ.

ಅಪ್ಪ ನೋಡಿದ್ದ ಹೆಣ್ಣನ್ನು ನಿರಾಕರಿಸಿ ತಾನು ಪ್ರೀತಿಸಿದ್ದ ಸಹೋದ್ಯೋಗಿ ವಿಮಲಾಳನ್ನು ಮದುವೆಯಾಗುವೆನೆಂದು ನುಡಿದಾಗ ಮನೆಯಲ್ಲಿ ಅಗ್ನಿಪರ್ವತವೇ ಸ್ಫೋಟಿಸಿತ್ತು.
ರಾಜೀವ ತಂದೆಯನ್ನು ಪ್ರತಿಭಟಿಸಿ ನಿಂತಿದ್ದ. ತಾಯಿಯ ಗೋಗರೆತ, ಅಣ್ಣನ, ಅತ್ತಿಗೆಯರ ಉಪದೇಶ ಯಾವುದೂ ಅವನ ಕಿವಿಗೆ ಹೋಗಿರಲಿಲ್ಲ.

ರಾಜೀವನ ತಂದೆ ತಮ್ಮ ಮಾಮೂಲಿನ ಧೃಡವಾದ ನಿಶ್ಚಲವಾದ ಸ್ವರದಲ್ಲಿ ಹೇಳಿಬಿಟ್ಟಿದ್ದರು-
“ಈ ಪ್ರೀತಿ, ಗೀತಿ ಎಲ್ಲಾ ನಮ್ಮ ಮನೆಯಲ್ಲಿ ನಡೆಯುವುದಿಲ್ಲ, ಯಾವುದೋ ಕಂಡು ಕೇಳದ ಹುಡುಗಿ ಈ ಮನೆಯ ಸೊಸೆಯಾಗಿ ಬರೋದನ್ನು ನಾನು ಒಪ್ಪೋದಿಲ್ಲ. ಇದು ನನ್ನ ಮನೆ. ಇಲ್ಲಿ ನನ್ನ ಇಷ್ಟಕ್ಕೆ ವಿರೋಧವಾಗಿ ನಡೆಯುವವರಿಗೆ ಜಾಗವಿಲ್ಲ. ನಿನ್ನ ದಾರಿ ನೀನು ನೋಡಿಕೊಳ್ಳಬಹುದು.”

ರಾಜೀವನೂ ಅದೇ ತಂದೆಯ ಮಗನಲ್ಲವೇ? ಛಲದಲ್ಲಿ ಅವನೂ ಎನೂ ಕಡಿಮೆಯಿರಲಿಲ್ಲ. ಅಪ್ಪ ಹಾಗಂದಿದ್ದೇ ತಡ ಹೊರಟು ನಿಂತೇಬಿಟ್ಟಿದ್ದ. ತಾಯಿಯ ಅಳು, ಗೋಳಾಟ ಅಪ್ಪ, ಮಗ ಇಬ್ಬರನ್ನೂ ತಮ್ಮ ತಮ್ಮ ನಿರ್ಧಾರದಿಂದ ಹಿಂತೆಗೆಯುವಂತೆ ಮಾಡುವುದರಲ್ಲಿ ಯಶಸ್ವಿಯಾಗಿರಲಿಲ್ಲ.

ಹೊರಟು ನಿಂತಿದ್ದ ರಾಜೀವನಿಗೆ ತಂದೆ ಕೂಗಿ ಹೇಳಿದ್ದರು-
“ಇವತ್ತಿಗೆ ನಿನಗೆ ಈ ಮನೆಯ ಋಣ ತೀರಿಹೋಯಿತು ಎಂದು ತಿಳಿದುಕೊ. ನೀನು ಇನ್ನು ಯಾವುದೇ ಕಾರಣಕ್ಕೆ ಈ ಮನೆಗೆ ಬರುವ ಅಗತ್ಯವಿಲ್ಲ. ಈ ಮಾತು ನನ್ನ ಅಥವಾ ನಿನ್ನ ತಾಯಿಯ ಸಾವಿಗೂ ಅನ್ವಯಿಸುತ್ತದೆ.”
ರಾಜೀವ ತಾಯಿಗೆ ಕಡೆಯ ಬಾರಿಗೆ ನಮಸ್ಕರಿಸಿ ತಂದೆಯ ಕಡೆಗೆ ತಿರಸ್ಕಾರದಿಂದೊಮ್ಮೆ ನೋಡಿ ಮನೆಯಿಂದ ಹೊರಟು ಬಂದಿದ್ದ. ಅವನ ಮುಂದೆ ಇಡೀ ಬದುಕು ಉದ್ದವಾಗಿ ಹಾಸಿಕೊಂಡು ನಿಂತಿತ್ತು. ತನ್ನ ಪ್ರೀತಿಯ ವಿಮಲಾಳೊಡನೆ ಮುಂಬಯಿ ಸೇರಿದ್ದ. ಮನೆಯವರೊಡನೆ ಸಂಬಂಧವನ್ನು , ಸಂಪರ್ಕವನ್ನು ಪೂರ್ತಿಯಾಗಿ ಕಡಿದುಕೊಂಡಿದ್ದ.

ಮುಂಬಯಿಯಲ್ಲಿ ವಿಮಲಾಳ ದೂರದ ಸಂಬಂಧಿ ಸುರೇಶ ಇವರಿಗಾಗಿ ಮನೆಯನ್ನು ಹುಡುಕುವುದರಿಂದ ಹಿಡಿದು ಪ್ರತಿಯೊಂದಕ್ಕೂ ಸಹಾಯ ಮಾಡಿದ್ದ. ಅವನ ನೆರವಿನಿಂದಲೇ ವಿಮಲಾ, ರಾಜೀವ ಸರಳವಾಗಿ ವಿವಾಹವಾಗಿ ಸಂಸಾರ ಹೂಡಿದ್ದರು. ವಿಮಲಾ ತನ್ನ ಸಂಗಾತಿಯಾದ ಮೇಲೆ ರಾಜೀವನಿಗೆ ಈ ಪ್ರಪಂಚದಲ್ಲೇ ತನಗಿಂತ ಸುಖಿ ಬೇರೆ ಯಾರಿಲ್ಲ ಅನ್ನಿಸಿಬಿಟ್ಟಿತ್ತು. ಬಿಟ್ಟು ಬಂದ ಮನೆಯ, ತಾಯಿಯ ನೆನಪು ಆಗಾಗ ಕಾಡುತ್ತಿದ್ದರೂ ವಿಮಲಾ ತನ್ನ ಸೌಂದರ್ಯ, ಸಾಂಗತ್ಯದಿಂದ ಎಲ್ಲವನ್ನೂ ಮರೆಯಿಸಿಬಿಟ್ಟಿದ್ದಳು.

ಮದುವೆಯಾದ ಮೇಲೆಯೂ ವಿಮಲಾ ಕೆಲಸಕ್ಕೆ ಹೋಗುತ್ತಿದ್ದರಿಂದ ರಾಜೀವನಿಗೆ ಹಣಕಾಸಿನ ತೊಂದರೆ ಕಿಂಚಿತ್ತೂ ಇರಲಿಲ್ಲ. ಒಮ್ಮೊಮ್ಮೆ ಎಲ್ಲರನ್ನೂ ಬಿಟ್ಟು ಬಂದು ತಪ್ಪು ಮಾಡಿದೆನೇನೋ ಎಂಬ ಅಳುಕು ಹಣಿಕಿ ಹಾಕಿದರೂ ವಿಮಳಾಳ ಸಹವಾಸ ಆ ಕೊರಗನ್ನೂ ಹುಟ್ಟಿದಲ್ಲೇ ಹೊಸಕಿ ಹಾಕಿಬಿಡುತ್ತಿತ್ತು. ಅಪ್ಪ ತಮ್ಮಿಬ್ಬರ ಮದುವೆಗೆ ಅನುಮತಿ ನೀಡಿದ್ದರೆ ತಾನ್ಯಾಕೆ ಎಲ್ಲರನ್ನು ಬಿಟ್ಟು ಬರುತ್ತಿದ್ದೆ ಎಂದು ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿದ್ದ.
ರಾಜೀವನ ಹೊಸ ಬದುಕು ಸುಖಮಯವಾಗಿ, ನಿರಾತಂಕವಾಗಿ ಸಾಗುತ್ತಿತ್ತು. ವಿಮಲಾ ಅವನ ಸರ್ವಸ್ವವಾಗಿ ಹೋಗಿದ್ದಳು. ತನ್ನ ಬದುಕಿನ ಸಮಸ್ತ ಸೂತ್ರಗಳನ್ನು ಅವಳ ಕೈಗೊಪ್ಪಿಸಿ, ತಾನು ಕೇವಲ ಗಾಳಿಪಟವಾಗಿ ಕನಸಿನ ಲೋಕದಲ್ಲಿ ಹಾರುತ್ತಿದ್ದ. ಆದರೆ ಅವನ ಸಂತೋಷ, ನೆಮ್ಮದಿ ಶಾಶ್ವತವಾಗಿರಲಿಲ್ಲ. ನಿಜವೆಂದುಕೊಂಡಿದ್ದು ಬರೀ ನೆರಳಾಗಿ ಹೋಗಿತ್ತು. ನಿರಂತರವೆಂದು ನೆಚ್ಚಿಕೊಂಡಿದ್ದ ಸುಖ ಸೋಪಿನ ನೊರೆಯಂತೆ ಕಣ್ಣೆದುರೇ ಕರಗಿ ಹೋಗಿತ್ತು. ರಾಜೀವ ಗಾಢವಾಗಿ ಪ್ರೀತಿಸಿದ್ದ, ಆತ್ಮ ಸಂಗಾತಿಯೆಂದು ನಂಬಿದ್ದ ವಿಮಲಾ ಅವನನ್ನು ಘೋರವಾಗಿ ವಂಚಿಸಿದ್ದಳು.
ಒಂದು ದಿನ ಆಫೀಸಿನಿಂದ ಮುಂಚಿತವಾಗಿ ಬಂದವನು ತನ್ನಲ್ಲಿದ್ದ ಕೀಲಿಯಿಂದ ಬಾಗಿಲು ತೆರೆದು ಒಳಗೆ ಪ್ರವೇಶಿಸಿದ. ಮುಂಭಾಗದಲ್ಲಿ ನಿಂತಿದ್ದ ಸುರೇಶನ ಕಪ್ಪು ಹೀರೋ ಹೊಂಡಾ ರಾಜೀವನಲ್ಲಿ ಆಶ್ಚರ್ಯ ಮೂಡಿಸಿತ್ತೇ ಹೊರತು ಖಂಡಿತವಾಗಿ ಅನುಮಾನವನಲ್ಲ. ಆದರೆ ಇವನಿಗಾಗಿ ಅಲ್ಲಿ ಕರಾಳವಾದ ಸತ್ಯವೊಂದು ಬಾಯ್ತೆರೆದು ಕಾದು ಕುಳಿತಿತ್ತು. ರಾಜೀವ ಯಾರಿಗಾಗಿ ತನ್ನ ಜೀವನವನ್ನೇ ಧಾರೆಯೆರೆಯಲು ಸಿದ್ಧನಿದ್ದನೋ, ಯಾರಿಗಾಗಿ ತನ್ನ ಬದುಕನ್ನೇ ಬಗೆದು ಹಂಚಿಕೊಟ್ಟಿದ್ದನೋ ಅದೇ ವಿಮಲಾ ತನ್ನ ಸಂಬಂಧಿ ಸುರೇಶನೋಡನೆ ಯಃಕಶ್ಚಿತ್ ತನ್ನ ದೇಹವನ್ನು ಹಂಚಿಕೊಳ್ಳುತ್ತಿದ್ದಳು.

ಇಷ್ಟೇ ನಡೆದಿದ್ದು. ರಾಜೀವ ವಿಮಲಾಗಾಗಲೀ, ಸುರೇಶನಿಗಾಗಲೀ ಏನೂ ಹೇಳಲಿಲ್ಲ. ಅವರ ಮೇಲೆ ಕೂಗಾಡಲಿಲ್ಲ. ಜಗಳವಾಡಲಿಲ್ಲ. ಅದರಿಂದ ಯಾವ ಪ್ರಯೋಜನವೂ ಇಲ್ಲವೆಂದು ತಿಳಿದವನಂತೆ ಸುಮ್ಮನಾಗಿಬಿಟ್ಟಿದ್ದ. ಹತಾಶನಂತೆ ತನ್ನ ಕೋಣೆ ಸೇರಿ, ಬಾಗಿಲು ಹಾಕಿಕೊಂಡು ಮಲಗಿಬಿಟ್ಟಿದ್ದ. ಕಾದು ಕಾವಲಿಯಾದ ಮನಸ್ಸು, ಹೃದಯ. ಅವನಿಗೆ ನಿದ್ದೆ ಹತ್ತಿದಾಗ ಮಧ್ಯರಾತ್ರಿ ಮೀರಿತ್ತು.

ಮರುದಿನ ರಾಜೀವ ಎದ್ದಾಗ ತುಂಬಾ ತಡವಾಗಿ ಹೋಗಿತ್ತು. ಮನೆ ಖಾಲಿ ಖಾಲಿಯಾಗಿತ್ತು. ವಿಮಲಾ ಮನೆಯಲ್ಲಿರಲಿಲ್ಲ. ಅವಳಿಗೆ ಸಂಬಂಧಿಸಿದ ವಸ್ತುಗಳೊಂದೂ ಮನೆಯಲ್ಲಿರಲಿಲ್ಲ. ವಿಮಲಾ ಎಲ್ಲಿ ಹೋಗಿರಬಹುದೋ ಎಂದು ರಾಜೀವನಿಗೆ ಆತಂಕವಾಗಿತ್ತು. ಆದರೆ ಮುಂದೆ ವಿಮಲಾ, ಸುರೇಶ ಜೊತೆ ಜೊತೆಯಾಗಿ ಕಾಣಿಸತೊಡಗಿದಾಗ ಇವನ ಪ್ರಶ್ನೆಗಳಿಗೆ ಉತ್ತರ ದೊರಕಿತ್ತು.

ರಾಜೀವನಿಗೆ ತುಂಬಾ ನೋವಾಗಿತ್ತು. ವಿಮಲಾಳ ವರ್ತನೆ ಅವನಿಗೆ ಭರಿಸಲಾಗದ ಆಘಾತ ಉಂಟುಮಾಡಿತ್ತು. ತಾನು ತಪ್ಪಿದ್ದೆಲ್ಲಿ? ಎಂದು ಅವನಿಗೆ ತಿಳಿಯದಾಯಿತು. ಅವನು ಮರು ಮದುವೆಯ ಯೋಚನೆಯನ್ನೂ ಮಾಡಲಿಲ್ಲ. ನೋವಿನ ಗೆಡ್ಡೆಯೊಂದನ್ನು ಎದೆಯಲ್ಲಿ ಬೆಳೆಸಿಕೊಳ್ಳುತ್ತಾ ಒಂಟಿಯಾಗಿ ಇದ್ದುಬಿಟ್ಟ. ಆಸೆಯಿಂದ ಆರಿಸಿಕೊಂಡ ಪ್ರೀತಿಯ ದಾರಿ ಅವನನ್ನು ಬೆಂಗಾಡಿನ ನಡುವೆ ತಂದು ನಿಲ್ಲಿಸಿಬಿಟ್ಟಿತ್ತು. ಅವನಿಗೆ ಜೀವನದ ಮೇಲಿನ ನಂಬಿಕೆಯೇ ಕಳೆದು ಹೋಗಿತ್ತು. ದಿನೇ ದಿನೇ ಅವನು ಬದುಕಿಗೆ ವಿಮುಖನಾಗತೊಡಗಿದ್ದ. ಯಾವಾಗದರೊಮ್ಮೆ ಊರಿಗೆ ಹಿಂತಿರುಗುವ ಯೋಚನೆ ಮನಸ್ಸಿನಲ್ಲಿ ಮೂಡಿದರೂ, ತನ್ನ ಪರಾಜಿತ ಮುಖವನ್ನು ತಂದೆಯೆದುರು ಪ್ರದರ್ಶಿಸಿ, ಅವರ ಹೆಮ್ಮೆಯನ್ನು ಮತ್ತಷ್ಟು ಬೆಳೆಸುವುದು ಅವನಿಗೆ ಇಷ್ಟವಾಗದೆ ಸುಮ್ಮನಾಗಿಬಿಟ್ಟಿದ್ದ.

ದಿನಗಳು ಸರಿದಂತೆ ಹಳೆಯ ರೋಷ, ದ್ವೇಷಗಳು ತಮ್ಮ ಬಿಗುವನ್ನು ಕಳೆದುಕೊಂಡಂತೆ ಊರಿಗೊಮ್ಮೆ ಹೋಗಿ ಬರುವ ನಿರ್ಧಾರಮಾಡಿ, ಅಂತೆಯೇ ಈಗ ಬಂದು ತಂದೆಯೆದುರು ಕೂತಿದ್ದ.

ಗತ ನೆನಪುಗಳ ಗೋರಿಯಲ್ಲಿ ಮುಳುಗಿದ್ದವನ್ನು ತಂದೆಯ ಮಾತು ಮೇಲಕ್ಕೆಳೆದು ತಂದಿತು-
“ಆಗಿದ್ದಾಯಿತು ಕಣೊ ರಾಜೂ. ನಾನು ಈಗಾಗಲೇ ಜೀವನದಲ್ಲಿ ಬೇಕಾದಷ್ಟು ಪಾಠ ಕಲಿತುಬಿಟ್ಟಿದ್ದೀನಿ. ನನ್ನ ನಿಷ್ಟುರ ಸ್ವಭಾವಕ್ಕೆ, ಹಟಮಾರಿತನಕ್ಕೆ ಈಗಾಗಲೇ ದಂಡವನ್ನೂ ತೆತ್ತಿದ್ದೀನಿ. ನಿನ್ನ ಬಗ್ಗೆ ತಿಳಿಯಲು ತುಂಬಾ ಪ್ರಯತ್ನಪಟ್ಟೆ. ಆದರೆ ನೀನು ಬೇಕೆಂದೇ ನಮ್ಮಿಂದ ದೂರವಾಗಿಬಿಟ್ಟಿದ್ದೆ. ನಿನ್ನ ಗೆಳೆಯರಿಂದ ಪಡೆದ ನಿನ್ನ ವಿಳಾಸಕ್ಕೆ ಬರೆದ ಪತ್ರಗಳೆಲ್ಲಾ ಹಿಂತಿರುಗಿ ಬಂದವು. ನಿನ್ನ ಹೆಂಡತಿ, ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಿಡು. ನನ್ನ ಕೊನೆಗಾಲವನ್ನಾದರೂ ನಿಮ್ಮನ್ನೆಲ್ಲಾ ನೋಡಿಕೊಂಡು ನೆಮ್ಮದಿಯಾಗಿ ಕಳೆಯುತ್ತೇನೆ. ಇದೊಂದಕ್ಕೆ ಅವಕಾಶ ಮಾಡಿಕೊಡೊ.”

ತಂದೆ ಅವನ ಕೈ ಹಿಡಿದು ಅಂಗಲಾಚುತ್ತಿದ್ದರು.
ರಾಜೀವನ ಕಾಂತಿ ಕಳೆದುಕೊಂಡ ಕೆನ್ನೆಗಳಲ್ಲಿ ಕ್ಷಿಣವಾದ ನಗುವೊಂದು ಮಿಂಚಿ ಮರೆಯಾಯಿತು. ಬದುಕಿನ ಕಟ್ಟ ಕಡೆಯ ಕ್ಷಣಗಳನ್ನು ಎದುರಿಸುತ್ತಿರುವ ಮುದಿ ತಂದೆಯ ಮುಂದೆ ತನ್ನ ಅಸ್ತವ್ಯಸ್ತ ಬದುಕನ್ನು ಬಿಚ್ಚಿಡುವುದರಲ್ಲಿ ಯಾವ ಅರ್ಥವೂ ಇಲ್ಲ ಅನ್ನಿಸಿತು. ಜೀವನ ಪರಿಯೇ ವಿಚಿತ್ರ. ಯಾವುದೋ ಮರೀಚಿಕೆಯ ಬೆಂಬೆತ್ತಿ, ಹುಟ್ಟಿ ಬೆಳೆದ, ಮನೆ, ಊರನ್ನು ಬಿಟ್ಟು ಅಪರಿಚಿತ ತಾಣದಲ್ಲಿ ನನ್ನ ಬೇರುಗಳನ್ನು ಹುಡುಕಿಕೊಂಡೆ. ಮಮತೆಯ ತಾಯಿಯ ಜೀವಕ್ಕೆ ಎರವಾದೆ. ಅಂದು ತಾವು ಸತ್ತಾಗ ಕೂಡ ಬರಬೇಡವೆಂದು ಕೂಗಾಡಿ ನೋಯಿಸಿದ್ದ ಅಪ್ಪ ಈಗ ಸೋಲೊಪ್ಪಿಕೊಂಡು ಮತ್ತೆ ಬರುವಂತೆ ಆಹ್ವಾನಿಸುತ್ತಿದ್ದಾರೆ. ಆದರೆ ನನ್ನ ಬಾಳುವೆಯ ಸೇತುವೆ ಸರಿಪಡಿಸದಂತೆ ಮುರಿದುಬಿದ್ದಿದೆ.

ರಾಜೀವ ಎದೆಯ ನೋವಿನ ತರಂಗಗಳನ್ನು ಅಡಗಿಸಿಕೊಳ್ಳುತ್ತಾ-
“ಅಷ್ಟು ಸುಲಭವಾಗಿ ಒಮ್ಮೆಗೆ ಇಲ್ಲಿಗೆ ಬರೋದು ಸಾಧ್ಯವಿಲ್ಲಪ್ಪಾ. ಮುಂದೆ ನೋಡೋಣ. ನಾನು ಇನ್ನು ಮುಂದೆ ಆಗಾಗ ಬಂದು ನಿನ್ನನ್ನು ನೋಡಿಕೊಂಡು ಹೋಗ್ತಾಇರ್ತೀನಿ.” ಎಂದು ತಂದೆಯನ್ನು ಸಮಾಧಾನಿಸಿದ. ಇವನ ಮಾತಿನಲ್ಲಿ ಅವರಿಗೆ ನಂಬಿಕೆ ಬಂದಂತೆ ದೃಷ್ಟಿ ಕಳೆದುಕೊಂಡು ಮಂಕಾಗಿದ್ದ ಕಣ್ಣುಗಳು ಹೊಳಪುಗೊಂಡವು.
ಅಷ್ಟು ಹೊತ್ತಿಗೆ ಬಂದ ರಾಘವ. ಅಣ್ಣ ಹಾಗೇ ಇದ್ದಾನೆ. ಅವನು ಬದುಕನ್ನು ಸವಾಲಾಗಿ ಸ್ವೀಕರಿಸಿದವನಲ್ಲ. ಅದಕ್ಕೆದುರಾಗಿ ಸಡ್ಡು ಹೊಡೆದು ನಿಲ್ಲದೆ ಬಂದದ್ದನ್ನು ಬಂದಂತೆ ಒಪ್ಪಿಕೊಳ್ಳುತ್ತಾ ಬಂದವನು. ಅದಕ್ಕೇ ಇರಬೇಕು ವಯಸ್ಸೂ ಕೂಡ ಅವನ ಮೇಲೆ ಅಷ್ಟಾಗಿ ಪ್ರಭಾವ ಬೀರಿದಂತಿಲ್ಲ. ಅಣ್ಣನದು ತುಂಬಾ ಸಾತ್ವಿಕ ಸ್ವಭಾವ. ಅಪ್ಪನ ನಿರಂಕುಶಮತಿಯಿಂದಾಗಿ ಮುರುಟಿಕೊಂಡ ವ್ಯಕ್ತಿತ್ವ ಅವನದು.

ತಮ್ಮನನ್ನು ಕಂಡ ರಾಘವ ತುಂಬಾ ಸಂತೋಷಪಟ್ಟ. ಅವನನ್ನು ಆಲಂಗಿಸಿಕೊಂಡು ತನ್ನ ಖುಷಿ ವ್ಯಕ್ತಪಡಿಸಿದ. ತನ್ನ ಬದುಕು ಎಲ್ಲವನ್ನೂ ಪೂರ್ತಿಯಾಗಿ ಕಳೆದುಕೊಂಡು ಬರಿದಾಗಿಲ್ಲ, ಇನ್ನೂ ಅಲ್ಪ ಸ್ವಲ್ಪ ಮೆರುಗನ್ನು ಉಳಿಸಿಕೊಂಡಿದೆ ಅನ್ನಿಸಿತು ಅವನ ಅಕ್ಕರೆಯನ್ನು ನೋಡಿ ರಾಜೀವನಿಗೆ.

ಅಣ್ಣ, ಅತ್ತಿಗೆ, ಮಕ್ಕಳೊಡನೆ ನಗುತ್ತಾ, ಮಾತಾಡುತ್ತಾ ಬಹುದಿನಗಳ ನಂತರ ಹೊಟ್ಟೆ ತುಂಬಾ ಊಟ ಮಾಡಿದ. ಸಂಜೆ ಮಕ್ಕಳು ವತ್ಸಲಾ, ಮೋಹನರನ್ನು ಕರೆದುಕೊಂಡು ಹೆಓಔಟ್ಹ;ಗಿ ಅವರು ಕೇಳಿದ್ದು, ತನಗೆ ತೋಚಿದ್ದನ್ನೆಲ್ಲಾ ಕೊಡಿಸಿ ಅವರ ನಗುವನ್ನು ಕಂಡು ಆನಂದಿಸಿದ. ಅಣ್ಣ, ಅತ್ತಿಗೆಯರ ವಾತ್ಸಲ್ಯದ ಪರಿಧಿಯಿಂದ ಹೊಸ ಚೈತನ್ಯವನ್ನು ಬಗೆದು ತನ್ನ ಬಾಳಿಗಷ್ಟು ಹನಿಸಿಕೊಂಡ. ರಾಜೀವನಿಗೆ ತನ್ನ ಖಾಸಗೀ ಬದುಕಿನ ಬಗ್ಗೆ ಹೇಳಿಕೊಳ್ಳುವುದು ಅಷ್ಟಾಗಿ ಇಷ್ಟವಿಲ್ಲದ್ದು ಕಂಡು ರಾಘವನಾಗಲೀ, ಮೀರಾಳಾಗಾಗಲೀ ಅವನನ್ನು ಕೆದಕಲು ಹೋಗಲಿಲ್ಲ. ರಾಜೀವನಿಗೆ ಅವರ ನಿರಾಸಕ್ತಿ ಹಾಯೆನಿಸಿತು. ಮುಂದೆ ಎಂದಾದರೂ ತಿಳಿದರೆ ತಿಳಿಯಲಿ. ಈಗಂತೂ ಸತ್ತ ಭೂತವನ್ನು ಮೇಲೆತ್ತುವುದು ಬೇಡ ಎಂಬುದು ಅವನ ಅಭಿಮತವಾಗಿತ್ತು.

ರಾಜೀವ ರಾತ್ರಿಯ ಬಸ್ಸಿಗೆ ಬೊಂಬಾಯಿಗೆ ಹೊರಟು ನಿಂತ. ರಾಘವ, ಮೀರಾಗೆ ಇಷ್ಟು ಬೇಗ ಅವನನ್ನು ಕಳಿಸುವುದು ಸ್ವಲ್ಪವೂ ಇಷ್ಟವಿರಲಿಲ್ಲ.

“ಇಷ್ಟು ವರ್ಷಗಳ ನಂತರ ಬಂದಿದೀಯ. ಇನ್ನು ಒಂದೆರಡು ದಿನ ಇದ್ದು ಹೋಗು. ಮತ್ತೆ ಯಾವಾಗೋ ನೀನು ಬರುವುದು?” ಎಂಬು ತುಂಬಾ ಒತ್ತಾಯಿಸಿದರು. ರಾಜೀವ ಅವರ ಕೋರಿಕೆಯನ್ನು ಕೆಲಸದ ನೆಪ ಹೇಳಿ ನಯವಾಗಿಯೇ ನಿರಾಕರಿಸಿದ.

“ನಾನು ಧಿಡೀರನೆ ಬಂದಿದ್ದರಿಂದ ಹೋಗಲೇಬೇಕಾಗಿದೆ. ಸಮಯ ಸಿಕ್ಕಾಗಲೆಲ್ಲಾ ಬರುತ್ತಾ ಇರುತ್ತೇನೆ.” ಎಂದು ಅವರುಗಳ ಒಪ್ಪಿಗೆಯನ್ನು ಪಡೆದುಕೊಂಡ. ಆದರೆ ಮತ್ತೆ ಇಲ್ಲಿಗೆ ಬರುವ ಇರಾದೆಯೇನೂ ಅವನ ಮನಸ್ಸಿನಲ್ಲಿ ಇರಲಿಲ್ಲ. ಕಡೆಯ ಬಾರಿಗೆಂಬಂತೆ ತಂದೆಗೆ ನಮಸ್ಕರಿಸಿದ ರಾಜೀವ. ಅವರು ನಡುಗುತ್ತಿರುವ ಕೈಯೆತ್ತಿ ಅವನ ತಲೆಯನ್ನು ಮಮತೆಯಿಂದ ನೇವರಿಸಿದರು. ಮಾಡಿದ್ದ ಪಾಪಗಳಿಗೆ ಕ್ಷಮೆ ಪಡೆದುಕೊಂಡಂತಹ ನಿರಾಳವಾದ ಭಾವನೆ ಅವರ ಮುಖದ ಮೇಲೆ ನೆಲೆಸಿತ್ತು.

ಮಕ್ಕಳು “ಹೋಗಬೇಡ ಚಿಕ್ಕಪ್ಪಾ” ಎಂದು ಅಂಗಲಾಚುತ್ತಿದ್ದವು. ಅವರನ್ನು ಎತ್ತಿಕೊಂಡು ಅಪ್ಪಿ ಮುದ್ದಿಸಿದ. ಅಣ್ಣ, ಅತ್ತಿಗೆಯರ ಕಡೆಗೊಮ್ಮೆ ಕೈಬೀಸುತ್ತಾ ತನ್ನ ಹನಿಗೂಡುತ್ತಿರುವ ಕಣ್ಣುಗಳನ್ನು ಎಲ್ಲರಿಂದ ಮರೆಮಾಚುತ್ತಾ ತಾನು ಹುಟ್ಟಿ ಬೆಳೆದ ಮನೆಗೆ ಬೆನ್ನು ತಿರುಗಿಸಿ ಹೊರನಡೆದ ರಾಜೀವ.

36 Comments

  1. vishu vishu December 31, 2009

    Story is very good

  2. Sanjana Sanjana January 21, 2010

    Hart touching

  3. shivaprakash shivaprakash August 23, 2010

    Eventhough the story is classic, it has its own whirl which sucks the reader. This story is so common. But, i really don’t know why my eyes get wet as i go deep into the story. I have read this story first time in this kategalu column. How Rajeev unwillingly unwinds himself is difficult to trace. The transition is highly appreciable. That’s all. K Triveni Sreenivasa Rao has exhibited the skill of keeping the reader’s attention in excellent manner. We are all in this story. I believe, eyes get wet for male or female. Further, it is a relaxing concept for elders.

  4. Dhanu Dhanu November 4, 2010

    very nice story…

  5. Bhushan Bhushan August 25, 2011

    Very Nice heart touching story.
    Unknowingly, my eyes got wet..

  6. Manju Manju September 23, 2011

    what a heart touching story. hats up to writer.

  7. Ramchandra Ramchandra September 26, 2011

    It is Very good story.
    If someone is staying with his wife away from his family(Like Rajiv), sure he should return home right now !!!! (at least keep in touch)

    Because life is very short when we see behind nothing is left to correct it.

    Hope this story should read everyone.

  8. Dolphie Dolphie October 8, 2011

    Nice Story…………

  9. Nagond Nagond November 30, 2011

    very nice story:)

  10. Nagond Nagond November 30, 2011

    very nice story

  11. Neela Neela November 30, 2011

    Nice Story……

    ಜೀವನ ಬೇಕಾದಷ್ಟು ಪಾಠ ಕಲಿಸುವುದು ಸತ್ಯ….

    ಜೀವನದ ಪರಿಯೇ ವಿಚಿತ್ರ….

  12. Imran S Imran S January 18, 2012

    heart touching

  13. vinay vinay June 12, 2012

    Extremely excellent story, it contains a very high-quality meaning.
    If every one recognize each other there will no family which will break up in to pieces.
    All the readers pls take care of your family. feel affection for you Siblings
    Be happy

  14. sowmya sowmya August 9, 2012

    Very nice. Heart touching.., It is true story.

  15. yogish yogish August 22, 2012

    thumba chennagide alu barutte

  16. prasanna prasanna October 4, 2012

    good story

  17. asif asif May 26, 2013

    good and touching

  18. raveesh raveesh June 4, 2013

    heart touching story

  19. bhuvaneswari bhuvaneswari June 24, 2013

    heart touching story.

  20. suma suma June 24, 2013

    kathe hoduta idre mansige tumba bejaru aagute

  21. suma suma June 24, 2013

    kathe hoduta idre manasige tumba bejaru aagute nice story

  22. Praneeth Ramesh Praneeth Ramesh July 30, 2013

    Eruvidellava bittu eradudaredege tudivude jeevana……

  23. Ram Ram December 5, 2013

    ನೈಜತೆಗೆ ತುಂಬಾ, ತುಂಬಾ.. ಹತ್ತಿರವಾದ ಕಥೆ. ಕಥೆಗೆ ಒಳ್ಳೆಯ ಮುಕ್ತಾಯವನ್ನೇ ನೀಡಿದ್ದೀರಿ. ಕಥೆಯನ್ನು ಓದುತ್ತಾ ಹೋಗುವಾಗ ಬಹುಶಃ, ‘ರಾಜೀವ’ನು ಇನ್ನು ಮುಂದೆ ತನ್ನ ಊರಿಗೇ ಬಂದು ಅಣ್ಣ ಅತ್ತಿಗೆಯೊಂದಿಗೆ ತನ್ನ ಬದುಕು ಮುಂದುವರಿಸಬಹುದೇನೋ ಅಂದುಕೊಂಡೆ. ಆದರೆ ಹಾಗಾಗಲಿಲ್ಲ.. ಹಾಗಾಗುತ್ತಿದ್ದರೆ, ಅದು ನೈಜತೆಗೆ ದೂರವಾಗುತ್ತಿತ್ತು. ಲೇಖಕಿಯು ತುಂಬಾ ಚೆನ್ನಾಗಿ ಕಥೆಯನ್ನು ಹೆಣೆದಿದ್ದಾರೆ.

    ಈ ಕೆಳಗಿನ ಸಾಲುಗಳು ನನಗೆ ಬಹಳಷ್ಟು ಇಷ್ಟವಾದವು.

    “ತಂದೆಯ ಕೋಪ, ತಾಪಗಳಿಗೆ, ಸರ್ವಾದಿಕಾರೀ ಧೋರಣೆಯ ಉಗ್ರ ವೃಕ್ತಿತ್ವಕ್ಕೆ ರಾಜೀವ ಬೇಸತ್ತು ಹೋಗಿದ್ದ. ಪ್ರತಿಯೊಂದರಲ್ಲೂ ಕುಂದು ಹುಡುಕುತ್ತಿದ್ದರು. ಎಲ್ಲರನ್ನೂ ಆಕ್ಷೇಪಿಸುತ್ತಾ ಕ್ರೂರವಾಗಿ ನೋಯಿಸುವುದು ಅವರ ಸ್ವಭಾವ. ಅವರನ್ನು ಸಂತೋಷಪಡಿಸುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಮನೆಯಲ್ಲಿ ಪ್ರತಿಯೊಬ್ಬರೂ ತಮ್ಮ ಇಷ್ಟದಂತೆಯೇ ನಡೆಯಬೇಕೆಂಬುದು ಅವರ ಹಟ. ಯಾರಾದರೂ ಅವರ ಮಾತು ಮೀರಿ ತಮ್ಮ ಸ್ವಂತಿಕೆ ತೋರಲು ಯತ್ನಿಸಿದರೆ ಅವತ್ತಿಡೀ ದಿನ ಮನೆಯಲ್ಲಿ ಯಾರಿಗೂ ನೆಮ್ಮದಿಯಿಲ್ಲ. ಗುಡುಗು, ಸಿಡಿಲು, ರಂಪ, ರಾಧ್ಧಾಂತವಾಗಿಹೋಗುತ್ತಿತ್ತು. ಗಂಡ ಈ ಗುಣದಿಂದಾಗಿ ರಾಜೀವನ ತಾಯಿಗೆ ಮನೆಯೇ ನರಕಪ್ರಾಯವಾಗಿ ಹೋಗಿತ್ತು. ಆದರೆ ಅವರು ಎಂದು ಯಾರ ಮುಂದೆಯೂ ತಮ್ಮ ವೇದನೆಯನ್ನು ತೋರಗೊಡುತ್ತಿರಲಿಲ್ಲ.
    ಅಪ್ಪನ ಈ ಅದಿಕಾರಶಾಹೀ ಮನೋಭಾವದ ವಿರುದ್ಧ ಮೊದಲಬಾರಿಗೆ ಸಿಡಿದು ನಿಂತಿದ್ದ ರಾಜೀವ.”

    ಹಾಗೂ ಕೊನೆಯ ಈ ಸಾಲುಗಳು ಓದುವಾಗ ನನ್ನ ಕಣ್ಣುಗಳು ಕಣ್ಣೀರಿನಿಂದ ತುಂಬಿತ್ತು.

    ಮಕ್ಕಳು “ಹೋಗಬೇಡ ಚಿಕ್ಕಪ್ಪಾ” ಎಂದು ಅಂಗಲಾಚುತ್ತಿದ್ದವು. ಅವರನ್ನು ಎತ್ತಿಕೊಂಡು ಅಪ್ಪಿ ಮುದ್ದಿಸಿದ. ಅಣ್ಣ, ಅತ್ತಿಗೆಯರ ಕಡೆಗೊಮ್ಮೆ ಕೈಬೀಸುತ್ತಾ ತನ್ನ ಹನಿಗೂಡುತ್ತಿರುವ ಕಣ್ಣುಗಳನ್ನು ಎಲ್ಲರಿಂದ ಮರೆಮಾಚುತ್ತಾ ತಾನು ಹುಟ್ಟಿ ಬೆಳೆದ ಮನೆಗೆ ಬೆನ್ನು ತಿರುಗಿಸಿ ಹೊರನಡೆದ ರಾಜೀವ.

  24. shreesha shreesha February 9, 2014

    Awesome story…. I just loved the way the author represented it

  25. guru@S.S.B@ guru@S.S.B@ March 2, 2014

    Very Very Very Very Very Good.this is touching in my Heart.

  26. Mohan Mohan April 30, 2014

    Kathe heLuva pari sogasagide. Amma saththaga bandiddhare channagirthiththu endhukoLLuva Rajiva, soloppikonda appanigagi maneyalle uLididdare channagirththithu…sahajathege maththashtu sanihavagirththiththu eee kathe. Kadege rajeeva maneyanna thoredhu hoguvudu sinimeeya anisuththe…

  27. subrahmanya shastri subrahmanya shastri August 8, 2014

    adbhutha!!!!!!!!!

  28. ಎಸ್. ಜಾಹ್ನವಿರಾವ್ ಎಸ್. ಜಾಹ್ನವಿರಾವ್ October 23, 2014

    ಕಥೆ ಸೊಗಸಾಗಿದೆ. ಕಥಾವಸ್ತು ನಮ್ಮ ನಿತ್ಯಜೀವನದಿಂದಲೇ ಆಯ್ದುಕೊಂಡಿದ್ದು ಸರಳವಾಗಿದೆ. ಶೈಲಿ ಚೆನ್ನಾಗಿದೆ. ಆದರೆ ಸ್ವಲ್ಪ ಅಲ್ಲಲ್ಲಿ ವ್ಯಾಕರಣ ದೋಷಗಳಿವೆ. ಬಹುಶಃ ಬೆರಳಚ್ಚಿನ ತೊಂದರೆಯೇನೋ! ಒಟ್ಟಾರೆ ಒಳ್ಳೆ ಕಥೆ.

  29. mantesh mantesh March 26, 2016

    really heart touching story sir

  30. Yallanagoud Biradar Yallanagoud Biradar March 13, 2018

    ತುಂಬಾ ಸೊಗಸಾದ ಕತೆ ಕತೆಯ ಬಗ್ಗೆ ಎರಡು ಮಾತುಗಳಿಲ್ಲ , ಕತೆಯನ್ನು ಓದುತ್ತ ಕಣ್ಣಂಚಲ್ಲಿ ನೀರು ಜಿನುಗಿತು
    ಮತ್ತೆ ರಾಜೀವನ ಮುಂದಿನ ನಡೆ ಏನು ಅವನ ಜೀವನ ಅಲ್ಲಿಗೆ ಕೊನೆ ಆಯೆತೆ ?

  31. Raveesh Raveesh May 2, 2018

    Don’t go behind beauty…. nice story and message I feel.

  32. Anand R Chougule Anand R Chougule February 16, 2019

    very nice story sir

  33. Anand Anand April 19, 2019

    ಸೋಗಸಾದ ನಿರೂಪಣೆ

  34. Prof KP. Prof KP. June 6, 2023

    I am really enjoyed after reading the Story.Thank you for Posting a moving Story.
    Thank you.
    Prof KP.

Leave a Reply

Your email address will not be published. Required fields are marked *