ಡಿಲೇವಿಷನ್
ನಾಗೇಶ ಹೆಗಡೆ
ದೈತ್ಯಾಕಾರದ ಸಿಲಿಕೇಟ್ ಪದರಗಳಲ್ಲಿ ತಲೆ ಸಿಲುಕಿಕೊಂಡು ಬೆಳಕಿನ ಪರಿವಹನವನ್ನು ವೀಕ್ಷಿಸುತ್ತಿದ್ದಾಗಲೇ ಡೆಸ್ಕಿನ ಮೇಲಿದ್ದ ಫೋನ್ ಕಿರುಚಲಾರಂಭಿಸಿತ್ತು. ಒಸರುತ್ತಿದ್ದ ಬೆವರೊರೆಸಿಕೊಳ್ಳುತ್ತ ಡಾಕ್ಟರ್ ಶೇಖರ್ ರಿಸೀವರಿಗೆ ಕಿವಿಕೊಟ್ಟು ಹಲೋ ಎಂದ.
“ಶೇಖರ್, ದಿಸ್ ಈಸ್ ಸುಮಿ ಹಿಯರ್, ಈ ದಿನ ಸಕ್ಸೇನಾ ದಂಪತಿಗಳ ಮ್ಯಾರೇಜ್ ಆನಿವರ್ಸರಿ ನೆನಪಿದ್ಯಾ? ಡಿನ್ನರಿಗೆ ಇನ್‌ವೈಟ್ ಮಾಡಿದ್ದಾರೆ. ಲ್ಯಾಬ್‌ನಿಂದ ಜಲ್ದೀ ಬರ್ತೀರಾ?” ಶೇಖರ್ ತಾನು ನಿರ್ಮಿಸಿಟ್ಟ ಟೆಟ್ರಾಹೆಡ್ರನ್ ಮಾದರಿಯತ್ತ ನೋಡಿದ. ಇನ್ನೆರಡು ತಾಸು ಕಾಯ್ದರೆ ಮೂರು ವರುಷಗಳ ಸಂಶೋಧನೆಯ ಶ್ರಮದ ಫಲ ಪ್ರತ್ಯಕ್ಷ. ಇಂಥ ಕ್ಲೈಮ್ಯಾಕ್ಸಿನಲ್ಲಿ ಗೆಳೆಯನ ಮನೆ ಪಾರ್ಟಿಗೆ ಹೋಗಲೆ? ಅಥವಾ ಸಿಲಿಕೇಟ್ ಪದರಗಳಿಂದ ಈ ಕಡೆ ಹಾಯ್ದು ಬರುವ ಪ್ರಪ್ರಥಮ ಬೆಳಕಿನ ಕಿರಣಗಳಿಗಾಗಿ ಕಾಯುತ್ತ ಕೂಡ್ರಲೆ? “ಹೇಯ್ ಸುಮೀ, ಲಿಸನ್. ಮೊದಲೇ ಯಾಕೆ ಹೇಳ್ಲಿಲ್ಲ ನೀನು? ಆಮ್ ಟೂ ಬಿಸೀ ಹಿಯರ್ ಡಿಯರ್ ಪ್ಲೀಸ್. ನೋ… ಸ್ಯಾರಿ ಸುಮೀ ಇಂದು ಸಂಜೆ ಏಳರ ಮೊದಲು ಇಲ್ಲಿಂದ ಹೊರಬೀಳುವ ಹಾಗಿಲ್ಲ ಸುಮೀ. ಲಿಸನ್!….”
ಸುಮಿ ಕೇಳುವ ಸ್ಥಿತಿಯಲ್ಲಿರಲಿಲ್ಲವೇನೋ. ಫೋನ್ ಕೆಳಗಿಟ್ಟ ಸದ್ದು. ಕೋಪದಿಂದ ಕೆಂಪಾಗಿರಬಹುದಾದ ಸುಮಿಯ ಮುದ್ದುಮುಖ ಶೇಖರನ ನೆನಪಿಗೆ ಬಂತು. ಪೂರ್ ಸುಮಿ. ಬೆಳಗಿನಿಂದ ಒಂಟಿಯಾಗಿದ್ದು ಬೇಸರ ಬಂದಿರಬಹುದು.
ಡೆಸ್ಕಿನ ಹಿಂದೆ ಸರಿದು ತಿರುಗುಕುರ್ಚಿಯ ಮೇಲೆ ಕುಳಿತು ಪೈಪ್ ಹಚ್ಚಿ ಕಿಟಕಿಯತ್ತ ಹೊಗೆಯುಗಳಿದ ಶೇಖರ್. ಸಂಜೆಗೆಂಪಿನ ಮೋಡಗಳ ಮರೆಯಲ್ಲಿ ಸೂರ್ಯ ಮುಳುಗೇಳುತ್ತಿದ್ದ. ನಾಲ್ಕು ವರುಷಗಳ ಹಿಂದಿನ ಇಂಥದೇ ಸಂಜೆಯೊಂದರ ನೆನಪು. ಅಂದೂ ತನ್ನ ಸ್ಟಡಿರೂಮಿನ ಕಿಟಕಿಯ ಗಾಜಿನ ಮೂಲಕ ಸೂರ್ಯ ಹೊಂಗಿರಣವನ್ನು ಹೊರಚೆಲುತ್ತಿದ್ದ. ಇನ್ನರ್ಧ ತಾಸಿನಲ್ಲಿ ಸೂರ್ಯ ದಿಗಂತಕ್ಕಿಳಿಯುತ್ತಾನೆ. ಸಂಜೆ ಕವಿಯುತ್ತದೆ. ಕತ್ತಲಾವರಿಸುತ್ತದೆ. ಸೂರ್ಯನೇಕೆ ಅಲ್ಲೇ ಬಾನಂಚಿಗೆ ನಿಲ್ಲಬಾರದು? ಭೂಮಿ ಸುತ್ತುವುದನ್ನು ಯಾರೂ ನಿಲ್ಲಿಸಲಾರರೇಕೆ? ಭೂಮಿ ತಿರುಗುವುದನ್ನು, ಸೂರ್ಯ ಮುಳುಗುವುದನ್ನು ನಿಲ್ಲಿಸಲಾಗದಿದ್ದರೂ ಸೂರ್ಯಕಿರಣವನ್ನಾದರೂ ತಿರುಗಿಸಬಹುದು.
ಭಾವಸಮಾಧಿಯ ತಳದಿಂದ ಪುಟಿದೆದ್ದ ಆ ವಿಚಾರ ದಿನಗಳೆದು ಬೆಳಾಗಾಗುವುದರೊಳಗೆ ಬೆಳೆದು ಹೆಮ್ಮರವಾದಂತೆ ಶೇಖರ ಕಾರ್ಯೋನ್ಮುಖನಾಗಿದ್ದ. ದಿಲ್ಲಿಯ ರಾಷ್ಟ್ರೀಯ ಭೌತವಿಜ್ಞಾನ ಪ್ರಯೋಗಾಲಯದಲ್ಲಿ ಅತಿನೇರಳೆ ಕಿರಣಗಳ ಮೇಲೆ ಪ್ರಾರಂಭಿಸಿದ್ದ ಸಂಶೋಧನೆಯನ್ನು ಬದಿಗೊತ್ತಿ, ಡೈರೆಕ್ಟರರ ಮನವೊಲಿಸಿ ಅಣುವಿನ್ಯಾಸಗಳ ಮೇಲೆ ಬೆಳಕಿನ ಪ್ರಭಾವವನ್ನು ಅಭ್ಯಸಿಸತೊಡಗಿದ್ದ. ಪ್ರತಿಭೆ ಜ್ಞಾನಪಾನದಲ್ಲಿ ತನ್ಮಯವಾಯಿತು. ವಿಜ್ಞಾನ ಗ್ರಂಥಾಲಯಗಳಲಿದ್ದ ಪುಸ್ತಕಗಳ ಪ್ರತಿಪೇಜಿನಲ್ಲಿ ಶೇಖರನ ಕಣ್ಣು-ಮನ, ಗಾಜಿನ ಅಣುವಿನ್ಯಾಸದಿಂದ ಪ್ರಾರಂಭಿಸಿ, ಐನ್‌ಸ್ಟೈನನ ಬೆಳಕಿನ ವೇಗೋತ್ಕರ್ಷದ ಮೇಲಿನ ಸಿದ್ಧಾಂತವರೆಗೆ ಎಲ್ಲ ಕರತಲಾಮಲಕ. ಯಾವ ಸಿದ್ಧಾಂತವನ್ನು ಬಗೆದು ನೋಡಿದರೂ ಬೆಳಕಿನ ವೇಗವನ್ನು ತಗ್ಗಿಸುವುದು ಸಾಧ್ಯವಿಲ್ಲ. ಹಾಗಾದರೆ ಬೆಳಕು ಕ್ರಮಿಸುವ ಹಾದಿಯನ್ನು ಹೆಚ್ಚಿಸುವುದು ಸಾಧ್ಯವೆ? ಬೆಳಕು ಹಾಯ್ದು ಬರುವ ದಟ್ಟ ಮಾಧ್ಯಮ ಯಾವುದು? ಗಾಜು. ಆದರೆ ಗಾಜಿನ ಮೂಲಕ ಹಾಯ್ದು ಬರುವ ಬೆಳಕನ್ನು ಒಂದು ಸೆಕೆಂಡ್ ಕೂಡ ತಡೆಹಿಡಿಯುವುದಾದರೂ… ಅಬ್ಬ!… ಆ ಗಾಜನ್ನು ಒಂದು ಲಕ್ಷ ಎಂಬತ್ತಾರು ಸಾವಿರ ಮೈಲುದಪ್ಪ ಮಾಡಬೇಕಾದೀತು! ಹುಚ್ಚು ವಿಚಾರ.
ಗಾಜಿನಲ್ಲಿರುವ ಅಣುಪದರಗಳ ರಚನೆಯನ್ನು ಅಭ್ಯಸಿಸಬೇಕು. ಅವುಗಳ ಮೂಲಕ ತರಂಗರೂಪದಲ್ಲಿ ಹಾಯ್ದುಬರುವ ಬೆಳಕನ್ನು ಅಲ್ಲೇ ಸುತ್ತಿ ಸುತ್ತಾಡಿಸಬೇಕು. ಗಾಜಿನಲ್ಲಿದ್ದ ಅಣುಗಳ, ಪರಮಾಣುಗಳ ವಿನ್ಯಾಸವನ್ನು ಜಟಿಲಗೊಳಿಸಬೇಕು. ಬೆಳಕಿನ ಕಿರಣಗಳು ಗಾಜಿನ ಒಂದು ಬದಿಯಿಂದ ನುಸುಳಿ ಇನ್ನೊಂದು ಬದಿಯಿಂದ ಹೊರಬೀಳುವುದರೊಳಗೆ ಒಳಗೊಳಗೇ ಕೋಟ್ಯಂತರ ಬಾರಿ ಸುತ್ತುಸುತ್ತಾಡುವಂತೆ ಮಾಡಬೇಕು. ಒಂದು ನಿಗದಿಯಾದ ಅವಧಿಯ ನಂತರ ಗಾಜಿನ ಆ ಕಡೆಯ ಬೆಳಕು ಈ ಕಡೆ; ಅಂಥದೊಂದು ಗಾಜು ನಿರ್ಮಾಣವಾದರೆ ಎಂಥ ಕ್ರಾಂತಿಕಾರಿ ಘಟನೆ! ಆ ಗಾಜಿನ ಕಿಟಕಿಯೊಂದು ತನ್ನ ಡ್ರಾಯಿಂಗ್ ರೂಮಿನಲ್ಲಿ ಇದ್ದರೆ ಅದೆಷ್ಟು ಮೋಜು! ಮುಂಜಾನೆಯ ಸೂರ್ಯನ ಮೊಟ್ಟಮೊದಲ ತಂಗಿರಣಗಳು ಕಿಟಕಿಯಿಂದ ಹಾದು ರೂಮಿನೊಳಕ್ಕೆ ಬರುವಷ್ಟರಲ್ಲಿ ಸಂಜೆಗತ್ತಲಾಗಿರುತ್ತದೆ. ಜತೆಜತೆಗೆ ಅದೇ ತಾನೇ ಇಬ್ಬನಿಯ ಸ್ನಾನ ಮುಗಿಸಿ ಬಿಸಿಲಿಗೆ ಮೈಗೊಟ್ಟು ಅರಳುತ್ತಿರುವ ಗುಲಾಬಿಯ, ಗೂಡಿನಿಂದ ಆಹಾರಕ್ಕೆಂದು ಹೊರಹೊರಡುತ್ತಿರುವ ಗುಬ್ಬಚ್ಚಿಯ, ಸುಂದರ ವರ್ಣರಂಜಿತ ಚಲನಚಿತ್ರ, ಮುಂದೆ ರಾತ್ರಿಯಿಡೀ ಮೇಲೇರುತ್ತಿರುವ ಸೂರ್ಯನ ಬೆಳ್ಳಂಬೆಳಕು. ರಾತ್ರಿಯೆಲ್ಲ ಆ ರೂಮಿನಲ್ಲಿ ಹಗಲೇ ಹಗಲು!
ಮೂರು ವರುಷಗಳ ಹಿಂದಿನ ಆ ಕನಸನ್ನು ನನಸು ದಾರಿಯಲ್ಲಿ ಸಾಗಿಸಿ, ತರಲು ಶೇಖರ ಹಗಲುರಾತ್ರಿ ಶ್ರಮಿಸಿದ್ದ. ಸಾಮಾನ್ಯ ಗಾಜಿನಲ್ಲಿ ಚಲ್ಲಾಪಿಲ್ಲಿಯಾಗಿ ಹರಡಿಕೊಂಡಿದ್ದ ಸಿಲಿಕಾನ್ ಕಣಗಳನ್ನೂ, ಅಷ್ಟೇ ಅಸ್ತವ್ಯಸ್ತವಾಗಿ ಅವಕ್ಕೆ ಅಂಟಿಕೊಂಡಿದ್ದ ಆಕ್ಸಿಜನ್ ಕಣಗಳನ್ನೂ ಕ್ಷಕಿರಣಗಳ ನೆರಳಿನಲ್ಲಿ ಪರೀಕ್ಷಿಸಿ, ಸಿಗುಟಾಗಿದ್ದ ಲ್ಯಾಟಿಸ್ ತಂತುಗಳನ್ನು ನೇರವಾಗಿ ಜೋಡಿಸಿ ಸ್ಫಟಿಕದ ವಿನ್ಯಾಸ ಕೊಡುವುದು. ಮತ್ತೆ ಆ ತಂತುಗಳು ಸುರುಳಿ ಸುರುಳಿಯಾಗುವಂತೆ ಮಾಡಲು ರಾಸಾಯನಿಕ ಪ್ರಯೋಗ ನಡೆಸುವುದು. ಸುರುಳಿಯಾದ ಲ್ಯಾಟಿಸ್ ತಂತುಗಳ ಮೂಲಕ ವಿಭಿನ್ನ ತರಂಗಾತರದ ಬೆಳಕಿನ ಕಿರಣಗಳನ್ನು ಹಾಯಿಸುವುದು. ಮತ್ತವನ್ನು ಇಲೆಕ್ಟ್ರಾನ್ ಮೈಕ್ರೋಪ್ರೋಬಿನಿಂದ ವೀಕ್ಷಿಸಿ ಪುನಃ ಗಾಜಿನ ಸ್ಫಟಿಕಗಳನ್ನು ದ್ರವೀಕರಿಸಿ ಅಣುಗಳನ್ನು ಚಲ್ಲಾಪಿಲ್ಲಿ ಮಾಡುವುದು.
“ಹಾಯ್ ಶೇಖರ್!”… ಅನಿರೀಕ್ಷಿತವಾಗಿ ಬಂದ ಗೆಳೆಯನ ಪರಿಚಿತ ಧ್ವನಿಗೆ ಶೇಖರ್ ಬೆಚ್ಚಿದ. “ಹಲೋ ಅಶೋಕ್, ಬಾ, ಬಾ. ಯಾಕೋ ಭೂಪಾ ಸಂಜೆ ಆರೂಕಾಲಾದರೂ ಮನೆಗೆ ಹೋಗಬಾರದೇನೋ? ರಾತ್ರಿಕಾಲದಲ್ಲಿ ಇಲ್ಲಿ ಓಡಾಡುವ ಭೂತಗಳ ಭೌತಿಕ ಗುಣಧರ್ಮಗಳನ್ನು ಅಭ್ಯಸಿಸುವ ವಿಚಾರವೋ ಹೇಗೆ?”
“ಯಾಕಪ್ಪಾ ಹಂಗಿಸ್ತಿಯ? ಭೂತಗಳ ಸ್ಟಡಿಮಾಡೋದಕ್ಕೆ ರಾತ್ರಿಯವರೆಗೆ ಕಾಯಬೇಕನೋ; ನೀನಿಲ್ಲವಾ ಎದುರಿಗೆ? ಮನೆಗೆ ಹೋಗೋದು ಯಾವ ಸುಖದ ಸುಪ್ಪತ್ತಿಗೆ ಏರೋಕಪ್ಪಾ? ಯಾರಾದರೂ ಊಟ ನಿದ್ದೆ ಬಿಟ್ಟು ನನ್ನ ದಾರೀ ನೋಡೋರಿದಾರಾ ಅಲ್ಲಿ? ಅದಿರ್ಲಿ, ನಿನಗೇನಾಗಿದೆ ಇಲ್ಲಿ ಓವರ್‌ಟೈಮ್ ಕೂಡ್ರೋಕೆ? ಅಲ್ಲಿ ನಿನ್ನ ಚಂದೊಳ್ಳಿ ಪತ್ನಿ ನಿನಗಾಗಿ ದಾರಿನೋಡುತ್ತ ಬೇಸತ್ತಿರುವಾಗ ನೀನಲ್ಲಿ ಪೈಪ್‌ನಲ್ಲಿ ಹೊಗೆ ಕಾರಿಸುತ್ತ ಕೂತಿರುತ್ತೀಯ. ನಾ ಯಾರಿಗಾಗಿ ಹೋಗಲಿ ಹೇಳು?”
“ನೀನು ಹೇಳಿದ್ದು ಸರಿ ಅಶೋಕ್. ಯಾಕೆ ಬೇಗೊಂದು ಹುಡುಗಿ ಹಿಡಿದು ಲಗ್ನ ಮಾಡಿಕೊಂಡುಬಿಡು ಮತ್ತೆ? ಬೈ ದ ವೇ, ಈ ದಿನ ಸಕ್ಸೇನಾ ದಂಪತಿಗಳ ಮ್ಯಾರೇಜ್‌ಆನಿವರ್ಸರಿ ಗೊತ್ತಾ? ಸುಮಿ ಹೋಗಬೇಕೂಂತ ನನ್ನನ್ನು ಒತ್ತಾಯಿಸ್ತಿದ್ಲು. ನೀನು ಯಾಕೆ ಅವಳ ಜೊತೆ ಹೋಗಬಾರದು? ಐ ಆಮ್ ಟೂ ಬಿಸೀ ಹಿಯರ್ ಡಿಯರ್ ದಿಸ್ ಈವನಿಂಗ್. ನನಗೊಂದು ದೊಡ್ಡ ತಲೆ ಭಾರ ಇಳಿಸಿದ ಹಾಗಾಗುತ್ತೆ ದೋಸ್ತ್”
ಟೇಬಲ್ ಮೇಲಿದ್ದ ಲೈಟರ್ ಹಚ್ಚುತ್ತ ಆರಿಸುತ್ತ ಅಶೋಕ್ ಯೋಚಿಸಿದ. ಪಾರ್ಟಿಗೆ ಹೋಗಲು ನನಗೂ ನಿಮಂತ್ರಣವೇನೂ ಇತ್ತು. ಮೇಲಾಗಿ ಮಿಸೆಸ್ ಶೇಖರ್ ಜತೆ ತಿರುಗಾಡುವುದೆಂದರೆ ಯಾರಿಗೆ ಬೇಡ? ಆದರೂ,
“ಬಿಡೋ ಭೂಪಾ. ನಿನ್ನ ಪತ್ನಿ ನಿನಗೊಂದು ತಲೆ ಭಾರಾನಾ? ಯಾಕೆ ಹೇಳ್ತಿಯೋ ಕತೆನಾ. ಅಂಥ ಪ್ಯಾರೀ ಪ್ಯಾರಿ ಚಂದನದ ಬೊಂಬೆಗೆ ಬಿಸಿಲು ಕಿರಣ ಕೂಡ ತಾಗದ ಹಾಗೆ ಮನೆಯೊಳಗೇ ಇಟ್ಟು ಪೂಜೆ ಮಾಡ್ತೀಯಲ್ಲ, ಈಗೇನು ನಖರೆ ಮಾಡೋಕಾ `ಬಿಸಿ ಬಿಸೀ’ ಅಂತಿರೋದು?”
“ನಾನ್‌ಸೆನ್ಸ್. ನಾನೆಲ್ಲಿ ಅವಳ್ನ ಮನೇಲಿಟ್ಟು ಪೂಜೆ ಮಾಡ್ತೀನಿ ಹೇಳು? ನೀನೀಗ ಸಕ್ಸೇನಾ ಮನೆಗೆ ಹೋಗುವವನೋ ಅಥವಾ ಅನವಶ್ಯಕ ಮಾತಿಗೆ ಮಾತು ಬೆಳೆಸುತ್ತಾ ಇಬ್ಬರ ಸಂಜೆ ಹಾಳುಮಾಡುವವನೋ?”
“ಓಕೇ ನಾನು ಹೊರಟೆ. ಅಂದ ಹಾಗೆ ಎಂದಿಗೆ ಮುಗಿಸ್ತೀಯ ನಿನ್ನ ಈ ಕ್ರಿಸ್ಟಲ್ ದೀಕ್ಷೆಯನ್ನ? ನೋಡು ಈ ವರ್ಷದ ಛಾನ್ಸಂತೂ ಮುಗೀತಲ್ಲ. ಮುಂದಿನ ವರ್ಷಕ್ಕಾದರೂ ಡಾಕ್ಟರ್ ಶೇಖರ್ ನೊಬೆಲ್ ಪ್ರಶಸ್ತಿ ವಿಜೇತರಾಗುವ ಲಕ್ಷಣವಿದೆಯೋ ಹೇಗೆ?”
ಫರ್ನೇಸಿನ ಕಂಟ್ರೋಲ್ ಪ್ಯಾನೆಲ್ಲಿನಲ್ಲಿ ಕೆಂಪು ದೀಪ ಎರಡು ಸಾರಿ ಮಿಟುಕಾಡಿಸಿತು. ಶೇಖರ್ ಕುರ್ಚಿಯಿಂದೆದ್ದು ಕೂಲರ್ ಕಡೆ ನೋಡಔಟ್ಹ;ತ್ತಾ
“ಮುಂದಿನ ವರ್ಷಕ್ಕೇನಾ ಸಿಗೋದು ನೊಬೆಲ್ ಪೆಸ್? ನಿನ್ನಂಥ ಕೋ ಆಪರೇಟಿವ್ ಫ್ರೆಂಡ್ ಇದ್ದರೆ ಇನ್ನೂ ಹದಿನೈದು ವರುಷ ಬೇಕಾದೀತು ನನ್ನ ಈ ಪ್ರಾಜೆಕ್ಟ್ ಮುಗಿಯಲು. ಈಗ ನನಗೆ ತೊಂದರೆ ಕೊಡಬೇಡ” ಎಂದು ಹೇv;ಳಿ ಅಶೋಕನ ಮರುಮಾತಿಗೂ ಕಾಯದೆ ಫರ್ನೇಸ್ ಚೇಂಬರಿಗೆ ಹೊಕ್ಕ. ಒಳಗೆ ಕೆಂಪು ರಸವಾಗಿ ಕುದಿಯುತ್ತಿದ್ದ ಗಾಜಿನ ದ್ರವ ನಿಧಾನವಾಗಿ ತಂಪಾಗುತ್ತಿರುವುದನ್ನು ಥರ್ಮೋಗ್ರಾಫ್ ತೋರಿಸುತ್ತಿತ್ತು. ಇನ್ನು ಒಂದೂವರೆ ತಾಸು ಕಳೆದರೆ `ಡಿಲೇವಿಷನ್’ ಗ್ಲಾಸು ಸಿದ್ಧ. ನಾನೂರೈವತ್ತು ಚದರ ಸೆಂಟಿಮೀಟರ್ ಕ್ಷೇತ್ರದ, ಎರಡು ಸೆಂಟಿಮೀಟರ್ ದಪ್ಪದ ಈ ಗಾಜಿನ ಹಾಳೆ ಜಗತ್ತಿನ ಅತಿ ವಿಸ್ಮಯಕಾರಿ ವಸ್ತುವಾಗಲು ಇನ್ನು ಕೇವಲ ಒಂದೂವರೆ ಗಂಟೆ. ಶೇಖರನ ಉದ್ವೇಗ ಉಲ್ಬಣಿಸುತ್ತಿತ್ತು. ಆಟೋ ಕೂಲರ್‌ನ ರೆಗ್ಯುಲೇಟರನ್ನು ತಿರುಗಿಸಿ ಪ್ರೆಶರ್ ಇಂಡಿಕೇಟರನ್ನು ಆರಿಸಿ ಮತ್ತೆ ವಾಚು ನೋಡಿಕೊಂಡ. ಗಾಜು ಪೂರ್ತಿ ತಂಪಾಗಲು ಇನ್ನೂ ಎಪ್ಪತ್ತೈದು ನಿಮಿಷಗಳು ಬೇಕು, ಆದರಿಂದ ಹೊರಸೂಸುವ… ಅರೆ! ಮರೆತೇ ಹೋಗಿತ್ತಲ್ಲ ಗ್ಲಾಸಿನ ಆ ಮಗ್ಗುಲಿಂದ ಬೆಳಕು ಹಾಯ್ದು ಬರಲು ಹತ್ತು ತಾಸುಗಳ ಅವಧಿ ಬೇಕಲ್ಲ! ಅರ್ಥಾತ್ ಗಾಜಿನ ಪವಾಡ ಪರೀಕ್ಷಿಸಲು ಇನ್ನೂ ಹನ್ನೊಂದು ತಾಸು ತಾನು ಕಾಯಬೇಕು. ಈಗ ಗಂಟೆ ಏಳು. ರಾತ್ರಿಯಿಡೀ ಇದರೆದುರು ಕುಳಿತು ಕಾಯುವುದು ಹುಚ್ಚುತನವೇ ಸರಿ.
ಥರ್ಮೋಗ್ರಾಫ್ ಗಾಜಿನ ಉಷ್ಣತೆಯನ್ನು ನಲ್ವತ್ತೆಂಟು ಡಿಗ್ರಿಗೆ ಇಳಿಸುತ್ತಲೇ ಶೇಖರ್ ಕೂಲರಿನ ಸ್ವಿಚ್ ತೆಗೆದ. ಹಸಿವಿನಿಂದ ಹೊಟ್ಟೆ ತಳಮಳ. ಹೊಟ್ಟೆಯ ನೆನಪಾದಂತೆ ಮನೆಯ ನೆನಪು. ಜತೆಗೆ ಸುಮಿಯ ನೆನಪು. ಪೂರ್ ಸುಮಿ. ಲಗ್ನವಾಗಿ ವರ್ಷವೆರಡಾಗುತ್ತ ಬಂದರೂ ಅವಳಿಗೆ ತನ್ನ ಜತೆ ರೊಮಾನ್ಸ್ ಮಾಡಲು, ಲಲ್ಲೆಹೊಡೆಯಲು ಒಂದು ದಿನವೂ ಅವಕಾಶವಾಗಿಲ್ಲ. ದಿನವೂ ಪ್ರಯೋಗಶಾಲೆಯಿಂದ ಬಂದವನೇ ಶೇಖರ್ ಆ ದಿನದ ಸಂಶೋಧನೆಯ ಪ್ರಗತಿಯನ್ನೆಲ್ಲ ರಿಪೋರ್ಟ್ ರೂಪದಲ್ಲಿ ಬರೆದಿಟ್ಟುಕೊಳ್ಳುವುದು ವಾಡಿಕೆ. ಮನೆಮುಟ್ಟಿ ಸಂಜೆಯ ಕಾಫಿ ಹೀರುತ್ತಲೇ ಸ್ಟಡಿ ರೂಮಿನ ಡೆಸ್ಕ್ ಸೇರುವುದು. ದಿನವಿಡೀ ಒಬ್ಬಂಟಿಯಿದ್ದು ತನಗಾಗಿ ಕಾದು ಬೇಸತ್ತ ಸುಮಿ, `ಶೇಖರ್, ಚಲೋ ವಾಕ್ ಹೋಗೋಣ’ ಎಂದು ಕಾಡುವುದೂ ವಾಡಿಕೆ. ಅಲ್ಲಿಗೇ ಶೇಖರನ ಆಂಗ್‌ಸ್ಟ್ರಮ್ ಗುಣಾಕಾರಕ್ಕೆ ಗರ್ಭಪಾತ. ಇಂಥ ವೇಳೆಯಲ್ಲೆಲ್ಲ ತಾನು ಸಹನೆಗೆಡದಿರುವುದೇ ದೊಡ್ಡ ಗುಣ.
“ಸ್ಸಾರಿ ಬೇಬಿ, ನಿಂಗೊತ್ತಿಲ್ವೇ, ಇನ್ನು ನಾಲ್ಕೇ ತಿಂಗಳು ಆಮೇಲೆ ನನ್ನ ವೇಳೆಯೆಲ್ಲ ನಿನ್ನದೇ. ನಂತರ ನೋಡು, ಮೂರು ಹೊತ್ತು ಮೂರು ಕಾಲ ನಿನ್ನ ನೆರಳು. ಮಾಯಾಪುರಿಯಲ್ಲಿ ವಾಕ್. ಕರೋಲ್ ಬಾಗ್‌ನಲ್ಲಿ ಶಾಪಿಂಗ್. ಓಡಿಯಾನ್‌ದಲ್ಲಿ ಮೂವಿ…”
“ಸಾಕು ಬಿಡಿ, ನಿಮ್ಮ ಪ್ರಾಮಿಸ್ ಕೇಳು ಕೇಳುತ್ತಲೇ ನಾನು ಮುದುಕಿಯಾಗುತ್ತೇನೇನೋ.”
“ದಟ್ ಈಸ್ ಗುಡ್! ಅಷ್ಟರಲ್ಲಿ ಮಕ್ಕಳು, ಮರಿ ಮಕ್ಕಳು, ಅಳಿಯ, ಸೊಸೆ ಬೇಕಾದಷ್ಟು ಆಗಿರುತ್ತವಲ್ಲ. ಕಾಲಹರಣದ ಸಮಸ್ಯೆಯೇ ಮಾಯ.”
“ಹೌ ಸಿಲ್ಲೀ ಯೂ ಆರ್ ಶೇಖರ್. ನೀವು, ನಿಮ್ಮ ಸ್ಟಡಿ, ನಿಮ್ಮ ಸಂಶೋಧನೆ ಹೀಗೆ ಸಾಗುತ್ತಿದ್ದರೆ ಮಕ್ಕಳೂ ಮೊಮ್ಮಕ್ಕಳೂ ಆಕಾಶದಿಂದ ಇಳಿದು ಬರಬೇಕಷ್ಟೇ.”
“ಪ್ಲೀಸ್ ಸುಮೀ, ಇನ್ನು ಸ್ವಲ್ಪ ದಿನವಷ್ಟೇ. ಸಹಿಸ್ಕೋಬಾರದಾ? ಆಮೇಲೆ… ಹೇಳು, ನಿಂಗೆ ಟ್ವಿನ್ಸ್ ಬೇಕಾ, ಟ್ರಿಪ್ಲೆಟ್ಸ್ ಬೇಕಾ?”
ಹುಸಿಮುನಿಸಿದ ಸುಮಿ ನಿಜಕ್ಕೂ ರೇಗಿಕೊಂಡಾಗ ಶೇಖರ ಕುರ್ಚಿ ಬಿಟ್ಟೆದ್ದು ಬಂದು ಬಳಸಿ ದಂಡ ತೆತ್ತಮೇಲೇ ಪರಿಸ್ಥಿತಿ ಹತೋಟಿಗೆ ಬರುವುದು. ಸುಮಿಯ ಸಮಸ್ಯೆ ಇನ್ನು ದೂರಾದಂತೆ. ನಾಳೇ ಈ ಮ್ಯಾಜಿಕ್ ಗ್ಲಾಸಿನ ಸತ್ವಪರೀಕ್ಷೆಯೊಂದಾಗಲಿ…. ಅಂದಹಾಗೆ. ನಾಳೆ ಮುಂಜಾನೆ ಸುಮಿಗೆ ಸರ್‌ಪೆಸ್ ಕೊಡಬೇಕು. ತನ್ನ ನಾಲ್ಕು ವರ್ಷಗಳ ಸಂಶೋಧನೆಯ ಫಲ ಪ್ರಪ್ರಥಮವಾಗಿ ತನ್ನ ಪ್ರೀತಿಯ ಮಡದಿಯ ಮೂಲಕವೇ ಜಗತ್ತಿಗೆ ತಿಳಿಯಪಡಬೇಕು.
ನಾಳೆ ಮುಂಜಾನೆಯ ಸೂರ್ಯೋದಯದ ಸೊಬಗನ್ನು ತನ್ನ ಹೆಗಲುಗನಸಿನ ಚೊಚ್ಚಲ ನನಸನ್ನು- `ರೆಕಾರ್ಡ್’ ಮಾಡಿಕೊಳ್ಳಬೇಕು. ಸಾಯಂಕಾಲ ಪತ್ರಿಕಾ ಪ್ರತಿನಿಧಿಗಳು ಬಂದಾಗ ಅದೇ ತಾನೇ ಹೊರಸೂಸಲಾರಂಭಿಸಿದ ಸೂರ್ಯೋದಯದ ದರ್ಶನ ಮಾಡಿಸಿ ಜಗತ್ತನ್ನು ನಿಬ್ಬೆರಗುಗೊಳಿಸಬೇಕು. ತನ್ನ ಈ ಪ್ರೊಟೋಟೈಪ್ ಯಶಸ್ವಿಯಾದರೆ, ಮುಂದೆ ಇನ್ನೂ ಅನೇಕ ಬದಲಾವಣೆ ಮಾಡಬೇಕು. ಗಾಜಿನ ದಪ್ಪಳತೆನಯನ್ನು ಹೆಚ್ಚಿಸಿ, ಬೆಳಕಿನ ಕಿರಣಗಳನ್ನು ವಾರ, ತಿಂಗಳ ವರ್ಷಪರ್ಯಂತ ಸೆರೆಹಿಡಿದು ಹೊರಕಳಿಸಬೇಕು. ಇಂಥ `ಡಿಲೇವಿಷನ್’ ಗ್ಲಾಸುಗಳು ಮಾರುಕಟ್ಟೆಗೆ ಬಂದರೆ ಕೋಲಾಹಲವೇ ಆದೀತು. ಜನ ತಮಗೆ ಇಷ್ಟವಾದ `ಡಿಲೇ’ ಅವಧಿಯ ಗಾಜನ್ನು ಖರೀದಿಸಿ ತಮಗಿಷ್ಟವಾದ ದೃಶ್ಯವನ್ನು ಸೆರೆಹಿಡಿದಿಟ್ಟುಕೊಂಡು ಎಲ್ಲಿ ಬೇಕೆಂದರಲ್ಲಿ ನೋಡಬಹುದು. ಇಂಥದೊಂದು ಗ್ಲಾಸನ್ನು ಕಾಶ್ಮೀರಕ್ಕೋ ಸ್ವಿಜರ್ಲೆಂಡಿಗೋ ಕಳುಹಿಸಿ ಅಲ್ಲಿಯ ರಮಣೀಯ ನಿಸರ್ಗವನ್ನು ಸೆರೆಹಿಡಿದು ತಂದು ವರ್ಷಗಟ್ಟಲೇ ಮನೆಯಲ್ಲಿ ಫ್ರೇಮ್ ಹಾಕಿ ಇಡಬಹುದು. ಸಿನೆಮಾಕ್ಕೆ, ಕ್ರಿಕೆಟ್ ಟೆಸ್ಟಿಗೆ ಹೋಗುವವರೊಡನೆ ಒಂದು ಪುಟ್ಟ ಡಿಲೇವಿಷನ್ ಗ್ಲಾಸು ಕಳುಹಿಸಿ ಘಟನೆಗಳನ್ನೇ ಪ್ರತ್ಯಕ್ಷವಾಗಿ ಮನೆಗೆ ತರಿಸಿ ನೋಡಬಹುದು. ಬಸ್ಸು, ಕಾರುಗಳ ಕಿಟಕಿಗಳಿಗೆ ಇಂಥ ಗಾಜನ್ನು ಉಪಯೋಗಿಸಿ ದೇಶ, ಕಾಲವನ್ನೇ ಬದಲಿಸಿ ಪಯಣಿಸಬಹುದು. ಮನೆಯ ಒಂದೊಂದು ರೂಮಿಗೂ ಇಂಥ ಕಿಟಕಿಗಳನ್ನಿಟ್ಟು, ಒಂದರಲ್ಲಿ ಮಳೆಗಾಲದ, ಇನ್ನೊಂದರಲ್ಲಿ ಚಳಿಗಾಲದ ಪರಿಸರ ನಿರ್ಮಿಸಬಹುದು. ಅಷ್ಟೇಕೆ, ಪ್ರತಿದಿನ ಹಗಲು ಹೊತ್ತಿನಲ್ಲಿ ಡಿಲೇಗ್ಲಾಸನ್ನು ಸೂರ್ಯನಿಗೆ ಎದುರಾಗಿಟ್ಟು ಬಿಸಿಲನ್ನು ಗ್ರಹಿಸಿಕೊಂಡು ರಾತ್ರಿ ಕತ್ತಲನ್ನು ಹೊಡೆದೋಡಿಸಿ ವಿದ್ಯುದ್ದೀಪಗಳ ಇತಿಶ್ರೀ ಮಾಡಬಹುದು.
ಮತ್ರವೇ ಕನಸುಗಳು. ಈ ನಾಲ್ಕು ವರುಷಗಳಲ್ಲಿ ಅದೆಷ್ಟು ಸಾವಿರಬಾರಿ ಬಂದು ಹೋದವೋ ಇಂಥ ಯೋಚನೆಗಳು. ಶೇಖರ ಕೈಚೀಲ ಧರಿಸಿ ಕೂಲಿಂಗ್ ಚೇಂಬರಿನ ಕಡೆ ನಡೆದ. ಸಹಾಯಕ ವರ್ಮಾ ಹಾಗೂ ಗ್ಲಾಸ್‌ಬ್ಲೋವರ್ ಸರ್‌ದಾರ್‌ಜೀ ಆಗಲೇ ಮನೆಗೆ ಹೋಗಿಯಾಗಿತ್ತು. ಸ್ವಿಚ್ ಹಾಕಿ, ಚೇಂಬರಿನೊಳಗಿಂದ ತಂಪಾದ ಗಾಜನ್ನು ಮೆಲ್ಲಗೆ ಹೊರಗೆಳೆದ.
ಕೆಲ ಹೊತ್ತಿನ ಹಿಂದೆ ಕಾದು ನಿಗಿನಿಗಿ ಕೆಂಪು ರಸವಾಗಿದ್ದ ಸಿಲಿಕಾನ್ ಡಯಾಕ್ಲೈಡ್ ಈಗ ಕಪ್ಪಾಗಿ ಮಿರಿ ಮಿರಿ ಮಿಂಚುತ್ತಿತ್ತು. ಅದರ ಕಪ್ಪು ವರ್ಣ ಕಂಡೊಡನೆಯೇ ಶೇಖರನ ಮುಖ ಹರ್ಷದಿಂದ ಕೆಂಪೇರಿತೇನೋ. ಬೆಳಕು ಒಂದು ಕಡೆಯಿಂದ ಹಾಯ್ದು ಇನ್ನೊಂದು ಕಡೆಯಿಂದ ಹೊರಬೀಳುವವರೆಗೂ ಗಾಜು ಕಪ್ಪಾಗಿಯೇ ಇರಬೇಕಲ್ಲ. ಶೇಖರ ಭಾವಾವೇಶದಿಂದ ಮೆಲ್ಲಗೆ ಗಾಜಿನ ಮೈಸವರಿದ. ಫ್ಲಡ್ ಲೈಟಿನಲ್ಲಿ ಚೊಚ್ಚಲ ಮಗುವನ್ನು ತಾಯಿ ನೋಡುವಂತೆ. ಆ ಕಪ್ಪು ಚೌಕವನ್ನು ಅತ್ತಿತ್ತ ತಿರುಗಿಸಿ ಸೂಕ್ಷ್ಮವಾಗಿ ನೋಡಿದ. ಮತ್ತೆ ಏನೋ ಅರಿವಾದಂತಾಗಿ ಗಡಿಬಿಡಿಯಿಂದೆದ್ದು ಲೈಟಿನ ಸ್ವಿಚ್ ಆರಿಸಿದ. ಈ ರಾತ್ರಿ ತನ್ನ ಪ್ರೀತಿಯ ಸುಮಿಯ ಎದುರೇ ಈ ಗ್ಲಾಸಿನ ಅನಾವರಣಬೇಕಾಗಿತ್ತು. ತಾನು ಮೂರ್ಖನಂತೆ ಬೆಳಕಿನೆದುರಲ್ಲಿ ಮುಖಕೊಟ್ಟು ನೋಡಬಾರದಿತ್ತು. ಇಷ್ಟರಲ್ಲೇ ತನ್ನ ಮುಖದಿಂದ ಪ್ರತಿಫಲಗೊಂಡ ಬೆಳಕು ಗಾಜನ್ನು ಪ್ರವೇಶಿಸಿ ಅಲ್ಲಿನ ಅನಂತ ದೂರವನ್ನು ಕ್ರಮಿಸಲಾರಂಭಿಸಿರಬೇಕು.
ಅಲ್ಲೇ ಕೈಗಟುಕವಂತೆ ಇಟ್ಟುಕೊಂಡಿದ್ದ ಕಪ್ಪು ಬಟ್ಟೆಯ ಕವರನ್ನು ಶೇಖರ ಜಾಗರೂಕತೆಯಿಂದ ಗಾಜಿಗೆ ತೊಡಿಸಿ ಜಿಪ್ ಎಳೆದ, ಲೈಟ್ ಹಾಕಿ ಗಡಿಯಾರ ನೋಡಿಕೊಂಡ. ಆಗಲೇ ಎಂಟು ಗಂಟೆ; ಸುಮಿ ಪಾರ್ಟಿಗೆ ಹೋಗದೆ ಮನೆಯಲ್ಲೇ ಇದ್ದರೆ ಕಾಯುತ್ತಿರಬಹುದು. ಚೌಕೀದಾರನನ್ನು ಕರೆದು ಲ್ಯಾಬಿಗೆ ಬೀಗಹಾಕಲು ಹೇಳಿ ಗಾಜಿನ ಹಾಳೆಯ ಕವರನ್ನು ಮೆಲ್ಲಗೆ ಎತ್ತಿಕೊಂಡು ಹೊರಬಿದ್ದ. ಲಾನ್ ದಾಟಿ ಮುಖ್ಯರಸ್ತೆ ತಲುಪಿ ಟ್ಯಾಕ್ಸಿ ಕರೆದ.
ಸುಮಿ ಮನೆಯಲ್ಲಿರಲಿಲ್ಲ. ಸುಜಾನ್‌ಸಿಂಗ್ ಪಾರ್ಕಿನಲ್ಲಿ ಯಾರದೋ ಪಾರ್ಟಿಗೆ ಹೋಗಿದ್ದಾಳಂತೆ- ಅಡಿಗೆಯ ಭೋಲಾನಾಥ್ ಹೇಳಿದ. ಜಲ್ದಿ ಬಿಡುವಾದರೆ ಶೇಖರ್ ಕೂಡಾ ಬರಬೇಕಂತೆ. ಒಮ್ಮೆ ಹೋಗಿಬಿಡಬೇಕೆನ್ನಿಸಿತು. ಎರಡು ದಿನಗಳ ಕೊಳೆ ಮುಖದ ಮೇಲೆ, ಮೇಲಾಗಿ ಈ ದಿನ ಇನ್ನೂ ಸ್ನಾನ ಮಾಡಿಲ್ಲ.
ಜಾಗರೂಕತೆಯಿಂದ ಗಾಜನ್ನು ಬೆಡ್‌ರೂಮಿಗೆ ಒಯ್ದ. ಯಾವುದು ಪ್ರಶಸ್ತ ಸ್ಥಳ? ಓಹ್, ಸುಮಿಯ ಡ್ರಸಿಂಗ್ ಟೇಬಲ್ ನಿಲುವುಗನ್ನಡಿಯ ಪಕ್ಕಕ್ಕಿಟ್ಟರಾಯಿತು. ಸುಮಿ ಪಾರ್ಟಿಯಿಂದ ಬಂದು ಕೋಣೆಯ ದೀಪ ಹಾಕಿ ತನ್ನ ಮೇಕಪ್ ತೆಗೆಯುವ, ಮಲಗುವ ತಯ್ಯಾರಿಯಲ್ಲಿ ಈ ಕಪ್ಪು ಗಾಜನ್ನು ಗಮನಿಸಲಾರಳು. ಒಳ್ಳೆಯದೇ. ಆದರೆ ಸುಂದರ ಸ್ತ್ರೀಯೊಬ್ಬಳು ತನ್ನ ವಸ್ತ್ರಾಭರಣ ಕಳಚುವ ದೃಶ್ಯವನ್ನೇ ಪ್ರಪ್ರಥಮ ಸೆರೆಹಿಡಿಯಬೇಕೆ?… ಆದರೇನಂತೆ? ಬೆಳಿಗ್ಗೆ ಮುಂಚೆದ್ದು ತಾನೇ ಪ್ರತಿಫಲನ ನೋಡುವುದಷ್ಟೇ. ಸಾರ್ವಜನಿಕ ಜನಸಮೂಹಕ್ಕೇನೂ ಪ್ರದರ್ಶಿಬೇಕಾಗಿಲ್ಲವಲ್ಲ.
ಕೋಣೆಯ ಬೆಳಕು ಆರಿಸಿ ಗಾಜನ್ನು ಕವರಿನ ಹೊರಗೆ ನಿಧಾನವಾಗಿ ತೆಗೆದು ಡ್ರೆಸಿಂಗ್ ಕನ್ನಡಿಯ ಪಕ್ಕದಲ್ಲಿ ವಾಲಿಸಿಟ್ಟ. ಸುಮಿ ಬರುವುದು ಅದೆಷ್ಟು ಹೊತ್ತಾಗಿರುತ್ತೊ. ಭೋಲಾನಾಥ್ ಊಟದ ತಯಾರಿ ಮಾಡಲು ತೊಡಗಿದ್ದ. ಆದರೆ ಇಂಥ ಖುಶಿ ರಾತ್ರಿಯಲ್ಲಿ ಮನೆಯಲ್ಲಿ ಒಂಟಿಯಾಗಿ ಊಟಮಾಡುವ ಮನಸ್ಸೆಲ್ಲಿ? ಸುಮಿ ಇದ್ದಿದ್ದರೆ ಅವಳನ್ನೂ ಜತೆ ಮಾಡಿಕೊಂಡು ಮಿಕ್ಕಾಡೋ ಭರ್ಜರಿ ಊಟ ಹೊಡೆದು ಬರುತ್ತಿದ್ದನೇನೋ. ಈಗೇನು ಮಾಡುವುದು? ಡಾಕ್ಟರ್ ಚಕ್ರವರ್ತಿಯನ್ನು ಕೇಳುವುದು. ಆತನ ಜತೆ ಯಾವುದಾದರೂ ಹೋಟೆಲ್ಲಿಗೆ ಹೋಗಿ ಊಟಮಾಡಿ ಬರಬೇಕು. ಒಬ್ಬಂಟಿ ಬ್ರಹ್ಮಚಾರಿ ಇಲ್ಲೆನ್ನಲಾರ.
ಶೇಖರ ವಾಪಸ್ಸು ಮನೆ ಮುಟ್ಟಿದಾಗ ಸುಮಿ ಸುಖವಾಗಿ ನಿದ್ರಿಸುತ್ತಿದ್ದಳು. ಕಪ್ಪುಗಾಜು ಸ್ಥಾನಪಲ್ಲಟ ಹೊಂದಿರಲಿಲ್ಲ. ಹನ್ನೊಂದುಕಾಲು. ಇನ್ನು ಕೇವಲ ಒಂದು ನಿದ್ರೆಯ ಅವಧಿ. ಮೆಲ್ಲಗೆ ಷೂ ಕಳಚಿ ಡ್ರೆಸಿಂಗ್ ಟೇಬಲ್ ಬಳಿಹೋಗಿ ಗಾಜನ್ನು ತಿರುಗು ಮುರುಗಾಗಿಟ್ಟು ಶೇಖರ ಹಾಸಿಗೆ ಸೇರಿದ. ಮಡದಿಯನ್ನು ಸೆರೆಹಿಡಿದ ಗಾಜು ಮುಂಜಾನೆ ಈ ಕಡೆಯಿಂದ ಕಿರಣಗಳನ್ನು ಹೊರಸೂಸಬೇಕಲ್ಲ.
ನಾಳೆ ಮುಂಜಾನೆ ಇನ್ನಿಷ್ಟು ದೃಶ್ಯಗಳನ್ನು ರಿಕಾರ್ಡ್ ಮಾಡಿಟ್ಟುಕೊಳ್ಳಬೇಕು. ಸೂರ್ಯೋದಯವಷ್ಟೇ ಸಾಯಂಕಾಲದ ಡೆಮಾನ್‌ಸ್ಟ್ರೇಶನ್‌ಗೆ ಸಾಲದು. ಇದೊಂದು ಯಶಸ್ವಿಯಾಗಲಿ ತಾನು ವಿಜ್ಞಾನಲೋಕದಲ್ಲಿ ಆಚಂದ್ರಾರ್ಕ. ಮುಂದೊಂದೆರಡು ತಿಂಗಳು ಬಹುಶಃ ಈ ಸಂಶೋಧನೆಯ ಬಗ್ಗೆ ಉಪನ್ಯಾಸ ಕೊಡುವುದರಲ್ಲಿ, ಪ್ರದರ್ಶನ ವ್ಯವಸ್ಥೆ ಮಾಡುವುದರಲ್ಲಿ ಸಮಯ ಸಿಕ್ಕಲಾರದೇನೋ. ಆಮೇಲಾದರೂ ಡಿಲೇವಿಷನ್ ತಯಾರಿಸುವ ಸುತ್ತು ಬಳಸು ವಿಧಾನವನ್ನು ಪರಿಷ್ಕರಿಸಿ ಪೇಟೆಂಟ್ ಅರ್ಜಿ ಹಾಕಬೇಕು… ಯೋಚನೆಯ ಮಧ್ಯೆ ಮಂಪರಿಗಿಳಿದಿದ್ದು ಯಾವಾಗಲೋ ಏನೋ.
ಇದ್ದಕಿದ್ದಂತೆ ಸುಮಿ ಚೀರಿ ಎದ್ದುಕುಳಿತು ತನ್ನನ್ನು ಗಾಬರಿಯಿಂದ ಅಲುಗಾಡಿಸಿದಾಗ ಶೇಖರ್ ಕಣ್ಣುಜ್ಜುತ್ತ ಗಡಬಡಿಸಿ ಎದ್ದು ಕುಳಿತ.
“ಯಾಕೆ, ಸುಮೀ ಏನಾಯಿತು? ಯಾಕೆ ಕೂಗಿಕೊಂಡೆ?” ಬೆಚ್ಚಿ ತನ್ನೆನ್ನೇ ನೋಡುತ್ತಿದ್ದ. ಸುಮಿಗೆ ಮಾತು ಹೊರಬರಲಾದರಷ್ಟು ವಿಹ್ವಲತೆ. ವಿವರ ತಿಳಿದಾಗ ಶೇಖರನಿಗೆ ನೆಮ್ಮದಿಯ ನಿಟ್ಟುಸಿರು. ಮುಂಜಾನೆಯ ನಸುಗತ್ತಲಲ್ಲಿ ಎಚ್ಚತ್ತ ಸುಮಿಗೆ ಡ್ರೆಸಿಂಗ್ ಟೇಬಲ್ ಬಳಿ ಪ್ರಖರ ಪ್ರಕಾಶ ಕಂಡಿತಂತೆ. ಆ ಪ್ರಕಾಶ ಪುಂಜದ ಮೂಲಕ ಬಿಳೀ ಆಪ್ರನ್ ತೊಟ್ಟ. ಗ್ಲೌಸ್ ಧರಿಸಿದ ಶೇಖರ ತನ್ನನ್ನೇ ದಿಟ್ಟಿಸಿ ನೋಡಿದ ಅನುಭವವಂತೆ. ಇದನ್ನೆಲ್ಲ ವಿವರಿಸುವಾಗ ಬೆದರಿ ಬಿಳಿಚಿದ್ದ ಸುಮಿಯ ಎದೆಯ ಬಡಿತ ಜೋರಾಗಿತ್ತು. ಹಣೆಯ ಮೇಲೆ ಬೆವರಿನ ಮುತ್ತುಗಳ ಸಾಲು.
ಸುಮಿ ತನ್ನನ್ನು ತಬ್ಬಿಕೊಂಡಿದ್ದಂತೆಯೇ ಶೇಖರ ಆಕೆಗೆ ತನ್ನ ಕಪ್ಪುಗಾಜಿನ ಇಂದ್ರಜಾಲವನ್ನು ವಿವರಿಸಿದ. ಇದು ತನ್ನ ಇಷ್ಟು ವರುಷಗಳ ಸಂಶೋಧನೆಯ ಫಲವೆಂದೂ, ಈ ಗಾಜಿಗೆ ಹತ್ತು ತಾಸುಗಳಷ್ಟು ಹೊತ್ತು ಬೆಳಕನ್ನು ಹಿಡಿದು ನಿಲ್ಲಿಸಿಕೊಳ್ಳುವ ಶಕ್ತಿಯಿದೆಯೊಂದು, ತಾನು ಕಳೆದ ರಾತ್ರಿ ಮೂಸೆಯಿಂದ ಹೊರತೆಗೆಯುವಾಗ ತನ್ನ ಪ್ರತಿಬಿಂಬ ಗಾಜನ್ನು ಪ್ರವೇಶಿಸಿತ್ತೆಂದೂ, ಈಗ ಸರಿಯಾಗಿ ಹತ್ತು ತಾಸುಗಳನಂತರ- ಬೆಳಗಿನ ಆರುಗಂಟೆಗೆ ಅದೇ ಬಿಂಬ ಈ ಮಗ್ಗುಲಿಂದ ಹೊರಸೂಸಿತೆಂದೂ ವಿವರಿಸಿದ. ಸುಮಿಗೆ ಮೊದಮೊದಲು ಇವೆಲ್ಲ ಅರ್ಥವಾಗದ ವೈಜ್ಞಾನಿಕ ಗಡಚು. ಮುಂಜಾನೆಯ ತಿಳಿಬೆಳಕು ಮೆಲ್ಲಮೆಲ್ಲನೆ ರೂಮಿನೊಳಕ್ಕೆ ಕಾಲಿರಿಸುತ್ತಿದ್ದಂತೆಯೇ ಈ ಇಂದ್ರಜಾಲದ ಅರಿವು ಸುಮಿಗೆ.
ಹಾಸಿಗೆಯಿಂದೆದ್ದು ಕುಳಿತು ಸುಮಿ ಗಾಜನ್ನು ಸಮೀಪದಿಂದ ವಿಕ್ಷೀಸಲಾರಂಭಿಸಿಯಾಗಿತ್ತು. ಯೋಚಿಸಿದಷ್ಟೂ ಇದರ ಮಹತಿ ಜಟಿಲವಾಗಿತೊಡಗಿತ್ತು. ಜೊಂಪು ಹತ್ತಿ ಮುಸುಕೆಳೆದುಕೊಂಡ ಶೇಖರನನ್ನು ಎಬ್ಬಿಸಬೇಕು. ಈ ಗಾಜಿನಿಂದ ಮತ್ತೆ ಯಾರ ಚಿತ್ರ ಮೂಡಿಬರುವದೆಂಬುದನ್ನು ಕೇಳಬೇಕು. ರಾತ್ರಿ ಎಷ್ಟು ಹೊತ್ತಿಗೆ ಇಲ್ಲಿ ತಂದಿಟ್ಟಿದ್ದೀರೆಂದು ಕೇಳಟ್ಹ;ಬೇಕು. ನೆನಪಾಯಿತು. ನಿನ್ನೆ ರಾತ್ರಿ ತಾನು ಮಲಗಿದ ಮುಂಚೆ ಇಲ್ಲಿ ಇದನ್ನು ನೋಡಿದ ನೆನಪು. ಶೇಖರ ಆ ಮೊದಲಿಗೆ ಇದನ್ನು ತಂದಿದ್ದರೆ ಇದನ್ನಿಲ್ಲಿಟ್ಟು ಎಲ್ಲಿಗೆ ಹೋಗಿದ್ದ? ತಾನು ರಾತ್ರಿ ಬಟ್ಟೆ ಬದಲಿಸಿದ್ದು ಇದರೆದುರಿಗೇ? ಅಂದರೆ… ತನ್ನ ಪ್ರತಿಬಿಂಬ ಇನ್ನು ಸ್ವಲ್ಪ ಹೊತ್ತಿನ್ಹ;ಲ್ಲಿ ಗೋಚರವಾಗಲಾರಂಭಿಸುವುದು….
ಶೇಖರ ಮಗ್ಗುಲಾದ. ಸುಮಿ ತದೇಕಚಿತ್ತಳಾಗಿ ಗಾಜಿನತ್ತ ನೋಡುತ್ತಿದ್ದುದು ಮಸಕಾಗಿ ಕಂಡು ನಿದ್ದೆ ತಿಳಿದೆದ್ದ. ಸೂರ್ಯನ ಸ್ವರ್ಣಕಿರಣ ಆಗಲೇ ಕಿಟಕಿಯಿಂದ ತೊರಿಬರಲಾರಂಭಿಸಿತ್ತು. ಸೂರ್ಯನನ್ನು ಸೆರೆ ಹಿಡಿಯಬೇಕು. ಸಂಜೆಹೊತ್ತಿನಲ್ಲಿ ಮುಂಜಾವನ್ನು ಮರುಕಳಿಸಬೇಕು. ಗಾಜನ್ನು ಕಿಟಕಿಗೆ ಹೊಂದಿಸಿ ಇಡಬೇಕು.
ಸುಮಿ ಕಲ್ಲಾಗಿ ಕುಳಿತಿದ್ದಳು. ಎದ್ದು ಅವಳ ಕೆನ್ನೆ ಹಿಂಡಿ, ಇನ್ನು ಸ್ವಲ್ಪ ಹೊತ್ತಿನಲ್ಲೇ ರಾತ್ರಿ ಮಂಚವನ್ನೇರುತ್ತಿದ್ದ ಸುಮಿಯನ್ನು ಮುಂಜಾನೆಯ ಕಾಫಿ ಕುಡಿಯುತ್ತ ನೋಡಬಹುದೆಂದು ಹಾಸ್ಯಮಾಡಿ ಟವಲ್ ಹೆಗಲಿಗೇರಿಸಿ ಬಾತ್ ರೂಮಿಗೆ ಹೋದ.
ಹಲ್ಲುಜ್ಜುತ್ತಿದ್ದನೋ, ಮುಖಕ್ಕೆ ತಣ್ಣೀರೆರಚುತ್ತಿದ್ದನೋ… ಸುಮಿ ಚೀರಿಕೊಂಡ ಸದ್ದು, ಜತೆಗೇ ನಿಲುಗನ್ನಡಿಯೊಂದು ಬಿದ್ದು ಹೋಳು ಹೋಳಾಗುತ್ತಿರುವ ಸದ್ದು. ಶಾಕ್ ಹೊಡೆಸಿಕೊಂಡವರಂತೆ ಬಾತ್ ರೂಮಿನಿಂದ ಧಾವಿಸಿ ಬಂದ ಶೇಖರ. ಸುಮಿ ನೆಲಕ್ಕೆ ಕುಸಿದಿದ್ದಳು. ಕಾಲ ಬಳಿಯಲ್ಲಿ ರಕ್ತ ರಕ್ತ. ನಾಲ್ಕು ವರುಷಗಳ ರಕ್ತ ಬೆವರು ಹರಿಸಿ ನಿರ್ಮಿಸಿದ ಕಪ್ಪು ದರ್ಪಣ ಚೂರುಚೂರಾಗಿ ನೆಲದ ತುಂಬೆಲ್ಲ ಹರಡಿತ್ತು. ದಿಙ್ಮೂಢನಾದ ಶೇಖರ ಮಿನುಗುತ್ತಿದ್ದ ದೊಡ್ಡ ಗಾಜಿನ ತುಂಡೊಂದನ್ನು ಎತ್ತಿ ನೋಡಿದ. ಚೂರೊಂದು ಸುಮಿಯ ಅರೆನಗ್ನ ಶರೀರದ ಚಿತ್ರವನ್ನು ಇನ್ನೂ ಹೊರಸೂಸುತ್ತಿತ್ತು. ಸುಮಿಯ ರಕ್ತಸಿಕ್ತ ಕಾಲ ಬಳಿಯಲ್ಲಿ ಬಿದ್ದಿದ್ದ ಇನ್ನೊಂದು ಗಾಜಿನ ಚೂರಿನಲ್ಲಿ ಅಶೋಕನ ಮಂದಹಾಸ.
ಡಿಲೇವಿಷನ್ ನಷ್ಟವಾಗಿತ್ತು. ಶೇಖರನತ್ತ ಬೆಳಕು ತಡವಾಗಿ ಬಂದಿತ್ತು.
September 18th, 2010 at 5:56 am
Story was very nice but I felt sad when I completed reading it. Please don’t write this type of sad ending stories. I have lot trust in human relationships. Whenever I read such type of stories I keep on thinking of it for many days. For ex. after reading Mandra-a novel by S. Bhyrappa, my mind was very upset. ಮಂದ್ರದಲ್ಲಿರೋ ಪಾತ್ರಗಳು ನನ್ನನ್ನು ತುಂಬಾ ದಿವಸ ಕಾಡಿದವು. ನಾ ಯಾರೇ ಸ೦ಗೀತಗಾರರನ್ನು ನೋಡಲಿ ತಕ್ಷಣ ಮಂದ್ರ ದ ಮೋಹನ ಲಾಲ. ಆ ಹುಚ್ಚು ಹುಡುಗಿಯರು ಜ್ಞಾಪಕಕ್ಕೆ ಬರುತ್ತಾ ಇದ್ದರು. ಮಹಿಳಾ ಹಾಡುಗಾರ್ತಿಯಾರನ್ನು ನೋಡಿದಗಲಂತೂ ಪದೇ ಪದೇ ಮಂದ್ರ ದ ಸನ್ನಿವೇಶಗಳೇ ನನ್ನನ್ನು ಹಿಂಸೆ ಮಾಡಿದವು. ಅದಕ್ಕೆ ಇಂಥ ಕೆಟ್ಟ ಭಾವನೆಗಳನ್ನ ಹುಟ್ಟಿಸೋ ಕಥೆಗಳನ್ನ ಬರಿಬೇಡಿ.
April 19th, 2013 at 2:56 pm
It’s really nice… you held that expected surprise till the end…
i want these kind of stories..
March 22nd, 2019 at 11:50 pm
[…] http://vishvakannada.com/ಕಥೆ/ಡಿಲೇವಿಷನ್/ […]